ವೈವಿಧ್ಯ
ಪ್ರಾಚೀನ ದೇವಾಲಯಗಳು ತನ್ನದೇ ಆದ ವಿಶಿಷ್ಟ ಸಂಪ್ರದಾಯ,ಆಚರಣೆಗಳನ್ನು ಹೊಂದಿರುತ್ತವೆ. ಯಾಂತ್ರಿಕ ಜೀವನ,ಕಡಿಮೆಯಾಗುತ್ತಿರುವ ನಂಬಿಕೆಗಳು ಇವೆಲ್ಲ ಕಾರಣಗಳಿಂದ ಇತ್ತೀಚೆಗೆ ಅಂತಹ ಆಚರಣೆಗಳೆಲ್ಲ ಕಣ್ಮರೆಯಾಗುತ್ತಿವೆ. ಇವುಗಳ ನಡುವೆಯೂ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಬರುತ್ತಿರುವ ಹಳೆಯ ದೇವಾಲಯಗಳಲ್ಲಿ ಯಲ್ಲಾಪುರ ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಾಲಯವೂ ಒಂದು.
ಇಲ್ಲಿ ಪ್ರತಿವರ್ಷ ಸುಮಾರು 5-6 ಉತ್ಸವಗಳು ನಡೆಯುತ್ತವೆ. ಅವುಗಳಲ್ಲಿ ಕಾರ್ತಿಕ ಉತ್ಸವಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಕೊನೆಯ ನಾಲ್ಕು ದಿನಗಳ ಕಾಲ ಈ ಉತ್ಸವವನ್ನು ಆಚರಿಸಲಾಗುತ್ತದೆ. ಆ ನಾಲ್ಕು ದಿನ ಊರಿನಲ್ಲಿ ಹಬ್ಬದ ವಾತಾವರಣವಿರುತ್ತದೆ. ಮೊದಲು ಮೂರು ದಿನ ಮಧ್ಯಾಹ್ನ ಸಮಾರಾಧನೆ,ಸಂಜೆ ದೀಪಾರಾಧನೆಗಳು ನಡೆಯುತ್ತವೆ. ಸಂಜೆ ಪೂಜೆಯ ನಂತರ ಸ್ಥಳೀಯರು ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನಡೆಸುತ್ತಾರೆ.
ಉತ್ಸವದ ಕೊನೆಯ ದಿನ ವಿಶೇಷ ಪೂಜೆಗಳು ನಡೆಯುತ್ತವೆ. ಅಂದು ಮಧ್ಯಾಹ್ನ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ದೇವಾಲಯದ ಪಕ್ಕದ ತೋಟದಲ್ಲಿರುವ ಕಪಿಲ ತೀರ್ಥದ ಬಳಿ ಪಲ್ಲಕ್ಕಿಯಲ್ಲಿ ಒಯ್ಯಲಾಗುತ್ತದೆ. ಅಲ್ಲಿರುವ ಅಶ್ವತ್ಥ ವೃಕ್ಷದ ಕೆಳಗೆ ಮೂರ್ತಿಯನ್ನಿರಿಸಿ ವಿಶೇಷ ಪೂಜೆ,ಸಮಾರಾಧನೆ ಮಾಡುತ್ತಾರೆ. ಪೂಜೆಯ ನಂತರ ಪಕ್ಕದಲ್ಲಿ ನಿರ್ಮಿಸಿದ ಸೋಗೆಯ ಚಪ್ಪರದಲ್ಲಿ ವನಭೋಜನ!
ಸಂಜೆ ಭಜನೆ,ಹಾಡುಗಳ ಮೂಲಕ ದೇವರ ಆರಾಧನೆ ನಡೆಯುತ್ತದೆ. ನಂತರ ಅಲ್ಲಿಂದ ಮೂರ್ತಿಯನ್ನು ಪುನಃ ಹೊರಡಿಸುತ್ತಾರೆ. ದೇವಾಲಯದ ದಾರಿಯಲ್ಲಿ ಊರವರೆಲ್ಲ ದೇವರಿಗೆ ಪೂಜೆ ಸಲ್ಲಿಸುವುದು ಉತ್ಸವದ ವಿಶೇಷ. ದೇವಾಲಯಕ್ಕೆ ಮರಳಿದ ನಂತರ ಬೆಳಗಿನವರೆಗೆ ತಾಳಮದ್ದಲೆ ನಡೆಯುತ್ತದೆ. ಬೆಳಗಿನ ಪೂಜೆಯೊಂದಿಗೆ ಉತ್ಸವದ ಮುಕ್ತಾಯ.
ಹಲವಾರು ವರ್ಷಗಳಿಂದ ನಡೆದು ಬಂದಿರುವ ಪದ್ಧತಿ ಇದಾಗಿದ್ದು ಮೊದಲೆಲ್ಲ ಉತ್ಸವಕ್ಕೆ ನೂರಾರು ಜನರು ಸೇರುತ್ತಿದ್ದರು. ಆದರೆ 7-8 ವರ್ಷಗಳಿಂದೀಚೆಗೆ ಉತ್ಸವದಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಜನರಲ್ಲಿ ಧಾರ್ಮಿಕ ಆಚರಣೆಗಳ ಕುರಿತಾದ ನಂಬಿಕೆ ಕಡಿಮೆ ಆಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ದೇವಾಲಯದ ಆಡಳಿತ ಮಂಡಳಿಯ ಗೋಪಾಲಕೃಷ್ಣ ಭಟ್ಟ.
ಗ್ರಾಮೀಣ ಭಾಗಗಳಲ್ಲಿ ಇಂತಹ ನೂರಾರು ದೇವಾಲಯಗಳಿವೆ. ಅಲ್ಲಿನ ಆಚರಣೆಗಳು ನಶಿಸುತ್ತಿರುವುದಕ್ಕೆ ಇಂದಿನ ಗ್ರಾಮೀಣ ಯುವಕರು ನಗರಗಳತ್ತ ಮುಖ ಮಾಡಿರುವುದೂ ಒಂದು ಕಾರಣವಾಗಿದೆ. ನಮ್ಮ ಸಂಸ್ಕೃತಿಯ ಪ್ರಕಾರಗಳಾದ ಇಂತಹ ಉತ್ಸವಗಳು ನಶಿಸುತ್ತಿರುವುದು ವಿಷಾದದ ಸಂಗತಿ...
ಶ್ರೀಧರ ಅಣಲಗಾರ
ರಾಜ್ಯ - ರಾಷ್ಟ್ರ
ಫರಿದಾಬಾದ್:ಚಳಿ ಜೋರಾಗಿದೆ. ಚಳಿಗೆ ಬಿಸಿಕಾಯಿಸುತ್ತಿರುವ ಜನತೆ.
ರಾಜ್ಯ - ರಾಷ್ಟ್ರ
ಶ್ರೀನಗರ: ಸುಪ್ರಸಿದ್ಧ ದಾಲ್ ಲೇಕ್ ನಲ್ಲಿ ದೋಣಿಯಲ್ಲಿ ಸಾಗುತ್ತಿರುವ ಪ್ರಯಾಣಿಕ
ಯುವಾ...
ಕಣ್ಣಂಚಿನ ಹನಿನೀರು ಮನದ ಉದ್ವೇಗದ ತುಮುಲ ಬಂದಿಳಿದಾಗ ಆರಂಭಗೊಂಡಿದ್ದೇ ಈ ಬರಹ... ಆಗಷ್ಟೆ ಓದಿ ಮುಗಿಸಿದ್ದೆ'ಆನಂದೋಬ್ರಹ್ಮ' ಕಾದಂಬರಿಯನ್ನು. ಸರಿ ಮಧ್ಯರಾತ್ರಿಯಲ್ಲಿ ಪ್ರತಿಯೊಂದು ಪಾತ್ರವೂ ಕಣ್ಣಮುಂದೆ ನರ್ತಿಸಿ, ಮೆದುಳಿನಲ್ಲಿ ಅಚ್ಚೊತ್ತಿ, ಆಲೋಚನೆಯ ತರಂಗಗಳೆಲ್ಲಾ ಎದ್ದು ಅಲುಗಾಡಿ ಏನಾದರೂ ಬರೆಯಬೇಕೆಂಬ ತವಕದಿಂದ ಪೆನ್ನು ಹಿಡಿದು ಕುಳಿತಾಗ ಜಾರಿದುದೇ ಈ ಹನಿ...
ಮನುಷ್ಯ ಎಷ್ಟೇ ಮುಂದುವರಿದರೂ ಎಲ್ಲಾ ಎಲ್ಲೆಗಳನ್ನು ಮೀಟಿ ದಾಟಿದರೂ ಅವನ ಜೊತೆ-ಜೊತೆಗೆ ಸಾಗಿಬರುವ ಪದವೇ 'ಸೆಂಟಿಮೆಂಟ್'... ನಾನರಿತಂತೆ ಪ್ರತಿಯೊಬ್ಬ ಮನುಷ್ಯನಿಗೂ ಅಗತ್ಯವಾದುದು ತನಗಾಗಿ ತುಡಿಯುವ ಮನಸ್ಸು... ತನ್ನನ್ನು ಪ್ರೀತಿಸುವವರು ಇದ್ದಾರೆಂಬ ಬೆಚ್ಚಗಿನ ಭಾವ.
ಆದರೆ... ಈ ಯಾಂತ್ರಿಕ ಜೀವನದಲ್ಲಿ ಯಂತ್ರಗಳ ಒಡನಾಡಿಗಳಾಗಿ.. ನಾವೂ ಯಂತ್ರಗಳಾಗುತ್ತಿದ್ದೇವೆಯೇ..? ಮನುಷ್ಯ ಮನುಷ್ಯನನ್ನು ಒಂದಷ್ಟು ನಿರ್ವಾಜ್ಯ ಸ್ನೇಹದಿಂದ ನೋಡಲು ಸಾಧ್ಯವಿಲ್ಲವೇ...ಭಾವನೆಗಳ ಹಂದರವನ್ನು ಸ್ವಲ್ಪಮಟ್ಟಿಗಾದರೂ ಕಾಯ್ದಿಟ್ಟುಕೊಳ್ಳಲಾಗದಷ್ಟು ದೂರ ಸಾಗಿದ್ದೇವೆಯೇ..? ತಂದೆ ತಾಯಿಯರ ಪ್ರೀತಿ ಕಾಳಜಿಗಳೂ ಸಂಕೋಲೆ ಎಂದೆನಿಸುವಷ್ಟು ಅತಂತ್ರ ಸ್ಥಿತಿಯಲ್ಲಿದ್ದೇವೆಯೇ... ಛೇ...
ಒಮ್ಮೊಮ್ಮೆ ಒಂಟಿಯಾಗಿ ಕುಳಿತಾಗ ಅನಿಸುವುದುಂಟು, ಎಲ್ಲರೂ ಒದ್ದಾಡುವುದು ಏತಕ್ಕಾಗಿ..? ಈ ನಿರಂತರ ಬಡಿದಾಟ ಯಾವ ಪುರುಷಾರ್ಥಕ್ಕಾಗಿ...ಕೇವಲ ಹಣಕ್ಕಾಗಿ? ಸ್ಥಾನಕ್ಕಾಗಿ? ಇಲ್ಲಾ ಹೆಸರಿಗಾಗಿ...? ಹಾಗಾದರೆ 'ತೃಪ್ತಿ' ? ತೃಪ್ತಿಯೆಂಬ ಪದಕ್ಕೆ ಬೆಲೆಯೇ ಇಲ್ಲವೇ...?
ನನ್ನಮ್ಮ ಒಮ್ಮೆ, "ಪುಟ್ಟಾ.. ಇವತ್ತು ನಾನು ಗೇಟಿನತನಕ ಬಂದು ಬಸ್ಸು ಹತ್ತಿಸುವಾಗ ನಿನಗೇನನಿಸ್ತದೆ, ಅಮ್ಮ ಯಾಕೆ ಸುಮ್ಮನೆ ಬರ್ತಾಳೆ ಅಂತ.. ಆದ್ರೆ ಮುಂದೊಮ್ಮೆ ನಾನಿಲ್ಲದ ದಿನ ನೀನೊಬ್ಬಳೇ ಹೋಗುವಾಗ ಖಂಡಿತಾ ನನ್ನ ನೆನಪು ಮಾಡಿಕೊಳ್ತೀಯ ನೋಡು..." ಅಂದಿದ್ದಳು. ಅವಳ ಜೀವನದ ವೇದಾಂತ ಎಷ್ಟು ನಿಜವೆಂದು ಮುಂದೊಮ್ಮೆ ಅರಿವಾಗಿತ್ತು. ಆಗ ಎಲ್ಲವೂ ಖಾಲಿ..ಖಾಲಿ ಎನಿಸಿತ್ತು.
ಬಹುಶಃ ಈಗಿನ ಲೇಟೆಷ್ಟ್ ಟ್ರೆಂಡ್ಗಳಾದ ಫೇಸ್ಬುಕ್, ಟ್ವಿಟರ್ ನಂತಹ ಸಾಮಾಜಿಕ ತಾಣಗಳು ಹುಟ್ಟಿಕೊಂಡದ್ದು ಈ ಒಂಟಿತನ, ಪ್ರೇಮರಾಹಿತ್ಯದ ಪ್ರಭಾವದಿಂದಲೇ... ಈ ನೆಟ್ ಸರ್ಫಿಂಗ್ ಎನ್ನುವುದು ಯುವಜನತೆಯನ್ನು ಚಟವಾಗಿ ಕಾಡಿದರೂ... ಅವು ಅವರ ಭಾವನೆಗಳನ್ನು ಹೊರಹಾಕಲು, ಜೀವನದ ಬಗೆಗೊಂದು ಭಾವನಾತ್ಮಕ ಬೆಸುಗೆಯನ್ನು ಉಳಿಸಿಕೊಳ್ಳಲು ಸೇತುವೆಯಾಗಿ..ಸ್ವಲ್ಪಮಟ್ಟಿಗಾದರೂ ವಿವೇಕಯುತವಾಗಿ ಬಳಸಿದಲ್ಲಿ ಒಂಟಿತನ, ಅಸಹನೆ, ಸ್ನೇಹ/ಪ್ರೇಮರಾಹಿತ್ಯಗಳ ಹೊಡೆದೋಡಿಸುವಲ್ಲಿ ಗಣನೀಯ ಸೇವೆಸಲ್ಲಿಸುತ್ತವೆ ಎಂದೆನಿಸುತ್ತದೆ...
ಆದರೂ... ಹಿಂದೊಮ್ಮೆ ರಜಾದಿನಗಳಲ್ಲಿ, ಅಜ್ಜನ ಮನೆಯ ಅಂಗಳದಲ್ಲಿ ಒಂದಾಗಿ ಸೇರಿ ವರ್ಷದ ಪುರಾಣಗಳನ್ನು ಹಂಚಿಕೊಳ್ಳುತ್ತಾ ಕುಳಿತಾಗಿನ ಸಂಭ್ರಮ, ಮುಗ್ಧತೃಪ್ತಿ ಎಲ್ಲೋ ಮಾಯವಾಗಿದೆ... ಅದೇನೇ ಇರಲಿ, ನಾವೊಂದಿಷ್ಟು ಜೀವಂತವಾಗಿ ಆಲೋಚಿಸೋಣ... ವ್ಯಾವಹಾರಿಕ ನಿಪುಣತೆಯೊಂದಿಗೆ ಭಾವನಾತ್ಮಕ ಸಂತುಲತೆಯನ್ನು ಹೊಂದಿ ಅರ್ಥಪೂರ್ಣ, ತೃಪ್ತ ಬದುಕನ್ನು ಕಟ್ಟೋಣವಲ್ಲವೇ...
- ಭಾವಗೀತಾ.
ಈ ಕನಸು ಸ್ಪೆಷಲ್ ರಿಪೋರ್ಟ್ 
ಗಡಿನಾಡ ಕನ್ನಡಿಗ ಹಿರಿಯ ಪತ್ರಕರ್ತ ಕಾಸರಗೋಡಿನ ಎಂ.ವಿ.ಬಳ್ಳಳ್ಳಾಯರಿಗೆ ಇದೀಗ 73ರ ಹರೆಯ. ಇನ್ನೂ ಕೆಚ್ಚೆದೆಯ ಮನಸ್ಥಿತಿಯನ್ನು ಉಳಿಸಿಕೊಂಡು ಒಂದು "ಉತ್ತಮ ಮಾಧ್ಯಮವನ್ನು ಕಟ್ಟುವ - ಬೆಳೆಸುವ " ಹುಮ್ಮಸ್ಸು ಉಳಿಸಿಕೊಂಡವರು. 1958ರಲ್ಲಿ ಕಾಸರಗೋಡಿನಲ್ಲಿ ಕನ್ನಡ ಹೋರಾಟ ಪತ್ರಿಕೆಯಾದ "ನಾಡಪ್ರೇಮಿ"ಯನ್ನು ನಡೆಸಿ ಪತ್ರಿಕಾ ರಂಗದಲ್ಲಿ ಒಂದು ಕ್ರಾಂತಿ ಮೂಡಿಸಿದವರು. ನಿರಂತರ ಬರವಣಿಗೆ, ವಿವಿಧ ಪತ್ರಿಕೆಗಳಲ್ಲಿ ಅಂಕಣ ಬರಹ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ವರದಿ ಮಾಡುತ್ತಾ ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿವರು. ಇದೀಗ "ಈ ಕನಸು.ಕಾಂ " ಕಚೇರಿಗೆ ಭೇಟಿ ನೀಡಿ ಕಾಸರಗೋಡಿನ ಪತ್ರಿಕಾರಂಗ ಹಾಗೂ ಇಂದಿನ ಮಾಧ್ಯಮಗಳ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಕನಸು.ಕಾಂ ಓದುಗರಿಗೆ ಈ ವಿಶೇಷ ವರದಿ... - ಸಂ.
ಸೂಕ್ಷ್ಮ ಪರಿಶೀಲನೆ ಕಡಿಮೆ:
ಮಾಧ್ಯಮ ಸಾಕಷ್ಟು ಪ್ರಗತಿ ಹೊಂದಿದೆ. ಆದರೆ ಕಷ್ಟ ಪಟ್ಟು ಮಾಧ್ಯಮ ವರದಿ ಮಾಡಲು ಹಲವರು ಇಂದು ತಯಾರಿಲ್ಲ. ಸಂಶೋಧನೆ - ಸೂಕ್ಷ್ಮ ಪರಿಶೀಲನೆ ಸತ್ಯಾವಸ್ತೆ ತಿಳಿಯದೆ ಹಲವಾರು ವರದಿಗಳು ಇಂದಿನ ಮಾಧ್ಯಮಗಳಲ್ಲಿ ಮೂಡಿಬರುತ್ತಿವೆ. ಪ್ರಗತಿಪರ ರಿಪೋರ್ಟ್ ಎಂಬುದು ಕೆಲವರ ಪ್ರಭಾವಗಳಿಗೆ ಒಳಗಾಗುತ್ತಿರುವುದು ಇಂದಿನ ಮಾಧ್ಯಮಗಳಲ್ಲಿ ಕಾಣಬಹುದಾಗಿದೆ.ವರದಿಯ ಸತ್ಯಾಸತ್ಯತೆಗಳನ್ನು ಅರಿಯದೆ "ಪ್ಲಾಶ್ ನ್ಯೂಸ್" ನೀಡಿ ಪೇಚಿಗೆ ಸಿಲುಕುವ ಪರಿಸ್ಥಿತಿ ಇಂದಿನ ಮಾಧ್ಯಮದ್ದು.ಇದು ಸರಿಯಲ್ಲ.
ಹಣ - ರಾಜಕೀಯ ಪ್ರಭಾವ ಬೇಕಿಲ್ಲ:
ಮಾಧ್ಯಮಗಳಲ್ಲಿ ಇಂದು ಜಾತಿ , ಧರ್ಮ, ರಾಜಕಾರಣ ಬಹುಮುಖ್ಯವಾಗುತ್ತವೆ. ಹಣ ರಾಜಕೀಯ ಪ್ರಭಾವದಿಂದ ಪತ್ರಿಕೋದ್ಯಮ ಇಂದು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇದು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ ಇಡೀ ಭಾರತದಲ್ಲಿ ಕಾಣುವ ದಾರುಣ ಕಥೆಯಾಗಿದೆ.ಮಾಧ್ಯಮದ ಮಂದಿ ಹಣದ ಆಮಿಷಕ್ಕೆ ಒಳಗಾಗುವುದು ಸರಿಯಲ್ಲ.
ನೈತಿಕತೆ ಇರಲಿ:
ಇಂದು ಸಮಾಜದಲ್ಲಿ ಪತ್ರಕರ್ತರ ಗೌರವ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಪತ್ರಕರ್ತರೇ. ಇಂದು ಹಣದ ಆಮಿಷಕ್ಕೆ ತುತ್ತಾಗುವ ಮೂಲಕ ಪತ್ರಕರ್ತರು ಆತ್ಮಗೌರವ ಕಳೆದುಕೊಳ್ಳುತ್ತಿದ್ದಾರೆ. ನೈತಿಕತೆಯನ್ನು ಉಳಿಸಿಕೊಂಡು ಮಾಧ್ಯಮ ಕ್ಷೇತ್ರ ಮುಂದುವರಿಯಬೇಕು. ನಿಷ್ಠಾವಂತರಾಗಿದ್ದರೆ ಯಾರಿಗೂ ಹೆದರಬೇಕಾಗಿಲ್ಲ. ರಾಜಕೀಯ ಹಣದ ಪ್ರಭಾವ, ದೇಶ ವಿರೋಧ ಪ್ರಭಾವ ಬಂದರೆ ಆತ ಪತ್ರಕರ್ತನಾಗಿರಲು ಸಾಧ್ಯವಿಲ್ಲ. ಗೌರವ ಪಡೆಯಲು ಸಾಧ್ಯವಿಲ್ಲ. ಪತ್ರಕರ್ತರೇ ದೇಶದ ನಾಡಿ ಆಗಿದ್ದಾರೆ. ಆ ಗೌರವ ಉಳಿಸುವುದು , ಬೆಳೆಸುವುದು ಮುಖ್ಯ.
ಮಾಫಿಯಾ ಪ್ರಭಾವ :
ಪ್ರತಿಯೊಂದು ಮಾಧ್ಯಮದ ಬೆನ್ನೆಲುಬಾಗಿ ಇಂದು ಮಾಫಿಯಾದ ಕಾಣದ ಕೈ ಕೆಲಸ ಮಾಡುತ್ತಿದೆ.
ಮಾಫಿಯಾ, ರಾಜಕೀಯ ಪ್ರಭಾವಗಳಿಗೆ ಒಳಗಾಗುವುದು ರಾಜ್ಯಕ್ಕೆ ಮಾಡಿದ ದ್ರೋಹ. ಪ್ರಭಾವಕ್ಕೆ ಒಳಗಾಗಿ ಇಂದಿನ ಮಾಧ್ಯಮಗಳಲ್ಲಿ ರಿಪೋರ್ಟ್ ಪಬ್ಲಿಷ್ ಆಗ್ತಾ ಇರುತ್ತವೆ. ಇದು ದುರಂತ.
ಮಲೆಯಾಳಂ ಭಾಷೆಯಲ್ಲೂ ಅದೇ ಸ್ಥಿತಿ:
ಕೇರಳದ ಮಾಧ್ಯಮಗಳೆಂದರೆ ಅದಕ್ಕೊಂದು ಮನ್ನಣೆ ಇತ್ತು. ಸರಕಾರವನ್ನು ಉರುಳಿಸಲು - ಉಳಿಸಲು ಈ ಮಾಧ್ಯಮಗಳು ಶಕ್ತಿಯುತವಾಗಿದ್ದವು.
ಅದರೆ ಇಂದು ಇವು ಕೂಡಾ ನೈತಿಕತೆ ಕಳೆಕುಕೊಳ್ಳುತ್ತಿವೆ. ಕೇರಳ -ಕರ್ನಾಟಕ ಈ ಎರಡೂ ಭಾಗಗಳ ಮಾಧ್ಯಮಗಳಿಗೆ "ರೋಗಬಾಧೆ" ಅಂಟಿದೆ. ಇದು ಹೋಗಬೇಕಾಗಿದೆ.
ಉದ್ಯಮ ಬೇಡ:
ಪತ್ರಿಕಾ ರಂಗ ಕೇವಲ ರಂಗವಾಗಿಯೇ ಉಳಿಯಲಿ. ಅದು ಉದ್ಯಮ ಆಗುವುದು ಸರಿಯಲ್ಲ. ಉದ್ಯಮ ಆದರೆ ಅಲ್ಲಿ ನೈತಿಕತೆ ಉಳಿಯಲು ಸಾಧ್ಯವಿಲ್ಲ. ಹಣದ ಪ್ರಭಾವ, ರಾಜಕೀಯ ಪ್ರಭಾವ ಆಗದಿರಲಿ.
ಸಂದರ್ಶನ: ಹರೀಶ್ ಕೆ.ಆದೂರು.
ವಿಶೇಷ ವರದಿ - ಟೀಂ ಈ ಕನಸು
ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂಬ ಖ್ಯಾತಿ ಪಡೆದಿದೆ. ಈಗ ಈ ಜಿಲ್ಲೆಯನ್ನು "ಅತಿ ಬುದ್ಧಿವಂತರ ಜಿಲ್ಲೆ" ಎಂದು ಕರೆದರೆ ತಪ್ಪಾಗಲಾರದು. ಕಾರಣ ಈ ಜಿಲ್ಲೆಯಲ್ಲಿ ಬುದ್ದಿವಂತರಿಗಿಂತಲೂ ಅತಿಬುದ್ದಿಯ ಪರಾಕಾಷ್ಠೆ ತಲುಪಿದವರ ಸಂಖ್ಯೆಯೇ ಅಧಿಕ...
ಆ ರೀತಿಯಲ್ಲಿ ಅವಿಭಜಿತ ಜಿಲ್ಲೆ ಬೆಳೆದು ಬಿಟ್ಟಿದೆ...
ಮಂಗಳೂರು ಉಡುಪಿ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದುಶಿಕ್ಷಣ ಸಂಸ್ಥೆಗಳು ಯತೇಚ್ಛವಾಗಿವೆ. ಜೊತೆ ಜೊತೆಗೆ ಸಾಫ್ಟ್ ವೇರ್ ಕಂಪೆನಿಗಳು, ಇತರೆ ಉದ್ಯಮಗಳು ಅಧಿಕವಾಗಿವೆ. ಮಾಮೂಲಿಯಾಗಿಯೇ ಯುವಜನತೆ ಇಂದಿನ ಸಾಫ್ಟ್ ವೇರ್ ಕಂಪೆನಿಗಳಲ್ಲಿ , ಬಿ.ಪಿ.ಒ.ಗಳಲ್ಲಿ ಹೆಚ್ಚಿದ್ದಾರೆ.
ಇವರೆಲ್ಲರಿಗೆ ಇದೀಗ ಅಂಟಿದ ದೊಡ್ಡ ಚಾಳಿ " ಲಿವಿಂಗ್ ಟುಗೆದರ್"... ಅಂದರೆ ಮದುವೆಯಾಗದೆಯೇ ಹುಡುಗ ಹುಡುಗಿ ಒಂದೇ ಸೂರಿನಲ್ಲಿ ಒಟ್ಟಿಗೆ ವಾಸವಾಗುವಂತಹುದು... ಮದುವೆಯಾಗದ ದಾಂಪತ್ಯ ಎಂಬುದು!!!
ವಯಸ್ಸಿಗೆ ಬಂದ ಸ್ತ್ರೀ - ಪುರುಷನೊಂದಿಗೆ ಜೀವನ ನಡೆಸುವುದು ಅಥವಾ ಒಂದೇ ರೂಮಿನಲ್ಲಿ ಒಟ್ಟಿಗೆ ವಾಸವಾಗುವುದನ್ನು ನಮ್ಮ ಭಾರತೀಯ ಸಂಸ್ಕೃತಿ ಸಂಪ್ರದಾಯ ಖಂಡಿತಾ ಒಪ್ಪುವುದಿಲ್ಲ... ಆದರೆ ಇಂದಿನ "ಹೊಸ ಜನರೇಷನ್" ಅರ್ಥಾತ್ ಈಗಿನ ಯುವಜನತೆ ಇದನ್ನೇ ಇಷ್ಟ ಪಡುತ್ತಿದ್ದಾರೆ...ಈ ರೀತಿಯಲ್ಲೇ ಜೀವನ ನಡೆಸುತ್ತಿದ್ದಾರೆ.
ಅವಳಿ ಜಿಲ್ಲೆಗಳಲ್ಲಿ ಇದೀಗ ಈ ಲಿವಿಂಗ್ ಟುಗೆದರ್ ಕೇವಲ ಸಾಫ್ಟ್ ವೇರ್, ಬಿ.ಪಿ.ಒ.ಉದ್ಯೋಗಿಗಳಲ್ಲಷ್ಟೇ ಅಲ್ಲ. ಈ ಜಿಲ್ಲೆಯಲ್ಲಿರುವ ಹೈಟೆಕ್ ವಿದ್ಯಾಸಂಸ್ಥೆಗಳಲ್ಲಿ ಅಭ್ಯಸಿಸುತ್ತಿರವ ವಿದ್ಯಾರ್ಥಿಗಳಲ್ಲೂ ಲಿವಿಂಗ್ ಟುಗೆದರ್ ವ್ಯವಸ್ಥೆ ಕಂಡುಬರುತ್ತಿವೆ. ಕೆಲವೊಂದು ಶಿಕ್ಷಣ ಸಂಸ್ಥೆಗಳು ಲಿವಿಂಗ್ ಟುಗೆದರ್ ವ್ಯವಸ್ಥೆಗೆ ಸರಿಹೊಂದುವಂತಹ ಹಾಸ್ಟೆಲ್ ಕಟ್ಟಡಗಳನ್ನು ರೂಪಿಸುವ ಬಗ್ಗೆಯೂ ಚಿಂತಿಸುತ್ತಿವೆಯಂತೆ...!
ಎಲ್ಲಿಗೆ ಬಂತು ನಮ್ಮ ವ್ಯವಸ್ಥೆ... ಎಲ್ಲಿಗೆ ಹೋಯಿತು ನಮ್ಮ ಸಂಪ್ರದಾಯ...ಸಂಸ್ಕೃತಿ... ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹಲವು ವಿದ್ಯಾಸಂಸ್ಥೆಗಳಲ್ಲಿ ಭಾರತದ ಬಹುತೇಕ ಎಲ್ಲಾ ಭಾಗಗಳಿಂದ ಬಂದಂತಹ ವಿದ್ಯಾರ್ಥಿಗಳಿದ್ದಾರೆ. ಇಷ್ಟೇ ಅಲ್ಲದೆ ವಿದೇಶೀ ವಿದ್ಯಾರ್ಥಿಗಳೂ ಯತೇಚ್ಛವಾಗಿ ಈ ಸಂಸ್ಥೆಗಳಲ್ಲಿ ಅಭ್ಯಸಿಸುತ್ತಿದ್ದಾರೆ. ಇವರೆಲ್ಲರ ಪ್ರಭಾವದಿಂದಾಗಿ ಲಿವಿಂಗ್ ಟುಗೆದರ್ ಈ ಭಾಗದ ಒಂದು "ಸಂಪ್ರದಾಯ " ಎಂಬಂತಾಗಿದೆ.
ಭಾರತದ ಉದಾತ್ತ ಸಂಸ್ಕೃತಿ ಸಂಪ್ರದಾಯಗಳು ಈ ದೇಶಿಗರಿಗೆ ಬೇಕಾಗಿಲ್ಲ. ಇನ್ನೂ ವಿದೇಶೀ ಸೋಗಿನಲ್ಲಿ ಭಾರತೀಯರು ಕಾಲ ಕಳೆಯುತ್ತಿರುವುದು ಸ್ಪಷ್ಟವಾಗಿದೆ. ದೇಶದ ಸಂಸ್ಕೃತಿಯನ್ನು ಮೂಲೆಗುಂಪು ಮಾಡಿ ವಿದೇಶೀ ದಾಸ್ಯಕ್ಕೆ ಬಲಿಯಾಗುವ ಹೀನಾಯ ಸ್ಥಿತಿ ಮರುಕ ಹುಟ್ಟಿಸುವಂತಿದೆ.
ಕೋರ್ಟು ಏನೆನ್ನುತ್ತದೆ...?
ನವದೆಹಲಿ ಪ್ರತಿನಿಧಿ ವರದಿ: ಲಿವಿಂಗ್ ಟುಗೆದರ್ ವಿವಾಹ ಪೂರ್ವ ಲೈಂಗಿಕತೆ ನಡೆಸುವವರು ಇನ್ನು ಹೆದರುವಂತಿಲ್ಲ. ಕಾರಣ ಸುಪ್ರೀಂ ನೀಡಿದ ಮಹತ್ವದ ತೀರ್ಪಿನಲ್ಲಿ ವಿವಾಹ ಮುಂಚೆಯೇ ಪುರುಷ ಮತ್ತು ಮಹಿಳೆ ಒಟ್ಟೊಟ್ಟಿಗೆ ಇರುವುದನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದೆ. ಇಬ್ಬರು ವಯಸ್ಕರು ಒಟ್ಟಿಗೆ ಇರಲು ಮನಪೂರ್ವಕವಾಗಿ ಒಪ್ಪಿದರೆ ಅದರಲ್ಲಿ ಅಪರಾಧವಿಲ್ಲ ಎಂಬುದನ್ನು ಕೋರ್ಟ್ ಸ್ಪಷ್ಟ ಪಡಿಸಿದೆ.ವಿವಾಹ ಪೂರ್ವ ಲೈಂಗಿಕತೆ ನಿಷೇಧಿಸುವ ಯಾವುದೇ ಕಾನೂನು ಇಲ್ಲ ಎಂಬುದನ್ನು ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಸೇರಿದಂತೆ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠ ಅಭಿಪ್ರಾಯಿಸಿದೆ.
ಹೆತ್ತವರಿಗೆ ಕಾಳಜಿ ಕಡಿಮೆಯೇ...?
ಆಧುನಿಕತೆಯ ಸೋಗಿನಲ್ಲಿ ಇಂದು ಹೆತ್ತವರು ಮುಳುಗಿಹೋಗಿದ್ದಾರೆ. ಇದರ ಪರಿಣಾಮ ಇಂದಿನ ಯುವಜನತೆ ವಿದೇಶೀ ದಾಸ್ಯಗಳಿಗೆ ಒಳಗಾಗುತ್ತಿದ್ದಾರೆ. ಫ್ಯಾಶನ್ ಜಗತ್ತಿನಲ್ಲಿ ಮುಳುಗಿರುವ ಹೆತ್ತವರು ತಮ್ಮ ಮಕ್ಕಳನ್ನು ಅದೇ ಹಾದಿಯಲ್ಲಿ ಮುನ್ನಡೆಸುತ್ತಿರುವುದೇ ಇಂತಹ ಪದ್ಧತಿಗಳಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.
Video
