ಚುನಾವಣೆ ಬಂದಾಕ್ಷಣ ಎಚ್ಚರಗೊಳ್ಳುವ ನಮ್ಮ ರಾಜಕಾರಣಿಗಳಿಗೆ ಬಡವರು ಯಾಕೆ ಕಣ್ಣಿಗೆ ಬೀಳುತ್ತಿಲ್ಲ...? ವೇದಿಕೆಯೇರಿದಾಕ್ಷಣ `ರಾಮ ರಾಜ್ಯ', `ಬಡತನ ನಿವಾರಣೆ' ಅದೂ ಇದೂ ಎಂದು ನೂರೆಂಟು ಬೊಗಳೆ ಬಿಡುವ ಮಂದಿಗೆ ನಮ್ಮ ಅಕ್ಕಪಕ್ಕದಲ್ಲೇ ಒಪ್ಪತ್ತಿನ ಕೂಳಿಗೂ ಗತಿಯಿಲ್ಲದೆ ನೊಂದು ಜೀವನ ಸಾಗಿಸುವ ಮಂದಿ ಯಾಕೆ ಕಣ್ಣಿಗೆ ಬೀಳುತ್ತಿಲ್ಲ. ಇವರೆಲ್ಲರ ಉದ್ಧಾರಕ್ಕೆ ಸರಕಾರ ಯಾಕೆ ಮುಂದಾಗುತ್ತಿಲ್ಲ. ಇದು ಈ ಹಿಂದೆಯೂ, ಇಂದೂ, ಮುಂದೆಯೂ ನಮ್ಮೆಲ್ಲರನ್ನು ಕಾಡುವ ಒಂದು ಪ್ರಶ್ನೆ.
ಇವತ್ತು ನಾನು ಹೇಳ್ತಿರೋದು ಇದೇ ರೀತಿಯ ಒಂದು ಕಥೆ. ಸರಕಾರ ಅಧಿಕಾರಕ್ಕೆ ಬರುವಾಗ, ವಿಧಾನ ಸೌಧದ ಎದುರು ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾರುದ್ದದ ಭರವಸೆಗಳನ್ನು ನೀಡುತ್ತವೆ. ಆದರೆ ಅದು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶವಾದ ಫಂಡಿಜೆಯಂತಹ ಊರಿನಲ್ಲಿರೋ ಹಿಂದುಳಿದ ಪಂಗಡಕ್ಕೆ ಸೇರಿರೋ ಅಪ್ಪಿಗೆ ದೊರೆಯುತ್ತಿದೆಯೋ ಅಥವಾ ಇತ್ತ ಕಾರ್ಕಳದ ಈದು ಗ್ರಾಮದಲ್ಲಿರೋ ಮಲೆಕುಡಿಯ ಜನಾಂಗದವರಿಗೆ ಸಿಗುತ್ತಿದೆಯೋ ಎಂಬುದನ್ನು ನಮ್ಮನ್ನಾಳುವ ಸಕರ್ಾರಗಳು ಎಷ್ಟರ ಮಟ್ಟಿಗೆ ಯೋಚಿಸಿದೆ.?
ಸರಕಾರ ಹಿಂದುಳಿದ ವರ್ಗದವರ, ಅಲ್ಪಸಂಖ್ಯಾತರ , ಗುಡ್ಡಗಾಡು ಹಾಗೂ ಆದಿವಾಸಿ ಜನಾಂಗದವರ ಅಭಿವೃದ್ಧಿಗಾಗಿ ಕೋಟ್ಯಾಂತರ ರುಪಾಯಿ ಮಂಜೂರು ಮಾಡುತ್ತಿದೆ. ಆದರೆ ಅವೆಲ್ಲವೂ ಪರಿಣಾಮಕಾರಿಯಾಗಿ ಅವರಿಗೆ ಸಿಗುತ್ತಿಲ್ಲ. ಇದಕ್ಕೊಂದು ಸ್ಪಷ್ಟ ನಿದರ್ಶನ ಇಲ್ಲಿದೆ.
ಇದು ಪ್ರಜ್ಞಾವಂತರ ಜಿಲ್ಲೆಯೆಂದೇ ಖ್ಯಾತಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಜನಾಂಗಕ್ಕೆ ಸೇರಿದ ಮನೆಯೊಂದರ ಕಥೆ.
ದೇರೇಬೈಲ್ ಕೊಂಚಾಡಿಯ ಸೂಜಿಕಲ್ ಎಂಬಲ್ಲಿದ್ದಾರೆ ಈ ಕಥೆಯ ಕಥಾನಾಯಕಿ. ಆದರೆ ಇವರ ಕುಟುಂಬಕ್ಕೆ ಸರಕಾರದ ಯೋಜನೆಗಳ್ಯಾವುವೂ ಇಂದಿನ ತನಕವೂ ತಲುಪಿಲ್ಲ. ಇನ್ನೂ ಇವರು ನಾಗರೀಕ ಸಮಾಜಕ್ಕೆ ಸೇರಿದವರಂತೆ ಕಂಡುಬರುತ್ತಿಲ್ಲ. ಇರಲೊಂದು ಸೂರಿಲ್ಲ...ಇವರಿಗೆ ತುಳು ಭಾಷೆಯೊಂದನ್ನು ಬಿಟ್ಟರೆ ಇನ್ಯಾವುದೂ ತಿಳಿಯುತ್ತಿಲ್ಲ. ಎರಡು ಮಂದಿ ಹೆಣ್ಣು ಮಕ್ಕಳಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆಯೇ ಮನೆಯ ಆಧಾರಸ್ಥಂಭದಂತಿದ್ದ ಇವರ ಪತಿ ಇಹಲೋಕ ತ್ಯಜಿಸಿದ್ದಾರೆ.
ಇವರ ಮನೆಯನ್ನು ನೋಡಿದರೆ ಅದೊಂದು ಗುಡಿಸಲಿನಂತಿದೆ. ಗುಡಿಸಲು ಹೇಳಲೂ ಕಷ್ಟರಕವಾದಂತಿದೆ. ಅಷ್ಟೊಂದು ಇಕ್ಕಟ್ಟಾಗಿ ಇದು ಮೂಡಿಬಂದಿದೆ. ಇವರ ಜೀವನಾಧಾರಕ್ಕೆ ಈಗ ಸಿಬ್ಲು ಚಟ್ಟಿ(ಕಾಡುಬಳ್ಳಿಯಿಂದ ಮಾಡುವ ತಟ್ಟೆ)ತಯಾರಿಕೆಯೇ ಮೂಲವಾಗಿದೆ.
ಕಷ್ಟದಲ್ಲಿ ದಿನಕ್ಕೆರಡು ತಟ್ಟೆಗಳ ನಿರ್ಮಾಣ. ಒಂದಕ್ಕೆ ರು.10ರಂತೆ ಇದಕ್ಕೆ ಲಭಿಸುತ್ತವೆ. ಇದೇ ಜೀವನ ರಥದ ಪಯಣಕ್ಕೆ ಆದಾಯ ಮೂಲ.ಅನಾರೋಗ್ಯ ಪೀಡಿತರಾದರೆ ಅದೂ ಇಲ್ಲ.
ಸರಕಾರದ ಆಶ್ರಯ ಯೋಜನೆಯಲ್ಲಿ ಇವರಿಗೆ ಮನೆಸಿಗಲಿಲ್ಲ. ಭಾಗ್ಯಜ್ಯೋತಿಯೋಜನೆಯಲ್ಲಿ ವಿದ್ಯುತ್ ಕೂಡಾ ದಕ್ಕಿಲ್ಲ. ನಗರ ನೈರ್ಮಲ್ಯ ಯೋಜನೆಯಡಿ ಶೌಚಾಲಯವೂ ಸಿಕ್ಕಿಲ್ಲ. ನಲ್ವತ್ತು ವರ್ಷಗಳಿಂದ ಒಂದೇ ಜಾಗದಲ್ಲಿ ವಾಸವಾಗಿರುವ ಇವರಿಗೆ ಜಾಗದ ಹಕ್ಕು ಪತ್ರಕೂಡ ದೊರೆತಿಲ್ಲ. ಮತದಾನದಿಂದಲೂ ಇವರು ವಂಚಿತರಾಗಿದ್ದಾರೆ. ಈ ಕಾರಣಕ್ಕಾಗಿಯೋ ಏನೂ ಇಂದಿನ ತನಕ ಯಾವೊಬ್ಬ ರಾಜಕಾರಣಿಯೂ ಈ ಬಡ ಮಹಿಳೆಯತ್ತ ಕಣ್ಣೆತ್ತಿಯೂ ನೋಡಿಲ್ಲ!
ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರೋರ್ವರು ಇವರಿಗೆ ತಾತ್ಕಾಲಿಕ ಪಡಿತರ ಚೀಟಿ ಮಾಡಿಸಿಕೊಟ್ಟಿದ್ದಾರೆ. ಆದರೆ ಆ ಅಕ್ಕಿಯನ್ನು ತರಲು 60ರುಗಳಿಗೆ ಕಷ್ಟಪಡುವ ಪರಿಸ್ಥಿತಿ. ಇಂತಹ ಇನ್ನೂ ಅನೇಕ ಬಡ ಜನಗಳು ನಮ್ಮ ನಡುವಿದ್ದಾರೆ. ಸರಕಾರ ಇವರತ್ತ ಒಂದು ನೋಟ ಹರಿಸಬೇಕಾಗಿದೆ.
- ಆಶಾ
Subscribe to:
Post Comments (Atom)
Video

1 comments:
Good Article ekanasu. Really Liked.
Post a Comment