ಬೆಳೆ-ತೋಟ
ಕರಾವಳಿ ಜಿಲ್ಲೆಯ ಕೃಷಿಕರಿಗೆ ಅಡಿಕೆ ಬೆಳೆಯೇ ಜೀವನಾಧಾರವಾದ ಬೆಳೆ. ಆದರೆ ಕಳೆದ 36 ವರ್ಷಗಳಿಂದ ಸುಳ್ಯ ತಾಲೂಕಿನ ಅಡಿಕೆ ಬೆಳೆಗಾರರರು ಹಳದಿರೋಗದಿಂದ ಅಡಿಕೆ ತೋಟಗಳನ್ನು ಕಳೆದುಕೊಳ್ಳುತ್ತಿದ್ದಾರೆ.ಈಗಾಗಲೇ ಅನೇಕ ಕೃಷಿಕರು ಕಂಗಾಲಾಗಿದ್ದು ಇನ್ನೂ ಕೆಲವರು ಪರ್ಯಾಯ ಬೆಳೆಯತ್ತ ನೋಡುತ್ತಿದ್ದಾರೆ.ಆದರೆ ಇದುವರೆಗೆ ಯಾವುದೇ ಸರಕಾರ ಸ್ಪಂದಿಸದ ಕಾರಣ ಈಗ ಪರಿಹಾರದ ಭರವಸೆಯನ್ನು ರೈತರು ಕಳಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಕಡೆಗೆ ಹೋದರೆ ಅಡಿಕೆ ತೋಟವು ಹಳದಿಯಾಗಿ ಕಾಣುತ್ತದೆ.ಇದೇನು ಅಂತ ಪ್ರಶ್ನಿಸಿದರೆ ಅದರ ವಿವರ ತೆರೆದುಕೊಳ್ಳುತ್ತದೆ. ಇಲ್ಲಿನ ಕೃಷಿಕರ ಬದುಕಿಗೆ ಆಧಾರವಾಗಿ ನಿಂತದ್ದು ಕೂಡಾ ಅಡಿಕೆ ಬೆಳೆ. ಆದರೆ ಕಳೆದ 36 ವರ್ಷದ ಹಿಂದೆ ಸುಳ್ಯದ ಸಂಪಾಜೆ ಮತ್ತು ಅರಂತೋಡು ಭಾಗದಲ್ಲಿ ಇದ್ದಕ್ಕಿದ್ದಂತೆ ಅಡಿಕೆ ತೋಟಗಳು ಹಳದಿ ಬಣ್ಣಕ್ಕೆ ತಿರುಗಲಾರಂಭಿಸಿತು. ಕೆಲ ಸಮಯದಲ್ಲಿ ಅಡಿಕೆ ತೋಟಗಳು ನಿಶ್ಪ್ರಯೋಜಕವಾಗತೊಡಗಿತು.
ಆರಂಭದಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕೃಷಿಕರು ಇನ್ನಿಲ್ಲದ ಔಷಧಿಗಳನ್ನು ಸಿಂಪಡಿಸಿದರು. ಯಾವುದೇ ಪರಿಹಾರ ಕಾಣಲಿಲ್ಲ. ನಂತರ ವಿಜ್ಞಾನಿಗಳ ತಂಡವೂ ಆಗಮಿಸಿ ಪರಿಶೀಲನೆ ನಡೆಸಿ ಇದಕ್ಕೆ ಪರಿಹಾರವಿಲ್ಲ ಎಂದು ಕೈಚೆಲ್ಲಿ ಕುಳಿತಿತು.ಕೊನೆಗೆ ಈ ರೋಗಕ್ಕೆ ಮೈಕೋಪ್ಲಾಸ್ಮಾ ಎಂಬ ವೈರಸ್ ಕಾರಣ ಎನ್ನುವ ವರದಿಯನ್ನು ನೀಡಿತು.ಮಳೆಗಾಲದಲ್ಲೂ ಕೂಡಾ ತೋಟವು ಹಳದಿಯಾಗಿರುವುದು ಈ ರೋಗ ಬಾಧಿತವಾದ ತೋಟದ ಪ್ರಮುಖ ಲಕ್ಷಣವಾಗಿದೆ.ಈ ಹಳದಿ ರೋಗದಿಂದಾಗಿ ಈಗಾಗಲೇ ಸಂಪಾಜೆ, ಕಲ್ಲುಗುಂಡಿ, ಅರಂತೋಡು ಸೇರಿದಂತೆ 5 - 6 ಗ್ರಾಮಗಳಲ್ಲಿನ ಸುಮಾರು 1000 ಎಕ್ರೆಗೂ ಅಧಿಕ ತೋಟ ಈ ರೋಗಕ್ಕೆ ಆಹುತಿಯಾಗಿದೆ.
ಅಡಿಕೆ ಬೆಳೆಯಲಾಗದೆ ಕಂಗಾಲಾಗಿರುವ ಜನ ಇನ್ನೊಂದು ಪರ್ಯಾಯ ಬೆಳೆಯತ್ತ ನೋಡುವಂತಾಗಿದೆ. ಆದರೆ ಆರ್ಥಿಕವಾಗಿ ಈಗಾಗಲೇ ದುರ್ಬಲಗೊಂಡಿರುವ ಕೃಷಿಕರು ಆತಂಕಿತಗೊಂಡಿದ್ದಾರೆ.ಹಾಗಾಗಿ ಈಗ ಕೃಷಿಕರು ತಾವು ಬ್ಯಾಂಕಿನಿಂದ ಅಡಿಕೆ ಕೃಷಿಗಾಗಿ ಮಾಡಿರುವ ಸಾಲ ಮನ್ನ ಮಾಡಬೇಕು ಹಾಗೂ ಪರ್ಯಾಯ ಕೃಷಿಗೆ ಸಹಾಯ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಈ ರೋಗವು 1950ರ ಸುಮಾರಿಗೆ ಕೇರಳದಲ್ಲಿ, ಕಾಣಿಸಿಕೊಂಡು 1972 ರ ಸುಮಾರಿಗೆ ಸುಳ್ಯದ ಸಂಪಾಜೆಯಲ್ಲಿ ಕಾಣಿಸಿಕೊಂಡಿತು.ನಂತರ ಅಲ್ಲಿ ವ್ಯಾಪಿಸಿದ ರೋಗವು 1980ರ ಸುಮಾರಿಗೆ ಆ ಭಾಗದ ಅಡಿಕೆ ತೋಟಗಳನ್ನೆಲ್ಲಾ ಆಹುತಿ ತೆಗೆದುಕೊಂಡಿತು.ವರ್ಷದಿಂದ ವರ್ಷಕ್ಕೆ ನಿಧಾನವಾಗಿ ಹಬ್ಬುತ್ತಲೇ ಸಾಗಿತು.ಈಗ ಪಕ್ಕದ ಗ್ರಾಮಗಳಿಗೂ ಪಸರಿಸುತ್ತಿದೆ.ಈ ರೋಗದ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯಿತು.ರೋಗ ಆರಂಭದಲ್ಲಿ ಅಡಕೆ ಮರದ ಗರಿಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮುಂದಿನ ಹಂತವಾಗಿ ಅಡಿಕೆ ಉದುರಲಾರಂಭಿಸುತ್ತದೆ ಮುಂದೆ ಅಡಕೆ ಮರದ ಕಾಂಡ ದುರ್ಬಲವಾಗಿ ಮರ ಸಾಯುತ್ತದೆ. ಇದು ಆರಂಭಗೊಂಡು ಸರಿಸುಮಾರು 36 ವರ್ಷಗಳಾಗುತ್ತಿದ್ದರೂ ಕೂಡಾ ಸರಕಾರ ಮಟ್ಟದಿಂದ ಯಾವುದೇ ಪರಿಹಾರವಾಗಲಿ , ಅಧ್ಯಯನ ನಡೆಸುವ ಪ್ರಯತ್ನವಾಗಲಿ ನಡೆದಿಲ್ಲ.ಈಗಾಗಲೇ ಅಪಾರ ಪ್ರಮಾಣಸ ಅಡಿಕೆ ತೋಟ ನಾಶವಾಗಿದೆ.
ಇತ್ತೀಚೆಗೆ ಸುಳ್ಯದ ಮರ್ಕಂಜದಲ್ಲಿ ಅಡಿಕೆ ಹಳದಿ ರೋಗ ಮತ್ತು ಅಡಿಕೆ ಬೇರು ಹುಳದ ಬಗ್ಗೆ ಇತ್ತೀಚೆಗೆ ಸಾರ್ವಜನಿಕರು ನಡೆಸಿದ ವಿಚಾರಗೋಷ್ಠಿಯಲ್ಲಿ ಸುಳ್ಯ ಶಾಸಕ ಅಂಗಾರ ಭರವಸೆಯ ಮಾತುಗಳನ್ನಾಡಿದ್ದಾರೆ.ಸರಕಾರ ಗಮನಸೆಳೆಯುತ್ತೇನೆ, ಅಧಿವೇಶನದಲ್ಲಿ ಮಾತನಾಡುತ್ತೇನೆ ಎಂದು ಹೇಳಿಹೋದವರು ಮತ್ತೆ ಈ ಬಗ್ಗೆ ಮಾತನಾಡಿಯೇ ಇಲ್ಲ.
ಒಟ್ಟಿನಲ್ಲಿ ಕಳೆದ 36 ವರ್ಷಗಳಿಂದ ಸತತವಾಗಿ ಅಡಿಕೆಗೆ ಹಳದಿರೋಗ ಬಾಧಿಸಿ ತೋಟಗಳೇ ನಾಶವಾಗಿ ಕಂಗಾಲಾಗಿರುವ ಕೃಷಿಕರತ್ತ ಇದುವರೆಗಿನ ಯಾವ ಸರಕಾರವೂ ಗಮನ ಹರಿಸದೇ ಇರುವುದು ವಿಪರ್ಯಾಸವೇ ಸರಿ
ಮಹೇಶ್ ಪುಚ್ಚಪ್ಪಾಡಿ
Subscribe to:
Post Comments (Atom)
Video

1 comments:
ಸರಕಾರದ ನಿರ್ಲಕ್ಷ್ಯಕ್ಕೆ ಏನು ಹೇಳೋಣ... ಕೋಟಿ ಕೋಟಿ ಹಣದಲ್ಲಿ ಇವರಿಗೂ ಕೊಂಚ ನೀಡಲಿ
- Manasa
Post a Comment