ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂ...ಇದೀಗ 5ನೇ ವರುಷಕ್ಕೆ ಪಾದಾರ್ಪಣೆ...ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ... ಬಳಿಗೆ ಈ ಕನಸು.ಕಾಂ. ನಿಮ್ಮ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಪರಿಹಾರದ ಪ್ರಯತ್ನ...ನಿರೀಕ್ಷಿಸಿರಿ... ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ನುಡಿಸಿರಿ

ಮಂಗಳೂರು: ನ. 6,7 ಮತ್ತು 8ರಂದು ವಿದ್ಯಾಗಿರಿಯಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿ 2009 ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನಕ್ಕೆ ನಾಡಿನೆಲ್ಲೆಡೆಯಿಂದ ಪ್ರಸಿದ್ಧ ಸಾಹಿತಿಗಳು ಆಗಮಿಸಲಿದ್ದಾರೆ. ಕನ್ನಡ ಮನಸ್ಸು ಸಮನ್ವಯದೆಡೆಗೆ ಎಂಬ ಪರಿಕಲ್ಪನೆಯಲ್ಲಿ ಈ ಬಾರಿಯ ಸಮ್ಮೇಳನ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಳ್ಳುತ್ತಿವೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.


ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕನ್ನಡದ ಖ್ಯಾತ ಕವಿ, ವಿಮರ್ಶಕ, ಅನುವಾದಕ, ಸುಗಮ ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿರುವ ಡಾ.ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರು ನ.6 ರಂದು ನುಡಿಸಿರಿಯನ್ನು ಉದ್ಘಾಟಿಸಲಿದ್ದಾರೆ ಎಂದರು.

'ಕನ್ನಡ ಮನಸ್ಸು: ಸಮನ್ವಯದೆಡೆಗೆ' ಎಂಬ ಮುಖ್ಯ ಪರಿಕಲ್ಪನೆಯಡಿ ಹಿರಿಯ ಸಂಶೋಧಕ ಡಾ.ಹಂಪನಾ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನದಲ್ಲಿ ನಾಲ್ಕು ವಿಚಾರಗೋಷ್ಠಿಗಳು ನಡೆಯಲಿದೆ. ನ.6ರಂದು 2.20 ರಿಂದ ನಡೆಯುವ 'ಭಾಷೆ ಮತ್ತು ಸಾಹಿತ್ಯ- ಸಮನ್ವಯದೆಡೆಗೆ' ಎಂಬ ಮೊದಲ ಗೋಷ್ಠಿಯಲ್ಲಿ ಭಾಷೆಯ ಕುರಿತು ಬಿ.ಎನ್.ಸುಮಿತ್ರಾಬಾಯಿ, ಸಾಹಿತ್ಯದ ಕುರಿತು ಡಾ.ಸಿ.ಎನ್.ರಾಮಚಂದ್ರನ್ ಭಾಗವಹಿಸಲಿದ್ದಾರೆ. ನ.7 ರಂದು ಬೆಳಗ್ಗೆ 9.50ರಿಂದ ನಡೆಯುವ 'ಸಂಸ್ಕೃತಿ ಸಮನ್ವಯದೆಡೆಗೆ' ಎಂಬ ಎರಡನೇ ವಿಚಾರಗೋಷ್ಠಿಯಲ್ಲಿ ಶಿಷ್ಟ ಸಂಸ್ಕೃತಿ ಕುರಿತು ಡಾ.ಮಲ್ಲೇಪುರಂ.ಜಿ.ವೆಂಕಟೇಶ್, ಜಾನಪದ ಸಂಸ್ಕೃತಿ ಕುರಿತು ಡಾ.ಹಿ.ಶಿ ರಾಮಚಂದ್ರೇಗೌಡ ಮಾತನಾಡಲಿದ್ದಾರೆ. ಅದೇ ದಿನ ಅಪರಾಹ್ನ 2.20ರಿಂದ ನಡೆವ ಧರ್ಮ ಸಮನ್ವಯದೆಡೆಗೆ ಎಂಬ ವಿಚಾರಗೋಷ್ಠಿಯಲ್ಲಿ ಡಾ. ಶ್ರೀರಾಮ ಭಟ್ಟ, ಡಾ.ಎಚ್.ಎನ್ ಮುರಳೀಧರ ಭಾಗವಹಿಸಲಿದ್ದಾರೆ. ನ.8 ರಂದು ಬೆಳಗ್ಗೆ 9.50ರಿಂದ ನಡೆವ ಮಾಧ್ಯಮ ಸಮನ್ವಯದೆಡೆಗೆ ಎಂಬ ವಿಚಾರಗೋಷ್ಠಿಯಲ್ಲಿ ಗಿರೀಶ್ ರಾವ್ (ಜೋಗಿ) ಮುದ್ರಣ ಮಾಧ್ಯಮದ ಕುರಿತು ಜಿ,ಎನ್ ಮೋಹನ್ ವಿದ್ಯುನ್ಮಾನ ಮಾಧ್ಯಮದ ಕುರಿತು ಮಾತನಾಡಲಿದ್ದಾರೆ ಎಂದವರು ವಿವರಿಸಿದರು.

ನುಡಿಸಿರಿಯ ಅಂಗವಾಗಿ `ಶಿಲ್ಪ ಸಿರಿ' ಮತ್ತು `ಚಿತ್ರ ಸಿರಿ' ಎಂಬ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿಯೊಂದು ಕಾರ್ಯಕ್ರಮಗಳೂ ಕ್ಲಪ್ತ ಸಮಯದಲ್ಲಿ ನಡೆಯಲಿದೆ ಎಂದು ಡಾ.ಆಳ್ವ ತಿಳಿಸಿದರು.

ಕನ್ನಡ ಕತೆಗಾರರನ್ನು ಸಾಹಿತ್ಯಾಸಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಚಯಿಸುವ ಹಾಗೂ ಅವರ ಬರವಣಿಗೆಯ ಸ್ಪೂರ್ತಿ, ಪ್ರೇರಣೆ, ನಿಲುವುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಕಥಾಸಮಯವೆಂಬ ವಿಶಿಷ್ಠ ಗೋಷ್ಠಿಯೊಂದು ಸಮ್ಮೇಳನದಲ್ಲಿ ಆಯೋಜಿಸಿದ್ದು ಇದರಲ್ಲಿ ಡಾ.ನಾ ಡಿಸೋಜ, ಶ್ರೀನಿವಾಸ ವೈದ್ಯ, ನೇಮಿಚಂದ್ರ ಮತ್ತು ಸುನಂದ ಪ್ರಕಾಶ್ ಕಡಮೆ ಭಾಗವಹಿಸಲಿದ್ದಾರೆ.

ಕವಿಸಮಯ ಕವಿನಮನವೆಂಬ ಕಾರ್ಯಕ್ರಮದಲ್ಲಿ ಕನ್ನಡದ ಪ್ರಸಿದ್ಧ ಪ್ರತಿಭಾನ್ವಿತ ಕವಿಗಳು ಭಾಗವಹಿಸುವರು. ಇದರಲ್ಲಿ ಎಲ್.ಎನ್.ಮುಕುಂದರಾಜ್, ವಿ.ಗ.ನಾಯಕ, ಕೆ.ಷರೀಫಾ, ದು.ಸರಸ್ವತಿ, ಸತ್ಯಾನಂದ ಪಾತ್ರೋಟ, ವೀಣಾ ಬನ್ನಂಜೆ, ಲಲಿತಾ ಸಿದ್ಧಬಸವಯ್ಯ, ತಾರಿಣಿ ಶುಭದಾಯಿನಿ, ರಾಮಸ್ವಾಮಿ ಡಿ.ಎಸ್ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಕಾರ್ಯದರ್ಶಿ ಹರೀಶ್ ಕೆ.ಆದೂರು, ರಾಂ ಪ್ರಸಾದ್ ಕಾಂಚೋಡು ಉಪಸ್ಥಿತರಿದ್ದರು.
ಚಿತ್ರ: ರಾಜೇಶ್ ಶೆಟ್ಟಿ

0 comments:

Post a Comment