ಹೌದು ನಾನು 'ಆತ್ಮಹತ್ಯೆ'ಯ ಬಗ್ಗೆಯೇ ಯೋಚಿಸುತ್ತಿದ್ದೇನೆ. ಇದು ಭಾರತೀಯ ಕಾನೂನಿನ ಪ್ರಕಾರ ತಪ್ಪು ಅಂತ ಚೆನ್ನಾಗಿ ಗೊತ್ತು. ಆತ್ಮಹತ್ಯೆಗೆ ಯತ್ನಿಸಿ ಒಂದು ವೇಳೆ ಅದರಲ್ಲಿ ಸಫಲನಾಗದಿದ್ದರೆ ಭಾರತೀಯ ದಂಡಸಂಹಿತೆಯ ಪ್ರಕಾರ ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಯ ಮೇಲೆ ಕೇಸು ಹಾಕಬಹುದು, ನ್ಯಾಯಾಲಯದಲ್ಲಿ ಪ್ರಕರಣ ಸಾಬೀತಾದರೆ ಆ ವ್ಯಕ್ತಿಗೆ ಶಿಕ್ಷೆಯನ್ನೂ ವಿಧಿಸಬಹುದು ಅಂತಲೂ ಗೊತ್ತಿದೆ. ಅದಲ್ಲದೆ, ಇನ್ನೊಬ್ಬ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಚೋದಿಸುವುದು ಕೂಡ ಕಾನೂನಿನ ಪ್ರಕಾರ ಮತ್ತು ನೈತಿಕ ದೃಷ್ಟಿಯಿಂದಲೂ ಅಪರಾಧ ಎಂಬ ಅರಿವೂ ಇದೆ.
ಆದರೂ ಆತ್ಮಹತ್ಯೆಯ ಬಗ್ಗೆಯೇ ಯೋಚಿಸುತ್ತಿದ್ದೇನೆ! ಅನುಮಾನ ಬೇಡ.
ದಿನಂಪ್ರತಿ ಪತ್ರಿಗಳಲ್ಲಿ ಮತ್ತು ವಾರ್ತಾ ವಾಹಿನಿಗಳಲ್ಲಿ ಆತ್ಮಹತ್ಯೆಯ ವರದಿಗಳನ್ನು ನೋಡಿ, ಕೇಳಿ, ಓದಿ ಬೇಸರ ಮೂಡಿದೆ. ರೈತರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕೆ ಕೀಟನಾಶಕ ಸೇವಿಸಿಯೋ ಅಥವಾ ನೇಣು ಬಿಗಿದುಕೊಂಡೋ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ತಮ್ಮ ನಿರೀಕ್ಷೆಗೆ ತಕ್ಕಂತೆ ಪರೀಕ್ಷೆಯಲ್ಲಿ ಅಂಕ ಬರಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಪ್ರೇಮಿಗಳ ಆತ್ಮಹತ್ಯೆಯ ಬಗ್ಗೆ ಬರೆದರೆ ಜಾಗ ಹಾಳು, ಹೇಳಿದರೆ ಬಾಯಿ ಹಾಳು. ಅವಳು ಬೈದಳು, ಅವನು ಕೈಕೊಟ್ಟ ಹೀಗೆ ನಾನಾ ಕಾರಣ ಒಡ್ಡಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ಆತ್ಮಹತ್ಯೆ ಪ್ರಕರಣ ನಡೆದಾಗಲೆಲ್ಲ ಅವರ ಪ್ರೀತಿಪಾತ್ರರ ನೋವನ್ನೂ ತಕ್ಕ ಮಟ್ಟಿಗೆ ನೋಡಿದ್ದೇನೆ.
ಆದರೂ ಅದೇ ಆತ್ಮಹತ್ಯೆಯ ಬಗ್ಗೆ ಆಲೋಚಿಸುತ್ತಿದ್ದೇನೆ. ತೀವ್ರವಾಗಿ ಅದರ ಬಗ್ಗೆ ಯೋಚಿಸುತ್ತಿದ್ದೇನೆ. ಅದು ಎಷ್ಟರ ಮಟ್ಟಿಗೆ ಸರಿ, ಎಷ್ಟರ ಮಟ್ಟಿಗೆ ತಪ್ಪು... ಊಹೂಂ, ಇದ್ಯಾವುದೂ ನನಗೆ ಮುಖ್ಯವಲ್ಲ.
ಇಂಗ್ಲೀಷಿನ 'suicide' ಎಂಬ ಪದಕ್ಕೆ ಸಂವಾದಿಯಾಗಿ ನಾವು ಕನ್ನಡದಲ್ಲಿ 'ಆತ್ಮಹತ್ಯೆ' ಎಂಬ ಪದವನ್ನು ಬಳಸುತ್ತೇವೆ. ನಿರ್ದಿಷ್ಟವಾಗಿ ಯಾವಾಗ ನಾವು ಆತ್ಮಹತ್ಯೆ ಎಂಬ ಪದವನ್ನು ಬಳಸಲು ಪ್ರಾರಂಭಿಸಿದೆವು ಎಂಬುದು ನನಗೆ ತಿಳಿಯದ ವಿಚಾರ. ಇಂಗ್ಲಿಷಿನಲ್ಲಿ 'suicide' ಎಂಬ ಪದಕ್ಕೆ 'ಸ್ವ ಇಚ್ಛೆಯಿಂದ ತನ್ನನ್ನು ತಾನೇ ಕೊಂದುಕೊಳ್ಳುವುದು' ಎಂಬ ಅರ್ಥವಿದೆ. ಅದಲ್ಲದೆ 'ಆತ್ಮಘಾತಕ ಕ್ರಿಯೆ' ಎಂಬ ಇನ್ನೊಂದು ಅರ್ಥವೂ ಇದೆ ಈ ಪದಕ್ಕೆ. ಕನ್ನಡದಲ್ಲಿಯೂ ನಾವು ಸುಮಾರು ಇದೇ ಅರ್ಥವನ್ನು ಬಿಂಬಿಸಲು 'ಆತ್ಮಹತ್ಯೆ' ಎಂಬ ಪದವನ್ನು ಬಳಸುತ್ತಿದ್ದೇವೆ.
'ಆತ್ಮ' ಎನ್ನುವುದು ಇದೆಯಾ? ಇಲ್ಲವಾ? ಇದ್ದರೆ ಅದು ಹೇಗಿದೆ? ಅದರ ಆಕಾರ ಯಾವುದು? ಅದು ಎಲ್ಲಿದೆ? ಅದು ಗಂಡೋ, ಹೆಣ್ಣೋ? ಅದು ಎಲ್ಲಿಂದ ಬರುತ್ತದೆ? ಎಲ್ಲಿಗೆ ಹೋಗುತ್ತದೆ? ಆತ್ಮ ಅಂದರೆ ಏನು? ಪರಮಾತ್ಮ ಅಂದರೆ ಯಾರು? ಅವೆರಡಕ್ಕಿರುವ ವ್ಯತ್ಯಾಸ ಏನು? ಮನುಷ್ಯ, ಪ್ರಾಣಿ ಮತ್ತು ಪಕ್ಷಿಗಳಲ್ಲಿರುವ ಆತ್ಮನ ಸ್ವರೂಪ ಒಂದೇ ರೀತಿಯದಾ? ಅಥವಾ ಅವೆಲ್ಲಾ ಬೇರೆ ಬೇರೆ ಸ್ವರೂಪ ಹೊಂದಿರುವಂಥದ್ದಾ? ಆತ್ಮಕ್ಕೆ ಭೌತಿಕ ಅಸ್ತಿತ್ವ ಇದೆಯಾ?...
ಇಂಥದೆಲ್ಲಾ ವಿಚಾರಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು ಹಿಂದೂ ಪರಂಪರೆಯ ಋಷಿ, ಮುನಿಗಳು. ದೂರದ ಹಿಮಾಲಯದ ಕೊರೆಯುವ ಚಳಿಯಲ್ಲಿ, ಹಿಮಾಚ್ಛಾದಿತ ಶಿಖರಗಳಲ್ಲಿ, ಜಗತ್ತಿನ ಗಲಿಬಿಲಿಗಳಾವುದೂ ತಟ್ಟದ, ಕಾಮ-ಕಾಂಚಾಣದಂತಹ ಯಾವ ವಾಂಛೆಗಳೂ ತಟ್ಟದ ಹಿಮಕಣಿವೆಗಳಲ್ಲಿ ಕುಳಿತು ಅವರು ಆತ್ಮ, ಪರಮಾತ್ಮನ ಬಗ್ಗೆ ಸಾಕಷ್ಟು ಚಿಂತನೆ ನಡೆಸಿದ್ದಾರೆ. ಆ ಬಗ್ಗೆ ವಿಪುಲ ಸಾಹಿತ್ಯವೂ ಲಭ್ಯವಿದೆ.
ಆತ್ಮ ಎನ್ನುವುದು ಇದೆ. ಅದು ನಿರಾಕಾರ. ಅದು ಗಂಡೂ ಅಲ್ಲ, ಹೆಣ್ಣೂ ಅಲ್ಲ. (ನಪುಂಸಕವೂ ಅಲ್ಲ!) ಅದು ಎಲ್ಲಿಂದಲೂ ಬರುವುದಿಲ್ಲ, ಎಲ್ಲಿಗೂ ಹೋಗುವುದಿಲ್ಲ, ಬದಲಿಗೆ ಒಂದು ದೇಹದಿಂದ ಬಿಡುಗಡೆಯನ್ನು ಪಡೆದು ಇನ್ನೊಂದು ದೇಹಕ್ಕೆ ಪ್ರವೇಶ ಮಾಡುತ್ತದೆ. ಅದು ಸಕಲ ಜೀವಕೋಟಿಗಳಿಗೂ ಚೈತನ್ಯ ಸ್ವರೂಪಿಯಾದದ್ದು. ಮನುಷ್ಯನಿರಲಿ, ಪ್ರಾಣಿಗಳದಿರಲಿ ಅಥವಾ ಪಕ್ಷಿಗಳದೇ ಇರಲಿ ಆತ್ಮನ ಸ್ವರೂಪ ಒಂದೇ. ನಿರಾಕಾರ, ನಿರ್ಗುಣ...
ಹೀಗೆ ಸಾಕಷ್ಟು ವಿವರಗಳು ಹಿಂದೂ ಧರ್ಮಶಾಸ್ತ್ರಗಳಲ್ಲಿ ಆತ್ಮನ ಬಗ್ಗೆ ಬರುತ್ತವೆ. ಅಷ್ಟಕ್ಕೂ, ಹಿಂದೂ ತತ್ವ ಶಾಸ್ತ್ರದ ಪ್ರಮುಖ ಹುಡುಕಾಟವೇ ಆತ್ಮನ ಅಸ್ತಿತ್ವದ ಕುರಿತು. ಆತ್ಮವನ್ನು ಆಧಾರವಾಗಿಟ್ಟುಕೊಂಡೇ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಸಿದ್ಧಾಂತಗಳು ನಮ್ಮಲ್ಲಿ ಬಂದಿವೆ.
ಒಂದು ಕಥೆಯನ್ನು ಬಹುಷಃ ನಾವೆಲ್ಲರೂ ಕೇಳಿದ್ದೇವೆ. ಇದು ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬುದು ಗೊತ್ತಿಲ್ಲ. ಹಿಂದೆ ಔರಂಗಜೇಬನ ಸೈನಿಕರು ಕಾಶಿಯ ವಿಶ್ವನಾಥ ಮಂದಿರವನ್ನು ಒಡೆದ ನಂತರ ಕಾಶಿಯಲ್ಲಿ ಹರಿಯುವ ಗಂಗೆಯ ತಟದಲ್ಲಿ ಅಡ್ಡಾಡುತ್ತಿದ್ದರಂತೆ. ಆಗ ಅವರಿಗೆ ಧ್ಯಾನಮಗ್ನನಾಗಿದ್ದ ಒಬ್ಬ ಸಾಧು ಕಣ್ಣಿಗೆ ಬಿದ್ದನಂತೆ. ಆ ಸಾಧು ಧ್ಯಾನಮಗ್ನನಾಗಿದ್ದ ಕಾರಣ ಅವನಿಗೆ ಔರಂಗಜೇಬನ ಸೈನಿಕರು ಅಲ್ಲಿಗೆ ಬಂದಿದ್ದು ತಿಳಿಯಲಿಲ್ಲವಂತೆ. ಆತ ಧ್ಯಾನಮಗ್ನನಾಗಿಯೇ ಇದ್ದನಂತೆ. ಇದನ್ನು ಸಾಧುವಿನ ಅಹಂಕಾರ ಎಂದು ತಿಳಿದ ಸೈನಿಕರು ಆ ಸಾಧುವಿನ ಧ್ಯಾನವನ್ನು ಭಂಗಗೊಳಿಸಿ, ಅವನನ್ನು ಎಚ್ಚರಗೊಳಿಸಿ, ತಮ್ಮ ಖಡ್ಗದಿಂದ ಸಾಧುವನ್ನು ಕಡಿಯಲು ಮುಂದಾದರಂತೆ. ಅಂಥ ಸಂದರ್ಭದಲ್ಲೂ ಎದೆಗುಂದದ ಆ ಸಾಧು; ನೀವು ನಿಮ್ಮ ಖಡ್ಗದಿಂದ ನನ್ನ ದೇಹವನ್ನು ಸಾಯಿಸಬಲ್ಲಿರಿ. ಆದರೆ ನನ್ನ ಆತ್ಮವನ್ನು ಕೊಲ್ಲುವ ಶಕ್ತಿ ನಿಮಗಿದೆಯಾ? ಎಂದು ಕೇಳಿದನಂತೆ. ಆಗ ಸೈನಿಕರಿಗೆ ತಮ್ಮ ತಪ್ಪು ಹಾಗೂ ಅಜ್ಞಾನದ ಅರಿವಾಗಿ ಖಡ್ಗವನ್ನು ಪುನಃ ತಮ್ಮ ಓರೆಗೆ ಸಿಕ್ಕಿಸಿ ಅಲ್ಲಿಂದ ಕಾಲ್ಕಿತ್ತರಂತೆ.
ಅಂದರೆ ಎಲ್ಲ ಭಾರತೀಯ (ಅಥವಾ ಹಿಂದೂ) ತತ್ವಶಾಸ್ತ್ರಜ್ಞರ ಅಭಿಪ್ರಾಯವೂ ಒಂದೇ; ಆತ್ಮಕ್ಕೆ ಸಾವಿಲ್ಲ! ದೇಹ ಸಾಯುತ್ತದೆ. ಮತ್ತು ದೇಹಕ್ಕೆ ಸಾವು ಖಂಡಿತ. ಆದರೆ ಆತ್ಮಕ್ಕೆ ಎಂದಿಗೂ ಸಾವಿಲ್ಲ. ಇದು ಹಿಂದೂ ತತ್ವಶಾಸ್ತ್ರದ ಖಡಾಖಂಡಿತ ತೀರ್ಮಾನ. ಈ ಬಗ್ಗೆ ಚರ್ಚೆಗೆ ಆಸ್ಪದ ಇಲ್ಲದಂತೆ ವಿವರಣೆಗಳನ್ನೂ ಹಿಂದೊ ತತ್ವಶಾಸ್ತ್ರ ಆತ್ಮದ ಬಗ್ಗೆ ನೀಡಿದೆ.
ಯಾರಾದರೂ, ಯಾವುದಾದರೂ ಕಾರಣಕ್ಕೆ ತನ್ನ ಜೀವವನ್ನು ತಾನೇ ಕೊಂದುಕೊಂಡರೆ ನಮ್ಮ ಪತ್ರಕರ್ತರು, ನಮ್ಮ ಲೇಖಕರು 'ಆತ್ಮಹತ್ಯೆ' ಎಂಬ ಪದದಿಂದಲೇ ಬರೆಯುತ್ತಾರೆ. ಆದರೆ 'ಆತ್ಮ' ಎಂಬ ನಿರ್ಗುಣ, ನಿರಾಕಾರ ಅಸ್ತಿತ್ವದ ಬಗ್ಗೆ ನಮಗೆ ತಿಳಿವಳಿಕೆ ಕೊಟ್ಟ ನಮ್ಮ ತತ್ವಶಾಸ್ತ್ರಗಳೇ ಆತ್ಮಕ್ಕೆ ಸಾವಿಲ್ಲ. ಅದು ಅನಾದಿ, ಅನಂತ ಅಂತ ಹೇಳಿರುವಾಗ 'ಆತ್ಮಹತ್ಯೆ' ಎಂಬ ಪದಬಳಕೆ ಎಷ್ಟರ ಮಟ್ಟಿಗೆ ಸರಿ? ಅದು 'ಆತ್ಮಹತ್ಯೆ' ಎಂಬುದರ ಬದಲಾಗಿ 'ಜೀವಹತ್ಯೆ' ಅಥವಾ 'ದೇಹಹತ್ಯೆ' ಎಂದಾಗಬೇಕಲ್ಲವೇ? ಹಾಗಂತ 'ಆತ್ಮಹತ್ಯೆ' ಎಂಬ ಪದಬಳಕೆ ಮಾಡುವವರಿಗೆ ಈ ಸಂಗತಿ ತಿಳಿದಿಲ್ಲ ಅಂತಲ್ಲ. ಆದರೂ ಅದೇನೋ ಕಾರಣದಿಂದ ಆತ್ಮಹತ್ಯೆ ಎಂಬ ಪದಬಳಕೆ ನಮ್ಮಲ್ಲಿ ಅವ್ಯಾಹತವಾಗಿ ಮುಂದುವರಿದುಕೊಂಡು ಬಂದಿದೆ.
ನಾನು ಆತ್ಮಹತ್ಯೆಯ ಬಗ್ಗೆ ಯೋಚನೆ ಮಾಡಲು ಇದೇ ಕಾರಣ! 'ಆತ್ಮಹತ್ಯೆ' ಎಂಬ ಪದಬಳಕೆಯ ಬದಲು 'ದೇಹಹತ್ಯೆ' ಅಥವಾ 'ಜೀವಹತ್ಯೆ' ಎಂಬ ಪದವನ್ನು ಬಳಸೋಣ. ಅಲ್ಲಲ್ಲ, ಅದು ಆತ್ಮಹತ್ಯೆ ಅಂತಲೇ ಬಳಸಬೇಕು. ಆತ್ಮಕ್ಕೆ ಸಾವಿದೆ. ಆತ್ಮವನ್ನು ಹತ್ಯೆಮಾಡಬಹುದು. ದೇಹಹತ್ಯೆ ಅಥವಾ ಜೀವ ಹತ್ಯೆ ಎಂಬ ಪದಬಳಕೆ ತಪ್ಪು ಎಂದು ವಾದಿಸುವವರು ಖಂಡಿತಾ ಇರಬಹುದು. ಅಂಥವರು ತಮ್ಮ ವಾದವನ್ನು ಸಮರ್ಥವಾಗಿ, ಒಪ್ಪುವಂತೆ ಮುಂದಿಟ್ಟರೆ 'ಆತ್ಮಹತ್ಯೆ'ಯ ಬಗ್ಗೆ ಒಂದು ಒಳ್ಳೆಯ ಚರ್ಚೆ ನಡೆಯಬಹುದು. ಏನಂತೀರಿ?
-ವಿಜಯ್ ಜೋಶಿ, ಕುಂದಾಪುರ.
``ಅಲ್ ಕೈದಾ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ಬದುಕಿರಲಾರ ಎಂಬುದು ನಮ್ಮ ಗುಪ್ತಚರ ಇಲಾಖೆಯ ನಂಬಿಕೆ. ಆದರೆ ಆ ಕುರಿತು ಸ್ಪಷ್ಟ ಸಾಕ್ಷ್ಯಾಧಾರಗಳಿಲ್ಲ'' ಇದು ಪಾಕ್ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಅವರ ಮಾತು.
ಅಂದರೆ ಬಹುತೇಕ ಲಾಡೆನ್ ಸತ್ತಿದ್ದಾನೆಂದರ್ಥ ಎಂಬಂತೆ ಅವರ ಮಾತುಗಳಿದ್ದವು. ಲಾಡೆನ್ ಎಲ್ಲಿದ್ದಾನೆಂಬುದು ರಹಸ್ಯವಾಗಿ ಇರುವ ಹಿನ್ನಲೆಯಲ್ಲಿ ಆತ ಸತ್ತಿದ್ದಾನೆಂದು ಗುಪ್ತಚರ ದಳ ಪರಿಗಣಿಸಿದೆ ಎನ್ನುತ್ತಾರೆ ಅವರು. ಅಪಘಾನಿಸ್ತಾನದ ಪರ್ವತ ಗಡಿಪ್ರದೇಶದಲ್ಲೋ, ಅಥವಾ ಪಾಕ್ ಬುಡಕಟ್ಟು ಜನಾಂಗ ಪ್ರಾಭಲ್ಯ ಇರುವ ವಾಯುವ್ಯ ಪ್ರಾಂತ್ಯದಲ್ಲೋ ಲಾಡೆನ್ ಅವಿತುಕೊಂಡಿದ್ದಾನೆ ಎಂಬ ಅಮೆರಿಕಾದ ಬೇಹುಗಾರಿಕೆ ಪಡೆ ಮತ್ತು ಸೇನಾ ಪಡೆಯ ವರದಿ ಹಿನ್ನಲೆಯಲ್ಲಿ ಈ ಹೇಳಿಕೆಯನ್ನು ಜರ್ದಾರಿ ನೀಡಿದ್ದಾರೆ. ಪಾಕ್ ನಲ್ಲಿರುವ ಬೇಹುಗಾರಿಕಾ ಪಡೆ ಲಾಡೆನ್ ಸತ್ತಿದ್ದಾನೆಂದೇ ನಂಬಿದೆ ಎಂದೂ ಅವರು ತಿಳಿಸಿದ್ದಾರೆ.
ಮಂಗಳೂರು: ಯಕ್ಷರಂಗದಲ್ಲೊಂದು ಛಾಪು ಮೂಡಿಸಿದ್ದ, ಚೆಂಡೆವಾದನದಲ್ಲಿ ತನ್ನದೇ ಶೈಲಿಯನ್ನು ರೂಪಿಸಿಕೊಂಡಿದ್ದ ಹಿರಿಯ ಕಲಾವಿದ ಯಕ್ಷಗಾನದ ಖ್ಯಾತ ಚೆಂಡೆ ವಾದಕ ಕಾಸರಗೋಡಿನ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್(80) ಸೋಮವಾರ ವಿಧಿವಶರಾದರು.
ಎಡನೀರು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಬೆಂಗಳೂರಿನಲ್ಲಿ ವಾರಗಳ ಕಾಲ ನಡೆಯಲಿದ್ದ ಯಕ್ಷಗಾನಕ್ಕೆ ಹಿಮ್ಮೇಳ ಕಲಾವಿದರಾದ್ದರು.
ಕೋರಮಂಗಲದಲ್ಲಿ ನಡೆಯಬೇಕಾಗಿದ್ದ ಯಕ್ಷಗಾನಕ್ಕೆ ಮೊದಲು ಚೌಕಿ ಪೂಜೆ ನಡೆಯುತ್ತಿದ್ದಾಗ ಅವರು ಹೃದಯಾಘಾತಕ್ಕೆ ಒಳಗಾಗಿ ವಿಧಿವಶರಾಗಿದ್ದಾರೆ. ಚೆಂಡೆ ಮತ್ತು ಮದ್ದಳೆ ವಾದಕರಾಗಿ ಯಕ್ಷರಂಗದಲ್ಲಿ ಗುರುತಿಸಿಕೊಂಡಿದ್ದರು.
ಸುಳ್ಯ : ನಂಬಿದ್ರೆ ನಂಬಿ ಬಿಟ್ಟರೆ ಬಿಡಿ. ಇದಂತೂ ಸತ್ಯ. ಇದು ದೈವದ ಮುಂದೆ ನಡೆಯುವ `ಪೆಟ್ಟು' ! ಅಚ್ಚರಿಯಾಯ್ತೆ. ಆಗ್ಲೇ ಬೇಕು. ಇದು ದಕ್ಷಿಣ ಕನ್ನಡ ಜಿಲ್ಲೆಯ ತುಳು ಸಂಸ್ಕೃತಿಯಲ್ಲಿಯೇ ಒಂದು ಅಪರೂಪದ ಜಾತ್ರೆ.
ಸುಳ್ಯ ತಾಲೂಕು ಹಾಗೂ ನೆರೆಯ ಜಿಲ್ಲೆಗಳಿಂದ ಸಾವಿರಾರು ಆಸ್ತಿಕ ಮಹಾಶಯರು ಈ ಜಾತ್ರೆಯ ವೀಕ್ಷಣೆಗೆಂದು ಬರುತ್ತಾರೆ.
ಎಲ್ಲಿದೆ ಈ ಕ್ಷೇತ್ರ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಈ ವೈಶಿಷ್ಠ್ಯಕ್ಕೆ ಸಾಕ್ಷಿಯಾದ ಸ್ಥಳ. ಈ ಕ್ಷೇತ್ರದಲ್ಲಿ ಪ್ರತೀವರುಷ ನಡೆಯುವ ಉಳ್ಳಾಕುಲು ನೇಮೋತ್ಸವದ ಅಂಗವಾಗಿ ಅಡ್ಡಣಪೆಟ್ಟು ಉತ್ಸವ. ತುಳುನಾಡಿನ ಉಳ್ಳಾಕ್ಲು ದೈವಗಳ ಸಾಲಿನಲ್ಲಿ ಮಂಡೆಕೋಲಿನ ನಾಲ್ಕು ಊರುಗಳಾದ ಕೇನಾಜಿ, ಮೂರೂರು, ಮಾವಜಿ, ಬೊಳುಗಲ್ಲು ಇಲ್ಲಿಯ ಗೌಡ ಜನಾಂಗದ ನಾಲ್ವರು ಪ್ರತಿನಿಧಿಗಳ ಮಧ್ಯೆ ದೈವದ ಮುಂದೆ ಗುರಾಣಿಗೆ ದೊಣ್ಣೆಯಿಂದ ಹೊಡೆಯಲಾಗುತ್ತದೆ ಇದಕ್ಕೆ ಅಡ್ಡಣ ಹೊಡೆತ ಎಂದು ಹೆಸರು.
ಖಾಕಿ ಚೆಡ್ಡಿ, ಅದಕ್ಕೆ ಕೆಂಪು ಪಟ್ಟಿ, ಹಣೆಗೆ ಉದ್ದ ನಾಮಗಳನ್ನು ತೊಟ್ಟು ಈ ಕಾಳಗ ನಡೆಸಲಾಗುತ್ತದೆ. ಈ ಸಂದರ್ಭ ಸಿರಿಮುಡಿಯನ್ನು ಹೊರತುಪಡಿಸಿ ಉಳ್ಳಾಕ್ಲು ದೈವ ಅಲಂಕಾರವನ್ನು ಪೂರೈಸಿ ದೈವಸ್ಥಾನಕ್ಕಿಂತ ಸ್ವಲ್ಪ ದೂರದಲ್ಲಿರುವ ಭೂತದ ಕಟ್ಟೆಗೆ ಸಮೀಪ ಬರುತ್ತಾರೆ. ಬಳಿಕ ಉಳ್ಳಾಕ್ಲು ಸಿರಿಮುಡಿಯನ್ನು ಧರಿಸಿ ಕಟ್ಟೆಗೆ ಬೆನ್ನು ಹಾಕಿ ಉತ್ತರ ದಕ್ಷಿಣವಾಗಿ ನಿಲ್ಲುತ್ತದೆ. ಆಗಲೇ ನಾಲ್ಕೂರ ಅಡ್ಡಣ ಯೋಧರು ಎದುರು ಬದುರಾಗಿ ನಿಲ್ಲುತ್ತಾರೆ. ಇವರ ಹಿಂದೆ ಆಯಾ ಊರಿನ ಪ್ರಮುಖರು ಹುರಿದುಂಬಿಸುವ ಪ್ರೋತ್ಸಾಹಕರಾಗಿ ನಿಂತಿರುತ್ತಾರೆ. ಚೆಂಡೆ, ವಾದ್ಯ, ಜಾಗಟೆ ಮಾರ್ಧನಿಸುವ ಈ ಸಂದರ್ಭದಲ್ಲಿ ನಾಲ್ವರು ಯೋಧರು ತಮ್ಮ ಗುರಾಣಿಗಳನ್ನು ಎಡಗೈಯಲ್ಲಿ ಭುಜದ ಮಟ್ಟಕ್ಕೆ ತಂದು ದೊಣ್ಣೆ ಗುರಾಣಿ ಹಿಡಿದು ಪರಸ್ಪರ ಹೊಡೆದಾಟ ಆರಂಭಿಸುತ್ತಾರೆ. ಸುಮಾರು ಐದು ನಿಮಿಷಗಳ ಕಾಲ ಬಿರುಸಿನಿಂದ ಹೊಡೆದಾಟ ಸಾಗುತ್ತದೆ. ನೋಡಲು ನೆರೆದಿದ್ದ ಜನರು ಕುತೂಹಲ ಕೆರಳಿಸಿ ಉಸಿರು ಬಿಗಿ ಹಿಡಿಯುವಂತೆ ಮಾಡುತ್ತದೆ. ಅದೇ ಹೊತ್ತಿನಲ್ಲಿ ಬೆನ್ನು ಹಾಕಿ ನಿಂತಿರುವ ದೈವ ತಿರುಗಿ ಬಂದು ಹೊಡೆದಾಟದ ಮಧ್ಯೆ ಮುನ್ನುಗ್ಗಿ ಬಿಡಿಸುತ್ತದೆ.
ಮರುಕ್ಷಣದಲ್ಲಿ ಇದೇ ಯೋಧರು ದೈವದ ಹಿಂದೆ ಮುಂದೆ ಕ್ರಮಬದ್ಧವಾಗಿ ಹೆಜ್ಜೆ ಹಾಕುತ್ತಾ ನಿಲ್ಲುತ್ತಾರೆ. ತುಳು ಪಾಡ್ದನ, ಭೂತದ ನುಡಿಗಟ್ಟು ಹಾಗೂ ಭೂತದ ಚರಿತ್ರೆಯ ಪ್ರಕಾರ ಆಸ್ತಿಯ ವಿಚಾರದಲ್ಲಿ ಸಹೋದರರಾದ ಬಳ್ಳಾಳರಿಗೂ, ಉಳ್ಳಾಕ್ಲುವಿಗೂ ಆಸ್ತಿಯ ವಿಚಾರದಲ್ಲಿ ನಡೆದ ಹೊಡದಾಟದ ನೆನಪನ್ನು ಪುನರಾವರ್ತಿಸುವುದಕ್ಕಾಗಿ ಈ ರೀತಿ ಅಡ್ಡಣ ಪೆಟ್ಟು ನೆಡಸುತ್ತಾರೆ. ಸಹೋದರರ ಮಧ್ಯೆ ನಡೆದ ಸಂಘರ್ಘವನ್ನು ತಡೆದು ಶಾಂತಿ ನೆಲೆಸುವಂತೆ ಮಾಡಿದ ಐತಿಹ್ಯವಿದೆ. ಊರಿನಲ್ಲಿ ಶಾಂತಿ ಸೌಹಾರ್ದತೆ ನೆಲೆ ನಿಲ್ಲಲು ಉಲ್ಲಾಕ್ಲು ನೇಮದ ಸಮಯದಲ್ಲಿ ಈ ರೀತಿಯ ಅಡ್ಡಣ ಪೆಟ್ಟು ನಡೆಸುತ್ತಾರೆ. ಹಿಂದೆ ಊರನ್ನು ಆಳಿದ್ದ ಜೈನ ಬಲ್ಲಾಳರ ಕಾಲದಲ್ಲಿ ಕಳರಿಯಪಟ್ಟ್ ಅಭ್ಯಾಸ ನಡೆಸಿದ ಯೋಧರಿದ್ದರು. ಊರನ್ನು ಕಾಯಲು ಈ ಯೋಧರನ್ನು ಬಳಸುತ್ತಿದ್ದರು ಎಮಬ ಐತಿಹ್ಯವಿದೆ. ಈ ಅಡ್ಡಣಪೆಟ್ಟು ಕಳರಿಪಯಟ್ಟನ್ನು ನೆನಪಿಸುತ್ತದೆ.
-ನಾಡೋಡಿ
ಬಿಡುಗಡೆಗೆ ಸಿದ್ಧ
ಕಥೆ ಒಂದು ಅತ್ಯಂತ ಆಕರ್ಷಕವಾದುದು. ಕೋಟ ಶಿವರಾಮ ಕಾರಂತರ `ಪತ್ರ'ಕ್ಕೆ ಸಂಬಂಧ ಹೊಂದಿಸಿಕೊಂಡು ಹೋದಂತಹ ಚಿತ್ರ. ಸಮುದ್ರ ಕೊರೆತ, ಪುಟಾಣಿ ಮಕ್ಕಳಲ್ಲಿರುವ ಹೋರಾಟದ ಮನೋಭಾವ, ಶಾಲೆ, ಊರ ಮೇಲಣ ಪ್ರೀತಿ ಇದರ ಕಥಾ ವಸ್ತು. 2ಗಂಟೆ ಅವಧಿಯಲ್ಲಿ ಚಿತ್ರ ಮೂಡಿಬಂದಿದೆ. ಕಿರುತೆರೆ ನಟರು ಅಭಿನಯಿಸಿದ್ದಾರೆ.
ಉಡುಪಿ,ಪಡುಬಿದ್ರೆ,ಕಾಪು,ಕೆಮ್ಮಣ್ಣು, ಬೆಂಗ್ರೆ,ಕೋಟ,ತೆಂಕ ಎರ್ಮಾಳ್ ಈ ಭಾಗಗಳಲ್ಲಿ 18ದಿನಗಳ ಚಿತ್ರೀಕರಣ. ಇದೀಗ ಮೇ ತಿಂಗಳಲ್ಲಿ ಇದು ತೆರೆಕಾಣಲಿದೆ.
ಮಕ್ಕಳ ಹೋರಾಟದ ಸುತ್ತ ಹೆಣೆದ ಚಿತ್ರ ಇದಾಗಿದ್ದರೂ `ಮಕ್ಕಳ ಚಿತ್ರ' ಎಂಬ ಸರ್ಟಿಫಿಕೇಟ್ ಸೆನ್ಸಾರ್ ಮಂಡಳಿಯಿಂದ ದೊರೆತಿಲ್ಲ ಎಂಬಕೊರಗು ನಿರ್ದೇಶಕ ಭಾರತೀ ಶಂಕರ್ ಅವರದ್ದು. ಹೊಸ ಮುಖಗಳಿಗೆ ಇಲ್ಲಿ ಅವಕಾಶ ನೀಡಲಾಗಿದೆ. ಒಟ್ಟಿನಲ್ಲಿ ಇದೊಂದು ಕಲಾತ್ಮಕ ಚಿತ್ರ.






ಜೀವನದಲ್ಲಿ ಒಂದೇ ಸಾರಿ ಪ್ರಾಮಾಣಿಕವಾಗಿ ಪ್ರೀತಿ ಮಾಡೋದಕ್ಕೆ ಸಾಧ್ಯ. ಆಮೇಲಾಮೇಲಿನ ಪ್ರೀತಿಯೆಲ್ಲ ಮೊದಲ ಪ್ರೀತಿಯ ಪಡಿಯಚ್ಚು. ಅದರ ನೆರಳು ಮಾತ್ರ’
ಈ ಮಾತನ್ನು ನಲುವತ್ತರ ಆಸುಪಾಸಿನಲ್ಲಿರುವ ಯಾರೂ ಕೂಡ ನಂಬುವುದಿಲ್ಲ. ಪ್ರತಿ ಪ್ರೀತಿ ಕೂಡ ಹೊಸದು. ಪ್ರೀತಿ ನದಿಯ ಹಾಗೆ. ಕ್ಷಣಕ್ಷಣವೂ ಹೊಸ ನೀರು. ಹಳೆಯ ಪ್ರೀತಿ ಹರಿದು ಹೋಗುತ್ತದೆ. ಹರಿದು ಹೋಗುವುದನ್ನು ಕಟ್ಟಿಹಾಕಿದರೆ ಕೊಳೆಯುತ್ತದೆ ಅಥವಾ ಆವಿಯಾಗುತ್ತದೆ. ಆದ್ದರಿಂದ ಹರಿಯೋದನ್ನು ಹರಿಯೋದಕ್ಕೆ ಬಿಡಬೇಕು ಎಂದು ಅನೇಕರು ವಾದಿಸುತ್ತಾರೆ. ವಾದಿಸುವುದಕ್ಕೆ ಹಿಂಜರಿಯುವವರು ಹಾಗಂದಕೊಂಡಿರುತ್ತಾರೆ.
ಹಾಗೇ ಇನ್ನೊಂದು ಥರದ ಜನರಿದ್ದಾರೆ. ಅವರಿಗೆ ಪ್ರೀತಿಯಲ್ಲಿ ಯಾವ ನಂಬಿಕೆಯೂ ಇಲ್ಲ. ಪ್ರೀತಿಯನ್ನು ಕರ್ತವ್ಯ ಅಂದುಕೊಂಡಿರುವ ಅವರ ಡೈಲಾಗುಗಳು ಸಾಮಾನ್ಯವಾಗಿ ಹೀಗಿರುತ್ತವೆ; ನಮ್ಮೋರನ್ನು ನಾವು ಪ್ರೀತಿ ಮಾಡ್ದೇ ಬೇರೆ ಯಾರು ಮಾಡೋಕೆ ಸಾಧ್ಯ?’. ಇದನ್ನೇ ಮತ್ತೆ ಮತ್ತೆ ಕೇಳಿದಾಗ ನಮ್ಮ ರೋಗಕ್ಕೆ ನಾವು ಔಷಧಿ ತಗೊಳ್ಳದೇ ಬೇರೆ ಯಾರು ತಗೊಳ್ಳೋಕೆ ಸಾಧ್ಯ’ ಅಂತಲೋ, ನಮ್ಮ ಮನೆ ನಾವು ಕಟ್ಟದೇ ಬೇರೆ ಯಾರು ಕಟ್ಟೋಕೆ ಸಾಧ್ಯ’ ಅಂತಲೋ ಧ್ವನಿಸತೊಡಗಿ ಭಯವಾಗುತ್ತದೆ. ಪ್ರೀತಿಯೂ ಕರ್ತವ್ಯವೇ ಆಗಿಬಿಟ್ಟರೆ ಕರ್ತವ್ಯ ಚ್ಯುತಿ ಆರೋಪ ಎಷ್ಟೆಲ್ಲ ಮಂದಿಯ ಮೇಲೆ! ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಪ್ರೀತಿಗೆ ಚ್ಯುತಿಯಾದವರೇ?
ಹಾಗೆ ನೋಡಿದರೆ ನಮ್ಮ ಪುರಾಣದಲ್ಲೇ ಪ್ರೀತಿಗೆ ಪ್ರತೀಕಗಳಿಲ್ಲ. ರಾಮ-ಸೀತೆಯರು ನಿಜಕ್ಕೂ ಪ್ರೀತಿಸುತ್ತಿದ್ದರೋ ಅನ್ನುವ ಅನುಮಾನ ಮೂಡುತ್ತದೆ. ಸೀತೆಯನ್ನು ಗೆಲ್ಲುವುದಕ್ಕೆ ರಾಮ ಶಿವಧನಸ್ಸು ಎಂಬ ಬಿಲ್ಲು ಮುರಿಯಬೇಕಾಗಿತ್ತು ಅಷ್ಟೇ. ಕೈಯಲ್ಲಿ ಹೂವಿನ ಮಾಲೆ ಹಿಡಿದು ನಿಂತ ಸೀತೆಗೆ ರಾಮನಿಗಿಂತ ಮುಂಚೆ ಅನೇಕರು ಬಂದು ಬಿಲ್ಲು ಮುರಿಯುವ ಯತ್ನ ಮಾಡಿದಾಗ ಈ ಹುಡುಗ ಮುರಿದುಬಿಡಲಿ’ ಅಂತ ಯಾರ ಬಗ್ಗೆಯೂ ಅನ್ನಿಸಿರಲೇ ಇಲ್ಲವೇ? ಆಮೇಲಾದರೂ ರಾಮ ಮತ್ತು ಸೀತೆ ಆದರ್ಶದಂಪತಿಗಳ ಥರ ಬಾಳಿದರೇ ಹೊರತು, ಅನನ್ಯ ಪ್ರೇಮಿಗಳ ಥರ ಬದುಕಲೇ ಇಲ್ಲವಲ್ಲ. ಆತ ಕಾಡಿಗೆ ಹೊರಟಾಗ ಈಕೆಯೂ ಹೊರಟಳು. ಆಕೆ ಅಪಹರಣಗೊಂಡಾಗ ಈತ ಹುಡುಕಾಡಿ ಕಾದಾಡಿ ಆಕೆಯನ್ನು ಗೆದ್ದ. ಗೆದ್ದ ಮೇಲೆ ಕೂಡ ಅವರು ಹಿಂದಿ ಸಿನಿಮಾಗಳಲ್ಲಿ ಬಹುದಿನಗಳ ವಿರಹದ ನಂತರ ಒಂದಾಗ ಪ್ರೇಮಿಗಳ ಹಾಗೆ, ದಂಪತಿಯ ಹಾಗೆ ಸ್ಲೋ ಮೋಷನ್ನಿನಲ್ಲಿ ಬಂದು ಒಬ್ಬರನ್ನೊಬ್ಬರು ತಬ್ಬಲಿಲ್ಲ. ರಾಮ ಬೆಂಕಿಗೆ ಹಾರು ಅಂದ. ಸೀತೆ ಹಾರಿದಳು. ನನ್ನ ಹೆಂಡತಿ ಪರಿಶುದ್ಧೆ ಅಂದ. ಯಾವತ್ತೂ ರಾಮ ಸೀತೆಯನ್ನು ಸುಂದರಿ ಅನ್ನಲೇ ಇಲ್ಲ. ಕೊನೆಗೂ ಸೀತೆ ದೂರಾದ ನಂತರ ರಾಮ ಅವಳ ಸುವರ್ಣ ಪುತ್ಥಳಿ ಮಾಡಿಸಿಟ್ಟುಕೊಂಡಿದ್ದನಂತೆ. ರಾಮ ಪ್ರೀತಿಸುತ್ತಿದ್ದದ್ದು ಸೀತೆಯನ್ನೋ ಬಂಗಾರವನ್ನೋ ಅನುಮಾನ!
ಸುಮ್ಮನೆ ನೋಡುತ್ತಾ ಹೋಗಿ. ಪ್ರೇಮಿಗಳ ಪ್ರಸ್ತಾಪ ಬಂದಾಗೆಲ್ಲ ನಾವು ಲೈಲಾ ಮಜ್ನೂ ಅನ್ನುತ್ತೇವೆ. ರೋಮಿಯೋ ಜೂಲಿಯಟ್ ಅನ್ನುತ್ತೇವೆ. ಗ್ರೀಕ್ ಪ್ರೇಮದೇವತೆಯಾದ ವೀನಸ್ಸು ಇವತ್ತು ಭಾರತಕ್ಕೂ ಬಂದಿದ್ದಾನೆ. ಆದರೆ ನಮ್ಮ ಪುರಾಣಗಳಲ್ಲಿ ಪ್ರೇಮ ಪ್ರಕರಣಗಳೇ ಇಲ್ಲ. ಕೃಷ್ಣನನ್ನು ಅಪ್ಪಟ ಪ್ರೇಮಿ ಅನ್ನೋಣವೆಂದರೆ ಅದನ್ನು ಭಾರತದ ಅಸಂಖ್ಯಾತ ಗೃಹಿಣಿಯರು ಒಪ್ಪುವುದಿಲ್ಲ. ಅವರಿಗೆ ಗಂಡ ಶ್ರೀರಾಮಚಂದ್ರನ ಹಾಗಿರಬೇಕು. ಪ್ರೀತಿಸಬಾರದು, ಪೋಷಿಸಬೇಕು. ಪ್ರೇಮಿಸಬಾರದು ರಕ್ಷಿಸಬೇಕು. ಹೆಂಡತಿಯ ಸುವರ್ಣ ಪುತ್ಥಳಿ ಮಾಡಿ ಅದನ್ನು ಮನಸ್ಸಿನ ಮೂಲೆಯಲ್ಲಿ ಪ್ರತಿಷ್ಠಾಪಿಸಿ ದಿನಾ ಅದನ್ನೇ ನೋಡುತ್ತಾ ಕೂತಿರಬೇಕು. ಅಪ್ಪಿ ತಪ್ಪು ಕಣ್ಣು ಅತ್ತಿತ್ತ ಸುಳಿದಾಡಿದರೆ ಕಣ್ಣಿಗೆಲ್ಲಿ ಬಂಗಾರದ ಜಿಂಕೆ ಬಿದ್ದೀತೋ ಅನ್ನುವ ಭಯ.
ಪುರಾಣದ ಪುಟ ತೆರೆಯುತ್ತಾ ಹೋದರೆ ಅಲ್ಲಿ ಸಿಗುವ ಪ್ರೇಮಿಗಳೆಲ್ಲ ದುಷ್ಟರೇ, ಖಳನಾಯಕರೇ. ಪ್ರೀತಿಗಾಗಿ ಹಂಬಲಿಸಿದ ರಾವಣ, ಪ್ರೀತಿಗಾಗಿ ಕಾತರಿಸಿದ ಶಿಶುಪಾಲ, ಸುಭದ್ರೆಯನ್ನು ಮೆಚ್ಚಿದ ದುರ್ಯೋಧನ, ದ್ರೌಪತಿಯನ್ನು ಮೋಹಿಸಿದ ಕೀಚಕ- ಹೀಗೆ ಪ್ರೇಮಿಸಿದವರೆಲ್ಲ ಕೆಟ್ಟವರೇ. ಹಾಗಂತ ಮದುವೆಯಾದವರು ಪ್ರೇಮಿಸಿದ ಒಂದೇ ಒಂದು ಉದಾಹರಣೆಯೂ ಅಲ್ಲಿಲ್ಲ. ಅರ್ಜುನ ಮತ್ತು ದ್ರೌಪದಿಯ ಪ್ರಣಯ ಪ್ರಸಂಗದ ಒಂದು ಅಧ್ಯಾಯ ತೆಗೆದು ತೋರಿಸಿ ನೋಡೋಣ.
ಹಾಗಂತ, ದುಷ್ಟರಷ್ಟೇ ಪ್ರೇಮಿಸಬಲ್ಲರು ಅನ್ನುವ ತೀರ್ಮಾನಕ್ಕೇನೂ ಬರಬೇಕಾಗಿಲ್ಲ. ಸಜ್ಜನರ ಸಮಸ್ಯೆಯೆಂದರೆ ಅವರು ಪ್ರೇಮಿಸುವುದಕ್ಕೂ ಬಾರದಷ್ಟು ಸಜ್ಜನರು. ಪ್ರೀತಿ ಮಾಡುವುದೂ ಅವರ ಕಣ್ಣಿಗೆ ಅಪರಾಧವಾಗಿ ಕಾಣಿಸುತ್ತದೆ. ಭಾರತೀಯ ಸಂಸ್ಕೃತಿ ಗಂಡು ಮತ್ತು ಹೆಣ್ಣು, ದೀಪವಾರಿದ ನಂತರ ಶಯ್ಯಾಗೃಹದ ಕತ್ತಲಲ್ಲಿ ಮಾತ್ರ ಸೇರಬೇಕು ಅನ್ನುತ್ತದೆ. ರಜನೀಶ್ ಹೇಳುತ್ತಾರೆ; ಪ್ರೀತಿ ಮಾಡುವುದೆಂದರೆ ಸಾಯುವುದು. ಸಾಯುವುದು ಅಂದರೆ ಕತ್ತಲು. ಆದ್ದರಿಂದ ಪ್ರೀತಿ ಮಾಡುವುದೂ ಕತ್ತಲಲ್ಲಿ ನಡೆಯಬೇಕು. ಕತ್ತಲಲ್ಲಿ ಪ್ರೇಮಿಸಿದಷ್ಟು ನಿರಾಳವಾಗಿ ನೀವು ಬೆಳಕಿನಲ್ಲಿ ಪ್ರೇಮಿಸಲಾರಿರಿ.
ಅದಕ್ಕೆ ವೈಜ್ಞಾನಿಕ ಕಾರಣಗಳೂ ಉಂಟಂತೆ. ಕತ್ತಲೆಂದರೆ ಅನೂಹ್ಯ. ಕತ್ತಲೆಂದರೆ ಕಲ್ಪನೆ. ಅಲ್ಲಿ ಜೊತೆಗಿರುವ ಸಂಗಾತಿ ಇನ್ಯಾರೋ ಆಗಿ ರೂಪುತಳೆಯುವ ಸಾಧ್ಯತೆಗಳೂ ಇರುತ್ತವೆ. ಇದನ್ನೆಲ್ಲ ಕೇಳುತ್ತಿದ್ದರೆ ವೈಜ್ಞಾನಿಕ ಅನ್ನುವ ಪದದ ಬಗ್ಗೆಯೇ ಅಸಹ್ಯ ಅನ್ನಿಸುತ್ತದೆ. ಕಾರಣಗಳು ಕೇಳುವುದು ಮತ್ತು ಕೊಡುವುದು ವಿಜ್ಞಾನ. ಕಾರಣವಿಲ್ಲದೆಯೇ ಪೊರೆಯುವುದು ಪ್ರಕೃತಿ. ಕಾರಣಗಳನ್ನು ತಿಳಿದುಕೊಳ್ಳುವುದರಿಂದ ನಿಜಕ್ಕೂ ಲಾಭವಿದೆಯಾ?
******
ಪ್ರೀತಿ ನಮ್ಮನ್ನು ಮೆದುಗೊಳಿಸುತ್ತದೆ, ಹದಗೊಳಿಸುತ್ತದೆ ಮತ್ತು ಮುದಗೊಳಿಸುತ್ತದೆ ಅನ್ನುತ್ತಾರೆ. ಅದಕ್ಕೇ ಪ್ರೀತಿಯೆಂಬುದು ವಾಂಛೆ ಮತ್ತು ಭಾವುಕತೆಯ ಅಪೂರ್ವ ಸಂಗಮದಂತಿದೆ. ಅಂತಿಮ ಉದ್ದೇಶದ ಅರಿವಿದ್ದೂ ಅದನ್ನು ನಗಣ್ಯ ಎಂಬಂತೆ ನಿರಾಕರಿಸಬಲ್ಲ ಶಕ್ತಿಯಿರುವುದು ಪ್ರೀತಿಗಷ್ಟೇ. ಆ ಅರ್ಥದಲ್ಲಿ ಪ್ರೀತಿಯೆಂಬುದು ನಮ್ಮ ಮೂಲಭೂತ ಆಸೆಗೆ ನಾವು ಕೊಟ್ಟುಕೊಂಡ ದಿವ್ಯವಾದ ಹೆಸರು.
ಪ್ರೀತಿಗೂ ಮದುವೆಗೆ ಸಂಬಂಧ ಯಾಕಿರಬೇಕು? ಪ್ರೀತಿ ಮದುವೆಯಾಗು ಅಂತ ಯಾವತ್ತಾದರೂ ಹೇಳಿದೆಯಾ? ಪ್ರತಿ ಪ್ರೀತಿಯೂ ಮದುವೆಯಲ್ಲೇ ಕೊನೆಗೊಳ್ಳುತ್ತದೆ, ಕೊನೆಗೊಳ್ಳಬೇಕು ಅನ್ನುವುದಾದರೆ ನಮ್ಮ ಪ್ರೀತಿ ಅಷ್ಟು ಸಂಕುಚಿತವಾ? ಒಂದು ಉದಾಹರಣೆ ತಗೊಳ್ಳಿ; ಕೃಷ್ಣಾನಂದ ಎಂಬ ಹುಡುಗ ನಂದಿನಿ ಎಂಬ ಹುಡುಗಿಯನ್ನು ಪ್ರೀತಿಸುತ್ತಾನೆ ಅಂತಿಟ್ಟುಕೊಳ್ಳೋಣ. ಇಲ್ಲಿ ಪ್ರೀತಿಸುತ್ತಾನೆ ಅನ್ನುವ ಪದದ ಅರ್ಥ ಎಷ್ಟು ವಿಸ್ತಾರವಾಗಿದೆ ನೋಡಿ. ಪ್ರೀತಿಸುತ್ತಾನೆ ಅಂತ ಗೊತ್ತಾದ ತಕ್ಷಣ ಕೃಷ್ಣಾನಂದ ಮತ್ತು ನಂದಿನಿ ಒಂದೇ ಜಾತಿಯಾ ಅನ್ನುವ ಪ್ರಶ್ನೆ ಮೂಡುತ್ತದೆ. ಅವರಿಬ್ಬರ ಅಂತಸ್ತಿನ ಪ್ರಶ್ನೆ ಬರುತ್ತದೆ. ಆಮೇಲೆ ಅವರಿಬ್ಬರೂ ಮದುವೆಯಾಗುತ್ತಾರಾ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಮದುವೆಯಾಗುವುದು ನಿಜ ಅಂತ ಗೊತ್ತಾದ ತಕ್ಷಣ ಅವರಿಬ್ಬರ ಪ್ರೀತಿಸುವ ಸ್ವಾತಂತ್ರ್ಯ ನಶಿಸುತ್ತದೆ. ಆಮೇಲೆ ಕೃಷ್ಣಾನಂದ ಮತ್ತು ನಂದಿನಿ ಪರಸ್ಪರರನ್ನು ಬಿಟ್ಟು ಬೇರೆ ಯಾರನ್ನೂ ಪ್ರೀತಿಸುವಂತಿಲ್ಲ. ಒಂದು ವೇಳೆ ಪ್ರೀತಿಸಿದರೆ ಅದು ಅಪರಾಧ, ಅನೀತಿ, ಅನ್ಯಾಯ. ಪ್ರೀತಿಯೇ ಪ್ರೀತಿಸುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ವೈಚಿತ್ರ್ಯಕ್ಕಿದು ಉದಾಹರಣೆ.
ಹಾಗಿದ್ದರೆ ಪ್ರೀತಿ ಅಂದರೇನು? ಅದು ಬಿಡುಗಡೆಯಾ ಬಂಧನವಾ? ಮಿತಿಯಾ ಮಿತಿಯಿಲ್ಲದ ಸ್ಥಿತಿಯಾ? ಯಾಕೆ ಎರಡನೆಯ ಸಲ ಪ್ರೀತಿಸುವ ಹೊತ್ತಿಗೆ ಅಪರಾಧಿ ಪ್ರಜ್ಞೆ ಕಾಡುತ್ತದೆ? ಮೊದಲನೆಯ ಸಲ ಪ್ರೀತಿಸುವಾಗ ಭಯ ಕಾಡುತ್ತದೆ. ಪ್ರೀತ್ಸೋದ್ ತಪ್ಪಾ?
ಪ್ರೀತಿಯ ಉತ್ಕಟ ಸ್ಥಿತಿ ಭಕ್ತಿ. ಭಕ್ತಿಯ ಉತ್ಕಟ ಸ್ಥಿತಿ ಸಾಯುಜ್ಯ. ಸಾಯುಜ್ಯ ಅಂದರೆ ಮೋಕ್ಷ. ಮೋಕ್ಷವೆಂದರೆ
ಬಿಡುಗಡೆ. ಪ್ರೀತಿ ಹೀಗೆ ನಿರಾಕಾರದತ್ತ ತಿರುಗಿದಾಗ ಬಿಡುಗಡೆ. ಆಕಾರದತ್ತ ತಿರುಗಿದರೆ ಬಂಧನ.
ಭಕ್ತಿಯ ಒಂಬತ್ತು ವಿಧಾನಗಳನ್ನು ನೋಡಿ. ಪ್ರೀತಿಗೂ ಭಕ್ತಿಗೂ ಎಂಥ ಹತ್ತಿರದ ಸಂಬಂಧ ಅನ್ನುವುದು ಹೊಳೆಯುತ್ತದೆ. ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮನಿವೇದನಾ ಎಂಬ ನವವಿಧ ಭಕ್ತಿಯ ಬಗ್ಗೆ ದಾಸರು ಹಾಡಿದ್ದಾರೆ. ದೇವದಾಸರದೂ ಹೆಚ್ಚೂ ಕಮ್ಮಿ ಇದೇ ಸ್ಥಿತಿ. ಶ್ರವಣ ಅಂದರೆ ಅವಳ ಬಗ್ಗೆ ಕೇಳುವುದು, ಕೀರ್ತನ ಅಂದರೆ ಅವಳನ್ನು ಹೊಗಳುವುದು, ಸ್ಮರಣ ಅಂದರೆ ಅವಳ ಬಗ್ಗೆ ಚಿಂತಿಸುವುದು. ಪಾದಸೇವನ ಅಂದರೆ ಅವಳ ಸೇವೆ ಮಾಡುವುದು, ಅರ್ಚನ ಅಂದರೆ ಅವಳನ್ನು ಪೂಜಿಸುವುದು.. ಸ್ಥಿತಿ ಹೀಗೆ ಮುಂದುವರಿಯುತ್ತದೆ. ದಾಸ್ಯದಿಂದ ಸಖ್ಯವೂ ಸಖ್ಯದಿಂದ ಆತ್ಮನಿವೇದನೆಯೂ ಲಭಿಸುತ್ತದೆ. ಮುಂದೇನಾಗುತ್ತದೆ ಅನ್ನುವುದು ಅವರವರ ಭಾವಕ್ಕೆ ಬಿಟ್ಟದ್ದು.
*******
ಹುಷಾರು.
ಪ್ರೀತಿ ಅನ್ನುವುದು ಕೂಡ ಅತ್ಯಂತ ಕಮರ್ಷಿಯಲ್. ಇವತ್ತು ಜಗತ್ತಿನಲ್ಲಿ ತಯಾರಾಗುವ ಎಲ್ಲಾ ಸಿನಿಮಾಗಳ ವಸ್ತುವೂ ಪ್ರೀತಿ. ಪ್ರೀತಿಯ ಕುರಿತ ಕತೆ, ಕಾದಂಬರಿ, ಸಿನಿಮಾ ಸಂಪಾದಿಸಿದಷ್ಟು ದುಡ್ಡನ್ನು ಯಾವ ಕಥಾವಸ್ತುವೂ ಸಂಪಾದಿಸಿಲ್ಲ. ಯಾವ ಉದ್ಯಮವೂ ಸಂಪಾದಿಸಿಲ್ಲ.
ಅಷ್ಟೇ ಅಲ್ಲ, ಮತ್ತೊಂದು ಕಾರಣಕ್ಕೂ ಪ್ರೀತಿ ಕಮರ್ಷಿಯಲ್ಲು. ಪ್ರೀತಿಸುತ್ತಲೇ ಇರುವ ಹುಡುಗಿಗೆ ಹುಡುಗನ ಆಸ್ತಿಯಲ್ಲಿ ಪಾಲಿಲ್ಲ. ಅದೇ ಮದುವೆಯಾದರೆ ಆಸ್ತಿ ಆಕೆಯದು. ಆದ್ದರಿಂದ ಪ್ರೀತಿಸಿದವರು ಮದುವೆ ಆಗಲೇಬೇಕು. ಮದುವೆ ಆದ ಮೇಲೆ ಯಥಾಪ್ರಕಾರ, ಆಸ್ತಿ, ಸಂಪತ್ತು, ಮನೆ, ಮಕ್ಕಳು, ಸಂಸಾರ, ಸ್ವಾರ್ಥ ಎಲ್ಲವೂ ಶುರುವಾಗುತ್ತದೆ. ಜಗತ್ತಿನ ಎಲ್ಲಾ ಜಗಳಗಳಿಗೂ ಕೌಟುಂಬಿಕ ಕಲಹಗಳಿಗೂ ಪ್ರೀತಿಯೇ ಮೂಲ.
ಅಷ್ಟೇ ಅಲ್ಲ, ಪ್ರೀತಿ ತೀರಾ ಸಂಕುಚಿತ. ಒಬ್ಬರನ್ನಲ್ಲದೆ ಇನ್ನೊಬ್ಬರನ್ನು ಪ್ರೀತಿಸಿದರೆ ಅಲ್ಲಿ ಹಾಹಾಕಾರ. ಇಬ್ಬರನ್ನು ಮದುವೆಯಾಗುತ್ತೇನೆ ಅಂದರೆ ರಣರಂಗ. ಮದುವೆಯಾದರೆ ಜಗತ್ತೇ ಮುಳುಗಿ ಹೋದಂತೆ, ಆಕಾಶವೇ ಕಳಚಿ ಬಿದ್ದಂತೆ ಗಾಬರಿ, ಗಲಭೆ, ಕುರುಕ್ಷೇತ್ರ. ಮೊದಲ ಹೆಂಡತಿ, ನಂತರ ಬಂದವಳನ್ನೇಕೆ ಪ್ರೀತಿಸಬಾರದು. ಇಬ್ಬರೂ ಒಬ್ಬರನ್ನೇ ಯಾಕೆ ಮೆಚ್ಚಬಾರದು. ಇಬ್ಬರಿಗೂ ಬದನೆಕಾಯಿ ಎಣ್ಣೆಗಾಯಿ ಇಷ್ಟವಾದರೆ, ಒಬ್ಬನೇ ಹುಡುಗನನ್ನು ಯಾಕೆ ಪ್ರೀತಿಸುವಂತಿಲ್ಲ.
ಅಲ್ಲಿ ಮತ್ತೆ ಆಸ್ತಿಪಾಸ್ತಿಯ ಪ್ರಶ್ನೆ ಬರುತ್ತದೆ. ಹಂಚಿಕೆಯ ಮಾತು ಬರುತ್ತದೆ. ಲೆಕ್ಕಾಚಾರ ಶುರುವಾಗುತ್ತದೆ. ಪ್ರೀತಿ ಯಾವ ಹಂತದಲ್ಲಿ ಪ್ರೀತಿಯ ಗುಣಗಳನ್ನು ಕಳೆದುಕೊಂಡು ಲೆಕ್ಕಾಚಾರ ಆಗುತ್ತದೆ ಅಂತ ಹೇಳೋದು ಕಷ್ಟ.
ಪ್ರೀತಿಸುವುದು ಅಭ್ಯಾಸ ಆಗಿಬಿಟ್ಟರೆ ಮತ್ತೂ ಅಪಾಯ. ಅಭ್ಯಾಸ ಆಗದಿದ್ದರೂ ಅಪಾಯ. ಪ್ರೀತಿಯನ್ನು ಅಂತಸ್ಪೂರ್ತಿ ಅಂದರೂ ತಪ್ಪು, ಮೂಲಗುಣ ಅನ್ನುವುದೂ ತಪ್ಪು. ಪ್ರೀತಿ ಹಸಿವೆಯ ಹಾಗೆ; ಆಗುತ್ತದೆ. ನೋವಿನ ಹಾಗೆ; ನೋಯುತ್ತದೆ. ಅಜೀರ್ಣದ ಹಾಗೆ; ಅತಿಯಾದರೆ ತೊಂದರೆ ಮಾಡುತ್ತದೆ. ಬೆಳಕಿನ ಹಾಗೆ; ಕಡಿಮೆಯಿದ್ದರೂ ಕತ್ತಲೆ, ಅತಿಯಾದರೂ ಕಣ್ಣುಕುಕ್ಕಿ ಕತ್ತಲೆ.
ಹಾಗಿದ್ದರೆ ಎಂಥ ಪ್ರೀತಿ ಒಳ್ಳೇದು?
ಜ್ವರದಂಥ ಪ್ರೀತಿ! ಬರಬೇಕು, ಬೆವರಿದಾಗ ಹೋಗಿಬಿಡಬೇಕು.
- ಜೋಗಿ
(ಅಂಕಣಗಾರರು, ಕನ್ನಡ ಪ್ರಭ ಪುರವಣಿ ವಿಭಾಗದ ಸಹ ಸಂಪಾದಕರು.)
ಮಂಗಳೂರು:ವಯಸ್ಸಿಗೂ ರಾಜಕೀಯ ನಿವೃತ್ತಿಗೂ ಸಂಬಂಧವಿಲ್ಲ ಹೀಗೆನ್ನುತ್ತಾರೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ.ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜಕೀಯ ನಿವೃತ್ತಿ ಎಂಬುದು ಸ್ವಯಂ ಘೋಷಿತ ಎಂದವರು ವ್ಯಾಖ್ಯಾನಿಸಿದರು. ವಿದೇಶಗಳಲ್ಲಿರುವಂತೆ ಮತದಾನವನ್ನು ಭಾರತದಲ್ಲೂ ಖಡ್ಡಾಯ ಮಾಡಬೇಕು. ಹೀಗಾದಲ್ಲಿ ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಬಹುದಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಧುರೀಣ ಎಸ್.ಎಂ.ಕೃಷ್ಣ ಅಭಿಪ್ರಾಯಪಟ್ಟರು.
ಮಂಗಳೂರು:ಥಾಲ್ಯಾಂಡ್ನಿಂದ ಹಡಗೊಂದು ಮಂಗಳೂರಿಗೆ ಬಂದಿದೆ. ಎಂ.ವಿ.ನೌಟಿಕಾ ಹೆಸರಿನ ಈ ಪ್ರವಾಸಿ ಹಡಗು ಥಾಲ್ಯಾಂಡ್ನಿಂದ ನವಮಂಗಳೂರು ಬಂದರಿಗೆ ಆಗಮಿಸಿದೆ.
442 ಮಂದಿ ಪ್ರಯಾಣಿಕರನ್ನು ಹೊತ್ತುಕೊಂಡು ಈ ಹಡಗು ಮಂಗಳೂರಿಗೆ ಆಗಮಿಸಿದೆ.
ಈ ಹಡಗಿನಲ್ಲಿ 374 ಮಂದಿ ಸಿಬ್ಬಂದಿಗಳಿದ್ದರು. ಇಲ್ಲಿಗೆ ಬಂದಿಳಿದ ಪ್ರಯಾಣಿಕರಲ್ಲಿ ಸುಮಾರು 250 ಮಂದಿ ಪ್ರಯಾಣಿಕರು ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಕಾರ್ಕಳದ ಬಾಹುಬಲಿ ಬೆಟ್ಟ, ಸಂತ ಅಲೋಶಿಯಸ್ ಚಾಪೆಲ್, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಿಗೆ ಭೇಟಿ ನೀಡಿದ್ದಾರೆ. ನೆದರ್ಲ್ಯಾಂಡ್, ಕೆನಡಾ, ಯು.ಕೆ, ಯು.ಎಸ್ನ ಪ್ರಯಾಣಿಕರು ಪ್ರವಾಸದಲ್ಲಿದ್ದಾರೆ.ಈ ಹಡಗು ವರ್ಷದಲ್ಲಿ ಎರಡು ಬಾರಿಗೆ ಇಲ್ಲಿಗೆ ಆಗಮಿಸುತ್ತಿದೆ.
ಪುತ್ತೂರು: ರಾ.ಹೆ.48ರ ಉಪ್ಪಿನಂಗಡಿ ಸಮೀಪದ ಪೆರ್ನೆಯಲ್ಲಿ ಅಕ್ರಮ ಜಾನುವಾರು ಸಾಗಾಟವನ್ನು ಪುತ್ತೂರು ಎ.ಎಸ್.ಪಿ.ರಾಮಚಂದ್ರ ಗುಪ್ತಾ ನೇತೃತ್ವದ ವಿಶೇಷ ತನಿಖಾ ತಂಡ ಪತ್ತೆಹಚ್ಚಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 10ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 200 ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೇರಳಕ್ಕೆ ಈ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು.
7 ಲಾರಿಗಳಲ್ಲಿ ವ್ಯವಸ್ಥಿತವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ 200 ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.ಈ ಪೈಕಿ 30 ಜಾನುವಾರಗಳು ಅಸುನೀಗಿವೆ.
ದನಸಾಗಾಟ ಆರೋಪದಲ್ಲಿ ಪಿರಿಯಾ ಪಟ್ಟಣದ ಹಡಗನಹಳ್ಳಿ ನಿವಾಸಿ ಕುಮಾರ್ , ಕೃಷ್ಣ, ಶೌಕತ್, ದಸ್ತಗಿರಿ ಸಾಹೇಬ್, ಅಶೋಕ್, ಕಬೀರ್ ಸೇರಿದಂತೆ ಒಟ್ಟು 10ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಶಪಡಿಸಿಕೊಂಡ ಜಾನುವಾರುಗಳ ಪೈಕಿ 99 ಎಮ್ಮೆ, 20 ಹಸು ಮತ್ತು ಹೋರಿ, 62ಕರುಗಳಿವೆ.8ಜಾನುವಾರುಗಳು ಗಂಭೀರ ಗಾಯಕ್ಕೊಳಗಾಗಿವೆ. ಹಾಸನ ಮತ್ತು ಸಕಲೇಶಪುರದಿಂದ ಕೇರಳಕ್ಕೆ ಈ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ನೆಲ್ಯಾಡಿ ಹೊರಠಾಣೆಯಲ್ಲಿ ಇದೀಗ ಈ ಜಾನುವಾರುಗಳನ್ನು ಇರಿಸಲಾಗಿದೆ.
ಮಂಗಳೂರು: ಮೂರನೇ ಹಂತದ ಚುನಾವಣೆಯ ಭದ್ರತೆಯ ಹಿನ್ನಲೆಯಲ್ಲಿ ಮಂಗಳೂರಿಗೆ ಬಂದಿದ್ದ ಕೇರಳ ಪೊಲೀಸರು ಪಾನಮತ್ತರಾಗಿ ಪಣಂಬೂರು ಬೀಚ್ನಲ್ಲಿ ಶನಿವಾರ ದಾಂಧಲೆ ನಡೆಸಿದ್ದಾರೆ.
ಕೇರಳ ಚುನಾವಣೆಯ ನಂತರ ಬೆಂಗಳೂರಿನಲ್ಲಿ ನಡೆದ ದ್ವಿತೀಯ ಹಂತದ ಚುನಾವಣೆಯಲ್ಲಿ ಪಾಲ್ಗೊಂಡು ಇದೀಗ ಮಂಗಳೂರಿಗೆ ಈ ತಂಡ ಆಗಮಿಸಿತ್ತು.
ಬೀಚಿನಲ್ಲಿ ಪಾನಮತ್ತರಾದ ಈ ಪೊಲೀಸ್ ತಂಡ ಅಲ್ಲಿದ್ದ ಮಹಿಳೆಯರಲ್ಲಿ ಅನುಚಿತವಾಗಿ ವರ್ತಿಸಿದರು. ಇದನ್ನು ಪ್ರಶ್ನಿಸಿದ ಸ್ಥಳೀಯರೊಂದಿಗೆ ಹೊಡೆದಾಟ ನಡೆಸಿದ್ದಲ್ಲದೆ ಹಲವು ಮಂದಿಗೆ ಹಲ್ಲೆ ನಡೆಸಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪಣಂಬೂರು ಪೊಲೀಸರು 11ಮಂದಿ ಪಾನಮತ್ತ ಕೇರಳ ಪೊಲೀಸರನ್ನು ಬಂಧಿಸಿದ್ದಾರೆ.ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಫ್ಯಾಶನ್ ಲೋಕದ ಅಂಗಳದಿಂದ
ದೂರಕ್ಕೆ ಎಲ್ಲವೂ ರಂಗುರಂಗಾಗಿ ಕಾಣುತ್ತದೆ ಅನ್ನೋದಕ್ಕೇ ದೂರದ ಬೆಟ್ಟ ನುಣ್ಣಗೆ ಅನ್ನೋ ಮಾತು ಹುಟ್ಟಿಕೊಂಡದ್ದು. ಅದೇ ಬೆಟ್ಟದ ಬಳಿ ಹೋದಾಗ ಅದು ಎಷ್ಟು ರಂಗಾಗಿದೆ, ಎಷ್ಟು ಚೆನ್ನಾಗಿದೆ ಅನ್ನೋ ಬಗ್ಗೆ ನಿಜವಾದ ಅರಿವಾಗೋದು. ಹಾಗೇ ಈ ಫ್ಯಾಶನ್ ಲೋಕದ ಹತ್ತಿರ ಹೋದರೆ ಅದರ ರಂಗಿನ ಗುಂಗು ನಮಗೆ ಸರಿಯಾಗಿ ಹತ್ತೋದು.
ಹೀಗೆ ಸುಮಾರು ಒಂದು ವರ್ಷದ ಕಾಲ ಈ ಫ್ಯಾಶನ್ ಲೋಕಕ್ಕೆ ಹತ್ತಿರ ಒರಗಿ ನಿಂತು ನೋಡಿದಾಗ ಕಂಡದ್ದು ಇಷ್ಟು. ಪೇಜ್ ತ್ರೀ ಪುಣ್ಯಾತ್ಮರನ್ನು ದೂರದಿಂದಲೇ ನೋಡೋದಕ್ಕೆ ಚೆಂದಕ್ಕಿರುತ್ತದೆ. ಅದಕ್ಕೇ ಹೇಳಿದ್ದು ದೂರದ ಬೆಟ್ಟ ನುಣ್ಣಗೆ. ಅದರರ್ಥ ದೂರದಿಂದ ಚೆನ್ನಾಗಿ ಕಾಣುತ್ತಾರೆ. ಹತ್ತಿರ ಹೋದಾಗ ಮುಖದ ಮೇಲಿನ ನೆರಿಗೆ ಹೆಚ್ಚು ಒತ್ತಾಗಿ ಕಾಣುತ್ತದೆಂದಲ್ಲ. ಆದರೆ ನೆರಿಗೆಯೊಳಗಿನ, ನೆರಿಗೆ ಹಿಂದಿನ ನಾಟಕೀಯ ನೋಟಗಳು ಕಣ್ಣು ಕುಟುಕುತ್ತವೆ. ಅದಕ್ಕೇ ಸಿಕ್ಕುಹಾಕಿದ ಹಾಗೆ ಅವರ ಅಹಮ್ಮಿನ ಯೋಚನೆಗಳು ಬೇರೆ:
ಅವರೆಲ್ಲಾ ಬೆಲೆ ಕೊಡುವವರು
ಪದಗಳಿಗೆ ಬೆಲೆ ಕಟ್ಟುವವರು
ಪ್ರಚಾರದ ಸರಕಾಗಲು ನೋಟಿನ ಹೊಳೆ ಹರಿಸುವವರು
ಪುಟಗಳಲಿ ಕಾಣಿಸಲು ಕಾಂಚಾಣದ ಮೊರೆ ಹೋದವರು
ಅವರು ಬೆಲೆ ಕೊಡುವವರು
ಪದಗಳಿಗೆ ಬೆಲೆ ಕಟ್ಟ ಹೊರಟವರು
ಮೂರನೇ ಪುಟದವರು
ಮೂರ್ಖರು…
(ಯಾರನ್ನೂ ಮೂರ್ಖರು ಅನ್ನೋದಕ್ಕೆ ಹೊರಟಾಗ ನಾವು ಎಷ್ಟು ಬುದ್ಧಿವಂತರು ಅನ್ನೋದನ್ನ ಯೋಚಿಸಬೇಕು. ಇದನ್ನು ಪ್ರೂವ್ ಮಾಡಲು ಹೊರಟು ನನ್ನ ಮೂರ್ಖತನ ಪ್ರದರ್ಶಿಸುವ ಆಸೆ ಸದ್ಯಕ್ಕಿಲ್ಲ!) ಆದರೆ ಕಳೆದ ಮೂರು ವರ್ಷದಿಂದ ಬೆಂಗಳೂರಿನಲ್ಲಿರುವ ನನಗೆ ಈ ಗ್ಲಾಮರ್ ಲೋಕದ ಹತ್ತಿರ ನಿಂತು ನೋಡಿದ ಅನುಭವದಲ್ಲಿ ಸಿಹಿಯ ಪಾಲು ಇದ್ದರೂ ಕೇಳಿದ ಕಥೆಗಳ ಹಿಂದಿನ ಕಹಿ ನೆನಪಾಗುತ್ತದೆ, ಮಡಿಕೆ ಮಡಿಕೆಯಾಗಿ ರಾಶಿ ಬೀಳುತ್ತದೆ.
ಇಲ್ಲಿ ಒಂದೋ ದುಡ್ಡಿರಬೇಕು, ಇಲ್ಲ ದುಡ್ಡಿದ್ದವರ ಬೆಂಬಲ ಇರಬೇಕು. ಆ ಬೆಂಬಲಕ್ಕೆ ಬೇಕಾಗಿರೋದು ಏನೂ ಆಗಿರಬಹುದು. ಅವರೊಂದಿಗಿನ ಸಂಬಂಧ, ಅವರೊಂದಿಗಿನ ಭಾವನಾತ್ಮಕ ಸಂಬಂಧ, ಅಥವಾ ಇನ್ನೂ ಏನೇನೋ. ಆದರೆ ಈ ಸಂಬಂಧದ ಹಿಂದೆ ಬಹಳ ಅರ್ಥಗಳಿವೆ, ಇವು ಬಹಳ ಅನರ್ಥಗಳಿಗೂ ನಾಂದಿಯಾಗಿದ್ದೂ ಇದೆ. ಇಲ್ಲಿ ದೊಡ್ಡವನಾಗಬೇಕು ಅಂದರೆ ಒಂದೋ ದೊಡ್ಡ ಮನುಷ್ಯನ ಮನೆಯಲ್ಲಿ ಬೆಳ್ಳಿ ಸ್ಪೂನ್ ಬಾಯಿಯಲ್ಲಿ ಚೀಪಿಕೊಂಡು ಬೆಳೆಯಬೇಕು ಇಲ್ಲಾಂದ್ರೆ ದೊಡ್ಡವರ ಬೆನ್ನು ಬಿದ್ದು ಅವರ ‘ದಾಸ’ಳಾ(ನಾ)ಗಿ ಬೆಳೆಯಬೇಕು.
ಕೊನೆಗೂ ಈ ಸಮುದ್ರದಲ್ಲಿ ಈಜಿ ದಡ ದಾಟಿದರೆ ಗೆಲುವು ನಿಮ್ಮದೇ.
ಈ ಜಗತ್ತು ನಾನು ಇಲ್ಲಿ ಚಿತ್ರಿಸಿದಷ್ಟೇನು ಕೆಟ್ಟದಿಲ್ಲ ಅನ್ನೋ ಜನಾನೂ ಇರಬಹುದು, ಅಂಥವರು ಇಲ್ಲಿ ಸರಿಯಾಗಿ ಹೊಂದಿಕೊಳ್ತಾರೆ. ಮನಸ್ಸಿನಲ್ಲಿ ಅಸೂಯೆ, ದ್ವೇಷ ಇದ್ದರೂ ತುಟಿಯಲ್ಲಿ ನಗು, ಹಾಯ್ ಹವ್ ಆರ್ ಯೂ, ಯು ಆರ್ ಲುಕಿಂಗ್ ಲವ್ಲೀ ಅನ್ನೋ ಸಿಹಿ ಮಾತುಗಳು ಇಂಥವರಲ್ಲಿ ನಲಿದಾಡುತ್ತಾ ಇರುತ್ತದೆ. ಇದು ಸರಿಯೇ ಬಿಡಿ. ತೋಟ ಶೃಂಗಾರ ಒಳಗೆ ಗೋಳಿಸೊಪ್ಪು ಅನ್ನೋದೇನಕ್ಕೆ ಅನ್ನೋದಾದ್ರೂ ಇದರಿಂದ ತಿಳಿಯುತ್ತದೆ.
ಹೀಗೆ ಬೆಂಗಳೂರಿನ ನಾಡಿಮಿಡಿತಕ್ಕೆ ಇನ್ನಷ್ಟು ಮಗ್ಗುಲುಗಳಿವೆ, ಮತ್ತಷ್ಟು ಹೊಳಪಿನಿಂದ ತುಂಬಿದ ಮಹಾನಗರದ ಝಲಕ್ ಆಗಾಗ ನಮ್ಮನ್ನು ಬೆರಗುಗೊಳಿಸುತ್ತಾ ಇರುತ್ತದೆ. ಇಂತಹಾ ಬೆರಗುಗಳಿಗೆ ಮತ್ತೆ ಅಕ್ಷರ ರೂಪ ಕೊಡುವ ಪ್ರಯತ್ನ ಖಂಡಿತಾ ಮಾಡುತ್ತಾ ಇರುತ್ತೇನೆ. ಈ ಬೆರಗುಗಳ ಒಳಗು ಹೊರಗುಗಳಿಗೆ ನಿಮ್ಮನ್ನು expose ಮಾಡುವ ಕಾತರ ಇದ್ದೇ ಇದೆ. ಆದರೆ ಇನ್ನೊಮ್ಮೆ.
- ಬಡೆಕ್ಕಿಲ ಪ್ರದೀಪ
(ಆಜ್ ತಕ್ ವರದಿಗಾರರು, ಬೆಂಗಳೂರು)

ಮಂಗಳೂರು: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ರಶೀದ್ ಮಲಬಾರಿ ಪರ ವಕೀಲನಾಗಿದ್ದ ನೌಶಾದ್ ಕಾಸಿಂ ಹತ್ಯೆ ಪ್ರಕರಣದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪಿಸ್ತೂಲ್, ನಗದು, ಎಂಟು ಗುಂಡು, ಕಾರನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿಯ ನಾಯತರ್ಪು ನಿವಾಸಿ ತಿಮ್ಮಪ್ಪ ಶೆಟ್ಟಿ ಪುತ್ರ ದಿನೇಶ್ (24), ಕೋಡಿಕಲ್ ಲಕ್ಷ್ಮಣ ಕುಲಾಲ್ ಪುತ್ರ ರಿತೇಶ್(20), ಕಾವೂರಿನ ಲಕ್ಷ್ಮಣ ಶೆಟ್ಟಿಯವರ ಮಗ ಪ್ರತಾಪ್(26),ಕೋಡಿಕಲ್ ಗಂಗಾಧರ ಎಂಬವರ ಮಗ ಗಣೇಶ್(28) ಕದ್ರಿ ರಾಮಯ್ಯನವರ ಮಗ ಸುಬ್ರಹ್ಮಣ್ಯ(24) ಉರ್ವಾಸ್ಟೋರಿನ ಬಾಬು ಬಂಗೇರ ಅವರ ಪುತ್ರ ಶಿವಪ್ರಕಾಶ್ (30) ಬಂಧಿತರು.
ನೀಲನೆಯ ಆಕಾಶ. ಅದಕ್ಕೆ ಹತ್ತಿರವಾಗುವಂತೆ ಹಾರಿ ಹೋಗುತ್ತಿದ್ದ ಹಕ್ಕಿ ದೂರದಲ್ಲಿ ಚುಕ್ಕಿಯಂತೆ ಕಾಣುತ್ತಿತ್ತು. ಹಾರುತ್ತಾ...ಹಾರುತ್ತಾ ಹೋದ ಹಕ್ಕಿಗೆ ಕೆಳಗೆ ಹಸಿರು ಕಂಡಿತು. ಜೀವನೋತ್ಸಾಹ ಉಕ್ಕಿ ಬಂತು. ಮೆಲ್ಲಗೆ ಕೆಳಗಿಳಿಯತೊಡಗಿತು ; ಪುಟ್ಟನೊಬ್ಬ ಅಂಗಳದಲ್ಲಿ ನಿಂತು ಹಾರಿಸಿದ ಗಾಳಿಪಟವನ್ನು ಅತ್ಯಂತ ನಾಜೂಕಿನಿಂದ ಕೆಳಗಿಳಿಸಿಕೊಳ್ಳುತ್ತಿದ್ದ ಹಾಗೆ. ಚೂರು ಆತುರ ಪಟ್ಟರೂ ಗಾಳಿಪಟ ಯಾವುದಾದರೂ ಮರಕ್ಕೋ, ಕಂಬಕ್ಕೋ ಸಿಕ್ಕು ಹಾಳಾಗಿ ಬಿಡಬಹುದೆಂಬ ಕಾಳಜಿ. ಒಟ್ಟೂ ಗಾಳಿಪಟದ ಜೀವ ಉಳಿಸುವ ತವಕ.
ಹಾಗೆಯೇ ಈ ಹಕ್ಕಿಯೂ ಸಹ. ಮುಂದೆ ಹಾದಿ ತೋರುತ್ತಿರಲಿಲ್ಲ, ಹಾಗೆಯೇ ಹೆಜ್ಜೆಯೂ ಮೂಡುತ್ತಿರಲಿಲ್ಲ. ಹಾರಿ ಹಾರಿ ಬಂದು ಕೆಳಗಿಳಿದು ಹಸಿರ ಕಂಡು ಉತ್ಸಾಹವನ್ನು ತುಂಬಿಕೊಂಡಿತು. ಕ್ಷಣ ಕಾಲ ಕಣ್ಣುಮುಚ್ಚಿ ಆಯಾಸ ಕಳೆದುಕೊಳ್ಳುವ ಪ್ರಯತ್ನ ಅದರದ್ದು. ಹಾಗೇ ಸುಮ್ಮನೆ ಎನ್ನುವಂತೆ ಕಣ್ಣು ಮುಚ್ಚಿತು. ಒಳಗೆಲ್ಲಾ ಕತ್ತಲೆ ಎನಿಸಿದಾಗ, ಇದೇ ಸುಖ ಎನಿಸಿತು. ಒಂದೆರಡು ಕ್ಷಣ ಹೆಚ್ಚಿಗೆ ಇದ್ದರೆ ಏನೂ ನಷ್ಟವಿಲ್ಲ ಎಂದು ಇನ್ನೂ ಒಂದೆರಡು ಕ್ಷಣ ಬಿಟ್ಟು ಕಣ್ತೆರೆಯಿತು.
ಹಸಿರೆಲ್ಲಾ ಸಂಭ್ರಮದಿಂದ ಕುಣಿಯುತ್ತಿದೆ. ಹಸಿರಿನ ತುದಿಯಲ್ಲೆಲ್ಲಾ ಹತ್ತು ಹಲವು ಬಣ್ಣ. ಉದ್ಯಾನದ ಹೂವುಗಳೆಲ್ಲಾ ಒಂದೇ ದಿನ, ಒಂದೇ ಕ್ಷಣ ಪರಸ್ಪರ ಮಾತನಾಡಿಕೊಂಡ ಹಾಗೆ ಥಟ್ಟನೆ ಅರಳಿದಂತೆ. ಇಡೀ ಹಸಿರಿನ ಬಸಿರಲ್ಲಿ ಬಣ್ಣ ಬಣ್ಣದ ಹೂವುಗಳೆಲ್ಲಾ ಮೂಡಿ ಬಂದಿದ್ದವು. ವಿಚಿತ್ರ ಎನಿಸಿತು ಹಕ್ಕಿಗೆ. ಕೆಲ ಕ್ಷಣಗಳಲ್ಲೇ ಹೀಗೆ ಬದುಕು ಅರಳುತ್ತದೆಯೇ? ಎಂಬ ಪ್ರಶ್ನೆ ಅದರದ್ದು.
ಒಂದೊಂದೇ ಬಣ್ಣವನ್ನು ನುಂಗ ತೊಡಗಿತು ಹಕ್ಕಿ. ಬೆಳ್ಳನೆಯ ಹೂವು...ಬಿಳಿಯ ಬಣ್ಣ ಗಾಯಬ್. ಹಾಗೆಯೇ ಕೆಂಪು...ನೀಲಿ...ಹಳದಿ...ತಿಳಿ ನೀಲಿ...ಗೊರಟೆ ಹೂವಿನ ಕಡು ನೀಲಿ ಬಣ್ಣ...ಕಂದು...ಕಡುಗೆಂಪು...ಬಣ್ಣವೇ ಇಲ್ಲದಂತೆ ತೋರುವ ತಿಳಿಯಾದ ಮತ್ತೊಂದು ಬಣ್ಣ...ಎಲ್ಲಾ ಬಣ್ಣ ನುಂಗಿದ ಹಕ್ಕಿಯ ಬಣ್ಣ ಈಗ ಸಂಪೂರ್ಣ ಕಪ್ಪು. ಹಕ್ಕಿ ಮೊದಲು ಬಿಳಿಯ ಬಣ್ಣ ನುಂಗಿದಾಗ ತನ್ನ ಬಣ್ಣ ಬಿಳಿಯಾಗುವುದನ್ನು ಕಂಡಿತ್ತು. ಎಂಥಾ ಮೋಹ ಬಣ್ಣದ ಮೇಲೆ ಅದಕ್ಕೆ . ಅದೊಂದೇ ಬಣ್ಣ ನುಂಗಿ ಸುಮ್ಮನಾಗಲಿಲ್ಲ.
ಈಗ ಮತ್ತೆ ಹಸಿರೆ ಕಣ್ಣಿಗೆ ಕಾಣುತ್ತಿದೆ. ಹೂವುಗಳೆಲ್ಲಾ ಬಣ್ಣ ಕಳೆದುಕೊಂಡು ಬಿಳಿಚಿಕೊಂಡಿವೆ. ಅದರೆದುರು ಎಲ್ಲಾ ಬಣ್ಣ ನುಂಗಿದ ಹಕ್ಕಿ ಕುಳಿತಿದೆ. ಅಷ್ಟರಲ್ಲಿ ರಂಗು ರಂಗಿನ ಚಿಟ್ಟೆ ಮಧುವ ಅರಸಿಕೊಂಡು ಬಂತು. ಅದಕ್ಕೆ ತಲೆ ತಿರುಗುವ ಕ್ಷಣ. ಬರೀ ಹಸಿರೇ ಕಾಣುತ್ತಿದೆ, ಅದರ ತುದಿಯಲ್ಲಿ ಒಂದೂ ಹೂವು ಕಾಣುತ್ತಿಲ್ಲ. ಬಿಳಿಚಿಕೊಂಡವೆಲ್ಲಾ ಹೂವೇ...ಅಲ್ಲವೇ ? ಎಂಬ ಅನುಮಾನ.
ಹೀಗೇ ಹತ್ತಾರು ಹಸಿರಿನ ಮೇಲೆ ಲ್ಯಾಂಡ್ ಆಗಲು ಸ್ಥಳ ಹುಡುಕುವ ಹೆಲಿಕಾಪ್ಟರ್ ನಂತೆ ತಿರುಗಿದ ಚಿಟ್ಟೆ, ಹೂವೆಂದುಕೊಂಡ ಹೂವಿನ ಮೇಲೆ ಕುಳಿತಿತು. ಹಸಿರು ಮೆಲ್ಲಗೆ ತಲೆದೂಗುವಂತೆ ಮೈಯ ಅಲುಗಾಡಿಸಿತು. ಕೆಲವೇ ಕ್ಷಣ...ಬಣ್ಣಕ್ಕಾಗಿ ಹಪಹಪಿಸುತ್ತಿದ್ದ ಹಕ್ಕಿ ಆ ಚಿಟ್ಟೆಯನ್ನೂ ನುಂಗಿತು...ಆದರೂ ಬಣ್ಣ ಬದಲಾಗಲಿಲ್ಲ.
- ಅರವಿಂದ ನಾವಡ
ಬೆಂಗಳೂರು: ಕರ್ನಾಟಕದ 17ಕ್ಷೇತ್ರಗಳಲ್ಲಿ ನಡೆದ ಮೊದಲ ಸುತ್ತಿನ ಮತದಾನದಲ್ಲಿ ಶೇ.51ರಷ್ಟು ಮತದಾನವಾಗಿದೆ. ಆಂಧ್ರಪ್ರದೇಶ ಮತ್ತು ಒರಿಸ್ಸಾ ವಿಧಾನ ಸಭೆ ಚುನಾವಣೆ ಮತ್ತು ವಿವಿಧ ರಾಜ್ಯಗಳಿಂದ ಸಂಸತ್ತಿಗೆ ನಡೆದ ಎರಡನೇ ಸುತ್ತಿನ ಚುನಾವಣೆಯಲ್ಲಿ ಶೇ.55 ಮತದಾನವಾಗಿದೆ. ಈ ಎಲ್ಲಾ ಕ್ಷೇತ್ರಗಳ ಫಲಿತಾಂಶ ಮೇ.16ರಂದು ಹೊರಬೀಳಲಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.63.5 ಮತದಾನವಾಗಿದೆ. ಕನಿಷ್ಠ ಮತದಾನ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಶೇ.42. ತನ್ಮೂಲಕ 271 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ.
ಮತದಾನ ಬಿರುಸಿನಿಂದ ಪ್ರಾರಂಭಗೊಂಡಿದ್ದು ನೀರಸವಾದ ಅಂತ್ಯಕಂಡಿತು. 23ಮತಗಟ್ಟೆಗಳಲ್ಲಿ ಶೂನ್ಯ ಮತದಾನ ದಾಖಲಾಗಿದೆ.ಹಲವು ಕಡೆಗಳಲ್ಲಿ ಮತಯಂತ್ರ ಕೈಕೊಟ್ಟ ಘಟನೆಗಳು ಸಂಭವಿಸಿದವು.
ಲೋಕಸಭಾ ಚುನಾವಣೆಯ ದ್ವಿತೀಯ ಹಂತದದಲ್ಲಿ ಒಟ್ಟು 11ಕ್ಷೇತ್ರಗಳಿಗೆ ಏಪ್ರಿಲ್ 30ರಂದು ಮತದಾನ ನಡೆಯಲಿದೆ.
ಚುನಾವಣೆಯ ಬಹುತೇಕ ಕಡೆಗಳಲ್ಲಿ ಪಕ್ಷ ಪಕ್ಷಗಳ ನಡುವಣ ಕಲಹ ಕಂಡುಬಂದಿವೆ. ಪೊಲೀಸರ ಸಮರ್ಥ ಕಾರ್ಯಾಚರಣೆಯಿಂದಾಗಿ ಯಾವುದೇ ಪರಿಸ್ಥಿತಿ ವಿಕೋಪಕ್ಕೆ ಎಡೆಯಾಗಿಲ್ಲ.
ಮತದಾನ ಬಹಿಷ್ಕರಿಸಿದರು: ಸೊಂಡೂರಿನ ನಾರಾಯಣಪುರ, ಹೊಸಪೇಟೆಯ ಕೆರೆತಾಂಡ, ಬಸವಕಲ್ಯಾಣದ ಮಾಗತ್ತಿ , ಹುಲಗತ್ತಿ, ಚಿಕ್ಕೋಡಿಯ ಭೀಮಾಪುರವಾಡಿ, ಶಿರಸಿ ತಾಲೂಕಿನ ಕಲಗೊಪ್ಪ, ಲಿಂಗಸೂಗೂರಿನ ಕಡ್ನೋಣಿ, ಗುಡಿಬಂಡೆಯ ನಿಂಚನಬಂಡಹಳ್ಳಿ, ಶಿಡ್ಲಘಟ್ಟದ ಶೆಟ್ಟಿಗೆರೆ, ಬೆಂಗಳೂರಿನ ಯಲಹಂಕ ರಾಮಗೊಂಡನಹಳ್ಳಿ, ಬಿಜಾಪುರದ ಮಲಘಾಣ, ತುಮಕೂರಿನ ಉಪ್ಪಾರಹಳ್ಳಿ, ಬಾಗೇವಾಡಿಯ ಮಾಲಗಾನ್, ರಾಯಚೂರಿನ ಕೆಲವೊಂದು ಗ್ರಾಮಗಳಲ್ಲಿ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಿದರು.
ಶಿವಮೊಗ್ಗ:ಭದ್ರಾವತಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಬಂಗಾರಪ್ಪ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ. ಕಲ್ಲುತೂರಾಟ, ಲಾಠಿ ಪ್ರಹಾರ ನಡೆಯಿತು. ಇದರಿಂದಾಗಿ 4ಮಂದಿ ಪತ್ರಕರ್ತರೂ ಸೇರಿದಂತೆ ಕೆಲವರಿಗೆ ಗಾಯಗಳಾಗಿವೆ.
ಭದ್ರಾವತಿ ಕನಕ ಮಂಟಪ ಮೈದಾನದಲ್ಲಿ ಕಾಂಗ್ರೆಸ್ ಚುನಾವಣಾ ಸಭೆ ನಿಗಧಿಯಾಗಿತ್ತು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಭೆಯನ್ನುದ್ದೇಶಿಸಿ ಮಾತನಾಡಬೇಕಿತ್ತು. ಎಸ್.ಎಂ.ಕೃಷ್ಣ ಬರಲು ಕೊಂಚ ತಡವಾದ ಹಿನ್ನಲೆಯಲ್ಲಿ ಸಭೆಯನ್ನು ಪ್ರಾರಂಭಿಸುವಂತೆ ಬಂಗಾರಪ್ಪ ಕಾರ್ಯಕರ್ತರಿಗೆ ಸೂಚಿಸಿದರು. ಅದಾಗ ಸ್ಥಳೀಯ ಶಾಸಕ ಬಿ.ಕೆ.ಸಂಗಮೇಶ್ವರ್ ಕೃಷ್ಣ ಬರುವ ತನಕ ಸಭೆ ಆರಂಭಿಸುವುದು ಬೇಡ ಎಂದರು. ಅದಾಗ ಬಂಗಾರಪ್ಪ ಹಾಗೂ ಸಂಗಮೇಶ್ವರ ನಡುವೆ ಸಭೆ ಪ್ರಾರಂಭಗೊಳಿಸುವ ವಿಚಾರದಲ್ಲಿ ವಾಗ್ವಾದ ನಡೆದು ಅದು ತಾರಕಕ್ಕೇರಿತು. ಏತನ್ಮಧ್ಯೆ ಬಂಗಾರಪ್ಪರ ವರ್ತನೆಗೆ ಕುಪಿತರಾದ ಸಂಗಮೇಶ್ವರ್ ವೇದಿಕೆಯಿಂದೆದ್ದು ಹೊರನಡೆದರು. ಇವರನ್ನು ಇವರ ಬೆಂಬಲಿಗರೂ ಹಿಂಬಾಲಿಸಿದರು. ಇದೇ ಸಂದರ್ಭದಲ್ಲಿ ಬಂಗಾರಪ್ಪ ಭಾಷಣ ಆರಂಭಿಸಿದರು. ಇದರಿಂದ ಕುಪಿತಗೊಂಡ ಸಂಗಮೇಶ್ವರ ಬೆಂಬಲಿಗರು ಕಲ್ಲುತೂರಾಟ ನಡೆಸಿದರು.ಒಂದು ಕಲ್ಲು ಬಂಗಾರಪ್ಪರ ಎದೆಗೂ ತಾಗಿತು.
Video








