ನೆನಪುಗಳ ಮಾತು ಮಧುರ
ಕಲ್ಪನೆಯಲ್ಲಿ ಅರಮನೆ ಕಟ್ಟುವ ಕನಸು ಕಾಣಬಹುದಾದಂತ ಒಂದು ಚಿಕ್ಕ ಚೊಕ್ಕದಾದ ಕೋಣೆ ಎರಡನೆ ಮಹಡಿಯಲ್ಲಿತ್ತು. ಅದು ನನ್ನ ಬೆಂಗಳೂರು ಜೀವನದ ಆರಂಭದ ದಿನಗಳು ಪಕ್ಕದ ಮನೆ ಯತೀಶ ಇನ್ನೂ ಹೈಸ್ಕೂಲು ನನಗೆ ಮುದ್ದೆ ತಿನ್ನಿಸಿ ಅವನು ಆಮ್ಲೇಟ್ ಕದ್ದು ತಿನ್ನಲು ಶುರುಮಾಡಿದ್ದ.
ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಡಿ.ಎಫ್.ಎ ಕೋರ್ಸ್ ಗಾಗಿ ದಿನಾ ಹೋಗುತ್ತಿದ್ದೆ. ಕಾಲೇಜಿಗು ಅಲ್ಲಿಗೂ ವೆತ್ಯಾಸ ಕಾಣಲಿಲ್ಲ. ಒಂದು ವರ್ಷ ಹಾಗೂ ಹೀಗೂ ಕಳೆಯಿತು. ಆಗ ಒಬ್ಬರು ಗುರುಗಳು ಸಿನಿಮಾ ಮಾಡಲು ಬೆಳ್ತಂಗಡಿ,ಚಿಕ್ಕಮಗಳೂರು,ಉಡುಪಿಯಲ್ಲಿ ಲೊಕೇಶನ್ ಬೇಕಯ್ಯ ಎಂದರು.
ನಮ್ಮೂರಲ್ಲಿ ಶೂಟಿಂಗ್ ಮಾಡ್ತಾರೆ.. ಸಹಾಯಕ್ಕೆ ತಕ್ಕ ಹಾಗೆ ಒಂದು ಪಾತ್ರ ಗ್ಯಾರೆಂಟಿ ಅಂದ್ಕೊಂಡೆ.. ಊಹಾಪೋಹಗಳ ತಾರಾಗಣವೇ ಅದ್ಧೂರಿಯಾಗಿತ್ತು. ನಾಳೆ ಅವ್ರು ಬರ್ತಾರೆ .. ನಾಡಿದ್ದು ಇವ್ರು ಬರ್ತಾರೆ... ಈ "ರೆ" ಗಳ ಮಧ್ಯದಲ್ಲಿ ನಾವು ನಾಲ್ಕು ಜನ ಹುಡುಗರ ಶೂಟಿಂಗ್ ಮಾತ್ರ ನಿರಾತಂಕವಾಗಿ ನಡೀತಿತ್ತು. ಅದು ಹಲಸಿನ ಹಣ್ಣಿನ ಸೀಸನ್ ಭಾರವಾದ ಹಲಸಿನ ಹಣ್ಣುಗಳನ್ನು ಹೆಗಲ ಮೇಲೆ ಹೊತ್ತು ತಂದಿದ್ದೇ ತಂದಿದ್ದು..ರಾತ್ರಿಯಾದರೆ ಅವೆಲ್ಲ ಯರ್ಯಾರದೋ ಹೊಟ್ಟೆ ಸೇರುತ್ತಿತ್ತು.
ಹೀಗೆ ಮಂಗಳೂರು, ಸೋಮೇಶ್ವರದ ಮರಳಲ್ಲಿ ಉರುಳಾಡಿಸಿ ಮರುಳು ಮಾಡಿ ಮಲ್ಪೆಯ ಮೀನಿನ ವಾಸನೆಯ ಬಲೆಯಲ್ಲಿ ಬೀಳಿಸಿದರು... ಆ ರಾತ್ರಿ ಒಂದು ಲಾಡ್ಜಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದರು. ರಾತ್ರಿಯೆಲ್ಲ ಏನೇನೋ ಚಿತ್ರವಿಚಿತ್ರ ಸದ್ದುಗಳು.. (ಅವು ಏನೆಂದು ಇಂದಿಗೂ ಅರ್ಥವಾಗಿಲ್ಲ) ಹೆದರಿ ಹಲಸಿನ ಹಣ್ಣು ಹೊತ್ತಲ್ಲಿಗೆ ಬಂದೆವು ಅಲ್ಲಿ ನಾಲ್ಕು ದಿನದ ಹಿಂದಿನ ರಚ್ಚೆ (ಹಲಸಿನಹಣ್ಣಿನ ಸಿಪ್ಪೆ) ಮೇಲೆ ಬೇಕಾದಷ್ಟು ಸೊಳ್ಳೆ ನೊಣಗಳು ಕೂತಿದ್ದವು...
ನಮ್ಮನ್ನು ಆಣಕ ಮಾಡಲೆಂಬಂತೆ ಒಂದು ಮನೆಯಲ್ಲಿ ಮಲಗಲು ವ್ಯವಸ್ಥೆಯಾಯಿತು. ಭೀಮಣ್ಣ ಎಂಬ ಸಾಹಾಯಕ ನಿರ್ದೇಶಕರಿಗೆ ಮಾತ್ರ ಲಾಡ್ಜ್ ನ ವಿಚಿತ್ರ ಸದ್ದು ತರಿಸಿದ್ದ ಜ್ವರ ಇಲ್ಲಿ ಮತ್ತೆ ಜಾಸ್ತಿಯಾಯಿತು. ಎಲ್ಲರೂ ಭೀಮಣ್ಣನಿಗೆ ದೆವ್ವ ಮೆಟ್ಕೊಂಡಿದೆ (ಹಿಡಿದಿದೆ) ಅಂದು ಪೊರಕೆ ಚಪ್ಪಲಿ ಸೇವೆ ನೆರವೇರಿಸಿ ನಿಜ ಜ್ವರ ಬರಿಸಿದರು. ಅವನ ತುಟಿಯಲ್ಲಿ ರಕ್ತ ಜಿನುಗುತ್ತಿತ್ತು. ದೆವ್ವ ಸೇಡು ತೀರಿಸಬಾರದೆಂದು ರಾತ್ರಿ ಎರಡು ಪಾಳಿಯಲ್ಲಿ ಎರಡು ತಂಡ ಅವನ ಎದುರುಗಡೆ ಚಪ್ಪಲಿ ಪೊರಕೆ ಇಟ್ಟು ಕಾಯುತ್ತಿತ್ತು...ಅವನ ನೋವಿನ ನರಳಾಟ ಮಿಕ್ಕವರಿಗೆ ದೆವ್ವದ ಗೊಣಗಾಟವಾಗಿತ್ತು.
ನಮ್ಮವರಲ್ಲೊಬ್ಬ ಕಿಟಕಿಗೊರಗಿ ಕುಳಿತಿದ್ದ. ದೂರದ ಸ್ಟ್ರೀಟ್ ಲೈಟ್ ನ ಬೆಳಕು ಒಳಗೆ ಅಲ್ಪ ಸ್ವಲ್ಪ ಚೆಲ್ಲಿತ್ತು. ಸ್ವಲ್ಪ ಹೊತ್ತಿಗೆ ಬ್ರಹದಾಕಾರದ ನೆರಳೊಂದು ಕೋಣೆ ಒಳಗೆ ಪ್ರವೇಶಿಸಿ ಕಿಟಕಿಗೊರಗಿದವನ ಹಿಂದೆ ಬಂದು ನಿಂತಾಗ ಅಕಸ್ಮಾತ್ ಅವನ ಕೈ ಹಿಂದೆ ಸರಿದು ಆಕೃತಿಯ ನೆತ್ತಿ ಮೇಲೆ ಸ್ಪರ್ಶಿಸಿದಾಗ ಕಿರುಚಾಡಿದ.... ನೋಡಿದರೆ ಅದು ಮನೆ ದಣಿಯ ಕೂದಲಿಲ್ಲದ ತಲೆ.. ಭೀಮಪ್ಪನ ಅವಸ್ಥೆ ಕಂಡು ಜ್ವರದ ಮಾತ್ರೆ ಕೊಟ್ರು.
ಅದೇನೋ ಭೀಮಣ್ಣನ ಜ್ವರವನ್ನು ಓಡಿಸ್ತು ಆದ್ರೆ ಅವ್ರು ತಂದ ಸುದ್ಧಿ ನಮ್ಮನ್ನು ಬೆಂಗಳೂರಿಗೇ ಅಟ್ಟಿಸಿಬಿಡ್ತು. ಅದೇನೆಂದ್ರೆ ಆಗಿನ ಪ್ರಧಾನ್ ಮಂತ್ರಿ ರಾಜೀವ್ ಗಾಂಧಿಯ ಹತ್ಯೆ.. ಹೊತ್ತ ಹಲಸಿನ ಹಣ್ಣಿನ ಮುಳ್ಳು ಈಗಲೂ ಚುಚ್ಚುತ್ತಿರುವ ಭಾವ.. ಮಲ್ಪೆಯ ಮೀನಿನ ಬಲೆಗಳು ಸುತ್ತಿಕೊಂಡ ಭಾವ...ಎಲ್ಲರೂ ಹಾಗಾಗೇ.. ಹಸಿ ಹಸಿ ನೆನಪಿನ ವಾಸನೆ..ಯಾಕ್ ಗೊತ್ತ? ಕ್ಯಾಮರಾ ರೀಲಿಲ್ಲದೆ ತಿರುಗುತ್ತಿತ್ತಂತೆ. ಸಿನಿಮಾದ ಹೆಸರು"ದೂರದ ಕನಸು". ಒಂದಷ್ಟು ಒಳ್ಳೆಯ ಗೆಳತನವನ್ನು ಕದಡಲು ಒಂದು ಶೂಟಿಂಗ್.. ಇದರಿಂದಾಗಿ ನಾನು ಊರ ಸಂಪರ್ಕ ಕಡಿದುಕೊಂಡ " ಅಲ್ಪ" ಅವಧಿ ಕೆಲವು ವರ್ಷಗಳು.
-ವಿನು ಬಳಂಜ
net photo
-ಸಂಪಾದಕೀಯ
ಈ ಕನಸು ಆರಂಭಗೊಂಡು ಇಂದಿಗೆ 95 ದಿನಗಳು ಸಂದವು. ಈ ಸಂದರ್ಭದಲ್ಲಿ 200 ಕ್ಕೂ ಜಾಸ್ತಿ ಗೆಳೆಯರ ಬಳಗ ಹಾಗೂ 100 ದಿನದ ಸಂಭ್ರಮ ಜೊತೆಗೆ ಬಂದಿರುವುದು ನಮಗೆಲ್ಲರಿಗೂ ಸಂತಸದ ವಿಚಾರ.ಅದೇ ರೀತಿ ತಮ್ಮ ಮಹತ್ವಪೂರ್ಣ ಲೇಖನ,ಆಡಿಯೋ ಹಾಗೂ ವಿಡಿಯೋಗಳನ್ನು ಇಲ್ಲಿ ಹಂಚಿದ ಗೆಳೆಯರ ಬಳಗಕ್ಕೂ ನಮ್ಮ ತುಂಬು ಹೃದಯದ ಧನ್ಯವಾದಗಳು. ಈ ಕನಸಿನ 100 ನೇ ದಿನವನ್ನು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚೊಳಿಯುವಂತೆ ಮಾಡುವುದು ನಮ್ಮ ಬಳಗದ ಕರ್ತವ್ಯ ಎಂಬುದು ಈ ಕನಸಿನ ಅನಿಸಿಕೆ.
ಮೊದಲನೆಯದಾಗಿ ಈ ಸಂದರ್ಭದಲ್ಲಿ ನಿಮ್ಮ ಬೆಂಬಲಕ್ಕೆ ನಾವು ಚಿರಋಣಿ. ಮೊದಲ ದಿನಗಳಿಂದಲೂ ದಿನದಿಂದ ದಿನಕ್ಕೆ ನೋಡುಗರ ಸಂಖ್ಯೆ ಏರುತ್ತಾ ಹೋಗಿರುವುದು ಕನ್ನಡಿಗರ ಆಪ್ಯಾಯತೆಯನ್ನು ಮನವರಿಕೆ ಮಾಡಿ ಕೊಟ್ಟಿತು.
ಈ ಕನಸು ಇಂದು ಗುಣಮಟ್ಟದ ಲೇಖನಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಲೇಖಕರ ಬಳಗಕ್ಕೆ ಕಿರು ತೆರೆ ನಿರ್ದೇಶಕ ವಿನು ಬಳಂಜ ಹಾಗೂ ವಿಜಯ ಕರ್ನಾಟಕದ ಹಿರಿಯ ಪತ್ರಕರ್ತರಾದ ಅರವಿಂದ ನಾವಡರಂತಹವರು ಸೇರಿರುವುದು ಮಹತ್ವಪೂರ್ಣ.
ಈ ಕನಸಿನ 100 ನೇ ದಿನದ ಆವೃತ್ತಿಯನ್ನು ವೈಶಿಷ್ಟ್ಯಪೂರ್ಣವಾಗಿ ಹೊರತರುವುದು ನಮ್ಮೆಲ್ಲರ ಆಶಯ. ಇದಕ್ಕೆ ನಿಮ್ಮೆಲ್ಲರ ಸಲಹೆ ಸೂಚನೆಗಳು ಮತ್ತು ಅಭಿಪ್ರಾಯ ಅತೀ ಅಗತ್ಯ.
ಈ ಸಂದರ್ಭದಲ್ಲಿ ನಿಮ್ಮ ಲೇಖನಗಳು,ಕಥೆ ಕವನಗಳು ಹಾಗೂ ಅಭಿಪ್ರಾಯಗಳನ್ನು editor@ekanasu.com ಅಥವಾ info@ekanasu.com ಗೆ ಕಳುಹಿಸಿಕೊಡಬಹುದು. ನಿಮ್ಮ ಬೆಂಬಲ ಸದಾ ಇದೇ ರೀತಿ ಇರುತ್ತದೆ ಎಂಬ ನಂಬಿಕೆಯೊಂದಿಗೆ
ಗಣೇಶ್ ಹೊಸಮನೆ
ಪ್ರಾದೇಶಿಕ ಸುದ್ದಿ
ಬೇಸಿಗೆ ರಜೆ ಮುಗಿದು ಶಾಲಾ ಪ್ರಾರಂಭೋತ್ಸವದಂದು ಮಂಗಳೂರಿನಲ್ಲಿ ಕಂಡು ಬಂದ ದೃಶ್ಯ.ಶಾಲಾ ಕಾಲೇಜುಗಳು ಪುನರಾರಂಭಗೊಂಡಿದ್ದರಿಂದ ಅಂಗಡಿ ಮುಗ್ಗಟ್ಟುಗಳು ಮತ್ತು ಶಾಲಾ ವಠಾರ ಮಕ್ಕಳಿಂದ ತುಂಬಿಹೋಗಿತ್ತು





ಚಿತ್ರಗಳು ಪ್ರಸನ್ನ ಬಿ.ಪಿ.
ದಿನ ವಿಶೇಷ
ಇಂದಿನ ಕಾರ್ಯಕ್ರಮ
ಕ್ಯಾಂಪ್ಕೋ: ಭಾರತೀಯ ಅಡುಗೆ ಮನೆಗೆ ಕ್ಯಾಂಪ್ಕೋ ಚಾಕಲೇಟಿನ ಮೆರುಗು. ಮಿಲ್ಕ್ ಚೋಕೋ ಮಾಸ್ ಮತ್ತು ಡಾಕ್ಟರ್ ಚೋಕೋ ಮಾಸ್ ಮಾರುಕಟ್ಟೆ ಬಿಡುಗಡೆ ಸಮಾರಂಭ. ಮಧ್ಯಾಹ್ನ; 3.30ಕ್ಕೆ. ಸ್ಥಳ: ಕ್ಯಾಂಪ್ಕೋ ಪ್ರಧಾನ ಕಚೇರಿ ಸಭಾಂಗಣ.
ರಿಲಾಯನ್ಸ್ ಫೂಟ್ ಪ್ರಿಂಟ್: ವಿಶೇಷ `ಬ್ಯಾಕ್ ಟು ಸ್ಕೂಲ್' ಮಕ್ಕಳ ಬೂಟುಗಳ ಬಿಡುಗಡೆ ಸಮಾರಂಭ.
ಸಂಜೆ: 5 ಗಂಟೆಗೆ. ಸ್ಥಳ: ರಿಲಾಯನ್ಸ್ ಫೂಟ್ ಪ್ರಿಂಟ್. ಬಿಜೈ ಚರ್ಚ್ ಸಮೀಪ.
ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ, ಉಡುಪಿ: ಬೆಳಿಗ್ಗೆ: 8ಕ್ಕೆ ವೆಂಕಟಕೃಷ್ಣ ನಿತ್ಯೋತ್ಸವ. ಮಧ್ಯಾಹ್ನ: 2ಕ್ಕೆ ಭಜನೆ ಮತ್ತು ಗೀತಾ ಪಾರಾಯಣ, ಮಧ್ಯಾಹ್ನ: 3ಕ್ಕೆ ನ್ಯಾಯಸುಧಾ ಪಾಠ, ಸಂಜೆ 6ಕ್ಕೆ ಶ್ರೀ ಲಕ್ಷ್ಮೀ ಶೋಬಾನೆ, ರಾತ್ರಿ 7ಕ್ಕೆ ಸಪ್ತೋತ್ಸವ ಸೇವೆ.
ದಿನ ವಿಶೇಷ
ಸೋಮೇಶ್ವರ ಹನುಮಧ್ರ್ವಂತಿ
ಪ್ರಾದೇಶಿಕ ಸುದ್ದಿ
ಸುಳ್ಯ : ಕರ್ನಾಟಕ ಹಾಗೂ ಕೇರಳ ರಾಜ್ಯಗಳಿಗೂ ರೈಲ್ವೇ ಖಾತೆಯ ಸಹಾಯಕ ಸಚಿವರು ದೊರೆತಿರುವುದು ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ರೈಲ್ವೇಯ ಅಭಿವೃದ್ಧಿಯ ಒಂದು ಸಣ್ಣ ಕನಸು ಹುಟ್ಟಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯು ಹಿಂದಿನಿಂದಲೂ ರೈಲ್ವೇ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಇದೀಗ ಎರಡೂ ರಾಜ್ಯಗಳಿಂದ ಅಂದರೆ ಕನರ್ಾಟಕದ
ಕೆ.ಎಚ್.ಮುನಿಯಪ್ಪ ಹಾಗೂ ಕೇರಳದ ಇ. ಅಹಮ್ಮದ್ ರೈಲ್ವೇ ಸಹಾಯಕ ಸಚಿವರಾಗಿರುವುದು ಜನರ ಆಸೆಯನ್ನು ಗರಿಕೆದರಿಸಿದೆ. ಮಂಗಳೂರು ಬೆಂಗಳೂರು ಮಧ್ಯೆ ಹಗಲು ವೇಳೆ ರೈಲು ಆರಂಭಿಸಬೇಕು ಎಂಬ ಹಲವು ವರುಷಗಳ ಬೇಡಿಕೆ ಇನ್ನಾದರೂ ಈಡೇರುವುದೋ ಎಂಬ ಸಣ್ಣ ಆಸೆ ಜನತೆಯಲ್ಲಿ ಮೂಡಿದೆ.
2005ರ ಕೇಂದ್ರ ರೈಲ್ವೇ ಬಜೆಟ್ನಲ್ಲಿ ಮಂಗಳೂರು - ಬೆಂಗಳೂರು ಮಧ್ಯೆ ಎರಡು ರೈಲು ಓಡಿಸಲಾಗುವುದು ಎಂದು ಘೋಷಿಸಲಾಗಿದ್ದರೂ ಅದಿನ್ನೂ ಕೈಗೊಡಿಲ್ಲ. ಇದೀಗ ಈ ಭಾಗದವರೇ ಸಚಿವರಾಗಿರುವುದು ಈ ಎಲ್ಲಾ ಕನಸುಗಳ ಈಡೇರಿಕೆಗೆ ಕಾರಣವಾಗಬಹುದು.
ಪ್ರಾದೇಶಿಕ ಸುದ್ದಿ
ಉಡುಪಿ : ಕೇವಲ ಅಧಿಕ ಇಳುವರಿಯನ್ನು ಲಕ್ಷ್ಯದಲ್ಲಿರಿಸಿ ಕೃಷಿಯಲ್ಲಿ ಕ್ರಾಂತಿ ನಡೆಸಿದರೆ ಸಾಲದು. ಮಾನವ ಸಂಪದಭಿವೃದ್ಧಿಯ ಕಡೆಗೂ ಲಕ್ಷ್ಯ ಹರಿಸುವುದು ಕೃಷಿಯಲ್ಲಿ ಮುಖ್ಯ ಎಂದು ಬೆಂಗಳೂರು ಕೃಷಿ ವಿ. ವಿ. ವಿಶ್ರಾಂತ ಉಪಕುಲಪತಿ ಡಾ. ಆರ್. ದ್ವಾರಕೀನಾಥ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ನಡೆದ ಡಾ. ಟಿ. ಎಂ. ಎ. ಪೈ ಮತ್ತು ಟಿ. ಎ.ಪೈ ಸ್ಮೃತಿದಿನ ಅಂಗವಾಗಿ ಏರ್ಪಡಿಸಲಾಗಿದ್ದ ಸಮಗ್ರ ಕೃಷಿ ಕ್ರಾಂತಿ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಕೃಷಿಕರಿಗೆ ತರಕಾರಿ ಬೀಜ ಹಂಚಲಾಯಿತು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ನಬಾರ್ಡ್ ಮಹಾಪ್ರಬಂಧಕ ಕೆ. ವಿ. ನಾಗರಾಜ್, ಬ್ರಹ್ಮಾವರ ವಲಯ ಕೃಷಿ ಸಂಶೋಧನ ಕೇಂದ್ರ ಸಂಶೋಧನ ನಿದರ್ೇಶಕ ಡಾ. ಟಿ. ಆರ್. ಗುರುಪ್ರಸಾದ್, ಬೆಂಗಳೂರು ಯುಎಎಸ್ ಪ್ರಾಧ್ಯಾಪಕ ಡಾ. ನಿರಂಜನಮೂರ್ತಿ ಆಗಮಿಸಿದ್ದರು. ಮಣಿಪಾಲ ವಿ. ವಿ. ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು.
ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಕಾರ್ಯನಿರ್ವಾಹಕ ವಿಶ್ವಸ್ಥ ಕೆ. ಎಂ. ಉಡುಪ ಸ್ವಾಗತಿಸಿ, ಪ್ರಸ್ತಾವನೆಗೈದರು. ಮಣಿಪಾಲ ಗ್ರಾಮೀಣ ಅಧ್ಯಯನ ಕೇಂದ್ರ ನಿರ್ದೇಶಕ ಡಾ. ಕೃಷ್ಣ ಕೊತಾಯ ವಂದಿಸಿದರು. ಪ್ರೊ. ಹೆರಂಜೆ ಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.
ಜಾಗೃತಿ ಕಾರ್ಯಕ್ರಮ
ಉಡುಪಿ : ಮಣಿಪಾಲ ಶಿರ್ಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಕೆಎಂಸಿ ಸಹಯೋಗದೊಂದಿಗೆ ಈ ತಿಂಗಳ 30 ಮತ್ತು 31ರಂದು ತಂಬಾಕು ಸೇವನೆಯ ದುಷ್ಪರಿಣಾಮ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಮಾಹಿತಿ ಕರಪತ್ರ, ಭಿತ್ತಿಚಿತ್ರ ವಿತರಣೆ ನಡೆಯಲಿದೆ.
ಬೆಳೆ - ತೋಟ
ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಗೆ ಮುಂಗಾರು ಮಳೆ ಪ್ರವೇಶದ ಮುನ್ಸೂಚನೆಗಳು ಸ್ಪಷ್ಟವಾಗಿ ದೊರೆತಿದೆ. ತುಂತುರು ಮಳೆ ಹನಿಯತೊಡಗಿದೆ. ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಬಾನು ಕಪ್ಪಿಟ್ಟಿದೆ. ಕೃಷಿಕರು ಕೃಷಿ ಚಟುವಟಿಕೆಗೆ ಸಿದ್ಧರಾಗಿದ್ದಾರೆ. ಮಳೆಯಾಧಾರಿತ ಭತ್ತದ ಕೃಷಿ ಹಾಗೂ ಉಪಬೆಳೆಗಳನ್ನು ಬೆಳೆಯುವ ರೈತರು ಕೃಷಿ ಚಟುವಟಿಕೆಗಳತ್ತ ಗಮನ ಹರಿಸಿದ್ದಾರೆ. ಈ ಸಂಬಂಧ ಜಿಲ್ಲೆಯಲ್ಲಿ ಕೃಷಿ ಇಲಾಖೆ ಈಗಾಗಲೇ 120.79 ಕ್ವಿಂಟಾಲ್ ಭತ್ತದ ಬೀಜವನ್ನು ವಿತರಿಸಿದ್ದು, ರೈತರಿಂದ ಬೇಡಿಕೆಯ ಪ್ರಮಾಣವನ್ನು ಆಧರಿಸಿ ಭತ್ತದ ತಳಿಗಳನ್ನು ಮತ್ತು ರಸಗೊಬ್ಬರವನ್ನು ಪೂರೈಸಲು ಕೃಷಿ ಇಲಾಖೆ ಸಜ್ಜಾಗಿದೆ.
ರಾಷ್ಟ್ರೀಯ ವಿಕಾಸ ಯೋಜನೆಯಡಿ ಬೀಜಗಳನ್ನು ಶೇಕಡ 50ರ ರಿಯಾಯಿತಿ ದರದಲ್ಲಿ ಕ್ರಷಿ ಇಲಾಖೆ ನೀಡುತ್ತಿದ್ದು, ರೈತರು ಯೋಜನೆಯ ಸದುಪಯೋಗವನ್ನು ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ.20ರಿಂದ 30ರಷ್ಟು ಸಸಿಮಡಿ(ನರ್ಸರಿ)ಕೆಲಸ ಆರಂಭಗೊಂಡಿದ್ದು,ಜೂನ್ ಮೊದಲ ವಾರದಲ್ಲಿ ನಾಟಿ ಆರಂಭವಾಗಬಹುದು. ಜಿಲ್ಲೆಯಲ್ಲಿ ಒಟ್ಟು 35,000 ಹೆಕ್ಟೇರ್ ಭತ್ತ ಬೆಳೆಯುವ ಗುರಿ ನಿಗದಿಯಾಗಿದ್ದು, ಕಳೆದ ಸಾಲಿನಲ್ಲಿ 32,845ಹೆಕ್ಟೇರ್ ಭತ್ತದ ಬೆಳೆಯಲಾಗಿತ್ತು.
ರೈತರು ಅಧಿಕ ಇಳುವರಿ ಬೆಳೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕಳೆದ ಮುಂಗಾರು ಹಂಗಾಮಿನಲ್ಲಿ ಮಂಗಳೂರು ತಾಲೂಕಿನಲ್ಲಿ 12,510 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 11,728 ಹೆಕ್ಟೇರ್ ಪ್ರದೇಶದಲ್ಲಿ, ಬಂಟ್ವಾಳದಲ್ಲಿ 9,600 ಹೆ. ಕೃಷಿಪ್ರದೇಶದಲ್ಲಿ 9,372ಹೆಕ್ಟೇರ್ ಪ್ರದೇಶದಲ್ಲಿ, ಬೆಳ್ತಂಗಡಿಯ 8,500 ಹೆಕ್ಟೇರ್ ನಲ್ಲಿ 8285 ಹೆಕ್ಟೇರ್ ನಲ್ಲಿ, ಪುತ್ತೂರಿನ 3.900 ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿ 2975 ಹೆಕ್ಟೇರ್ ನಲ್ಲಿ, ಸುಳ್ಯದ 490 ಹೆಕ್ಟೇರ್ ಪ್ರದೇಶದಲ್ಲಿ 485 ಹೆಕ್ಟೇರ್ ನಲ್ಲಿ ಭತ್ತವನ್ನು ಬೆಳೆಯಲಾಗಿತ್ತು.
ಪ್ರಸಕ್ತ ಸಾಲಿನಲ್ಲಿಯೂ ಇದೇ ಗುರಿಯನ್ನು ನಿಗದಿಪಡಿಸಲಾಗಿದ್ದು, ರೈತರಿಗೆ ಹಲವು ಸೌಲಭ್ಯಗಳನ್ನು ಸರ್ಕಾರ ಘೋಷಿಸಿದೆ. ಭತ್ತದ ಬೀಜ ವಿತರಣೆಯಲ್ಲಿ ಮಂಗಳೂರು ತಾಲೂಕಿನಲ್ಲಿ 52.04 ಕ್ವಿಂಟಾಲ್, ಬಂಟ್ವಾಳದಲ್ಲಿ 36.50, ಬೆಳ್ತಂಗಡಿಯಲ್ಲಿ 18.75 ಕ್ವಿಂಟಾಲ್, ಪುತ್ತೂರಿನಲ್ಲಿ 6 ಕ್ವಿಂಟಾಲ್, ಸುಳ್ಯದಲ್ಲಿ 7.50 ಕ್ವಿಂಟಾಲ್ ನಂತೆ ಒಟ್ಟು 120.79 ಕ್ವಿಂಟಾಲ್ ಭತ್ತದ ಬೀಜವನ್ನು ಶೇಕಡಾ 50ರ ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ. ಒಟ್ಟು 297 ಫಲಾನುಭವಿಗಳು ಈ ಸೌಲಭ್ಯವನ್ನು ಬಳಸಿಕೊಂಡಿದ್ದು, 290.71 ಕ್ವಿಂಟಾಲ್ ಭತ್ತದ ಬೀಜ ದಾಸ್ತಾನಿದೆ.
ಜಯಾ ತಳಿಗೆಕೆ.ಜಿಗೆ 18 ರೂ.ಗಳಿದ್ದು, ರಿಯಾಯಿತಿ ದರದಲ್ಲಿ 9ರೂ.ನಂತೆ, ಎಂ ಒ 4ಕ್ಕೆ 20ರೂ.ಗಳಿದ್ದು,ರಿಯಾಯಿತಿ ದರ 10ರೂ., ಜ್ಯೋತಿ 19ರೂ.ಗಳಿದ್ದು, ರಿಯಾಯಿತಿ ದರ 9.50, ಉಮಾ 20ರೂ.ಗಳಿದ್ದು, ರಿಯಾಯಿತಿ ದರ 10ರೂ.ಗಳಂತೆ ರೈತರಿಗೆ ವಿತರಿಸಲಾಗಿದೆ. ರೈತರಿಂದ ಬರುವ ಬೇಡಿಕೆಯನ್ನು ಅನುಸರಿಸಿ ಅಗತ್ಯ ಬೀಜಗಳನ್ನು ಸರಬರಾಜು ಮಾಡಲಾಗುವುದು ಎಂದಿರುವ ಕೃಷಿ ಇಲಾಖೆ, ಪ್ರಸಕ್ತ ಸಾಲಿನಲ್ಲಿಯೂ ಭತ್ತದ ಬೆಳೆಯನ್ನು ಪ್ರೋತ್ಸಾಹಿಸಲು ಹಲವು ಪ್ರಶಸ್ತಿಗಳನ್ನು ಘೋಷಿಸಿದೆ.ಬೆಳೆ ಪ್ರಶಸ್ತಿ ಯೋಜನೆಯಡಿ ರೈತರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು ರೈತ ಸಂಪರ್ಕ ಕೇಂದ್ರದಿಂದ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಪಡೆದು ಆಗಸ್ಟ 31ರೊಳಗೆ ಸಲ್ಲಿಸಲು ಕೋರಿದೆ.
ಕೃಷಿ ಪಂಡಿತ ಪ್ರಶಸ್ತಿಯಡಿ ಕೃಷಿ ನಿರ್ದೇಶನಾಲಯಕ್ಕೆ ಅರ್ಜಿ ಸಲ್ಲಿಸಲು 15.6.09 ಕೊನೆಯ ದಿನವಾಗಿದ್ದು, ಅರ್ಜಿಗಳು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ.
ಬೆಳೆವಿಮೆ: ಮಳೆಯಾಶ್ರಿತ ಭತ್ತಕ್ಕೆ ಬೆಳೆವಿಮೆಯಡಿ ನೋಂದಾಯಿಸಿಕೊಳ್ಳಲು ರೈತರಿಗೆ ಅವಕಾಶವಿದ್ದು, ಒಂದು ಹೆಕ್ಟೇರ್ ಗೆ ಪ್ರೀಮಿಯಂ 365 ರೂ.ಗಳಂತೆ ಆಸಕ್ತ ರೈತರು ತಮ್ಮ ಹೆಸರನ್ನು ಸ್ಥಳೀಯ ಸಹಕಾರಿ ಬ್ಯಾಂಕ್ ಅಥವಾ ಸಂಘಗಳಲ್ಲಿ 31.7.09ರೊಳಗೆ ನೋಂದಾಯಿಸಲು ಅವಕಾಶವಿದೆ.
ಇನ್ನು ಸಾವಯವ ಕೃಷಿ ಮಿಷನ್ ಯೋಜನೆ ಪ್ರಸಕ್ತ ಸಾಲಿನಲ್ಲಿ ಜಾರಿಗೊಂಡಿದ್ದು, ಪ್ರತೀ ತಾಲೂಕಿಗೆ 24.5 ಲಕ್ಷ ರೂ.ಅನುದಾನ ಬಿಡುಗಡೆಯಾಗಿದೆ. ರೈತರು ಈ ಸಂಬಂಧ ಹೆಚ್ಚಿನ ಮಾಹಿತಿಗೆ ತಾಲೂಕು ಮಟ್ಟದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಯ ಸದ್ಬಳಕೆ ಮಾಡಬಹುದಾಗಿದೆ.
ಬೆಳೆ-ತೋಟ
ಸುಗಂಧ ಹಾಗೂ ಔಷಧಿಯುಕ್ತ ಲಾವಂಚದ ಬೇರು ಮನೆಯಲ್ಲಿಯೇ ಬೆಳೆಯಬಹುದಾದರೆ ಎಷ್ಟು ಚೆನ್ನ ಅಲ್ಲವೆ? ನೀವು ಗ್ರಾಮೀಣ ಪ್ರದೇಶದವರಾಗಿದ್ದಲ್ಲಿ ಅದೇನು ಮಹಾ ಎಂದು ನಕ್ಕುಬಿಡಬಹುದು. ಆದರೆ ಪೇಟೆ, ಪಟ್ಟಣ, ನಗರ ಅಥವಾ ಮಹಾನಗರವಾಸಿಗಳಾದಲ್ಲಿ ಮನೆಯಲ್ಲಿ ಅಪರೂಪದ ಸಸ್ಯಗಳನ್ನು ಬೆಳೆಯುವುದು ಮಹಾ ಪ್ರಯಾಸದ ಕೆಲಸ ಎಂದನ್ನಿಸುವುದು ಸಹಜ. ನೀವು ಎಲ್ಲಿಯವರೇ ಆಗಿರಲಿ ಈ ಮುಂದೆ ನೀಡಿರುವ ಮಾಹಿತಿಯನ್ನು ಓದಿ, ಚಿತ್ರವನ್ನು ನೋಡಿ. ತದನಂತರ ನಿಮಗೂ ಲಾವಂಚ ಬೆಳೆಯುವ ಉಮೇದಿ ಹುಟ್ಟದಿದ್ದರೆ ಕೇಳಿ.
ಮನೆಯ ಮೂಲೆಯಲ್ಲಿ ಬಿದ್ದಿರುವ ಪಿವಿಸಿ ಪೈಪಿನ ತುಂಡೊಂದನ್ನು ತೆಗೆದುಕೊಳ್ಳಿ. ಅದು ಪುಟ್ಟದಾಗಿದ್ದು ಯಾವುದೇ ಸೈಜಿನದೂ ಆದೀತು. ಉದಾಹರಣೆಗೆ ಎರಡು ಅಡಿ ಉದ್ದ ಮತ್ತು ಎರಡು ಇಂಚು ಅಗಲದ್ದು, ಎರಡು ಅಡಿ ಉದ್ದ ಮತ್ತು ಒಂದೂವರೆ ಇಂಚು ಬಾಯಿಯದ್ದು ಇತ್ಯಾದಿ... ಅದರಲ್ಲಿ ಮುಕ್ಕಾಲು ಭಾಗ ಮಣ್ಣು, ಮರಳು (ಸ್ವಲ್ಪ ಹೆಚ್ಚಿರಲಿ) ಮತ್ತು ಗೊಬ್ಬರದ ಮಿಶ್ರಣವನ್ನು ತುಂಬಿರಿ. ಮೇಲಿನಿಂದ ಚಿಕ್ಕ ಲಾವಂಚದ ಸಸಿಯೊಂದನ್ನು ಹುಗಿಯಿರಿ. ಇನ್ನು ಈ ಪೈಪನ್ನು ಅಂಗಳದಲ್ಲಿ ಅರ್ಧ ಅಡಿ ಗುಂಡಿ ತೋಡಿ ಅದರಲ್ಲಿ ಹುಗಿದಿಡಬಹುದು. ಹಾಗೆ ಮಾಡುವಾಗ ಪೈಪಿನ ಇನ್ನೊಂದು ತುದಿಯನ್ನು ಗೆರಟೆ ಅಥವಾ ಪ್ಲಾಸ್ಟಿಕ್ ಕವರ್ ನಿಂದ ಭದ್ರಪಡಿಸಿದಲ್ಲಿ ಲಾವಂಚದ ಬೇರು ನೆಲದೊಳಕ್ಕೆ ಇಳಿಯುವುದನ್ನು ತಡೆಯಬಹುದು. ನೆಲದ ಗುಂಡಿಯಲ್ಲಿ ಟೈಲ್ ತುಂಡೊಂದನ್ನು ಕೂಡ ಇರಿಸಬಹುದು. ಇನ್ನು ನೆಲವೇ ಇಲ್ಲವೆಂದಾದಲ್ಲಿ ಪೈಪಿನ ಒಂದು ತುದಿಯನ್ನು ಭದ್ರಪಡಿಸಿ ಸ್ವಲ್ಪವಾದರೂ ಬಿಸಿಲು ಬೀಳುವಲ್ಲಿ ಅದು ನಿಲ್ಲುವಂತೆ ವ್ಯವಸ್ಥೆ ಮಾಡಬೇಕು.
ಮುಂದೆ ನಿಮ್ಮ ಕೆಲಸವೆಂದರೆ ಆಗೀಗ ಪೈಪಿನ ಸಸಿಗೆ ನೀರುಣ್ಣಿಸುವುದು, ಪೈಪಿನೊಳಗೆ ಮಣ್ಣೇನಾದರೂ ಕುಸಿದಿದ್ದಲ್ಲಿ ಮತ್ತೊಂದಿಷ್ಟು ಮಣ್ಣು ಹಾಕುವುದು. ಜೊತೆಗೆ ಒಂದಿಷ್ಟು ತಾಳ್ಮೆಯೂ ನಿಮ್ಮಲ್ಲಿರಬೇಕಾಗುತ್ತದೆ. ಏಕೆಂದರೆ ನಿಮ್ಮ ಆರೈಕೆ ಚೆನ್ನಾಗಿದ್ದಲ್ಲಿ ಒಂದು ವರ್ಷಕ್ಕೆ ಬಲಿತು ಪೊದೆಯಾಗಿ ಬೆಳೆಯುವ ಲಾವಂಚ ಕೆಲವೊಮ್ಮೆ ಒಣಕಲು ಕಡ್ಡಿಯಂತೆ ಹಲವಾರು ತಿಂಗಳು ಹಾಗೆಯೇ ಉಳಿದುಬಿಡಬಹುದು. ಲಾವಂಚ ಸಾಕಷ್ಟು ಬೆಳೆದಿದೆಯೆನ್ನಿಸಿದಾಗ(ಸಾಮಾನ್ಯವಾಗಿ ಒಂದು ವರ್ಷ) ಅದನ್ನು ಪೈಪಿನಿಂದ ಹೊರತೆಗೆಯಿರಿ. ಪೈಪಿನ ಆಕಾರದ ಬೇರಿನ ಗುಚ್ಛ ನಿಮ್ಮ ಕೈಗೆ ಸಿಗುತ್ತದೆ. ಬೇರನ್ನು ಬೇರ್ಪಡಿಸಿ, ಒಂದರಿಂದ ಹತ್ತಾದ ಗಿಡಗಳನ್ನು ನೀವೂ ಬಳಸಿ, ಇತರರಿಗೂ ಹಂಚಿ.
ಸ್ನೇಹಿತರೊಬ್ಬರು ಅಂಗಳದಿಂದ ಮೊದಲ ಮಹಡಿಯವರೆಗಿನ ಎತ್ತರದ ಪೈಪಿನಲ್ಲಿ ಲಾವಂಚ ನೆಟ್ಟು ಬಾಲ್ಕನಿಯಲ್ಲಿ ನಿಂತು ನೀರುಣ್ಣಿಸುತ್ತಿದ್ದಾರೆ, ಮನೆಯೆತ್ತರದ ಲಾವಂಚದ ಬೇರು ಬೇಕಂತೆ ಅವರಿಗೆ.
ಅಂದ ಹಾಗೆ ಲಾವಂಚದ ಸಸಿಯನ್ನೆಲ್ಲಿಂದ ತರೋದು ಅಂದಿರಾ? ಮಣ್ಣು, ಮರಳು, ಗೊಬ್ಬರಕ್ಕೆಂದು ನರ್ಸರಿಗೆ ಹೋಗ್ತೀರಿ ತಾನೇ? ಅಲ್ಲಿಯೇ ಲಾವಂಚ ಸಸಿಯಬಗ್ಗೆಯೂ ವಿಚಾರಿಸಿ.
ಸರೋಜಾ ಪ್ರಕಾಶ.
ಬೆಂಗಳೂರು:ರಾಜ್ಯಾದ್ಯಂತ ಇಂದು ಶಾಲೆ ಪುನರಾರಂಭಗೊಂಡಿದೆ. ವಿದ್ಯಾರ್ಥಿಗಳು ಹೊಸ ಹೊಸ ಉಡುಗೆ ತೊಟ್ಟು ಉತ್ಸಾಹದಿಂದ ಶಾಲೆಗೆ ತೆರಳುತ್ತಿದ್ದ ದೃಶ್ಯ ಕಂಡುಬಂದವು.ಹಿಂಡು ಹಿಂಡಾಗಿ ಸಾಗುವ ಮಕ್ಕಳ ಗುಂಪು ಒಂದು ಉತ್ಸಾಹ ಮೂಡಿಸಿತು.ಮುಂಗಾರು ಮಳೆಯ ಸಿಂಚನದೊಂದಿಗೆ ಮಕ್ಕಳ ಸಾಲು ಶಾಲೆಯತ್ತ ಹೆಜ್ಜೆಯಿಟ್ಟವು...
ಮುಂದೆ ಓದಿ
ಪ್ರಾದೇಶಿಕ ಸುದ್ದಿ
ಮಂಗಳೂರು, ಮೇ 28: ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಅಶೋಕನಗರ ಮೈದಾನದಲ್ಲಿ ಮೇ 1ರಂದು ಆಂದ್ರ ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಮೃತಪಟ್ಟ ಶ್ರೀ ಐತಪ್ಪ ಮತ್ತು ಗಾಯಗೊಂಡ ಉದಯ ಅವರ ಪ್ರಕರಣದ ಬಗ್ಗೆ ಜೂನ್ 17ರಂದು ಪೂರ್ವಾಹ್ನ 11 ಗಂಟೆಯಿಂದ ಬೆಳ್ತಂಗಡಿ ತಹಸೀಲ್ದಾರರ ಕಚೇರಿ ಸಭಾಂಗಣದಲ್ಲಿ ಮೆಜಿಸ್ಟೀರಿಯಲ್ ತನಿಖೆ ನಡೆಸಲಾಗುವುದು ಎಂದು ಪುತ್ತೂರು ಉಪವಿಭಾಗಾಧಿಕಾರಿ ಡಾ. ಹರೀಶ್ ಕುಮಾರ್ ಕೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯ ಮುಗಿಸಿ ಹಿಂತಿರುಗುತ್ತಿದ್ದ ಆಂಧ್ರ ಪೊಲೀಸರು ನಡೆಸಿದ ಗೋಲಿಬಾರ್ನಿಂದ ಸಂಭವಿಸಿದ ದುರ್ಘಟನೆ ಬಗ್ಗೆ ತನಿಖೆ ನಡೆಸಲು ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಶೀ ವಿ. ಪೊನ್ನುರಾಜ್ ಆದೇಶಿಸಿದ್ದರು.
ಮ್ಯಾಜಿಸ್ಟೀರಿಯಲ್ ತನಿಖೆಯನ್ನು ಪುತ್ತೂರು ಉಪವಿಭಾಗಾಧಿಕಾರಿಗಳು ನಡೆಸುತ್ತಿದ್ದು, ಈ ಘಟನೆ ಬಗ್ಗೆ ಮಾಹಿತಿ ಉಳ್ಳ ಅಥವಾ ಪ್ರತ್ಯಕ್ಷ ನೋಡಿದವರು ಜೂನ್ 17ರಂದು ಇವರೆದುರು ಹಾಜರಾಗಿ ಸಾಕ್ಷ್ಯ ಅಥವಾ ಹೇಳಿಕೆಯನ್ನು ದಾಖಲಿಸಬಹುದಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಂದ ಅರ್ಜಿ ಆಹ್ವಾನ
ಸ್ವ ಉದ್ಯೋಗ ತರಬೇತಿಗೆ ಆಹ್ವಾನ
ಮಂಗಳೂರು, ಮೇ 28: 2009-10ನೇ ಸಾಲಿನಲ್ಲಿ ಅನುಷ್ಠಾನಗೊಳಿಸುವ ಯೋಜನೆಗಳಾದ ಸ್ವಯಂ ಉದ್ಯೋಗ, ಉದ್ಯಮಶೀಲತಾ ತರಬೇತಿ, ಗಂಗಾ ಕಲ್ಯಾಣ ಯೋಜನೆ ಹಾಗೂ ಭೂ ಒಡೆತನ ಯೋಜನೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಂದ ಅರ್ಜಿ ಆಹ್ವಾನಿಸಲಾಗಿದ್ದು, ನಿಗದಿತ ಅರ್ಜಿ ನಮೂನೆಗಳು ಜಿಲ್ಲಾ ಕಚೇರಿಯಲ್ಲಿ ಉಚಿತವಾಗಿ ಲಭ್ಯವಿದೆ ಎಂದು ಜಿಲ್ಲಾ ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿದಾರರು ಬಿಳಿಯ ಹಾಳೆಯಲ್ಲಿ ಹೆಸರು, ವಿಳಾಸ, ಜಾತಿ ಮತ್ತು ಉಪಜಾತಿ, ವಯಸ್ಸು, ವಿದ್ಯಾರ್ಹತೆ, ಅನುಭವ, ಸಾಲ ಕೋರಿರುವ ಉದ್ದೇಶ, ಸಾಲದ ಮೊತ್ತ, ದೂರವಾಣಿ ಸಂಖ್ಯೆ ಇತ್ಯಾದಿ ವಿವರಗಳ ಜೊತೆ ಜಾತಿ ಪತ್ರ, ಇತ್ತೀಚಿನ ಆದಾಯ ಪತ್ರ, ರೇಷನ್ ಕಾರ್ಡ,ಲೈಸನ್ಸ್, ಫೋಟೋಗಳನ್ನು ದ್ವಿಪ್ರತಿಗಳಲ್ಲಿ ಲಗತ್ತಿಸಿ ಸಲ್ಲಿಸಬೇಕು.
ಗಂಗಾಕಲ್ಯಾಣ ಯೋಜನೆಗೆ ಕನಿಷ್ಠ 2 ಎಕರೆ ಜಮೀನು ಹೊಂದಿದ್ದು, ಆರ್ ಟಿ ಸಿ, ಜಾತಿ ಪತ್ರ, ಸಣ್ಣ ರೈತರ ಪತ್ರ, ಫೋಟೋ, ಸಂತತಿ ನಕ್ಷೆ ಲಗತ್ತಿಸಿರಬೇಕು. ಯಾವುದೇ ಕಾರಣಕ್ಕೂ ಅಪೂರ್ಣ ದಾಖಲಾತಿಗಳನ್ನು ಸ್ವೀಕರಿಸಲಾಗುವುದಿಲ್ಲ. ಈ ಹಿಂದೆ ಸೌಲಭ್ಯ ಪಡೆದವರಿಗೆ ಅವಕಾಶವಿಲ್ಲ. ದಿ. 6.6.09ರೊಳಗೆ ಸಂಪೂರ್ಣ ಮಾಹಿತಿಯೊಂದಿಗೆ ಜಿಲ್ಲಾ ವ್ಯವಸ್ಥಾಪಕರು, ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಜೆ ಎಚ್ ಎಸ್ ರಸ್ತೆ ಜನತಾ ಬಜಾರ್ ಕಟ್ಟಡ, 2ನೇ ಅಂತಸ್ತು, ಹಂಪನಕಟ್ಟೆ ಮಂಗಳೂರು ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ. ಸಂ. 0824 2420114 ಸಂಪರ್ಕಸಬಹುದು.
ಬಿತ್ತನೆ ಬೀಜ ಲಭ್ಯ
ಮಂಗಳೂರು, ಮೇ 28: ರೈತರಿಗೆ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಇಳುವರಿ ಪಡೆಯಲು ಬೇಕಾಗಿರುವ ಪ್ರಮಾಣೀಕೃತ ಭತ್ತದ ಬಿತ್ತನೆ ಬೀಜದ ತಳಿಗಳಾದ ಎಂ ಒ 4(ಭದ್ರ), ಉಮಾ, ಜಯ ಮತ್ತು ಜ್ಯೋತಿ ಇವುಗಳು ಮಂಗಳೂರು ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿದ್ದು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಎಲ್ಲಾ ತಳಿಗಳಿಗೆ ಶೇಕಡಾ 50ರ ಸಹಾಯಧನ ನೀಡಲಾಗುವುದು ಎಂದು ಸಹಾಯಕ ಕೃಷಿ ನಿದರ್ೇಶಕರು ತಿಳಿಸಿದ್ದಾರೆ.
ರೈತರು ಜಮೀನಿನ ಪಹಣಿ ಪತ್ರಿಕೆಯನ್ನು ನೀಡಿ ಸಹಾಯಧನದಲ್ಲಿ ಬಿತ್ತನೆ ಬೀಜವನ್ನು ಪಡೆಯಬಹುದಾಗಿದೆ.
ಮುಂಗಾರು ಮಳೆ: ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ
ಮಂಗಳೂರು, ಮೇ 28: ಮುಂಗಾರು ಮಳೆ ಸಂದರ್ಭದಲ್ಲಿ ಸಂಭಾವ್ಯ ಅನಾಹುತಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿರಬೇಕೆಂದು ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಆದೇಶ ನೀಡಿದ್ದಾರೆ.
ನೆರೆ ಸಂದರ್ಭದಲ್ಲಿ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸೂಕ್ತ ಮುನ್ನೆಚ್ಚರಿಕೆ ಮತ್ತು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವುದು, ಬಿರುಗಾಳಿ, ಚಂಡಮಾರುತ ಬೀಸುವ ಸಂದರ್ಭದಲ್ಲಿ ಮೀನುಗಾರರಿಗೆ ಎಚ್ಚರಿಕೆ ನೀಡುವುದು, ಭಾರಿ ಮಳೆ ಬರುವ ಸೂಚನೆ ಇರುವಾಗ ಜನರಿಗೆ ಮಾಹಿತಿ ನೀಡುವಂತಹ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.
ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡದಿರಲು ಸೂಚನೆ
ಮಂಗಳೂರು, ಮೇ 28: ಮುಂಗಾರು ಅವಧಿಯಲ್ಲಿ ಸಂಭವನೀಯ ಹಾನಿಗಳ ಪರಿಹಾರ ಕ್ರಮ ಏರ್ಪಡಿಸಲು ಎಲ್ಲಾ ಇಲಾಖೆಗಳ ಸಹಕಾರ ಕೋರಲಾಗಿದ್ದು, ಇಲಾಖೆಗಳ ಜಿಲ್ಲಾ ಮಟ್ಟದ ಮುಖ್ಯಸ್ಥರು ಈ ಅವಧಿಯಲ್ಲಿ ಕೇಂದ್ರ ಸ್ಥಾನದಲ್ಲಿರಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಪ್ರಾದೇಶಿಕ ಸುದ್ದಿ
ಕರಾವಳಿ ಕಾವಲು ಪಡೆಗೆ ಹೊಸ ಸೇರ್ಪಡೆ
ಮಂಗಳೂರು: ಮಂಗಳೂರಿನ ಕರಾವಳಿ ಕಾವಲು ಪೊಲೀಸ್ ಪಡೆಗೆ ಅತ್ಯಾಧುನಿಕ ಮಾದರಿಯ ಸ್ಪೀಡ್ ಬೋಟ್ ಇದೀಗ ಸೇರ್ಪಡೆಗೊಂಡಿದೆ.
ಸಮುದ್ರ ಗಸ್ತು ನಡೆಸಲು ಈ ವಿಶೇಷ ಅತ್ಯಾಧುನಿಕ ಮಾದರಿಯ ಸ್ಪೀಡ್ಬೋಟನ್ನು ಮುಂದಿನ ದಿನಗಳಲ್ಲಿ ಬಳಸಲಾಗುತ್ತದೆ. ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ಗೋಪಾಲ್ ಹೊಸೂರು ಪಣಂಬೂರು ಎನ್ಎಂಪಿಟಿ ಬಂದರಿನಲ್ಲಿ ಸಮರ್ಪಣೆ ಮಾಡಿದರು.
ಕೋಟಿರುಪಾಯಿ: ಇದೀಗ ಹೊಸತಾಗಿ ಸೇರ್ಪಡೆಗೊಂಡ ಈ ಬೋಟ್ ಮೌಲ್ಯ ಅಚ್ಚರಿಹುಟ್ಟಿಸುವಂತಹುದು.75 ನಾಟಿಕಲ್ ಮೈಲ್ ದೂರಕ್ಕೆ ಗಸ್ತು ನಡೆಸಬಲ್ಲ ಸಾಮಥ್ರ್ಯ ಹೊಂದಿದೆ.ಸಾಮಥ್ರ್ಯ 5 ಟನ್.
ಇಂಟರ್ಸೆಪ್ಟರ್ ಬೋಟ್ ನ ಮೌಲ್ಯ 1.05 ಕೋ.ರೂ. ಇದೇ ಮಾದರಿಯ ಬೋಟ್ ಕಾರವಾರಕ್ಕೆ ಸೇರ್ಪಡೆಯಾಗಲಿದೆ. ಇದು 12 ಟನ್ ಸಾಮಥ್ರ್ಯವನ್ನು ಹೊಂದಲಿದೆ. 5 ಟನ್ ಸಾಮಥ್ರ್ಯದ 10 ಬೋಟುಗಳು ಹಾಗೂ 12 ಟನ್ ಸಾಮರ್ಥ್ಯದ 10 ಬೋಟುಗಳು ಕರಾವಳಿ ಕಾವಲು ಪೊಲೀಸ್ಗೆ 2010 ಮಾಚ್ ಒಳಗೆ ಸೇರ್ಪಡೆಯಾಗಲಿದೆ.
ಗ್ರೀಸ್ ದೇಶದ ತಂತ್ರಜ್ಞಾನದಡಿ ನಿರ್ಮಿತ ಈ ಬೋಟ್ ಪೆಟ್ರೋಲ್ ಚಾಲಿತ. ಸಮುದ್ರದಲ್ಲಿ ಮಗುಚಿದರೂ ಮುಳುಗಲಾರದು.
75 ಕಿ.ಮೀ. ವೇಗದಲ್ಲಿ ಚಲಿಸುವ ಇದರಲ್ಲಿ ಗರಿಷ್ಟ 10 ಮಂದಿಗೆ ಇರಲು ಅವಕಾಶವಿದೆ. 2 ಇಂಜಿನ್ ಹೊಂದಿದ್ದು, 14 ಲೈಫ್ಜಾಕೆಟ್, ಎ.ಕೆ. 47, ಎಸ್ಎಲ್ಆರ್ ಇತ್ಯಾದಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಸಿಬ್ಬಂದಿಗೆ ನೀಡಲಾಗಿದೆ.
ಚಿತ್ರ: ಪ್ರಸನ್ನ ಬಿ.ಪಿ
ವಿಶೇಷ ವರದಿ
ಹರೀಶ್ ಕೆ.ಆದೂರು
ಮಲೆಗಳಲ್ಲಿ ವಾಸಿಸುತ್ತಾ ಕಾಡುತ್ಪತ್ತಿ, ಒಂದಷ್ಟು ಕೃಷಿಚಟುವಟಿಕೆ ನಡೆಸುತ್ತಾ ಜೀವನ ಸಾಗಿಸುತ್ತಿರುವ ಮಲೆಕುಡಿಯರ ಬದುಕೇ ಒಂದು ಸೋಜಿಗ.ಮಲೆಕುಡಿಯ ಜನಾಂಗದ ನೈಜ ಚಿತ್ರಣ ವೀಕ್ಷಿಸಲು ಹೋದರೆ ಅಲ್ಲೊಂದು ಅಚ್ಚರಿ ಅದ್ಭುತ ಕಾಣುತ್ತದೆ. ಶಿಕ್ಷಣ ವಂಚಿತ ಈ ಮಲೆಕುಡಿಯ ಜನಾಂಗ ಶ್ರಮ ಜೀವಿಗಳು.ಮತ್ತು ಅಷ್ಟೇ ಸ್ವಾವಲಂಬಿಗಳು ಎಂಬುದು ಗಮನಾರ್ಹಅಂಶ.
ಹಚ್ಚ ಹಸಿರ ಕಾನನದ ನೈಜ ಸೌಂದರ್ಯದೊಂದಿಗೇ ಬೆಳೆದು ಬಂದ ಮಲೆಕುಡಿಯರ ಬದುಕೊಂದು ರೋಚಕ. ಅಷ್ಟೇ ಸಾಹಸವೂ. ಕಾಡಿನ ಸಣ್ಣ ಗಿಡದ ಬಗ್ಗೆಯೂ ಇವರಿಗೆಲ್ಲಾ ಅಪಾರ ಕಾಳಜಿ. ಈ ಗಿಡ ಮರಗಳೊಂದಿಗೆ, ವನ್ಯ ಪ್ರಾಣಿಗಳೊಂದಿಗೆ, ನಿಸರ್ಗದ ಸಣ್ಣ ಪುಟ್ಟ ಜೀವಿಗಳೊಂದಿಗೆ ಸಂಬಂಧವನ್ನು ಬೆಳೆಸಿಕೊಂಡು ತನ್ಮೂಲಕ ತಮ್ಮ ಬದುಕನ್ನು ಹಂಚಿಕೊಂಡವರು ಮಲೆಕುಡಿಯ ಜನಾಂಗದವರು. ದಟ್ಟಡವಿಯೊಳಗಿಂದ ಬರುವ ಒಂದೊಂದು ಧ್ವನಿಯನ್ನು ನಿಖರವಾಗಿ ಗುರುತಿಸುವ ತಾಕತ್ತುಳ್ಳ ಜನಾಂಗ ಇವರದ್ದು. ಅಷ್ಟರ ಮಟ್ಟಿಗೆ ಅಡವಿ ಅವರಿಗೆ ಪರಿಚಿತ! ಹೀಗಾಗಿಯೇ ಮಲೆ ಕುಡಿಯ ಜನಾಂಗದವರು ಕಾಡನ್ನು ನಂಬಿದ್ದಾರೆ. ಕಾಡೊಳಗೇ ಇದ್ದು ತಮ್ಮ ಸುಂದರ ಬದುಕನ್ನು ರೂಪಿಸಿಕೊಂಡಿದ್ದಾರೆ.
ಇದು ಕಾಡೊಳಗಿರುವ ಮಲೆ ಕುಡಿಯ ಜನಾಂಗದ ಒಂದು ಸಣ್ಣ ಚಿತ್ರಣ. ಇವರ ಜೀವನ ಶೈಲಿ, ಕುಟುಂಬ ವ್ಯವಸ್ಥೆಯನ್ನರಿಯವ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನ ನಾವೂರು ನಿಂದ ಏಳು ಕಿಲೋಮೀಟರ್ ದೂರದ ಮಲೆಕುಡಿಯ ವಾಳ್ಯಕ್ಕೊಂದು ಭೇಟಿ ನೀಡಿದೆ. 24 ಕುಟುಂಬಗಳುಳ್ಳ ಈ ಮಲೆಕುಡಿಯರ ವಾಳ್ಯದ ದರ್ಶನವೇ ಒಂದು ರೋಚಕ ಅನುಭವ.
ಈ ವಾಳ್ಯದ ಜನತೆಗೆ ಮಳೆಗಾಲದಲ್ಲಿ ಹೊರಗಿನ ಸಂಪರ್ಕ ಮಾತ್ರ ಕನಸಿನ ಮಾತು. ಯಾಕೆಂದರೆ ಬೇಸಗೆಯಲ್ಲೇ ದುರ್ಗಮ ಹಾದಿಯಲ್ಲಿ ಸಾಗುವ ಹರಸಾಹಸ. ಮಳೆ ಬಂತೆಂದರೆ ಕಾಡಿನಲ್ಲಿ ಸಂಚರಿಸುವುದೇ ಒಂದು ದುಸಾಹಸದ ಕಾರ್ಯ. ಮೊದಲೇ ದುರ್ಗಮ ಹಾದಿ. ಕಾಡ ಮಧ್ಯೆ ಮಳೆಗಾಲದ ನೀರ ಹರಿವಿನೊಂದಿಗೆ ಸಾಹಸ ಮಾಡುತ್ತಾ ಪಟ್ಟಣ ಸೇರಲು ಅಸಾಧ್ಯ ಸ್ಥಿತಿ. ಜಿಗಣೆಗಳ ಕಾಟ ಬೇರೆ. ಅಂತೂ ಮಲೆಕುಡಿಯ ಜನಾಂಗಕ್ಕೆ ವರ್ಷಋತುವಿನ ನಾಲ್ಕೈದು ತಿಂಗಳ ಕಾಲ ಅಜ್ಞಾತ ವಾಸದ ಸ್ಥಿತಿ. ಅಷ್ಟೇ ಏಕೆ ಕಾಡು ಮೃಗಗಳ ಭಯ, ಕಾಳಿಂಗ, ಉರಗಗಳಿಗೇನೂ ಇಲ್ಲಿ ಕಡಿಮೆಯಲ್ಲ !.
ಇದು ಪಶ್ಚಿಮ ಘಟ್ಟದ ತಪ್ಪಲ ಪ್ರದೇಶ. ಇಲ್ಲೆಲ್ಲಾ ಮರಗಳು ಎತ್ತರೆತ್ತರಕ್ಕೆ ಬೆಳೆದು ದಟ್ಟವಾಗಿಯೇ ಇವೆ. ಕಾಡ ಪ್ರಯಾಣದ ನಡು ನಡುವೆ ಜಿಂಕೆ , ಕಾಡು ಪ್ರಾಣಿಗಳ `ದರ್ಶನ' ಭಾಗ್ಯವೂ ದೊರಕುತ್ತದೆ. ನಿಬಿಢವಾಗಿ ಬೆಳೆದು ನಿಂತ ವೃಕ್ಷ ವೈವಿಧ್ಯಗಳ ನಡುವೆ ಸಾಗುವುದೇ ಒಂದು ಸುಂದರ ಅನುಭವ.
ಹೇಗೆ ಸಾಗಬೇಕು: ಇದು ಬೆಳ್ತಂಗಡಿ ಪಟ್ಟಣದಿಂದ ಉಜಿರೆ ಮಾರ್ಗವಾಗಿ ಸಾಗುವ ಲಾಯಿಲದಿಂದ ಎಡಕ್ಕೆ ತಿರುಗಿ ಕಿಲ್ಲೂರು ರಸ್ತೆಯಲ್ಲಿ ಸಾಗಬೇಕು. ಹಾಗೆ ಸಾಗಿದಾಗ ಸಿಗುವ ನಾವುರದಿಂದ ಸುಮಾರು 7 ಕಿ.ಮೀ. ದೂರ ಕಡಿದಾದ ದುರ್ಗಮ ರಸ್ತೆಯಲ್ಲಿ ಕ್ರಮಿಸಿದಾಗ `ಮಲ್ಲ' ಎಂಬ ಪ್ರದೇಶ ಸಿಗುತ್ತದೆ.
ಈ ಪ್ರದೇಶದ ಸುತ್ತ ಮುತ್ತೆಲ್ಲಾ ಒಂದು 24 ಕುಟುಂಬಗಳಿವೆ. ಈ ಪೈಕಿ ಒಂದು ಸಪಲಿಗ ಕುಟುಂಬ. ಉಳಿದಂತೆ 23 ಮಲೆಕುಡಿಯರ ಮನೆಗಳು. ಇವರೆಲ್ಲರೂ ಸ್ವಾವಲಂಬಿಗಳು.
ಇಲ್ಲಿ ಮೂಲಭೂತ ವ್ಯವಸ್ಥೆಯದ್ದೇ ಪ್ರಮುಖ ಸಮಸ್ಯೆ. ಸರಕಾರದಿಂದ ಸೂಕ್ತ ಸೌಲಭ್ಯ ಇವರಿಗ್ಯಾರಿಗೂ ದೊರಕುತ್ತಿಲ್ಲ. ಸೂಕ್ತ ಆಸ್ಪತ್ರೆಯ ಸೌಲಭ್ಯವಿಲ್ಲ. ಏನಾದರೂ ಆರೋಗ್ಯ ಸಂಬಂಧೀ ತೊಂದರೆಗಳಾದಲ್ಲಿ 7ಕಿ.ಮೀ ದುರ್ಗಮ ರಸ್ತೆಯಲ್ಲಿ ನಡೆದುಕೊಂಡೇ ಹೋಗಬೇಕಾದ ಸ್ಥಿತಿ. ಶಿಕ್ಷಣ ಪಡೆಯಬೇಕೆಂದಾದರೆ ಮತ್ತೆ ಅದೇ ಸ್ಥಿತಿ. ಇಷ್ಟೆಲ್ಲಾ ತೊಂದರೆಗಳಿದ್ದರೂ ಇವರು ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಂಡಿದ್ದಾರೆ. ಅದು ಮೆಚ್ಚತಕ್ಕಂತಹ ವಿಚಾರ.
ಸ್ವಾವಲಂಬೀ ಬದುಕು
ಈ ಮಲೆಕುಡಿಯರದ್ದು .ಸ್ವಾವಲಂಬೀ ಬದುಕು. ನಿಜವಾಗಿ ನೋಡಿದರೆ `ಇವರು ಅನುಸರಣೀಯರು' ಎಂದರೆ ತಪ್ಪಾಗಲಾರದು. ಕಾರಣ ಇಷ್ಟೇ. ಇವರ ಮನೆಗೆ ಬರುವ ಹಾದಿಯನ್ನು ಇವರೇ ನಿಮರ್ಿಸಿದ್ದಾರೆ.ಪರಿಸರವನ್ನು ಸ್ವಚ್ಛವಾಗಿಟ್ಟಿದ್ದಾರೆ. ನಾಟಿ ಮಾಡುತ್ತಾರೆ. ತಮ್ಮ ಅನ್ನಕ್ಕೆ ಬೇಕಾದ ವ್ಯವಸ್ಥೆಯನ್ನು ತಾವೇ ರೂಪಸಿಕೊಂಡಿದ್ದಾರೆ. ಯಾವ ಪಕ್ಷ ಆಡಳಿತಕ್ಕೆ ಬರಲಿ ಬಿಡಲಿ ಇವರೇನೂ ಕ್ಯಾರೇ ಮಾಡುತ್ತಿಲ್ಲ. ಅಂದಹಾಗೆ ಮತದಾನದ ಹಕ್ಕನ್ನು ನಿಷ್ಠಾವಂತರಾಗಿ ಚಲಾಯಿಸುತ್ತಿದ್ದಾರೆ. ಇಷ್ಟಕ್ಕೂ ಈಗ ಬಂದು ಹೋದ ಸರಕಾರಗಳೇನೂ ಇವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿಕೊಟ್ಟಿಲ್ಲ. ಇಲ್ಲಿರುವ ಜನವಸತಿಗೆ ಅನುಕೂಲಕ್ಕೆ ಬೇಕಾದಂತಹ ಆರೋಗ್ಯ ಕೇಂದ್ರಗಳೂ ಇಲ್ಲ. ವಿದ್ಯುತ್ ಚಕ್ತಿ ಮಂಡಳಿಯ ಒಂದೇ ಒಂದು ಸಣ್ಣ ತಂತಿಯೂ ಈ ವಾಳ್ಯಕ್ಕೆ ಬಂದಿಲ್ಲ. ದೂರವಾಣಿ ವಯರುಗಳನ್ನು ಇವರ್ಯಾರೂ ನೋಡಲೇ ಇಲ್ಲ. ಆದರೂ ಇವರು ತಮಗೆ ಬೇಕಾದ ಅನುಕೂಲಗಳನ್ನು ತಾವು ಚೊಕ್ಕವಾಗಿ ರೂಪಿಸಿಕೊಂಡಿದ್ದಾರೆ!
ಒಟ್ಟು ಮನೆಗಳು: 24
ಜನಸಂಖ್ಯೆ: 120
ವಿದ್ಯಾರ್ಹತೆ: ವಿರಳ
ವೃತ್ತಿ: ಕೃಷಿ
ಮೂಲಭೂತ ವ್ಯವಸ್ಥೆ: ಕೊರತೆ.
`ಸುಂದರ' ಬದುಕು
ಇವರು ಮಲೆಕುಡಿಯ ಜನಾಗಂದ ಓರ್ವ ಸದಸ್ಯರು. ಇವರಿರುವ ಜಾಗ `ಮಲ್ಲ'. ಸಾಕಷ್ಟು ಕೃಷಿ ಭೂಮಿಯಿದೆ. ಗಿರಿಯಪ್ಪ ಎಂಬವರ ಪುತ್ರ. ಶ್ರಮ ಜೀವಿ. ಶಿಕ್ಷಣ ಅಷ್ಟಕ್ಕಷ್ಟೇ. ಸಾಮಾನ್ಯ ಜ್ಞಾನ ಹೊಂದಿದ್ದಾರೆ. ಇವರ ಸಾಧನೆ ಇಲ್ಲೊಂದು `ವಿದ್ಯುತ್ ಉತ್ಪಾದನಾ ಘಟಕದ ಸ್ಥಾಪನೆ'. ಇದು ಎರಡು ಕುಟುಂಬಗಳಿಗೆ ಸೀಮಿತ. ತಾನದಡಿ ಎಂಬಲ್ಲಿ ಕಾನನದಿಂದ ಹರಿದು ಬರುವ ನೀರನ್ನು ದೊಡ್ಡ ಒಂದು ಕೆರೆಯಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಅಲ್ಲಿಂದ ಕೆಳಭಾಗದಲ್ಲಿ ಸುಮಾರು ಒಂದು ಕಿ.ಮೀ ದೂರದಲ್ಲಿರುವ ಇವರ ತೋಟದ ಮಧ್ಯೆ ಒಂದು ಪುಟ್ಟ ಜನರೇಟರ್ ಅಳವಡಿಸಿದ್ದಾರೆ. ಫೈಬರ್ ಪೈಪ್ ಮೂಲಕ ನೀರನ್ನು ಹರಿಸಿ, ಜನರೇಟರ್ ತಿರುಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ನೀರಿನ ಹರಿವಿನ ನಿಯಂತ್ರಣಕ್ಕೆ ಗೇಟ್ ವಾಲ್ವ್ ವ್ಯವಸ್ಥೆ. ಇದನ್ನು ತಿರುಗಿಸಿ ನೀರು ಹರಿವಿಕೆಗೆ ಅನುವು ಮಾಡಿದ್ದೇ ಆದಲ್ಲಿ ವಿದ್ಯುತ್ ಪ್ರವಾಹ ಪ್ರಾರಂಭ. 230 ಕಿ.ವ್ಯಾ. ವಿದ್ಯುತ್ ಚಕ್ತಿ ಉತ್ಪಾದನೆಯಾಗುತ್ತದೆ. ಇದಕ್ಕೆ ತಗಲಿದ ವೆಚ್ಚ 1.20ಲಕ್ಷ. ಈ ಪೈಕಿ 60 ಸಾವಿರ ರುಪಾಯಿಗಳ ಸಬ್ಸಿಡಿಯನ್ನು ಸರಕಾರದಿಂದ ಪಡೆದುಕೊಂಡಿದ್ದಾರೆ. ಇವರ ಮನೆ ಇದೀಗ ಬೆಟ್ಟದ ನೀರಿನಿಂದ ಬೆಳಗಿದೆ!ಬೆಳಗುತ್ತಿದೆ. ಡಿ.ಟಿ.ಎಚ್. ವ್ಯವಸ್ಥೆಯನ್ನಳವಡಿಸಿಕೊಂಡಿದ್ದಾರೆ. ಮೊಬೈಲ್ ದೂರವಾಣಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಅಚ್ಚುಕಟ್ಟಾದ ಜೀವನ ನಿರ್ವಹಿಸುತ್ತಿದ್ದಾರೆ. ಗದ್ದೆ,ಅಡಿಕೆ,ತೆಂಗು ತೋಟ, ರಬ್ಬರ್ ಮೊದಲಾದ ಮಿಶ್ರ ಬೆಳೆಯೊಂದಿಗೆ ಜೀವನ ನಿರ್ವಹಣೆ. ಸುಂದರ ಬದುಕು!



ನಿಜಕ್ಕೂ ಅದ್ಭುತ ಪ್ರತಿಭೆ. ಅಸಾದ್ಯತೆಯಲ್ಲಿ ಸಾದ್ಯತೆಯನ್ನು ಕಂಡ ದೈರ್ಯಶಾಲಿ ವ್ಯಕ್ತಿತ್ವ. ಜನರನ್ನು ಭಯಭೀತರಾಗಿಸುವ ಉರಗಗಳು ಇವರ ಆತ್ಮೀಯ ಗೆಳೆಯರು. ಇದೀಗ ಸಾವಿರಕ್ಕೂ ಜನರ ಪ್ರಾಣ ಉಳಿಸಿದ ನೆಮ್ಮದಿ ಇವರದು. ಒಟ್ಟಾರೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿದ ಕೀರ್ತಿ.
ಉಡುಪಿ ತಾಲ್ಲೂಕಿನ ಸಾಲಿಗ್ರಾಮದ ರವೀಂದ್ರ ಐತಾಳರು ವೃತ್ತಿಯಲ್ಲಿ ಹೋಮಿಯೋಪತಿ ವೈದ್ಯರಾಗಿದ್ದು, ಪ್ರವೃತ್ತಿಯಲ್ಲಿ ಉರಗ ತಜ್ಞರು.ಇದೀಗ ಕುಟುಂಬ ಸಮೇತರಾಗಿ,ಪುತ್ತೂರಿನ ನೈತ್ತಾಡಿಯಲ್ಲಿ ವಾಸ. ಸ್ವಪ್ರಯತ್ನ, ಜಾನಪದ ವಿಷ ವೈದ್ಯರ ನೆರವು,ಸಂಬಂಧ ಪಟ್ಟ ಗ್ರಂಥಗಳ ಮಾಹಿತಿ ಆಧಾರದ ಮುಖೇನ ಅಧ್ಯಯನ ಮಾಡಿದವರು. ಸ್ವತಃ ಹಾವಿನಿಂದ ಕಡಿಸಿಕೊಂಡು, ಹಾವು ಕಡಿದು ಗ್ಯಾಂಗ್ರಿನ್ ಆಗಿ ಆಧುನಿಕ ವೈದ್ಯರುಗಳು ಕೈಚೆಲ್ಲಿ ಕುಳಿತ ಹಲವು ಪ್ರಕರಣಗಳಿಂದ ಜನರನ್ನು ಮುಕ್ತವಾಗಿಸಿದ ಅನುಭವ ಇವರದು. ಅಲ್ಲದೆ ಅಸೌಖ್ಯ ಹೊಂದಿದ ಹಾವುಗಳಿಗೆ ಚಿಕಿತ್ಸೆ ನೀಡಿ ಅರಣ್ಯದ ಮಡಿಲು ಸೇರಿಸಿರುವ ಹೆಗ್ಗಳಿಕೆ.
1996 ರಲ್ಲಿ ಪುತ್ತೂರಿನ ನ್ಶೆತ್ತಾಡಿಯಲ್ಲಿ ಸಕಕಾರದಿಂದ ಕೊಡಮಾಡಿದ ಒಂದೂವರೆ ಎಕರೆ ಜಾಗದಲ್ಲಿ 600ಕ್ಕೂ ಹೆಚ್ಚು ಔಷದಿ ಸಸ್ಯಗಳನ್ನು ನೆಟ್ಟುಬೆಳೆಸಿರುದಲ್ಲದೆ, ಕಳೆದ 12 ವರ್ಷಗಳಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಔಷದೀಯ ಗಿಡಗಳ ಮಹತ್ವವನ್ನು ಪರಿಚಯಿಸಿರುತ್ತಾರೆ. ವೈಯುಕ್ತಿಕವಾಗಿ ಇವರು ಸಂಗ್ರಹಿಸಿರುವ ಈ 'ಮೂಲಿಕಾ ವನ' ಕರ್ನಾಟಕದಲ್ಲಿ ಪ್ರಪ್ರಥಮದಾಗಿರುವುದು ಹೆಮ್ಮೆಯ ಸಂಗತಿ.
ಇಂದು ಔಷದೀಯ ಗಿಡಗಳ ರಕ್ಷಣೆ ಮಾಡುವ ಸದುದ್ದೇಶ ಐತಾಳಗದ್ದು. ಹಾಗಾಗಿ ಮನೆಯಲ್ಲಿಯೇ, ಪ್ರತಿ ಜಾತಿಯ ಎರಡರಂತೆ 24 ಜಾತಿಯ ಹಾವುಗಳನ್ನು ಸಾಕುತ್ತಾ ಉರಗ ಲೋಕವನ್ನೇ ಸೃಷ್ಟಿಸಿದ್ದಾರೆ. ಹಗಲು ರಾತ್ರಿಯೆನ್ನದೆ ಸಾರ್ವಜನಿಕರಿಂದ ಬಂದ ಕರೆಗಳಿಗೆ ಸ್ಪಂದಿಸುವ ಇವರ ಮನೋಧರ್ಮ ಮೆಚ್ಚುವಂತದ್ದು. ತಮ್ಮ ಎಲ್ಲಾ ಕೆಲಸವನ್ನು ಬದಿಗೊತ್ತಿ,ಕೂಡಲೇ ಸ್ಥಳಕ್ಕೆ ದಾವಿಸಿ ಜನ ನೋಡುತ್ತಿದ್ದಂತೆಯೇ ಸಲೀಸಾಗಿ ತಮ್ಮ ಕೈಚಳಕದಿಂದ ತಂದಿರುವ ಚೀಲದೊಳಕ್ಕೆ ಹಾವನ್ನು ಸೇರಿಸಿ ಬಿಡುತ್ತಾರೆ ಐತಾಳರು. ಈವರೆಗೆ ಹಿಡಿದ ಹಾವುಗಳ ಪೈಕಿ ಕಾಳಿಂಗ ಸರ್ಪಗಳ ಸಂಖೈ 165 ಆಗಿದ್ದು ಒಟ್ಟು ಹತ್ತುಸಾವಿರಕ್ಕು ವಿಕ್ಕಿ ಹಾವುಗಳನ್ನು ಹಿಡಿದಿದ್ದಾರೆ, ಅಲ್ಲದೆ ತಾವೇ ಶಾಖನೀಡಿ ಮೊಟ್ಟೆ ಗಳಿಂದ ಮರಿಗಳನ್ನು ಮಾಡಿದ್ದು ಕ್ಯಾಪ್ಟಿವಿಟಿ ಮೂಲಕ 4 ಬಿಳಿಹಾವುಗಳು ಬಂದಿರುವುದು ಭಾರತದಲ್ಲಿಯೇ ಪ್ರಥಮವಾಗಿದೆ.
ಇವರ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ 1992 ರಲ್ಲಿ ಮಣಿಪಾಲ ಸಂಸ್ಥೆಯವರು ಔಟ್ ಸ್ಟಾಂಡಿಂಗ್ ಯಂಗ್ ಪರ್ಸನ್,ಕರ್ನಾಟಕ" ಎಂಬ ಪ್ರಶಸ್ತಿ,1998 ರಲ್ಲಿ ಕರ್ನಾಟಕಟಕದಲ್ಲಿ "ವನ್ಯ ಜೀವುಇ ಉಳಿಸುವಿಕೆ" ಪ್ರಶಸ್ತಿ ಬಂದಿರುತ್ತದೆ.2001 ರಲ್ಲಿ ಬೆಳ್ಳಾರೆ,ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ,2002 ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯಿಂದ ಸ್ನೇಹ ಪ್ರಶಸ್ತಿ,2003 ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಜ್ಞಾನ ವಿಜ್ಞಾನ ಪ್ರಶಸ್ತಿ ದೊರಕಿದರುತ್ತದೆ.2005 ರಲ್ಲಿ ಔಷದೀಯ ಸಸ್ಯ ಸಂರಕ್ಷಣೆ ಮತ್ತು ಪರಿಸರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿರುದಕ್ಕಾಗಿ ಕರ್ನಾಟಕ ಸರಕಾರದಿಂದ".ರಾಜೀವ ಗಾಂಧೀಪರಿಸರ ಪ್ರಶಸ್ತಿಯನ್ನು ರಾಜ್ಯಪಾಲರು ಕೊಟ್ಟು ಸನ್ಮಾನಿಸಿರುತ್ತಾರೆ.2006 ರಲ್ಲಿ ರಾಜ್ಯಪಾಲರು ಪ್ರಶಂಸಾ ಪತ್ರವೂ ಇವರ ಹೆಗ್ಗಳಿಕೆಯ ಪ್ರತೀಕ.
ಇಂದು ಔಷದೀಯ ಗಿಡಗಳ ರಕ್ಷಣೆ ದೂರದೃಷ್ಟಿತ್ವಕ್ಕೆ ಹಿಡಿದ ಕನ್ನಡಿಯಂತೆ. ಸಾಧೀಸುವ ಛಲ,ಪ್ರಂಯತ್ನಮನಸಿದ್ದರೆ ಮಾರ್ಗಗಳು ಹಲವು ಎಮಬುದಕ್ಕೆ ಪುತ್ತೂರಿನ ರವೀಂದ್ರ ಐತಾಳರು ಉತ್ತಮ ನಿದರ್ಶನ. ಇಂದು ಔಷದೀಯ ಗಿಡಗಳ ರಕ್ಷಣೆ .
- ಸಂಗೀತ
ದೇಶದಲ್ಲಿ ಈಗ ನೀಡಲಾಗುತ್ತಿರುವ ಇಂಜೆಕ್ಷನ್ಗಳ ಪೈಕಿ ಶೇ. 63ರಷ್ಟು, ಅಂದರೆ ಅರ್ಧಕ್ಕಿಂತ ಹೆಚ್ಚು ಸುರಕ್ಷಿತವಲ್ಲ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವಬ್ಯಾಂಕ್ ಪ್ರಾಯೋಜಿತ `ಇಂಡಿಯಾ ಕ್ಲೀನ್ ಪ್ರೊಗ್ರಾಮ್ ಇವ್ಯಾಲ್ಯುಯೇಷನ್ ನೆಟ್ವರ್ಕ' ನಡೆಸಿದ ಸಮೀಕ್ಷೆ ಈ ಆಘಾತಕಾರಿ ಅಂಶ ಬಹಿರಂಗಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಭಾರತದಲ್ಲಿ ನೀಡಲಾಗುವ ಇಂಜೆಕ್ಷನ್ಗಳ ಪೈಕಿ ಮೂರನೇ ಒಂದು ಭಾಗದಷ್ಟು ರಕ್ತ ಸಂಬಂಧಿ ವೈರಸ್ಗಳ ಹರಡುವಿಕೆಗೆ ಕಾರಣವಾಗುತ್ತಿದೆ.
ಇದರಿಂದಾಗಿ ರೋಗಿಗಳಲ್ಲಿ ರಕ್ತ ಸಂಬಂಧಿ ರೋಗಗಳಾದ ಹೆಪಟಿಟಿಸ್ ಬಿ, ಹೆಪಟಿಟಿಸ್ ಸಿ ಹಾಗೂ ಏಡ್ಸ್ಗಳು ಹರಡುವ ಸಾಧ್ಯತೆಗಳಿವೆ. ಏಡ್ಸ್ ಹರಡುವಿಕೆಯಲ್ಲಿ ಅಸುರಕ್ಷಿತ ಲೈಂಗಿಕತೆ ಮಹತ್ವದ ಪಾತ್ರ ವಹಿಸಿದರೆ, ನಂತರದ ಸ್ಥಾನದಲ್ಲಿರುವುದು ಅಸುರಕ್ಷಿತ ಇಂಜೆಕ್ಷನ್ಗಳ ಬಳಕೆ. ಸರಕಾರಿ ಆಸ್ಪತ್ರೆಗಳಲ್ಲಿನ ಶೇ. 68 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಇಂಜೆಕ್ಷನ್ಗಳ ಪೈಕಿ ಶೇ. 59 ರಷ್ಟು ಅಸುರಕ್ಷಿತ. ಅಸುರಕ್ಷಿತ ಇಂಜೆಕ್ಷನ್ಗಳ ಪ್ರಮಾಣ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು. ಗ್ರಾಮೀಣ ಭಾಗದಲ್ಲಿ ಗ್ಲಾಸ್ ಸಿರಿಂಜ್ ಹಾಗೂ ಕಲುಷಿತ ಸೂಜಿಯನ್ನು ಹೆಚ್ಚಾಗಿ ಬಳಸುವುದು ಇದಕ್ಕೆ ಪ್ರಮುಖ ಕಾರಣ ಎನ್ನುತ್ತದೆ ವರದಿ.
ಅಸುರಕ್ಷಿತ ಇಂಜೆಕ್ಷನ್ ಎಂದರೆ...
ವೈದ್ಯರು ನೀಡಿದ ಇಂಜೆಕ್ಷನ್ ರೋಗಿಗೆ ಯಾವುದೇ ದುಷ್ಪರಿಣಾಮ ಉಂಟು ಮಾಡದಿದ್ದರೆ ವೈದ್ಯಕೀಯವಾಗಿ ಅದು ಸುರಕ್ಷಿತ. ರೋಗಿ ತೆಗೆದುಕೊಂಡ ಇಂಜೆಕ್ಷನ್ ರಕ್ತ ಸಂಬಂಧಿ ವೈರಸ್ಗಳನ್ನು ಹರಡುವ ಸಾಮಥ್ರ್ಯ ಪಡೆದಿದ್ದರೆ ಅಥವಾ ವೈದ್ಯರು ಇಂಜೆಕ್ಷನ್ನ್ನು ತಪ್ಪಾಗಿ ನೀಡಿ ಅದರಿಂದ ನಂಜು ಅಥವಾ ಅಡ್ಡ ಪರಿಣಾಮ ಉಂಟಾದರೆ ಅದನ್ನು ಅಸುರಕ್ಷಿತ ಎಂದು ಅರ್ಥೈಸಲಾಗುತ್ತದೆ. ಸಿರಿಂಜ್, ಸೂಜಿಗಳ ಅಸಮರ್ಪಕ ವಿಲೇವಾರಿ, ಮರು ಬಳಕೆ, ಶುದ್ಧೀಕರಿಸದೆ ಬಳಸುವುದು, ಸ್ಟೆರಿಲೈಸ್ ಮಾಡದಿರುವುದು, ಮಾತ್ರೆ ಇಲ್ಲವೇ ಔಷಧ ನೀಡಿ ರೋಗ ಗುಣಪಡಿಸಲು ಸಾಧ್ಯವಿರುವಾಗಲೂ ಇಂಜೆಕ್ಷನ್ ನೀಡುವುದು, ಇಂಜೆಕ್ಷನ್ನ್ನು ಸರಿಯಾದ ವಿಧಾನದಲ್ಲಿ ನೀಡದಿರುವುದು, ಒಂದೇ ಸೂಜಿ ಬಳಸಿ ಹಲವು ರೋಗಿಗಳಿಗೆ ಇಂಜೆಕ್ಷನ್ ನೀಡುವುದು, ಸಿರಿಂಜ್ನಲ್ಲಿ ಹಲವು ಡೋಸ್ ತುಂಬುವುದು ಇವೆಲ್ಲವೂ ಅಸುರಕ್ಷಿತ ಎನಿಸುತ್ತದೆ. ಇಂಜೆಕ್ಷನ್ ನೀಡುವಿಕೆಯಲ್ಲಿ ಗಾಜಿನ ಸಿರಿಂಜ್ಗಿಂತ ಪ್ಲ್ಯಾಸ್ಟಿಕ್ ಸಿರಿಂಜ್ ಬಳಕೆ ಹೆಚ್ಚು ಸುರಕ್ಷಿತ ಎನ್ನುವುದು ಆರೋಗ್ಯ ತಜ್ಞರ ಅಭಿಮತ.
ಭಾರತದಲ್ಲಿ ವರ್ಷವೊಂದರಲ್ಲಿ 300-600ಕೋಟಿ ಇಂಜೆಕ್ಷನ್ಗಳನ್ನು ನೀಡಲಾಗುತ್ತಿದೆ. ಅವುಗಳಲ್ಲಿ ಶೇ. 82 ರಷ್ಟು ಇಂಜೆಕ್ಷನ್ಗಳನ್ನು ರೋಗ ಗುಣಪಡಿಸಲು ನೀಡಿದರೆ, ಇನ್ನುಳಿದ ಶೇ. 18ರಷ್ಟನ್ನು ಲಸಿಕೆ ಹಾಗೂ ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತದೆ. ಇಂಜೆಕ್ಷನ್ ಪಡೆಯುವವರ ಪ್ರಮಾಣದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂಖ್ಯೆ ಹೆಚ್ಚು ಎನ್ನುವುದು ಗಮನಾರ್ಹ ಅಂಶ.
ಅಸುರಕ್ಷಿತ ಇಂಜೆಕ್ಷನ್ ಭಾರತಕ್ಕೆ ಮಾತ್ರ ಸೀಮಿತವಲ್ಲ. ಇದು ವಿಶ್ವವ್ಯಾಪಿ. ವಿಶ್ವಸಂಸ್ಥೆಯ ವರದಿ ಹೇಳುವಂತೆ ವಿಶ್ವದಲ್ಲಿ ವರ್ಷವೊಂದಕ್ಕೆ 1,200-1,600 ಕೋಟಿ ಇಂಜೆಕ್ಷನ್ ನೀಡಲಾಗುತ್ತಿದ್ದು, ಅವುಗಳಲ್ಲಿ ಶೇ. 50ರಷ್ಟು ಅಸುರಕ್ಷಿತ.
ಅನಾರೋಗ್ಯಕರ ಸಿರಿಂಜ್ ಹಾಗೂ ಸೂಜಿ ಬಳಸಿ ನೀಡಲಾಗುವ ಇಂಜೆಕ್ಷನ್ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ. ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಪ್ರತಿ ದಿವಸ 4 ಸಾವಿರಕ್ಕೂ ಹೆಚ್ಚು ಮಕ್ಕಳು ಆರೋಗ್ಯ ಸಂಬಂಧಿ ನಂಜಿನಿಂದ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಈ ಸಂಖ್ಯೆ ವಾಷರ್ಿಕ 3 ಲಕ್ಷ. ಸಮರ್ಪಕ, ಆರೋಗ್ಯಕರ ನಿರ್ವಹಣೆಯಿಂದ ಈ ಸಾವನ್ನು ತಡೆಗಟ್ಟಬಹುದು ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ಅಭಿಮತ.
ನಮ್ಮಲ್ಲಿ ಈಗ ನೀಡಲಾಗುತ್ತಿರುವ ಇಂಜೆಕ್ಷನ್ಗಳ ಪೈಕಿ ಎರಡನೇ ಮೂರರಷ್ಟು ಅನಗತ್ಯ ಹಾಗೂ ಅಸಮರ್ಪಕ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ ವರದಿ. ಬಹುತೇಕ ಸಂದರ್ಭಗಳಲ್ಲಿ ಮಾತ್ರೆ ಹಾಗೂ ಔಷಧ ನೀಡಿಯೇ ರೋಗಿಯ ರೋಗವನ್ನು ಗುಣಪಡಿಸಬಹುದು. ಆದರೆ, ವೈದ್ಯರು ಇದರ ಬದಲು ಇಂಜಕ್ಷನ್ ನೀಡಲು ಮುಂದಾಗುತ್ತಾರೆ. ರೋಗ ಗುಣಪಡಿಸುವಲ್ಲಿ ಔಷಧಕ್ಕಿಂತ ಇಂಜೆಕ್ಷನ್ ಹೆಚ್ಚು ಪರಿಣಾಮಕಾರಿ ಹಾಗೂ ಇಂಜೆಕ್ಷನ್ ನೀಡಿದರೆ ರೋಗಿ ಬೇಗ ಗುಣಮುಖನಾಗುತ್ತಾನೆ ಎಂದು ವೈದ್ಯರು ಭಾವಿಸುವುದು ಇದಕ್ಕೆ ಕಾರಣ.
ಇಮ್ಯೂನೈಜೇಷನ್ ಕಾರ್ಯಕ್ರಮಕ್ಕೆ ಆಟೊ ಡಿಸೆಬಲ್ ಸಿರಿಂಜ್ ಬಳಸಬೇಕು ಎಂಬುದಾಗಿ 2003ರಲ್ಲೇ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಹಾಗೂ ಯುಎನ್ಎಫ್ಪಿಎಗಳು ಎಲ್ಲಾ ದೇಶಗಳಿಗೆ ಸಲಹೆ ನೀಡಿವೆ. ಅಲ್ಲದೆ, ಚಿಕಿತ್ಸಾ ಉದ್ದೇಶಕ್ಕಾಗಿ ಒಂದೇ ಸಲ ಬಳಸಬಹುದಾದ ಇಂಜೆಕ್ಷನ್ ಉಪಕರಣಗಳನ್ನು ಬಳಸಬೇಕು ಎಂದಿವೆ. ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಆರೋಗ್ಯ ಇಲಾಖೆ ಇದನ್ನು ಕಡ್ಡಾಯ ಮಾಡಿದೆ. ಆದರೆ, ಈ ಆದೇಶ ಕೇವಲ ಸರಕಾರಿ ಆಸ್ಪತ್ರೆಗಳಿಗೆ ಮಾತ್ರ ಸೀಮಿತ. ಹಾಗಾಗಿ ಖಾಸಗಿ ಆಸ್ಪತ್ರೆಗಳು ಈ ಆದೇಶದಿಂದ ಹೊರಗುಳಿದು ಬಿಡುತ್ತವೆ.
ಇಂಜೆಕ್ಷನ್ ನೀಡುವುದಕ್ಕೂ ಮೊದಲು ಬಳಸಲಾಗುವ ಸಿರಿಂಜ್ ಹಾಗೂ ಸೂಜಿಗಳನ್ನು ಶುದ್ಧಗೊಳಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳಿವೆ. ಆದರೆ, ಈ ಬಗೆಗಿನ ಲಿಖಿತ ಮಾರ್ಗಸೂಚಿ ಬಹುತೇಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವುದಿಲ್ಲ. ಅಲ್ಲದೆ, ಇಂಜೆಕ್ಷನ್ ನೀಡುವಾಗ ವೈದ್ಯರ ಪೈಕಿ ಅರ್ಧಕ್ಕಿಂತ ಹೆಚ್ಚು ಮಂದಿಗೆ ಈ ಮಾರ್ಗಸೂಚಿಗಳ ಬಗ್ಗೆ ಸೂಕ್ತ ತಿಳುವಳಿಕೆ ಇರುವುದಿಲ್ಲ.
ಇಂಜೆಕ್ಷನ್ ಕೊಟ್ಟ ನಂತರ ಆಸ್ಪತ್ರೆಗಳು ಸಿರಿಂಜ್ ಹಾಗೂ ಸೂಜಿಗಳನ್ನು ನಾಶಗೊಳಿಸಬೇಕು. ಹಾಗೆ ಎಸೆಯುವುದರಿಂದ ಚಿಂದಿ ಆಯುವವರು ಆರಿಸಿಕೊಂಡು, ಮಾರುಕಟ್ಟೆಯಲ್ಲಿ ಮಾರುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಸೂಜಿ ಹಾಗೂ ಸಿರಿಂಜ್ಗಳ ಮರು ಬಳಕೆ ಹೆಚ್ಚುತ್ತದೆ. ಕಳ್ಳ ಮಾರುಕಟ್ಟೆಯಲ್ಲಿ ಸೂಜಿ ಹಾಗೂ ಸಿರಿಂಜ್ಗಳು ಮರು ಬಳಕೆಗೆ ಸುಲಭವಾಗಿ ಸಿಗುತ್ತವೆ. ಇದನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿರುವ ಜಾಲವೇ ಹರಡಿದೆ.
ಸರಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿರುವ ಇಂಜೆಕ್ಷನ್ಗಳ ಪೈಕಿ ಶೇ. 69ರಷ್ಟು ಅಸುರಕ್ಷಿತ ಎಂಬುದನ್ನು ಹಿಂದಿನ ಕೇಂದ್ರ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ಅಂಬುಮಣಿ ರಾಮ್ದಾಸ್ ಅವರೇ ಒಪ್ಪಿಕೊಂಡಿದ್ದರು. ಈ ಬಗ್ಗೆ ಗಮನ ಹರಿಸಲು ಭಾರತೀಯ ವೈದ್ಯಕೀಯ ಸಂಘಟನೆ ಹಾಗೂ ಭಾರತೀಯ ಪೆಡಿಯಾಟ್ರಿಕ್ಸ್ ಸಂಘಟನೆಗಳು ಜಂಟಿಯಾಗಿ ಕಾರ್ಯಕ್ರಮ ರೂಪಿಸಲಿವೆ. ಇನ್ನು ಮುಂದೆ ಕೇಂದ್ರೀಯ ಸರಕಾರಿ ಆಸ್ಪತ್ರೆಗಳಲ್ಲಿ ಆಟೊ ದಿಸೆಬಲ್ಡ್ ಸಿರಿಂಜ್ಗಳನ್ನು ಮಾತ್ರ ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು, ಅಲ್ಲದೆ, ಈ ಸಂಬಂಧ ಎಲ್ಲಾ ರಾಜ್ಯಗಳಿಗೂ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದ್ದರು.
ಆರೋಗ್ಯ ಭಾಗ್ಯ ನೀಡುವ ಇಂಜೆಕ್ಷನ್ಗಳೇ ರೋಗ ಹರಡಲು ಕಾರಣವಾದರೆ, ರೋಗಿಯ ಪಾಲಿಗೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಭವಿಷ್ಯದಲ್ಲಿ ಮಾರಣಾಂತಿಕ ರೋಗ ಬರದಿರಲಿ ಎಂಬ ಕಾರಣಕ್ಕಾಗಿ ನೀಡುವ ಚುಚ್ಚುಮದ್ದು ಮಕ್ಕಳಿಗೆ ರೋಗ ಹುಟ್ಟು ಹಾಕಿದರೆ ಅದಕ್ಕಿಂತ ದೊಡ್ಡ ಶಾಪ ಮತ್ತೊಂದಿಲ್ಲ. ಇದು ಗಂಭೀರ ವಿಷಯ ಎಂಬುದನ್ನು ವೈದ್ಯ ಸಮುದಾಯ ಮನಗಾಣಬೇಕು.
- ಮಹಾಬಲೇಶ್ವರ ಹೊನ್ನೆಮಡಿಕೆ
ನೆನಪುಗಳ ಮಾತು ಮಧುರ
ಹಳ್ಳಿ ..ಊಟಕ್ಕುಂಟು ಲೆಕ್ಕಕ್ಕಿಲ್ಲ...ಲೆಕ್ಕಾಚಾರದ ಬಟ್ಟೆ..ಜಡಿವ ಮಳೆಗೆ ಎರಡು ಮೂರು ವರುಶಕ್ಕೊಂದು ಕೊಡೆ..ತುದಿಯ ಸ್ವಲ್ಪ ಕೆಳಗೆ ದಪ್ಪನೆಯ ತೇಪೆ.. ಮಿಕ್ಕುಳಿದ ಜಾಗದಲ್ಲಿ ಹಗೊಲು ಹೊತ್ತಿನಲ್ಲೆ ನಕ್ಷತ್ರಗಳು ಮಿನುಗುತ್ತಿದೆಯೋ ಎನ್ನುವಂತೆ ಚಿಕ್ಕ ಚಿಕ್ಕ ತೂತುಗಳು. ಸ್ಕೂಲಲ್ಲಿ ಮಧ್ಯಾಹ್ನಕ್ಕೆ ಬಿರಿಯಾನಿಯಂತೆ ರುಚಿಯಾದ ಉಪ್ಪಿನಕಾಯಿ ಊಟ.
ದಿನಕ್ಕಿಷ್ಟೆ ಅನ್ನುವ ಲೆಕ್ಕಾಚಾರದ ನಾಣ್ಯಗಳು.. ಬಸ್ಸಿನ ಹಾಫ್ ಟಿಕೆಟಿಗಾಗಿ..ಹತ್ತು ಪೈಸೆ ಬಿದ್ದರೂ ಹಲವು ಮೈಲಿಗಳ ನಡಿಗೆ ವರದಾನ..ಪಿ.ಯು.ಸಿ ಗೆ ಬರುವಷ್ಟರಲ್ಲೆ ಜಡಿ ಮಳೆ, ಸುಡು ಬಿಸಿಲು ಮಂದ ಚಳಿಗೆ ಒಗ್ಗಿ ಹೋದ ದೇಹ.. ಎಲ್ಲೇ ಬದುಕಲು ಇಷ್ಟು ಅನುಭವ ಸಾಕಿತ್ತು.
ಹುಲಿಯ ಹಾಲಿನ ಮೇವು ೭ನೇ ತರಗತಿಯಲ್ಲಿರಬೇಕಾದರೆ ನೋಡಿದ ಮೊದಲ ಸಿನೆಮ..ಅದಕ್ಕೆ ಇವತ್ತಿಗೂ ಬೆಳದಿಂಗಳಾಗಿ ಬಾ ಹಾಡೇ ಮೆಲೋಡಿ ಅನ್ನಿಸುತ್ತೆ. ರಾಜಾಧಿರಾಜಾ ಡ್ಯಾನ್ಸೆ ಉತ್ತಮ ಅನಿಸ್ತಿದೆ... ಮಧುರ ನೆನಪಲ್ಲವೇ.. ಮೊದಲ ವರ್ಷದ ಡಿಗ್ರಿಯಲ್ಲಿ ಕುದುರೆಮುಖದ ಕಣ್ವ ಡ್ಯಾಮ್ ನಲ್ಲಿ ಪೋಲಿ ಹೊಡುಗ ಚಿತ್ರೀಕರಣ ಮೊದಲು ನೋಡಿದ್ದು...ರವಿಚಂದ್ರನ್.. ತಾರಾ ..ಹಾಡು ನಡೀತಿತ್ತು.. ಆ ಮಟ್ಟಕ್ಕೆ ನಮ್ಮನ್ನು ಕಲ್ಪನಾ ಲೋಕಕ್ಕೆ ಶೂಟಿಂಗ್ ಕೊಂಡೊಯ್ಯಬಹುದು ಎಂದು ನಂಬಿರಲಿಲ್ಲ.. ಆದರೂ ಆಗ ಕನಸು ಬಿದ್ದಿರಲಿಲ್ಲ ಇವತ್ತು ನಾನು ಹೀಗಾಗಬಹುದೆಂದು..
ಕಾಡುಗಳೇ ಸುತ್ತುವರಿದ ಗ್ರಾಮೀಣ ಪ್ರದೇಶದ ಮೂಲೆಯ ಬಳಂಜದ ಅಟ್ಲಾಜೆಯಲ್ಲಿತ್ತು ನನ್ನ ಮನೆ. ಡಿಗ್ರಿ ಓದಿದ್ದೇ ಓದಿದ್ದು ಪರೀಕ್ಷೆಯಲ್ಲಿ ಬರೆದಿದ್ದೇ ಬರೆದಿದ್ದು...ಮತ್ತೆ ಮತ್ತೆ ಎಲ್ಲರೂ ಕೈ ಬಾಯಿಗಿಷ್ಟುಕೊಳ್ಳುವಷ್ಟು, ಪೇಜ್ ಗೊಂದು ಮಾರ್ಕು ಇಲ್ಲದಷ್ಟು! ಅದೇನು ಬರೆದ್ನೋ.. ಪಿ.ಯುನಲ್ಲಿ ಕನ್ನಡ ಬರೆದಷ್ಟು ಮಾರ್ಕು ಇಲ್ಲ, ಬರೆದಷ್ಟು ಮುಗ್ಯೋದು ಇಲ್ಲ ಅಂದ್ರು ಯಾರೋ. ಆದ್ರೆ ಹಿಂದಿ ೪-೫ ಪುಟ ಬರೆದ್ರೆ ೩೫ ಗ್ಯಾರೆಂಟಿ ಅಂದ್ರು ಅದಕ್ಕೆ ಅದನ್ನು ಟಿಕ್ ಮಾಡ್ದೆ.
ಮನೇಲಿ ಆರ್ಟ್ಸ್ ಬೇಡ ಕಾಮರ್ಸ್ ಅಂದ್ರು ಅದಕ್ಕೂ ಟಿಕ್ ಮಾಡ್ದೆ..ಎಕೌಂಟ್ಸ್ ಗೆ ನನ್ನ ಈ ಜನ್ಮ ಸಾಲ್ದು ಅಂತ ಪಿ.ಯು ನಂತ್ರ ಕಲೆ ತೆಗೊಂಡೆ..ಕಲಾ ವಿಭಾಗದ ಮೂರು ವರ್ಷದಲ್ಲಿ ಕೊಳೆತೆನೇ ಹೊರತು....ಡಿಗ್ರಿ ಮುಗೀತು ಜೀವನ..? ತಹಶಿಲ್ದಾರ್ ಈ ಚೆನ್ನಗಂಗಪ್ಪ ಬೆಂಗಳೂರಿನ ದಿಕ್ಕು ತೋರಿಸಿದ್ರು..ಥ್ಯಾಂಕ್ಯು ಸಾರ್...
ಜೀವನ ಅಂದ್ರೆ ಏನು ಅನ್ನೋ ಪ್ರಶ್ನೆ ಗೊತ್ತಿರಲಿಲ್ಲ. ಗೊತ್ತಿರದ ಪ್ರಶ್ನೆಗೆ ಉತ್ತರಗಳ ಸಾಲು ಸಾಲೇ ಸೋಲು ಎನ್ನುವ ಸರತಿಯಲ್ಲಿ ಬಂದು ನಿಲ್ಲಲಾರಂಭಿಸಿದಾಗ ಜೊತೆಗಿದ್ದಿದ್ದು ಬಟ್ಟೆಗೂ ಹೊಟ್ಟೆಗೂ ಬರ. ಆದರೂ ಯಾರಿಗೂ ತಿಳಿಸದೆ ಇದಕ್ಕೆ ಕ್ಯಾರ್ ಮಾಡಲ್ಲ ಅಂದಾಗ ಕೆಲ ಸ್ನೇಹಿತರು ನನ್ನ ಕಿರು ಬೆರಳು ಹಿಡಿದಿದ್ದರು.
ಯಶಸ್ಸು ಹಂತ ಹಂತವಾಗಿ ಬಂದು ಈಗ ಜನ ಗುರುತಿಸುವ ವ್ಯಕ್ತಿ ಆಗಿದ್ದೇನೆ. ಹಿಂದಿನ ನೆನಪೆಲ್ಲವು ಮಧುರ ಗೀತೆಯಂತೆ.. ನೋವಿನ ಸಾಹಿತ್ಯದಂತೆ.. ಕ್ಷಣ ಹೊತ್ತು ಮೌನವಾದಾಗ ಬಂದು ಹೋಗುತ್ತೆ. ಹಳೆ ಟೇಪ್ ರೆಕಾರ್ಡ್ ನಲ್ಲಿ ಕ್ಯಾಸೆಟ್ ಹಾಕಿದಾಗ ನಿಂತು ನಿಂತು ಸಾಗಿದಂತೆ. ಬಾಲ್ಯದಿಂದ ಸವಿ ನೆನಪು ಕೊಟ್ಟ ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಅಣ್ಣ, ತಂಗಿ.. ತೀರಿಕೊಂಡ ತಮ್ಮ , ಕೊರಗಜ್ಜ.... ನೆಂಟರು ಕಟ್ಟಿಕೊಂಡು ಹೋಗುತ್ತಿದ್ದ ಸಂಭಂಧಿಕರ ಮನೆಗಳು..
ಇದೆಲ್ಲ ತಲೆತುಂಬ ಕೂದಲು ಗಾಳಿಗೆ ನಾನೇನು ಕಮ್ಮಿ ಎಂದು ಮೈ ಕೊಡವಿ .. ಎದ್ದೆದ್ದು ಹಾರುತ್ತಿದ್ದ ದಿನಗಳು... ಎದುರು ನೋಡಿದಾಗ ಕನ್ನಡಿ ಇದೆ... ಏನಯ್ಯ ನಿನ್ನ ಟೆನ್ಷನ್ ಅಂತ ಬೇಸತ್ತು ತಲೆ ಕೂದಲೆಲ್ಲ ಮಾಯವಾಗಿವೆ.. ಹೀಗಿದ್ರೂ ಪರ್ವಾಗಿಲ್ಲ ನಗು ಅನ್ನೋದು ನನ್ನ ಜೊತೆಗೇ ಇದೆ..ಒಳ್ಳೊಳ್ಳೆ ಗೆಳೆಯರ ಹಾಗೆ...ಆಕ್ಷನ್-ಕಟ್ ಗಳ ಮಧ್ಯೆ ಒಂದಷ್ಟು ತಮಾಷೆಯ ಹರಟೆಗಾಗಿ.. ನಿಮ್ಮ ಈ ಕನಸಲ್ಲಿ ನನ್ನ ಕನಸು ನನಸುಗಳ ಮುಖ ತೋರಿಸೋ ಪ್ರಯತ್ನ ಮಾಡ್ತಿದ್ದೇನೆ . ಇಷ್ಟ ಪಟ್ಟು ಜಾಗ ಕೊಡ್ತೀರ ......ಓದೋರ ಕಷ್ಟ ಗೊತ್ತಿಲ್ಲ..... ನಮಸ್ಕಾರಗಳೊಂದಿಗೆ,
ಮತ್ತೆ ಭೇಟಿಯಾಗೋಣ.
ಕ್ಷಮಿಸಿ ಹೆಸರು ಹೇಳೋದೆ ಮರ್ತಿದ್ದೆ
- ವಿನು ಬಳಂಜ.
ವೈವಿಧ್ಯ
ಝೂಝೂ (Zoozoo) ಲಾಲಿ...
ಐಪಿಎಲ್ ಮುಗೀತು.. ಆದ್ರೆ ಅದರ ಜತೆಗೆ ಬಂದ ಹಲವಾರು ವಿಚಾರಗಳು ನಮ್ಮ ಜತೇನೇ ಉಳಿಯೋದು ಗ್ಯಾರಂಟಿ. ಝೂಝೂ (Zoozoo)ಗಳನ್ನು ನಾವಿನ್ನಂತೂ ಮರೆಯೋದಕ್ಕೆ ಸಾಧ್ಯಾನೇ ಇಲ್ಲ.
ಇದರ ಬಗ್ಗೆ ಗೊತ್ತಿಲ್ಲದವರಿಗೆ ಇಲ್ಲೊಂದಿಷ್ಟು ಮಾಹಿತಿ: ಈ ಬಾರಿಯ ಐಪಿಎಲ್ ಸೀಜನ್ ನ ವೇಳೆಗೆ ವೋಡಫೋನ್ ಮೊಬೈಲ್ ಕಂಪೆನಿ ಹೊರತಂದ ಜಾಹೀರಾತು ಸರಣಿಯಲ್ಲಿ ಬರುವ ಪಾತ್ರಗಳು ಈ ಝೂಝೂಗಳು. ನೋಡೋದಕ್ಕೆ ಯಾವುದೋ ಬೇರೆ ಗ್ರಹದಿಂದ ಬಂದಂತೆ ಕಾಣುವ, ಕಾರ್ಟೂನ್ ಅಥವಾ ಕಂಪ್ಯೂಟರ್ ಅನಿಮೇಶನ್ ಅನಿಸುವ ಪಾತ್ರಗಳು ಇವು. ಆದರೆ ಇವು ನಿಜವಾಗಿಯೂ ಮುಖವಾಡ ಮತ್ತು ವೇಷ ತೊಟ್ಟ ಮನುಷ್ಯರು. ಯಾವುದೇ ಗ್ರಾಫಿಕ್ಸ್ ಇಲ್ಲಿ ಬಳಕೆಯಾಗಿಲ್ಲ.
ಆದರೆ ಈ ಝೂಝೂ ಗಳು ಮಾತ್ರ ಇದೀಗ ಎಲ್ಲರ ಮನಸ್ಸಲ್ಲಿ ನಲಿದಾಡ್ತಾ ಇದ್ದಾವೆ. ಇವುಗಳು ಯಾವ ಲೋಕದಿಂದ ಬಂದ ಜೀವಿಗಳು ಅಂತ ಯಾರಿಗೂ ಗೊತ್ತಿಲ್ಲ. ಆದರೆ ನಮಗೆಲ್ಲ ಹತ್ತಿರದ ವ್ಯಕ್ತಿಗಳಾಗಿದ್ದಾರೆ ಖಂಡಿತಾ. ಸುಮಾರು 25ಕ್ಕೂ ಹೆಚ್ಚು ಜಾಹೀರಾತು ತುಣುಕುಗಳೊಂದಿಗೆ ಈ ಐಪಿಎಲ್ ಸೀಜನ್ ನ ತುಂಬಾ ಮೂಡಿ ಬಂದ ಈ ಪಾತ್ರಗಳು ನಮ್ಮ ಮನಸ್ಸನ್ನು ತಟ್ಟಿದ್ದು ಅದ್ಭುತ.
ಬಹುಶಃ ಈ ಐಪಿಎಲ್ ನ ನಿಜವಾದ ಹೀರೋಗಳು ಇವರು. ಪಾಪ ಅವರ ಭಾಷೆ ನಮಗೆ ಅರ್ಥ ಆಗೋಲ್ಲ. ನಮ್ಮ ಭಾಷೆ ಅವರು ಮಾತಾಡೋಲ್ಲ. ಆದ್ರೆ ಬಂದು ಹೋಗೋ ಹೊತ್ತಿಗೆ, ಬರೀ ಇಪ್ಪತ್ತು ಮೂವತ್ತು ಸೆಕೆಂಡುಗಳಲ್ಲಿ ಹೇಳಬೇಕಾದ್ದು ಹೇಳಿ ಆಗಿರುತ್ತದೆ. ನಮಗೆ ಅರ್ಥವಾಗಬೇಕಾದ್ದು ಗೊತ್ತಾಗಿರುತ್ತದೆ. ಇಂತಹಾ ಮ್ಯಾಜಿಕ್ ಮಾಡಿರೋ ಈ ಝೂಝೂಗಳನ್ನು ಸ್ವಲ್ಪ ಹತ್ತಿರದಿಂದ ನೋಡೋ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದ್ರೆ ಇವೆಲ್ಲಾ ತಯಾರಾಗಿದ್ದು ಐಪಿಎಲ್ ಸಧ್ಯ ನಡೀತಾ ಇರೋ ದಕ್ಷಿಣ ಆಫ್ರಿಕಾದಲ್ಲೇ. ಆದ್ರೆ ಅದನ್ನು ಮಾಡಿದ ಕಂಪನಿ ನಮ್ಮ ಬೆಂಗಳೂರಿನ ನಿರ್ವಾಣ ಪ್ರೊಡಕ್ಷನ್ಸ್.
ಅವರು ಕಳೆದ ಬಾರಿಯ ಒಂದು ವೊಡಾಫೋನ್ ಜಾಹೀರಾತಿಗೂ ಕೆಲಸ ಮಾಡಿದ್ರು. ಅವರ ಬ್ಲಾಗ್ (http://nirvanafilms.blogspot.com) ಒಂದಕ್ಕೆ ಇಣುಕಿ ನೋಡಿದಾಗ ಅವರು ಬರೆದಿರೋ ಈ ಸಾಲು ಗಮನಕ್ಕೆ ಬಂತು.
'In a world where we seem focused on a recession, an election, and most things dull and boring, the Zoozoo's are a breath of fresh air'. ( ಜಾಗತಿಕ ಆರ್ಥಿಕ ಹಿಂಜರಿತ, ಇಲೆಕ್ಷನ್, ಮತ್ತಿತರ ಬೋರಿಂಗ್ ಸಂಗತಿಗಳ ಮಧ್ಯೆ ಝೂಝೂಗಳು ಹೊಸ ತಾಜಾತನ ತಂದು ಕೊಡುತ್ತವೆ.)
ಇದು ನಿರ್ವಾಣ ಸಂಸ್ಥೆಗೆ ಬಂದ ಎಸ್ ಎಂ ಎಸ್ ನ ಸಾರ ಅಂತೆ. ನಾವ್ಯಾರೂ ಇದನ್ನು ಒಪ್ಪದೇ ಇರೋದಿಲ್ಲ, ಏನಂತೀರಾ.
ಹೀಗೆ ಪ್ರತಿದಿನವೂ ಒಂದೊಂದು ಜಾಹೀರಾತು ತುಣುಕುಗಳು ಬರ್ತಾ ಇದ್ದಿದ್ದೇ ಇದರ ಇನ್ನೊಂದು ಮಜಾ. ಪ್ರತಿ ದಿನವೂ ಎಲ್ಲರೂ ಹೊಸ ಜಾಹೀರಾತು ಬರೋದನ್ನೇ ಕಾಯ್ತಾ ಇದ್ದದ್ದೂ ಹೌದು.
ಈ ಝೂಝೂಗಳು ಒಂಥರಾ ಅಜಾತ ಶತ್ರುಗಳ ರೀತಿ. ಎಲ್ಲರೂ ಇದನ್ನು ಇಷ್ಟಪಡೋರೇ. ಆದ್ರೆ ಇವುಗಳನ್ನು ಇಷ್ಟ ಪಡದೇ ಇರೋರು ಇದ್ರೆ ಅದು ಉಳಿದ ಮೊಬೈಲು ಕಂಪೆನಿಯ ಮಂದಿ. ಅವರೂ ಇದರ ಮೋಡಿಗೆ ಮರುಳಾದವ್ರೇ ಇರ್ಬೇಕು. ಆದ್ರೆ ಒಳಗೊಳಗಿಂದ.
ಹೀಗೆ ಸಾಗ್ತಾ ಇರೋ ನಮ್ಮ ಝೂಝೂಗಳು ವೋಡಫೋನ್ ನ ನಾಯಿಮರಿಯ ರೀತಿ ಇನ್ನೂ ಬೆಳೆಯೋ ಲಕ್ಷಣ ಕಂಡುಬರ್ತಾ ಇದೆ. ಉಳಿದೆಲ್ಲಾ ಮೊಬೈಲ್ ಕಂಪನಿಗಳ ಜಾಹೀರಾತುಗಳಿಗಿಂತ ಭಿನ್ನವಾಗಿ ಕಂಡುಬರೋ ಜಾಹೀರಾತುಗಳನ್ನೇ ಹೊರತರೋ ವೋಡಫೋನ್ ಖಂಡಿತಾ ಎದ್ದು ನಿಲ್ಲುತ್ತೆ.
-ಬಡೆಕ್ಕಿಲ ಪ್ರದೀಪ
ವರದಿಗಾರರು - ಆಜ್ ತಕ್
ಪ್ರಾದೇಶಿಕ ಸುದ್ದಿ
ಸುಬ್ರಹ್ಮಣ್ಯ: ಗುಂಡ್ಯ ಜಲ ವಿದ್ಯುತ್ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗದಂತೆ ಸರಕಾರವು ಎಚ್ಚರ ವಹಿಸಬೇಕಾಗಿದೆಯಲ್ಲದೆ ಈ ಯೋಜನೆಯ ವಿರೋಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸರಕಾರವನ್ನು ಒತ್ತಾಯಿಸಿದ್ದಾರೆ.ಅವರು ಶನಿವಾರದಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಗುಂಡ್ಯ ಜಲವಿದ್ಯುತ್ ಯೋಜನೆಯ ಜಾರಿಯ ಬಗ್ಗೆ ಪ್ರತಿಕ್ರಿಯಿಸಿದರು.
ಗುಂಡ್ಯ ಜಲವಿದ್ಯುತ್ ಯೋಜನೆಯ ವಿರುದ್ಧ ಪರಿಸರವಾದಿಗಳೊಂದಿಗೆ ಹೋರಾಟಕ್ಕಿಳಿದಿದ್ದ ಕುಕ್ಕೆ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ, ಇಂದು ರಾಜ್ಯದಲ್ಲಿರುವ ವಿದ್ಯುತ್ ಕೊರತೆ ನೀಗಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿರುವುದು ಅಗತ್ಯ.ಈ ಕೊರತೆಯನ್ನು ನೀಗಿಸಲು ವಿದ್ಯುತ್ ಪೂರೈಕೆ ಹಾಗೂ ತಯಾರಿಕೆ ಕೂಡಾ ಅಗತ್ಯವಾಗಿದೆ. ಹಾಗಾಗಿ ಸರಕಾರ ಪ್ರಾಯೋಜಿತ ಅಭಿವೃದ್ಧಿ ಕಾರ್ಯಗಳಿಗೆ ವಿರೋದವಿಲ್ಲ. ಆದರೆ ಇಂತಹ ಪರಿಸರ ವಿರೋಧಿ ಯೋಜನೆಗಳಿಗೆ ವಿರೋಧವಿದೆ ಎಂದ ಸ್ವಾಮೀಜಿ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಜನರಿಗೆ ತಿಳಿಸಬೇಕು ಎಂದ ಅವರು ಇಂತಹ ಯೋಜನೆಗಳ ಜಾರಿಗೆ ಮುನ್ನ ದಕ್ಷಿಣ ಕನ್ನಡ ಮಾತ್ರವಲ್ಲ ಇಡೀ ರಾಜ್ಯಕ್ಕೆ ಮಳೆಬೆಳೆಗೆ ಕಾರಣವಾಗುವ ಪಶ್ಚಿಮ ಘಟ್ಟಗಳನ್ನು ಕೂಡಾ ಗಣನೆಗೆ ತೆಗೆದುಕೊಂಡು ಕಾರ್ಯಗತ ಮಾಡಬೇಕು ,ಈ ಯೋಜನೆ ಜಾರಿಯಿಂದಾಗುವ ಸಾಧಕ ಬಾಧಕಗಳನ್ನು ಕೂಡಾ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಈ ವಿದ್ಯುತ್ ಯೋಜನೆಯಲ್ಲಿ ಅಧಿಕಾರಿಗಳು ನೀಡುವ ಪರಿಸರ ಹಾನಿಗಿಂತ ಹೆಚ್ಚಿನದು ಅಲ್ಲಿ ನಾಶವಾಗುತ್ತದೆ.ಹಾಗಾಗಿ ಅಧಿಕಾರಿಗಳು ನೀಡುವ ವರದಿ ಜಾರಿಗೆ ಮುನ್ನ ಯೋಜನೆಯ ವಿರುದ್ದ ಹೋರಾಟ ಮಾಡುವ ಪರಿಸರ ಪ್ರಿಯರನ್ನೂ ಗಣನೆಗೆ ತೆಗೆದುಕೊಳ್ಳಬೇಕು ಮತ್ತು ಪರಿಸರ , ಜೀವ ವೈವಿಧ್ಯ ನಾಶವಾಗದಂತೆ ಎಚ್ಚರ ವಹಿಸಬೇಕು ಎಂದಿದ್ದಾರೆ.
ಪ್ರಾದೇಶಿಕ ಸುದ್ದಿ
ಮಗಳ ಸಹಿತ ಬಲಿಯಾದ ಪುತ್ತೂರಿನ ದಂಪತಿ
ಮಂಗಳೂರು,ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬಳೆಗಾರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಅದಿರು ಲಾರಿಯೊಂದು ಮಾರುತಿ ಓಮ್ನಿಗೆ ಡಿಕ್ಕಿ ಹೊಡೆದಿ ಸಂಭವಿಸಿದ ಭೀಕರ ಅಫಘಾತದಲ್ಲಿ ಪತಿ,ಪತ್ನಿ ಹಾಗೂ ಮಗು ಸೇರಿದಂತೆ ಪುತ್ತೂರು ತಾಲೂಕು ಪುದ್ದೋಟು ಬೈಲು ಎಂಬಲ್ಲಿಯ ಒಂದೇ ಕುಟುಂಬದ ಮುವರು ಸಾವನ್ನಪ್ಪಿದ್ದು ಇತರ 5 ಜನ ತೀವ್ರ ಗಾಯಗೊಂಡಿದ್ದಾರೆ
ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೃತರನ್ನು ಹುಬ್ಬಳ್ಳಿಯ ರೈಲ್ವೇ ಇಲಾಖೆ ಉದ್ಯೋಗಿಯಾಗಿದ್ದ ತಾರಾನಾಥ ತಿಮ್ಮಪ್ಪ ಗೌಡ(45),ಅವರ ಪತ್ನಿ ಜಯಲಕ್ಷ್ಮಿ(40) ಮತ್ತು ಮಗಳು ತನುಶ್ರೀ(5)ಎಂದು ಗುರುತಿಸಲಾಗಿದೆ.
ತಾರಾನಾಥ ಮುಲತಃ ಪುತ್ತೂರಿನ ಪುದ್ದೋಟು ಬೆಟ್ಟಿನವರಾಗಿದ್ದು ಕುಟುಂಬ ಸಹಿತ ಹುಬ್ಬಳ್ಳಿಯಿಂದ ಹುಟ್ಟೂರಿಗೆ ತೆರಳುತ್ತಿದ್ದರು.ಯಲ್ಲಾಪುರದ ಬಳೆಗಾರ ಗ್ರಾಮ ತಲುಪುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಅದಿರು ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಪೋಲೀಸರು ತಿಳಿಸಿದ್ದಾರೆ.ಯಲ್ಲಾಪುರ ಠಾಣಾ ಪೋಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಭಾವನಾ
`ಓಪನ್ ವಿಥ್ ಎ ಕ್ಯೂಟ್ ಸ್ಲೈಲ್...' ಈ ವಾಕ್ಯ ವಿರುವ ಕವರ್ ಒಂದು ನಿನ್ನೆ ನನ್ನ ಟೇಬಲ್ ಮೇಲಿತ್ತು. ಕೂಡ್ಲೆ ಗೊತ್ತಾಯ್ತು ನನ್ ತರ್ಲೆ ತಂಗೀದೇ ಕಾರುಬರು ಇದೂಂತ. ಯಾಕಂದ್ರೆ ಆ ಒಂದು `ವೇದ ವಾಕ್ಯ' ಬಂತೂಂದ್ರೆ ಅದು ಅವಳದ್ದೇ ಎಂಬ ಒಂದು ಗ್ಯಾರಂಟಿ ನಂಗಿದೆ.
ಅಪರೂಪದ ಅಣ್ಣನಿಗೆ...
ನಾವಿಬ್ಬರೂ ಒಂದೇ ಗಿಡದಲ್ಲಿ
ಅರಳದಿದ್ದರೂ...
ಪರಿಚಯವಾದ ಕ್ಷಣದಿಂದ
ನಮ್ಮ ನಡುವೆ ಅಪರೂಪದ ಸಂಬಂಧ...
ದಿನ ಕಳೆದಂತೆ
ನಾವು ಇನ್ನೂ ಹತ್ತಿರವಾಗುತ್ತಿರುತ್ತೇವೆ
ನಿನ್ನ ಕಾಳಜಿ ವಿಶ್ವಾಸಗಳು
ನನ್ನನ್ನು ರೂಪಿಸಿಕೊಳ್ಳಲು ಶ್ರಮಿಸುತ್ತಿವೆ...
`ಚಿಟ್ಟೆ' ತಂಡದ ಕ್ಯೂಟ್ ಗ್ರೀಟಿಂಗ್ ಕವರೊಡೆದಾಕ್ಷಣ ಕಂಡುಬಂತು. ಗೊತ್ತು. ಆಕೆ ಹಾಗೇನೇ ಬರೀತಾಳೇಂತ. ಯಾಕಂದ್ರೆ ಸಿಕ್ಕಾಪಟ್ಟೆ ಪುಸ್ತಕ ಓದೋ ಪುಸ್ತಕದ ಹುಳು ಅವಳು. ಇತ್ತೀಚೆಗೆ ಒಂದಷ್ಟು ಕೋಪ, ಬೇಜಾರು, ಹುಸಿಮುನಿಸು ಅಣ್ಣನ ಮೇಲಾಗ್ತಿದೆ. ಪರವಾಗಿಲ್ಲ... ಆದ್ರೂ ಅಣ್ಣನೆಂಬ ಪ್ರೀತಿ ಆಕೆಯ ಮನದಲ್ಲಿ ನಿರಂತರವಾಗಿರುತ್ತದೆಂಬ ಒಂದು ಸತ್ಯ ನನಗೆ ಚೆನ್ನಾಗಿ ಗೊತ್ತಿದೆ.
ಅಣ್ಣಾ
ಈ ದಿನ ನಿನಗೆ ನೆನಪಿದೆ ಅಲ್ವಾ...ಹಾಗೇ ಈ ದಿನದ ಸವಿನೆನಪಿಗಾಗಿ ನನಗಿಷ್ಟವಾದ ಒಂದೆರಡು ತುಣುಕುಗಳು..
``ಕವಲೊಡೆದ ದಾರಿಯಲ್ಲಿ ಕೈಗೆಟುಕದ ಹೂವುಗಳೆಷ್ಟೋ
ತಳ ಒಡೆದ ದೋಣಿಯಲ್ಲಿ ಅಬ್ಬರಿಸುವ ಅಲೆಗಳೆಷ್ಟೋ
ಮನಸಿನ ಮನೆಗೆ ಬಾರದ ಬಯಕೆಗಳೆಷ್ಟೋ
ಅಣ್ಣಾ ನಿನ್ನ ಒಲವಿನ ದೀಪದಲ್ಲಿ ಉರಿಯುವ ಹಣತೆ ನಾನು...
ಆರದಿರಲಿ ನಮ್ಮ ಒಲವು ಬೆಳಕು''
* * *
``ಮನುಷ್ಯ ಸಂಬಂಧಗಳೆಲ್ಲಾ ಈರುಳ್ಳಿಯಂತೆ
ಬಂಗಾರದ ಬಣ್ಣದಲ್ಲಿ ಹೊಳೆಯುವ ಸಿಪ್ಪೆ ಇದ್ದರೇನೇ
ಅದು ಚೆನ್ನಾಗಿರುತ್ತೆ.
ಇಲ್ಲದಿದ್ದರೆ ಕಣ್ಣೀರು ತರಿಸುತ್ತದೆ.''
* * *
``ಬದುಕು ನಡೆದಾಡುವ ನೆರಳು. ರಂಗ ಮಂಚದ ಮೇಲೆ
ಒಂದು ಗಂಟೆ ಹೆಮ್ಮೆಯಿಂದ ಬೀಗುತ್ತ, ನಡೆದಾಡುವ
ಸಿಡುಕುವ ಅನಂತರ ಹೇಳ ಹೆಸರಿಲ್ಲದೆ ಹೋಗುವ
ನಟ ಮೂರ್ಖನೊಬ್ಬ ಹೇಳುವ ಕಥೆ , ಆವೇಶ ಮಾತಿನಬ್ಬರಗಳೇ
ಇರುವ ಅರ್ಥವೇ ಇಲ್ಲದ ಕಥೆ''
* * *
ಪ್ರೀತಿಯ ಅಣ್ಣಾ...
ಕ್ಷಣ ನಿನ್ನ ನೆನೆಸಿಕೊಂಡರೆ ಸಾಕು... ಕಳೆದು ಹೋಗಿರುವುದೆಲ್ಲಾ ... ಮತ್ತೆ ಸಿಕ್ಕಷ್ಟು ಸಂತೋಷ. ಮಾತು ಮಾತಾಡುತ್ತಲೇ , ತಂಗಿ ಅನ್ನುತ್ತಲೇ ನನ್ನೆಲ್ಲಾ ದುಃಖಗಳ ಹೇಳ ಹೆಸರಿಲ್ಲದಂತೆ ಮಾಡಿಬಿಡುವೆಯಲ್ಲಾ ಮುದ್ದು ಅಣ್ಣಾ...
ಅಂದಿನಿಂದಲೂ
ನನ್ನ ಸೌಖ್ಯವನ್ನು
ಅಂಗೈ ಮೇಲಿನ ಹೂವಿನಂತೆ
ಕಾಪಾಡಿಕೊಂಡು ಬಂದಿರುವ
ಒಲವಿನ ಅಣ್ಣ...
ಮುದ್ದು ಅಣ್ಣಾ...
ಪುಟ್ಟ ಎರಡು ಹೆಜ್ಜೆಯ ಅಂಬೆಗಾಲಿಡುತ್ತಿರುವ
ನಮ್ಮಿಬ್ಬರ ಬಾಂಧವ್ಯ ಹೀಗೇ
ಇರಲಿ ಕಣೋ...
ಎಂದು ಬಯಸುವ ನಿನ್ನ ಪ್ರೀತಿಯ ತಂಗಿ.
ಬೊಗಸೆ ತುಂಬಾ ಪ್ರೀತಿ ತುಂಬಿ ಇಟ್ಟಿರ್ತೀನಿ ತಗೋ ಆಯ್ತಾ ಪುಟ್ಟು...
ಇದು ಆಕೆಯ ಶುಭಾಷಯ ಪತ್ರದಲ್ಲಿದ್ದಿದ್ದು.
ಆಕೆ ಇಷ್ಟು ದಿನ ಲೇಖನಗಳನ್ನು ಮಾತ್ರ ಬರೀತಿದ್ಳು. ಆದ್ರೆ ಈ ಗ್ರೀಟಿಂಗ್ಸ್ ನೋಡಿ ಆಕೆ ಕವಿಯೂ ಆಗಿದ್ದಾಳೆ ಅಂತ ಗೊತ್ತಾಗಿದೆ. ಇರ್ಲಿ. ಈ ಗ್ರೀಟಿಂಗ್ಸ್ನ್ನು ಹೀಗೇ ಪಬ್ಲಿಷ್ ಮಾಡಿದ್ದಕ್ಕೆ ಒಂದಷ್ಟು ಪ್ರೀತಿಯ ಬೈಗುಳ ಇದ್ದೇ ಇದೆ. ಅದು ಗೊತ್ತಿದ್ದೂ ನಿಮಗೂ ತಿಳಿಸ್ತಿದ್ದೀನಿ.
ಅಂದ ಹಾಗೇ ಗ್ರೀಟಿಂಗ್ ಕಳಿಸೋಕೆ ಇರೋ ಕಾರಣ ಹೇಳೋದನ್ನು ಮರ್ತೇ ಬಿಟ್ಟಿದ್ದೆ.... ಇಂದು(ಮೇ 23) ಆಕೆಗೂ ನನಗೂ ಪರಿಚಯವಾಗಿ ಎರಡು ವರ್ಷ ತುಂಬಿ ಮೂರನೇ ವರ್ಷಕ್ಕೆ ಕಾಲಿಡುತ್ತಿರುವ ಶುಭಾವಸರ....! ತಂಗಿ ನೆನಪಲ್ಲಿ ಶುಭಾಷಯ ಪತ್ರ ಕಳಿಸಿದ್ದಾಳೆ. ನಾನೇನು ಕೊಡೋದ್ ಯೋಚಿಸ್ತಿದ್ದೇನೆ. ತಂಗಿಗೆ ಅಣ್ಣನ ಪ್ರೀತಿಗಿಂತ ಹೆಚ್ಚೇನನ್ನು ಕೊಡಲು ಸಾಧ್ಯ ಅಲ್ಲವೇ. ಆ ಪ್ರೀತಿ ಕೊನೇ ತನಕ ಇದ್ದೇ ಇರುತ್ತೆ...
- ಹರೀಶ್ ಕೆ.ಆದೂರು.
ಭಾವನಾ
ಎಲ್ಲ ಹೊಸತು.ಬೆಳಗಿನ ಇಬ್ಬನಿಯಂಥ ಮಳೆ. ಆ ಮಳೆಯಲ್ಲಿ ಜಿಂಕೆಯಂತೆ ಕುಣಿದಾಡಿದ್ದೆ. ಅಷ್ಟೊತ್ತಿಗೆ ನೀನು ಬಂದಿದ್ದೆ ಬದುಕಿಗೆ ಉತ್ಸಾಹ ತುಂಬೋ ಪ್ರೀತಿಯ ಹುಟ್ಟನ್ನಿಡು.ಅಂದು ನನ್ನ ಮುಖದಲ್ಲಿ ಅದೆಂಥಾ ಹೊಳಪಿತ್ತು ನೋಡಿದ್ದೀಯಾ.... ಎಲ್ಲಾ ಹೀಗೆ ಇರಬಾರದಾ ಅಂದುಕೊಂಡಿದ್ದೆ.
ಅಂದುಕೊಂಡದ್ದೇ ಒಂದು ಆದದ್ದೇ ಇನ್ನೊಂದು. ತುಂತುರು ಮಳೆಯೊಂದಿಗೆ ಗುಡುಗು ದನಿಗೂಡಿಸಿತು.ನೀನು ಬದಲಾಗಿದ್ದೀಯಾ ಅಂತ ತಪ್ಪು ಹೊರಿಸತೊಡಗಿದೆ. ದೂರಾಗತೊಡಗಿದೆ. ಕಾರಣ ಹುಡುಕಿದೆ. ಹುಚ್ಚು ಮಾತುಗಾರ್ತಿ ಮೌನಿಯಾದೆ. ಮನಸ್ಸಿನಲ್ಲಿ ಮಾಸದ ಮರೆಯಾಗದ ಪ್ರೀತಿ ಅರ್ಥವಾಗಲಿಲ್ಲ ನಿನಗೆ.
ಬಹುಶ: ಒಳಗೊಂದು ಹೊರಗೊಂದು ಅಂತ ನಾಟಕವಾಡಿದ್ದರೆ ಎಲ್ಲವೂ ಸರಿಹೋಗುತ್ತಿತ್ತು. ತೋರಿಕೆಗಾಗಿ ನಿನ್ನನ್ನು ಪ್ರೀತಿಸುತ್ತಿದ್ದರೆ ನೆನಪು ಕಾಡುತ್ತಿರಲಿಲ್ಲ. ಬಿಡು ಈಗ ಮಾತುಕತೆ ಯಾವುದೂ ಬೇಕಾಗಿಲ್ಲ.
ನಾನು ಬದಲಾಗಬೇಕು.... ಬದಲಾವಣೆ ಎಂದರೆ ಪ್ರಗತಿಯಂತೆ. ಹೇಗೆ ಬದಲಾಗಲಿ...ನಿನಗಾಗಿ ಭಾವನೆಗಳೇ ಇಲ್ಲದ ಗಂಡುಬೀರಿ ಹುಡುಗಿ ಭಾವುಕಳಾದೆ.ಹುಚ್ಚು ಮಾತಿನ ಮಲ್ಲಿಯಾಗಿದ್ದವಳು ಮಾತು ಬಾರದೆ ಮೌನಿಯಾಗಿರುವೆ. ಈಗೀಗ ಮಾತಿಗಾಗಿ ತಡಕಾಡುತ್ತಿರುವೆ.ನೀನು ನನ್ನನ್ನು ಮೌನದಲ್ಲೂ ಮಾತಾನಾಡಿಸಿತ್ತಿದ್ದೀಯಾ....ನಾನು ನಡೆದು ಬರುವ ದಾರಿಯಲ್ಲಿ ಜೊತೆಗೆ ನೀನಿದ್ದೀಯಾ ಎಂದು ಎಣಿಸಿಯೇ ಅದೆಷ್ಟು ಮಾತನಾಡಿದ್ದೇನಾ ನನಗಂತೂ ತಿಳಿಯದು.
ಅಮ್ಮ ಅಂದ್ರು ತುಂಬಾ ಮಾತು ಕಡಿಮೆ ಮಾಡಿದ್ದೀಯಾ ಅಂತ. ಹೌದು ಈಗೀಗ ಮನಸ್ಸು ಸುಮ್ಮನೆ ಪುರುಸೊತ್ತಿಲ್ಲದೆ ಮಾತನಾಡುತ್ತಿದೆ. ಅದಕ್ಕೂ ಒಂಟಿತನ.... ಸುಮ್ಮನೆ ಮಾತನಾಡುತ್ತಿಲ್ಲ... ನಿನ್ನೊಂದಿಗೆ ಹಂಚಿಕೊಳ್ಳಬೇಕಂತ ಭಾವನೆಗಳ ರೂಪ ಹುಡುಕುತ್ತಿದೆ.ನೀನೇ ಹೇಳಿದ್ಯಲ್ವಾ ಬದಲಾಗು ಅಂತ... ಅದಕ್ಕೆ ನಾನೇ ಅವುಗಳಿಗೆಲ್ಲ ಕಡಿವಾಣ ಹಾಕಿದ್ದೇನೆ.
ಯಾವತ್ತೂ ದೇವರನ್ನು ನನಗಾಗಿ ಬೇಡಿಕೊಳ್ಳದವಳು ಮೊನ್ನೆಯಿಂದ ಬೇಡುತ್ತಿದ್ದೇನೆ. ನನಗೆ ಅಲ್ಝೈಮರ್ ಬರಲಿ ಅಂತ ಯಾಕ್ ಗೊತ್ತಾ ಅದು ಮನಸ್ಸನಿಂದ ನೆನಪುಗಳನ್ನು ಅಳಿಸಿ ಹಾಕುವ ಕಾಯಿಲೆಯಂತೆ.
ನಾವು ಯಾರಿಗೂ ನೋವನ್ನುಂಟು ಮಾಡಬಾರದು. ನಮ್ಮ ಉಪಸ್ಥಿತಿ ಇನ್ನೊಬ್ಬರ ನೆಮ್ಮದಿಯನ್ನು ಹಾಳುಮಾಡಬಾರದು. ಯಾಕೋ ಯಾರೊಂದಿಗೂ ಸ್ಪಂದಿಸಲಾಗುತ್ತಿಲ್ಕ. ಬದುಕು ಸಾಕಾಗಿದೆ. ಯಾರೂ ಇಲ್ಲದ ಯಾವ ಬಾಂಧವ್ಯ ಬೆಸೆಯದ ಕಡೆ ಹೋಗಬೇಕೆಂದು ಹೊರಟಾಗಿದೆ. ಎಲ್ಲವೂ ಪ್ರಶ್ನೆಯಾಗಿದೆ ಆ ಪ್ರಶ್ನೆಗೆಲ್ಲ ಉತ್ತರ ಹುಡುಕ ಹೊರಟರೆ ಬದುಕೇ ಪ್ರಶ್ನೆಯಾಗಿಬಿಡುತ್ತದೆ.
-ಅಂತರ್ಮುಖಿ
ಯುವಾ...
ಹಿಂದೆ ಹೀಗೆ ಚಿಮ್ಮುತ್ತಿತ್ತು
ಕಣ್ಣ ತುಂಬಾ ಪ್ರೀತಿ
ಈಗ ಯಾಕೆ ಜ್ವಲಿಸುತ್ತಿದೆ
ಏನೋ ಶಂಕೆ ಭೀತಿ...
ಯಾಕೋ ಈ ಎರಡು ಸಾಲುಗಳು ಮತ್ತೆ ಮತ್ತೆ ಆಕೆಯನ್ನು ಕಾಡುತ್ತಲೇ ಇರುತ್ತದೆ. ಎಷ್ಟು ಮರೆಯಬೇಕೆಂದರೂ ಮರೆಯೋಕೆನೇ ಆಗ್ತಿಲ್ಲ.ಕನಸಿನಲ್ಲಿಯೂ ಕಲ್ಪಿಸಿರದಷ್ಟು ಪ್ರೀತಿಯನ್ನು ಮೊಗೆಮೊಗೆದು ನೀಡಿದ್ದ ಆತ.
ಆತನ ಮಡಿಲಲ್ಲಿ ಆಕೆ ಪುಟ್ಟ ಮಗುವಾಗಿದ್ದಳು. ಆ ಸ್ವಚ್ಛ ಮುತ್ತಿನಂಥ ಪ್ರೀತಿಗೆ ಯಾರ ಕಣ್ಣು ತಾಕಿತೋ ? ಇಬ್ಬರೂ ಇದ್ದಕ್ಕಿದ್ದಂತೆ ದೂರವಾದರು. ಆತ ಬ್ಯುಸಿಯಾದ ವೃತ್ತಿಯ ನಡುವೆಯೂ ಆಕೆಗೆ ಮೇಸೇಜ್ ಕಾಲ್ ಮಾಡಿದ್ದ. ಯಾವುದಕ್ಕೂ ಉತ್ತರ ನೀಡುವ ತಾಳ್ಮೆ ಆಕೆಗಿರಲಿಲ್ಲ.
ಆತನಿಂದ ದಿನದಿಂದ ದಿನಕ್ಕೆ ದೂರವಾಗ್ತಾನೆ ಹೋದ್ಲು.ಕಳೆದುಕೊಳ್ಳುವುದರಿಂದಲೇ ಮನುಷ್ಯ ಪಡೆಯುತ್ತಾನಂತೆ ಎಂಬ ಭ್ರಮೆ ಅವಳಲ್ಲಿತ್ತು. ಆದರೆ ಎಲ್ಲ ಕಳೆದುಕೊಂಡ ಮೇಲೆ ಪಡೆಯೋದು ಏನಿದೆ ?. ಆತ ಅದೆಷ್ಟು ಬಾರಿ ಕೇಳಿದನೋ ಯಾಕೆ ನೀನು ಮಾತನಾಡುತ್ತಿಲ್ಲ ಎಂದು. ಆದರೂ ಆಕೆಯ ಉತ್ತರವಿಲ್ಲ. ಇಷ್ಟೇ ಸಾಕಾಯಿತು ಆತನಿಗೆ . . . ದೂರಾದ. ಸ್ವಾರಿ ಕಣೋ ಅಂದುಬಿಟ್ಟು ಫೋನ್ ಮಾಡಿದಳು. ಅದೇ ಆತ್ಮೀಯತೆ, ಸ್ನೇಹ ಇತ್ತು ಅದೇ ಪ್ರೀತಿ ಮಾತ್ರ ಇರಲಿಲ್ಲ.
ಆಕೆ ಎಣಿಸಿದ್ದಳು ಆತ ತುಂಬಾ ಸಂತೋಷದಲ್ಲಿದ್ದಾನೆಂದು. ಆತ ಮಾತ್ರ ಬ್ಯುಸಿಯಾಗಿದ್ದ ವೃತ್ತಿಯಲ್ಲಿ ಹೈರಾಣಾಗಿದ್ದ. ದಿನದಿಂದ ದಿನಕ್ಕೆ ಕುಸಿದು ಹೋಗುತ್ತಿದ್ದ ಸಾಂತ್ವನ ಬೇಕಿತ್ತು. ಆದ್ರೆ ಆಕೆ ಹಠಕ್ಕೆ ಬಿದ್ದು ದೂರವಾಗಿದ್ದಳು. ಬಯಸಿ ಬಯಸಿ ತಪ್ಪು ಮಾಡಿದ್ದಳು. ಒಂದು ಚಿಕ್ಕ ಸಂಶಯ ಆಳುತ್ತಿತ್ತು. ಹೇಳಿಕೊಳ್ಳಲಾಗದ ಸಂಕಟ.
ಆತನ ಮುದ್ದು ಆಕೆಯಲ್ಲಿ ಸ್ಫೂರ್ತಿಯನ್ನು ತುಂಬಿತ್ತು.ಬದುಕು ಬೆಳೆದಂತೆ ಆಕೆ ಮುಗ್ಧವಾಗ್ತಾ ಹೋದಳು. ಸಣ್ಣ ವಿಚಾರಕ್ಕೂ ಕೋಪಿಸಿಕೊಳ್ಳುತ್ತಿದ್ದಳು, ಹಠಹಿಡಿದು ಕೂರುತ್ತಿದ್ದಳು. ಆತನ ಮಾತಿಗಾತಿ ಹಂಬಲಿಸ್ತಾ ಮೌನಿಯಾಗ್ತಾ ಹೋದಳು. ಆಕೆಯ ಮುಗ್ಧ ಮುನಿಸೇ ಈಗ ರಂಪಾಟವನ್ನು ಎಬ್ಬಿಸಿದೆ. ಕನಸುಗಳನ್ನು ಅಲ್ಲೋಲಕಲ್ಲೋಲಮಾಡಿದೆ,. ಯಾಕೋ ಒಂದು ಮಾತಿನಿರಿತವನ್ನು ತಡೆಯದಾಯಿತು ಪ್ರೀತಿ...
-ಅಂತರ್ಮುಖಿ.
ಚಿತ್ರಿಕೆ
ಮಕ್ಕಳ ಸಮೂಹ. ಅವರ ಮುಂದೆ ಒಂದು ದೊಡ್ಡ ಗೋಲ. ಅದರೊಳಗೆ ನೂರಾರು ಚೀಟಿ. ಪ್ರಾಣಿ ಪಕ್ಷಿಗಳ ಚಿತ್ರದ ಬಿಡಿ ಭಾಗ. ಅಷ್ಟರೊಳಗೆ ಘಂಟೆ ಹೊಡೆಯುತ್ತದೆ. ಮಕ್ಕಳ ಮುಂದೆ ಚೀಟಿಗಳ ರಾಶಿ ಸುರಿಯುತ್ತಾರೆ. ಸ್ಪರ್ಧೆ ಆರಂಭ. ಚಿರತೆ ಬಾಲ ಹುಡುಕುವುದು, ಹುಲಿಯ ಉಗುರು, ಆನೆ ಸೊಂಡಿಲು...
ಪ್ರತಿ ಕ್ಷಣವೂ ರೋಚಕ. ಮಕ್ಕಳೆಲ್ಲಾ ಹುಡುಕಾಟದಲ್ಲಿ ತೊಡಗುತ್ತಾರೆ. ಮೊಲದ ಕಾಲು ಸಿಕ್ಕಿದೆ. ಮತ್ತೊಂದು ಕಾಲಿಗೆ ಅನ್ವೇಷಣೆ. ಮತ್ತೊಬ್ಬನಿಗೆ ಬಾಲ ಸಿಕ್ಕಿದೆ. ಅದು ಹುಲಿಯದೋ, ಸಿಂಹದ್ದೋ ಅನುಮಾನ. ಪುನಾ ಶುರು ಹುಡುಕಲಿಕ್ಕೆ. ಸರಿಯಾದದ್ದು ಸಿಗುವ ತನಕ. ಹುಡುಕಾಟದ ನಡುವೆ ಸಮಯ ಕಳೆದುಹೋಗುವುದು ತೋರುವುದಿಲ್ಲ. ಗೋಡೆ ಮೇಲೆ ಬಿಸಿಲಿಗೆ ನೆರಳಿರಬಹುದು ; ಸಮಯಕ್ಕೆ ನೆರಳಿಲ್ಲ.
ಸಮಯ ಓಡುತ್ತಿದೆ ; ದಿಕ್ಕಾಪಾಲಾದಂತೆ. ಅದನ್ನು ತಡೆಯುವವರಿಲ್ಲ. ಹಾಗೆಯೇ ಮಕ್ಕಳ ಹುಡುಕಾಟವೂ. ಕೊನೆ ಕೆಲವು ಸೆಕೆಂಡುಗಳಿವೆ. ಎಷ್ಟೋ ಜನ ಸೆಕೆಂಡ್ ಸ್ಥಾನಕ್ಕೆ ಬಂದಾಗಿದೆ. ಮೊದಲನೇ ಸ್ಥಾನಕ್ಕೆ ಬರಬೇಕು. ಅಂದರೆ ಎಲ್ಲ ಚಿತ್ರಗಳು ಪೂರ್ಣಗೊಳ್ಳಬೇಕು. ಮೊಲದ ಎರಡೂ ಕಾಲುಗಳು ಸಿಕ್ಕಿ, ಬಾಲ ಸಿಗಬೇಕು. ಕತ್ತೆ ಕಿರುಬದ ರೂಪ ತಿಳಿಯಬೇಕು. ಹೀಗೆ...
ಪಾದರಸದಂತೆ ಚುರುಕಾಗಿದ್ದ ಹುಡುಗ ತನ್ನ ಅಮ್ಮನ ಕಡೆ ನೋಡುತ್ತಾ, "ಇನ್ನೇನು ಮುಗಿಯಿತು. ಎರಡೇ ಸೆಕೆಂಡ್’ ಎನ್ನುತ್ತಾನೆ. ಅಮ್ಮ ತನ್ನ ಮಗನ ಸಾಧನೆ ಕಾಣಲು ಹತ್ತಿರ ಬರುತ್ತಾಳೆ. ಮತ್ತೊಬ್ಬಳು ಪುಟ್ಟಿ ಪೂರ್ಣಗೊಳಿಸುವುದರಲ್ಲಿ ತಲ್ಲೀನಳಾಗಿದ್ದಾಳೆ. ಅವಳಿಗೆ ಪ್ರತಿಕ್ಷಣವೂ ಮುಖ್ಯ. ಮುಗಿಯಿತೆನ್ನುವಷ್ಟರಲ್ಲಿ ಸಮಯ ಮುಗಿಯಿತು. ಪುನಾ ಗಂಟೆ ಹೊಡೆಯಿತು. ಎಲ್ಲರೂ ಅಲ್ಲೇ ಸ್ತಬ್ಧ.
ಪಾಪ, ಹುಲಿಯ ಮುಖದಲ್ಲಿ ಹಿಂಸೆ ತೋರುತ್ತಿಲ್ಲ. ಹುಲಿ ಎಂದೆನಿಸಲಾರದು. ಮೊಲಕ್ಕೆ ಒಂದೇ ಕಣ್ಣಿದೆ. ಸಿಂಹಕ್ಕೆ ಇನ್ನೂ ಕೇಸರಿ ತೊಡಿಸಿಲ್ಲ. ಆನೆ ತುಳಿಯುತ್ತಿರುವ ಚಿತ್ರಕ್ಕೆ ಒಂದು ಮಗು ಬೇಕಿತ್ತು. ಬೇಟೆಗಾರ ಇನ್ನೂ ಬಿಲ್ಲು "ಹೂಡಿಲ್ಲ’. ವನಸುಮ ಅರಳಿಸಲು ಸ್ವಲ್ಪ ಸಮಯ ಬೇಕಿತ್ತು-ಮೊಗ್ಗೇ ಇದೆ. ಎಷ್ಟೇ ಕಷ್ಟಪಟ್ಟರೂ ಒಂದರ ಕೊರತೆ. ಚಿತ್ರ ಅಪೂರ್ಣ. ಮಕ್ಕಳೆಲ್ಲಾ ಚದುರುತ್ತಾರೆ-ಇನ್ನೆರಡು ನಿಮಿಷ ಕೊಟ್ಟಿದ್ದರೆ...
ಬದುಕಿನ ಚಿತ್ರ ಜೋಡಿಸುವ ಕಾಯಕ. ಬಿಡಿ ಭಾಗಗಳೆಲ್ಲಾ ಒಟ್ಟಿಗೆ ಕಲೆ ಹಾಕಿ ಶುರು ಮಾಡಿಕೊಂಡೆವು. ಸಮಯ ಮುಗಿಯುವುದರೊಳಗೆ ಕೊರತೆ ಇಲ್ಲದಂತೆ ಚಿತ್ರ ಪೂರ್ಣಗೊಳಿಸುವ ಆತುರ. ಎಲ್ಲ ಮುಗಿಸಿದೆವು. ಕಾಲು ಇರುವ ಜಾಗದಲ್ಲೇ ಕಾಲು ಜೋಡಿಸಿದರು. ಹಾಗೆಯೇ ಕಣ್ಣು, ಕಿವಿ, ಮೂಗು, ಬಾಯಿ, ಉಡುಗೆ-ತೊಡುಗೆ. ಕೊನೆಕ್ಷಣದಲ್ಲಿ ಸಣ್ಣ ಗೊಂದಲ-ಕನ್‌ಫ್ಯೂಸ್. ಅದೂ ಬಗೆ ಹರಿಯಿತು. ಆದರೆ ಬಣ್ಣ ಬಳಿಯಲು ಮರೆತೇ ಹೋಯಿತು.
-ಅರವಿಂದ ನಾವಡ
ಸಿನೆಮಾ
ಕೊರೆವ ಚಳಿಯಲ್ಲಿ ತೀವ್ರ ಅಸ್ತಮಾದಿಂದ ಬಳಲುತ್ತಾ ಆತ ಆ ನದಿಯ ದಡದಲ್ಲಿ ನಿಂತಿದ್ದಾನೆ...ಕಣ್ಣುಗಳು ಆಚೆ ದಡದಲ್ಲಿರುವ ಕುಷ್ಟರೋಗಿಗಳ ಕಾಲನಿಯನ್ನೇ ದಿಟ್ಟಿಸುತ್ತಿವೆ. ಮನಸ್ಸಿನ ತುಂಬಾ ವಿಷಾದ...ಏಕೆ ಈ ಅಂತರ...? ಆತನ ಒಳಮನಸ್ಸು ಪ್ರಶ್ನಿಸುತ್ತಿದೆ...ಈ ನದಿ ಸಮಾಜದ ಜನರನ್ನು ಬೇರ್ಪಡಿಸುತ್ತಿದೆ..ಇದನ್ನು ದಾಟಬೇಕು..ಸಮಾಜದ ವರ್ಗಗಳನ್ನು ಒಂದಾಗಿಸಬೇಕು. ಆದರೆ ಹೇಗೆ?..ಆತ ಯೊಚಿಸುತ್ತಾನೆ. ಹೌದು...ಈ ನದಿಯನ್ನು ಈಜಿ ದಾಟಬೆಕು...ಅಂತರವನ್ನು ಇಲ್ಲವಾಗಿಸಬೇಕು...ನನ್ನ ಈ ಈಜು ಸಮಾಜದಲ್ಲಿರುವ ಎಲ್ಲಾ ಬಿರುಕುಗಳನ್ನು ತುಂಬಬೇಕು. ..ಅದು ಏಕತೆಯ ಸಂಕೇತವಾಗಬೇಕು...ಆತ ನದಿಗಿಳಿಯುತ್ತಾನೆ.
ಅಂತರವನ್ನು ಹೊಡೆದೋಡಿಸಲು ಅಸ್ತಮಾವನ್ನೂ ಲೆಕ್ಕಿಸದೇ ನೀರಿನೊಡನೆ ಸೆಣೆಸಾಡುತ್ತಾನೆ...ಮುಳುಗುತ್ತಾ..ಏಳುತ್ತಾ..ಈಜುತ್ತಾ..ಹೇಗೋ ದಡ ಸೇರುತ್ತಾನೆ. ಈ ಘಟನೆ ಇತಿಹಾಸದ ಪುಟಗಳನ್ನು ಸೇರುತ್ತದೆ. ಅದೇ ಕ್ರಾಂತಿಕಾರಿ ಚೆಗೊವೆರಾನ 'ಫೈನಲ್ ಜರ್ನಿ'.
ಅರ್ನೆಸ್ಟೋ ಚೆಗೊವೆರಾ ಸಾಹಸಪ್ರಿಯ ಮೆಡಿಕಲ್ ವಿದ್ಯಾರ್ಥಿ. ಮೋಜಿಗಾಗಿ ಪ್ರವಾಸ ಹೋಗುವುದು ಆತನ ಹವ್ಯಾಸ. ಅದೊಮ್ಮೆ ಗೆಳೆಯ ಅಲ್ಬಟರ್ೊ ಜತೆ ಆತ ದಕ್ಷಿಣ ಅಮೆರಿಕಾ ಪ್ರವಾಸಕ್ಕೆ ಹೊರಡುತ್ತಾನೆ. ಹಳೆಯ ಮೋಟಾರ್ ಸೈಕಲ್ನಲ್ಲಿ ಇಡೀ ದಕ್ಷಿಣ ಅಮೆರಿಕಾವನ್ನು ಪರ್ಯಟಣೆ ಮಡುವ ಸಾಹಸಕ್ಕೆ ಗೆಳೆಯರಿಬ್ಬರೂ ಕೈ ಹಾಕುತ್ತಾರೆ.
ಮೋಟಾರದ ಸೈಕಲ್ ಮೇಲೆ ಪ್ರವಾಸ ಹೊರಟ ಗೆಳೆಯರು ಹಲವಾರು ಏಳು-ಬೀಳುಗಳನ್ನು ಕಾಣುತ್ತಾರೆ. ವಿಚಿತ್ರ ಅನುಭವಗಳನ್ನು ಅನುಭವಿಸುತ್ತಾರೆ. ಸಮಾಜದ ಎಷ್ಟೋ ಅಗೋಚರ ಮುಖಗಳನ್ನು ಕಣ್ಣಾರೆ ಕಂಡು ದಿಗ್ಮೂಢರಾಗುತ್ತಾರೆ. ಮೋಜಿಗಾಗಿ ಪ್ರಾರಂಭಿಸಿದ ಪ್ರವಾಸ ಕೊನೆಗೊಳ್ಳುವಾಗ ಜೀವನದ ಗುರಿ ಇಬ್ಬರಿಗೂ ಸ್ಪಷ್ಟವಾಗುತ್ತದೆ.
ಸಮಾಜದ 'ಹಾವ್ಸ್' ಆಂಡ್ 'ಹಾವ್ ನಾಟ್ಸ್' ವರ್ಗಗಳ ನಡುವಣ ಅಂತರ ಅನರ್ೆಷ್ಟೋ ಗಮನಕ್ಕೆ ಬರುತ್ತಿದ್ದಂತೇ ಚಿತ್ರ ಒಮ್ಮಿಂದೊಮ್ಮೆ ಗಂಭೀರವಾಗಿಬಿಡುತ್ತದೆ. ಚಿತ್ರ ಸಾಹಸದಿಂದ ಸಾಮಾಜಿಕ ಕ್ರಾಂತಿಯೆಡೆ ಮುಖಮಾಡುತ್ತದೆ. ಇದು ವಾಲ್ಟರ್ ಸೆಲ್ಸ್ ನಿರ್ದೇಶನದ 'ದಿ ಮೋಟಾರ್ ಸೈಕಲ್ ಡೈರಿಸ್' ಚಿತ್ರದ ಕಥೆ.
ಮೂಲತಃ ಸ್ಪಾನಿಶ್ ಭಾಷೆಯಲ್ಲಿ ನಿರ್ಮಾಣಗೊಂಡ ಈ ಚಿತ್ರ ಮಾಕ್ಸಿಸ್ಟ್ ಕ್ರಾಂತಿಕಾರಿ ಅರ್ನೆಸ್ಟೋ ಚೆಗೊವೆರಾನ ಜೀವನಗಾಥೆ. ಇಪ್ಪತ್ಮೂರು ವರುಷ ವಯಸ್ಸಿನ ಯುವ ಅರ್ನೆಸ್ಟೋ ತನ್ನ ಮೋಟಾರ್ ಸೈಕಲ್ ಪ್ರವಾಸದಿಂದ ಕ್ರಾಂತಿಕಾರಿ ಚೆಗೊವೆರನಾದ ಕಥೆಯಿದು. 2004ರಲ್ಲಿ ಬಿಡುಗಡೆಗೊಂಡ 126 ನಿಮಿಷಗಳ ಈ ಚಿತ್ರ ಚೆಗೊವೆರಾನ ಪ್ರವಾಸ ಕಥನ 'ದಿ ಮೋಟಾರ್ ಸೈಕಲ್ ಡೈರಿಸ್'ನ ಸಿನಿಮಾ ರೂಪ.
ಪ್ರವಾಸಕ್ಕೂ ಮುಂಚೆ ಮೋಜೇ ಆತನ ಜೀವನವಾಗಿತ್ತು.
ಆದರೆ ಬಳಿಕ ಅನುಭವಕ್ಕೆ ಬಂದ ಜೀವನದ ಸೂಕ್ಮಗಳು ಆತನಲ್ಲಡಗಿದ ಕ್ರಾಂತಿಕಾರಿಗೆ ಜೀವಕೊಟ್ಟಿವು. ಪ್ರವಾಸದುದ್ದಕ್ಕೂ ಅರ್ನೆಸ್ಟೋ ಹಾಗೂ ಅಲ್ಬರ್ಟೋರಿಗೆ ಬಡತನದ ನೈಜ ದರ್ಶನವಾಗುತ್ತದೆ...ಅನ್ನ ಕೊಡುವ ರೈತನ ದಃಖಮಯ ಜೀವನದ ಪರಿಚಯವಾಗುತ್ತದೆ..ಕುಷ್ಟರೋಗಿಗಳಿಗಿರುವ ಸಾಮಾಜಿಕ ಬಹಿಷ್ಕಾರ ಆವರ ಮನಕಲಕುತ್ತದೆ...ಅರ್ನೆಸ್ಟೋ ಸಮಾಜದ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ಪಣತೊಡುತ್ತಾನೆ...ಅವರ ಮೋಜಿನ ಪ್ರವಾಸವನ್ನು ಆತ ಸತ್ಯದರ್ಶನಕ್ಕಾಗಿ ಕೈಗೊಳ್ಳುವ ಪ್ರಪಂಚ ಪರ್ಯಟನೆಯಾಗಿ ಬದಲಾಯಿಸುತ್ತಾನೆ. ಚಿತ್ರದುದ್ದಕ್ಕೂ ಸಾಮಾನ್ಯ ಜನತೆ ಹಾಗೂ ಅರ್ನೆಸ್ಟೋ ನಡುವಣ ಮಾನವೀಯ ಸಂಬಂಧ ವೀಕ್ಷಕರ ಮನನಾಟುವಂತಿದೆ.
ದಕ್ಷಿಣ ಅಮೆರಿಕಾ ಪ್ರವಾಸ ಹೊರಟ ಗೆಳೆಯರು ಮುಂದೆ ತಮ್ಮ ಮೋಟಾರ್ ಸೈಕಲ್ನಲ್ಲಿ ಚಿಲಿ, ಪೆರು, ವೆನೆಜುವೆಲ್ಲಾ, ಅಮೆಜಾನ್, ಅಟಕಾಮ ಮರುಭೂಮಿಗಳನ್ನು ತಿರುಗಿ ಅಲ್ಲಿನ ಜನಜೀವನದ ಪ್ರತ್ಯಕ್ಷ ದರ್ಶಿಗಳಾಗುತ್ತಾರೆ. ಲ್ಯಾಟಿನ್ ಅಮೆರಿಕಾ ಸಮಾಜದಲ್ಲಿರುವ ವರ್ಗಬೇಧವನ್ನು ಕಂಡು ಆಶ್ಚರ್ಯಚಕಿತರಾಗುತ್ತಾರೆ. ತಮ್ಮಿಷ್ಟದ ಸಿದ್ಧಾಂತ, ಧರ್ಮಗಳನ್ನು ನಂಬುವ ವ್ಯಕ್ತಿ ಸ್ವಾತಂತ್ರ್ಯವಿಲ್ಲದ ಸಮಾಜದಲ್ಲಿ ತೊಳಲಾಡುವ ಅಸಹಾಯಕರನ್ನು ಕಂಡು ಪರಿತಪಿಸುತ್ತಾರೆ. ಈ ಸಾಮಾಜಿಕ ಅಸಮತೋಲನ ,ಅನ್ಯಾಯ, ಶೋಷಣೆಗಳು ಪ್ರಪಂಪಚದ ಕುರಿತಾದ ಅರ್ನೆಷ್ಟೋ ದೃಷ್ಟಿಕೋನವನ್ನೇ ಬದಲಾಯಿಸುತ್ತದೆ. ಇವೆಲ್ಲವೂ ಆತನ ಮುಂದಿನ ಕ್ರಾಂತಿಕಾರಿ ಜೀವನಕ್ಕೆ ಪ್ರೇರಣೆಯಾಗುತ್ತವೆ.
'ಎ ರೆವೆಲ್ಯೂಷನ್ ವಿದೌಟ್ ಗನ್? ಇಟ್ ವಿಲ್ ನೆವರ್ ವರ್ಕ್....ಅರ್ನೆಷ್ಟೋ ಮಾತಿಗೆ ಅಲ್ಬರ್ಟೋ ಕ್ಷಣಕಾಲ ವಿಚಲಿತನಾಗುತ್ತಾನೆ. ಅಲ್ಬರ್ಟೋ ಶಾಂತಿಯುತ ಕ್ರಾಂತಿಯ ಕನಸನ್ನು ಕಂಡವನು...ಶಾಂತಿಯುತ ಕ್ರಾಂತಿಯಿಂದ ಇಡೀ ದಕ್ಷಿಣ ಅಮೆರಿಕಾವನ್ನು ಸುಧಾರಿಸಲು ಹೊರಟವನು..ಆದರೆ...ಅರ್ನೆಷ್ಟೋ ಮಾತುಗಳಲ್ಲಡಗಿದ್ದ ಸತ್ಯವನ್ನು ಆತ ಒಪ್ಪಲೇಬೇಕಿತ್ತು...ಶಾಂತಿಯುತ ಕ್ರಾಂತಿ ಎಲ್ಲಾ ಸನ್ನಿವೇಸದಲ್ಲೂ ವರ್ಕ್ ಆಗುವುದಿಲ್ಲವೆಂಬ ಸತ್ಯ...
ಚಿತ್ರದ ಪ್ರಾರಂಭದಲ್ಲಿ ಕುಡಿತ, ಸ್ತ್ರೀಯರ ಸಹವಾಸಗಳಲ್ಲೇ ಅರ್ನೆಷ್ಟೋ ಜೀವನ ಸುಖವನ್ನು ಕಾಣುತ್ತಿದ್ದ. ಆದರೆ ಚಿತ್ರ ಕೊನೆಗೊಳ್ಳುತ್ತಿದ್ದಂತೇ ಆತನಿಗೆ ಜೀವನದ ಸೂಕ್ಷ್ಮಗಳ ಪರಿಚಯವಾಗುತ್ತದೆ. ಮೋಟಾರ್ ಸೈಕಲ್ ಪ್ರವಾಸ ಆತನ ವ್ಯಕ್ತಿತ್ವವನ್ನೇ ಬದಲಾಯಿಸುತ್ತದೆ...ಸಮಾಜಸೇವೆ ಆತನ ಗುರಿಯಾಗುತ್ತದೆ..ನಾಯಕನಲ್ಲಾಗುವ ಈ ಬದಲಾವಣೆ ಚಿತ್ರದ ಇಡೀ ಮೂಡನ್ನೇ ಬದಲಾಯಿಸುತ್ತದೆ.
ಮಾನವೀಯತೆ ಈ ಚಿತ್ರದ ಕಥಾವಸ್ತು. ಅರ್ನೆಸ್ಟೋ ಪಾತ್ರ ಇಲ್ಲಿ ಮಾನವೀಯತೆಯ ಸಂಕೇತ. ಚಿತ್ರ ಮುಂದುವರಿಯುತ್ತಿದ್ದಂತೇ ನೂರಾರು ಪಾತ್ರಗಳು ನಾಯಕನ ಪಾತ್ರದೊಡನೆ ಬೆಸೆದುಕೊಳ್ಳುತ್ತವೆ. ಕೊನೆಯಲ್ಲಿ ನಾಯಕನ ಪಾತ್ರವಷ್ಟೇ ಚಿತ್ರದ ಕೇಂದ್ರಬಿಂದುವಾಗಿಬಿಡುತ್ತದೆ. ಆತನನ್ನು ಬಿಟ್ಟರೆ ಉಳಿದ ಯಾವ ಪಾತ್ರಗಳೂ ವೀಕ್ಷಕನನ್ನು ಅಷ್ಟಾಗಿ ಕಾಡುವುದಿಲ್ಲ.
ತಮ್ಮ ಮೋಟಾರ್ ಸೈಕಲ್ನಲ್ಲಿ ಲ್ಯಾಟಿನ್ ಅಮೆರಿಕಾ ಸುತ್ತುತ್ತಾ ಮಿತ್ರರು ಪೆರುವಿಗೆ ಆಗಮಿಸುತ್ತಾರೆ. ಅಲ್ಲಿನ ಸ್ಯಾನ್ ಪಾಬ್ಲೋ ಕುಷ್ಟರೋಗಿಗಳ ಕಾಲನಿಯಲ್ಲಿ ಮೂರುವಾರಗಳ ಕಾಲ ಉಚಿತ ಸೇವೆ ಸಲ್ಲಿಸಲು ಮುಂದಾಗುತ್ತಾರೆ. ಅಲ್ಲಿನ ವಾತಾವರಣ ಅರ್ನೆಷ್ಟೋನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಕುಷ್ಟರೋಗದಿಂದ ಬಳಲುತ್ತಿರುವ ಅಸಹಾಯಕರನ್ನು ಪ್ರತ್ಯೇಕ ದ್ವೀಪದಲ್ಲಿಟ್ಟ ಅಲ್ಲಿನ ವ್ಯವಸ್ಥೆಯನ್ನು ಅರ್ನೆಷ್ಟೋ ವಿರೋಧಿಸುತ್ತಾನೆ... ಅದರ ವಿರುದ್ಧ ಪ್ರತಿಭಟಿಸುತ್ತಾನೆ...ಹೀಗೆ ಆತ ಕ್ರಾಂತಿಕಾರಿಯಾಗುತ್ತಾನೆ.
ಅರ್ನೆಷ್ಟೋ ದ್ವೀಪಕ್ಕೆ ಹೋಗಿ ಕುಷ್ಟರೋಗಿಗಳೊಡನೆ ಮುಕ್ತವಾಗಿ ಬೆರೆಯುತ್ತಾನೆ. ರೋಗಿಗಳ ಸೇವೆ ಮಾಡುತ್ತಾ ಅವರಲ್ಲಿಒಬ್ಬನಾಗುತ್ತಾನೆ. ಕಾಲನಿಯ ಎದುರು ಹರಿಯುವ ನದಿ ಅಲ್ಲಿನ ಕುಷ್ಟರೋಗಿಗಳನ್ನು ಜಗತ್ತಿನಿಂದ ಪ್ರತ್ಯೇಕಿಸಿದೆ...ಅವರಲ್ಲಿ ಅಸ್ಪೃಶ್ಯತೆಯ ಭಾವನೆಯನ್ನು ಹುಟ್ಟುಹಾಕಿದೆ ಎಂಬ ಸತ್ಯ ಅರ್ನೆಷ್ಟೋಗೆ ಅರಿವಾಗುತ್ತಿದ್ದಂತೇ ಆತ ಆ ಅಂತರವನ್ನು ಹೊಡೆದೋಡಿಸಲು ಮುಂದಾಗುತ್ತಾನೆ. ನದಿಯ ಆಚೆ ದಡದಲ್ಲಿ ವಾಸವಾಗಿರುವ ಕಾಲನಿಯ ವೈದ್ಯ ಹಾಗೂ ನೌಕರರ ಮನದಲ್ಲಿ ಮಾನವೀಯತೆಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಾನೆ. ಚಿತ್ರದ ಕೊನೆಯಲ್ಲಿ ನದಿಯನ್ನು ಈಜಿ ಎರಡು ಸಮಾಜಗಳ ಅಂತರವನ್ನು ಮುಚ್ಚಿಹಾಕುತ್ತಾನೆ...ಹೀಗೆ ಮಾನವೀಯತೆಯಿಂದ ಮೆರೆಯುತ್ತಾನೆ. ಪ್ರವಾಸದುದ್ಕೂಮಿತ್ರರಿಗೆ ದಾರಿಯಲ್ಲಿ ಎದುರಾಗುವ ಪಾತ್ರಗಳು ನಮ್ಮ ಮಾನವ ಸಮಾಜದ ವಿವಿಧ ಮುಖಗಳಿದ್ದಂತೆ..ಅವು ಬರೇ ಪಾತ್ರಗಳಲ್ಲ ಜೀವನದ ಅನುಭವಗಳು...ಆ ಅನುಭವಗಳೇ ಚೆಗೊವೆರಾನಂತಹ ಅಸಾಮಾನ್ಯ ವ್ಯಕ್ತಿಯ ಹುಟ್ಟಿಗೆ ಕಾರಣ.
ಪ್ರಪಂಚವನ್ನೇ ಪ್ರತಿನಿಧಿಸಿದ ಚೆಗೊವೆರಾನ ಪಾತ್ರ ನಿರ್ವಹಣೆ ನನ್ನ ಜೀವನದ ಅತ್ಯಂತ ಜವಾಬ್ಧಾರಿಯುತ ಕೆಲಸ...ಗಾಂಭೀರ್ಯತೆ, ಹಾಸ್ಯ, ಮಾನವೀಯತೆ..ಹೀಗೆ ಹಲವಾರು ಭಾವಗಳ ಅಭಿವ್ಯಕ್ತಿಯ ಅಗತ್ಯತೆ ಇಲ್ಲಿದೆ..ಚಿತ್ರದಲ್ಲಿ ಚೆಗೊವೆರಾ ಪಾತ್ರ ನಿರ್ವಹಿಸಿದ ಮೆಕ್ಸಿಕನ್ ನಟ ಗಾರ್ಸಯ ಬರ್ನಲ್ ಮಾತುಗಳಿವು...ಚಿತ್ರದುದ್ದಕ್ಕೂ ತಮ್ಮ ಅದ್ಬುತ ನಟನೆಯ ಮೂಲಕ ವೀಕ್ಷಕರ ಮನಸೂರೆಗೊಂಡ ಗಾರ್ಸಯಾ ಹಲವಾರು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಇನ್ನು ಅಲ್ಬರ್ಟೋ ಪಾತ್ರ ನಿರ್ವಹಿಸಿದ ರೆಡ್ರಿಗೋ ಡಿ ಲಾ ಸೆರ್ನಾ ನಿಜಜೀವನದಲ್ಲಿ ಚೆಗೊವೆರಾನ ಸಂಬಂಧಿಕನಾಗಿರುವುದು ಚಿತ್ರದ ಕ್ರೆಡಿಬಿಲಿಟಿಯನ್ನು ಇನ್ನಷ್ಟು ಹೆಚ್ಚಿಸಿದೆ.
ಚಿತ್ರದ ಕೊನೆಯಲ್ಲಿ ಚೆಗೊವೆರಾನ ನಿಜಜೀವನದ ಗೆಳೆಯ 82 ವರುಷಗಳ ಅಲ್ಬರ್ಟೋ ಕಾಣಸಿಗುತ್ತಾನೆ. ..50ರ ದಶಕದಲ್ಲಿ ಚೆಗೊವೆರಾನೊಡನೆ ತಾನು ಪ್ರವಾಸ ಹೋದ ಫೋಟೋಗಳನ್ನು ತಿರುವುತ್ತಾ ಆತ ನೆನಪುಗಳಿಗೆ ಜೀವ ನೀಡುತ್ತಾನೆ.
ದಿ ಮೋಟಾರ್ ಸೈಕಲ್ ಡೈರೀಸ್ ಒಬ್ಬ ಸಾಮಾನ್ಯ ವ್ಯಕ್ತಿ ಅಸಾಮಾನ್ಯನಾದ ಕಥೆ. ಇತರ ಚಿತ್ರಗಳಂತೆ ಈ ಚಿತ್ರದಲ್ಲೂ ಆಕ್ಷನ್, ಸೆಕ್ಸ್, ಕಾಮಿಡಿಗಳಿವೆ...ಆದರೆ ಎಲ್ಲಕ್ಕಿಂತ ಮಿಗಿಲಾಗಿ ಗಂಭೀರ ವಿಚಾರಗಳಿವೆ. ವೀಕ್ಷಕ ತಾನಿರುವ ವ್ಯವಸ್ಥೆಯ ಕುರಿತು ಕ್ಷಣಕಾಲ ಗಂಭೀರವಾಗಿ ಯೋಚಿಸುವಂತೆ ಮಾಡುವ ಕ್ಯಪಾಸಿಟಿ ಈ ಚಿತ್ರಕ್ಕಿದೆ. ಮೋಟಾರ್ ಸೈಕಲ್ ಡೈರಿ ಯಾವುದೇ ಒಂದು ಸಿದ್ದಾಂತದ ಸುತ್ತ ಗಿರಕಿ ಹೊಡೆಯುವುದಿಲ್ಲ. ಬದಲಾಗಿ ಒಬ್ಬ ವಿಶ್ವಮಾನವನ ಕಥೆಯಾಗಿ ಆತನ ಆದರ್ಶಗಳನ್ನು ಇಡೀ ಪ್ರಪಂಚಕ್ಕೇ ಸಾರುತ್ತಿದೆ.
ವ್ಯಕ್ತಿಯೊಬ್ಬ ಏಕಾಂಗಿಯಾಗೇ ಇಡೀ ಪ್ರಪಂಚವನ್ನು ಸುಧಾರಿಸಬಲ್ಲ...ಅಂತಹ ಶಕ್ತಿ ಆತನಲ್ಲಿದೆ...ತನ್ನಲ್ಲಡಗಿರುವ ಆ ಶಕ್ತಿಯನ್ನು ಗುರುತಿಸಿಕೊಂಡಾಗಲೇ ಆತ ಅಸಾಮಾನ್ಯನಾಗುತ್ತಾನೆ...ಜೀವನದ ಅನುಭವಗಳು ವ್ಯಕ್ತಿಯ ವ್ಯಕ್ತಿತ್ವವನ್ನೇ ಬದಲಾಯಿಸಿಸುತ್ತವೆ...ಅನಪೇಕ್ಷಿತ ಸನ್ನಿವೇಶಗಳು ಕೆಲವೊಮ್ಮೆ ಜೀವನದ ಹಾದಿಯನ್ನು ತಿರುಗಿಸಿಬಿಡುತ್ತವೆ. ದಿ ಮೋಟಾರ್ ಸೈಕಲ್ ಡೈರೀಸ್ ಇದಕ್ಕೆ ಜೀವಂತ ಉದಾಹರಣೆ...ಚೆಗೊವೆರಾ ಇಂದು ನಮ್ಮೊಂದಿಗಿಲ್ಲ..ಆದರೆ ಆತ ಬಿಟ್ಟು ಹೋದ ಆದರ್ಶಗಳು..ಜೀವನ ಮೌಲ್ಯಗಳು ಎಂದೆದೂ ಶಾಶ್ವತ.
-ಅಕ್ಷತಾ ಸಿ.ಎಚ್
ವಿಶೇಷ ವರದಿ
ಹರೀಶ್ ಕೆ.ಆದೂರು
ಮಂಗಳೂರು : ಇಂದಿಗೂ ಹೊರ ಜಗತ್ತಿಗೆ ತಿಳಿಯದೆ ಕೇವಲ ಮಲೆಕುಡಿಯ ಜನಾಂಗವೊಂದೇ ಪೂಜಿಸುತ್ತಿರುವ ಬೃಹತ್ ನಾಗಶಿಲೆಯೊಂದು ಕೌತುಕಕ್ಕೆ ಎಡೆಮಾಡುತ್ತಾ, ನಿಸರ್ಗ ಸೋಜಿಗವಾಗಿ ಕಾನನ ಮಧ್ಯೆ ನೆಲೆ ನಿಂತಿದೆ.
ಇದು ನಿಸರ್ಗ ನಿರ್ಮಿತ ಬೃಹತ್ ನಾಗರೂಪ.
ಸುಮಾರು 25 ಅಡಿ ಎತ್ತರದ ಹೆಡೆ 30ರಿಂದ 32ಅಡಿಗಳಗಲಕ್ಕೆ ವಿಸ್ತಾರವಾಗಿ ಚಾಚಿಕೊಂಡಿದೆ.ಈ ಸೋಜಿಗ ಇರುವುದು ಒಂದು ಕಾನನದ ಮಧ್ಯೆ. ಇದೊಂದು ಸಹಸ್ರಾರು ವರ್ಷ ಇತಿಹಾಸ ಹೊಂದಿದ ಸ್ಥಳ. ಹಳದಿಯೊತ್ತಿದ ಕೆಂಬಣ್ಣ, ನಡು ನಡುವೆ ಕಪ್ಪು ಶಿಲೆ. ಹೀಗೆ ವಿಶೇಷವಾದ ಶಿಲೆಯಲ್ಲಿ ಈ ನಾಗನ ಹೆಡೆಯ ಆಕೃತಿ ಮೂಡಿಬಂದಿದೆ. ಅದೂ ವಿಭಿನ್ನ ರೀತಿಯಲ್ಲಿ. ಅತ್ಯಂತ ನಾಜೂಕಾದ ರೀತಿಯ ಕಲಾತ್ಮಕತೆ ಅದರಲ್ಲಿ ಕಾಣಸಿಗುತ್ತದೆ. ಇದನ್ನು ಯಾರೂ ಕೆತ್ತಿ ವಿನ್ಯಾಸ ಗೊಳಿಸಿದ್ದಲ್ಲ. ತನ್ನಿಂತಾನಾಗಿ ಪ್ರಕೃತಿಯೇ ನಾಗನ ಹೆಡೆಯಾಕಾರದಲ್ಲಿ ರಚನೆಗೊಂಡಿದೆ.
ಆ ಬೃಹತ್ ಹೆಡೆಯ ಕೆಳಭಾಗದಲ್ಲಿ ಪುರಾತನ ನಾಗನ ಆರು ವಿಗ್ರಹಗಳಿವೆ. ಇಂದಿಗೂ ನಾಗನಿಗೆ ಪೂಜೆ ನಡೆಯುತ್ತಿದೆ. ಅತ್ಯಂತ ಕಾರಣೀಕ, ಶಕ್ತಿ ಮಹಿಮೆಗಳನ್ನೊಳಗೊಂಡ ನೈಸರ್ಗಿಕ ನಾಗ ಅದಾಗಿದೆ. ಅಷ್ಟಕ್ಕೂ ಈ ನಾಗನ ದರ್ಶನ ಪಡೆದವರು ಕೆಲವೇ ಮಂದಿ. ಇಂದಿಗೂ ಈ ನಾಗ ಅಜ್ಞಾತವಾಗಿಯೇ ಉಳಿದುಕೊಂಡಿದ್ದಾನೆ. ಹಲವಾರು ಕಾರಣೀಕ, ಕೌತುಕಗಳನ್ನು ಪ್ರದರ್ಶಿಸುತ್ತಾ !
ಇಂತಹ ಕೌತುಕ ಇರುವುದಾದರೂ ಎಲ್ಲಿ ಎಂಬ ಕುತೂಹಲ ನಿಮ್ಮನ್ನು ಕಾಡದಿರದು. ಇದನ್ನು ವೀಕ್ಷಿಸಲು ನೀವು ಹೋಗಬೇಕಾದರೆ ಹರ ಸಾಹಸ ಪಡಬೇಕಾಗುತ್ತದೆ. ಇದಿರುವುದು ರಾಷ್ಟ್ರೀಯ ಉದ್ಯಾನವನದೊಳಗೆ. ಅಲ್ಲಿಗೆ ನೀವು ನಿಮ್ಮ ಕಾರು, ಬಸ್ಸುಗಳಲ್ಲಿ ಹೋಗಲು ಸಾಧ್ಯವಿಲ್ಲ. ದ್ವಿಚಕ್ರವಾಹನದಲ್ಲಾದರೆ ಒಂದು ಏಳು ಕಿಲೋ ಮೀಟರ್ ದೂರ ಕಷ್ಟದಿಂದ ಕ್ರಮಿಸಬಹುದು. ನಂತರ ಪಾದಯಾತ್ರೆಯೇ ಗತಿ.
ಎಲ್ಲಿದೆ ಈ ಸೋಜಿಗ: ಈ ಸೋಜಿಗವನ್ನು ನೀವು ವೀಕ್ಷಿಸಬೇಕಾದರೆ ಬೆಳ್ತಂಗಡಿ ತಾಲೂಕಿಗೆ ಹೋಗಬೇಕು. ಬೆಳ್ತಂಗಡಿ ಪೇಟೆಯಿಂದ ಉಜಿರೆ ಮಾರ್ಗವಾಗಿ ಒಂದು ಕಿಲೋಮೀಟರ್ ಕ್ರಮಿಸಿದರೆ ಲಾಯಿಲ ಎಂಬ ಸ್ಥಳ ಸಿಗುತ್ತದೆ. ಅಲ್ಲಿಂದ ಎಡಭಾಗದಲ್ಲಿರುವ ಡಾಮರು ರಸ್ತೆಯಲ್ಲಿ (ಕಿಲ್ಲೂರು ಮಾರ್ಗವಾಗಿ)ಸಾಗಿದಾಗ `ನಾವೂರು' ಎಂಬ ಸ್ಥಳ ಸಿಗುತ್ತದೆ.
ಅಲ್ಲಿಂದ ಮುಂದೆ ಸುರ್ಲೋಡಿ ಹಾದಿಯಾಗಿ ಕಾನನದ ಪ್ರಯಾಣ. ಅದು ರಾಷ್ಟ್ರೀಯ ಉದ್ಯಾನವನ ಪ್ರದೇಶ. ಆ ಜಾಗಕ್ಕೆ ಹೋಗಬೇಕಾದರೆ ಅರಣ್ಯ ಇಲಾಖೆಯವರ ಅನುಮತಿ ಅಗತ್ಯ. ಕಾಡಿನೊಳಗೊಂದು ಪ್ರಯಾಣ ಒಂದು ಅವಿಸ್ಮರಣೀಯ ಅನುಭವವನ್ನೀಯುತ್ತದೆ.
ಸುಮಾರು ಎಂಟು ಕಿ.ಮೀ ಕಡಿದಾದ ಹಾದಿಯಲ್ಲಿ ಸಾಗಬೇಕು. ಬೆಟ್ಟ ಗುಡ್ಡ ಏರಬೇಕು. ನಡು ನಡುವೆ ಬರುವ ಕಿರು ತೊರೆಗಳನ್ನು ದಾಟಬೇಕು.ಅದಾಗ ಎತ್ತರದ ದಿಣ್ಣೆಯೊಂದು ಎದುರಾಗುತ್ತದೆ. ಅಲ್ಲಿಂದ ನೋಡಿದರೆ ಎದುರಿನಲ್ಲಿ ದೂರದಲ್ಲಿ ಪಶ್ಚಿಮ ಘಟ್ಟದ ನಿಸರ್ಗ ಸೌಂದರ್ಯ, ಅದರ ತಪ್ಪಲಲ್ಲಿ ಕಾಣಸಿಗುತ್ತದೆ `ಮಲ್ಲ' ಎಂಬ ಪ್ರದೇಶ.
ಅದೊಂದು ಗಿರಿಜನರ ವಾಳ್ಯ. ಅಲ್ಲೊಂದು ಮನೆಯಿದೆ. ಅದು ಮಲೆಕುಡಿಯ ಜನಾಂಗದವರ ಮನೆ. ಗಿರಿಯಪ್ಪ ಎಂಬ 65ವರ್ಷದ ವೃದ್ಧರು ತಮ್ಮ ಮಕ್ಕಳೊಂದಿಗೆ ಸುಖವಾಗಿ ಅಲ್ಲಿ ಬಾಳುತ್ತಿದ್ದಾರೆ. ಅವರ ಮನೆಯ ಗದ್ದೆ ದಾಟಿ, ಕಡಿದಾದ ಹಾದಿಯಲ್ಲಿ ಇಳಿದು ಸಾಗಿದಾಗ ಜಲಲ ಜಲರಾಶಿ ಕಲ್ಲ ಮೇಲೆಲ್ಲಾ ಹರಿದು ಬರುತ್ತಾಳೆ. ತುಸು ಜಾರಿದರೂ ಪ್ರಪಾತ ದರ್ಶನ. ಜೋಪಾನವಾಗಿ ಕಡಿದಾದ ಹಾದಿಯಲ್ಲಿ ಕೆಳ ಸಾಗಿದಾಗ ಒಂದೈವತ್ತು ಮಂದಿ ನಿಲ್ಲಬಹುದಾದಂತಹ ತುಸು ವಿಶಾಲ ಪ್ರದೇಶವಿದೆ. ಅಲ್ಲಿ ಈ ನಿಸರ್ಗ ನಿರ್ಮಿತ ನಾಗ ನೆಲೆನಿಂತಿದ್ದಾನೆ.
ಮಲೆಕುಡಿಯ ಜನಾಂಗದವರಲ್ಲಿ ಏನೇ ಕಷ್ಟ ಬಂದರೂ ನಾಗನ ಮುಂದೆ ಕೈ ಮುಗಿದು ಕಷ್ಟ ಪರಿಹಾರಕ್ಕೆ ಕೇಳುತ್ತಾರೆ. ನಾಗ ಅನುಗ್ರಹಿಸುತ್ತಾನೆ. ಈ ರೀತಿ ಇವರ ಹಿರಿಯರ ಕಾಲದಿಂದಲೂ ನಡೆದು ಬಂದಿದೆಯಂತೆ. ಅಂತೂ ಈ ನಾಗನ ದರ್ಶನಕ್ಕೆ ಹರಸಾಹಸ ಪಡಬೇಕಾಗುತ್ತದೆ. ಇಂದಿಗೂ ಇದೊಂದು ನಿಸರ್ಗ ಸೋಜಿಗವಾಗಿ ನೆಲೆನಿಂತಿದೆ.
Video















