ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ವಿಶೇಷ ವರದಿ

ಎಲ್ಲಾ ಮಕ್ಕಳಂತೆ ಇಲ್ಲೊಬ್ಬ ಬಾಲಕ ಶಾಲೆಗೆ ಹೋಗುತ್ತಾನೆ. ಅದರಲ್ಲೇನಿದೆ ವಿಶೇಷ ಅಂತೀರ. ಇದೆ.... ಇಲ್ಲೇ ಇರೋದು ಫುಲ್ ಕತೆ. ಈತ ಬೆಳಗ್ಗೆದ್ದು ರಬ್ಬರ್ ಕೆಲಸ ಮಾಡಿ ಆ ಬಳಿಕ ಶಾಲೆಗೆ ಹೋಗುತ್ತಾನೆ. ಆದ್ರೆ ಆತನ ವಯಸ್ಸು ಇನ್ನೂ 7...!!. ಈಗಷ್ಟೇ ಶಾಲೆಗೆ ಸೇರಿದ್ದಾನೆ.ಒಂದನೇ ತರಗತಿಯಲ್ಲಿ ಓದುತ್ತಾನೆ. ಈ ಹುಡುಗನ ಹೆಸರು ವಸಂತ. ಈತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಬಳಿಯ ಮುಂಡೂರು ಪಳಿಕೆಯ ನಿವಾಸಿ..

ಬೆಳ್ತಂಗಡಿ ತಾಲೂಕು ಕೊಕ್ಕಡ ಬಳಿಯ ಮುಂಡೂರುಪಳಿಕೆಯ ರಾಮಸ್ವಾಮಿ ಹಾಗೂ ಕಮಲ ದಂಪತಿಗಳ ಪುತ್ರನಾದ ಈ ಬಾಲಕನ ಹೆಸರು ವಸಂತ. ಇನ್ನೂ ಏಳು ಏಳು ವರ್ಷದ ಪೋರ.ಈಗಷ್ಟೇ ಒಂದನೇ ತರಗತಿಗೆ ಸೇರಿಕೊಂಡಿದ್ದಾನೆ. ಈತ ಬೆಳಗ್ಗೆದ್ದು ತಾಯಿಯೊಂದಿಗೆ ರಬ್ಬರ್ ಕೆಲಸದಲ್ಲಿ ತೊಡಗಿಸಿಕೊಂಡು ಆ ಬಳಿಕ ಶಾಲೆಗೆ ಹೋಗುವುದು ಈತನ ನಿತ್ಯದ ಕಾಯಕ. ಈ ಬಾಲಕನ ಹೆತ್ತವರು ರಬ್ಬರ್ ಟ್ಯಾಪಿಂಗ್ ಕಾರ್ಮಿಕರು. ಈತನ ತಂದೆಗೆ ಕೊಂಚ ಅಸೌಖ್ಯವಿತ್ತು.

ಹಾಗಾಗಿ ತಾಯಿಯೊಂದಿಗೆ ಈ ಬಾಲಕ ರಬ್ಬರ್ ಟ್ಯಾಪಿಂಗ್ ಮಾಡಿದ ಬಳಿಕ ಶಾಲೆಗೆ ಹೋಗುತ್ತಾನೆ.ಈತನ ತಂಗಿ 6 ವರ್ಷದ ವಸಂತಿ ಕೂಡಾ ಅಣ್ಣನೊಂದಿಗೆ ಸೇರಿಕೊಳ್ಳುತ್ತಾಳೆ.ಬೆಳಗ್ಗೆ ಸ್ಥಳೀಯರು ಏಳುವ ಮೊದಲೇ ಈ ಬಾಲಕ ಎದ್ದು ರಬ್ಬರ್ ತೋಟದಲ್ಲಿರುತ್ತಾನೆ. ತನ್ನ ಮನೆಯವರ ಕಾಯಕದೊಂದಿಗೆ ಕೈಜೋಡಿಸಿ ಆ ಬಳಿಕ ಶಾಲೆಗೆ ಹೋಗುತ್ತಾನೆ. ಹೀಗಾಗಿ ಈ ಬಾಲಕ ಉಳಿದ ಮಕ್ಕಳಂತಲ್ಲ ಭಿನ್ನವಾಗಿ ಕಾಣುತ್ತಾನೆ .

ಈ ಮಧ್ಯೆ ಈತನ ತಂದೆ ರಾಮಸ್ವಾಮಿಗೆ ಕೊಂಚ ಹುಷಾರಿಲ್ಲ.ವಲಸೆ ಹೋಗಿ ಕೆಲಸ ಮಾಡುವ ಬದುಕು ಇವರಸು.ಇದು ಈ ಏಳು ವರ್ಷದ ಬಾಲಕ ವಸಂತನ ಮೇಲೆ ತೀರಾ ಪರಿಣಾಮ ಬೀರಿತ್ತು ಹಾಗಾಗಿ ಈತನೂ ಅದೇ ಕಾಯಕ್ಕೆ ಇಳಿದಿದ್ದ.ಇದನು ಗಮನಿಸಿದ ಇಲ್ಲಿನ ಸಮೀಪದ ಶಾಲಾ ಅಧ್ಯಾಪಕರು ಈತನನ್ನು ಶಾಲೆಗೆ ಸೇರುವಂತೆ ಮಾಡಿದರು. ಆದರೆ ಅಲ್ಲೂ ಆ ಬಾಲಕ ಅತ್ಯಂತ ಉತ್ಸಾಹದಿಂದ ಪಾಠವನ್ನು ಕೇಳುತ್ತಿದ್ದ ಮತ್ತು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ. ಹಾಗಾಗಿ ವಸಂತ ಅತ್ತ ಬೆಳಗ್ಗೆ ಮನೆಯಲ್ಲಿ ರಬ್ಬರ್ ಟ್ಯಾಪಿಂಗ್ ಮಾಡಿ ಶಾಲೆಗೆ ಬರುತ್ತಾನೆ.
ಒಟ್ಟಿನಲ್ಲಿ ಬಹುತೇಕ ಮಕ್ಕಳಿಗೆ ಪಾಠದ ಚಿಂತೆ ಮಾತ್ರಾ ಇದ್ದರೆ ಈ ಬಾಲಕ ವಸಂತನಿಗೆ ಶಾಲೆಯ ಜೊತೆಗೆ ತನ್ನ ದೈನಂದಿನ ಕೆಲಸವಾದ ರಬ್ಬರ್ ಟ್ಯಾಪಿಂಗ್ನಲ್ಲೂ ಚಿಂತೆ ಇದೆ. ಮನೆಯಯವರ ಕೆಲಸಕ್ಕೆ ಹೆಗಲು ಕೊಡುವ ಕಾಯಕವನ್ನು ಮಾಡುವ ಈ ಬಾಲಕ ಮಾತ್ರಾ ಅಸಾಮಾನ್ಯ.....

ಮಹೇಶ್ ಪುಚ್ಚಪ್ಪಾಡಿ

ಮುಂದೆ ಓದಿ
4:43 PM

ಕ್ಷಮೆ

Posted by ekanasu

ಯುವಾ...
ಅಚ್ಚ ಹಸಿರಲಿ ಮೆರೆದ ಭೂತಾಯಿ ನೀನಿಂದು
ಬರಡು ಬಿಸಿಲಲ್ಲಿ ಬೆಂದು ಬೆಂಡಾಗಿರುವೆ
ಗರ್ಭ ಸಿರಿಯನೆ ತೋರಿ ನೀನಿಂದು ನಲುಗಿರುವೆ
ಮದದುಂಬಿದ ಶ್ರೀಮಂತ ಹುಡುಗಿ ಹಾದರಕ್ಕೆ ಬಿದ್ದಂತೆ

ವಸುಂಧರೆ, ಆ ನಿನ್ನ ವೈಭವ ಮರೆಮಾಚುತ್ತಲಿದೆ ಇಂದು
ರಕ್ಷಕರೇ ಇರದ ಭಕ್ಷಕರ ಎದುರು
ಮೋಜು ಮಜದ ಮದದಿ ನಿನ್ನ ಇರುವನ್ನೇ ಮರೆತಿಹರು
ಹೆತ್ತ ಕರುಳಿನ ಕೂಗು ಮಾರ್ದನಿಸುವ ಹಾಗೆ

ಕಣ ಕಣದ ರಸವ ಹೀರಿ ಜಗಿದ ಈ ಮನುಜ
ಹಿಂಡಿ ಹೀರಿ ಎಸೆದ, ಹಿಪ್ಪೆಯಾಗಿಸಿದ
ಅಮೃತದ ಎದೆಹಾಲ ಕುಡಿಸಿ ಬೆಳಸಿದ ನಿನಗೆ
ವಿಷವನ್ನೇ ಕಕ್ಕುತ್ತ ನಿನ್ನ ಬರಡಾಗಿಸಿದ

ಶಿವನನ್ನು ಕೆಣಕಿ ಕಾಮ ಬಲಿಯಾದ್ದು ಒಂದು ಕಥೆ
ನಮಗೂ ಬರಬಹುದು ಆ ದಿನಗಳು ಎನ್ನುವುದೇ ವ್ಯಥೆ
ನಿನ್ನ ಹುಸಿಗೋಪ ನಮಗೆ ಒಳಿತಲ್ಲ ತಾಯಿ
ನೀನು ತಿರುಗಿದರೆ ನಮಗೆ ಬದುಕು ಇನ್ನೇಲ್ಲಿ

ಕ್ಷಮೆ ಇರಲಿ ತಾಯಿ
ಕ್ಷಮೆಯಾಧರಿತ್ರಿಯ ಆ ನಿನ್ನ ಗುಣ ಸದಾಕಾಲ ಹೀಗೆ ನಮ್ಮ ನೆರಳಾಗಿ ಇರಲಿ

- ಮಹಾಬಲೇಶ್ವರ ಹೊನ್ನೆಮಡಿಕೆ

ಮುಂದೆ ಓದಿ

ರಾಜ್ಯ - ರಾಷ್ಟ್ರ
ನವದೆಹಲಿ: ಸರ್ವೋಚ್ಚ ನ್ಯಾಯಾಲಯದ ಶಾಖಾ ಪೀಠವನ್ನು ಚೆನ್ನೈನಲ್ಲಿ ಸ್ಥಾಪಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಒತ್ತಾಯಿಸಿದ್ದಾರೆ.ನ್ಯಾಯಮೂರ್ತಿಗಳ ಅತಿಥಿ ಗೃಹ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಕರುಣಾನಿಧಿ ಈ ವಿಚಾರ ತಿಳಿಸಿದರು. ಇಷ್ಟೇ ಅಲ್ಲದೆ ರಾಜ್ಯದ ಉಚ್ಛನ್ಯಾಯಾಲಯದಲ್ಲಿ ತಮಿಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಬಳಸುವಂತೆಯೂ ಅವರು ಆಗ್ರಹಿಸಿದ್ದಾರೆ.
ಆದರೆ ಬೆಂಗಳೂರಿನಲ್ಲಿ ಸರ್ವೋಚ್ಛನ್ಯಾಯಾಲಯದ ಶಾಖಾ ಪೀಠ ಸ್ಥಾಪಿಸುವ ಬಗ್ಗೆ ಈ ಹಿಂದಿನಿಂದಲೂ ವೀರಪ್ಪ ಮೊಯ್ಲಿಯವರು ಒತ್ತಾಯಿಸುತ್ತಿದ್ದು ಇದೀಗ ಕರ್ನಾಟಕದವರಾದ ಮೊಯ್ಲಿ ಕೇಂದ್ರ ಕಾನೂನು ಸಚಿವರಾಗಿರುವ ಹಿನ್ನಲೆಯಲ್ಲಿ ಈ ಪೀಠ ಬೆಂಗಳೂರಿನಲ್ಲಿ ಸ್ಥಾಪನೆಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಮುಂದೆ ಓದಿ

ಸಾಹಿತ್ಯ

ಬಲೆ ನೇಯ್ದು ಸುಮ್ಮನಾಯಿತು
ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ
ಏನೇನೋ ಪರದಾಟ
ತನ್ನ ರಕ್ಷಣೆಗೆ, ಜೊತೆಗೆ ಹೊಟ್ಟೆ ನೀಗಲು
ಬಲುಕಷ್ಟ


ಹೌದು ಹರೆಯದ 'ನೊಣವೆಂಬ' 'ನರ'
ಜೊತೆಗಿದ್ದಾಕೆಯೊಂದಿಗೆ
ತನಗರಿವಿಲ್ಲದೆ ತೋರಿದ ಅತೀ ಪ್ರೀತಿ
ಓ...! ಪ್ರೀತಿ 'ಬಲೆ'ಯು ಹೌದು
ಬಂಧನವೂ
ಹಾರಾಡಿ ಸಿಕ್ಕಿ ಬಿಟ್ಟ ಈ ಪ್ರೀತಿಗೆ
ಪ್ರೀತ್ಸೋ ಜೀವನ 'ಹಲವು'
ಅದರಲ್ಲಿಂತದ್ದು 'ಕೆಲವು'
ಹೊರ ನುಸುಳಲು ಹಾರಾಟ
ಬಂಧನದ ಸಾವೆಂಬುದಕೆ
ಕಾರಣ ಈ ಜೇಡ
ಹೀಗಾದರೆ ಕೊನೆಗೆ ಅರ್ಥೈಸುವುದೇ
ಓ...! ಈ ಪ್ರೀತಿಯೇ ಬೇಡ


- ರಮೇಶ್. ಸುರ್ಯ
ಎಸ್.ಡಿ.ಎಂ ಉಜಿರೆ.

ಮುಂದೆ ಓದಿ
8:11 AM

ಸಾಲ್ಯೂಟ್...!

Posted by ekanasu

ರಾಜ್ಯ - ರಾಷ್ಟ್ರ

ಸಾಲ್ಯೂಟ್...! ಇಷ್ಟು ಮಾತ್ರವೇ ನಾವಿಂದು ಹೇಳಬಲ್ಲವೆ... ಭಾರತೀಯ ಯೋಧರ ಕೆಚ್ಚೆದೆಯ ಹೋರಾಟಕ್ಕೆ ಜಯ ಸಿಕ್ಕಿ ಇಂದಿನ ಹತ್ತು ವರ್ಷಗಳು ಸಂದವು. ಹಲವು ಸಾವು ನೋವುಗಳ ನಡುವೆ ಭಾರತೀಯ ಸೇನೆ ಜಯಗಳಿಸಿತು. `ಆಪರೇಷನ್ ವಿಜಯ್ 'ಗೆ ಇಡೀ ದೇಶ ಸಂಭ್ರಮಿಸಿತು. ಹೌದು ಕಾರ್ಗಿಲ್ ಯುದ್ಧದಲ್ಲಿ ದೇಶದ ವೀರ ಯೋಧರು ಪ್ರಾಣದ ಹಂಗು ತೊರೆದು ದೇಶ ರಕ್ಷಣೆಯನ್ನು ಮಾಡುವಲ್ಲಿ ಯಶಸ್ವಿಯಾದರು.


ಅದು ಅತ್ಯಂತ ಭಯಾನಕ ಕದನವಾಗಿತ್ತು. ಅನೇಕ ಯೋಧರು ಹುತಾತ್ಮರಾದರು. ಇನ್ನನೇಕರು ತಮ್ಮ ಅಂಗಾಂಗಗಳನ್ನು ಕಳೆದುಕೊಂಡು ಶಾಶ್ವತ ಅಂಗವಿಕಲರಾದರು.ಕಳೆದ ಹತ್ತು ವರ್ಷಗಳ ಹಿಂದೆ ಇದೇ ಜುಲೈ 26ರಂದು ಭಾರತೀಯ ಸೇನೆಯ ಪಾಲಿಗೆ ವಿಜಯ ದಿವಸವಾಗಿತ್ತು. ಇಡೀ ದೇಶವೇ ವೀರ ಯೋಧರನ್ನು ಕೊಂಡಾಡಿತು. ಅದರ ಫಲವಾಗಿ ಇಂದು ನಾವು ಇದೇ ದಿನವನ್ನು ವಿಜಯ ದಿವಸವಾಗಿ ಆಚರಿಸುತ್ತಿದ್ದೇವೆ. ದೇಶಕ್ಕಾಗಿ ಪ್ರಾಣತೆತ್ತ ವೀರ ಯೋಧರ ನೆನಪನ್ನು ಸದಾ ಮಾಡುವುದು ನಮ್ಮೆಲ್ಲರ ಕರ್ತವ್ಯವೂ ಹೌದು. ಈ ದಿನದಂದು ದೇಶ ರಕ್ಷಣೆಗಾಗಿ ಜೀವ ಮುಡಿಪಾಗಿಟ್ಟು ಹೋರಾಡಿದ ವೀರ ಹುತಾತ್ಮ ಯೋಧರ ಕುಟುಂಬಕ್ಕೆ ನಾವು ನೆರವಾಗೋಣ, ಜೊತೆ ಜೊತೆಗೆ ಅಂಗ ವೈಕಲ್ಯದಿಂದಾಗಿ ಜೀವನ ಸಾಗಿಸಲು ಹೆಣಗಾಡುತ್ತಿರುವ ಯೋಧರ ಕುಟುಂಬಕ್ಕೆ ಆಸರೆಯಾಗೋಣ...ತನ್ಮೂಲಕ `ವಿಜಯ ದಿವಸ'ವನ್ನು ಅರ್ಥಪೂರ್ಣವಾಗಿ ಆಚರಿಸೋಣ...













ಮುಂದೆ ಓದಿ
7:40 AM

ಎಂ. ವ್ಯಾಸ ನಮನ

Posted by ekanasu

ಪ್ರಾದೇಶಿಕ ಸುದ್ದಿ

ಅಸ್ತ್ರ ಕೃತಿ ಬಿಡುಗಡೆ
ಹಿರಿಯ ಕತೆಗಾರರಾದ ಎಂ. ವ್ಯಾಸ ಅವರು ತೀರಿಕೊಂಡು ಜುಲೈ 23 ಕ್ಕೆ ಒಂದು ವರ್ಷವಾಯಿತು. ಈ ಸಂದರ್ಭದಲ್ಲಿ ಬೆಂಗಳೂರಿನ ಅಂಕಿತ ಪ್ರಕಾಶನ ದ ಆವರಣದಲ್ಲಿ ವ್ಯಾಸ ನಮನ ಮತ್ತು ಹೊಸ ಕಥಾ ಸಂಕಲನ `ಅಸ್ತ್ರ' ದ ಬಿಡುಗಡೆ ಸಮಾರಂಭವು ನಡೆಯಿತು. ಬೆಂಗಳೂರಿನ ವ್ಯಾಸರ ಓದುಗರೂ ಅಭಿಮಾನಿಗಳೂ ಒಟ್ಟು ಸೇರಿ ನಡೆಸಿದ ಈ ಸಮಾರಂಭವು ಅರ್ಥಪೂರ್ಣವಾಗಿ ನಡೆಯಿತು. ಹಿರಿಯ ಪರ್ತಕರ್ತ ಡಾ. ವಿಜಯಾ ಅವರು ಹೊಸ ಕಥಾ ಸಂಕಲನ `ಅಸ್ತ್ರ' ವನ್ನು ಬಿಡುಗಡೆಗೊಳಿಸುತ್ತಾ ವ್ಯಾಸರ ಜತೆಗಿನ ಒಡನಾಟಗಳನ್ನು ನೆನಪಿಸಿಕೊಂಡರು.


ವ್ಯಾಸರು ತನ್ನ ಅಂತರಂಗದ ಗೆಳೆಯರಾಗಿದ್ದರು ಎನ್ನುತ್ತಾ ಭಾವುಕರಾದ ವಿಜಯಾ ಅವರು ವ್ಯಾಸರ ಕಥಾ ಜಗತ್ತಿನ ಹಲವು ಮಗ್ಗುಲುಗಳನ್ನು ವಿವರಿಸಿದರು. ಕೃತಿಯ ಬಗ್ಗೆ ಮಾತನಾಡಿದ ಮಲ್ಲಿಗೆ ಸಂಪಾದಕರಾದ ಶ್ರೀಧರಮೂರ್ತಿ ಅವರು ವ್ಯಾಸರ ಕತೆಗಳ ವಿಶಾಲ ಪ್ರಪಂಚವನ್ನು ಗುರುತಿಸಿ ವಿವರಿಸುತ್ತಾ ಒಂದು ಕತೆಯು ಮತ್ತೊಂದು ಕತೆಯ ಜತೆಗೆ ಮಾತನಾಡುತ್ತಿರುವ ಹಾಗೆ ಬರೆದ ವ್ಯಾಸರದ್ದು ಎಂದೆಂದೂ ಮುಗಿಯದ ಕತೆಯಾಗಿದ್ದುವು ಎಂದರು.

ವಿಶೇಷ ಅತಿಥಿಯಾಗಿ ಭಾಗವಹಿಸಿದ ಜಯಂತ ಕಾಯ್ಕಿಣಿ ಅವರು ವ್ಯಾಸರ ಜತೆಗಿನ ಒಡನಾಟದ ಹಲವು ಮಧುರ ಕ್ಷಣಗಳನ್ನು ನೆನಪಿಸಿಕೊಂಡರು. ವ್ಯಾಸರು ನಮ್ಮ ಮನೋಭೂಮಿಕೆಯ ಅವಿಭಾಜ್ಯ ಅಂಗ ಎಂದ ಅವರು ವ್ಯಾಸರು ಬರೆಯುತ್ತಿದ್ದ ಪತ್ರಗಳನ್ನು ನೆನಪಿಸಿಕೊಳ್ಳುತ್ತಾ ಅವರ ಪತ್ರಗಳೂ ಕತೆಗಳ ಹಾಗೇ ಇರುತ್ತವೆ ಎಂದರು. ಅವರ ಕತೆಗಳು ಒಂದರ್ಥದಲ್ಲಿ ಬದುಕಿಗಾಗಿ ಬರೆದ ಪತ್ರಗಳೇ ಆಗಿವೆ ಎಂದು ವ್ಯಾಖ್ಯಾನಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ವರದರಾಜ ಚಂದ್ರಗಿರಿಯವರು ವ್ಯಾಸರ ಬದುಕು ಬರೆಹಗಳ ಹಿಂದಿನ ಪ್ರೇರಣೆಗಳ ಬಗ್ಗೆ ಮಾತನಾಡಿ, ಮುಂದೆ ವ್ಯಾಸರ ಬರಹಗಳನ್ನು ಸಂಗ್ರಹಿಸಿ ಉಳಿಸುವ ಯೋಜನೆಗಳ ಬಗ್ಗೆ ವಿವರಿಸಿದರು. ವ್ಯಾಸ ಕುಟುಂಬದ ಪರವಾಗಿ ಅಂಕಿತ ಪ್ರಕಾಶನದವರಿಗೆ ವಂದನೆಗಳನ್ನು ಸಲ್ಲಿಸಿದರು. ಅಂಕಿತ ಪ್ರಕಾಶನದ ಮಾಲಕರೂ ಅಸ್ತ್ರ ದ ಪ್ರಕಾಶಕರೂ ಆದ ಪ್ರಕಾಶ್ ಕಂಬತ್ತಳ್ಳಿಯವರು ಸ್ವಾಗತಿಸಿ, ವಂದಿಸಿರು.

ಅಸ್ತ್ರ (ಕತೆಗಳು)
ಎಂ. ವ್ಯಾಸ
ಪ್ರ: ಅಂಕಿತ ಪ್ರಕಾಶನ
ಗಾಂಧಿ ಬಜಾರ್
ಬೆಂಗಳೂರು
ಬೆಲೆ: 95

ವರದಿ: ಡಾ. ವರದರಾಜ ಚಂದ್ರಗಿರಿ

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮಂಗಳೂರು: ನಾಗರ ಪಂಚಮಿ ನಾಡಿಗೆ ದೊಡ್ಡದು...ಹೌದು ಈ ನಾಗರ ಪಂಚಮಿಯಿಂದಲೇ ಹಬ್ಬಗಳ ಹೆಬ್ಬಾಗಿಲು ತೆರೆದುಕೊಳ್ಳುವುದು ಕೂಡಾ!ಆಷಾಢ ಕಳೆದು ಶ್ರಾವಣ ಕಾಲಿಡುವ ಶುಭಾವಸರ. ಮೊದಲ ಹಬ್ಬ ನಾಗರ ಪಂಚಮಿ. ಜನಮೇಜಯ ಮಹಾರಾಜನು ತಾನು ಮಾಡುತ್ತಿದ್ದ ಸರ್ಪಯಜ್ಞವನ್ನು ನಿಲ್ಲಿಸಿ ಮಹಾಭಾರತವನ್ನು ಕೇಳಲು ಆರಂಭಿಸಿದ್ದು ಇದೇ ಶ್ರಾವಣ ಶುದ್ಧ ಪಂಚಮಿಯ ದಿನ! ಹಾಗಾಗಿ `ನಾಗಪಂಚಮೀ' ಎಂದು ಪ್ರಸಿದ್ಧಿ ಪಡೆದಿದೆ.


ನಾಗರ ಪಂಚಮಿಯಂದು ನಾಗನಿಗೆ ಹಾಲು, ಸೀಯಾಳ, ಅರಶಿನ, ಕೇದಗೆ, ಅಡಕೆ ಹಿಂಗಾರ ಸಮರ್ಪಿಸಲಾಗುತ್ತಿದೆ. ಸಂತಾನ ಪ್ರಾಪ್ತಿ, ಚರ್ಮವ್ಯಾಧಿ ಮೊದಲಾದ ರೋಗ ನಿವಾರಣೆಗಾಗಿ ನಾಗನಿಗೆ ಹರಕೆ ಸಲ್ಲಿಸಲಾಗುತ್ತದೆ. ನಾಗ ಪ್ರಕೃತಿ ಪ್ರಿಯ. ನಾಗರ ಪಂಚಮಿಯ ಶುಭದಿನವಾದ ರವಿವಾರದಂದು ಮುಂಜಾನೆಯಿಂದಲೇ ಭಕ್ತ ಜನ ಸಮುಹ ವಿವಿಧ ದೇಗುಲಗಳಲ್ಲಿ ಪೂಜೆ ಪುರಸ್ಕಾರಗಳನ್ನು ಸಲ್ಲಿಸಿದರು. ಶ್ರೀ ಕ್ಷೇತ್ರ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಕುಡುಪು, ಶ್ರೀ ಕ್ಷೇತ್ರ ಮಂಜೇಶ್ವರ, ಶ್ರೀ ಕ್ಷೇತ್ರ ಶರವು ಹೀಗೆ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಪೂಜೆಗಳು ನಾಗನಿಗೆ ಸಂದವು. ಹಾಲಭಿಷೇಕ , ಸೀಯಾಳಾಭಿಷೇಕಗಳು ಇಂದಿನ ವಿಶೇಷವಾಗಿದ್ದವು.



































ಮುಂದೆ ಓದಿ
3:41 PM

ಹಿಂದೂ ಧರ್ಮ ಸಭೆ

Posted by ekanasu

ರಾಜ್ಯ - ರಾಷ್ಟ್ರ

ಯು.ಎಸ್.ಎ.ಯ ವರ್ಜೇನಿಯಾದಲ್ಲಿ ಪ್ರಥಮ ಹಿಂದೂ ಧರ್ಮಸಭೆ ಇತ್ತೀಚೆಗೆ ನಡೆಯಿತು.ಹಿರಿಯರಾದ ಭಕ್ತರಾಜ ಮಹಾರಾಜ್, ಅಥಾವಲ್ ಈ ಸಂದರ್ಭ ಉಪಸ್ಥಿತರಿದ್ದು , ಹಿಂದೂ ಧರ್ಮದ ಏಳಿಗೆ ಕುರಿತ ಮಾಹಿತಿಗಳನ್ನು ನೀಡಿದರು. ನಾರ್ತ್ ಅಮೆರಿಕಾ, ಕೆನಡಾದ ಹಿಂದೂ ಬಾಂಧವರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಬಜಪೆ: ಇಂದು ಮಧ್ಯಾಹ್ನ ಬಜ್ಪೆ ಪೆಟ್ರೋಲ್ ಪಂಪ್ ಬಳಿ ನಡೆದ ಅಪಘಾತದಲ್ಲಿ ಎರಡು ಮಂದಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಮಾರುತಿ ಆಮ್ನಿ ಕಾರೊಂದು ಬ್ರೇಕ್ ವೈಫಲ್ಯದಿಂದ ವಿದ್ಯುತ್ ತಂತಿಗೆ ಡಿಕ್ಕಿಹೊಡೆದು ಈ ಅವಘಡ ಸಂಭವಿಸಿತು. ಅವಘಡದಿಂದಾಗಿ ವಿದ್ಯುತ್ ಕಂಡ ಮುರಿದು ಬಿದ್ದಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.

























ವರದಿ: ರೇಮಂಡ್ ಕರ್ಡೋಜಾ

ಮುಂದೆ ಓದಿ

ವೈವಿಧ್ಯ
ನಾಗರ ಪಂಚಮಿಗೆ ನಾಡು ಸಿದ್ದವಾಗಿದೆ.ನಾಗರ ಪಂಚಮಿ ಬಂತೆಂದರೆ ಹಬ್ಬಗಳ ಬಾಗಿಲು ತೆರೆದಂತೆಯೇ. ನಾಗರಪಂಚಮಿಯ ನಂತರ ಒಂದೊಂದೇ ಹಬ್ಬಗಳು ಪ್ರಾರಂಭಗೊಳ್ಳುತ್ತವೆ.ಇದೀಗ ನಾಗರ ಪಂಚಮಿಗಾಗಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.ಕೇದಗೆ,ಸೀಯಾಳ,ಹೂವು,ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟವಾಗುತ್ತಿವೆ.ನಾಗನ ಕಟ್ಟೆಗಳು ಶುಚಿಗೊಳ್ಳುತ್ತಿದ್ದು ಪೂಜೆಗೆ ಸಿದ್ಧಗೊಳ್ಳುತ್ತಿವೆ.ಹಲವು ದೇಗುಲಗಳು ನಾಗಾರಾಧನೆಗೆ ಸಿದ್ಧವಾಗಿವೆ.







ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಬೆಳ್ತಂಗಡಿ: ನಾಡಿನ ಪವಿತ್ರ ಯಾತ್ರಾಸ್ಥಳ ಧರ್ಮಸ್ಥಳದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಉಜಿರೆಯಲ್ಲಿ ಡಿಸೆಂಬರ್ 10 ರಿಂದ 13 ರ ತನಕ ನಡೆಯಲಿರುವ ವಿಶ್ವ ತುಳು ಸಮ್ಮೇಳನವನ್ನು ವಿಭಿನ್ನ ರೀತಿಯಲ್ಲಿ ಅರ್ಥಪೂರ್ಣವಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ. ಧರ್ಮಸ್ಥಳದಲ್ಲಿ ಗುರುವಾರ ನಡೆದ ಸ್ವಾಗತ ಸಮಿತಿಯ ಸಭೆಯ ಬಳಿಕ ಅವರು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಸವಿವರ ಮಾಹಿತಿ ನೀಡಿದರು.


ಸಮ್ಮೇಳನದ ಪೂರ್ವಭಾವಿಯಾಗಿ ಅಕ್ಟೋಬರ್ 21 ರಿಂದ ನವೆಂಬರ್ 28 ರ ವರೆಗೆ ಏಳು ತಾಲೂಕು ಕೇಂದ್ರಗಳಲ್ಲಿ ತುಳು ನಾಡಿನ ಕ್ರೀಡೆ, ಉಡುಪು, ಸಂಸ್ಕೃತಿ, ಆಚಾರ-ವಿಚಾರ ಮುಂತಾದ ವಿಷಯಗಳ ಬಗ್ಯೆ ಸ್ಪರ್ಧೆ, ಪ್ರದರ್ಶನ ಮತ್ತು ವಿಚಾರ ಗೋಷ್ಠಿಗಳನ್ನು ಆಯೋಜಿಸಲಾಗುವುದು. ಇವುಗಳಲ್ಲಿ ಉತ್ತಮವಾಗಿ ಮೂಡಿಬಂದ ಕಾರ್ಯಕ್ರಮಗಳನ್ನು ಉಜಿರೆಯಲ್ಲಿ ನಡೆಯುವ ವಿಶ್ವ ತುಳು ಸಮ್ಮೇಳನದಲ್ಲಿ ಪ್ರದರ್ಶನ ನಡೆಸಲಾಗುವುದು.
ಡಿ. 10 ರಂದು ಗುರುವಾರ ಸಂಜೆ 4 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಬಳಿಕ ಮೂರು ದಿನ ವಿಶ್ವ ತುಳು ಸಮ್ಮೇಳನ ನಡೆಯಲಿದೆ.
ದೇಶ-ವಿದೇಶಗಳಿಂದ ತುಳು ಬಾಂಧವರನ್ನು ಈಗಾಗಲೇ ಆಮಂತ್ರಿಸಿದ್ದು ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ಡಾ. ಹೆಗ್ಗಡೆಯವರು ತಿಳಿಸಿದ್ದಾರೆ.

ಸಮ್ಮೇಳದಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಪ್ರತಿನಿಧಿ ಶುಲ್ಕ : ರೂ. 251 ಕೊಟ್ಟು ಸದಸ್ಯರಾದವರಿಗೆ ಸ್ಮರಣ ಸಂಚಿಕೆ, ಪ್ರಕಟಣೆಗಳು, ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.ಆಗೋಸ್ಟ್ 15 ರ ಬಳಿಕ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಕೇಂದ್ರದಲ್ಲಿರುವ ಕಾಲೇಜಿನಲ್ಲಿ ಸದಸ್ಯತ್ವ ನೋಂದಣಿ ಕಚೇರಿ ಪ್ರಾರಂಭಿಸಲಾಗುವುದು.ಉಜಿರೆಯಲ್ಲಿ ಈಗಾಗಲೇ ಸಮ್ಮೇಳನದ ಕಚೇರಿ ಆರಂಭವಾಗಿದೆ. ದೂರವಾಣಿ: 08256-237801.236221/236225/236488.
ಹೇಮಾವತಿ ವಿ. ಹೆಗ್ಗಡೆಯವರು ಸಮ್ಮೇಳನದ ವೆಬ್ಸೈಟ್ www.vishwatulusammelana.com ನ್ನು ಉದ್ಘಾಟಿಸಿದರು. ಮೂಡಬಿದ್ರೆಯ ಡಾ. ಎಂ. ಮೋಹನ ಆಳ್ವ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್, ಮಾಜಿ ಅಧ್ಯಕ್ಷ ಎಂ.ಕೆ. ಸೀತಾರಾಮ ಕುಲಾಲ್, ಡಿ. ಹರ್ಷೇಂದ್ರ ಕುಮಾರ್, ಹೇಮಾವತಿ ವಿ. ಹೆಗ್ಗಡೆಯವರು, ಸುಪ್ರಿಯಾ ಎಚ್. ಕುಮಾರ್, ಡಾ. ವಾಮನ ನಂದಾವರ, ಪ್ರೊ.ಎಂ. ರಾಮಚಂದ್ರ, ಗುಣಪಾಲ ಕಡಂಬ ಮೊದಲಾದವರು ಉಪಸ್ಥಿತರಿದ್ದರು.

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ವಿಶ್ವ ತುಳು ಸಮ್ಮೇಳನ ಸಮಿತಿ ಆಗ್ರಹ

ಬೆಳ್ತಂಗಡಿ : ನದಿ ಪಾತ್ರಗಳು ಆಯಾ ಪ್ರದೇಶದ ಸಂಸ್ಕೃತಿ, ಸಾಹಿತ್ಯ ಮತ್ತು ಜನಜೀವನವನ್ನು ಬಿಂಬಿಸುವ ಜೀವನಾಡಿಗಳಾಗಿದ್ದು ತೀರಾ ಅವೈಜ್ಞಾನಿಕವಾಗಿರುವ ನೇತ್ರಾವತಿ ನದಿ ತಿರುವು ಯೋಜನೆಯನ್ನು ಕೈ ಬಿಡಬೇಕೆಂಧು ವಿಶ್ವ ತುಳು ಸಮ್ಮೇಳನ ಸಮಿತಿ ಒತ್ತಾಯಿಸಿದೆ.ಧರ್ಮಸ್ಥಳದಲ್ಲಿ ಗುರುವಾರ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ, ನೇತ್ರಾವತಿಯನ್ನು ಕದಲಿಸುವ ಯೋಜನೆಗಳು ತುಳುವರ ಸಂಸ್ಕೃತಿಯ ಮೂಲವನ್ನೇ ಕದಲಿಸಿದಂತೆ ಆಗುವುದರಿಂದ ಇದನ್ನು ರಕ್ಷಿಸಿಕೊಳ್ಳಲು ಎಲ್ಲಾ ರೀತಿಯ ಹೋರಾಟಕ್ಕೆ ಸಜ್ಜಾಗಲು ಸಮಿತಿ ನಿರ್ಧರಿಸಿದೆ.


ನೇತ್ರಾವತಿ ನದಿ ತಿರುವು ಯೋಜನೆಯ ವೈಜ್ಞಾನಿಕ ಪರಿಶೀಲನೆಗೆ ಸರ್ಕಾರವು ಹಣ ಬಿಡುಗಡೆ ಮಾಡಿರುವ ವರದಿಗಳ ಬಗ್ಯೆ ತೀವ್ರ ಆತಂಕ ಮತ್ತು ವಿರೋಧ ವ್ಯಕ್ತವಾಯಿತು. ಕರಾವಳಿ ಪ್ರದೇಶದಲ್ಲಿ ಹರಿಯುವ ಯಾವುದೇ ನದಿ, ಮುಖ್ಯವಾಘಿ ನೇತ್ರಾವತಿ ನದಿಯ ತಿರುವಿನ ಬಗ್ಯೆ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ಜಿಲ್ಲೆಯ ಸಮಸ್ತ ಜನರೊಂದಿಗೆ ಚರ್ಚಿಸಬೇಕು. ನದಿ ಪಾತ್ರದಲ್ಲಿ ನೆಲೆಸಿರುವ ಕೃಷಿಕರು, ಮೀನುಗಾರರ ಗಮನಕ್ಕೆ ಬಾರದಂತೆ ಸರ್ಕಾರ ಯೋಜನೆಯ ಅನುಷ್ಠಾನದ ಬಗ್ಯೆ ಪರಿಶೀಲನೆಗೆ ಮುಂದಾಗಿರುವ ಬಗ್ಗೆ ವಿಶ್ವ ತುಳು ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ಕಾಟಕ ಮೊಗವೀರ ಸಮಾಜದ ಅಧ್ಯಕ್ಷ ಉಡುಪಿಯ ಪ್ರಮೋದ್ ಮಧ್ವರಾಜ್, ನೇತ್ರಾವತಿ ನದಿ ತಿರುವು ಯೋಜನೆಯು ಕರಾವಳಿಯ ಮೀನುಗಾರಿಕೆಗೆ ಮಾರಕವಾಗಲಿದ್ದು, ಇಲ್ಲಿನ ಜನಜೀವನ ಹಾಗೂ ಮತ್ಸೋದ್ಯಮ ಅಸ್ತವ್ಯಸ್ತವಾಗಲಿರುವುದರಿಂದ ಈ ಯೋಜನೆಯನ್ನು ತಕ್ಷಣ ಕೈ ಬಿಡಬೇಕೆಂದು ಆಗ್ರಹಿಸಿದರು.

ಮೂಡಬಿದ್ರೆಯ ಡಾ. ಎಂ. ಮೋಹನ ಆಳ್ವ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್, ಮಾಜಿ ಅಧ್ಯಕ್ಷ ಎಂ.ಕೆ. ಸೀತಾರಾಮ ಕುಲಾಲ್, ಡಿ. ಹರ್ಷೇಂದ್ರ ಕುಮಾರ್, ಹೇಮಾವತಿ ವಿ. ಹೆಗ್ಗಡೆಯವರು, ಸುಪ್ರಿಯಾ ಎಚ್. ಕುಮಾರ್, ಡಾ. ವಾಮನ ನಂದಾವರ, ಪ್ರೊ.ಎಂ. ರಾಮಚಂದ್ರ, ಗುಣಪಾಲ ಕಡಂಬ ಮೊದಲಾದವರು ಉಪಸ್ಥಿತರಿದ್ದರು. ಸಮಿತಿಯ ಸರ್ವ ಸದಸ್ಯರು ನೇತ್ರಾವತಿ ನದಿ ತಿರುವು ಯೋಜನೆಯನ್ನು ಕೈ ಬಿಡಲು ಸರ್ಕಾರವನ್ನು ಒತ್ತಾಯಿಸಿದರು. ಇಲ್ಲವಾದಲ್ಲಿ ಮುಂದೆ ಉಗ್ರ ಹೋರಾಟ ಹಾಗೂ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.

ವರದಿ: ಸುನಿಲ್ ಬೇಕಲ್, ಧರ್ಮಸ್ಥಳ

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಮಣಿಪಾಲ: ಪದ್ಮಭೂಷಣ ಡಾ.ಎಂ.ವಿ.ಕಾಮತ್ ಅವರ `ಆನ್ ಮೀಡಿಯಾ, ಪೊಲಿಟಿಕ್ಸ್ ಅಂಡ್ ಲಿಟರೇಚರ್' ಮಣಿಪಾಲದ ಡಾ.ಟಿ.ಎಂ.ಎ ಪೈ ಪ್ಲಾನಟಾರಿಯಂನಲ್ಲಿ ಜು.25ರಂದು ಸಂಜೆ 4ಕ್ಕೆ ಬಿಡುಗಡೆಗೊಳ್ಳಲಿದೆ. ವಿಜ್ಞಾನಿ ಡಾ.ಎನ್.ಎಸ್.ರಾಜಾರಾಂ ಪುಸ್ತಕ ಬಿಡುಗಡೆಮಾಡಲಿದ್ದಾರೆ.ಆತ್ಮೀಯರು , ಎಂ.ವಿ.ಕಾಮತ್ ಅವರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ, ಮುಲಾಯಂ ಸಿಂಗ್ ಯಾದವ್, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಬಿಜೆಪಿಯ ಮುರಳಿ ಮನೋಹರ್ ಜೋಷಿಗೆ ನೀಡಲಾಗಿರುವ ಎನ್‌ಎಸ್‌ಜಿ ಭದ್ರತೆಯನ್ನು ವಾಪಸು ಪಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ವಷ್ಟಪಡಿಸಿದೆ.
ಈ ಬಗ್ಗೆ ಸಂಸತ್ತಿನ ಉಭಯ ಸದಗಳಲ್ಲಿ ಎಸ್.ಪಿ ಹಾಗೂ ಬಿ.ಎಸ್ಪಿ ಸದಸ್ಯರು ತೀವ್ರ ಗದ್ದಲ ನಡೆಸಿದ್ದು ಈ ಪರಿಣಾಮ ಸದನ ಕಲಾಪಗಳನ್ನು ಮುಂದೂಡಲಾಗಿತ್ತು. ಏತನ್ಮಧ್ಯೆ ತಮ್ಮ ಜೀವನಕ್ಕೆ ಏನಾದರೂ ಅಪಾಯ ಎದುರಾಗಿದ್ದಲ್ಲಿ ಅದಕ್ಕೆ ಸರ್ಕಾರವೇ ಹೊಣೆ ಎಂದು ಈ ಪ್ರಮುಖರು ಸದನದಲ್ಲಿ ಎಚ್ಚರಿಕೆ ನೀಡಿದರು. ಇದಾದ ನಂತರ ಭದ್ರತೆಯನ್ನು ವಾಪಾಸು ಪಡೆಯುವುದಿಲ್ಲೆ ಎಂದು ಗೃಹ ಸಚಿವರು ಭರವಸೆ ನೀಡಿದರು.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ನೀರ್ಚಾಲು:ಕೃಷಿಕರಿಗೊಂದು ಸಂತಸದ ಸುದ್ದಿ...ಅಡಕೆ ಕೃಷಿಗೆ ಔಷಧಿ ಸಿಂಪಡಿಸಲು ಜನ ಸಿಗುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುತ್ತಿದೆಯೇ...ಹಾಗಾದರೆ ನೀವು ಜುಲೈ 24ರಂದು ಒಂದಷ್ಟು ಬಿಡುವು ಮಾಡಿಕೊಳ್ಳಿ...ನಿಮ್ಮ ತೊಂದರೆ ನಿವಾರಣೆಗೆ ಇಲ್ಲಿದೆ ಸುಲಭ ಮಾರ್ಗೋಪಾಯ.ಅಡಕೆ ಮರಕ್ಕೆ ಕೆಳಗಿನಿಂದಲೇ ಔಷಧಿ ಸಂಪಡಿಸುವ ಪ್ರಾತ್ಯಕ್ಷಿಕೆಯನ್ನು ಬೆಳಗ್ಗೆ 11.30ಕ್ಕೆ ನೀರ್ಚಾಲು ಪರಿಸರದಲ್ಲಿ ಏರ್ಪಡಿಸಲಾಗಿದೆ. ಈ ಉಪಯುಕ್ತ ಕಾರ್ಯಕ್ರಮವನ್ನು ನವಜೀವನ ಫಾರ್ಮರ್ಸ್ ಕ್ಲಬ್ ಪ್ರಾಯೋಜಿಸುತ್ತಿದೆ.ವಿವರಗಳಿಗೆ ಕೃಷಿ ವಿಜ್ಞಾನ ಕೇಂದ್ರ ಕಾಸರಗೋಡು ಇವರನ್ನು ಸಂಪರ್ಕಿಸಬಹುದಾಗಿದೆ.

ಮುಂದೆ ಓದಿ

ವೈವಿಧ್ಯ

ಅಂದು ಸೋಮವಾರ. ಸಮಯ ಬೆಳಗಿನ ೮ ಗಂಟೆ. ಶನಿವಾರ ಹಾಗೂ ಭಾನುವಾರಗಳಂದು ರಜೆಯ ಸಂಭ್ರಮದಲ್ಲಿದ್ದ ಹೊಸನಗರ ತಾಲೂಕು ಹಿರೇಜೇನಿಯ ಶರಾವತಿ, ಸಮಯಕ್ಕೆ ಸರಿಯಾಗಿ ತರಗತಿ ಸೇರುವ ಆತುರದಲ್ಲಿದ್ದಳು. ೪ನೇ ತರಗತಿ ವಿದ್ಯಾರ್ಥಿನಿ ಆಕೆ. ಹೊರಗಡೆ ಮುಂಗಾರು ಮಳೆಯ ಆರ್ಭಟ ಜೋರಾಗಿತ್ತು. ಬಿರುಸಿನ ಮಳೆಗೆ ಕಾಲುವೆಗಳು ತುಂಬಿ ಹರಿಯುತ್ತಿದ್ದವು. ಶಾಲೆ ತಲುಪಲು ಮನೆ ಸಮೀಪದ ಕಾಲು ಸಂಕ ದಾಟಬೇಕಿತ್ತು. ತಂಗಿ ಹಾಗೂ ತಮ್ಮನೊಂದಿಗೆ ಸಂಕ ದಾಟುವಾಗ ಕಾಲು ಜಾರಿ ಮೂವರೂ ಹಳ್ಳಕ್ಕೆ ಬಿದ್ದು ಬಿಟ್ಟರು.


ಅಲ್ಲಿಯೇ ಇದ್ದ ನೆರೆಮನೆಯಾತ ಇವರ ಕೂಗಾಟ ಕೇಳಿ ಮಕ್ಕಳನ್ನು ರಕ್ಷಿಸಲು ಹೋದ. ಜೀವದ ಹಂಗು ತೊರೆದು ಕಾಲುವೆಗೆ ಇಳಿದ. ಕಷ್ಟಪಟ್ಟು ಇಬ್ಬರು ಮಕ್ಕಳನ್ನು ಉಳಿಸಿದ. ಆದರೆ, ಶರಾವತಿಯನ್ನು ಉಳಿಸಲು ಸಾಧ್ಯವಾಗಲಿಲ್ಲ. ನೋಡ, ನೋಡುತ್ತಿದ್ದಂತೆಯೇ ನೀರಿನಲ್ಲಿ ಕೊಚ್ಚಿ ಹೋಗೇ ಬಿಟ್ಟಳು.
ಅದೇ ದಿನ, ಸರಿಸುಮಾರು ಅದೇ ಸಮಯ. ಮೂಡಿಗೆರೆ ತಾಲೂಕು ಎಸ್ಟೇಟ್ ಕುಂದೂರಿನ ಬಾಲಕಿ ಪ್ರೇಮಾ, ಶಾಲೆಗೆ ಹೊರಟಿದ್ದಳು. ಮೂಡಿಗೆರೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಎಸ್ಎಲ್ಸಿ ಓದುತ್ತಿರುವಾಕೆ. ದಾರಿ ಮಧ್ಯದ ಊಳಿಗೆ ಹೊಳೆ ದಾಟುತ್ತಿದ್ದಳು. ಕಾಲು ಜಾರಿ ಬಿದ್ದು ಪ್ರವಾಹದಲ್ಲಿ ಒಂದಾಗಿ ಬಿಟ್ಟಳು.


ಇವೆರಡೂ ಒಂದೇ ದಿನ, ಒಂದೇ ಸಮಯದಲ್ಲಿ ಸಂಭವಿಸಿದ ದುರ್ಘಟನೆಗಳು. ಮಳೆಯ ರುದ್ರ ನರ್ತನಕ್ಕೆ ಮುದ್ದು ಕಂದಮ್ಮಗಳು ಬಲಿಯಾದ ಸನ್ನಿವೇಶಗಳು. ಪ್ರಕೃತಿ ವಿಕೋಪದ ಕರಾಳ ಮುಖಗಳು. ಮುಂಗಾರು ಮಳೆಯ ಆರ್ಭಟ ಜೋರಾಗಿಯೇ ಇದೆ. ಹಾಗಾಗಿ, ಗ್ರಾಮೀಣ ಪ್ರದೇಶದಲ್ಲಿ, ಅದರಲ್ಲೂ ವಿಶೇಷವಾಗಿ ಕರಾವಳಿ ಹಾಗೂ ಮಲೆನಾಡ ಭಾಗದಲ್ಲಿ ಶಾಲಾ ಮಕ್ಕಳಿಗೆ ಇದು ಸಂಕಷ್ಟದ ಸಮಯ. ಬಹುತೇಕ ಹಳ್ಳಿಗಳಲ್ಲಿ ಮಕ್ಕಳು ಶಾಲೆ ತಲುಪಲು ಕಿ.ಮೀ.ಗಳಷ್ಟು ದೂರ ನಡೆಯಬೇಕು. ಸರಿಯಾದ ರಸ್ತೆಗಳು ಇರುವುದಿಲ್ಲ. ಅದರಲ್ಲೂ ಮಳೆಗಾಲದಲ್ಲಿ ರಸ್ತೆಗಳು ಕೊರಕಲು ಬೀಳುತ್ತವೆ. ಮಳೆಯಲ್ಲಿ ನಡೆದು ಹೋಗುತ್ತಿದ್ದರೆ, ರಸ್ತೆಯಲ್ಲಿ ಎಲ್ಲಿ ಹೊಂಡ, ತಗ್ಗುಗಳಿವೆ ಎನ್ನುವುದೇ ತಿಳಿಯುವುದಿಲ್ಲ.


ಹರಿವ ನೀರಿನ ಜೊತೆ ತೇಲಿ ಬರುವ ಹಾವುಗಳು, ಕ್ರಿಮಿ-ಕೀಟಗಳು ದೇಹಕ್ಕೆ ಅಪಾಯ ತಂದೊಡ್ಡಬಹುದು. ಮಳೆಯ ನೀರಿಗೆ ಅಲ್ಲಲ್ಲಿ ಹೆಪ್ಪು ಗಟ್ಟಿ ನಿಂತ ಪಾಚಿಗಳ ಮೇಲೆ ಕಾಲಿಟ್ಟಾಗ ಮಕ್ಕಳು ಕಾಲು ಜಾರಿ ಬಿದ್ದು, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆಯೂ ಇರುತ್ತದೆ.ಇನ್ನು ಕೆಲವು ಕಡೆ ಹೊಲ-ಗದ್ದೆಗಳಲ್ಲಿ ಜವುಳು ನೆಲ, ಕೆಸರು ಗದ್ದೆಗಳ ನಡುವೆ ನಡೆದುಕೊಂಡು ಹೋಗಬೇಕು. ಕಡಿದಾದ ಹೊಲದ ಪಟ್ಟಿಯ ಮೇಲೆ ನಡೆದು ಹೋಗುವಾಗ ದೇಹದ ಸಮತೋಲನ ಕಾಯ್ದುಕೊಳ್ಳಲು ಕಸರತ್ತು ಮಾಡಬೇಕು. ಮಳೆ ಜತೆ ಜೋರಾಗಿ ಗಾಳಿ ಬಂದರಂತೂ ಮಕ್ಕಳ ಪಾಡು ಹೇಳ ತೀರದು. ದೇಹದ ಸಮತೋಲನ ಕಾಯ್ದುಕೊಂಡು ಹೋಗುವುದರ ಜತೆ ಹಿಡಿದ ಛತ್ರಿ ಹಾರಿ ಹೋಗದಂತೆ ನೋಡಿಕೊಳ್ಳಬೇಕು. ಇದರ ನಡುವೆ ಪುಸ್ತಕಗಳು ಒದ್ದೆಯಾಗದಂತೆ ರಕ್ಷಿಸಿಕೊಳ್ಳಬೇಕು.

ಬಹುತೇಕ ಕಡೆಗಳಲ್ಲಿ ಹಳ್ಳ, ಕೊಳ್ಳಗಳಿಗೆ ಸೇತುವೆಗಳು ಇರುವುದೇ ಇಲ್ಲ. ಅಲ್ಲಿರುವುದು ಸಣ್ಣ ಸಂಕಗಳು. ಅಡಕೆ, ಇಲ್ಲವೇ ಇತರ ಮರಗಳನ್ನು ಬಳಸಿ ರಚಿಸಲಾಗುವ ಈ ಸಂಕಗಳು ಯಾವ ಸಂದರ್ಭದಲ್ಲಿ ಬೇಕಾದರೂ ಜೀವಕ್ಕೆ ಸಂಚಕಾರ ತರಬಹುದು. ತುಂಬಿ ಹರಿಯುತ್ತಿರುವ ಹಳ್ಳ-ನದಿಗಳ ಮಧ್ಯೆ ನಡೆಯುವಾಗ ಕೆಳಗಿನ ಪ್ರವಾಹ ನೋಡಿ, ಸಣ್ಣ ಮಕ್ಕಳು ತಲೆ ತಿರುಗಿ ಬೀಳುವ ಸಂಭವವೂ ಇರುತ್ತದೆ.ಜೋರಾಗಿ ಮಳೆ ಬಂದಾಗ ಈ ಕಾಲು ಸಂಕ ಕೂಡ ಕೊಚ್ಚಿ ಹೋಗುತ್ತದೆ. ಆಗ ನದಿಯ ದಡದ ಎರಡೂ ಬದಿಗಳಲ್ಲಿರುವ ಮರಕ್ಕೆ ಕಟ್ಟಿದ ಹಗ್ಗದ ಮೇಲೆ ನಡೆದುಕೊಂಡು ಹೋಗುವ ಸಾಹಸಕ್ಕೆ ಮುಂದಾಗಬೇಕಾಗುತ್ತದೆ.

ಇದು ಮಕ್ಕಳ ಜೀವಕ್ಕೆ ಸಂಚಕಾರವೇ ಸರಿ. ಕುಂದಾಪುರ ತಾಲೂಕಿನ ಮಾವಿನಕಾರು ಹಾಗೂ ಬಾವಡಿ ಗ್ರಾಮದಲ್ಲಿ ಬೆದ್ರಕಳಿ ನದಿಗೆ ಹಾಕಲಾಗಿದ್ದ ಕಾಲು ಸಂಕ ತೇಲಿ ಹೋದಾಗ ಶಾಲೆಗೆ ಹೋದ ಮಕ್ಕಳು ೨೫ ದಿನಗಳಾದರೂ ಮನೆಗೆ ಬರಲಾಗಲಿಲ್ಲ. ಪರಿಚಯಸ್ಥರ, ನೆಂಟರಿಷ್ಟರ ಮನೆಯಲ್ಲಿಯೇ ಉಳಿದುಕೊಳ್ಳಬೇಕಾಯಿತು.ಇವೆಲ್ಲದರ ನಡುವೆ ತರಗತಿಗೆ ತೆರಳುವಷ್ಟರಲ್ಲಿ ಮೈಯೆಲ್ಲಾ ಒದ್ದೆಯಾಗಿರುತ್ತದೆ. ಮೈ ನಡುಗುವ ಸ್ಥಿತಿಯಲ್ಲಿ ಪಾಠ ಕೇಳುವುದು ದುಸ್ತರದ ಮಾತೇ ಸರಿ. ಹೇಳಿ, ಕೇಳಿ ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲ ರೋಗಗಳ ಕಾಲ. ಶೀತ, ಜ್ವರ ಸಾಮಾನ್ಯ. ಇನ್ನು ಕೆಲವು ಕಡೆ ಶಾಲಾ ಕಟ್ಟಡಗಳು ಇಂದೋ, ನಾಳೆಯೋ ಬಿದ್ದು ಹೋಗುವ ದುಸ್ಥಿತಿಯಲ್ಲಿರುತ್ತವೆ.


ಪಾಠ ಕೇಳುತ್ತಿರುವಾಗಲೇ ಶಾಲೆಯ ಕಟ್ಟಡ ಕುಸಿದು ಬಿದ್ದು ಮಕ್ಕಳು ಜೀವ ತೆತ್ತ ಉದಾಹರಣೆಗಳೂ ನಮ್ಮಲ್ಲಿವೆ. ಅಲ್ಲದೆ ಶಾಲಾ ಕಟ್ಟಡಗಳು ಕುಸಿದು ಬೀಳುವ ಸನ್ನಿವೇಶ ಮಕ್ಕಳ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಬಹುದು. ಕಲಿಕೆ ಬಗ್ಗೆ ವ್ಯತಿರಿಕ್ತ ಪರಿಣಾಮ ಬೀರಿ, ಶಾಲೆ ಬಗ್ಗೆ ಭಯದ ವಾತಾವರಣ ಸೃಷ್ಠಿಸಬಹುದು. ಜೋರಾಗಿ ಮಳೆ ಬೀಳುವ ಸಂದರ್ಭದಲ್ಲಿ ಶಾಲಾ ವಾಹನಗಳು ಎಚ್ಚರ ತಪ್ಪಿದರೆ ಅಪಘಾತ ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಕಳೆದ ವರ್ಷ ಮಂಗಳೂರಿನಲ್ಲಿ ಶಾಲಾ ವಾಹನ ಮಗುಚಿ ಬಿದ್ದು ೨೦ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟ ಘಟನೆ ನಮ್ಮ ಮುಂದೆ ಇದೆ.

ಅಲ್ಲದೆ, ಎಷ್ಟೋ ಕಡೆ ಮಕ್ಕಳನ್ನು ಶಾಲೆಗೆ, ನಂತರ ಮರಳಿ ಮನೆಗೆ ಕರೆ ತರಲು ಪೋಷಕರಿಗೆ ಸಮಯ ಇರುವುದಿಲ್ಲ. ಕೂಲಿಗೆ ಹೋಗುವ, ತೋಟ, ಹೊಲ, ಗದ್ದೆಗಳಲ್ಲಿ ಕೆಲಸಕ್ಕೆ ತೆರಳುವ ಪೋಷಕರು ಮಕ್ಕಳು ಶಾಲೆಗೆ ತೆರಳುವ ಜಾಗೃತಿ ಕುರಿತು ಕಾಳಜಿ ವಹಿಸುವುದಿಲ್ಲ. ಸಹಪಾಠಿಗಳ ಜೊತೆ ಹೋಗುವ ಮಕ್ಕಳು ಕೀಟಲೆಗೆ ಒಳಗಾಗಿ ಜೀವಕ್ಕೆ ಅಪಾಯ ತಂದುಕೊಳ್ಳುವ ಸಂಭವ ಇರುತ್ತದೆ. ಮಳೆಗಾಲದ ವೇಳೆ ಅನುಸರಿಸಬೇಕಾದ ಸುರಕ್ಷಿತ ವಿಧಾನಗಳ ಬಗ್ಗೆ ಮಕ್ಕಳಿಗೆ ಸೂಕ್ತ ತಿಳುವಳಿಕೆ ನೀಡಿ. ಪ್ರವಾಹ, ನೆರೆಗಳಿಂದ ಸಂಭವಿಸಬಹುದಾದ ಅಪಾಯಗಳ ಬಗ್ಗೆ ಸೂಕ್ತ ಮಾಹಿತಿ ಕೊಡಿ. ಸಂಭಾವ್ಯ ದುರಂತಗಳ ಬಗ್ಗೆ ಎಚ್ಚರಿಕೆ ನೀಡಿ. ಇದು ಪಾಲಕರಾದ ನಿಮ್ಮ, ಹಾಗೂ ಶಿಕ್ಷಕರ ಜವಾಬ್ದಾರಿ.

ಪಾಲಕರೆ,
* ಮಕ್ಕಳ ಜೀವ ಅಮೂಲ್ಯ. ಕಳೆದು ಹೋಗಲು ಬಿಡಬೇಡಿ
* ಚಿಕ್ಕ ಮಕ್ಕಳನ್ನು ಶಾಲೆಯವರೆಗೆ ಬಿಟ್ಟು ಬನ್ನಿ, ನಂತರ ಕರೆತನ್ನಿ
*ಉತ್ತಮ ಗುಣಮಟ್ಟದ ಛತ್ರಿ, ರೇನ್ಕೋಟ್ಗಳನ್ನು ಮಕ್ಕಳಿಗೆ ಒದಗಿಸಿ
* ಊರಿನ ಹಳ್ಳ, ನದಿಗಳಿಗೆ ಗುಣಮಟ್ಟದ ಸಂಕ, ಸೇತುವೆ ನಿರ್ಮಾಣವಾಗುವಂತೆ ನೋಡಿಕೊಳ್ಳಿ
*ಮಳೆಗಾಲದಲ್ಲಿ ರೋಗಗಳು ಮಕ್ಕಳನ್ನು ಕಾಡುವುದು ಸಹಜ. ಅವರ ಆರೋಗ್ಯದ ಕಡೆ ಗಮನ ಕೊಡಿ
* ಶಾಲೆಯ ಕಟ್ಟಡಗಳನ್ನು ಸುಸ್ಥಿತಿಯಲ್ಲಿಡುವಂತೆ ಅಕಾರಿಗಳ ಮೇಲೆ ಒತ್ತಡ ಹೇರಿ. ಇಲ್ಲದಿದ್ದರೆ ಮಳೆ, ಗಾಳಿಗೆ ಕುಸಿದು ಬಿದ್ದು ಅನಾಹುತ ಸಂಭವಿಸಬಹುದು
*ಮಕ್ಕಳಿಗೆ ಶೀತ, ಜ್ವರ ಬಂದರೆ ನಿರ್ಲಕ್ಷ್ಯ ಮಾಡಬೇಡಿ. ತಕ್ಷಣವೇ ಉಪಚಾರ ನೀಡಿ.

- ಮಹಾಬಲೇಶ್ವರ ಹೊನ್ನೆಮಡಿಕೆ

ಮುಂದೆ ಓದಿ
2:22 PM

ವ್ಯಾಸ ಸಂಸ್ಮರಣೆ

Posted by ekanasu

ಪ್ರಾದೇಶಿಕ ಸುದ್ದಿ
ಮಂಗಳೂರು: ಕಥೆಗಾರ ಎಂ.ವ್ಯಾಸ ಅವರ ಸಂಸ್ಮರಣಾ ಕಾರ್ಯಕ್ರಮ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಗುರುವಾರ ನಡೆಯಿತು.
ವಿಭಾಗ ಮುಖ್ಯಸ್ಥರಾದ ಅಕ್ಷತಾ ಭಟ್ ಸಿ.ಎಚ್, ಭಾಷಾ ವಿಭಾಗ ಮುಖ್ಯಸ್ಥರಾದ ಪ್ರೊ.ಕೃಷ್ಣಮುರ್ತಿ, ಉಪನ್ಯಾಸಕಿ ದೀಪಾ ಉಪಸ್ಥಿತರಿದ್ದರು. ಹರೀಶ್ ಕೆ.ಆದೂರು ಎಂ.ವ್ಯಾಸರೊಂದಿಗಿನ ಒಡನಾಟವನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ `ವರ್ಷ ಕ್ರಿಯೇಷನ್ಸ್' ಪ್ರಸ್ತುತಿಯ `ವ್ಯಾಸಪಥ' ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.








ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಸೂರಂಬೈಲು:``ಸಾರ್ವಕಾಲಿಕ ಮೌಲ್ಯವಿಲ್ಲದೆ ತಿರಸ್ಕರಿಸಲ್ಪಟ್ಟ ಹಲಸು ಈಗ ಹೆಚ್ಚಿನ ಮನೆಗಳ ಪ್ರಧಾನ ಹಜಾರದಲ್ಲಿ ಸ್ಥಾನ ಪಡೆಯುತ್ತಿದೆ. ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಮಾರುಕಟ್ಟೆ ಕುದುರುತ್ತಿದೆ. ಇದು ಶುಭ ಸಂಕೇತ. ಇನ್ನು ಮನೆ ಮನೆಗಳಲ್ಲೂ ಹಲಸಿಗೆ ಪ್ರಾಧಾನ್ಯತೆ ದೊರಕುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಚಿಗುರು ಫಾರ್ಮರ್ಸ್ ಕ್ಲಬ್ ಉತ್ತಮ ಕಾರ್ಯವೆಸಗುತ್ತಿದೆ." ಎಂದು ಅನುಭವಿ ಪಾಕ ತಜ್ಞೆ ಸುಶೀಲಾ ಭಟ್ ಪಾತನಡ್ಕ ಅಭಿಪ್ರಾಯಪಟ್ಟರು.


ಅವರು ಚಿಗುರು ಫಾರ್ಮರ್ಸ್ ಕ್ಲಬ್ ಮತ್ತು ಎಡನಾಡು ಕಣ್ಣೂರು ಸೇವಾ ಸಹಕಾರೀ ಬ್ಯಾಂಕ್ ಸಹಯೋಗದಲ್ಲಿ ಸೂರಂಬೈಲು ಗಣೇಶ ಭಜನಾ ಮಂದಿರದಲ್ಲಿ ಜರಗಿದ `ಹಲಸು: ಸಂಸ್ಕರಣೆ - ಪ್ರಾತ್ಯಕ್ಷಿಕೆ' ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಚಿಗುರು ಫಾರ್ಮರ್ಸ್ ಕ್ಲಬ್ ಅಧ್ಯಕ್ಷೆ ಲಕ್ಷ್ಮಿ.ವಿ.ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಡನಾಡು ಕಣ್ಣೂರು ಸೇವಾ ಸಹಕಾರೀ ಬ್ಯಾಂಕ್ ಅಧ್ಯಕ್ಷ ಶಿವರಾಮ್ ಭಟ್ ಕಾರಿಂಜೆ-ಹಳೆಮನೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಲೆಂಗಳ ಈಶ್ವರ ಭಟ್, ಶ್ರೀಕೃಷ್ಣ ರಾವ್ ಪೆರಿಯಾಲ್, ಪಿ.ಕೃಷ್ಣ ಭಟ್ , ರಾಜು ಸ್ಟೀಫನ್ ಕಿದೂರು, ಕಟಾರ ಲಕ್ಷ್ಮೀನಾರಾಯಣ ಭಟ್, ಕೇಶವ ಭಟ್ ಗುರುವಾಯನಕೆರೆ ಸಂವಾದದಲ್ಲಿ ಭಾಗವಹಿಸಿದರು.


ಕಾರ್ಯಕ್ರಮದ ಅಂಗವಾಗಿ ಜಾಹ್ನವಿ ಭಟ್ ಹಳೆಮನೆ ತಯಾರಿಸಿದ ಹಲಸು ಉತ್ಪನ್ನಗಳಾದ ಹಪ್ಪಳ, ಜ್ಯಾಂ, ಪೆರಟ್ಟಿ, ಉಂಡ್ಳೆಕಾಳು, ಹಲ್ವ, ಚಿಪ್ಸ್ ಇತ್ಯಾದಿಗಳನ್ನು ಪ್ರದರ್ಶಿಸಲಾಯಿತು. ಸುಶೀಲಾ ಭಟ್ ಪಾತನಡ್ಕ ಹಲಸಿನ ಹಣ್ಣಿನ ಜೆಲ್ಲಿ, ಜ್ಯಾಂ, ಸ್ಕ್ವಾಷ್ಗಳನ್ನು ತಯಾರಿಸಿದರು.

ಎಡನಾಡು ಕಣ್ಣೂರು ಸೇವಾ ಸಹಕಾರೀ ಬ್ಯಾಂಕ್ ಕಾರ್ಯದರ್ಶಿ ಎ.ಕೃಷ್ಣ ಭಟ್ ಸ್ವಾಗತಿಸಿದರು. ಚಿಗುರು ಫಾರ್ಮರ್ಸ್ ಕ್ಲಬ್ ಸದಸ್ಯ ಎಚ್.ಶಿವರಾಮ ಭಟ್ ದೊಡ್ಡಮಾಣಿ ವಂದಿಸಿದರು. ಹವ್ಯಾಸಿ ಪತ್ರಕರ್ತ ಹರೀಶ್ ಹಳೆಮನೆ ಕಾರ್ಯಕ್ರಮ ನಿರೂಪಿಸಿದರು.


ಮುಂದೆ ಓದಿ

ಪ್ರಾದೇಶಿಕ ಸುದ್ದಿ

ನೀರ್ಚಾಲ್: ಕಾಸರಗೋಡು ಜಿಲ್ಲೆಯ ನೀರ್ಚಾಲ್ ಮಹಾಜನ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿವೃಂದ ಇಲ್ಲಿಗೆ ಸಮೀಪದ ಶೇಖರ ಕಾನ ಜಲಪಾತಕ್ಕೆ `ಬಯಲು ಪ್ರವಾಸ ' ಕೈಗೊಂಡಿದ್ದಾರೆ.




ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುವ ಈ ಜಲಲ ಜಲಧಾರೆಯಲ್ಲಿ ವಿದ್ಯಾರ್ಥಿ ವೃಂದ ಪ್ರಾಕೃತಿಕ ವೈಭವದ ಸೊಗಸನ್ನು ಸವಿದರು.ಶಿಕ್ಷಕ ವೃಂದ ಜೊತೆಗಿದ್ದರು.
ಚಿತ್ರ, ಮಾಹಿತಿ: ರವಿಶಂಕರ ದೊಡ್ಡಮಾಣಿ.

ಮುಂದೆ ಓದಿ
9:48 AM

ಸೂರ್ಯ ಗ್ರಹಣ

Posted by ekanasu

ರಾಜ್ಯ - ರಾಷ್ಟ್ರ

ನವದೆಹಲಿ: 21ನೇಶತಮಾನದ ಅತ್ಯಂತ ದೀರ್ಘಾವಧಿಯ ಸಂಪೂರ್ಣ ಸೂರ್ಯಗ್ರಹಣ ಇಂದು ಮುಂಜಾನೆ ಸಂಭವಿಸಿತು. ಖಗೋಳಾಭ್ಯಾಸಿಗಳು, ವಿಜ್ಞಾನಿಗಳು, ಆಸಕ್ತರು ಈ ದೀರ್ಘಾವಧಿಯ ಸೂರ್ಯ ಗ್ರಹಣ ವೀಕ್ಷಿಸಿದರು. ಬುಧವಾರ(ಜು.22)ರಂದು ಬೆಳಗ್ಗೆ 5.30ಕ್ಕೆ ಗ್ರಹಣ ಆರಂಭಗೊಂಡಿದ್ದು ಎರಡು ಗಂಟೆಗಳ ಕಾಲ ಗೋಚರಿಸಿತು. ಖಗ್ರಾಸ ಗ್ರಹಣದ ಅವಧಿ 7ನಿಮಿಷಗಳಾಗಿದ್ದವು.ಮುಂಗಾರು ಮೋಡಗಳ ನಡುವೆ ಗ್ರಹಣ ವೀಕ್ಷಣೆ ಹಲವೆಡೆಗಳಲ್ಲಿ ನಡೆಯಿತು. ಶಾಲಾ ಕಾಲೇಜುಗಳ ವಿಜ್ಞಾನ ಸಂಘಟನೆಗಳು ಸಹ ಹಲವುಕಡೆಗಳಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ಏರ್ಪಡಿಸಿತ್ತು.ದೆಹಲಿಯಲ್ಲಿ ಗೋಚರಿಸಿದ ಸೂರ್ಯಗ್ರಹಣದ ದೃಶ್ಯ ಹೀಗಿತ್ತು.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಹುಬ್ಬಳ್ಳಿ: ಗಾನ ವಿಧುಷಿ ಗಂಗೂಬಾಯಿ ಹಾನಗಲ್ ಸ್ವರ್ಗಸ್ಥರಾಗಿದ್ದಾರೆ. ಸಂಗೀತ ಲೋಕದಲ್ಲಿ ಅಪೂರ್ವ ಸಾಧನೆ ಮೆರೆದ ಗಂಗೂಬಾಯಿ ಹಾನಗಲ್ ತೀವ್ರ ಅಸ್ವಸ್ತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದರು. ಮಂಗಳವಾರ ಮುಂಜಾನೆ ಹುಬ್ಬಳ್ಳಿಯ ಖಾಸಗೀ ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ. ಪದ್ಮಭೂಷಣ ಪ್ರಶಸ್ತಿ ಪಡೆದ ವಿದುಷಿ ಗಂಗೂಬಾಯಿ ಹಾನಗಲ್ ಅವರಿಗೆ 97 ವರ್ಷ ವಯಸ್ಸಾಗಿತ್ತು. ಹೃದಯ ಸಂಬಂಧೀ ಖಾಯಿಲೆಯಿಂದ ಬಳಲುತ್ತಿದ್ದ ಗಂಗೂಬಾಯಿ ಅವರು ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆಯಲ್ಲಿ 7.10ರ ಸುಮಾರಿಗೆ ಕೊನೆಯುಸಿರೆಳೆದರು.












ಮುಂದೆ ಓದಿ

ರಾಜ್ಯ - ರಾಷ್ಟ್ರ

ಪಾಟ್ನಾ: ತೆರೆಗ್ನಾ ಇದೀಗ ಜನಸ್ತೋಮದಿಂದ ತುಂಬಿತುಳುಕುತ್ತಿದೆ. 21ನೇಶತಮಾನದ ಅತ್ಯಂತ ದೀರ್ಘಾವಧಿಯ ಸಂಪೂರ್ಣ ಸೂರ್ಯಗ್ರಹಣ ವೀಕ್ಷಣೆಗೆ ಜನ ಸಾಗರೋಪಾದಿಯಲ್ಲಿ ಸೇರುತ್ತಿದ್ದಾರೆ. ಬಾಹ್ಯಾಕಾಶದಲ್ಲಿ ನಡೆಯುವ `ಗ್ರಹಣ'ದ ವೀಕ್ಷಣೆಗೆ ಇದು ಸೂಕ್ತ ಸ್ಥಳ ಎಂದು ನಾಸಾ ಸಂಸ್ಥೆ ಹೇಳಿದೆ. ದೇಶ ವಿದೇಶದ ಎರಡು ಲಕ್ಷದಷ್ಟು ಪ್ರಮಾಣದಲ್ಲಿ ವಿಜ್ಞಾನಿಗಳು, ಸಂಶೋಧಕರು, ಆಸಕ್ತರು ಈ ಸ್ಥಳದಲ್ಲಿ ಜಮಾಯಿಸಿ ಬಾಹ್ಯಾಕಾಶದ ಕೌತುಕವನ್ನು ವೀಕ್ಷಿಸಲಿದ್ದಾರೆ. ಬುಧವಾರ(ಜು.22)ರಂದು ಬೆಳಗ್ಗೆ 5.30ಕ್ಕೆ ಗ್ರಹಣ ಆರಂಭಗೊಳ್ಳಲಿದ್ದು ಎರಡು ಗಂಟೆಗಳ ಕಾಲ ಗೋಚರಿಸಲಿದೆ. ಖಗ್ರಾಸ ಗ್ರಹಣದ ಅವಧಿ 7ನಿಮಿಷಗಳಾಗಿವೆ.

ಮುಂದೆ ಓದಿ
12:16 AM

ಭೀಕರ ಅಪಘಾತ

Posted by ekanasu

ಪ್ರಾದೇಶಿಕ ಸುದ್ದಿ

ಮಂಗಳೂರು: ರಾ.ಹೆ.13ರ ತೋಡಾರು ಸಮೀಪ ಸೋಮವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ 3 ಮಂದಿ ಮೃತಪಟ್ಟಿದ್ದಾರೆ. ಮಂಗಳೂರಿನಿಂದ ಮುಡಬಿದ್ರೆಗೆ ಬರುತ್ತಿದ್ದ ಅಂಬಾಸಿಡರ್ ಕಾರು ಹಾಗೂ ಮಂಗಳೂರಿಗೆ ತೆರಳುತ್ತಿದ್ದ ಬಸ್ಸಿನ ನಡುವೆ ನಡೆದ ಡಿಕ್ಕಿಯಲ್ಲಿ ಕಾರು ಚಾಲಕ ಸೇರಿದಂತೆ 3ಮಂದಿ ಮೃತಪಟ್ಟಿದ್ದಾರೆ. ಇಬ್ಬರು ತೀವ್ರ ಗಾಯಗೊಂಡು ಮಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ನೆಫೀಸಾ(60), ಇಸ್ಮಾಯಿಲ್(35), ಕಾರುಚಾಲಕ ಬಂಟ್ವಾಳ ಅಜ್ಜಿಬೆಟ್ಟು ನಿವಾಸಿ ಬದ್ರುದ್ದೀನ್(30)ಮೃತಪಟ್ಟವರು.

ಮುಂದೆ ಓದಿ
12:08 AM

ಯಸ್...ನಾನೇ ಹಂತಕ...

Posted by ekanasu

ರಾಜ್ಯ - ರಾಷ್ಟ್ರ

ಮುಂಬೈ: `ನಾನು ಅಪರಾಧ ಎಸಗಿದ್ದನ್ನು ಒಪ್ಪಿಕೊಳ್ಳುತ್ತೇನೆ' ಈ ಮಾತನ್ನು ಹೇಳಿದ್ದು ಉಗ್ರ ಅಜ್ಮಲ್ ಕಸಬ್. ಮುಂಬೈ ಹತ್ಯಾಕಾಂಡ ಕುರಿತಂತೆ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯದಲ್ಲಿ ವಿಶೇಷ ನ್ಯಾಯಮುರ್ತಿ ಎಂ.ಎಲ್.ತಹಿಲ್ಯಾಣಿ ಮುಂದೆ ಈ ಉಗ್ರ ತಪ್ಪೊಪ್ಪಿಕೊಂಡಿದ್ದಾನೆ. ಸಿ.ಎಸ್.ಟಿ.ಯಲ್ಲಿ ಬಾಂಬ್ ಸ್ಫೋಟಿಸಿದ ಬಳಿಕ ತಾನು ಮತ್ತು ಅಬು ಇಸ್ಮಾಯಿಲ್ ಪೊಲೀಸರೊಂದಿಗೆ ಕಾಳಗ ನಡೆಸಿದ್ದಾಗಿ ಇದೇ ಉಗ್ರ ತಿಳಿಸಿದ್ದಾನೆ. ಹಿರಿಯ ಪೊಲೀಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ , ಅಶೋಕ್ ಕಾಮ್ಟೆ, ವಿಜಯ್ ಸಾಲಸ್ಕರ್ ಅವರನ್ನು ಹತ್ಯೆ ನಡೆಸಿರುವುದಾಗಿ ತಾನು ಒಪ್ಪಿಕೊಂಡಿದ್ದಾನೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಉತ್ತರ ಕನ್ನಡ ಜಿಲ್ಲೆ ಇರುವುದೇ ರಾಜ್ಯದ ವಿದ್ಯುತ್ ಕೊರತೆ ನೀಗಿಸಲು ಎಂಬ ಆಲೋಚನೆ ಸರಕಾರ, ಅಕಾರಿಗಳಲ್ಲಿ ಮೂಡಿದಂತಿದೆ. ಕದ್ರಾ, ನಾಗಝರಿ, ಕೊಡಸಳ್ಳಿ, ಸುಫಾ, ಶರಾವತಿ ಟೇಲರೇಸ್ ಜಲವಿದ್ಯುತ್ ಯೋಜನೆಗಳಿಂದ ರಾಜ್ಯದ ವಿದ್ಯುತ್ ಜಾಲಕ್ಕೆ ಈಗಾಗಲೇ ೧,೦೧೫ ಮೆ. ವ್ಯಾ. ವಿದ್ಯುತ್ ಸರಬರಾಜಾಗುತ್ತಿದೆ. ಜತೆಗೆ ಕೈಗಾ ಅಣುವಿದ್ಯುತ್ ಯೋಜನೆಯಿಂದ ೬೬೦ ಮೆ.ವ್ಯಾ. ವಿದ್ಯುತ್ ನೀಡಲಾಗುತ್ತಿದೆ.
ಈ ಯೋಜನೆಗಳಿಗಾಗಿ ಜಿಲ್ಲೆಯ ಜನ ತಮ್ಮ ಆಸ್ತಿ,ಪಾಸ್ತಿ, ಸುಂದರ ಕನಸಿನ ಬದುಕು, ಅಪಾರ ನಿಸರ್ಗ ಸಂಪತ್ತನ್ನು ಬಲಿಕೊಟ್ಟಿದ್ದಾರೆ. ಜತೆಗೆ ಸೀಬರ್ಡ್ ನೌಕಾನೆಲೆಯಂತಹ ಸೂಕ್ಷ್ಮ ಯೋಜನೆಗಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಬೀದಿಗೆ ಬಿದ್ದಿದ್ದಾರೆ.


ಈಗ ತದಡಿಗಾಗಿ ಹೋರಾಟ ಆರಂಭವಾಗಿದೆ.
ಉದ್ದೇಶಿತ ಯೋಜನೆ ೮೦೦ ಮೆ.ವ್ಯಾ. ಸಾಮರ್ಥ್ಯದ ತಲಾ ೫ ಘಟಕಗಳನ್ನು ಹೊಂದಲಿದೆ. ಇದಕ್ಕಾಗಿ ಸುಮಾರು ೨೦,೦೦೦ ಕೋಟಿ ರೂ.ಗಳ ಬಂಡವಾಳ ಹೂಡಲಾಗುವುದು. ೨೦೦೭ರಲ್ಲಿಯೇ ಈ ಯೋಜನೆ ಅನುಷ್ಠಾನಗೊಳ್ಳಬೇಕಿತ್ತು. ಯೋಜನೆಗಾಗಿ ತದಡಿಯ ಸುತ್ತಮುತ್ತ ೩,೦೦೦ ಎಕರೆ ಜಮೀನು ನೀಡಲು ರಾಜ್ಯ ಸರಕಾರ ಮುಂದಾಗಿತ್ತು.

ಇದಕ್ಕಾಗಿ ೨೦೦೬ರ ಮಾರ್ಚ್ ೧೦ರಂದು ಕೇಂದ್ರ ಇಂಧನ ಸಚಿವಾಲಯ ಜಾಗತಿಕ ಟೆಂಡರ್ ಕರೆದಿತ್ತು. ಯೋಜನೆಯನ್ನು ಕಾರ್ಯಗತಗೊಳಿಸಲು ‘ಕರಾವಳಿ ಕರ್ನಾಟಕ ವಿದ್ಯುತ್ ನಿಗಮ (ಕೋಸ್ಟಲ್ ಕರ್ನಾಟಕ ಪವರ್ ಲಿಮಿಟೆಡ್)’ ಎಂಬ ಪ್ರತ್ಯೇಕ ಕಂಪನಿಯೊಂದನ್ನು ಹುಟ್ಟುಹಾಕಿತ್ತು. ಆದರೆ, ಸ್ಥಳೀಯರ, ಪರಿಸರವಾದಿಗಳ ವಿರೋಧದಿಂದಾಗಿ ಯೋಜನೆಯ ಅನುಷ್ಠಾನ ಅಲ್ಲಿಗೆ ನಿಂತಿತು.

ಯೋಜನೆಗಳಿಗಾಗಿ ತ್ಯಾಗ ಮಾಡಿದ ಜಿಲ್ಲೆಯ ಜನರಿಗೆ ಪ್ರತಿಯಾಗಿ ಸರಕಾರ ಯಾವ ಸೌಲಭ್ಯವನ್ನೂ ನೀಡಿಲ್ಲ. ರಾಜ್ಯಕ್ಕೆ ಸಿಂಹಪಾಲು ವಿದ್ಯುತ್ ನೀಡುತ್ತಿದ್ದರೂ ಈ ಜಿಲ್ಲೆಯ ನೂರಾರು ಗ್ರಾಮಗಳು ಈಗಲೂ ಕತ್ತಲಲ್ಲಿವೆ. ನಮಗೂ ವಿದ್ಯುತ್ ಕೊಡಿ ಎಂದು ಕೈಚಾಚಿ ಬೇಡುವ ಸ್ಥಿತಿಯಿದೆ. ಹಿಂದಿನ ಯೋಜನೆಗಳಿಗಾಗಿ ಭೂಮಿ ಬಿಟ್ಟು ಕೊಟ್ಟ ಮಂದಿ ಸರಕಾರದಿಂದ ಸರಿಯಾದ ಪರಿಹಾರ ಸಿಗದೆ ತುತ್ತು ಕೂಳಿಗಾಗಿ ಈಗಲೂ ಪರದಾಡುತ್ತಿದ್ದಾರೆ. ಸರಕಾರಗಳು, ಅಕಾರಿಗಳು ಬದಲಾದಂತೆ ಇವರ ಕೂಗನ್ನು ಕೇಳುವವರಿಲ್ಲವಾಗಿದೆ.

ಕೇಂದ್ರದ ಒಲವೇಕೆ?ಕೇಂದ್ರ ಸರಕಾರದ ನೀತಿಯನ್ವಯ ಯಾವುದೇ ಉದ್ದೇಶಿತ ಬೃಹತ್ ಕಲ್ಲಿದ್ದಲು ವಿದ್ಯುತ್ ಯೋಜನೆ ಬಂದರು ವ್ಯಾಪ್ತಿಯಲ್ಲಿರಬೇಕು ಅಥವಾ ಕಲ್ಲಿದ್ದಲು ಗಣಿಗೆ ಸಮೀಪದಲ್ಲಿರಬೇಕು. ಉದ್ದೇಶಿತ ತದಡಿಯಿಂದ ಸುಮಾರು ೪ ಸಾವಿರ ಮೆ.ವ್ಯಾ.ವಿದ್ಯುತ್ ಉತ್ಪಾದನೆ ಸಾಧ್ಯ. ಯೋಜನೆಗಾಗಿ ಕಲ್ಲಿದ್ದಲನ್ನು ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳಬೇಕು. ಬಂದರಿಗೆ ಸಮೀಪ ಇರುವುದರಿಂದ ಹಡಗಿನ ಮೂಲಕ ಕಲ್ಲಿದ್ದಲು, ಕಚ್ಚಾ ಪದಾರ್ಥಗಳನ್ನು ಸಾಗಿಸುವುದು ಸುಲಭ. ನೀರಿನ ಸೆಲೆ ಸಮೀಪದಲ್ಲಿದೆ. ತ್ಯಾಜ್ಯ ವಿಲೇವಾರಿಗೆ ಕರಾವಳಿ ತೀರ ಪ್ರಶಸ್ತ ಸ್ಥಳ. ಆರ್ಥಿಕ ಹಿತದೃಷ್ಟಿಯಿಂದ ತದಡಿ ಉತ್ತಮ ಎನ್ನುವುದು ಅದರ ಶಿಫಾರಸು.

ಪರಿಸರಕ್ಕೆ ಹಾನಿ
ಪಶ್ಚಿಮ ಘಟ್ಟದ ತಳಭಾಗದಲ್ಲಿ ಅರಬ್ಬಿ ಸಮುದ್ರಕ್ಕೆ ಹೊಂದಿಕೊಂಡಿರುವ ತದಡಿ, ಕರಾವಳಿಯ ಸುಂದರ ತಾಣ. ಶಿರಸಿ-ಸಿದ್ದಾಪುರ-ಕುಮಟಾ ತಾಲೂಕುಗಳ ಸುಮಾರು ೧೨೦ ಕಿ.ಮೀ. ಉದ್ದದ ವ್ಯಾಪ್ತಿಯಲ್ಲಿ ಹರಿದು ಬರುವ ಜಿಲ್ಲೆಯ ಜೀವನಾಡಿ ಅಘನಾಶಿನಿ ಸಮುದ್ರವನ್ನು ಸೇರುವ ತಾಣವಿದು. ನದಿ-ಸಮುದ್ರ ಸಂಗಮದ ಈ ಕರಾವಳಿಯ ಕೊಲ್ಲಿ ಸುಮಾರು ೧,೮೦೦ ಎಕರೆ ಪ್ರದೇಶದಲ್ಲಿ ಮ್ಯಾಂಗ್ರೂವ್ ಸಸ್ಯಗಳನ್ನು ಹೊಂದಿದೆ.
೨೬ ನಾನಾ ಜಾತಿಯ ಮ್ಯಾಂಗ್ರೂವ್ ಸಂಕುಲಗಳು ೧೦೦ಕ್ಕೂ ಹೆಚ್ಚು ಜಾತಿಯ ಮೀನು, ಒಲಿವ್, ರಿಡ್ಕಿ ಸೇರಿದಂತೆ ವಿಶಿಷ್ಟ ಜಾತಿಯ ಕಡಲಾಮೆಗಳು, ಅಳಿವಿನಂಚಿನಲ್ಲಿರುವ ನಾನಾ ಜಾತಿಯ ಜಲಚರಗಳಿಗೆ ಆಶ್ರಯ ತಾಣವಿದು. ‘ಬೆಲ್ಚಿ’ ಎಂಬ ವಿಶೇಷ ಜಾತಿಯ ಮೀನು ಇಲ್ಲಿ ದೊರೆಯುವುದು ಮತ್ತೊಂದು ವಿಶೇಷ. ಈ ವಲಯದಲ್ಲಿನ ಮೃದ್ವಂಗಿಗಳ ವ್ಯಾಪಾರ ವಹಿವಾಟು ವಾರ್ಷಿಕ ಸುಮಾರು ೫ ಕೋಟಿ ರೂ. ದಾಟಲಿದೆ ಎಂಬುದು ಅಂದಾಜು. ಸುಮಾರು ೮೦೦ ಕುಟುಂಬಗಳು ವಂಶಪಾರಂಪರ್ಯವಾಗಿ ಬಂದ ಉಪ್ಪು ತಯಾರಿಕಾ ಉದ್ಯಮದ ಮೇಲೆ ನೇರವಾಗಿ ಅವಲಂಬಿತವಾಗಿವೆ.

ಸುತ್ತಮುತ್ತಲ ಪ್ರದೇಶದಲ್ಲಿ ಹರಡಿರುವ ಭತ್ತದ ಗದ್ದೆಗಳು ಇಲ್ಲಿನ ಜನರ ಮತ್ತೊಂದು ಆರ್ಥಿಕ ಮೂಲ. ಸುಮಾರು ೧೫,೦೦೦ ಕುಟುಂಬಗಳಿಗೆ ಇವು ಆಧಾರ ಒದಗಿಸುತ್ತಿವೆ. ಇಲ್ಲಿನ ಅಘನಾಶಿನಿಯ ಹಿನ್ನೀರಿನಲ್ಲಿ ‘ಕಗ್ಗ’ ಎಂಬ ವಿಶೇಷ ಜಾತಿಯ ಭತ್ತವನ್ನು ಬೆಳೆಯಲಾಗುತ್ತದೆ. ನದಿ ಹರಿವಿನ ಪಾತ್ರದಲ್ಲಿರುವ ಸುಣ್ಣದ ಕಲ್ಲು, ಬಾಕ್ಸೈಟ್ ಅದಿರು, ಯಾಣ, ಉಂಚಳ್ಳಿ ಜಲಧಾರೆ, ದೇವಿಮನೆ ಹಾಗೂ ದೊಡ್ಡಮನೆ ಕಣಿವೆ, ಅಪಾರ ಸಸ್ಯ ಸಂಪತ್ತು, ಜೀವವೈವಿಧ್ಯಗಳು ಉದ್ದೇಶಿತ ಯೋಜನೆಯಿಂದ ಹಾನಿಗೆ ಒಳಗಾಗಲಿವೆ. ಸುಮಾರು ೨೫,೦೦೦ ಮಂದಿ ಮೀನುಗಾರರು ತೊಂದರೆಗೆ ಒಳಗಾಗಿದ್ದಾರೆ.
೨೦೦೩ರ ರಾಜ್ಯ ಹವಾಮಾನ ವರದಿ ಪ್ರಕಾರ ತದಡಿ, ಕರಾವಳಿಯ ಪ್ರಮುಖ ತಾಣ. ಕರಾವಳಿ ನಿರ್ವಹಣಾ ಯೋಜನಾ ವರದಿಯನ್ವಯ ಒಳನಾಡು ಹಾಗೂ ಹೊರನಾಡು ಮೀನುಗಾರಿಕೆಗೆ ಪ್ರಶಸ್ತ ಸ್ಥಳ. ಈ ಪ್ರದೇಶವನ್ನು ಜೀವವೈವಿದ್ಯ ರಕ್ಷಣಾ ವಲಯವನ್ನಾಗಿ ಘೋಷಿಸಬೇಕು ಎಂಬುದು ಜೀವವಿಜ್ಞಾನಿಗಳ ಒಕ್ಕೊರಲ ಮನವಿ.

ಉದ್ದೇಶಿತ ಉಷ್ಣ ವಿದ್ಯುತ್ ಸ್ಥಾವರದಿಂದ ಹೊರಬೀಳುವ ದೂಳು ಹಾಗೂ ಬೂದಿ, ಕೇವಲ ೧೦ ಕಿ.ಮೀ. ದೂರ ವ್ಯಾಪ್ತಿಯಲ್ಲಿರುವ ಅರಣ್ಯಗಳಿಗೆ ತೊಂದರೆ ಉಂಟು ಮಾಡಲಿವೆ. ಧಾರವಾಡದ ನರೇಂದ್ರ ವಿತರಣಾ ಕೇಂದ್ರದಿಂದ ವಿತರಣೆ ಕೈಗೊಳ್ಳುವುದರಿಂದ ವಿದ್ಯುತ್ ತಂತಿ ಅಳವಡಿಕೆಗೆ ಘಟ್ಟದ ಅಮೂಲ್ಯ ಮರಗಳನ್ನು ಕಡಿಯಲಾಗುತ್ತದೆ. ಚಿಮಣಿಯಿಂದ ಹೊರಸೂಸುವ ಅನಿಲ ಸುತ್ತಲ ವಾತಾವರಣದ ಗಾಳಿಯನ್ನು ಕಲುಷಿತಗೊಳಿಸುತ್ತದೆ. ಇದರಲ್ಲಿರುವ ಸಲರ್ ಡೈ ಆಕ್ಸೈಡ್, ಇಂಗಾಲದ ಡೈ ಆಕ್ಸೈಡ್ಗಳು ಸುತ್ತಲ ವಾತಾವರಣಕ್ಕೆ ಹಾನಿ ಉಂಟು ಮಾಡಬಲ್ಲವು.

ಅಘನಾಶಿನಿಯ ಸುಮಾರು ೨೯ ಕಿ.ಮೀ. ದೂರದ ನೌಕಾಯಾನ, ಪ್ರಸಿದ್ಧ ಯಾತ್ರಾ ಸ್ಥಳ ಗೋಕರ್ಣದ ಮೇಲೆ ದುಷ್ಪರಿಣಾಮ ಬೀರಲಿದೆ. ತನ್ಮೂಲಕ ಕರಾವಳಿ ಪ್ರವಾಸೋದ್ಯಮಕ್ಕೆ ಹಾನಿ ತರಲಿದೆ. ಸ್ಥಾವರದಿಂದ ಹೊರಬಿಡಲಾಗುವ ಬಿಸಿ ನೀರು ಸಮುದ್ರ ಸೇರುವುದರಿಂದ ಜಲಚರಗಳಿಗೆ ಹಾನಿ.
ಅಪಾಯಕಾರಿ ತ್ಯಾಜ್ಯಗಳನ್ನು ಕರಾವಳಿ ತೀರದಲ್ಲಿ ವಿಲೇವಾರಿ ಮಾಡುವುದು ಕರಾವಳಿ ತೀರ ನಿಯಂತ್ರಣ ವಲಯ ಕಾಯ್ದೆಯ ಉಲ್ಲಂಘನೆಯಾಗಲಿದೆ. ಯೋಜನೆ ೧೯೮೬ರ ಪರಿಸರ ಕಾಯ್ದೆಯನ್ನು ಉಲ್ಲಂಘಿಸುತ್ತದೆ.

ಉಷ್ಣ ವಿದ್ಯುತ್ ಸ್ಥಾವರದಿಂದ ಹೊರಸೂಸುವ ಹಾರು ಬೂದಿ, ಅನಿಲ ಹಾಗೂ ಬಿಸಿ ನೀರನ್ನು ಹೊರಬಿಡಲು ಆಧುನಿಕ ತಂತ್ರಜ್ಞಾನ ಅಳವಡಿಸಲಾಗುವುದು ಎನ್ನುವುದು ಇಂಧನ ಸಚಿವರ ವಾದ. ಆದರೆ, ಈ ತಂತ್ರಜ್ಞಾನದ ಬಳಕೆ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡುವ ಕಾರ್ಯಕ್ರಮ ರೂಪಿಸುವಲ್ಲಿ ಅಕಾರಿಗಳು ಮುಂದಾಗುತ್ತಿಲ್ಲ.
ಇವೆಲ್ಲದರ ನಡುವೆಯೂ ಯೋಜನೆ ಅನುಷ್ಠಾನಗೊಂಡರೆ, ಇದರಿಂದ ನಿರಾಶ್ರಿತರಾಗುವವರಿಗೆ ಸಮರ್ಪಕ ಪರ್ಯಾಯ ವ್ಯವಸ್ಥೆ ಸಿಗುವ ವಿಶ್ವಾಸವಿಲ್ಲ. ಸರಕಾರದ ಭರವಸೆ ನಂಬಿ ಈ ಹಿಂದಿನ ಯೋಜನೆಗಳಿಗೆ ತ್ಯಾಗ ಮಾಡಿದವರ ಬದುಕಿನ ವಾಸ್ತವಿಕ ಚಿತ್ರಣ ಈಗಲೂ ಜಿಲ್ಲೆಯಲ್ಲಿ ಕಾಣಲು ಲಭ್ಯ.
- ಮಹಾಬಲೇಶ್ವರ ಹೊನ್ನೆಮಡಿಕೆ

ಮುಂದೆ ಓದಿ

ಸಿನೆಮಾ
ಮೆರಾ ಜೂಥಾ ಹೆ ಜಪಾನೀ..ಯೆ ಪ್ಯಾಂಟಲೂನ್ ಇಂಗ್ಲಿಷ್ ಸ್ತಾನಿ ... ಸರ್ ಪೆ ಲಾಲ್ ಟೋಪಿ ರೂಸಿ... ಫಿರ್ ಭೀ ದಿಲ್ ಹೈ ಹಿಂದುಸ್ತಾನಿ.. ಮೆರಾ ಜೂಥಾ ಹೆ...ತಲೆ ಮೇಲೆ ಟೋಪಿಯನ್ನಿಟ್ಟು, ಹರಿದ ಕೋಟು-ಬೂಟುಗಳನ್ನು ಧರಿಸಿ, ಕೈಯಲ್ಲಿನ ಕೋಲನ್ನು ಬೀಸುತ್ತಾ ಆತ ಆ ಕಿರು ರಸ್ತೆಯಲ್ಲಿ ಹಾಡುತ್ತಾ ಸಾಗುತ್ತಿದ್ದಾನೆ.


ಆತನಿಗೆ ಗೊತ್ತು ಗುರಿಯಿಲ್ಲ...ತಾನೆಲ್ಲಿ ಹೋಗುತ್ತಿರುವೆನೆಂದು ಆತನಿಗೆ ತಿಳಿದಿಲ್ಲ. ಈ ಕ್ಷಣವಷ್ಟೇ ಜೀವನ..ಅದನ್ನು ಅನುಭವಿಸಬೇಕು...ಮುಂದಿನ ಯೋಚನೆ ಬಳಿಕವಷ್ಟೇ... ಇದು ಆತನ ಜೀವನದ ಪಾಲಿಸಿ. ಈ ಸ್ವಾರ್ಥಪರ ಸಮಾಜದಲ್ಲಿ ತನಗೇನು ಕೆಲಸ? ಎಂದು ಯಾರ ಗೊಡವೆಯಿಲ್ಲದೆ ಆತ ಹಾಡುತ್ತಿದ್ದಾನೆ...ಹಾಡುತ್ತಾ, ಕುಣಿದಾಡುತ್ತಾ,ಮೋಜುಮಾಡುತ್ತಾ... ಮುಂದೆ ಸಾಗುತ್ತಿದ್ದಾನೆ. ತೆರೆಯ ಮೇಲೆ ಆತನನ್ನು ಕಂಡ ವೀಕ್ಷಕನಿಗೆ ಕ್ಷಣಕಾಲ ಚಾರ್ಲಿ ಚಾಪ್ಲಿನ್ ಬಂದನೇನೋ? ಎಂಬ ಅನುಮಾನ. ಕಣ್ಣುಮಿಟುಕಿಸಿ ನೋಡಿದರೆ ಹೌದು! ಇವನು ಭಾರತದ ಚಾರ್ಲಿ ಚಾಪ್ಲಿನ್ ರಾಜ್ ಕಪೂರ್.


ಐವತ್ತರ ದಶಕದಲ್ಲಿ ಬಾಲಿವುಡ್ನಲ್ಲಿ ಸಂಚಲನ ಮೂಡಿಸಿದ್ದ ಏಕೈಕ ಸಿನಿಮಾ ನಿರ್ದೇಶಕ ರಾಜ್ ಕಪೂರ್. ಚಾರ್ಲಿ ಚಾಪ್ಲಿನ್ ಆಫ್ ಇಂಡಿಯನ್ ಸಿನಿಮಾ..ಇದು ರಾಜ್ ಕಪೂರ್ ಫ್ಯಾನ್ಸ್ ಅವರಿಗಿಟ್ಟ ಪೆಟ್ ನೇಮ್. ಇಂಗ್ಲೆಡ್ನಲ್ಲಿ ಚಾಪ್ಲಿನ್ ಹುಟ್ಟು ಹಾಕಿದ್ದ ಸಾಮಾಜಿಕ ಚಿತ್ರಗಳ ಹೊಸ ಟ್ರೆಂಡ್ನ್ನು ಭಾರತಕ್ಕೆ ಪರಿಚಯಿಸಿದವರು ರಾಜ್. ಇವರು ಚಿಕ್ಕಂದಿನಿಂದಲೇ ಚಾಪ್ಲಿನ್ ಅಭಿಮಾನಿ. ಚಾಪ್ಲಿನ್ ಅವರ ಇನಫ್ಲ್ಯೂಯೆನ್ಸ್ ಇವರ ಚಿತ್ರಗಳ ಮೇಲೆ ಅತಿಯಾಗಿತ್ತು.
ಭಾರತೀಯ ಸಿನಿಮಾ ವೀಕ್ಷಕರ ಅಭಿರುಚಿಯನ್ನು ಬದಲಾಯಿಸಬೇಕು. ಥಳುಕು-ಬಳುಕಿನ ಗ್ಲಾಮರ್ ಲೋಕಕಷ್ಟೇ ಸೀಮಿತವಾಗಿರುವ ಅವರ ಚಿಂತನೆಗಳನ್ನು ಇನ್ನಷ್ಟು ವಿಶಾಲವಾಗಿಸಬೇಕು. ತನ್ನ ಸಿನಿಮಾಗಳ ಮೂಲಕ ಮಾನವೀಯ ಮೌಲ್ಯಗಳನ್ನು ಜನರಿಗೆ ಪರಿಚಯಿಸಬೇಕು. ಸಾಮಾಜಿಕ ಕ್ರಾಂತಿಯೊಂದಕ್ಕೆ ನಾಂದಿ ಹಾಡಬೇಕು. ನನ್ನ ಚಿತ್ರಗಳು ವೀಕ್ಷಕರಿಗೆ ಬರೇ ಮನರಂಜನೆಯನ್ನಷ್ಟೇ ನೀಡಬಾರದು. ಅವು ಅವರನ್ನು ಚಿಂತನೆಗೀಡು ಮಾಡಬೇಕು. ಇದು ರಾಜ್ ಕಪೂರ್ ಸಿನಿಮಾ ಜೀವನದ ಕನಸಾಗಿತ್ತು. ಪೇಶಾವರದಲ್ಲಿ 1924ರ ಡಿಸೆಂಬರ್ 14ರಂದು ಜನಿಸಿದ ರಾಜ್ ಕಪೂರ್ 'ಇನ್ಕಿಲಾಬ್' ಚಿತ್ರದಲ್ಲಿ ಬಾಲನಟನಾಗಿ ನಟಿಸುವ ಮೂಲಕ ತಮ್ಮ ಹನ್ನೊಂದನೇ ವಯಸ್ಸಿನಲ್ಲೇ ಸಿನಿಮಾ ಜೀವನವನ್ನು ಪ್ರಾರಂಭಿಸಿದರು. 1947ರಲ್ಲಿ ಮಧುಬಾಲರೊಂದಿಗೆ ಲೀಡ್ ರೋಲ್ನಲ್ಲಿ ನಟಿಸಿದ ಚಿತ್ರ `ನೀಲ್ ಕಮಲ್' ರಾಜ್ ಕಪೂರ್ನಲ್ಲಡಗಿದ್ದ ಹೀರೋನನ್ನು ಬಾಲಿವುಡ್ಗೆ ಪರಿಚಯಿಸಿತು. ಇಪ್ಪತ್ತನಾಲ್ಕನೇ ವಯಸ್ಸಿನಲ್ಲೇ ಆರ.ಕೆ ಬಿಗ್ ಬ್ಯಾನರ್ ಸ್ಟುಡಿಯೋವನ್ನು ಸ್ಥಾಪಿಸುವ ಮೂಲಕ ರಾಜ್ ಬಾಲಿವುಡ್ನ ಅತೀ ಕಿರಿಯ ಡೈರೆಕ್ಟರ್ ಕೀರ್ತಿಗೆ ಭಾಜನರಾದರು.
ಸಿನಿಮಾ ರಾಜ್ ಜೀವಾಳ..ಇವರು ನಿರ್ದೇಶಿಸಿರುವ ಎಲ್ಲಾ ಚಿತ್ರಗಳು ಭಾರತೀಯ ಸಮಾಜದ ವಿವಿಧ ಮುಖಗಳು. ಆಗ್, ಆವಾರಾ. ಮೆರಾ ನಾಮ್ ಜೋಕರ್, ಬೂಟ್ ಪಾಲಿಷ್..ಇವೆಲ್ಲವೂ ನಮ್ಮೆಲ್ಲರ ಜೀವನದ ಕಥೆಗಳು. ನಿರ್ದೇಶನದ ಜತೆಜತೆಗೆ ರಾಜ್ ಒಬ್ಬ ಅತ್ಯತ್ತಮ ನಟ. ಅಭಿನಯವೆಂದರೆ ಇವರಿಗೆ ಅಚ್ಚುಮೆಚ್ಚು. ನಿರ್ದೇಶಿಸಿದ ಎಲ್ಲಾ ಚಿತ್ರಗಳಲ್ಲಿ ಲೀಡ್ ರೋಲ್ ನಿರ್ವಹಿಸದಿದ್ದರೆ ಇವರಿಗೆ ಏನೋ ಕಳೆದುಕೊಂಡ ಅನುಭವ.


ರಾಜ್ ನಟನೆಯಲ್ಲೂ ಚಾಪ್ಲಿನ್ ಸ್ಟೈಲನ್ನು ಫಾಲೋ ಮಾಡಿದವರು. ಇವರ ನಟನೆಯಲ್ಲೆಲ್ಲೂ ಕೃತಕತೆಯಿಲ್ಲ...ನಿರ್ವಹಿಸಿದಪಾತ್ರಗಳೆಲ್ಲವೂ ಅವರ ನಿಜಜೀವನದ ಕಥೇಯೇನೋ ಎಂಬಷ್ಟು ನೈಜವಾಗಿ ಮೂಡಿಬರುತ್ತಿತ್ತು. ಪಾಶ್ಚಾತ್ಯ ಸಿನಿಮಾ ಸಂಸ್ಕೃತಿಯನ್ನು ಭಾರತೀಯ ಪರಂಪರೆಗೆ ಹೊಂದುವಂತೆ ಬದಲಾಯಿಸಿ ಭಾರತದಲ್ಲಿ ಸಾಮಾಜಿಕ ಚಿತ್ರಗಳ ಟ್ರೆಂಡನ್ನು ರಾಜ್ ಜನಪ್ರಿಯಗೊಳಿಸಿದರು. ಈ ಟ್ರೆಂಡ್ಗೆ ಹೊಸ ತಿರುವನ್ನು ನೀಡಿದ ಚಿತ್ರ 'ಮೆರಾ ನಾಮ್ ಜೋಕರ್'. ಸಂಗಮ್, ಬೂಟ್ ಪಾಲಿಷ್, ಜಿಸ್ ದೇಶ್ ಮೆ ಗಂಗಾ ಬೆಹತೀ ಹೆ ಚಿತ್ರಗಳ ಬಳಿಕ 1970 ರಲ್ಲಿ ರಾಜ್ ಮೇರಾ ನಾಮ್ ಜೋಕರ್ ಚಿತ್ರವನ್ನು ನಿರ್ದೇಶಿಸಿದರು. ಸ್ವಾರ್ಥ,ಬಡತನ,ವಂಚನೆಗಳ ನಡುವೆ ಪ್ರೀತಿಯನ್ನರಸುತ್ತಾ ಕೊನೆಗೂ ಅದನ್ನು ಪಡೆಯದೇ ಹತಾಶನಾದ ಬಡ ಯುವಕ ರಾಜುವಿನ ಕಥೆ ಇದು. ಚಿತ್ರದ ಚಿತ್ರೀಕರಣಕ್ಕಾಗಿ ರಾಜ್ ಕಪೂರ್ ಕೋಟಿಗಟ್ಟಲೆ ದುಡ್ಡು ಸುರಿದು ರಷ್ಯನ್ ಸರ್ಕಸ್ ಟ್ರೂಪನ್ನು ಖರೀದಿಸಿದ್ದರು. ಆರು ವರುಷಗಳ ನಿರಂತರ ಪರಿಶ್ರಮದ ಬಳಿಕ ಕೊನೆಗೂ ಚಿತ್ರ ಬಿಡುಗೆಡೆಗೊಂಡಿತು. ಆದರೆ...ನೆಲಕ್ಕಚ್ಚಿತು. ರಾಜ್ ಕಪೂರ್ರ ಈ ಸಿನಿಮಾ ಪಬ್ಲಿಕ್ಗೆ ಇಷ್ಟವಾಗಲಿಲ್ಲ. ಸಾಮಾಜಿಕ ಚಿತ್ರಗಳ ತುಂಬಾ ಸಮಸ್ಯೆಗಳನ್ನಷ್ಟೇ ಕಂಡು ಜನ ಬೇಸತ್ತಿದ್ದರು. ನಷ್ಟವನ್ನು ಭರಿಸಲಾಗದೇ ರಾಜ್ ಮನೆ-ಮಠವನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಿದರು. ಮಾನಸಿಕವಾಗಿ ಬಹಳ ಬಳಲಿದ್ದರು...ಮತ್ತೆ ಸಿನಿಮಾ ನಿರ್ದೇಶನಕ್ಕೆ ಕೈ ಹಾಕುವುದಿಲ್ಲವೆಂದು ನಿರ್ಧರಿಸಿದರು.
ಆದರೆ ಅವರ ನಿರ್ಧಾರ ಹೆಚ್ಚು ಸಮಯ ಉಳಿಯಲಿಲ್ಲ. ಮೂರು ವರುಷಗಳ ಬಳಿಕ ರಾಜ್ `ಬಾಬಿ' ಚಿತ್ರವನ್ನು ನಿರ್ದೇಶಿಸಿದರು. ದ್ವಿತೀಯ ಪುತ್ರ ರಿಶಿ ಕಪೂರ್ ಚಿತ್ರದ ನಾಯಕರಾದರು..ಹದಿನಾರರ ಚೆಲುವೆ ಡಿಂಪಲ್ ಕಪಾಡಿಯಾ ನಾಯಕಿಯಾದಳು. 'ಟೀನೇಜ್ ಲವ್' ಆಧಾರಿತ ಚಿತ್ರ ಸೂಪರ್ ಹಿಟ್ ಆಯಿತು. ಕಳೆದುಕೊಂಡದಕ್ಕಿಂತ ನಾಲ್ಕು ಪಾಲು ಹೆಚ್ಚು ರಾಜ್ ಕೈ ಸೇರಿತು. ರಾಜ್ಗೆ ತನ್ನ ತಪ್ಪಿನ ಅರಿವಾಯಿತು. ಇಲ್ಲಿನ ಯುವಜನತೆಯ ಅಭಿರುಚಿಗೆ ಇಂತಹ ಚಿತ್ರಗಳೇ ಸರಿಯೆಂದು ನಿರ್ಧರಿಸಿದರು. ಮತ್ತೆಂದೂ ಸಾಮಾಜಿಕ ಚಿತ್ರಗಳ ನಿರ್ಮಾಣಕ್ಕೆ ಕೈಹಾಕಲಿಲ್ಲ.
ನಂತರದ ದಿನಗಳಲ್ಲಿ ರಾಜ್ ನಿರ್ದೇಶಿಸಿದ ಚಿತ್ರಗಳೆಲ್ಲಾ ಕಮರ್ಶಿಯಲ್ ಫಿಲ್ಮ್ಸ್. ಸತ್ಯಂ ಶಿವಂ ಸುಂದರಂ, ಪ್ರೇಮ್ ರೋಗ್, ರಾಮ್ ತೇರಿ ಗಂಗಾ ಮೇಲಿ..ಹೀಗೆ ಎಲ್ಲಾ ಚಿತ್ರಗಳಲ್ಲೂ ಗ್ಲಾಮರ್ ಎದ್ದು ಕಾಣುತ್ತಿತ್ತು.
ರಾಜ್ ಸಿನಿಮಾ ಲೈಫ್ನಂತೇ ವೈಯುಕ್ತಿಕ ಜೀವನವೂ ಹಲವಾರು ಏಳು-ಬೀಳುಗಳನ್ನು ಕಂಡಿತ್ತು ಇಪ್ಪತ್ತರ ಹರೆಯಕ್ಕೇ ಕೃಷ್ಣಾ ಮಲ್ಹೋತ್ರಾಳನ್ನು ವಿವಾಹವಾದರು. ಪರಸ್ತ್ರೀ ವ್ಯಾಮೋಹದಿಂದ ವೈವಾಹಿಕ ಜೀವನ ನರಕವಾಯಿತು. ವೈಜಯಂತಿಮಾಲಾ..ಹೀಗೆ ಹಲವು ನಟಿಯರ ಜತೆ ರಾಜ್ ಹೆಸರು ಥಳುಕು ಹಾಕಿತು.

ಕೊನೆಯ ಕೆಲವು ವರುಷಗಳಲ್ಲಿ ರಾಜ್ ಅಸ್ತಮಾದಿಂದ ತೀವ್ರವಾಗಿ ಬಳಲುತ್ತಿದ್ದರು. ಆದರೂ ಸಿನಿಮಾ ನಿರ್ದೇಶನವನ್ನು ಬಿಟ್ಟಿರಲಿಲ್ಲ. 1988ರಲ್ಲಿ 'ಹೆನ್ನಾ' ಚಿತ್ರದ ಶೂಟಿಂಗ್ ಪ್ರಾರಂಭಿಸಿದರು. ಇಂಡಿಯನ್ ಯುವಕ, ಪಾಕ್ ಯುವತಿಯ ಪ್ರೇಮಕಥೆ ಹೆನ್ನಾ ನಿರ್ಮಾಣ ಹಂತದಲ್ಲೇ ಹಲವಾರು ವಿವಾದಗಳನ್ನು ಸೃಷ್ಟಿಸಿತು.ದುರಾದೃಷ್ಟವಶಾತ್ ರಾಜ್ ಚಿತ್ರವನ್ನು ಪೂರ್ತಿಗೊಳಿಸುವ ಮೊದಲೇ ಕೊನೆಯುಸಿರೆಳೆದರು. ರಾಜ್ ಕಪೂರ್ ಹಿರಿಯ ಪುತ್ರ ರಣಧೀರ್ ಕಪೂರ್ ಚಿತ್ರವನ್ನು ಪೂರ್ತಿಗೊಳಿಸಿದರು. ರಾಜ್ ಕೊನೆಯ ಚಿತ್ರ ಸೂಪರ್ ಹಿಟ್ ಖ್ಯಾತಿಯನ್ನು ಪಡೆಯಿತು.
ಜೀನಾ ಯಹಾ.. ಮರ್ನಾ ಯಹಾ...ಜೀ ಚಾಹೆ ಜಬ್ ಹಮ್ಕೊ ಆವಾಜ್ ದೇ..ಎಂದು ಅಂದು ವೀಕ್ಷಕರ ಕಂಗಳಲ್ಲಿ ಕಂಬನಿ ತರಿಸಿದ್ದ ರಾಜ್ ಕಪೂರ್ ಇಂದು ನಮ್ಮನ್ನಗಲಿದ್ದಾರೆ... ಕರೆಯಲೂ ಸಾಧ್ಯವಿಲ್ಲದಷ್ಟು ದೂರ ಸಾಗಿದ್ದಾರೆ...ಅವರ ನೆನಪುಗಳು ಭಾರತೀಯ ಚಿತ್ರರಂಗದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿವೆ. ಇದೇ ಜುಲೈ 2 ರಾಜ್ 21ನೇ ಪುಣ್ಯತಿಥಿ. ಅವರು ಮರೆಯಾದರೂ ನೆನಪುಗಳು ಹಸಿರಾಗಿವೆ.

ಅಕ್ಷತಾ ಸಿ.ಎಚ್

ಮುಂದೆ ಓದಿ

ರಾಜ್ಯ - ರಾಷ್ಟ್ರ

ಕನ್ನಡ ಪತ್ರಿಕೋದ್ಯಮಕ್ಕೊಂದು ಹೊಸ ಭಾಷ್ಯ ಬರೆದದ್ದು ಕಡಲ ತಡಿಯ ಮಂಗಳೂರು. ಅದು `ಮಂಗಳೂರ ಸಮಾಚಾರ' ಪತ್ರಿಕೆಯ ಮೂಲಕ. ಮೊದಲ ಕನ್ನಡ ಪತ್ರಿಕೆ ಪ್ರಾರಂಭಗೊಂಡ ಮಂಗಳೂರಿನಲ್ಲಿ ಇದೀಗ ಮೊದಲ ಕನ್ನಡ ಅಂತರ್ಜಾಲ ಪತ್ರಿಕೆ ಪ್ರಾರಂಭಗೊಂಡಿದೆ ಎಂಬುದು ಹೆಮ್ಮೆ . ಆ ಹಿರಿಮೆ `ಈ ಕನಸು.ಕಾಂ'ಗೆ ಸಲ್ಲುತ್ತಿರುವುದು ಸಂತಸದ ವಿಷಯ.


ಹೊಚ್ಚಹೊಸ ವಿನ್ಯಾಸ, ವೈಶಿಷ್ಠ್ಯಮಯ ಅಂಕಣ ಬರಹ, ಬಿಸಿ ಬಿಸಿ ಸುದ್ದಿ, ತಾಜಾ ನೇರ ವರದಿ, ಸಾಕ್ಷ್ಯಚಿತ್ರ, ವಿಡೀಯೋ ಹಾಗೂ ಆಡಿಯೋ ಸ್ಟ್ರೀಮಿಂಗ್ ಹೀಗೆ ಹತ್ತು ಹಲವು ವೈಶಿಷ್ಟ್ಯಗಳೊಂದಿಗೆ ಈ ಕನಸು ಎಲ್ಲರ ಮನ ಗೆದ್ದಿದೆ ಎಂದು ತಿಳಿಸಲು ಸಂತೋಷ ಪಡುತ್ತೇವೆ.
ಇಷ್ಟೆಲ್ಲಾ ವೈವಿಧ್ಯತೆಗಳೊಂದಿಗೆ ಅಲ್ಪಾವಧಿಯಲ್ಲೇ ಜನಪ್ರಿಯತೆ ಗಳಿಸಿದ ಈ ಕನಸು.ಕಾಂ. ಇದೀಗ ಹೊಸ ಬರಹಗಾರರನ್ನು ರೂಪಿಸುವ ಮಹತ್ತರ ಚಿಂತನೆ ನಮ್ಮದು. ನಿಮ್ಮಲ್ಲಿ ಬರಹಗಾರರಾಗಬೇಕೆಂಬ ತುಡಿತವಿದೆಯೇ... ಹಾಗಾದರೆ ಈ ಕನಸು ನಿಮ್ಮೊಂದಿಗೆ ನಿರಂತರವಾಗಿ ಇರುತ್ತವೆ. ನಿಮ್ಮ ಆಸಕ್ತಿಯ ಕ್ಷೇತ್ರ ಯಾವುದು ಎಂಬ ಬಗ್ಗೆ ಯೋಚಿಸಿ. ಏನು ಬರೆಯಬೇಕೆಂದಿದ್ದೀರಿ ಎಂಬುದನ್ನು ಚಿಂತಿಸಿ ನಮಗೆ ಸಂಪರ್ಕಿಸಿ. ನಿಮಗೆ ಸೂಕ್ತ ಸಲಹೆ ಸೂಚನೆ, ಮಾರ್ಗದರ್ಶನ ನಮ್ಮಿಂದ ದೊರಕುತ್ತವೆ.

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಮುಡಬಿದಿರೆ:ಇಲ್ಲಿನ ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ವಸ್ತು ಸಂಗ್ರಹಕ್ಕೆ ಪ್ರಾಚೀನವಾದ `ಕುದುರೆ ಗಾಡಿ'ಇದೀಗ ಈ ಎಲ್ಲಾ ಸಂಗ್ರಹದೊಂದಿಗೆ ಸ್ಥಾನ ಪಡೆದುಕೊಂಡಿದೆ. ಮಿಜಾರಿನಲ್ಲಿ ಹೊಸತಾಗಿ ನಿರ್ಮಾಣಗೊಂಡಿರುವ ಇಂಜಿನಿಯರಿಂಗ್ ಕಾಲೇಜಿನ ಮುಂಭಾಗದಲ್ಲಿ ಈ ಜಟಕಾ ಬಂಡಿ ಸ್ಥಾನಪಡೆದುಕೊಂಡಿದೆ.




ಮುಂದೆ ಓದಿ
1:30 AM

ಹುತ್ತದ ಮಹಿಮೆಯ ...

Posted by ekanasu

ಚೇರ್ಕೋಡ್ಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನ

ಈ ಕನಸು ವಿಶೇಷ ವರದಿ: ಹರೀಶ್ ಕೆ. ಆದೂರು.


ಅಂತಿಂಥ ಕ್ಷೇತ್ರ ಇದಲ್ಲ.ಇಲ್ಲಿ ಹುತ್ತ ಬೆಳೆಯುತ್ತಿದೆ. ಅಲ್ಲೊಂದು ಜೀವಂತ ನಾಗದೇವನಿದ್ದಾನೆ. ಶ್ರದ್ಧಾ ಭಕ್ತಿಯಿಂದ ಕ್ಷೇತ್ರಕ್ಕೆ ತೆರಳಿ ಪ್ರಾರ್ಥಿಸಿದ್ದೇ ಆದಲ್ಲಿ ನಾಗ ದರ್ಶನ ಭಾಗ್ಯ ನೀಡುತ್ತಾನೆ. ನಂಬಿದ ಕಾರ್ಯ ನಿರ್ವಿಘ್ನವಾಗಿ ನೆರವೇರುತ್ತವೆ...




ಅದೇನೋ ಒಂದು ಅವ್ಯಕ್ತ ಭಾವನೆ... ದೇಹವೆಲ್ಲಾ ಹಗುರವಾದಂತಹ ಅನುಭವ... ಒಂದಷ್ಟು ಕಾಲ ಮೈ ಮೇಲಿನ ರೋಮಗಳೆಲ್ಲಾ ನಿಮಿರಿ ನಿಂತ ವಿಶಿಷ್ಠ... ಚಳಿಗಾಲದಲ್ಲಿ ಮೈ ಚಳಿಯಾದಾಕ್ಷಣ ಚರ್ಮದ ಮೇಲೆ ಮೂಡಿಬರುವ ವ್ಯತ್ಯಾಸವಿದೆಯಲ್ಲಾ ಆ ರೀತಿ ಸಂಪೂರ್ಣ ದೇಹದಲ್ಲೊಂದು ಹೊಸ ಅನುಭವ... ಇದು ವೈಭವೀಕರಣವಲ್ಲ...ಬದಲಾಗಿ ವಾಸ್ತವ ಸ್ಥಿತಿ... ಅದನ್ನು ಅನುಭವಿಸಿಯೇ ತಿಳಿಯಬೇಕು... ಹೇಳಿದರೆ ಯಾರೂ ನಂಬದ ಸ್ಥಿತಿ...!

ಇವತ್ತು ನಾವು ಹೊಸತೊಂದು ಅನುಭವವನ್ನು ಹಂಚಿಕೊಳ್ಳೋಣ. ಅದೇ ಇಂದಿನ ಅಚ್ಚರಿಯೂ ಹೌದು.ಅಲ್ಲಿ ಸರ್ವ ರೋಗಗಳಿಗೂ ಒಂದು ಪರಿಹಾರವಿದೆ. ಚರ್ಮ ರೋಗಕ್ಕೆ, ಸಂತಾನ ಪ್ರಾಪ್ತಿಗೆ, ಕಷ್ಟಗಳ ನಿವಾರಣೆಗೆ, ಸಕಲ ತೊಂದರೆಗಳಿಗೂ ಅಲ್ಲಿ ಪರಿಹಾರ ಕಾಣಸಿಗುತ್ತದೆ. ಭಕ್ತಿ, ಶ್ರದ್ಧೆಯಿಂದ ಆ ಜಾಗಕ್ಕೆ ತೆರಳಿ ಅಲ್ಲಿನ ಶಕ್ತಿಯ ಮುಂದೆ ಬಾಗಿ ನಮಿಸಿ ಸಂಕಷ್ಟ ನಿವಾರಣೆಗೆ ವಿನಂತಿ ಮಾಡಿದ್ದೇ ಆದಲ್ಲಿ ಫಲ ಪ್ರಾಪ್ತಿಯಾಗುತ್ತದೆ. ಆ ಪುಣ್ಯ ಸ್ಥಳ ಆ ರೀತಿಯಲ್ಲಿ ಹೆಸರುವಾಸಿಯಾಗಿದೆ. ಇಂದಿಗೂ ತನ್ನ ಮೂಲ ಸೌಂದರ್ಯದೊಂದಿಗೆ ಆ ಶಕ್ತಿ ಅಲ್ಲಿ ನೆಲೆನಿಂತಿದೆ. ಆ ಕಾರಣಕ್ಕಾಗಿಯೇ ಇಂದಿಗೂ ಅದು ತನ್ನ ಪಾವಿತ್ರ್ಯತೆಯನ್ನು ಕಾಯ್ದುಕೊಂಡು ಬಂದಿದೆ.

ಅದೊಂದು ಪ್ರಶಾಂತ ಪರಿಸರ. ಅಲ್ಲಿ ವಾಹನಗಳ ಕರ್ಕಶ ಸದ್ದುಗಳಿಲ್ಲ... ಯಾಂತ್ರಿಕ ಬದುಕಿನ ಸೋಗೂ ಅಲ್ಲಿ ಕಾಣಸಿಗುವುದಿಲ್ಲ... ಅಂತಹ ನಿಸರ್ಗ ಸೌಂದರ್ಯ ಅಲ್ಲಿ ಕಾಣಸಿಗುತ್ತವೆ. ಸುತ್ತಲೂ ಹಸಿರು... ಗಿಡಮರಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ... ಹಕ್ಕಿಗಳ ಚಿಲಿಪಿಲಿ ನಾದ... ಜೀರುಂಡೆಗಳ ಝೇಂಕಾರ... ದೂರದಲ್ಲಿ ಕೈ ಬೀಸಿ ಕರೆಯುವ ಭತ್ತದ ಗದ್ದೆಗಳ ಸಾಲು... ರೈತ ಇನ್ನೂ ಓಬೇಲೆ ಹಾಡುತ್ತಿದ್ದಾನೆ... ನಿತ್ಯ ಹೂಗಳಿಂದ ಕಂಗೊಳಿಸುವ ನಿತ್ಯಪುಷ್ಪ...ದಾಸಾವಾಳ...ಪಾರೀಜಾತ...ಹೀಗೆ ಸಸ್ಯರಾಶಿ...ಸಸ್ಯಕಾಶಿ...ನಡುವೆ ನೆಲೆನಿಂತಿದೆ ಈ ಅಚ್ಚರಿಯ ಕ್ಷೇತ್ರ!
ಆ ಪುಣ್ಯ ಭೂಮಿಗೆ ಕಾಲಿಡಬೇಕಾದರೆ ಶ್ರದ್ಧಾ ಭಕ್ತಿ ಅತೀ ಅಗತ್ಯ...


ಅಲ್ಲಿ ಆಳೆತ್ತರದ ಮೂರು ಹುತ್ತಗಳಿವೆ... ಹೊರ ಭಾಗದಲ್ಲೂ ಒಂದೆರಡು ಹುತ್ತಗಳು ಕಂಡು ಬರುತ್ತವೆ... ದಿನನಿತ್ಯ ಈ ಹುತ್ತಗಳ ಗಾತ್ರ ಬೆಳೆಯುತ್ತಾ ಹೋಗುತ್ತಿವೆ.... ಇದೀಗ ಏಳಡಿಗಿಂತಲೂ ಎತ್ತರದ ಮೂರು ಹುತ್ತಗಳು ಅಲ್ಲಿ ಕಾಣಸಿಗುತ್ತವೆ... ಈ ಹುತ್ತಗಳಿಗೆ ಬೆಂಗಾವಲಾಗಿ ಅಲ್ಲಿದ್ದಾನೆ ಓರ್ವ ಶಕ್ತಿ ದೇವತೆ... ಆತ ಎಲ್ಲರ ಕಣ್ಣಿಗೂ ಕಾಣಸಿಗುವುದಿಲ್ಲ...ಬದಲಾಗಿ ಆ ಕ್ಷೇತ್ರಕ್ಕೆ ಬಂದು ಭಕ್ತಿಯಿಂದ ನಮಿಸಿದರೆ ಆತ ದರ್ಶನವೀಯುತ್ತಾನೆ... ಅಂತಹ ಅನೇಕಾನೇಕ ಅದ್ಭುತ ಶಕ್ತಿ, ಕಾರಣೀಕ ಆ ಕ್ಷೇತ್ರಕ್ಕಿದೆ... ಅಂತಹ ಕ್ಷೇತ್ರ ಯಾವುದು ಎಂಬ ಕುತೂಹಲ ನಿಮ್ಮಲ್ಲುಂಟಾಗಿರಬಹುದು... ಅದಕ್ಕಿಂತ ಮೊದಲು ನಾವು ಆ ಕ್ಷೇತ್ರವೇನು...ಅಲ್ಲಿನ ಐತಿಹ್ಯವೇನು ಎಂಬುದನ್ನು ತಿಳಿಯೋಣ...



ದೇವರ ನಾಡೆಂಬ ಖ್ಯಾತಿ ಪಡೆದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬದಿಯಡ್ಕದ ಸನಿಹದಲ್ಲಿದೆ ಈ ಅಚ್ಚರಿಯ ಕ್ಷೇತ್ರ. ಬದಿಯಡ್ಕದಿಂದ ಸರಿಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿದೆ ಚೇರ್ಕೋಡ್ಲು. ಈ ಚೇರ್ಕೋಡ್ಲು. ಅತ್ಯಂತ ಕಾರಣೀಕ ಮಹಿಮೆಗಳನ್ನು ಹೊಂದಿದ ಪ್ರದೇಶ. ಈ ಹಿಂದೆ ಹಲವು ಋಷಿಮುನಿಗಳು ಈ ಪ್ರದೇಶದಲ್ಲಿ ತಪಸ್ಸು ಮಾಡಿ, ಸಿದ್ಧಿ ಪಡೆದಿದ್ದರಂತೆ. ಇದು ಐತಿಹ್ಯ. ಇದಕ್ಕೆ ಇಂದಿಗೆ ಯಾವ ಸಾಕ್ಷಿಯಾಗಲೀ ಪುರಾವೆಗಳಾಗಲೀ ಕಾಣಸಿಗುವುದಿಲ್ಲ. ಆದರೆ ಅದೆಲ್ಲಾ ಹೌದು ಎಂಬುದನ್ನು ಸಾರಿ ಹೇಳುತ್ತವೆ ಈ ಚೇರ್ಕೋಡ್ಲು. ಪರಿಸರ! ಇದಕ್ಕೆ ಸಾಕಷ್ಟು ಉದಾಹರಣೆಗಳು ಇಂದಿಗೂ ಇಲ್ಲಿ ಕಾಣಸಿಗುತ್ತವೆ.

ಇಲ್ಲಿ ಶ್ರೀ ವಿಷ್ಣುಮುರ್ತಿ ದೇವಸ್ಥಾನವೊಂದಿದೆ. ಅದು ಅತ್ಯಂತ ಪುರಾತನವಾದ ದೇಗುಲ. ಆ ದೇಗುವಲೇ ಈ ಎಲ್ಲಾ ಅಚ್ಚರಿಗಳಿಗೆ ಸಾಕ್ಷಿಯಾಗಿ ನಮ್ಮ ಕಣ್ಣಮುಂದಿದೆ. ಇದು ಅಂತಿಂಥಾ ದೇಗುಲವಲ್ಲ. ಪ್ರಾಚೀನ ದೇಗುಲ. ಇನ್ನೂ ಮುಳಿಹುಲ್ಲಿನ ಛಾವಣಿ ಹೊಂದಿದ ಕ್ಷೇತ್ರ ಇದಾಗಿದೆ. ನಿಸರ್ಗರಾಶಿಯೊಳಗಿನ ನೈಸರ್ಗಿಕ ಕ್ಷೇತ್ರ! ಮಣ್ಣು - ಕಲ್ಲುಗಳಿಂದ ನಿರ್ಮಿಸಿದ ಪಾಗಾರ. ಅಲ್ಲೆಲ್ಲಾ ಅದ್ಭುತ ರಮ್ಯ ಕೆತ್ತನೆಗಳ ಅವಶೇಶ. ಅದು ನೈಸರ್ಗಿಕ ವಿಕೋಪಗಳಿಗೆ ತುತ್ತಾಗಿ ಕಾಲಗರ್ಭದೊಳು ಹುದುಗ ಹೊರಟಂತೆ ಭಾಸವಾಗುತ್ತಿವೆ. ಆದರೆ ಆ ದೇಗುಲದ ಒಳ - ಹೊರ ಭಾಗಗಳಲ್ಲಿ ಅಷ್ಟೇ ಪ್ರಾಚೀನ ಹುತ್ತಗಳಿವೆ! ದೇಗುಲದ ಗರ್ಭ ಗುಡಿಯ ಒಳಭಾಗದಲ್ಲಿ ಏಳು ಅಡಿಗಳಷ್ಟೆತ್ತರದ ಬೃಹದಾಕಾರದ ಮೂರು ಹುತ್ತಗಳ ನಡುವೆ ಪ್ರಸನ್ನ ಚಿತ್ತನಾಗಿ ಶ್ರೀ ವಿಷ್ಣು ಮೂರ್ತಿಯ ರಮ್ಯ ವಿಗ್ರಹವಿದೆ. ಈ ಹುತ್ತಗಳಲ್ಲಿ ಕಾರಣೀಕಕ್ಕೆ ಸಾಕ್ಷಿಯಾದ ನಾಗ ಇಂದಿಗೂ ನೆಲೆ ನಿಂತಿದ್ದಾನೆ. ಜನತೆಯ ಕಷ್ಟ ಕಾರ್ಪಣ್ಯಗಳನ್ನು ದೂರಮಾಡಿ ಹರಸುತ್ತಾ ತನ್ನ ಶಕ್ತಿಯನ್ನು ಮೆರೆಯುತ್ತಿದ್ದಾನೆ...! `ದೇಹೀ ಎಂದ ಭಕ್ತನಿಗೆ ನಾಸ್ತಿ ಎನ್ನದೆ' ಹರಸುತ್ತಾ ಕಾರಣೀಕ ಮೆರೆಯುತ್ತಿದ್ದಾನೆ...ಅಂತಹ ಅದ್ಭುತ ರಮ್ಯ ಕ್ಷೇತ್ರ ಈ ಚೇರ್ಕೋಡ್ಲು.! .ಬೃಂದಾವನ ನಿತ್ಯ ನೃತ್ಯೋತ್ಸವಗಳೊಂದಿಗೆ ವೈಭವದಿಂದ ವಿರಾಜಿಸುತ್ತಿದ್ದ ಕ್ಷೇತ್ರ ಇದಾಗಿತ್ತು ಎಂಬುದು ಜ್ಯೋತಿಷಿಗಳ ಮಾತು.
ಕೃಷ್ಣರಾಜ ಭಟ್ ಎಂಬವರು ಇಂದಿಗೂ ಕ್ಷೇತ್ರದ ಪೂಜೆ ಪುನಸ್ಕಾರಗಳನ್ನು ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ. ಒಂದು ಹೊತ್ತಿನ ನೈವೇದ್ಯ ಪೂಜೆ ದೇವರಿಗೆ ಸಲ್ಲುತ್ತಿದೆ. ವರ್ಷಕ್ಕೊಮ್ಮೆ ಸಮಾರಾಧನೆ, ಶಿವರಾತ್ರಿ, ನವರಾತ್ರಿ, ತುಳಸಿ ಹಬ್ಬ, ಅಷ್ಟಮಿಯ ದಿನಗಳಂದು ಈ ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯುತ್ತಿವೆ. ದೇವರಿಗೆ ನೈವೇದ್ಯ ಪಾಯಸದ ಹರಕೆ ಇಲ್ಲಿನ ವೈಶಿಷ್ಟ್ಯವಾದ ಹರಕೆ. ದೇಗುಲದ ಗರ್ಭ ಗುಡಿ, ನಮಸ್ಕಾರ ಮಂಟಪ, ತೀರ್ಥ ಮಂಟಪ, ಅಡುಗೆ ಮನೆ, ಕ್ಷೇತ್ರದ ಶಕ್ತಿ ದೈವಗಳ ತಾಣಗಳು ಇಂದಿಗೂ ಮುಳಿ ಹುಲ್ಲಿನ ಛಾವಣಿಗಳನ್ನು ಹೊಂದಿರುವುದು ಇನ್ನೊಂದು ಅಚ್ಚರಿ. ಈ ರೀತಿ ಅನೇಕಾನೇಕ ಅದ್ಭುತ, ಅಚ್ಚರಿಗಳೊಂದಿಗೆ ಚೇರ್ಕೋಡ್ಲು. ವಿಷ್ಣುಮುರ್ತಿ ದೇವಸ್ಥಾನ ಕಾರಣೀಕಗಳನ್ನು ಮೆರೆಯುತ್ತಿದೆ.

ಬೇರೆಲ್ಲೂ ಇಲ್ಲ!
ಅದು ವಿಕ್ಟೋರಿಯಾ ಮಹಾರಾಣಿಯ ಕಾಲ. ಅದಾಗ ಆಕೆ ಈ ಕ್ಷೇತ್ರಕ್ಕೆ ಭೇಟಿ ನೀಡಿದ್ದಳಂತೆ. ಅಷ್ಟು ಮಾತ್ರವಲ್ಲದೆ ತಿಂಗಳಿಗೆ ಈ ಕ್ಷೇತ್ರಕ್ಕೆ 12 ರು.ವಿನಂತೆ ಸರಕಾರದಿಂದ ಅನುದಾನವನ್ನೂ ಘೋಷಿಸಿದ್ದಳಂತೆ. ಆ ಪ್ರಕಾರ ಇಂದಿಗೂ ಈ ಕ್ಷೇತ್ರಕ್ಕೆ 12ರು. ಸರಕಾರದಿಂದ ಗ್ರಾ.ಪಂ.ಮೂಲಕ ಲಭಿಸುತ್ತಿದೆ.! ಈ ಆಸುಪಾಸಿನ ಬೇರೆಯಾವ ಕ್ಷೇತ್ರಕ್ಕೂ ಈ ರೀತಿಯ ಅನುದಾನ ಸರಕಾರದಿಂದ ದೊರಕುತ್ತಿಲ್ಲ!. ಈ ಕ್ಷೇತ್ರಕ್ಕೆ ಸಂಬಂಧಪಟ್ಟ ದಾಖಲೆಗಳು ಕೆಲವೊಂದು ಕಾಣಸಿಕ್ಕಿವೆ. ಅವೆಲ್ಲವೂ ಹಳೆಗನ್ನಡ, ಮೋಡಿ ಲಿಪಿಗಳಲ್ಲಿವೆಯೆಂದು ಕ್ಷೇತ್ರದ ಸೂರ್ಯನಾರಾಯಣ ಭಟ್ ತಿಳಿಸಿದ್ದಾರೆ.

ಮುಳಿ ಛಾವಣಿ; ಮುಗುಳಿ
ಈ ಕ್ಷೇತ್ರದ ಛಾವಣಿ ಸಂಪೂರ್ಣ ಮುಳಿ ಹುಲ್ಲಿನಿಂದ ನಿರ್ಮಿಸಲ್ಪಟ್ಟಿವೆ. ಕ್ಷೇತ್ರದ `ಮುಗುಳಿ'(ಕಲಶ)ವೂ ಬೇರು ಹಾಗೂ ಹುಲ್ಲಿನದ್ದು. ಅದು ಒಂದು ವೈಶಿಷ್ಟ್ಯ.




ಸೇವೆಯ ಇನ್ನೊಂದು ಹೆಸರೇ ವಸಂತ ಪೈ

ಶ್ವೇತವರ್ಣದ ಸುಂದರ ಕಾಯ. ಪ್ರಸನ್ನ ಮುಖ. ನಯ ವಿನಯ. ಸರಳ ಸ್ವಭಾವ. ಸೇವಾ ಮನೋಭಾವ. ಇದು ವಸಂತ ಪೈಗಳ ಒಟ್ಟು ಚಿತ್ರಣ.
ವಸಂತ ಪೈ ಅಂದರೆ ಕಾಸರಗೋಡು ಜಿಲ್ಲೆಯಲ್ಲಿ ಓರ್ವ ಪ್ರಸಿದ್ಧ ವ್ಯಕ್ತಿ. ಈಗಾಗಲೇ ಹತ್ತು ಹಲವು ದೇಗುಲಗಳನ್ನು ಜೀರ್ಣೋದ್ಧಾರಗೊಳಿಸುವ ಪುಣ್ಯ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ವೃತ್ತಿಯಲ್ಲಿ ಉದ್ಯಮಿ. ತನ್ನ ಉದ್ಯಮದ ಹಣವನ್ನು ದೇಗುಲಗಳ ಜೀರ್ಣೋದ್ಧಾರದ ಕಾರ್ಯಗಳಿಗೆ ವಿನಿಯೋಗಿಸುತ್ತಾರೆ. ತನ್ಮೂಲಕ ದೇವರ ಸೇವೆ ಮಾಡುತ್ತಿದ್ದಾರೆ. ಪ್ರಚಾರ, ಪ್ರಸಿದ್ಧಿ ಬಯಸುವವರಲ್ಲ. ಪ್ರಚಾರಕ್ಕಾಗಿ ಈ ರೀತಿಯ ಕಾರ್ಯಗಳಲ್ಲಿ ಅವರು ತೊಡಗುತ್ತಿಲ್ಲ.
2003ರಲ್ಲಿ ಮಂಜೇಶ್ವರದ ಶ್ರೀ ಮದನಂತೇಶ್ವರ ದೇಗುಲದ ಜೀರ್ಣೋದ್ಧಾರ ಕಾರ್ಯಕ್ಕೆ ತನ್ನನ್ನು ತೊಡಗಿಸಿಕೊಂಡ ವಸಂತ ಪೈಗಳು ನಂತರ ಹಿಂತಿರುಗಿ ನೋಡಿಲ್ಲ. `ದೇವರು ಆ ಕಾರ್ಯಗಳನ್ನು ನನ್ನಲ್ಲಿ ಮಾಡಿಸುತ್ತಾನೆ' ಎಂದಷ್ಟೇ ಇವರು ಹೇಳುತ್ತಾರೆ. ನಂತರದ ದಿನಗಳಲ್ಲಿ ಪೆರಡಾಲು ಉದನೇಶ್ವರ ಕ್ಷೇತ್ರ, ಬಳ್ಳಂಬಟ್ಟು ವನಶಾಸ್ತಾವು, ಕಡೆಂಜಿ ಮಹಾವಿಷ್ಣು ಕ್ಷೇತ್ರ, ಕಾರಿಂಜೇಶ್ವರ ಕ್ಷೇತ್ರ, ಶ್ರೀ ಕ್ಷೇತ್ರ ಅನಂತ ಪುರ, ಕೋಳಿಕ್ಕಾಲು ಗೋಪಾಲಕೃಷ್ಣ ಕ್ಷೇತ್ರ, ಶ್ರೀ ಕ್ಷೇತ್ರ ಕುಮಾರ ಮಂಗಲ ಹೀಗೆ ಹತ್ತು ಹಲವು ಕ್ಷೇತ್ರಗಳ ಜೀರ್ಣೋದ್ಧಾರಗಳಿಗೆ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದಾರೆ.
ಇದೀಗ ಚೇರ್ಕೋಡ್ಲು ವಿಷ್ಣುಮುರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಇವರೇ ಮುಂದಾಗಿದ್ದು, ಅಡಿಯಿಂದ ಮುಡಿವರೆಗಿನ ದೇಗುಲದ ಜೀರ್ಣೋದ್ಧಾರಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಇದು ನನ್ನ ಭಾಗ್ಯ ಎಂದು ಮನದಾಳದ ಮಾತುಗಳನ್ನಾಡುತ್ತಾರೆ.

ಮುಂದೆ ಓದಿ
| | |Home