ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ನುಡಿಸಿರಿ

ಮಂಗಳೂರು: ಆಳ್ವಾಸ್ ಎಜುಕೇಶನ್ ಫೌಂಡೇಶನ್ ಆಶ್ರಯದಲ್ಲಿ ನವೆಂಬರ್ 6ರಿಂದ 8ರ ತನಕ ಮುಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿರುವ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ `ಆಳ್ವಾಸ್ ನುಡಿಸಿರಿ - 2009'ರ ಸರ್ವಾಧ್ಯಕ್ಷರಾಗಿ ಸಂಶೋಧಕ ಡಾ.ಹಂ.ಪ.ನಾಗರಾಜಯ್ಯ ಆಯ್ಕೆಯಾಗಿದ್ದಾರೆ.
ನಾಡಿನ ಸಾಂಸ್ಕೃತಿಕ ನೇತಾರ ಡಾ.ಎಂ.ಮೋಹನ ಆಳ್ವರ ನೇತೃತ್ವದಲ್ಲಿ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಈ ಸಾಹಿತ್ಯ ಸಮ್ಮೇಳನ ನಡೆದು ಬರುತ್ತಿದ್ದು ಆರನೇ ವರ್ಷದ ಸಮ್ಮೇಳನ `ಕನ್ನಡ ಮನಸ್ಸು : ಸಮನ್ವಯದೆಡೆಗೆ' ಎಂಬ ಪರಿಕಲ್ಪನೆಯಲ್ಲಿ ನಡೆಯಲಿದೆ.



ನುಡಿಸಿರಿ ಪ್ರಶಸ್ತಿ
ಕನ್ನಡ ನಾಡು ನುಡಿ ಕಲೆಗೆ ಅನುಪಮ ಸೇವೆ ಸಲ್ಲಿಸಿದ ಹತ್ತು ಮಂದಿಗೆ ನುಡಿಸಿರಿ ಪ್ರಶಸ್ತಿ ನೀಡಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಸನ್ಮಾನಿಸಲಿದ್ದಾರೆ.ಸಮ್ಮೇಳನದ ಪರಿಕಲ್ಪನೆಗೆ ಪೂರಕವಾಗಿ ಹಲವು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾರೋಪ ಭಾಷಣವನ್ನು ಶ್ರೀ ತ್ರಿವಿಧ ದಾಸೋಹಿ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ನೆರವೇರಿಸಲಿದ್ದಾರೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ವೈವಿಧ್ಯತೆ3ದಿನಗಳ ಸಮ್ಮೇಳನದಲ್ಲಿ ನಾಡಿನ ಹೆಸರಾಂತ ಸಾಹಿತಿ, ಚಿಂತಕ, ಕಲಾವಿದರು ಭಾಗವಹಿಸಲಿದ್ದಾರೆ. ಕವಿಸಮಯ, ಕವಿನಮನ, ಕಥಾ ಸಮಯ, ಮಾತಿನ ಮಂಟಪ ಎಂಬ ಕಾರ್ಯಕ್ರಮಗಳು ನಡೆಯಲಿವೆ. ಪ್ರಾತಃಕಾಲ 5ರಿಂದ 7ರ ತನಕ ಮತ್ತು ಮುಸ್ಸಂಜೆ 5ರಿಂದ 12.30ರ ತನಕ ನೃತ್ಯ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಸರಾಂತ ಪ್ರತಿಭೆಗಳು ಪ್ರಸ್ತುತ ಪಡಿಸಲಿದ್ದಾರೆ.

ಉಚಿತ ಪ್ರವೇಶ
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಅಧಿಕ ಸಂಖ್ಯೆಯಲ್ಲಿ ಪ್ರತಿನಿಧಿಗಳನ್ನಾಗಿಸಿ ಆಹ್ವಾನಿಸಿ ಅವರಲ್ಲಿ ಸಾಹಿತ್ಯ, ಸಂಸ್ಕೃತಿಯ ಕುರಿತು ಸದಭಿರುಚಿ ಬೆಳೆಸಿ ಅವರನ್ನು ಸತ್ಪ್ರಜೆಯನ್ನಾಗಿ ರೂಪಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ವ್ಯವಸ್ಥೆಯನ್ನು ಮಾಡಲಾಗಿದೆ.

ಪ್ರತಿನಿಧಿ ಶುಲ್ಕ
ಸಮ್ಮೇಳನದಲ್ಲಿ ಪಾಲ್ಗೊಳ್ಳುವವರಿಗೆ ಪ್ರತಿನಿಧಿ ಶುಲ್ಕ 100 ವಿಧಿಸಲಾಗಿದೆ. ಪ್ರತಿನಿಧಿ ಶುಲ್ಕವನ್ನು ನಗದು/ಮನಿಯಾರ್ಡರ್/ಡಿ.ಡಿ.ರೂಪದಲ್ಲಿ ಪಾವತಿಮಾಡಬಹುದು. ಡಿ.ಡಿ.ಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹೆಸರಿನಲ್ಲಿ ಪಡೆಯುವಂತೆ ಕೋರಲಾಗಿದೆ.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 08258-238104 ನಿಂದ 238111 ಸಂಪರ್ಕಿಸಬಹುದು.

ಮುಂದೆ ಓದಿ
9:10 PM

ಜಲ ಚಂದ್ರ!!!

Posted by ekanasu

ವಿಶೇಷ ವರದಿ

ಈಗ ಚಂದ್ರ ಬರಡು ಕಾಯ ಅಲ್ಲ!

`ಚಂದ್ರ' ಅಬಾಲ ವೃದ್ಧರಾದಿಯಾಗಿ ಎಲ್ಲರ ಅಚ್ಚುಮೆಚ್ಚಿನ ಆಕಾಶ ಕಾಯ. ಚಂದ್ರ ಪುಟ್ಟ ಮಕ್ಕಳ ಪಾಲಿಗೆ ಚಂದ್ರ ಮಾಮನಾದರೆ, ಪ್ರೇಮಿಗಳಿಗೆ ಪ್ರೇಮ ಕಾವ್ಯದ ಸುಂದರ ಹೂರಣ...ಮನದ ವೇದನೆ ಕಳೆಯಲು ಆಗಸದ ಚಂದಿರ ಅನೇಕರಿಗೆ ಸಹಕರಿಸುತ್ತಾನೆ. ವಿಜ್ಞಾನಿಗಳಿಗೆ ತಮ್ಮ ನಿರಂತರ ಸಂಶೋಧನೆಗೆ ತನ್ನನ್ನು ಒಡ್ಡಿಕೊಳ್ಳುತ್ತಾನೆ. ಒಟ್ಟಾರೆಯಾಗಿ ಚಂದ್ರ ಎಲ್ಲರಿಗೂ ಬೇಕಾದವನಾಗಿದ್ದಾನೆ.


ಮಾನವ ಚಂದ್ರನ ಬಗ್ಗೆ ಅಪಾರ ಕುತೂಹಲವನ್ನು ಹೊಂದಿದ್ದಾನೆ. ಈ ಕಾರಣಕ್ಕಾಗಿಯೇ ಭೂಮಿಯನ್ನು ಹೊರತುಪಡಿಸಿದಂತೆ ಮಾನವ ನಡೆದಾಡಿದ ಏಕೈಕ ಆಕಾಶ ಕಾಯವೆಂದರೆ ಚಂದ್ರ. ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು ಚಂದ್ರನ ಕುರಿತಾದ ಸಂಶೋಧನೆ ನಡೆಸುತ್ತಲೇ ಬಂದಿದ್ದಾರೆ. ಆದರೆ ಇಡೀ ವಿಶ್ವವನ್ನೇ ನಿಬ್ಬೆರಗು ಮಾಡುವಂತಹ ಮತ್ತು ಇಡೀ ವಿಶ್ವವೇ ಭಾರತದತ್ತ ನೋಟ ಹರಿಸುವಂತಹ ಸಾಧನೆಯನ್ನು ಭಾರತೀಯ ವಿಜ್ಞಾನಿಗಳು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಲೇ ಬೇಕು.

ಚಂದ್ರಯಾನ 1 ಅವಧಿಗೂ ಮುನ್ನವೇ ತನ್ನ ಕಾರ್ಯವೈಖರಿಯನ್ನು ಸ್ಥಗಿತಗೊಳಿಸಿದ್ದರಿಂದಾಗಿ ನಿರಾಸೆ ಉಂಟಾಯಿತಾದರೂ ಭಾರತೀಯ ವಿಜ್ಞಾನಿಗಳು ಇದೊಂದು ಮಹತ್ವಪೂರ್ಣ ಸಾಧನೆ, ನಿರಾಸೆ ಪಡುವಂತಹ ಅಗತ್ಯ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದರು. ಚಂದ್ರಯಾನ ಯಶಸ್ವಿಯಾಗಿದೆ ಎಂಬುದನ್ನು ಅಂದೇ ಅವರು ಅರಿತಿದ್ದರೂ ಅದನ್ನು ಬಹಿರಂಗ ಪಡಿಸುವಂತಿರಲಿಲ್ಲ. ಚಂದ್ರನಲ್ಲಿ ನೀರಿನ ಅಂಶವಿರುವ ಬಗ್ಗೆ ಜೂನ್ ತಿಂಗಳಿನಲ್ಲೇ ಭಾರತೀಯ ವಿಜ್ಞಾನಿಗಳಿಗೆ ಸೂಕ್ತ ಸುಳಿವು ಲಭಿಸಿದೆಯಾದರೂ ಜಾಗತಿಕ ಮಹತ್ವದ ಶೋಧ ಇದಾಗಿದ್ದ ಹಿನ್ನಲೆಯಲ್ಲಿ ಜಾಗತಿಕ ಜರ್ನಲ್ ಒಂದರಲ್ಲಿ ಪ್ರಕಟವಾಗಬೇಕು ಎಂಬ ಹಿನ್ನಲೆಯಲ್ಲಿ ಅದನ್ನು ಬಹಿರಂಗ ಗೊಳಿಸಿಲ್ಲ ಡಾ.ಗೋಸ್ವಾಮಿ ತಿಳಿಸಿದ್ದಾರೆ.

ಚಂದ್ರನ ಮೇಲ್ಮೈ ಕುರಿತ ಸಾಕಷ್ಟು ಅಧ್ಯಯನಗಳು ಈ ಹಿಂದೆ ನಡೆದಿದೆಯಾದರೂ ಭಾರತೀಯ ವಿಜ್ಞಾನಿಗಳ ಈ ಶೋಧ ಚಂದ್ರನ ಅಧ್ಯಯನದಲ್ಲೊಂದು ಮೈಲಿಗಲ್ಲು ಎಂದೇ ಹೇಳಬಹುದು.
ಚಂದ್ರನ ಮೇಲ್ಮೈಯನ್ನು ನಿರಂತರವಾಗಿ ಅಪ್ಪಳಿಸುತ್ತಿರುವ ಸೌರಮಂಡಲದ ಗಾಳಿಯೇ ಚಂದ್ರನಲ್ಲಿನ ನೀರಿಗೆ ಕಾರಣವಾಗಿರಬಹುದೆಂದು ಇದೀಗ ವಿಶ್ಲೇಷಿಸಲಾಗುತ್ತಿದೆ. ಸೌರಮಂಡಲದ ಗಾಳಿಯಲ್ಲಿರುವ ಜಲಜನಕದ ಕಣಗಳು ಚಂದ್ರನ ಮೇಲ್ಮೈಯಲ್ಲಿರುವ ಖನಿಜಗಳಲ್ಲಿರುವ ಆಮ್ಲಜನಕದೊಂದಿಗೆ ಬರೆತು ನೀರಿನ ಸೃಷ್ಟಿಗೆ ಕಾರಣವಾಗಿರಬಹುದೆಂದು ವಿಜ್ಞಾನಿಗಳು ವಿಶ್ಲೇಷಿಸುತ್ತಾರೆ.

- ಹರೀಶ್ ಕೆ. ಆದೂರು

ನೀರಿನ ಅಸ್ತಿತ್ವ

(ಇದು ವಿಕಿಪಿಡಿಯ ಕೃಪೆ)

ಚಂದ್ರನ ಮೇಲ್ಮೈಯನ್ನು ಧೂಮಕೇತುಗಳು ಮತ್ತು ಉಲ್ಕಾಪಿಂಡಗಳು ನಿರಂತರವಾಗಿ ಅಪ್ಪಳಿಸಿ ಅಲ್ಪ-ಸ್ವಲ್ಪ ನೀರನ್ನು ಚಂದ್ರನ ಮೇಲ್ಮೈ ಮೇಲೆ ಸೇರಿಸಿವೆ. ಈ ನೀರಿನ ಕಣಗಳು ಸಾಮಾನ್ಯವಾಗಿ ಸೂರ್ಯನ ಬೆಳಕಿನಿಂದ ವಿಭಜಿಸಲ್ಪಟ್ಟು, ಹೊರಬರುವ ಆಮ್ಲಜನಕ ಮತ್ತು ಜಲಜನಕದ ಕಣಗಳು ಬಾಹ್ಯಾಕಾಶಕ್ಕೆ ಹಾರಿ ಹೋಗುತ್ತವೆ. ಅಪೋಲೋ ಗಗನಯಾತ್ರಿಗಳು ಸಮಭಾಜಕದ ಬಳಿ ಸಂಗ್ರಹಿಸಿದ ಶಿಲಾ ಮಾದರಿಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ನೀರಿನ ಅಂಶ ಪತ್ತೆಯಾಗಿರುವುದು, ಚಂದ್ರನ ಮೇಲ್ಮೈ ಮೇಲೆ ತೇವಾಂಶವಿಲ್ಲದಿರುವುದಕ್ಕೆ ಸಾಕ್ಷಿಯಂತಿದೆ. ಆದರೆ, ಚಂದ್ರನ ಅಕ್ಷೆಯು ಕ್ರಾಂತಿವೃತ್ತದ ಸಮತಳಕ್ಕೆ ಸ್ವಲ್ಪ ಓರೆಯಲ್ಲಿ ಇರುವುದರಿಂದ (ಕೇವಲ ೧.೫°), ಧ್ರುವಗಳ ಬಳಿಯಿರುವ ಕೆಲವು ಆಳವಾದ ಕುಳಿಗಳು ಎಂದೂ ಸೂರ್ಯನ ಬೆಳಕನ್ನು ಪಡೆಯುವುದೇ ಇಲ್ಲ ಹಾಗೂ ಶಾಶ್ವತವಾಗಿ ನೆರಳಿನಲ್ಲಿರುತ್ತವೆ (ಶ್ಯಾಕ್ಲ್‌ಟನ್ ಕುಳಿಯನ್ನು ನೋಡಿ). ಹೀಗಾಗಿ, ಈ ಕುಳಿಗಳನ್ನು ಪ್ರವೇಶಿಸಿದ ಯಾವುದೇ ನೀರಿನ ಕಣಗಳು ದೀರ್ಘಕಾಲಗಳವರೆಗೆ ಸ್ಥಿರವಾಗಿರಬಹುದು.



ದಕ್ಷಿಣ ಧ್ರುವದಲ್ಲಿ ಈ ರೀತಿ ನೆರಳಿನಲ್ಲಿರುವ ಕುಳಿಗಳ ನಕ್ಷೆಯನ್ನು ಕ್ಲೆಮೆಂಟೀನ್ ತಯಾರಿಸಿದೆ.[೧೪] ೧೪,೦೦೦ ಚ.ಕಿ.ಮೀ.ಯಷ್ಟು ವಿಸ್ತೀರ್ಣವು ಶಾಶ್ವತ ನೆರಳಿನಲ್ಲಿ ಇರಬಹುದೆಂದು ಗಣಕೀಕೃತ ಛದ್ಮನಗಳು ಸೂಚಿಸುತ್ತವೆ.[೯] ಕ್ಲೆಮೆಂಟೀನ್ ರೆಡಾರ್ ಪ್ರಯೋಗಗಳ ಫಲಿತಾಂಶಗಳು ಮೇಲ್ಮೈನ ಬಳಿ ಸಣ್ಣ, ಹೆಪ್ಪುಗಟ್ಟಿದ ನೀರಿನ ಮಡುಗಳ ಅಸ್ತಿತ್ವದೊಂದಿಗೆ ಸಮಂಜಸವಾಗಿವೆ. ಇದಲ್ಲದೆ, ಲೂನಾರ್ ಪ್ರಾಸ್ಪೆಕ್ಟರ್ನ ನ್ಯೂಟ್ರಾನ್ ವರ್ಣಪಟಲಮಾಪಕದ ಮಾಹಿತಿಯ ಪ್ರಕಾರ, ಧ್ರುವ ವಲಯದ ಬಳಿಯ ಆವರಣ ಪ್ರಸ್ತರದ ಮೇಲಿನ ಒಂದು ಮೀಟರ್ ಆಳದವರೆಗೂ ಅಸಮಂಜಸವಾಗಿ ಹೆಚ್ಚಿನ ಜಲಜನಕದ ಸಾಂದ್ರತೆಯು ಕಂಡುಬರುತ್ತದೆ.[೧೫] ಒಟ್ಟು ನೀರಿನ ಹಿಮದ ಪ್ರಮಾಣದ ಅಂದಾಜು ಸುಮಾರು ೧ ಘ.ಕಿ.ಮೀ.

ಗಣಿಗಳನ್ನು ತೋಡಿ ಹಿಮವನ್ನು ತೆಗೆದು, ಸೌರ ಫಲಕಗಳನ್ನೊಳಗೊಂಡ ವಿದ್ಯುತ್ ಉತ್ಪನ್ನ ಘಟಕಗಳಿಂದ ಅಥವಾ ಪರಮಾಣು ಉತ್ಪಾದಕಗಳಿಂದ ಹಿಮವನ್ನು ಆಮ್ಲಜನಕ ಮತ್ತು ಜಲಜನಕದ ಅಣುಗಳಾಗಿ ವಿಭಜಿಸಬಹುದು. ಭೂಮಿಯಿಂದ ಚಂದ್ರನತ್ತ ನೀರಿನ (ಅಥವಾ ಜಲಜನಕದ/ಆಮ್ಲಜನಕದ) ಸಾಗಾಣಿಕೆಯು ಅಸಂಭವನೀಯವಾಗಿ ದುಬಾರಿಯಾಗಿರುವುದರಿಂದ, ಬಳಕೆಯೋಗ್ಯ ಪ್ರಮಾಣದಲ್ಲಿ ನೀರಿನ ಅಸ್ತಿತ್ವವು ಚಾಂದ್ರ ವಸತಿಗೆ ಒಂದು ಮುಖ್ಯವಾದ ವಿಷಯ.

ಚಂದ್ರನ ಕುರಿತು ಇನ್ನೊಂದಿಷ್ಟು

ಚಂದ್ರನನ್ನು ತಲುಪಿದ ಮೊದಲ ಮಾನವರಹಿತ ಗಗನನೌಕೆಯೆಂದರೆ ರಷ್ಯಾದ ಲೂನ ಕಾರ್ಯಕ್ರಮದ ನೌಕೆ. ಲೂನಾ ೧ ಭೂಮಿಯ ಗುರುತ್ವದಿಂದ ಮುಕ್ತಿ ಪಡೆದು ಚಂದ್ರನ ಬಳಿ ಹಾರಿಹೋದ ಮೊಟ್ಟಮೊದಲ ಮಾನವ ನಿರ್ಮಿತ ವಸ್ತು. ಲೂನಾ ೨ ಚಂದ್ರನ ಮೇಲ್ಮೈ ತಲುಪಿದ ಮೊಟ್ಟಮೊದಲ ಮಾನವ ನಿರ್ಮಿತ ವಸ್ತು. ಸಾಮಾನ್ಯವಾಗಿ ಮರೆಯಾಗಿರುವ ಚಂದ್ರನ ಹಿಮ್ಮುಖವನ್ನು ಲೂನಾ ೩ ಚಿತ್ರೀಕರಿಸಿತು. ಈ ೩ ಘಟನೆಗಳೂ ೧೯೫೯ರಲ್ಲಿ ಆದವು. ಚಂದ್ರನ ಮೇಲೆ ನಿಧಾನವಾಗಿ ಇಳಿದ ಪ್ರಪ್ರಥಮ ನೌಕೆ ಲೂನಾ ೯ ಮತ್ತು ಚಂದ್ರನನ್ನು ಪರಿಭ್ರಮಿಸಿದ ಪ್ರಪ್ರಥಮ ಮಾನವರಹಿತ ನೌಕೆ ಲೂನಾ ೧೦. ಇವೆರಡೂ ೧೯೬೬ರಲ್ಲಿ ನಡೆದವು.[೧] ಅಮೇರಿಕಾ ಸಂಯುಕ್ತ ಸಂಸ್ಥಾನದ ಅಪೋಲೋ ಕಾರ್ಯಕ್ರಮದ ಭಾಗವಾಗಿ, ಚಂದ್ರನತ್ತ ಮೊದಲಬಾರಿಗೆ ಮತ್ತು ಏಕಮಾತ್ರ ಮಾನವ ಸಹಿತ ಯಾನವು ಯಶಸ್ವಿಯಾಗಿ ಪೂರ್ಣಗೊಂಡಿತು. ಚಂದ್ರವನ್ನು ಪರಿಭ್ರಮಿಸಿದ ಮೊದಲ ಮಾನವ ಸಹಿತ ಯಾನವಾದ ಅಪೋಲೋ ೧೯೬೮ರಲ್ಲಿ ಮತ್ತು ಚಂದ್ರನ ಮೇಲೆ ಮಾನವರನ್ನು ತಲುಪಿಸಿದ ಅಪೋಲೋ ೧೧ ೧೯೬೯ರಲ್ಲಿ ಪೂರ್ಣಗೊಂಡವು.[೧]

ಮುಂದೆ ಓದಿ
6:01 PM

ವಂದೇ ಗೋ ಮಾತರಂ

Posted by ekanasu

ವಿಚಾರ

ಅನಾದಿ ಕಾಲದಿಂದಲೂ ಮಾನವನಿಗೂ ಗೋವಿಗೂ ಅವಿನಾಭಾವ ಸಂಬಂಧ ಇದೆ. ವೇದ ಕಾಲದಲ್ಲಿ ಋಷಿಮುನಿಗಳ ಹೋಮ ಹವನ ಯಾಗ ಯಜ್ಞಗಳಿಗೆ ಪ್ರಾಮುಖ್ಯವಾಗಿ ಬೇಕಾದ ಗೋ ಮೂತ್ರ , ಗೋ ಮಯ, ಹಾಲು ತುಪ್ಪ, ಇತ್ಯಾದಿಗಳಿಗಾಗಿ ಅವರು ತಮ್ಮ ಆಶ್ರಮಗಳಲ್ಲಿ ಗೋವುಗಳನ್ನು ಸಾಕುತ್ತಿದ್ದರು. ಬೆಳಗ್ಗಿನ ಜಾವವೇ ಎದ್ದು ಹಸುವನ್ನು ಮೀಯಿಸಿ ಹಣೆಗೆ ತಿಲಕವಿಟ್ಟು ಪೂಜಿಸಿ ನಂತರವೇ ಹಾಲನ್ನು ಹಿಂಡುತ್ತಿದ್ದರು. ದನಗಳನ್ನೂ ಮಕ್ಕಳಂತೆಯೇ ಪ್ರೀತಿಸಿ ಪೋಷಿಸುತ್ತಿದ್ದರು. ಹಾಲನ್ನು ಕಾಯಿಸಿ ದೇವರಿಗೆ ಅರ್ಪಿಸಿಯೇ ತಾವು ಉಪಯೋಗಿಸುತ್ತಿದ್ದರು.



ಹಸುವಿಗೆ ಗೋಗ್ರಾಸ ನೀಡಿದ ಬಳಿಕವೇ ತಾವು ಭೋಜನ ಸೇವಿಸುತ್ತಿದ್ದರು. ಕೆಲವು ಮನೆತನಗಳಲ್ಲಿ ಇಂದಿಗೂ ಗೋಗ್ರಾಸ ನೀಡದೆ ಊಟ ಮಾಡುವ ಪದ್ಧತಿ ಇಲ್ಲ!. ಗೋ ಮಾತೆ ಎಂದೇ ಕರೆಯಲ್ಪಡುವ ಗೋವಿನಿಂದ ಮನುಷ್ಯನು ಅನೇಕ ರೀತಿಯಲ್ಲಿ ಪ್ರಯೋಜನ ಪಡೆಯುತ್ತಿದ್ದಾನೆ. ಹಾಲಿನಿಂದಲೇ ಮನುಷ್ಯನ ದಿನದ ಕೆಲಸ ಆರಂಭ. ಹಾಲು ಹಾಕಿದ ಕಾಫಿ ಅಥವಾ ಚಹಾ ಒಂದು ಕಪ್ ಕುಡಿದರೆ ಜನರಿಗೆ ಹೊಸ ಚೈತನ್ಯ ಮೂಡುತ್ತದೆ. ಒಂದೇ ಒಂದು ದಿನವಾದರೂ ಹಾಲಿಲ್ಲದಿದ್ದರೆ ಮನುಷ್ಯ ಕಂಗಾಲು.ಹಾಗೇನೇ ಗಂಜಿಗೊಂದಷ್ಟು ತುಪ್ಪ ಅಥವಾ ಮೊಸರು ಯಾ ಮಜ್ಜಿಗೆ ಹಾಕಿ ಊಟ ಮಾಡಿದಲ್ಲಿ ಅದು ಮೃಷ್ಟಾನ್ನ ಭೋಜನವಾಗುತ್ತದೆ.


ಅಮೃತ ಸಮಾನವಾದ ಹಾಲು ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಿಂದಿನ ಕಾಲದಲ್ಲಿ ಬಹುತೇಕ ಮನೆಗಳಲ್ಲಿ ಹಟ್ಟಿತುಂಬಾ ಜಾನುವಾರುಗಳಿದ್ದವು. ಅದರಲ್ಲಿ ಗರ್ಭ ದರಿಸಿದವುಗಳು, ಆಗತಾನೇ ಕರುಹಾಕಿದವುಗಳು, ಹೋರಿಗಳು ಹೀಗೆ ವಿಧ ವಿಧದ ಜಾನುವಾರುಗಳು ಇರುತ್ತಿದ್ದವು. ಹಿಂದೆ ಈಗಿನಂತೆ ವಿದೇಶೀ ತಳಿಗಳ ಜಾನುವಾರುಗಳಿರಲಿಲ್ಲ. ಏನಿದ್ದರೂ ಊರ ತಳಿಗಳೇ. ಆಗ ಜಾನುವಾರುಗಳ ಮೇವಿಗಾಗಿ ವಿಶಾಲವಾದ ಗೋಮಾಳವಿರುತ್ತಿತ್ತು. (ಈಗಲೂ ಬಹುಕಡೆಗಳಲ್ಲಿ ಗೋ ಮಾಳ ಇದೆಯಾದರೂ ಅದು ಅತಿಕ್ರಮಣಗೊಳ್ಳುತ್ತಿವೆ.) ಹಳ್ಳಿ ಮನೆಗಳಲ್ಲಿ ಬೆಳಗ್ಗಿನ ಜಾಗವೇ ಎದ್ದು ಮಡ್ಡಿ ಅಕ್ಕಚ್ಚು ಕೊಟ್ಟು ಹಾಲು ಕರೆದು ಜಾನುವಾರುಗಳನ್ನು ಗೋಮಾಳಕ್ಕೆ ಅಟ್ಟುತ್ತಿದ್ದರು. ಊರಿನ ಎಲ್ಲಾ ಮನೆಗಳ ಜಾನುವಾರುಗಳೂ ಹಿಂಡು ಹಿಂಡಾಗಿ ಅಲ್ಲಿ ಮೇಯುತ್ತಿದ್ದವು. ದನಗಳಿಗೆ ಗಂಗೇ , ಗೌರಿ, ತುಂಗಭದ್ರೆ ಇತ್ಯಾದಿ ಹೆಸರಿಡುತ್ತಿದ್ದರು.


ಸಂಜೆಯಾಗುತ್ತಿದ್ದಂತೆಯೇ ಗೋ ಪಾಲಕರು ತಮ್ಮ ತಮ್ಮ ಜಾನುವಾರುಗಳನ್ನು ಹೆಸರೆತ್ತಿ ಕೂಗಿದೊಡನೆ ಅವುಗಳು ಓಡೋಡಿ ತಮ್ಮ ಮನೆಯತ್ತ ಸಾಗುತ್ತಿದ್ದವು. ಎಳೆಯ ಕರುಗಳಿದ್ದ ಹಸುಗಳು ಅದಕ್ಕೆ ಮುನ್ನವೇ ಅಂಬಾ ಎಂದು ಕೂಗುತ್ತಾ ಹಟ್ಟಿ ಸೇರುತ್ತಿದ್ದವು. ದೇಶೀ ತಳಿಗಳ ಹಾಲು , ಮಜ್ಜಿಗೆ , ಕ್ಷೀರೋತ್ಪನ್ನಗಳು ಫರಿಮಳ ಯುತವಾಗಿವೆ. ಅದು ಹೆಚ್ಚಿನ ಔಷಧೀಯ ಗುಣವನ್ನೂ ಹೊಂದಿವೆ. ಮನುಷ್ಯನ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಗೋವು ಪ್ರಾಧಾನ್ಯತೆಯನ್ನು ಪಡೆದಿದೆ. ಕೆಲವರ್ಷಗಳ ಹಿಂದೆ ಕಣ್ಣಳತೆಯುದ್ದಕ್ಕೂ ಭತ್ತ, ಜೋಳ , ಕಬ್ಬಿನ ಗದ್ದೆಗಳಿರುತ್ತಿದ್ದವು. ಗದ್ದೆಯನ್ನು ಹಸನುಗೊಳಿಸಲು ಎತ್ತುಗಳನ್ನು ಬಳಸುತ್ತಿದ್ದರು.


ಆದರೆ ಈಗ ಅಲ್ಲೊಂದು ಇಲ್ಲೊಂದು ಎಂಬಂತೆ ಮಾತ್ರ ಉಳುವ ಎತ್ತುಗಳು ಕಾಣಸಿಗುತ್ತವೆ.
ಆ ಸ್ಥಾನವನ್ನು ಟಿಲ್ಲರು ಟ್ರಾಕ್ಟರು ಆಕ್ರಮಿಸಿಕೊಂಡಿದೆ. ಅಷ್ಟು ಮಾತ್ರವಲ್ಲ ಜಾನುವಾರುಗಳ ಸೆಗಣಿಯಿಂದ ಗೋ ಬರ್ ಗ್ಯಾಸ್ ಮಾಡಿ ಅದರಿಂದಲೂ ಮನುಷ್ಯ ಪ್ರಯೋಜನ ಪಡೆದುಕೊಳ್ಳುತ್ತಾನೆ. ಬೆರಣಿ ತಟ್ಟಿ ಒಣಗಿಸಿದರೆ ಅದನ್ನು ಉರುವಲಾಯಿಗೂ ಉಪಯೋಗಿಸಲಾಗುತ್ತದೆ. ಬೆರಣಿ ಸುಟ್ಟರೆ ವಿಭೂತಿಯೂ ಸಿದ್ಧವಾಗುತ್ತದೆ. ಹಟ್ಟಿಗೊಬ್ಬರ ಉಪಯೋಗಿಸಿದ ಕೃಷಿಭೂಮಿ ಸಮೃದ್ಧವಾಗಿ ಬೆಳೆದು ನಿಲ್ಲುತ್ತದೆ. ಹಟ್ಟಿಗೊಬ್ಬರದಿಂದ ಬೆಳೆದ ತರಕಾರಿಗಳು ರುಚಿಕರವಾಗಿರುತ್ತವೆ. ಹೂವಿನ ಗಿಡಕ್ಕೆ ಹಾಕಿದರೂ ಹೂವುಗಳೂ ಸಮೃದ್ಧವಾಗಿ ಬೆಳೆಯುತ್ತವೆ.

ಮನುಷ್ಯ ಗೋವುಗಳನ್ನು ಎಷ್ಟರ ಮಟ್ಟಿಗೆ ಅವಲಂಬಿಸಿದ್ದಾನೆ ಎಂದರೆ ಸುಮಾರು ವರ್ಷಗಳ ಹಿಂದೆ ಒಂದೂರಿನಿಂದ ಇನ್ನೊಂದೂರಿಗೆ ಸಂಚಾರಕ್ಕೆ , ಸಾಮಾನು ಸಾಗಾಟಕ್ಕೆ ಎತ್ತಿನ ಗಾಡಿಯನ್ನೇ ಬಳಸುತ್ತಿದ್ದರು. ಆಗ ಈಗಿನಂತೆ ಮೋಟಾರು ವಾಹನಗಳಿರಲಿಲ್ಲ. ಸಾಮಾನು ಸಾಗಾಟಕ್ಕೆ ಮಾತ್ರವಲ್ಲ ; ಮದುವೆ ದಿಬ್ಬಣಕ್ಕೂ ಇದೇ ಎತ್ತಿನ ಗಾಡಿ! ಎಂದರೆ ಈಗಿನವರಿಗೆ ಅಚ್ಚರಿಯಾಗಬಹುದು. ಕಮಾನು ಕಟ್ಟಿ ಅಲಂಕರಿಸಿದ ಗಾಡಿ ಸಿಂಗರಿಸಿದ ಎತ್ತುಗಳು ಕೂತು ಕೊಳ್ಳಲು ಗಾಡಿಯೊಳಗೆ ಹಾಸಿದ ಮೆತ್ತೆ ಹಾಗೂ ದಿಂಬುಗಳು ಗಾಡಿಯೆತ್ತುಗಳ ಕೊರಳಗೆಜ್ಜೆಯ ಗಿಜಿ ಗಿಜಿ ಸದ್ದಿನೊಂದಿಗೆ ಸಾಲು ಸಾಲಾಗಿ ಮದುವೆ ದಿಬ್ಬಣ ಹೊರಟರೆ ನೋಡಲೆರಡು ಕಣ್ಣುಗಳು ಸಾಲದು.

ಹಾಗೇನೇ ಒಂದು ಹೊಸ ಮನೆ ನಿರ್ಮಾಣ ಮಾಡಿದರೆ ಅದರ ಪ್ರವೇಶೋತ್ಸವಕ್ಕೂ ಇದೇ ಗೋವು ಬೇಕು. ಧಾರ್ಮಿಕ ಕಾರ್ಯಕ್ರಮದಲ್ಲೂ ಗೋವಿನ ಪಾತ್ರ ಇದ್ದೇ ಇದೆ. ಪಂಚಗವ್ಯಕ್ಕೆ ಗೋ ಮೂತ್ರ, ಗೋ ಮಯ, ನೈವೇದ್ಯಕ್ಕೆ ಹಾಲು, ಹೋಮಕ್ಕೆ ತುಪ್ಪ , ಇತ್ಯಾದಿಗಳಿಲ್ಲದೆ ನೂತನ ಗೃಹ ಪ್ರವೇಶವಾಗುವುದಿಲ್ಲ. ದೀಪಾವಳಿ ಹಬ್ಬದ ಪಾಡ್ಯದಂದು ಗೋ ಪೂಜೆ ಮಾಡಲಾಗುತ್ತದೆ. ಜಾನುವಾರುಗಳನ್ನು ಮೀಯಿಸಿ ಹಣೆಗೆ ತಿಲಕವಿಟ್ಟು ಕೊರಳಿಗೆ ಹೂ ಹಾರಹಾಕಿ ಆರತಿ ಬೆಳಗಿ ಗೋವಿಗೆಂದೇ ವಿಶೇಷವಾಗಿ ತಯಾರಿಸಿದ ಸಿಹಿ ಕಡುಬು ತಿನ್ನಿಸುವುದು ಹಿಂದಿನಿಂದಲೂ ನಡೆದು ಬಂದ ಕ್ರಮವಾಗಿದ್ದು ಇಂದಿಗೂ ಆಚರಣೆಯಲ್ಲಿದೆ.

ಇನ್ನು ದೇವಿಯ ಆರಾಧನೆಯಲ್ಲಿ ದೇವಿಗೆ ಪ್ರಿಯವಾದ `ನೈಪಾಯಸ'ವನ್ನು ತುಪ್ಪದಿಂದಲೇ ಮಾಡಲಾಗುತ್ತದೆ. ಆ ಪಾಯಸ ಅತ್ಯಂತ ಮಹತ್ವದ್ದಾಗಿದೆ. ಮಾತ್ರವಲ್ಲದೆ ಮಧುರವೂ ಆಗಿರುತ್ತದೆ. ದೇವಿಗೆ ತುಪ್ಪದಾರತಿಯನ್ನೂ ಬೆಳಗಲಾಗುತ್ತದೆ. ಅದರಿಂದ ದೇವಿ ಪ್ರಸನ್ನಳಾಗುತ್ತಾಳೆ, ಇಷ್ಟಾರ್ಥ ಸಿದ್ಧಿಸುತ್ತಾಳೆಂಬ ನಂಬಿಕೆಯಿದೆ. ಮಾನವನ ಹೆಜ್ಜೆಗೆ ಹೆಜ್ಜೆ ಸೇರಿಸುವ ಮನುಷ್ಯರಿಗಾಗಿಯೇ ಬದುಕುವ , ದುಡಿಯುವ , ಜೀವ ಸವೆಸುವ ಗೋವುಗಳನ್ನು ವಧೆ ಮಾಡುವ ಬದಲಾಗಿ ಉಳಿಸಿ ಬೆಳೆಸುವ, ಪೋಷಿಸುವ ನಿಟ್ಟಿನಲ್ಲಿ ನಾವು ಯೋಚಿಸಬೇಕಾಗಿದೆ.

``ಪ್ರತಿಯೊಂದು ಮನೆಯಲ್ಲಿಯೂ ದೇಸೀ ತಳಿಗಳ ಹಸುವನ್ನು ಸಾಕಬೇಕು. ಅವುಗಳ ಸಂತತಿ ವೃದ್ಧಿಸಬೇಕು. ಅದಕ್ಕಾಗಿ ನಾವು ಕಾರ್ಯ ಪ್ರವೃತ್ತರಾಗಬೇಕು'' ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಮಹಾಸ್ವಾಮಿಗಳು ಕರೆನೀಡಿದ್ದಾರೆ. ಹಾಗೇನೇ ಹಸುಗಳ ಉಳಿವು , ಬೆಳೆವಿಗಾಗಿ ಅನೇಕ ಕಡೆಗಳಲ್ಲಿ ಗೋಶಾಲೆಗಳನ್ನು ವ್ಯವಸ್ಥಿತವಾಗಿ ನಿರ್ಮಿಸಿದ್ದಾರೆ. ಇದಕ್ಕೆಲ್ಲ ಪೂರಕವಾಗಿ ಈಗಾಗಲೇ ವಿಶ್ವವೇಗಮನಿಸುವಂತಹ `ವಿಶ್ವಗೋ ಸಮ್ಮೇಳನವನ್ನು' ನಭೂತೋ ಎಂಬಂತೆ ಯಶಸ್ವಿಗೊಳಿಸಿದ್ದು ಶ್ರೀಗಳ ಕಾಳಜಿಗೊಂದು ಕೈಗನ್ನಡಿ. ಮಾತೆಯರಿಂದ ಕೋಟಿ ನೀಲಾಂಜನ ಬೆಳಗುವ ಕಾರ್ಯ ಶ್ರೀಮಠದ ವತಿಯಿಂದ ರಾಜ್ಯದ ರಾಜಧಾನಿಯಲ್ಲಿ ನಡೆದದ್ದು ಇನ್ನೊಂದು ಮಹತ್ವದ ಸಂಗತಿ. ಗೋ ಸಂಪತ್ತು ದೇಶದ ಸಂಪತ್ತು.
- ಸುಮತಿ ಕೆ.ಸಿ.ಭಟ್ ಆದೂರು.

ಮುಂದೆ ಓದಿ

ಭಾವನಾ

ಬರವಣಿಗೆಗೆ ಬ್ರೇಕ್ ನೀಡಿ ಬಹಳಷ್ಟು ದಿನಗಳಾಗಿದ್ದವು... ಹೌದು ಮನಸ್ಸು ಭಾರವಾದಾಗ ಮಾತ್ರ ಲೇಖನಿ ಮುಂದೋಡುತ್ತೆ ಎಂಬ ಆಕೆಯ ಮಾತು ಇಂದೇಕೋ ನೂರಕ್ಕೆ ನೂರು ಸತ್ಯ ಎಂದೆನಿಸುತ್ತಿದೆ. ಕಾರಣಗೊತ್ತಿಲ್ಲ...ಮೊನ್ನೆ ಮೊನ್ನೆ ಆಗ ನನ್ನನ್ನು ಬಿಟ್ಟು ಹೋಗಿ ವರ್ಷ ತುಂಬಿತು. ಅರ್ಥಾತ್ ಯಾನ್ವರ್ಸರಿ...ಅವಳೀಗ ಗೃಹಿಣಿ..ನಾನೀಗ ಒಂಟಿ... ಎಲ್ಲರೂ ಇದ್ದೂ ನಾನೀಗ ಒಂಟಿ... ಹೌದು ಕಾಯ ಮಾತ್ರ ನನ್ನಲ್ಲುಳಿದುಕೊಂಡಿದೆ. ಮನಸ್ಸು ಇನ್ನೂ ಅಲ್ಲೇ ಇದೆ... ಆ ಭಾವನಾ ಲಹರಿಯಲ್ಲಿಯೇ ದಿನ ಕಳೆಯುತ್ತಿದ್ದೇನೆ...


ಎಷ್ಟೆಂದರೂ ನೆನಪುಗಳನ್ನು ಏಕಾ ಏಕಿ ಬಿಟ್ಟು ಹೋಗಲು ಸಾಧ್ಯವಾಗುತ್ತಿಲ್ಲ... ಒತ್ತೊತ್ತಿ ಬರುತ್ತಿರುವ ದುಃಖವ ಇನ್ನೂ ಸಹಿಸಿಕೊಂಡು ಬದುಕಲು ಸಾಧ್ಯವಾಗುತ್ತಿಲ್ಲ. ಒತ್ತಡ ಹೆಚ್ಚಾದಾಗ, ಮನಸ್ಸು ಭಾರವಾದಾಗ, ಭಾವನೆಗಳ ಕಟ್ಟೆ ಒಡೆದು ಹೋದಾಗ ನನಗೆ ನಾನರಿಯದೇ ಮಂಕಾಗಿ ಹೋಗುತ್ತೇನೆ... ಪುಟ್ಟ ಮಕ್ಕಳಂತೆ ಕಣ್ಣಂಚಿನಿಂದ ಧಾರೆ ಧಾರೆಯಾಗಿ ನೀರು ಹರಿದು ಬರುತ್ತದೆ...
ಎಲ್ಲರೆದುರು ನಾನು ಫುಲ್ ಖುಷ್... ಆದರೆ ನನ್ನೆದೆಯೊಳಗೆ ಬೆಂಕಿ ಉರಿಯುತ್ತಿದೆ. ಮರದ ತೊಗಟೆಯೊಳಗಿನಿಂದ ಗೆದ್ದಲು ಮರವನ್ನು ತಿನ್ನುತ್ತದೆಯಲ್ಲಾ...ಹಾಗೆ ನನ್ನ ದೇಹವೂ ಕೂಡ... ಒಳಗೊಳಗೇ ಅಗಲುವಿಕೆಯ ವೇದನೆಯು ಇಂದಿಗೂ ಸಹಿಸಲಾರದೆ ತೊಳಲಾಡುತ್ತಿದ್ದೇನೆ...
ಈ ಬದುಕೆಂದರೆ ಇಷ್ಟೇನಾ... ಆಕೆ ಅಂದೊಂದು ದಿನ ನನ್ನಲ್ಲಿ ಹೇಳಿದ್ದಳು... `` ದೇವರಿಗೆ ನಾವು ಒಂದಾಗುವುದು ಇಷ್ಟ ಇಲ್ಲಾಂತಿದ್ದರೆ ನಮ್ಮಿಬ್ಬರನ್ನಾಕೆ ಪರಿಚಯಿಸಿದ... ಅಷ್ಟೊಂದು ಗಾಢ ಆತ್ಮೀಯರನ್ನಾಗಿ ಮಾಡಿದ'' ಹೌದು... ಆ ಪ್ರಶ್ನೆ ಇಂದಿಗೂ ನನ್ನೆದುರು ದೊಡ್ಡ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.
ನಾನೀಗ ದೂರ ಹೊರಟಿದ್ದೇನೆ... ಅದು ನನ್ನ ಸಂಬಂಧಗಳಿಗೆ ಕಾರಣವಾಗಿದ್ದ ಸ್ಥಳವನ್ನೇ ಬಿಟ್ಟು ಹೋಗುತ್ತಿದ್ದೇನೆ... ಆದರೆ ನೆನಪುಗಳು ನನ್ನನ್ನು ಬಿಡದೆ ಹಿಂಬಾಲಿಸುತ್ತಿದೆ.. ನಾನು ಬೇಡ ಅನ್ನುವುದೂ ಇಲ್ಲ. ಪ್ರೀತಿಯ ಅಪೂರ್ವ ಅನುಭವಗಳನ್ನು ನನಗೆ ಅರುಹಿದ್ದೇ ಆಕೆ... ಹಾಗಾಗಿ ಆ ನೆನಪುಗಳನ್ನು ಎಂದಿಗೂ ನಾನು ಮರೆಯಲಾರೆ... ನಾನು ಎಲ್ಲರಂತಲ್ಲ ಎಂದೇನೂ ಅಲ್ಲ... ನನಗೂ ಮನಸ್ಸಿದೆ...ಭಾವೆನೆಗಳಿವೆ... ಆ ಭಾವನೆಗಳಿಗೆ ಖಂಡಿತಾ ಒಂದು ಅರ್ಥ ಸಿಕ್ಕಿಲ್ಲ. ಅದು ಇನ್ನೆಂದೂ ಸಿಗಲಾರದು. ಸಿಕ್ಕಿದರೂ ಅದು ಪೂರ್ತಿಯಾಗದು. ಕಾರಣ ನನ್ನ ಭಾವನೆಗಳನ್ನು ಹಂಚಿಕೊಂಡಿದ್ದ ನನ್ನ ಪ್ರೀತಿಯ `ಉಸಿರೇ' ಇಂದು ನನ್ನಿಂದ ದೂರವಾಗಿ ಹೋಗಿದೆ. ಹಾಗಾಗಿಯೇ ನಾನಿಂದು ಕೇವಲ `ಕಾಯ'ಮಾತ್ರ !!!
ಭಾವನೆಗಳು ಹುಟ್ಟಿದ ಜಾಗದಿಂದ ಭಾವನೆಗಳು ಕೊನೆಯಾದ ಜಾಗಕ್ಕೆ ನಾನಿಂದು ಸೇರಿದ್ದೇನೆ. ಆದರೆ ಆ ಪ್ರೀತಿಯ ಸಂಬಂಧ ಇನ್ನೂ ಬೆಸೆದುಕೊಂಡಿದೆ! ಕಾರಣ ಇಷ್ಟೇ ನೆನಪುಗಳ ಸಾಲು ಸಾಲು ನನ್ನ ಬೆನ್ನ ಹಿಂದೆ ಹಿಂಬಾಲಿಸಿವೆ... ಅವುಗಳಿಗೆ ಸಾಕ್ಷಿಯಾಗಿ ಆಕೆಯ ಪ್ರೀತಿ ನೀನಿಲ್ಲದೆ ನಾ ಹೇಗಿರಲಿ ಎಂಬ ನಾಲ್ಕು ಸಾಲುಗಳು ಕಣ್ಣಮುಂದೆ ಎದ್ದು ನಿಂತಿವೆ... `` ಈ ನೆನಪುಗಳ್ಯಾಕೆ ನಮ್ಮನ್ನು ಈ ರೀತಿ ಕಾಡುತ್ತವೆ... ಬೇಡ ಅಂದರೂ ನಮ್ಮ ಮುಂದೆ ಬಂದು ಧರಣಿ ಕೂತುಬಿಡುತ್ತವೆ.

ನೆನಪುಗಳ ಮೂಟೆ ತುಂಬಿ ಭಾರವಾದರೂ ಎಲ್ಲೋ ಒಂದು ಕಡೆ ಖಾಲಿ ಖಾಲಿ ಯಾದಂತಹ ಅನುಭವವಾಗುತ್ತವೆ...ಏನನ್ನೋ ಕಳೆದುಕೊಂಡತೆ ಭಾಸವಾಗುತ್ತವೆ...'' ಇದು ನಮ್ಮಿಬ್ಬರ ಪರಿಚಯದ ಆರಂಭದಲ್ಲಿ ಆಕೆ ಬರವಣಿಗೆಯೊಂದಿಗೆ ಹೇಳಿಕೊಂಡಿದ್ದ ಸಾಲುಗಳು... ಹೌದು ಇಂದು ಆಕೆ ನನ್ನಿಂದ ದೂರವಾಗಿದ್ದಾಳೆ... ಆಕೆ ಖಾಲಿ ಖಾಲಿಯಾದಂತಹ ಅನುಭವಗಳನ್ನು ಹೇಳಿಕೊಂಡಿದ್ದರೆ ನಾನು ಖಾಲಿ ಖಾಲಿಯಾದಂತಹ ನೂರಾರು ಬಾಟಲಿಗಳೊಂದಿಗೆ ಹಿಂದಿರುಗಿದ್ದೇನೆ...
ಇದೀಗ ಗಂಟೆ ಹನ್ನೆರಡು ಸಮೀಪಿಸಿದೆ... ಪ್ರೀತಿಯ ನೆನಪುಗಳು ಮರೆಯಾಗಲಾರದು..ನನ್ನೆದುರಿಗೆ ಇನ್ನೂ ಮುಗ್ಧಮುಖದ ಆಕೆಯ ಕಪ್ಪುಬಿಳುಪಿನ ಭಾವಚಿತ್ರವಿದೆ. ಆಕೆ ಎಲ್ಲೋ ಸುಖವಾಗಿ ನಿದ್ರಿಸುತ್ತಿರಬಹುದು...ನಾನಿನ್ನೂ ನಿದ್ದೆ ಬಾರದ ರಾತ್ರಿಯಲ್ಲಿ ದಿನಕಳೆಯುತ್ತಿದ್ದೇನೆ...
ಗುಡ್ ನೈಟ್ ನಿಮಗಾದರೂ...

- ಪ್ರೇಮಿ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮೂಡಬಿದಿರೆ: ಆಳ್ವಾಸ್ ಸಮಾಜ ಕಾರ್ಯ ಕಾಲೇಜಿನ ಹ್ಯೂಮನ್ ರಿಸೋರ್ಸ್ ಮೇನೇಜ್ ಮೆಂಟ್ ಫಾರಂ ವತಿಯಿಂದ ಸೆ.25 ಮತ್ತು 26ರಂದು ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರ `ಆಳ್ವಾಸ್ ಹೋರಿಝೋನ್' ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್ನಲ್ಲಿ ನಡೆಯಲಿದೆ.
ಬೆಳಗ್ಗೆ 10.15ಕ್ಕೆ ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸುವರು. ಡಾ.ಎನ್.ಕೆ.ತಿಂಗಳಾಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಕುರಿಯನ್ ವಹಿಸುವರು. 26ರಂದು ಸಂಜೆ 4ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

ಮುಂದೆ ಓದಿ
9:03 PM

ಮಾತೃಭೋಜನ

Posted by ekanasu

ಪ್ರಾದೇಶಿಕ ಸುದ್ದಿ

ಸಹಬಾಳ್ವೆಯ ಸಂಕೇತ

ವೇಣೂರು: ಸಹಬಾಳ್ವೆಯ ಸಂಕೇತವಾದ ಮಾತೃಭೋಜನ ಬುಧವಾರ ಪೆರಿಂಜೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ನಡೆಯಿತು. ಸುಮಾರು 350ಕ್ಕೂ ಅಧಿಕ ಮಂದಿ ಜಾತಿ, ಮತ, ಧರ್ಮ ಎಂಬ ಭೇದ ಭಾವಗಳನ್ನು ಮರೆತು ಸಹಭೋಜನದಲ್ಲಿ ಭಾಗಿಯಾದರು. ತನ್ಮೂಲಕ `ನಾವೆಲ್ಲಾ ಭಾರತ ಮಾತೆಯ ಮಕ್ಕಳು' ಎಂಬ ಮಾತನ್ನು ಸಾಬೀತುಗೊಳಿಸಿದರು.


ಸೆ.18ರಿಂದ 25ರ ತನಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ವ್ಯಾಪ್ತಿಯ ಪ್ರಾಥಮಿಕ ಶಿಕ್ಷಾ ವರ್ಗದ ಅಂಗವಾಗಿ ಈ ಮಾತೃ ಭೋಜನ ನಡೆಯಿತು. ಶಿಬಿರದಲ್ಲಿ ಜಿಲ್ಲಾ ವ್ಯಾಪ್ತಿಯ 194 ಶಿಕ್ಷಾರ್ಥಿ ಗಳು ಭಾಗವಹಿಸಿದ್ದರು. ಶೀರಾಮ ಪ್ರೌಢಶಾಲೆ ಕಲ್ಲಡ್ಕ ಇದರ ಮುಖ್ಯೋಪಾಧ್ಯಾಯ ವಸಂತ ಮಾಧವ ಬೌದ್ಧಿಕ್ ನೀಡಿದರು. ಅಶೋಕ್ ಗೋವಿಯರ್ ಉಪಸ್ಥಿತರಿದ್ದರು.










ಮುಂದೆ ಓದಿ
6:50 PM

ಇದು `ಲಂಚಾವತಾರ'

Posted by ekanasu

ವಿಚಾರ
ಲ೦ಚ ಎಲ್ಲಿಲ್ಲ ? ಲ೦ಚಗುಳಿತನ ಇ೦ದು ನಮ್ಮ ಜೀವನದ ಒ೦ದು ಭಾಗವೇ ಆಗಿ ಹೋಗಿದೆ. ಪ್ರತಿಯೊ೦ದಕ್ಕೂ ಲ೦ಚ ಕೊಟ್ಟೇ ಮು೦ದೆ ಹೋಗಬೇಕು. ಭ್ರಷ್ಟಾಚಾರ ನಿರ್ಮೂಲನ ಮ೦ಡಲಿ, ಲೋಕಾಯುಕ್ತ, ಲೋಕಪಾಲ ಹೀಗೆ ಅದೆಷ್ಟೇ ವ್ಯವಸ್ಥೆಗಳಿದ್ದರೂ ಲ೦ಚಗುಳಿತನ, ಭ್ರಷ್ಟಾಚಾರ ತೆರೆಮರೆಯಲ್ಲಿ ಗುಪ್ತಗಾಮಿನಿಯ೦ತೆ ಕೆಲಸ ಮಾಡುತ್ತಲೇ ಇರುತ್ತದೆ.


ಅದಕ್ಕೆ ಯಾವ ನಿರ್ಬ೦ಧ ಗಳೂ ಲೆಕ್ಕಕ್ಕಿಲ್ಲ. ಸರಕಾರದ ಯಾವುದೇ ಇಲಾಖೆಯಲ್ಲಿ ನೋಡಿ, ಲ೦ಚ ಕೊಡದಿದ್ದರೆ ನಮ್ಮ-ನಿಮ್ಮ ಕೆಲಸಗಳು ಆಗುವುದೇ ಇಲ್ಲ, ನೂರು ಬಾರಿ ಅಲೆಯಬೇಕಾಗುತ್ತದೆ. ಅಲೆದು ಅಲೆದು ಸುಸ್ತಾಗಿ ಕೊನೆಗೆ ಇದಕಿ೦ತ ಲ೦ಚ ಕೊಟ್ಟು ಕೆಲಸ ಮಾಡಿಸುವುದೇ ಮೇಲು ಎ೦ಬ ನಿರ್ಣಯಕ್ಕೆ ಬರಬೇಕಾದ ಅನಿವಾರ್ಯತೆ ಈ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿ ಹೆಣೆದು ಕೊ೦ಡಿದೆ. ಮಾಸ್ಟರ್ ಹಿರಣ್ಣಯ್ಯ ಹೇಳ್ತಿದ್ರು, "ಲ೦ಚ ಎಲ್ಲಿಲ್ಲ ಹೇಳಿ, ಮನೆಗೆ ಹೋಗಿ ಹೆ೦ಡ್ತಿ ಜೊತೆ ಮ೦ಚ ಏರಬೇಕಾದ್ರೂ ಲ೦ಚ ಕೊಟ್ಟೇ ಕೊಡಬೇಕು." ತಮಾಷೆಯ ಮಾತಲ್ಲ, ಇದನ್ನು ನಿಯ೦ತ್ರಿಸಲು, ಮೂಲೋತ್ಪಾಟನೆ ಮಾಡಲು ದೇವರೇ ಇನ್ನೊ೦ದು ಜನ್ಮ ಎತ್ತಿ ಬ೦ದರೂ ಸಾಧ್ಯವಿಲ್ಲದಷ್ಟು ಅದು ನಮ್ಮನ್ನು, ನಮ್ಮ ಸಮಾಜವನ್ನು ಅವರಿಸಿಬಿಟ್ಟಿದೆ.

“Corruption is worse than prostitution. The latter might endanger the morals of an individual, the former invariably endangers the morals of the entire country.” ಅ೦ತ Karl Kraus ಹೇಳಿದ್ದಾನೆ. ಆತನ ಮಾತು ಅದೆಷ್ಟು ಮಾರ್ಮಿಕವಾಗಿದೇ ಅಲ್ಲವೇ.

ಲೋಕಾಯುಕ್ತರು ಆಗಾಗ್ಯೆ ಭ್ರಷ್ಟ ಅಧಿಕಾರಿಗಳ ಮನೆ ರೈಡು ಮಾಡಿ ಕೋಟ್ಯ೦ತರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಜಫ್ತು ಮಾಡಿದ ಸುದ್ದಿ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಆದರೆ ಯಾವುದಾದರು ಒ೦ದು ಪ್ರಕರಣದಲ್ಲಿ ಅ೦ತಹ ಭ್ರಷ್ಟ ಅಧಿಕಾರಿಗೆ ಅಥವಾ ರಾಜಕಾರಣಿಗೆ ಶಿಕ್ಷೆಯಾದ ಪ್ರಸ೦ಗ ನೆನಪಿಗೆ ಬರುವುದಿಲ್ಲ. ಇದೇಕೆ ಹೀಗೆ ? ಈ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿ ತಪ್ಪಿತಸ್ತನಿಗೆ ಸ್ಥಳದಲ್ಲೇ ಶಿಕ್ಷೆ ಕೊಡುವ ಪರಮಾಧಿಕಾರವನ್ನು ಲೋಕಾಯುಕ್ತರಿಗೆ ಯಾಕೆ ಕೊಡಬಾರದು? ಕೊಟ್ಟರೆ ಅದು ಸಮರ್ಪಕವಾಗಿ ಜಾರಿಯಾದೀತೆ ? ಎ೦ಬ ಪ್ರಶ್ನೆ ಉದ್ಭವಿಸುತ್ತವೆ.



Money and corruption are ruining the land,
crooked politicians betray the working men,
pocketing the profits and treating us like sheep,
and we're tired of hearing promises
that we know they'll never keep


ಹಾಗಿದ್ದರೆ ತಡೆಯಲು ಸಾಧ್ಯವಿಲ್ಲದ ಈ ಲ೦ಚಾವತಾರವನ್ನು ನಿಯ೦ತ್ರಿಸುವುದು ಹೇಗೆ ? ಎ೦ಬುದೇ ಯಕ್ಷಪ್ರಶ್ನೆಯಾಗಿ ಬಿಟ್ಟಿದೆ. ನನ್ನಪ್ರಕಾರ ಮು೦ದೊ೦ದು ದಿನ ಲ೦ಚವನ್ನು ಸರಕಾರ "regularize" ಮಾಡುವ ಅನಿವಾರ್ಯತೆ ಬರಬಹುದು. ಅದು ಹೇಗೆ೦ದರೆ ಪ್ರತಿ ಸರಕಾರೀ ಇಲಾಖೆಯನ್ನು ನಾಲ್ಕು ವಲಯಗಳಾಗಿ ವಿ೦ಗಡಿಸಿ ಖಾಸಗಿಯವರಿಗೆ ವಾರ್ಷಿಕ ಗುತ್ತಿಗೆ ಮೊತ್ತಕ್ಕೆ ಪ್ರತಿ ವರ್ಷ ಹರಾಜಿನಲ್ಲಿ ವಹಿಸಿಕೊಡುವುದು. ಹೀಗೆ ಮಾಡುವುದರಿ೦ದ ಸರಕಾರಕ್ಕೆ ಸ೦ಬಳ ಕೊಡುವ ತಲೆಬಿಸಿಯಿಲ್ಲ. ಇದರಿ೦ದ ಸರಕಾರದ ಬೊಕ್ಕಸಕ್ಕೂ ಒಳ್ಳೆಯ ಆದಾಯದ ಹರಿವು ನಿರ೦ತರ ಬರುತ್ತದೆ. ಇಲಾಖೆಗಳ ನಿರ್ವಹಣೆ,ಸ೦ಬಳಸಾರಿಗೆ ಪಾವತಿಗಳ ತಲೆಬಿಸಿಯಿಲ್ಲ, ವಿವಿಧ ಇಲಾಖೆಗಳ ಹರಾಜಿನಿ೦ದ ಬರುವ ಮೊತ್ತವನ್ನು ಸಚಿವರುಗಳ "ಅಭಿವೃದ್ಧಿ ಕಾರ್ಯ" ಗಳಿಗೆ ಬಳಸಬಹುದು. ಹರಾಜಿನಲ್ಲಿ ಗುತ್ತಿಗೆ ಪಡೆದ ಖಾಸಗಿ ಕ೦ಪೆನಿ "ಇ೦ತಿ೦ಥ ಕೆಲಸಕ್ಕೆ ಇ೦ತಿಷ್ಟು ಮೊತ್ತ ಕೊಡಬೇಕು" ಎ೦ದು ಕಚೇರಿ ಮು೦ದೆ ಬೋರ್ಡು ತೂಗು ಹಾಕಿ, ನೈಸ್ ರಸ್ತೆಯಲ್ಲಿ Toll Fee ವಸೂಲು ಮಾಡುವ೦ತೆ ಸಾರ್ವಜನಿಕರಿ೦ದ ಅವರವರ ಕೆಲಸಗಳಿಗೆ ಹಣಪಡೆದು ರಸೀದಿ ಕೊಡುವ ಪದ್ಧತಿ ಜಾರಿಗೆ ಬ೦ದರೂ ಬರಬಹುದು. ಏನ೦ತೀರಿ ?? .

- ಕೆ.ಎನ್.ಪರಾಂಜಪೆ

ಮುಂದೆ ಓದಿ
6:25 PM

ಲಾಂಛನ ಬಿಡುಗಡೆ

Posted by ekanasu

ರಾಜ್ಯ - ರಾಷ್ಟ್ರ

ಧರ್ಮಸ್ಥಳ: ವಿಶ್ವ ತುಳು ಸಮ್ಮೇಳನದ ಲಾಂಛನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.



ತುಳುನಾಡಿನ ಸಾಂಪ್ರದಾಯಿಕತೆಯನ್ನು ಸಾರಿ ಹೇಳುವ ಲಾಂಛನ ಇದಾಗಿದ್ದು `ಶುಭ' ಸಂಕೇತವನ್ನು ಸಾರುವ ಭತ್ತ ತುಂಬಿದ ಕಳಸಿಗೆ, ಸೀಯಾಳ, ವೀಳ್ಯ, ಹಣ್ಣಡಕೆ, ಕಲಶ, ಹಾಗೂ ಪ್ರಾಚೀನ ನಾಣ್ಯವನ್ನು ಹೋಲುವ ಚಿತ್ರಿಕೆಯನ್ನು ಒಳಗೊಡಿದೆ.
ಈ ಸಂದರ್ಭದಲ್ಲಿ ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಾಲ್ತಾಡಿ ರಾಮಕೃಷ್ಣ ಆಚಾರ್, ಡಾ.ಬಿ.ಯಶೋವರ್ಮ ಉಪಸ್ಥಿತರಿದ್ದರು.
ಲಾಂಛನ

ಮುಂದೆ ಓದಿ

ರಾಜ್ಯ - ರಾಷ್ಟ್ರ
ಚಿತ್ರ: ಸತೀಶ್ ಇರಾ






















ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನ ಹಾಗೂ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ವೈಭವದ ದಸರಾ ಮಹೋತ್ಸವ ನಡೆಯುತ್ತಿದೆ. ನವರಾತ್ರಿಯ ಒಂಭತ್ತೂ ದಿನಗಳ ಕಾಲ ವೈಭವದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಕ್ಷೇತ್ರಗಳಲ್ಲಿ ನಡೆಯಲಿದ್ದು ದಸರಾ ಮೆರವಣಿಗೆ ವೈಭವೋಪೇತವಾಗಿ ನಡೆಯಲಿದೆ. ಮೈಸೂರು ದಸರಾದಂತೆಯೇ ಮಂಗಳೂರು ದಸರಾವೂ ಪ್ರಸಿದ್ಧಿ ಪಡೆದಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ





ನವದೆಹಲಿ: ಪಶ್ಚಿಮ ಕರಾವಳಿ ಅಪಾಯದ ಸ್ಥಿತಿಯಲ್ಲಿದೆ. ಹೌದು ಇತ್ತೀಚೆಗೆ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ ಮಾತು ಇನ್ನೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಉಗ್ರರ ವಕ್ರ ದೃಷ್ಠಿ ಭಾರತದ ಮೇಲೆ ನೆಟ್ಟಿದೆ ಎಂದು. ಇದಕ್ಕಾಗಿ ದೇಶ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿದೆ ಎಂಬುದಾಗಿ. ಇದೀಗ ಕರಾಚಿಯಿಂದ ಗುಜರಾತ್, ಮುಂಬೈ, ಗೋವಾ ಮೂಲಕ ಮಂಗಳೂರು ಸೇರಿದಂತೆ ಕೇರಳದ ಕರಾವಳಿ ತೀರದುದ್ದಕ್ಕೂ `ಟೆರರ್ ಕಾರಿಡಾರ್' ರೂಪಿಸಲು ಉಗ್ರರು ಸಂಚು ಹೂಡಿದ್ದಾರೆಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ದಕ್ಷಿಣ ರಾಜ್ಯಗಳ ಕರಾವಳಿ ಪ್ರದೇಶ ಹೆಚ್ಚು ಅಪಾಯ ಎದುರಿಸುವ ಸಾಧ್ಯತೆಗಳನ್ನು ಗುಪ್ತಚರ ಇಲಾಖೆಯ ವರದಿಗಳು ನೀಡಿವೆ.


ಅಪಾಯದ ಮುನ್ಸೂಚನೆ ?


ಮಂಗಳೂರು ಕಡಲು ತೀರ ಸೇರಿದಂತೆ ಕಾಸರಗೋಡು ವ್ಯಾಪ್ತಿಯ ಕಡಲ ತೀರಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಅನುಮಾನಾಸ್ಪದ ರೀತಿಯಲ್ಲಿ ಹಡಗುಗಳು ಸಂಚರಿಸುತ್ತಿರುವುದು, ತೀರಗಳಲ್ಲಿ ಲಂಗರು ಹಾಕಿರುವುದು ಕಂಡು ಬಂದಿದ್ದವು. ಇಷ್ಟೇ ಅಲ್ಲದೆ ಸೋಮಾಲಿಯಾ ದೇಶದಪ್ರಜೆಗಳಿದ್ದ ಬೋಟೊಂದು ಇತ್ತೀಚೆಗೆ ಮಂಗಳೂರಿನಲ್ಲಿ ಪತ್ತೆಯಾಗಿತ್ತು. ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಹಿತಕರ ಘಟನೆಗೆ ಇದೊಂದು `ನಾಂದಿ'ಯೇ ಎಂಬ ಪ್ರಶ್ನೆ ಕಾಡತೊಡಗಿದೆ. ಇತ್ತೀಚಿನ ದಿನಗಳಲ್ಲಿ ಕೇರಳ, ವಿಶಾಖ ಪಟ್ಟಣಂ, ಕಾಕಿನಾಡ ಬಂದರುಗಳಲ್ಲಿಯೂ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಿರುವುದನ್ನು ಗಮನಿಸಿದರೆ ಈ ಎಲ್ಲಾ ಅಂಶಗಳ ಹಿಂದೆ ಏನೋ ಒಂದು ಸಂಚು ರೂಪಿತವಾಗಿದೆ ಎಂಬುದಂತೂ ಸ್ಪಷ್ಟ.

ಕರಾವಳಿಗೆ `ಕಪಿಮುಷ್ಠಿ'?

ಸುಂದರ ಕರಾವಳಿ ಇನ್ನು ಉಗ್ರರ ಕಪಿಮುಷ್ಠಿಯಲ್ಲಿ ನಲುಗಲಿದೆಯೇ? ಎಂಬ ಭೀತಿ ಹೆಚ್ಚಾಗತೊಡಗಿದೆ. ಭಾರತ ದೇಶ ಒಟ್ಟಾರೆ 7,517 ಕಿಲೋಮೀಟರ್ ಉದ್ದದ ಕರಾವಳಿಯನ್ನು ಹೊಂದಿದೆ. ಲಕ್ಷದ್ವೀಪ, ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಗಳು 2,094 ಉದ್ದದ ಕರಾವಳೀ ತೀರವನ್ನು ಹೊಂದಿದೆ. ಇವೆಲ್ಲವೂ ಕೂಡ ಉಗ್ರರ ಭೀತಿಯನ್ನು ಇಂದು ಎದುರಿಸುತ್ತಿವೆ.

ಸಿದ್ಧ ಸನ್ನದ್ಧ

ಯಾರೇ ಬರಲಿ ನಾವಿದ್ದೇವೆ ಎಂಬ ಧೈರ್ಯ ಭಾರತೀಯ ಸೇನಾ ಪಡೆಯದ್ದು. ಇದೀಗ ಸೇನಾ ಮುಖ್ಯಸ್ಥರ ಸಭೆಯಲ್ಲಿ ಸಂಪೂರ್ಣ ಸನ್ನದ್ಧವಾಗಿ ಸೇನೆ ಇರುವಂತೆ ತೀಮರ್ಾನಿಸಲಾಗಿದೆ. ಸಂಭಾವ್ಯ ಉಗ್ರರ ದಾಳಿಯನ್ನು ಸಮರ್ಥವಾಗಿ ಎದುರಿಸಲು ಬೇಕಾದ ಕ್ರಮವನ್ನು ಸೇನೆ ಕೈಗೊಂಡಿದೆ.

ಮುಂದೆ ಓದಿ
3:46 PM

ರೈತ ಪರ `ಇಸ್ರೋ'!

Posted by ekanasu

ವಿಶೇಷ ವರದಿ
ಇದು ಈ ಕನಸು ಸ್ಪೆಷಲ್
ನವದೆಹಲಿ: ಇತ್ತೀಚೆಗಷ್ಟೇ ಚಂದ್ರಯಾನ 1ರ ನಂತರ ಹಲವು ಯೋಜನೆಗಳಿಗೆ ಮುನ್ನಡಿ ಯಿಟ್ಟಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಮತ್ತೊಂದು ಮಹತ್ವದ ಯೋಜನೆಯೊಂದಿಗೆ `ರೈತ ಪರ'ವಾಗುತ್ತಿದೆ! ಅಚ್ಚರಿಯೇ... ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೂ `ಕೃಷಿ'ಗೂ ಏನು ಸಂಬಂಧ ಎಂದು... ಹೌದು... ಅಚ್ಚರಿಯಾದರೂ ಇದು ಸತ್ಯ...



ಇದೇನು?

ಕೃಷಿ, ಮೀನುಗಾರಿಕೆ, ಹವಾಮಾನ, ಸಾಗರ ಸಂಪತ್ತು, ಅರಣ್ಯ ಉತ್ಪನ್ನ, ಪರಿಸರ ಸಂರಕ್ಷಣೆ ಮೊದಲಾದ ಧ್ಯೇಯೋದ್ಧೇಶವನ್ನಿಟ್ಟುಕೊಂಡು ಈ ಕ್ಷೇತ್ರಗಳ ನಿಖರ ಮಾಹಿತಿ, ಸೂಕ್ತ ಛಾಯಾಚಿತ್ರಗಳನ್ನು ಸಂಗ್ರಹಿಸುವ ಅಭ್ಯಸಿಸುವ ದೃಷ್ಠಿಯಿಂದ ಇಸ್ರೋ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ರೂಪಿಸಿದೆ. ಓಷಿಯನ್ ಸ್ಯಾಟ್ 2 ಎಂಬ ದೂರ ಸಂವೇದಿ 6 ಉಪಗ್ರಹಗಳ ಸಮುಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮುಹೂರ್ತ ನಿಗಧಿಪಡಿಸಿದೆ.
ಇದೇ ಸೆಪ್ಟಂಬರ್ 23ರಂದು ಮಧ್ಯಾಹ್ನ 12ಕ್ಕೆ ಈ ಉಪಗ್ರಹಗಳನ್ನು ಪಿ.ಎಸ್.ಎಲ್.ವಿ.ಸಿ.14 ವ್ಯೋಮ ನೌಕೆಯ ಸಹಾಯದಿಂದ ಅಂತರಿಕ್ಷಕ್ಕೆ ಸೇರ್ಪಡೆಗೊಳಿಸಲಾಗುವುದು. ಈ ಕಾರ್ಯ ಆಂಧ್ರ ಪ್ರದೇಶದ ಶ್ರೀ ಹರಿ ಕೋಟಾದಲ್ಲಿ ನಡೆಯಲಿದೆ.ಇಸ್ರೋ ವಿಜ್ಞಾನಿಗಳು 4ಉಪಗ್ರಹ ಸಿದ್ಧಪಡಿಸಿದ್ದು ಉಳಿದ 2 ಉಪಗ್ರಹಗಳನ್ನು ಇಟಲಿಯ ಬಾಹ್ಯಾಕಾಶ ವಿಜ್ಞಾನಿಗಳು ತಯಾರಿಸಿದ್ದಾರೆ. ಒಟ್ಟು 6 ಉಪಗ್ರಹಗಳು ಈ ನೌಕೆಯಲ್ಲಿ ಬಾಹ್ಯಾಕಾಶ ಸೇರಲಿದೆ.

ಹೀಗಿದೆ ಈ ನೌಕೆ!

ಪಿ.ಎಸ್.ಎಲ್.ವಿ.ಸಿ.14 ವ್ಯೋಮ ನೌಕೆಯ 230 ಟನ್ ತೂಕ ಹೊಂದಿದೆ. 44.4 ಮೀಟರ್ ಉದ್ದ ಹೊಂದಿದ್ದು 8ಕೆ.ಜಿ ತೂಕದ ಉಪಗ್ರಹಗಳನ್ನು ಇದು ಹೊತ್ತೊಯ್ಯಲಿದೆ.
ಕೇರಳದ ರಾಜ್ಯದ ತಿರುವನಂತ ಪುರದ ವಿಕ್ರಮ್ ಸಾರಾಭಾಯಿ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ವಿಜ್ಞಾನಿಗಳು ಈ ನೌಕೆಯನ್ನು ವಿನ್ಯಾಸಗೊಳಿಸಿ ತಯಾರಿಸಿದ್ದಾರೆ.

ವಿಶೇಷತೆ
ಈ ಉಪಗ್ರಹಗಳ ವಿಶೇಷತೆ ಹಲವು. ಇವುಗಳಲ್ಲಿ ಅಳವಡಿಸಲಾದ ಆಂಟೆನಾಗಳು ಸ್ವಯಂ ದಿಕ್ಕು ಬದಲಿಸುವ ಸಾಮರ್ಥ್ಯ ಹೊಂದಿದವು. 30 ಕಿ.ಮೀ.ವ್ಯಾಪ್ತಿಯ ವಾತಾವರಣದ ಗುಣಲಕ್ಷಣಗಳನ್ನು ಸ್ವೀಕರಿಸಿ ಅವು ಮಾಹಿತಿ ರವಾನಿಸುತ್ತವೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ದಸರಾ ಉದ್ಘಾಟಿಸಿದ ಗುರೂಜಿ ಆಶಯ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಿಸಿದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರವಿಶಂಕರ್ ಗುರೂಜಿಯವರು ದಸರಾ ಕೇವಲ ಮೈಸೂರಿಗಷ್ಟೇ ಸೀಮಿತವಾಗಬಾರದು. ದಸರಾ ವೀಕ್ಷಣೆಗೆ ಸರ್ವರಿಗೂ ಮೈಸೂರಿಗೆ ಆಗಮಿಸಲು ಸಾಧ್ಯವಾಗದು. ಆ ಕಾರಣಕ್ಕಾಗಿ ಪ್ರತಿಯೊಬ್ಬರಿಗೂ ದಸರಾದ ಸವಿ ಸವಿಯುವಂತಾಗಲು ಹಳ್ಳಿ ಹಳ್ಳಿಗೆ ದಸರಾ ಉತ್ಸವವನ್ನು ತಲುಪಿಸುವ ಕಾರ್ಯ ಆಗಬೇಕೆಂದರು. ದಸರಾ ಐಕ್ಯತೆಯ ಸಂದೇಶ ಸಾರುವ ಹಬ್ಬವಾಗಿದೆ ಎಂದು ವ್ಯಾಖ್ಯಾನಿಸಿದ ಅವರು ಶಾಂತಿ, ಸಹಬಾಳ್ವೆಯ ಪ್ರತೀಕ ಎಂದು ತಿಳಿಸಿದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಮೈಸೂರು:`ಮೈಸೂರು ದಸರಾ ಎಷ್ಟೊಂದು ಸುಂದರ' ಎಂದೇ ಜನಮಾನಸದಲ್ಲಿ ಪ್ರಸಿದ್ಧಿ ಪಡೆದ ವಿಶ್ವ ವಿಖ್ಯಾತಿಯ ದಸರಾ ಮಹೋತ್ಸವ - 2009ಕ್ಕೆ ಶನಿವಾರ ಅದ್ಧೂರಿಯ ಚಾಲನೆ ದೊರೆಯಿತು.
ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರೊಂದಿಗೆ ನವರಾತ್ರಿಯ ಕಾರ್ಯಕ್ರಮಗಳಿಗೆ ನಾಂದಿ ಹಾಡಿದರು. ಚಾಮುಂಡೇಶ್ವರೀ ದೇವಿಗೆ ಅಗ್ರ ಪೂಜೆ ಸಲ್ಲಿಸುವುದರೊಂದಿಗೆ ಚಾಮುಂಡಿ ಬೆಟ್ಟದಲ್ಲಿ ದಸರಾ ವೈಭವಕ್ಕೆ ಅಧಿಕೃತ ಚಾಲನೆ ದೊರಕಿತು.ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ, ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಇತರ ಗಣ್ಯರು ಹಾಜರಿದ್ದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಮಂಗಳೂರು/ಮೈಸೂರು: ಇಂದಿನಿಂದ ರಾಜ್ಯಾದ್ಯಂತ ದಸರಾ ಉತ್ಸವ ಆರಂಭಗೊಳ್ಳಲಿದೆ. ಮೈಸೂರು ದಸರಾ ವಿಶ್ವ ವಿಖ್ಯಾತಿ . ಇದೀಗ ರಾಜ್ಯದ ಪ್ರಮುಖ ಪ್ರದೇಶಗಳಾದ ಮೈಸೂರು, ಧರ್ಮಸ್ಥಳ, ಮಂಗಳೂರು ಕುದ್ರೋಳಿ ಕ್ಷೇತ್ರಗಳು ದಸರಾಕ್ಕೆ ಸರ್ವ ಸಿದ್ಧವಾಗಿದೆ. ನವರಾತ್ರಿಯ ಒಂಭತ್ತೂ ದಿನದಂದು ನವದುರ್ಗೆಯರಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಈ ವೈಶಿಷ್ಠ್ಯಪೂರ್ಣ ಸನ್ನಿವೇಶಕ್ಕೆ ಸಾಕ್ಷಿಯಾಗಲು ವಿವಿದೆಡೆಗಳಿಂದ ಜನಸಾಗರ ಈ ಎಲ್ಲಾ ಕ್ಷೇತ್ರಗಳತ್ತ ಹರಿದು ಬರುತ್ತಿದೆ.














ದಸರೆಯ ನೋಡಲು ಓಡಿ ಬಾರಾ


ಹೊಸತನ ತುಂಬಿದೆ, ಚೆಲುವನು ಬೀರಿದೆ

ನಾಟ್ಯವನಾಡುತ ನಗರವು ಕುಣಿದಿದೆ

ಸುಮಧುರ ಗಾನದ ನಾದವು ಮೊಳಗಿದೆ

ದಸರೆಯ ನೋಡಲು ಓಡಿ ಬಾರಾ


ಅರಮನೆ ಅಂಗಳ ಹೊಸತನ ಬೀರಿದೆ

ಗಂಧದ ನಾಡಿನ ಪರಿಮಳ ಸೂಸಿದೆ

ನಾಡಿನ ಸಂಸ್ಕೃತಿ ಮೈಸಿರಿ ತುಂಬಿದೆ

ಕನ್ನಡ ನಾಡಿನ ಗೆಳೆಯನೆ ಬಾರಾ


ಧ್ವನಿ-ಬೆಳಕಿನ ಸದ್ದಿಗೆ ಚಿಣ್ಣರು ಕುಣಿವರು

ಝಗಮಗಿಸುವ ಬೆಳಕಿನ ಹೊನಲಲಿ ನಲಿವರು

ಹಾರುವ ಹಕ್ಕಿಯ ಅಣಕಿಸಿ ನಗುವರು

ಜತೆ ಕುಣಿದಾಡಲು ನೀ ಓಡಿ ಬಾರಾ


ಜಂಗಿ ಕುಸ್ತಿಗೆ ಮಲ್ಲ ಪಟುಗಳು

ಪದಕವ ಗೆಲ್ಲಲು ಕ್ರೀಡಾ ಪಟುಗಳು

ರೈತರಿಗಾಗಿ ಗ್ರಾಮೀಣ ಕೂಟಗಳು

ಹುರಿದುಂಬಿಸಲು ನೀ ಧಾವಿಸಿ ಬಾರಾ


ಚಾಮುಂಡಿ ದೇವಿಯ ಪೂಜೆಯ ವೈಭವ

ಚಿನ್ನದ ಅಂಬಾರಿಯ ದೃಶ್ಯ ವೈಭವ

ಕಾವ್ಯ-ಗಮಕ-ನೃತ್ಯಗಳ ವೈಭವ

ನಾಟ್ಯದ ರುಚಿ ಸವಿಯಲು ಬಾರಾ



ಚಿಣ್ಣರಿಗಾಗಿ ಚಿಗುರು ಕವಿಗೋಷ್ಠಿ

ಅರಳಿದ ಮನಕೆ ಅರಳು ಕವಿಗೋಷ್ಠಿ

ಮುದುಡಿದ ಮನಕೆ ಹಾಸ್ಯದ ಸೃಷ್ಠಿ

ಸಾಹಿತ್ಯ ಕೃಷಿಗೆ ನೀ ಕೈ ಜೋಡಿಸು ಬಾರಾ


ಗೋಲ್ಡನ್ ಕಾರ್ಡು ಸುಲಭದಿ ಲಭ್ಯ

ಉಳಿಯಲು ನಿಮಗೆ 'ಹೋಂ ಸ್ಟೇ' ಭಾಗ್ಯ

ಮನರಂಜನೆಗೆ ಹಲವು ಸೌಲಭ್ಯ

ಮುದ ಪಡೆಯಲು ನೀ ಓಡೋಡಿ ಬಾರಾ


ದಸರೆ ನೋಡಲು ಈಗಲೂ ಸುಂದರ

ನಾಡಹಬ್ಬದ ಸಿರಿ ಸಿಂಗಾರ

ಹೊಸತನ-ಹಳೆತನ ಮಿಶ್ರಣದಾಗರ

ದಸರೆಯ ನೋಡಲು ಓಡಿ ಬಾರಾ


- ಮಹಾಬಲೇಶ್ವರ ಹೊನ್ನೆಮಡಿಕೆ


ಮುಂದೆ ಓದಿ

ವಿಚಾರ
ನ್ಯಾಯಮೂರ್ತಿ ದಿನಕರನ್ ಆಸ್ತಿ ವಿವರ ಸಲ್ಲಿಸಿಲ್ಲ, ಅಕ್ರಮವಾಗಿ ಏಳುನೂರು ಎಕರೆ ಆಸ್ತಿ ಮಾಡಿದ್ದಾರೆ ಎ೦ಬ ಆರೋಪದೊ೦ದಿಗೆ ಇದುವರೆಗೆ ಶುದ್ಧಹಸ್ತರೆ೦ಬ ನ೦ಬಿಕೆ ಮೂಡಿಸಿದ್ದ, ನ್ಯಾಯಾಧೀಶರುಗಳನ್ನೂ ಕೂಡ ಜನಸಾಮಾನ್ಯ ಅನುಮಾನದಿ೦ದ ನೋಡುವ೦ತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು, ಇವತ್ತು ಲ೦ಚಗುಳಿತನ ಇಲ್ಲದ ಜಾಗವೇ ಇರಲು ಸಾಧ್ಯವಿಲ್ಲ. ಹಾಗೊಮ್ಮೆ ಯಾರಾದರೊಬ್ಬ ಶುದ್ಧ ಹಸ್ತ ಅಧಿಕಾರಸ್ತ ವ್ಯಕ್ತಿ ಇದ್ದರೆ ಅವನನ್ನು ಅಧಿಕಾರದಲ್ಲಿ ಇರಗೊಡದ ವ್ಯವಸ್ಥಿತ ಸ೦ಚು ನಮ್ಮಲ್ಲಿ ಹಾಸುಹೊಕ್ಕಾಗಿದೆ.


ನಮ್ಮ ದೇಶದ ಶಾಸಕಾ೦ಗ, ಕಾರ್ಯಾ೦ಗ, ನ್ಯಾಯಾ೦ಗ ಹೀಗೆ ಎಲ್ಲ ಅ೦ಗಗಳೂ ಲ೦ಚವೆ೦ಬ ಅರ್ಬುದ ರೋಗಕ್ಕೆ ತುತ್ತಾಗಿ ಹಾಸಿಗೆ ಹಿಡಿದಿವೆ. ಮರಣಶಯ್ಯೆಯಲ್ಲಿರುವ ದೇಶದ ಒಟ್ಟಾರೆ ವ್ಯವಸ್ಥೆ ಸರಿಹಾದಿಗೆ ತರಲು ಸಾಧ್ಯವೇ ಇಲ್ಲದ ಹ೦ತ ತಲುಪಿರುವಾಗ, ಭ್ರಷ್ಟಾಚಾರದ ವಿರುದ್ಧ, ಲ೦ಚಗುಳಿತನದ ವಿರುದ್ಧ ಮಾತನಾಡುವುದು, ದನಿ ಎತ್ತುವುದು ಕೂಡ ಹಾಸ್ಯಾಸ್ಪದ ವಾಗಿ ಕಾಣುತ್ತದೆ.

ಇ೦ತಹ ಸನ್ನಿವೇಶದಲ್ಲಿ ಲ೦ಚಮುಕ್ತ ದೇಶವನ್ನು ಕಾಣುವುದು ಅಸಾಧ್ಯ. ಮನೆಯಲ್ಲಿ ಜಿರಳೆಗಳು ಜಾಸ್ತಿಯಾದಾಗ ಮನೆಯ ಸಾಮಾನು ಎತ್ತಿ ಹೊರಗಿಟ್ಟು ಕ್ರಿಮಿನಾಶಕ ಸ್ಪ್ರೇ ಮಾಡಿ ಜಿರಳೆಸ೦ಹಾರ ಮಾಡಬಹುದು, ಅದು ಕೇವಲ ಕ್ಷಣಿಕ ಮತ್ತು ಅಲ್ಪಕಾಲಿಕ. ಅವುಗಳ ಮೂಲೋತ್ಪಾಟನೆ ಮಾಡಿದೆವು ಎ೦ದು ಬೀಗಿದರೆ ಮರುಕ್ಷಣ ಇನ್ನೊ೦ದು ಜಿರಳೆ ಅದೆಲ್ಲಿ೦ದಲೋ ಮೀಸೆ ಹೊರಳಿಸುತ್ತ ನಿಮ್ಮ ಕಣ್ಣ೦ದಾಜಿನಿ೦ದ ಮರೆಯಾಗಿ ನಿಮ್ಮನ್ನು ಅಣಕಿಸುವ೦ತೆ ಈ ಲ೦ಚಗುಳಿತನ ಮತ್ತು ಭ್ರಷ್ಟಾಚಾರ ಗಳು ಕೂಡ ಒ೦ದರ್ಥದಲ್ಲಿ ಜಿರಳೆ ಸಾಮ್ರಾಜ್ಯದ೦ತೆ. ಜಗತ್ ಪ್ರಳಯವಾದರೂ ಜಿರಳೆ ಸ೦ತತಿ ನಾಶವಾಗದು ಅ೦ತ ಹೇಳ್ತಾರಲ್ಲ, ಹಾಗೆಯೇ ಈ ಲ೦ಚಗುಳಿತನ ಕೂಡ ಒ೦ದು ಅಳಿಸಲಾಗದ ಪಳೆಯುಳಿಕೆ.

ನಮ್ಮ ನಡುವಿನ ಮಡಿವ೦ತರ೦ತೆ ತೋರುವ ಮ೦ದಿ ಲ೦ಚಗುಳಿತನವನ್ನು ಕ್ಯಾನ್ಸರ್ ಗೆ ಹೋಲಿಸುತ್ತಾರೆ. ಅಲ್ಲ, ನನ್ನ ಪ್ರಕಾರ ಅದು ಖ೦ಡಿತ ಕ್ಯಾನ್ಸರ್ ಅಲ್ಲ. ಅದು ಪಿತ್ರಾರ್ಜಿತವಾಗಿ ಬಳುವಳಿಯ೦ತೆ ಬರುವ ಡಯಾಬಿಟಿಸ್ ಕಾಯಿಲೆ ಯ೦ತಹದು. ಅದನ್ನು ನಿಯ೦ತ್ರಣದಲ್ಲಿ ಇಡಬಹುದೇ ವಿನಃ ಪೂರ್ಣ ಗುಣಪಡಿಸಲು ಇನ್ನು ಔಷಧಿ ಕ೦ಡುಹಿಡಿಯಲಾಗಿಲ್ಲ. ಭ್ರಷ್ಟಾಚಾರ, ಲ೦ಚಗುಳಿತನ ಇಲ್ಲ ಎ೦ದು ಹೇಳಿಕೊಳ್ಳುವೆಡೆಯಲ್ಲಿಯೂ ಗುಪ್ತಗಾಮಿನಿಯ೦ತೆ ಲ೦ಚದ ಹರಿವು ಸರಾಗವಾಗಿ ಹರಿಯುತ್ತಿರುತ್ತದೆ. ಭ್ರಷ್ಟಾಚಾರ ನಿಯ೦ತ್ರಣಕ್ಕೆ ಇರುವ ಲೋಕಾಯುಕ್ತ, ಲೋಕಪಾಲ, ಲೋಕ ಅದಾಲತ್, ವಿಚಕ್ಷಣ ದಳಗಳನ್ನು ಕೂಡ ಜನ ಅನುಮಾನ ದಿ೦ದ ನೋಡುವ ಪರಿಸ್ಥಿತಿ ಇರುವ ಈ ಹತಭಾಗ್ಯ ದಿನಗಳಲ್ಲಿ ಮತಿಹೀನರಾಗಿ ನಾವು ಇದ್ದೇವೆ.

ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪ ಇದೇ ಮೊದಲಲ್ಲ. ಹಲವು ವರುಷಗಳಿ೦ದಲೂ ಆಗಾಗ ಅಲ್ಲಲ್ಲಿ ಇ೦ತಹ ಆರೋಪಗಳು ಬೂದಿಮುಚ್ಚಿದ ಕೆ೦ಡದ೦ತೆ ಚರ್ಚಾವಸ್ತುಗಳಾಗಿವೆ. ಸರ್ವೋಚ್ಹ ನ್ಯಾಯಾಲಯದ ನ್ಯಾಯಮುರ್ತಿಯಾಗಿದ್ದ ರಾಮಸ್ವಾಮಿ ವಿರುದ್ಧ 1991 ರಲ್ಲಿ ಅಧಿಕಾರ ದುರುಪಯೋಗದ ಆರೋಪ ಬ೦ದಿತ್ತು. ಆದರೆ ಲೋಕಸಭೆಯಲ್ಲಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಬ೦ದಿದ್ದ ಗೊತ್ತುವಳಿ ಬಿದ್ದು ಹೋಯಿತು. ಇನ್ನೊಬ್ಬ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ವಿರುದ್ಧ 2008 ರಲ್ಲಿ ಮಾಡಲಾಗಿದ್ದ ಆರೋಪದಲ್ಲಿ, ಸದ್ರಿ ನ್ಯಾಯಮೂರ್ತಿ ಯ ಮಗ ಅಪ್ಪನ ಅಧಿಕಾರ ದುರುಪಯೋಗ ಪಡಿಸಿ ಭ್ರಷ್ತಾಚಾರವಾಗಿದೆ ಎ೦ದು ಹುಯಿಲೆದ್ದಾಗ ಆ ಘೋಟಾಲೆಯನ್ನು ಬಹಿರ೦ಗಪಡಿಸಿದ ಮಿಡ್ದೆ ಪತ್ರಿಕೆ ಯ ನಾಲ್ಕು ಪತ್ರಕರ್ತ ರಿಗೆ ಶಿಕ್ಷೆಯಾಯಿತೇ ವಿನಃ ಆರೋಪದಲ್ಲಿನ ನಿಜಾ೦ಶದ ಬಗ್ಗೆ ತನಿಖೆಯಾಗಲಿ ಕ್ರಮವಾಗಲಿ ನಡೆಯಲೇ ಇಲ್ಲ.

ನಮ್ಮ ದೇಶದಲ್ಲಿ ಕಾನೂನಿಗಿ೦ತ ಯಾರೂ ದೊಡ್ಡವರಲ್ಲ, (ನ್ಯಾಯಾಧೀಶರೂ ಹೊರತಲ್ಲ) ಎಲ್ಲರೂ accountable ಅ೦ತ ನಿಯಮವಿದ್ದರೂ ಪಾರದರ್ಶಕತೆ ಬಗ್ಗೆ ಕಾಯಿದೆ ಕಾನೂನು ಗಳು ರೂಪುಗೊ೦ಡಿದ್ದರೂ, ಅವೆಲ್ಲವುಗಿ೦ದ ನುಣುಚಿಕೊಳ್ಳಲು, ತಪ್ಪಿಸಿಕೊಳ್ಳಲು ಹತ್ತಾರು loop-hole ಗಳನ್ನೂ ಸೃಷ್ಟಿಸುವ ನಮ್ಮ ಸರಕಾರಗಳು, ನಮ್ಮ ವ್ಯವಸ್ಥೆ, ಭ್ರಷ್ಟಾಚಾರಕ್ಕೆ ದಾರಿತೋರುವ, ಕಳ್ಳರ ಒಳನುಸುಳುವಿಕೆಗೆ ದಿಡ್ಡಿಬಾಗಿಲು ತೆರೆದಿಡುವ ಉಪಕ್ರಮ ಅವ್ಯಾಹತವಾಗಿ ಸಾಗಿದೆ ಮತ್ತು ಸಾಗಲಿದೆ.
ತೆರೆಯ ಮೇಲೆ ನ್ಯಾಯಾಧೀಶರನ್ನು corrupt ಆಗಿ ತೋರಿಸಿದರೆ contempt of Court ಎ೦ದು ಕೇಸು ಜಡಿಯುವ ಸಾಧ್ಯತೆ ಇರುವುದರಿ೦ದ ಯಾರೂ ನ್ಯಾಯಾಧೀಶರ ಬಗ್ಗೆ ಅವಹೇಳನಕಾರಿ ದೃಶ್ಯಗಳನ್ನು ತೋರಿಸುತ್ತಿಲ್ಲ. ಸದ್ಯ ನಾವು ನೀವೆಲ್ಲ ಟಿ.ಏನ್.ಸೀತಾರಾಂ ಅವರ ಧಾರಾವಾಹಿ ಗಳಲ್ಲಿ ನ್ಯಾಯಕ್ಕೆ ಜಯಕಾಣುತ್ತ, ಸತ್ಯನಿಷ್ಟುರ ನ್ಯಾಯಾಧೀಶರನ್ನು ಕಿರುತೆರೆಯ ಮೇಲೆ ನೋಡುತ್ತಾ, ಏನೇನೋ ಅಸ೦ಗತ ಕಲ್ಪನೆಗೊ೦ದಿಗೆ ಭ್ರಮಾಲೋಕ ದಲ್ಲಿ ವಿಹರಿಸುವ೦ತಾಗಿದೆಯಲ್ಲ, ಅಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳೋಣವೇ ?

- ಕೆ.ಎನ್.ಪರಾ೦ಜಪೆ

ಮುಂದೆ ಓದಿ
6:08 PM

ಮಳೆಯಾರ್ಭಟ

Posted by ekanasu

ಪ್ರಾದೇಶಿಕ ಸುದ್ದಿ
ಮಂಗಳೂರು: ಕರಾವಳಿಯಾದ್ಯಂತ ಶುಕ್ರವಾರ ಭಾರೀ ಮಳೆ ಸುರಿದಿದೆ. ಬೆಳ್ತಂಗಡಿ ತಾಲೂಕೂ ಸೇರಿದಂತೆ ಹಲವು ಭಾಗಗಳಲ್ಲಿ ವಿಪರೀತ ಮಳೆಯಾಗಿದೆ. ಗುಡುಗು ಸಿಡಿಲಿನಿಂದಾವೃತಗೊಂಡ ಮಳೆ ಜನತೆಯನ್ನು ದಿಕ್ಕೆಡಿಸುವಂತೆ ಮಾಡಿದೆ. ಸಂಜೆ 3ರ ಸುಮಾರಿಗೆ ಆರಂಭಗೊಂಡ ಮಳೆ ಸಮಯ ಕಳೆದಂತೆ ತನ್ನ ಅಬ್ಬರವನ್ನು ಅಧಿಕಗೊಳಿಸಿತು. ರಾತ್ರಿಯ ವೇಳೆಗೆ ಭಾರೀ ಗುಡುಗು, ಸಿಡಿಲಿನಾರ್ಭಟದೊಂದಿಗೆ ಮಳೆ ಸುರಿದಿದ್ದು `ಮಳೆಗಾಲ'ವನ್ನು ಮೀರಿಸುವಂತಹ ಮಳೆ ಇದಾಗಿತ್ತು ಎಂದು ಅನೇಕರು ಆಡುವಂತಾಯಿತು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಬೀದರ್: ಬೀದರ್ ನ ಭಾಲ್ಕಿ ಸರಕಾರಿ ಬಸ್ ನಿಲ್ದಾಣದ ಛಾವಣಿ ಕುಸಿದು ಸಂಭವಿಸಿದ ಭೀಕರ ಅವಘಡದಲ್ಲಿ 6ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದು 60ಕ್ಕೂ ಮಂದಿ ಗಾಯಗೊಂಡಿದ್ದಾರೆ.
ಇದೀಗ ಬಂದ ಸುದ್ದಿಯಂತೆ ಮೃತರ ಕುಟುಂಬಕ್ಕೆ 2ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯರು ಸಹಕಾರ ನೀಡುತ್ತಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳ ತಂಡ ದೌಡಾಯಿಸಿದೆ. ನಾಲ್ಕು ಮಂದಿ ಗಾಯಾಳುಗಳು ಇದೀಗ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆ ಬೆಳಗ್ಗೆ 11.30ರ ಸುಮಾರಿಗೆ ಸಂಭವಿಸಿದೆ. ಇಂದು ಸರಕಾರಿ ರಜೆ ಘೋಷಣೆಯಾಗಿದ್ದ ಹಿನ್ನಲೆಯಲ್ಲಿ ಹೆಚ್ಚಿನ ಜನತೆ ಆ ಪ್ರದೇಶದಲ್ಲಿದ್ದಿಲ್ಲ.

ಮುಂದೆ ಓದಿ
8:58 AM

ತಿಮಿಂಗಿಲ ಪತ್ತೆ

Posted by ekanasu

ರಾಜ್ಯ - ರಾಷ್ಟ್ರ


ಕಾರವಾರ: ಕಾರವಾರದ ಕಡಲ ತೀರದಲ್ಲಿ ಬೃಹತ್ ಗಾತ್ರದ ತಿಮಿಂಗಿಲವೊಂದು ಪತ್ತೆಯಾಗಿದೆ. ಸುಮಾರು 30ರಿಂದ 35 ಅಡಿ ಉದ್ದದ ಈ ತಿಮಿಂಗಿಲ ಭಾರೀ ಗಾತ್ರವನ್ನು ಹೊಂದಿದ್ದು ಕಡಲ ತೀರದಲ್ಲಿ ಗೋಚರಿಸಿದೆ. ಇದರ ಶರೀರ ಇದೀಗ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಿಮಿಂಗಿಲದ ವೀಕ್ಷಣೆಗೆ ಜನ ಕಡಲತೀರದಲ್ಲಿ ಸೇರುತ್ತಿದ್ದಾರೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಮಂಗಳೂರು: ಮಹಿಳೆ ಮತ್ತು ಪಂಚಾಯತ್ ರಾಜ್ ವಿಷಯಕ್ಕೆ ಸಂಬಂಧಿಸಿದಂತೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಆವೃತ್ತಿಯ ಮುಖ್ಯ ವರದಿಗಾರ ಡಾ.ಅನಿಲ್ ರೊನಾಲ್ಡ್ ಫೆರ್ನಾಂಡೀಸ್ ಬರೆದ ವಿಶೇಷ ವರದಿಗೆ 2009ರ ಸರೋಜಿನಿ ನಾಯ್ಡು ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಪರಿಶಿಷ್ಟ ಜಾತಿಯ ನವಸಾಕ್ಷರೆ ಸರಸ್ವತಿ ಅಧ್ಯಕ್ಷೆಯಾಗಿರುವ ಪುತ್ತೂರು ತಾಲೂಕಿನ ಕೊಯಿಲ ಗ್ರಾಮ ಪಂಚಾಯತ್ ಮಾದರಿ ಗ್ರಾಮ ನಿರ್ಮಾಣ ಮಹಿಳೆ ಮತ್ತು ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಕುರಿತ ರೊನಾಲ್ಡ್ ಅವರ ವಿಶೇಷ ವರದಿಗೆ ಈ ಪ್ರಶಸ್ತಿ ಸಂದಿದೆ.

ಮುಂದೆ ಓದಿ

ವಿಶೇಷ ವರದಿ

ಈ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ೪೮೫ಕ್ಕೂ ಹೆಚ್ಚು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಬಾಗಿಲು ಮುಚ್ಚಿವೆ. ಮಕ್ಕಳ ಹಾಜರಾತಿ ಕೊರತೆ ಇದಕ್ಕೆ ಕಾರಣ. ತರಗತಿ ತುಂಬಲು ಅವಶ್ಯವಿರುವಷ್ಟು ಮಕ್ಕಳು ಈ ಶಾಲೆಗಳಲ್ಲಿ ಇಲ್ಲ. ಅಕ ಬೇಡಿಕೆ ಇದ್ದ ಕಾಲದಲ್ಲಿ ಈ ಶಾಲೆಗಳನ್ನು ತೆರೆಯಲಾಗಿತ್ತು.
ತುಮಕೂರು ಜಿಲ್ಲೆ ಈ ದಿಸೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ವಿಜಾಪುರ ಹಾಗೂ ಮಧುಗಿರಿ ಜಿಲ್ಲೆಗಳಿವೆ. ತುಮಕೂರಿನಲ್ಲಿ ೧೦೮, ವಿಜಾಪುರದಲ್ಲಿ ೫೬, ಮಧುಗಿರಿಯಲ್ಲಿ ೩೫ ಶಾಲೆಗಳು ಬಾಗಿಲು ಮುಚ್ಚಿವೆ. ಈ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಹಾಗೂ ಶಿಕ್ಷಕರನ್ನು ಪಕ್ಕದ ಸಮೀಪದ ಶಾಲೆಗಳಿಗೆ ಕಳುಹಿಸಲಾಗುತ್ತಿದೆ.



ಹಾಗೆ ನೋಡಿದರೆ ಐದಕ್ಕೂ ಕಡಿಮೆ ಇರುವ ಶಾಲೆಗಳನ್ನು ಮುಚ್ಚುವುದೇ ಕ್ಷೇಮ. ನಾಲ್ಕೈದು ಮಕ್ಕಳಿರುವ ಶಾಲೆಗೆ ೨-೩ ಶಿಕ್ಷಕರು ಪಾಠ ಮಾಡುವುದರಿಂದ ಮಾನವ ಶಕ್ತಿಯ ಸಮರ್ಪಕ ಬಳಕೆ ಆಗಲಾರದು. ಕಡಿಮೆ ಮಕ್ಕಳಿದ್ದಲ್ಲಿ ಪಾಠ ಮಾಡಲು ಶಿಕ್ಷಕರಿಗೆ, ಪಾಠ ಕಲಿಯಲು ಮಕ್ಕಳಲ್ಲಿ ಉತ್ಸಾಹ ಇರುವುದಿಲ್ಲ. ಅಲ್ಲದೆ, ಆರ್ಥಿಕವಾಗಿಯೂ ಸರಕಾರಕ್ಕೆ ಇದು ನಷ್ಟ.

ಇನ್ನು ಉತ್ತರ ಕನ್ನಡ ಜಿಲ್ಲೆಯ ಗಡಿ ತಾಲೂಕಿನ ಹಲವು ಕನ್ನಡ ಮಾಧ್ಯಮ ಶಾಲೆಗಳು ಬಾಗಿಲು ಮುಚ್ಚುವ ಹಂತದಲ್ಲಿವೆ. ಈ ಭಾಗದಲ್ಲಿನ ಸುಮಾರು ೪೧ ಶಾಲೆಗಳಲ್ಲಿ ಐದಕ್ಕೂ ಕಡಿಮೆ ಮಕ್ಕಳಿದ್ದಾರೆ. ಇಲ್ಲಿನ ಪಾಲಕರು ತಮ್ಮ ಮಕ್ಕಳನ್ನು ಗೋವಾದ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಕಳಿಸಲು ಉತ್ಸಾಹ ತೋರಿಸುತ್ತಿದ್ದಾರೆ. ಅಲ್ಲದೆ, ಗಡಿಭಾಗಗಳಲ್ಲಿನ ಶಾಲೆಗಳನ್ನು ಸರಕಾರ ನಿರ್ಲಕ್ಷಿಸುತ್ತಿದೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ.

ಖಾಸಗಿ ಶಾಲೆಗಳ ಹಾವಳಿಯಿಂದಾಗಿ ಸರಕಾರಿ ಶಾಲೆಗಳು ಕುಂಟುತ್ತಾ ಸಾಗಿರುವುದು ಎಲ್ಲೆಡೆ ಕಂಡು ಬರುತ್ತಿರುವ ದೃಶ್ಯ. ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಸರಕಾರಿ ಶಾಲೆಗಳ ಬಗ್ಗೆ ಪಾಲಕರಲ್ಲಿ ಉದಾಸೀನ, ಅಲಕ್ಷ್ಯ ಭಾವನೆ ಒಡಮೂಡುತ್ತಿದೆ. ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ ಎಂಬುದು ಪಾಲಕರ ಅನಿಸಿಕೆ. ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸಬೇಕೆಂಬುದು ಪಾಲಕರ ಹಂಬಲ. ಇಂಗ್ಲೀಷ್ ಮಾಧ್ಯಮದ ಆಕರ್ಷಣೆಯಿಂದಾಗಿ ಹೆಚ್ಚಿನ ಶುಲ್ಕ ನೀಡಿಯಾದರೂ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ. ಹಾಗಾಗಿ, ಸರಕಾರಿ ಶಾಲೆಗಳು ಕೇವಲ ಬಡವರ ಮಕ್ಕಳಿಗೆ ಎಂಬಂತಹ ಸ್ಥಿತಿ ಇಂದಿದೆ. ಇದರಿಂದಾಗಿ ಸರಕಾರಿ ಶಾಲೆಗೆ ವರ್ಷದಿಂದ ವರ್ಷಕ್ಕೆ ದಾಖಲಾಗುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಖಾಸಗಿ ಶಾಲೆಗಳ ಪೈಪೋಟಿಯಿಂದ ಮತ್ತಷ್ಟು ಸರಕಾರಿ ಶಾಲೆಗಳು ಬಾಗಿಲು ಮುಚ್ಚಲಿವೆ.

ದೇಶದಲ್ಲಿ ಸರಿಸುಮಾರು ೧.೬೫ ಲಕ್ಷ ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯಗಳಿಲ್ಲ. ೪.೬೬ ಲಕ್ಷ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆಗಳಿಲ್ಲ. ಮೂಲಭೂತ ಸೌಲಭ್ಯಗಳ ಕೊರತೆಯಲ್ಲಿ ಕರ್ನಾಟಕ, ದೇಶದಲ್ಲಿಯೇ ೬ನೇ ಸ್ಥಾನದಲ್ಲಿದೆ. ರಾಜ್ಯದ ಸುಮಾರು ೫೬ ಸಾವಿರ ಶಾಲೆಗಳ ಪೈಕಿ ೧೧ ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಕುಡಿಯಲು ಮಕ್ಕಳಿಗೆ ಶುದ್ಧ ನೀರು ಸಿಗುತ್ತಿಲ್ಲ. ಶೌಚಾಲಯಕ್ಕೆ ಸೂಕ್ತ ಸೌಲಭ್ಯವೇ ಇಲ್ಲ. ಇದು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಸಚಿವರೇ ಲೋಕಸಭೆಯಲ್ಲಿ ಬಹಿರಂಗಪಡಿಸಿದ ಮಾಹಿತಿ.

ಕೊಳಚೆ ಪ್ರದೇಶಗಳಲ್ಲಿರುವ ಸರಕಾರಿ ಶಾಲೆಗಳ ಸ್ಥಿತಿಯಂತೂ ಶೋಚನೀಯ. ಕೆಲವು ಶಾಲೆಗಳಿಗೆ ಸೂಕ್ತ ಕಟ್ಟಡಗಳೇ ಇರುವುದಿಲ್ಲ. ಕೆಲವು ಶಾಲೆಗಳಲ್ಲಿನ ಗೋಡೆಯಂತೂ ಯಾವಾಗಲೋ ಬಿದ್ದು ಹೋಗುವ ಸ್ಥಿತಿಯಲ್ಲಿರುತ್ತದೆ. ಮಕ್ಕಳು ಪ್ರತಿದಿನ ಪ್ರಾರ್ಥನೆ ಸಲ್ಲಿಸಲು, ವ್ಯಾಯಾಮ ತರಗತಿಗೆ ಹಾಜರಾಗಲು, ಆಟವಾಡಲು ಸೂಕ್ತ ಜಾಗವೇ ಇರುವುದಿಲ್ಲ. ಕೆಲವು ಶಾಲೆಗಳ ಮುಂದೆ ಲಾರಿ, ಮತ್ತಿತರ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಇದರಿಂದಾಗಿ ತರಗತಿ ಮುಗಿದ ಮೇಲೆ ಮಕ್ಕಳು ಒಟ್ಟಾಗಿ ಹೊರಬಂದಾಗ ದಟ್ಟಣೆ ಎದುರಾಗುತ್ತದೆ. ಇದೇ ವೇಳೆ ವಾಹನ ಸಂಚಾರವೂ ಹೆಚ್ಚಿದ್ದರೆ ಮಕ್ಕಳ ಜೀವಕ್ಕೇ ಅಪಾಯ ಎರಗುವ ಸಂಭವವೂ ಇರುತ್ತದೆ.

ಕೆಲವು ಶಾಲೆಗಳಲ್ಲಿ ತರಗತಿಯಲ್ಲಿ ಪಾಠ ಕೇಳುತ್ತಿದ್ದರೆ ಸುತ್ತಲ ಕಲುಷಿತ ಪರಿಸರದಿಂದ ದೂರ್ವಾಸನೆ ಬರುತ್ತಿರುತ್ತದೆ. ಶೌಚಾಲಯ ವ್ಯವಸ್ಥೆ ಇರದ ಶಾಲೆಗಳಲ್ಲಂತೂ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವ ಮಕ್ಕಳು ಶಾಲೆಯ ಪರಿಸರವನ್ನೇ ಕಲುಷಿತಗೊಳಿಸುತ್ತಾರೆ. ಅದೆಷ್ಟೋ ಶಾಲೆಗಳಲ್ಲಿ ತ್ಯಾಜ್ಯ ಸಂಗ್ರಹಣೆಗೆ ಸಮರ್ಪಕ ಸೌಲಭ್ಯ ಇರುವುದಿಲ್ಲ. ಇದರಿಂದಾಗಿ ಮಕ್ಕಳು ತಾವು ತಿಂದ ನಂತರದ ಪದಾರ್ಥಗಳನ್ನು, ಕಸಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಆ ಮೂಲಕ ಶಾಲೆಯ ಸುತ್ತ ಅನಾರೋಗ್ಯಕರ ಪರಿಸರ ನಿರ್ಮಾಣವಾಗುತ್ತದೆ.

ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸರಕಾರ ಅಕ್ಷರ ದಾಸೋಹ, ಪರಿಹಾರ ಬೋಧನೆ, ಸರ್ವ ಶಿಕ್ಷಣ ಅಭಿಯಾನ, ಚಿಣ್ಣರ ಅಂಗಳ, ನಲಿ ಕಲಿ, ಆಶಾ ಕಿರಣ...ಹೀಗೆ ನಾನಾ ಕಾರ್‍ಯಕ್ರಮಗಳನ್ನು ಹಮ್ಮಿಕೊಂಡಿದೆ. ಹೆಚ್ಚಿನ ಹಣಕಾಸು ನೆರವು ನೀಡುವತ್ತ ಗಮನ ಹರಿಸಿದೆ. ಇಷ್ಟಾಗಿಯೂ ಸರಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಂಡು ಬರುತ್ತಿಲ್ಲ. ಈ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಿ, ಶಿಕ್ಷಣದ ಗುಣಮಟ್ಟ ಸುಧಾರಿಸುವಲ್ಲಿ ಅಕಾರಿಗಳು ಪ್ರಾಮಾಣಿಕ ಯತ್ನ ನಡೆಸದಿರುವುದೇ ಇದಕ್ಕೆ ಪ್ರಮುಖ ಕಾರಣ.

ರಾಷ್ಟ್ರಕ್ಕೆ ಮಹಾನ್ ಕೊಡುಗೆ ನೀಡಿದ ಮೇಧಾವಿಗಳ ಪೈಕಿ ಹಲವರು ಸರಕಾರಿ ಶಾಲೆಗಳಲ್ಲೇ ಕಲಿತವರು. ಆದರೆ, ಈಗ ಪರಿಸ್ಥಿತಿ ಬದಲಾಗುತ್ತಿದೆ. ಸರಕಾರಿ ಶಾಲೆಗಳಿಂದ ಜನಸಾಮಾನ್ಯರು ದೂರವಾಗುತ್ತಿದ್ದಾರೆ. ಸರಕಾರಿ ಶಾಲೆಗಳಿಗೆ ಮೊದಲಿನ ಆಕರ್ಷಣೆ ಬರಬೇಕಿದ್ದರೆ ಅಲ್ಲಿನ ಶಿಕ್ಷಣದ ಗುಣಮಟ್ಟ ಇನ್ನಷ್ಟು ಸುಧಾರಿಸಬೇಕು. ಸರಕಾರ ಮೂಲಭೂತ ಸೌಕರ್‍ಯಗಳನ್ನು ಕಲ್ಪಿಸಿ, ಖಾಸಗಿ ಶಾಲೆಗಳ ಜತೆ ಸ್ಪರ್ಧೆ ಮಾಡುವ ಸಾಮರ್ಥ್ಯ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸರಕಾರಿ ಶಾಲೆಗಳು ಬಾಗಿಲು ಮುಚ್ಚಬಹುದು.


- ಮಹಾಬಲೇಶ್ವರ ಹೊನ್ನೆಮಡಿಕೆ

ಮುಂದೆ ಓದಿ
1:40 PM

ನೋಡು ಬಾ ಗೆಳತಿ...

Posted by ekanasu

ಯಾನ

ಇದು ಪಶ್ಚಿಮದ ಸ್ವರ್ಗ . . . . !! ಈ ಸೊಬಗ ನೋಡಲು ಬನ್ನಿ ರೈಲ್ಲಲ್ಲಿ . . .
ಇಲ್ಲಿ ಗಗನವೇ ಹತ್ತಿರ ಬಂದಂತೆ . . ದೂರದ ಬೆಟ್ಟದ ತುಂಬೆಲ್ಲಾ ಮಂಜು ಮುತ್ತಿಕ್ಕಿದಂತೆ . . ಅಲ್ಲಿ ಹಾಲ್ನೊರೆಯಂತೆ ಧುಮ್ಮುಕಿ ಹರಿಯುವ ಜಲಪಾತ... ಹಚ್ಚ ಹಸಿರಿನ ಸೀರೆಯನ್ನುಟ್ಟ ಆ ಪ್ರಕೃತಿ ಸೊಬಗು . . ಇದೇನು ವರ್ಣನೆ ಎಂಬ ಯೋಚನೆಯೇ..? ಹೌದು ಇದು ದೂರದ ಅದೆಲ್ಲೋ ಇರುವ ಊಟಿ , ಕೊಡೈಕಾನಲ್ನಂತಹ ಪ್ರದೇಶದ ವರ್ಣನೆಯಂತೂ ಅಲ್ಲವೇ ಅಲ್ಲ.


ನಮ್ಮದೇ ಕರುನಾಡಿನ ಹೆಮ್ಮೆಯ ಪ್ರದೇಶದ ಅದ್ಭುತ ಮೈಮಾಟ. ಅಬ್ಬಾ.. ಈ ಸುಂದರ ಸೊಬಗನ್ನು ನೋಡುವುದಕ್ಕೆ ನಮಗೆ 14 ವರ್ಷ ಬೇಕಾದುವಾ..? ಎನ್ನುವ ಪ್ರಶ್ನೆ ಹಾಕಿದಾಗಲೇ ನಿಮಗೆ ಗೊತ್ತಾಗಬಹುದು ಇದು ಮಂಗಳೂರು - ಬೆಂಗಳೂರು ಹಗಲು ರೈಲಿನ ಕತೆ ಅಂತ. ಹೌದು ಈಗ ಹಗಲು ರೈಲು ಓಡಾಟ ಶುರುವಾಗಿದೆ.


ಅಬ್ಬಾ ಈಗಲಾದರೂ ರೈಲು ಓಡಾಟ ಶುರುವಾಯಿತಲ್ಲಾ ಎನ್ನುವ ಉದ್ಗಾರದೊಂದಿಗೇ ಇಂದು ಮಂಗಳೂರು - ಬೆಂಗಳೂರು ಹಗಲು ರೈಲಲ್ಲಿ ಜನ ಹತ್ತಿ ಬಿಡುತ್ತಾರೆ.14 ವರ್ಷದ ವನವಾಸದಿಂದ ಹೊರಬಂದಂತೆ ಈಗ ಹಗಲು ರೈಲು ಓಡಾಟವೂ ಆರಂಭವಾಗಿದೆ. ಸುಬ್ರಹ್ಮಣ್ಯದಿಂದ ಸಕಲೇಶಪುರವರೆಗಿನ ಪ್ರಕೃತಿಯ ಮೈಮಾಟವನ್ನು ನೋಡಲು ಇದೇ ರೈಲಲ್ಲಿ ಹೋಗಲೇ ಬೇಕು. ಸುಮಾರು 2 ರಿಂದ 3 ಗಂಟೆಯ ಈ ಪ್ರಯಾಣ ಅವಿಸ್ಮರಣೀಯ. ಪ್ರಕೃತಿ ಪ್ರಿಯರ ಸ್ವರ್ಗ.ಅಲ್ಲಿ ಸಾಗುತ್ತಿದ್ದಂತೆಯೇ ಉದ್ಗಾರಗಳು ಕೇಳತೊಡಗುತ್ತದೆ.. ಅದೋ . . ಅಲ್ಲಿ ಗಿರಿ ಶಿಖರಗಳಿಗೆ ಮುತ್ತಿಕ್ಕುವ ಹಿಮರಾಶಿಗಳು , ಸ್ವಲ್ಪ ಆಚೆ ನೋಡಿದರೆ ಗಗನಕ್ಕೆ ಚುಂಬಿಸ ಹೊರಟ ಹಸಿರು ಹಾಸಿದ ಶಿಖರಗಳು .. ಇಲ್ಲಿ ನೋಡಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತ.. ಅಗೋ ಕೆಳಗಡೆ ತಿರುಗಿ ... ಭಾರೀ ಪ್ರಪಾತ... ಅಷ್ಟೇ ಅಲ್ಲ ಆಗಾಗ ಕೈಗೆ ಸಿಕ್ಕು ಮಾಯವಾಗಿವ ಬೆಳ್ಳಿ ಮೋಡಗಳು.. ಅಬ್ಬಾ ಅದೇನು ಸುರಂಗದೊಳಗೆ ನುಸುಳಿ ಹೊರಡುವ ಬೋಗಿಗಳು .... ಅಯ್ಯೋ.. ಸಮಯ ಮುಗಿದೇ ಹೋಯಿತು. ಇಲ್ಲ ಸಾಲದು.. ಇನ್ನೂ ಈ ರೈಲು ಇಲ್ಲೇ ಸಾಗಲಿ ಎಂದು ಭಾವಿಸುವಷ್ಟರಲ್ಲೇ ಅದು ಸಕಲೇಶಪುರ ತಲಪಿ ಬಿಡುತ್ತದೆ. ಈ ಅನುಭವನ್ನು ಪ್ರಯಾಣಿಕರು ಹೇಳುವುದು ಹೀಗೆ . . .

ಹಲವು ವರ್ಷದ ಹೋರಾಟದ ಬಳಿಕ ಮತ್ತೆ ಹಗಲು ರೈಲು ಓಡಾಟ ಕಂಡಿದೆ. ಈಗ ಪ್ರಕೃತಿ ಪ್ರಿಯರಿಗೆ ಸಂತಸದ ಹೊನಲೇ ಹರಿದಿದೆ. ಮಂಗಳೂರಿನ ಅಡಿಕೆ . ಗದ್ದೆಗಳ ಸಂದಿನಿಂದ ಹೊರಡುವ ಈ ರೈಲು ಹಾಗೆಯೇ ಸಾಗುತ್ತಾ ಸುಬ್ರಹ್ಮಣ್ಯ , ಧರ್ಮಸ್ಥಳಕ್ಕೆ ಬಂದ ಭಕ್ತಾದಿಗಳನ್ನು ಹೊತ್ತೊಯ್ಯುತ್ತಾ ಸಾಗಿ ಸಿರಿಬಾಗಿಲು, ಎಡಕುಮೇರಿಯತ್ತ ಸಾಗುವಾಗ ಪ್ರಕೃತಿಯ ರಮಣೀಯತೆ ಗೋಚರಿಸಲು ತೊಡಗುತ್ತದೆ.ಗುಪ್ತಗಾಮಿನಿಯಾಗಿ ಹರಿಯುವ ನದಿಗಳ ಭೋರ್ಗರೆತ , ಕಿವಿಕಡಚಿಕ್ಕುವ ರೈಲು ಹಾರನ್ ಗೆ ಸಾತ್ ನೀಡುವ ಜೀರುಂಡೆಗಳ ಸದ್ದು , ಹಾಗೆಯೇ ಸುರಂಗದೊಳಗೆ ಪ್ರಯಾಣಿಸುವ ವೇಳೆ ಪ್ರಯಾಣಿಕರ ಸಂತಸದ ಕಿರುಚಾಟ ಹೀಗೆ ನಿಗೂಢವಾಗಿ ಕಾನನವನ್ನು ಸೀಳುತ್ತಾ ಸಾಗುವ ರೈಲಿನ 12 ಬೋಗಿಗಳು ಎಡಕುಮೇರಿ ನಂತರ ಅಲ್ಲಿನ ಕಾಫಿ ತೋಟ , ಗದ್ದೆಗಳ ಸವಿಯನ್ನು ಉಣ ಬಡಿಸುತ್ತಾ ಸಕಲೇಶಪುರ ತಲಪುವ ವೇಳೆ 57 ಸುರಂಗಗಳು , 110 ತಿರುವುಗಳು , ಹಾಗೂ 241 ಸೇತುವೆಗಳನ್ನು ದಾಟಿ ಬಂದಿರುತ್ತದೆ. ಈ ಅನುಭವವನ್ನು ಪ್ರತಿಯೊಬಬ್ಬ ಕನ್ನಡಿಗನೂ ಅನುಭವಿಸಲೇ ಬೇಕು.

ಹಾಗೆ ನೋಡಿದರೆ ಮಂಗಳೂರಿಗೆ 1904 ರಲ್ಲಿ ಹಾಸನದಿಂದ ರೈಲ್ವೇ ಮಾರ್ಗ ವಿಸ್ತರಣೆ ಆರಂಭಗೊಂಡಿತ್ತು. 1907ರ ಸುಮಾರಿಗೆ ವಿವಿದೆಡೆಯ ಸೇತುವೆಗಳು ಪೂರ್ಣಗೊಂಡು ಮೊದಲಿಗೆ 6 ಬೋಗಿಗಳ ಉಗಿಬಂಡಿ ಆರಂಭವಾಗಿತ್ತು.ನಂತರ 1962 ರಲ್ಲಿ ಮೀಟರ್ ಗೇಜ್ ಪರಿವರ್ತನೆಯ ಕಾರ್ಯ ನಡೆದು 1979 ರಲ್ಲಿ ಮಂಗಳೂರು- ಬೆಂಗಳೂರು ನಡುವೆ ಮೀಟರ್ಗೇಜ್ ರೈಲು ಸಂಚಾರ ಆರಂಭಗೊಂಡು 1996 ರಿಂದ ಗೇಜ್ ಪರಿವರ್ತನೆಯ ಕಾರಣಕ್ಕಾಗಿ ಬಂದ್ ಆಗಿದ್ದ ರೈಲು ಹಗಲು ರೈಲು ನಂತರ 2003 ರಲ್ಲಿ ಬ್ರಾಡ್ ಗೇಜ್ ಕಾರ್ಯ ಮುಗಿದಿದ್ದರೂ ಬೆಂಗಳೂರಿಗೆ ರೈಲು ಸಂಚಾರ ಆರಂಭವಾಗಿರಲಿಲ್ಲ. ಆದರೆ 2007 ರಲ್ಲಿ ರಾತ್ರಿ ವೇಳೆ ರೈಲು ಆರಂಭಗೊಂಡಿದ್ದರೂ ಹಗಲು ರೈಲಿನ ಬೇಡಿಕೆ ಹಾಗೆಯೇ ಉಳಿದುಕೊಂಡಿತ್ತು. ಈಗ ವನವಾಸ ಮುಗಿದಿದೆ.ಕನಸೂ ಈಡೇರಿದೆ. ಆದರೆ ಸದ್ಯ ವಾರಕ್ಕೆ 3 ದಿನ ಮಾತ್ರಾ. ಅದಲ್ಲ ವಾರದ ಎಲ್ಲಾ ದಿನ ಓಡಾಡ ಬೇಕು, ಕನರ್ಾಟಕದ ಹೆಮ್ಮೆಯ ಈ ಸುಂದರ ಪ್ರಕೃತಿಯ ಸೊಬಗು ಎಲ್ಲರಿಗೂ ಕಾಣಸಿಗಲು ಪ್ರತೀ ದಿನ ಓಡಾಡಬೇಕು ಎಂಬದು ಎಲ್ಲರ ಬೇಡಿಕೆಯಾಗಿದೆ.

ಇಲ್ಲಿನ ರೈಲು ಯಾನವು ಉಳಿದ ಎಲ್ಲಾ ರೈಲು ಯಾನಕ್ಕಿಂತ ಭಿನ್ನ. ಏಕೆಂದರೆ ಪ್ರಕೃತಿಯ ರುದ್ರತೆಯನ್ನು ಪ್ರದಶರ್ಿಸುತ್ತಾ ಸುಮಾರು 1.5 ಕಿ ಮೀ ದೂರದ ಸುರಂಗದ ಒಳಹೊಕ್ಕು ಹೊರಬರುತ್ತದೆ. ಅತ್ಯಂತ ಕಡಿದಾದ ಬಂಡೆಗಳನ್ನು ಸೀಳಿಹೋಗಿರುವ ಇಲ್ಲಿನ ರೈಲು ಹಳಿ ನಿರ್ಮಾಣ ಕಾರ್ಯವೇ ಎಲ್ಲರಿಗೆ ಅಚ್ಚರಿಗೆ ತರುವಂತಾಗುತ್ತದೆ. ಇಂತಹ ಗಿರಿಶಿಖರದ ಮಧ್ಯೆಯೇ ರೈಲು ಓಡಾಡುತ್ತಿದೆ. ಈ ಘಾಟಿ ಪ್ರದೇಶದಲ್ಲಿ ರೈಲು ಸುಮಾರು 15 ರಿಂದ 20 ಕಿಲೋಮೀಟರ್ ವೇಗದಲ್ಲಷ್ಟೇ ಸಾಗುತ್ತದೆ, ಮಾತ್ರರವಲ್ಲ ಅಲ್ಲಿಲ್ಲಿ ನಿಲ್ಲಿಸುತ್ತಾ ಭದ್ರತೆಯನ್ನು ಪರಿಶೀಲಿಸುತ್ತಾ ಸಾಗುತ್ತದೆ. ಹೀಗಾಗಿ ಇಲ್ಲಿನ ರೋಚಕತೆ ಎಲ್ಲರಿಗೂ ಖುಷಿಕೊಡುತ್ತದೆ.

. ಇಂತಹ ಸವಾಲುಗಳಿಗೆ ಉತ್ತರ ಹುಡುಕ ಹೊರಟ ತಂತ್ರಜ್ಞರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಅದಕ್ಕೂ ಮುನ್ನ ನೀವೂ ಒಮ್ಮೆ ಈ ರೈಲ್ಲಿ ಹೋಗಿ ಬನ್ನಿ ಹಸಿರಿನ ಗಿರಿಗಳ ಮಾಲೆಯನ್ನು ತೊಟ್ಟಿರುವ ಪ್ರಕೃತಿಯನ್ನೊಮ್ಮೆ ನೋಡಿ ಬನ್ನಿ.....

- ಮಹೇಶ್ ಪುಚ್ಚಪ್ಪಾಡಿ
ಪ್ರತಿನಿಧಿ
ಸುವರ್ಣ ವಾಹಿನಿ
ಚಿತ್ರಕೃಪೆ: ಸುಧಾಕರ ಎರ್ಮಾಳ್.

ಮುಂದೆ ಓದಿ

ವಿಚಾರ

ದೂರದರ್ಶನ ಮಾಧ್ಯಮದ ವಿವಿಧ ವಾಹಿನಿಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಪೈಕಿ ಹಲವು ಧಾರಾವಾಹಿಗಳಲ್ಲಿ ಯಾವುದಾದರೊಂದು ಧರ್ಮದ ಅಥವಾ ಜಾತಿಯ ಹಣೆಪಟ್ಟಿಯೊಂದಿಗೆ ಅಬದ್ಧ ಪದ್ಧತಿ ಮತ್ತು ಮೌಢ್ಯದ ಆಚರಣೆಗಳನ್ನು ತೋರಿಸುವ ಮೂಲಕ ಆ ಧರ್ಮದ ಅಥವಾ ಜಾತಿಯ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಮೂಡುವಂತೆ ಮಾಡಲಾಗುತ್ತಿದೆಯೆಂಬ ಆಕ್ಷೇಪವು ಆಗಾಗ ಕೇಳಿಬರುತ್ತಿರುತ್ತದೆ.


ಅಬದ್ಧ ಪದ್ಧತಿ, ಮೌಢ್ಯ, ಕುಟಿಲ ಇವು ಎಲ್ಲ ಧರ್ಮಗಳಲ್ಲೂ ಎಲ್ಲ ಜಾತಿಗಳಲ್ಲೂ ಮತ್ತು ಬಹುತೇಕ ಎಲ್ಲ ಸಂಸಾರಗಳಲ್ಲೂ ಒಂದು ಪ್ರಮಾಣದಲ್ಲಿ ಇರುವಂಥವೇ. ಪುಸ್ತಕ, ನಾಟಕ, ಸಿನೆಮಾ ಮತ್ತು ಟಿವಿ ಧಾರಾವಾಹಿಗಳಲ್ಲಿ ಇವುಗಳನ್ನು ಖಂಡಿಸುವುದು ತಪ್ಪೇನಲ್ಲ. ಆದರೆ ಜನಾಕರ್ಷಣೆಯ ಉದ್ದೇಶದಿಂದ ಇವುಗಳನ್ನು ವೈಭವೀಕರಿಸುವುದು, ಉತ್ಪ್ರೇಕ್ಷಿಸುವುದು, ತಿರುಚುವುದು, ಅಸತ್ಯಗಳನ್ನು ಸೇರಿಸುವುದು, ಕಥಾಕುತೂಹಲದ ದೃಷ್ಟಿಯಿಂದ ಇಂಥ ಎಲ್ಲ ಅಪಸವ್ಯಗಳನ್ನೂ ಒಂದೇ ಚೌಕಟ್ಟಿನೊಳಗೆ ತುರುಕುವುದು ಮತ್ತು ಒಂದು ಜಾತಿವರ್ಗಕ್ಕೆ ಆರೋಪಿಸುವುದು ಸರಿಯಲ್ಲ. ಇದರಿಂದ ಸಮಾಜದಲ್ಲಿ ತಪ್ಪು ಕಲ್ಪನೆಗಳುಂಟಾಗುತ್ತವೆ.

ಅದೇವೇಳೆ, ಸಮಾಜವೂ ಕಥೆಯನ್ನು ಕೇವಲ ಕಥೆಯಾಗಿ ಪರಿಗಣಿಸದೆ ವಾಸ್ತವವೆಂದು ಪರಿಗಣಿಸುವ ಮತ್ತು ಕಲೆಯನ್ನು ಕಲೆಯಾಗಿ ನೋಡದೆ ಸತ್ಯಕಥನವೆಂದು ಭ್ರಮಿಸುವ ವಿಪರ್ಯಾಸವೂ ನಡೆಯುತ್ತಿರುವುದು ಚೋದ್ಯವೇ ಸರಿ!

ಇತ್ಯಾತ್ಮಕ ಗುಣಗಳನ್ನು ಹೊಂದಿದ್ದೂ ಒಂದು ಕಲಾಪ್ರಕಾರವು ಸಮಾಜದ ಒಂದು ವರ್ಗದ ಬೇಸರಕ್ಕೆ ಹೇತುವಾಗುತ್ತದೆಂದರೆ ಇದರಲ್ಲಿ ಕಲಾವಿದ ಮತ್ತು ಕಲಾರಸಿಕ ಇಬ್ಬರದೂ ದೋಷಗಳಿವೆ. ಜನಪ್ರಿಯತೆಗಾಗಿ ಅಬದ್ಧಗಳ ವೈಭವೀಕರಣ, ಉತ್ಪ್ರೇಕ್ಷೆ, ತಿರುಚುವಿಕೆ, ತುರುಕುವಿಕೆ ಮತ್ತು ಅಸತ್ಯಗಳ ಸೇರ್ಪಡೆ ಇವು ಸಾಹಿತಿ-ನಿರ್ದೇಶಕನ ತಪ್ಪಾದರೆ, ಒಂದು ಪುಸ್ತಕವನ್ನೋ ನಾಟಕವನ್ನೋ ಚಲನಚಿತ್ರವನ್ನೋ ಗಮನಿಸಿ, 'ಸಮಾಜ ಅಕ್ಷರಶಃ ಹೀಗೇ ಇದೆ' ಎಂದು ಪರಿಭಾವಿಸುವುದು ಕಲಾರಸಿಕನ ದೋಷ.

ಹೀಗೆಲ್ಲ ಅಪಸವ್ಯಗಳನ್ನು ಬಿಂಬಿಸಿದಾಗ ಸಮಾಜದ ಬಹುಭಾಗವು ಅದನ್ನು ಅಕ್ಷರಶಃ ವಾಸ್ತವವೆಂದು ನಂಬುವುದರಿಂದಾಗಿ (ಮತ್ತು ಹಲವೊಮ್ಮೆ, ಕೆಲವು ಆಷಾಢಭೂತಿಗಳು ಹಾಗೂ ತಥಾಕಥಿತ ಬುದ್ಧಿಜೀವಿಗಳು ತಾವು ನಂಬಿದಂತೆ ನಟಿಸಿ ಮುಗ್ಧರನ್ನು ದಾರಿತಪ್ಪಿಸುವುದರಿಂದಾಗಿ) ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆಯುಂಟಾಗುವ ಅಪಾಯ ಅಧಿಕ. ಸಂಬಂಧಿತ ಧರ್ಮ ಅಥವಾ ಜಾತಿಯು ವೃಥಾ ಗೇಲಿಗೀಡಾಗಲೂ ಇದು ಕಾರಣವಾಗುತ್ತದೆ.

ಆದ್ದರಿಂದ, ಸಾಹಿತ್ಯ ಮತ್ತು ಕಲೆಗಳ ಪ್ರಸಾರದ ಸಂದರ್ಭದಲ್ಲಿ, ಕಲಾಕೌಶಲ ಮತ್ತು ಸಮಾಜದ ಸ್ವಾಸ್ಥ್ಯ ಎರಡರ ಬಗ್ಗೆಯೂ ಗಮನ ಅಗತ್ಯ. ಇಲ್ಲದಿದ್ದರೆ, ಕಲೆಯೆಂಬ ಸೊಗಸಾದ ಬಣ್ಣವನ್ನು ಅನಾರೋಗ್ಯಕರ ಸಂದೇಶವೆಂಬ ಮಸಿಯು ನುಂಗಿಬಿಡುತ್ತದೆ!

- ಎಚ್. ಆನಂದರಾಮ ಶಾಸ್ತ್ರೀ
ವಿಳಾಸ:
1251, 4ನೇ 'ಎ' ಮುಖ್ಯರಸ್ತೆ,
3ನೇ ಹಂತ, ಬಿ.ಇ.ಎಲ್.ಬಡಾವಣೆ,
ವಿದ್ಯಾರಣ್ಯಪುರ,
ಬೆಂಗಳೂರು - 560 097

ಮುಂದೆ ಓದಿ

ವಿಚಾರ


ರೈತರು ಪಟ್ಟ ಶ್ರಮಗಳಿಗೆ ಕಿಂಚಿತ್ತೂ ಬೆಲೆ ನೀಡದಿದ್ದರೂ ಅವರನ್ನು ಪುಂಖಾನುಪುಂಖವಾಗಿ ಹೊಗಳಿ ಅಟ್ಟಕ್ಕೇರಿಸುವಲ್ಲಿ ನಮ್ಮ ರಾಜಕಾರಣಿಗಳು ಬಹಳ ನಿಸ್ಸೀಮರು. ಕೇವಲ ಮತಗಳನ್ನು ಸೆಳೆಯುವ ಉದ್ದೇಶ, ಅಧಿಕಾರದ ಗದ್ದುಗೆ ಏರುವ ಬಯಕೆ ರಾಜಕಾರಣಿಗಳನ್ನು ಏನು ಬೇಕಾದರೂ ಮಾಡುವಂತೆ ಪ್ರೇರೇಪಿಸುತ್ತದೆ. (ಅಧಿಕಾರ ಸಿಗುತ್ತದೆ ಎಂದಾದರೆ ರಾಜಕಾರಣಿಗಳು ಮಾತ್ರವಲ್ಲ, ಅಧಿಕಾರಿ ವರ್ಗಗಳು ಏನು ಮಾಡಲು ಹೇಸುವುದಿಲ್ಲ ಎಂಬುದು ಬೇರೆ ಮಾತು). ಭಾರತ ಇಂದು ಎಷ್ಟೇ ಮುಂದುವರಿದ ರಾಷ್ಟ್ರವಾಗಿ ಇಂದು ಹೊರಹೊಮ್ಮಿದ್ದರೂ, ರೈತರ ಪಾಡು ನಾಯಿ ಪಾಡೇ.


ಆಫ್ರಿಕಾ ಖಂಡ ಹಲವು ದೇಶಗಳಲ್ಲಿನ ದೈನ್ಯ ಸ್ಥಿತಿಗೂ ನಮ್ಮ ದೇಶದ ರೈತರ ಸ್ಥಿತಿಗೂ ಹೋಲಿಕೆ ಒಂದೇ. ಅಲ್ಲಿನ ಹಲವು ರಾಷ್ಟ್ರಗಳು ಇನ್ನೂ ಅಭಿವೃದ್ಧಿ ಎಂದರೆ ಏನೆಂದೇ ಅರಿತಿಲ್ಲ. ಭಾರತದ ರೈತರ ಅಭಿವೃದ್ಧಿಗೆ ಸೂಕ್ತ ವ್ಯವಸ್ಥೆಗಳಿದ್ದರೂ ನಮ್ಮ ರಾಜಕಾರಣಿಗಳಲ್ಲಿ ದೂರದರ್ಶಿತ್ವ ಮತ್ತು ಇಚ್ಛಾಶಕ್ತಿ ಎಂಬುದೇ ಇಲ್ಲ. ಸರ್ಕಾರದ ಅಭಯಕ್ಕಾಗೇ ಭರವಸೆಯ ಮುಖಹೊತ್ತು ಕಾದು ಬಳಲಿ ಬೆಂಡಾಗುವ ನೇಗಿಲಯೋಗಿಗೆ ಅಂತಿಮವಾಗಿ ಸಿಗುವುದು ಶೂನ್ಯ.

ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಬಿಡುಗಡೆ ಮಾಡಿದರೂ ಏಕೆ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ? ಸರ್ಕಾರದ ಹಣ ಹಾಗಾದರೆ ಎಲ್ಲಿ ಹೋಯಿತು? ಸರ್ಕಾರಿ ಅಧಿಕಾರಿಗಳ ಮನೆಗೆ ಏಕಾಏಕಿಯಾಗಿ ದಾಳಿ ಮಾಡಿದರೆ ಉತ್ತರ ಸಿಗುವುದು ಖಂಡಿತ. ಅಧಿಕಾರಿಗಳ ನಾಚಿಕೆಗೇಡಿನ ಕೃತ್ಯಗಳಿಗೆ ರೈತ ಮಾತ್ರ ಮೂಕಸಾಕ್ಷಿಯಾಗಿ ನೋವನ್ನನುಭವಿಸುತ್ತಿದ್ದಾನೆ.

ಈ ಬಾರಿ ಮಳೆ ಬಂದಿಲ್ಲ. ಉತ್ತರ ಭಾರತದಲ್ಲಂತೂ ಬರದ ಕರಿಛಾಯೆಗೆ ರೈತರು ಬೇಸತ್ತುಹೋಗಿದ್ದಾರೆ. ಇತ್ತೀಚೆಗೆ ದೆಹಲಿಯ ದಿಲ್ಶದ್ ಗಾರ್ಡನ್‌ನಲ್ಲಿ ಸುಖಬೀರ್ ಎಂಬ ರೈತನೊಬ್ಬ ಬಸ್ಸಿನಲ್ಲಿ ಸಿಕ್ಕಿದ್ದ. ವಿಪರೀತ ಸೆಕೆಯಲ್ಲಿ ಇಬ್ಬರೂ ಬೆಂದುಹೋಗಿದ್ದೆವು. ಕಳೆದ ವರ್ಷದಷ್ಟೂ ಈ ಬಾರಿ ಮಳೆ ಬರಲಿಲ್ಲವಲ್ಲ ಎಂದು ಮಾತಿಗಿಳಿದಾಗ ಆತ, “ಒಂದೆಡೆ ಮಳೆಯೂ ಬರುವುದಿಲ್ಲ, ಇನ್ನೊಂದೆಡೆ ಸರ್ಕಾರಕ್ಕೆ ನಮ್ಮ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸರ್ಕಾರದ ಯಾವೊಂದು ಯೋಜನೆಯೂ ನಮ್ಮ ಹಳ್ಳಿಯನ್ನೂ ತಲುಪಿಯೇ ಇಲ್ಲ” ಎಂದು ಗೋಗರೆದಿದ್ದ. ಅವರ ಹಳ್ಳಿಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಒಬ್ಬ ರೈತ ಬೆಳೆ ನಷ್ಟ, ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದ. ಹೆಂಡತಿಗೆ ವಿಷನೀಡಿದ್ದರೂ, ಆಕೆ ಬದುಕಿದ್ದಳು. ಆದರೆ ಆಕೆಯ ಮುಂದಿನ ಬದುಕು ಏನೆಂದು ಕೇಳಿದ್ದಕ್ಕೆ ಈತನಲ್ಲಿ ಉತ್ತರವಿರಲ್ಲ. ಸದ್ಯಕ್ಕೆ ಸ್ಥಳೀಯರು ಆಕೆಗೆ ನೆರವಾಗಿದ್ದಾರೆ. ಆದರೆ ಭವಿಷ್ಯದಲ್ಲಿ ಆಕೆಗೆ ಗತಿ ಏನು? ಸಾಲದ್ದಕ್ಕೆ ಅವರಿಗೆ ಮಕ್ಕಳೂ ಇರಲಿಲ್ಲ.


ಉತ್ತರಭಾರತದ ಹಲವೆಡೆ ಜೂನ್‌ನಿಂದ ಆಗಸ್ಟ್‌ವರೆಗೆ ಸಾಮಾನ್ಯ ಸರಾಸರಿಗಿಂತ ಶೇಕಡಾ ೩೦ರಷ್ಟು ಕಡಿಮೆ ಮಳೆಯಾಗಿದೆ ಎಂದು ವರದಿಯೊಂದು ಹೇಳಿದೆ. ಆದರೆ ಉತ್ತರ ಪ್ರದೇಶದ ನತದೃಷ್ಟ ಸ್ಥಿತಿ ಹೇಗಿದೆ ಎಂದರೆ ಈ ಬಾರಿ ಶೇಕಡಾ ೬೦ರಷ್ಟು ಕಡಿಮೆ ಮಳೆಯಾಗಿದ್ದು ಇಲ್ಲಿನ ರೈತರು ಕಂಗಾಲಾಗಿ ಹೋಗಿದ್ದು, ಅವರ ದೇಹದಲ್ಲೆಲ್ಲಾ ನಿರಾಶೆಯ ದಟ್ಟ ಕಾರ್ಮೋಡ ಕವಿದಿದೆ. ಉತ್ತರ ಪ್ರದೇಶದ ಅನ್ನದಾತರು ಒಂದೆಡೆ ಅನ್ನಕ್ಕಾಗಿ ಪರದಾಡುತ್ತಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ ಮಾಯಾವತಿ ಅವರ ‘ಮಹತ್ವಾಕಾಂಕ್ಷೆ’ಯ ಸುಮಾರು ೫೦ ಕೋಟಿ ರೂ ವೆಚ್ಚದ ಪ್ರತಿಮೆ ನೋಯ್ಡಾ ಬಳಿ ನಿರ್ಮಾಣವಾಗುತ್ತಿದೆ. ಇನ್ನೊಂದು ವಿಚಾರ ಎಂದರೆ ದೆಹಲಿಯಲ್ಲಿರುವ ಮಾಯಾವತಿ ಅವರ ನಿವಾಸ ‘ಕೇವಲ’ ನೂರು ಕೋಟಿ ಖರ್ಚಿನಲ್ಲಿ ನಿರ್ಮಾಣವಾಗಿದೆ. ರಾಜರ ಅರೆಮನೆಗಳಿಗೇನೂ ಕಮ್ಮಿಯಿಲ್ಲದಂತಿದೆ ಆ ಮನೆ. ಅದು ಅವರ ವೈಯಕ್ತಿಕ ವಿಚಾರ ಬಿಡಿ! ಆದರೆ ಈಗಿರುವ ಬರ ಪರಿಸ್ಥಿತಿಗೆ ನಗ್ನ ಸಾಕ್ಷಿಯಾಗಿರುವ ಇಲ್ಲಿನ ರೈತರ ಬವಣೆ ಕೇಳುವವರು ಯಾರು? ಮಳೆ ಬರಬೇಕಿದ್ದ ಸಂದರ್ಭದಲ್ಲಿ ಬಿರುಬಿಸಿಲು ಒಬ್ಬೊಬ್ಬ ರೈತರ ಬದುಕನ್ನೇ ಕಿತ್ತುತಿನ್ನುತ್ತಿದೆ. ಒಟ್ಟಾರೆ ಬರ ಪರಿಸ್ಥಿತಿಯಲ್ಲಿ ಬದುಕು ಹೇಳತೀರದಂತಾಗಿದ್ದು, ಹಲವು ಮಂದಿ ಈಗಾಗಲೇ ಬೇರೆಡೆಗೆ ವಲಸೆ ಹೋಗಿಯಾಗಿದೆ.

ಒಂದು ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಸುಮಾರು ೧,೦೦,೦೦೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಇಷ್ಟೆಲ್ಲಾ ಯೋಜನೆ, ಕಾರ್ಯಕ್ರಮಗಳನ್ನು ಕೈಗೊಂಡರೂ ರೈತರ ಸಾವಿನ ಸಂಖ್ಯೆ ಇಳಿಮುಖ ಕಂಡಿಲ್ಲ ಎಂದಾದರೆ ಇದರ ಅರ್ಥ ಯಾವುದೇ ಯೋಜನೆಯಾಗಲೀ ರೈತರಿಗೆ ತಲುಪುತ್ತಿಲ್ಲ ಎಂಬುದು. ಉಳಿದ ರಾಜ್ಯಗಳಂತೆ ಕರ್ನಾಟಕ ರೈತರು ಕಡುಸಂಕಟದಲ್ಲಿ ಜೀವನಸಾಗಿಸುತ್ತಿದ್ದಾರೆ. ಸರ್ಕಾರೀ ಮೂಲಗಳೇ ಮಾಹಿತಿ ನೀಡಿರುವಂತೆ ರಾಜ್ಯದಲ್ಲಿನ ಹಲವು ಜಿಲ್ಲೆಗಳಲ್ಲಿ ಉಂಟಾದ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಪರಿಣಾಮವಾಗಿ ೧೩೮೭ ಕೋಟಿ ರೂ ಹಣ ನಷ್ಟವಾಗಿದೆ. ಅನಾವೃಷ್ಟಿಗೆ ಅಂದಾಜು ೮೭೧ ಕೋಟಿ ರೂ ನಷ್ಟವಾಗಿದ್ದರೆ, ೫೧೬ ಕೋಟಿ ರೂ ನಷ್ಟ ಅಂದಾಜಿಸಲಾಗಿದೆ. ಈ ಮಧ್ಯೆ ಅನಾವೃಷ್ಟಿ ಮತ್ತು ಅತಿವೃಷ್ಟಿಗೆ ಕ್ರಮವಾಗಿ ೩೯೪ ಕೋಟಿ ರೂ ಹಾಗೂ ೩೧೭ ಕೋಟಿ ರೂ ಹಣ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದೆ ಎಂದು ಸರ್ಕಾರಿ ಅಧಿಕಾರಿಗಳೇ ತಿಳಿಸಿದ್ದಾರೆ. ಇವೆಲ್ಲದರ ನಡುವೆ ಸರ್ಕಾರ ಇತ್ತೀಚೆಗೆ ೨೦ ಜಿಲ್ಲೆಗಳು ಮತ್ತು ೮೬ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದ್ದು, ಕರ್ನಾಟಕದ ಸದ್ಯದ ಪರಿಸ್ಥಿತಿ ಅತ್ಯಂತ ಹೀನಾಯವಾಗಿಬಿಟ್ಟಿದೆ ಎಂಬುದು ಇದರಿಂದಲೇ ಸ್ಪಷ್ಟವಾಗಿದೆ.

ಈ ಬಾರಿಯ ಆರ್ಥಿಕ ವರ್ಷದ ಐದು ತಿಂಗಳಲ್ಲೇ ೫೦ಕ್ಕಿಂತಲೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷದ ಜುಲೈ ತಿಂಗಳಲ್ಲಿ ಆತ್ಮಹತ್ಯೆಯ ಅತಿಎಹಚ್ಚು ಪ್ರಕರಣಗಳು ದಾಖಲಾಗಿದ್ದು, ಶಿವಮೊಗ್ಗದಲ್ಲಿ ೭, ತುಮಕೂರು ೬, ಬೆಳಗಾವಿ ಮತ್ತು ಹಾಸನ ೫, ಚಿಕ್ಕಮಗಳೂರು, ಬೀದರ್, ದಾವಣೆಗೆರೆ ಮತ್ತು ಬಿಜಾಪುರದಲ್ಲಿ ೩, ಚಿತ್ರದುರ್ಗ, ದಕ್ಷಿಣಕನ್ನಡ ೨ ಹಾಗೂ ಮೈಸೂರಿನಲ್ಲಿ ಒಂದು ಆತ್ಮಹತ್ಯೆ ಪ್ರಕರಣ ದಾಖಲಾಗಿದೆ! ಕಳೆದ ಒಂಬತ್ತು ವರ್ಷಗಳಿಂದ ಕರ್ನಾಟಕ ಬರ ಪರಿಸ್ಥಿತಿ ಎದುರಿಸುತ್ತಿರುವ ಕರ್ನಾಟಕ್ಕೆ ಈ ಬಾರಿಯ ಬರ ಇನ್ನಷ್ಟು ಘಾಸಿಗೋಳಿಸಿರುವುದು ದುರಂತ. ೨೦೦೮-೦೯ರಲ್ಲಿ ಸುಮಾರು ೩೩೭ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇತ್ತೀಚಿನ ವರದಿಗಳಲ್ಲಿ ದಾಖಲಾಗಿದ್ದು, ಸದ್ಯದ ವಿಪರೀತ ಬರ ಪರಿಸ್ಥಿತಿಯಿಂದಾಗಿ ಈ ಸಂಖ್ಯೆ ಇನ್ನಷ್ಟು ಏರಲಿದೆ ಎಂಬ ಆತಂಕ ಕಾಡತೊಡಗಿದೆ.

ಹಾಗೆಂದ ಮಾತ್ರಕ್ಕೆ ರೈತರ ಆತ್ಮಹತ್ಯೆಗೆ ಸಂಪೂರ್ಣ ಸರ್ಕಾರವೇ ಹೊಣೆ ಎಂದೆನ್ನಲಾಗದು. ಮಾರುಕಟ್ಟೆ ಅಸ್ಥಿರತೆ, ಹವಾಮಾನ ವೈಪರೀತ್ಯ, ಹಳ್ಳಿಗಳ ನಿರ್ಲಕ್ಷಿಸುವ ಅಧಿಕಾರಶಾಹಿಯ ದುರ್ವರ್ತನೆಗಳು, ಕೆಲವೊಮ್ಮೆ ತಮ್ಮ ಇತಿ-ಮಿತಿ ಅರಿಯದೆ ತಂದುಕೊಂಡ ಆರ್ಥಿಕ ಹೊರೆಗಳು ರೈತರ ಆತ್ಮಹತ್ಯೆಗಳಿಗೆ ಕಾರಣ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಸಾವುಗಳನ್ನು ತಪ್ಪಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳು ಮಾತ್ರ ಇಂದಿಗೂ ಪ್ರಶ್ನಾರ್ಹವಾಗೇ ಉಳಿದಿವೆ. ಸರ್ಕಾರದ ಚಿಂತನೆ, ಯೋಜನೆಗಳು ಸಕಾಲದಲ್ಲಿ ರೈತರನ್ನು ತಲುಪುವಂತಾಗಿದ್ದಾರೆ ಈ ಪರಿಯ ಅನಾಹುತ ಇಂದು ನಮ್ಮ ಕಣ್ಣಮುಂದಿರುತ್ತಿರಲಿಲ್ಲ. ಹಾಗೆ ನೋಡಿದರೆ ದೇಶದಲ್ಲಿನ ಕೋಟ್ಯಾಧಿಪತಿ ಉದ್ಯಮಿಗಳು, ಎಲ್ಲ ಪಕ್ಷಗಳು, ಪ್ರತಿಯೊಬ್ಬ ರಾಜಕಾರಣಿ, ಏರ್‌ಕಂಡಿಷನ್ ಕೋಣೆಯಲ್ಲಿ ಕುಳಿತು ಭಾರತ ಪ್ರಕಾಶಿಸುತ್ತಿದೆ ಎಂದು ಬೊಬ್ಬಿಡುವ ಕಾರ್ಪೊರೇಟ್‌ಗಳು, ನಗರಗಳಲ್ಲಿ ಕುಳಿತು ಝಗಮಗಿಸುವ ಬದುಕಿನೊಂದಿಗೆ ಥಳಥಳಿಸುತ್ತಿರುವ ನಾವು, ಈ ಸಮಾಜ, ವ್ಯವಸ್ಥೆ ಎಲ್ಲರೂ ಅನ್ನದಾತನ ಆಕ್ರಂದನಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ನೇರ ಹೊಣೆ. ಇದು ವಾಸ್ತವ ಮತ್ತು ಎಲ್ಲರೂ ಒಪ್ಪಲೇಬೇಕಾದ ಸತ್ಯ.

ಗ್ರಾಮೀಣ ಭಾರತವನ್ನು ಸಂಪೂರ್ಣ ನಿರ್ಲಕ್ಷಿಸಿದ್ದರಿಂದಲೇ ಇಂದು ಎಲ್ಲಾ ಕರಾಳ ವಿಪರ್ಯಾಸಗಳಿಗೂ ನಾವು ಸಾಕ್ಷಿಯಾಗುತ್ತಿದ್ದೇವೆ. ಗ್ರಾಮೀಣ ಭಾರತೀಯರನ್ನು ನಾವು ಎಲ್ಲಿರವರೆಗೆ ಕೆಟ್ಟದಾಗಿ ಕಾಣುತ್ತೇವೆ ಎಂದರೆ ನಮ್ಮ ಮನೆ ನಾಯಿಗೂ, ಬಡ ನಿರ್ಗತಿಕನಿಗೂ ವ್ಯತ್ಯಾಸವೇ ಇರುವುದಿಲ್ಲ. ನಮ್ಮ ನಡೆ, ವರ್ತನೆಗಳೇ ನಗರ ಮತ್ತು ಗ್ರಾಮಗಳ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚಿಸಿರುವುದು. ಅದೆಲ್ಲಾ ಇರಲಿ, ಇನ್ನು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕೃಷಿ ಮಾಡುತ್ತೇವೆ ಎಂಬ ಭಾವ ಇಂದಿನ ಯುವಜನಾಂಗದಲ್ಲಂತೂ ಖಂಡಿತಾ ಇಲ್ಲ. ಎಲ್ಲ ಹೆತ್ತವರೂ ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕೆಂದೇ ಬಯಸುತ್ತಾರೆ. ಅದಕ್ಕಾಗಿ ಲಕ್ಷಗಟ್ಟಲೆ ಹಣಸುರಿಯಲು ತಯಾರಾಗಿರುತ್ತಾರೆ. ಆದರೆ ಯಾರೊಬ್ಬನೂ ತನ್ನ ಮಗ ಯಶಸ್ವಿ ಕೃಷಿಕ ಆಗಬೇಕೆಂದು ಬಯಸುವುದೇ ಇಲ್ಲ. ಏಕೆಂದರೆ ಎಲ್ಲಿಯವರೆಗೆ ನಮ್ಮ ದೇಶದ ರೈತರೂ ಮುಖ್ಯವಾಹಿನಿಗೆ ಬರುವುದಿಲ್ಲವೋ, ಎಲ್ಲಿಯವೆರೆಗೆ ನಮ್ಮ ರೈತರನ್ನು ‘ನಮ್ಮವರೆಂದು’ ಸ್ವೀಕರಿಸುವುದಿಲ್ಲವೋ, ಎಲ್ಲಿಯವೆರೆಗೆ ನಗರ-ಗ್ರಾಮಗಳ ಅಂತರ ಕಡಿಮೆಯಾಗುವುದಿಲ್ಲವೋ, ಎಲ್ಲಿಯವರೆಗೆ ರೈತ ಆತ್ಮಹತ್ಯೆ ಕೊನೆಗೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಕೃಷಿ ಎಂದರೆ ಎಲ್ಲರಿಗೂ ಅಲರ್ಜಿಯಾಗಿಯೇ ಇರಲಿದೆ ಮತ್ತು ರೈತನ ಮಗ ರೈತನಾಗಿಯೇ ಇರುತ್ತಾನೆ. ನಮ್ಮ ‘ನ್ಯಾಯ’ವೂ ಇದೇ!!

- ರಾಘವ ಶರ್ಮ

ಮುಂದೆ ಓದಿ

ರಾಜ್ಯ - ರಾಷ್ಟ್ರ

ನವದೆಹಲಿ:ಅನೇಕ ಊಹಾಪೋಹಗಳಿಗೆ ಕಾರಣವಾಗಿದ್ದ ಚರ್ಚೆಗೆ ಗ್ರಾಸವಾಗಿದ್ದ ಆರುಷಿ ತಲ್ವಾರ್ ಕೊಲೆ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ದೊರಕಿದೆ.
ನೊಯ್ಡಾದಲ್ಲಿ 2008ರ ಮೇ ತಿಂಗಳಲ್ಲಿ ನಿಗೂಢವಾಗಿ ಕೊಲೆಯಾಗಿರುವ ಬಾಲಕಿ ಆರುಷಿ ತಲ್ವಾರ್ ಎಂಬಾಕೆಯ ಮೊಬೈಲ್ ದೂರವಾಣಿಯನ್ನು ಇದೀಗ ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಮೊಬೈಲ್ ದೂರವಾಣಿ ಇಡೀ ಪ್ರಕರಣವನ್ನು ಬೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ವಿಶ್ವಾಸ ವ್ಯಕ್ತವಾಗುತ್ತಿದೆ.ಉತ್ತರ ಪ್ರದೇಶದ ಬುಲಂದ್ ಶಹರ್ ಎಂಬಲ್ಲಿಂದ ಈ ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು ಸಿ.ಬಿ.ಐ.ಗೆ ಇದನ್ನು ಹಸ್ತಾಂತರಿಸಲಾಗಿದೆ.




ಘಟನೆ ಹಿನ್ನಲೆ

ಆರುಷಿ ತಲ್ವಾರ್ ಎಂಬಾಕೆ ಹಾಗೂ ಆಕೆಯ ಮನೆಯ ಕೆಲಸದಾಳು ಹೇಮರಾಜ್ ಎಂಬವರನ್ನು ನೋಯ್ಡಾದಲ್ಲಿ 2008ರ ಮೇ ತಿಂಗಳಲ್ಲಿ ಕೊಲೆ ಗೈಯಲಾಗಿತ್ತು. ಇದೊಂದು ನಿಗೂಢವಾದ ಕೊಲೆ ಪ್ರಕರಣ ಎಂದೇ ಬಿಂಭಿಸಲ್ಪಟ್ಟಿತ್ತು. ನೋಯ್ಡಾದಲ್ಲಿ ನಡೆದ ಈ ಕೊಲೆ ಪ್ರಕರಣದ ಇಡೀ ರಾಷ್ಟ್ರವನ್ನು ತಲ್ಲಣಗೊಳಿಸಿತ್ತು. ಘಟನೆಯ ಕುತೂಹಲಕಾರಿ ವಿಷಯವೆಂದರೆ ಮೊಬೈಲ್ ದೂರವಾಣಿ ಬಾಲಕಿ ಕೊಲೆಯಾದ ದಿನದಿಂದ ನಾಪತ್ತೆಯಾಗಿತ್ತು. ಈ ಕಾರಣದಿಂದಾಗಿಯೇ ಈ ಕೊಲೆಗೆ ಸಂಬಂಧ ಪಟ್ಟ ಮಹತ್ವದ ಸುಳಿವು ಮೊಬೈಲ್ ನಿಂದ ದೊರಕುವ ವಿಶ್ವಾಸ ಪೊಲೀಸರದ್ದು.

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಗೋವಿಂದ ದಾಸ ಕಾಲೇಜು ಸುರತ್ಕಲ್


ಸುರತ್ಕಲ್, ಸೆ.13: ಶಿಕ್ಷಣ ಇವತ್ತು ವ್ಯಾಪಾರೀಕರಣವಾಗುತ್ತಿದೆ. ಶಿಕ್ಷಣದ ಮಹತ್ವ ಕುಂದುತ್ತಿದೆ ಎಂದು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಇದರ ಸಹಾಯಕ ಪ್ರೋಫೆಸರ್ ಡಾ. ವರದೇಶ್ ಹಿರೇಗಂಗೆ ಅಭಿಪ್ರಾಯಪಟ್ಟರು.


ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ನಿರ್ಮಾಣಗೊಂಡ `ಸ್ಟುಡಿಯೋ' ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ, ಮಾಹಿತಿಗಳನ್ನು ಜನತೆಗೆ ನೀಡುವ ದೂರದರ್ಶನ ಇಂದು ಕೇವಲ ಮನೋರಂಜನೆಗೆ ಸೀಮಿತವಾಗಿದೆ ಎಂದವರು ಖೇದ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ರಚಿಸಿದ ಇ - ಪತ್ರಿಕೆ `ವಿದ್ಯಾದರ್ಪಣ.ಬ್ಲಾಗ್ ಸ್ಪಾಟ್ . ಕಾಮ್.'ನ್ನು ವಿದ್ಯಾದಾಯಿನಿ ಸಂಘದ ಅಧ್ಯಕ್ಷರಾದ ಎಂ.ಎಸ್.ಕೃಷ್ಣ ಭಟ್ ಅನಾವರಣಗೊಳಿಸಿದರು. ಕಾಲೇಜಿನ ಪ್ರಾಂಶುಪಾಲ ರಾಜ್ ಮೋಹನ್ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಧ್ಯಮ ಮತ್ತು ನೀತಿಸಂಹಿತೆ ಕುರಿತು ವರದೇಶ್ ಹಿರೇಗಂಗೆ ವಿಶೇಷ ಉಪನ್ಯಾಸ ನೀಡಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಅಕ್ಷತಾ ಭಟ್ ಸಿ.ಎಚ್. ಸ್ವಾಗತಿಸಿದರು. ಉಪನ್ಯಾಸಕ ಹರೀಶ್ ಕೆ.ಆದೂರು ವಂದಿಸಿದರು.
ಇದೇ ಸಂದರ್ಭದಲ್ಲಿ ಅಪೂರ್ವ ತಾಳೆಗರಿ ಹಾಗೂ ಹಳೆಯ ಪತ್ರಿಕೆಗಳ ಪ್ರದರ್ಶನ ನಡೆಯಿತು.

ಮುಂದೆ ಓದಿ

ರಾಜ್ಯ - ರಾಷ್ಟ್ರ

ನವದೆಹಲಿ: ಪೈಲೆಟ್ ಇಲ್ಲದೆ ವಿಮಾನ ಓಡೋಲ್ಲ!!! ಇದೀಗ ಜೆಟ್ ಏರ್ ವೇಸ್ ಸಂಸ್ಥೆಗೆ ಇದು ಗೊತ್ತಾಗಿರ್ಬೇಕು...
ಕಾರಣ ಇಷ್ಟೇ ... ಸಂಸ್ಥೆಯ ಪೈಲೇಟ್ ಗಳು ಕಳೆದ 3 ದಿನಗಳಿಂದ ನಡೆಸುತ್ತಿದ್ದ ಮುಷ್ಕರ ರೂಪದ ರಜೆ ಕೊನೆಗೂ ಅಂತ್ಯವಾಗುವ ಸೂಚನೆ ಇದೀಗ ದೊರೆತಿದೆ. ಇಂದು ಕೊನೆಯ ಸುತ್ತಿನ ಚರ್ಚೆ ನಡೆಯಲಿದ್ದು ಈ ಸಂದರ್ಭ ತೆಗೆದುಕೊಳ್ಳುವ ತೀರ್ಮಾನದಲ್ಲಿ ಮುಷ್ಕರದ ಅಂತ್ಯ ನಿರ್ಣಯವಾಗಲಿದೆ.
ಇದೀಗ ಸಂಸ್ಥೆ ವಜಾಗೊಳಿಸಿದ 4ಪೈಲೆಟ್ ಗಳನ್ನು ಮರಳಿ ರತ್ಯವ್ಯಕ್ಕೆ ಸೇರಿಸಿಕೊಳ್ಳುವ ಬಗ್ಗೆ ಒಪ್ಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.


ಎಷ್ಟುಗಂಟೆಗೆ ಸಭೆ
ಶುಕ್ರವಾರ(ಇಂದು)ಬೆಳಗ್ಗೆ 11 ಗಂಟೆಗೆ ಈ ಸಭೆ ನಡೆಯಲಿದೆ.ಏತನ್ಮಧ್ಯೆ ಕಳೆದ ಕೆಲವು ದಿನಗಳಿಂದ ಪ್ರಯಾಣ ರದ್ದಾದ ವಿಮಾನದಿಂದಾಗಿ ಪ್ರಯಾಣಿಕರು ತೊಂದರೆಗೊಳಗಾಗುತ್ತಿದ್ದು ಶನಿವಾರದಿಂದ ಮತ್ತೆ ವಿಮಾನ ಹಾರಾಟ ನಡೆಸಲಿರುವ ನಿರೀಕ್ಷೆ ಅಡಳಿತ ಮಂಡಳಿಯದ್ದಾಗಿದ್ದು ಬುಕ್ಕಿಂಗ್ ಕಾರ್ಯ ಚುರುಕುಗೊಂಡಿದೆ ಎಂದು ತಿಳಿದುಬಂದಿವೆ. ಈಗಾಗಲೇ ಕರ್ತವ್ಯದಿಂದ ವಜಾಗೊಂಡಿರುವ ಪೈಲೆಟ್ ಗಳನ್ನು ಮರಳಿ ಸೇವೆಗೆ ಸೇರಿಸುವ ಬಗ್ಗೆ ಸಹಮತ ವ್ಯಕ್ತಗೊಂಡ ಹಿನ್ನಲೆಯಲ್ಲಿ ಈ ಕಾರ್ಯ ನಡೆಯುತ್ತಿದೆ .

ಮುಂದೆ ಓದಿ

ರಾಜ್ಯ - ರಾಷ್ಟ್ರ


ಮುಷ್ಕರದಿಂದಾಗಿ ವಿಮಾನ ನಿಲ್ದಾಣದಲ್ಲಿಯೇ ಉಳಿದ ವಿಮಾನಗಳು.

ನವದೆಹಲಿ: ಜೆಟ್ ಏರ್ ವೇಸ್ ಇಂದು 100 ವಿಮಾನಗಳ ಯಾನವನ್ನು ರದ್ದುಗೊಳಿಸಿದೆ. ವಿಮಾನಗಳ ಪೈಲೆಟ್ ಗಳ ಮುಷ್ಕರ ಇದೀಗ ಎರಡನೇ ದಿನಕ್ಕೆ ಪಾದಾರ್ಪಣೆ ಮಾಡಿದ ಹಿನ್ನಲೆಯಲ್ಲಿ ವಿವಿಧ ಪಟ್ಟಣಗಳಿಂದ ತೆರಳುವ ವಿಮಾನಗಳನ್ನು ರದ್ದುಗೊಳಿಸಲಾಯಿತು ಎಂದು ಮುಲಗಳು ತಿಳಿಸಿವೆ. ಬೆಳಗ್ಗಿನ ಹೊತ್ತಿನ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು ಇದರಿಂದಾಗಿ ವಿವಿದೆಡೆಗಳಿಗೆ ತೆರಳುವ ಪ್ರಯಾಣಿಕರು ತೀವ್ರ ತೊಂದರೆಯನ್ನನುಭವಿಸುವಂತಾಗಿದೆ.

ಮುಂದೆ ಓದಿ
| | |Home