ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ
ಪ್ರೆಂಚ್ ಕಾದಂಬರಿಗಾರ ಗುಸ್ತಾವ್ ಫ್ಲಾಬೇರ್ನ ಜನಪ್ರಿಯ ಕಾದಂಬರಿ `ಮದಾಂ ಬೊವಾರಿ. ಮಧ್ಯಮ ವರ್ಗದ ಹೆಣ್ಣೊಬ್ಬಳು ಆಸೆ ಆಕಾಂಕ್ಷೆಗಳನ್ನು ಹೊತ್ತು, ಸಾಮಾನ್ಯ ವ್ಯಕ್ತಿತ್ವದವನನ್ನು ಮದುವೆಯಾಗಿ ತನ್ನ ಕನಸುಗಳಿಗೆ ತೆರೆ ಹಾಕಿಕೊಳ್ಳುತ್ತಾಳೆ. ಆದರೆ ಅವಳ ಬದುಕು ಅಲ್ಲಿಗೆ ಅಂತ್ಯವಾಗುವುದಿಲ್ಲ. ತಾನು ಕಂಡ ಕನಸಿನಂತೆ ಬದುಕು ರೂಪಿಸಬೇಕೆನ್ನುವಾಗ ಪ್ರೇಮಿಯೊಬ್ಬನ ತೆಕ್ಕೆಗೆ ಜಾರುತ್ತಾಳಾದರೂ ಅದೆಲ್ಲಾ ಕ್ಷಣಿಕ ಮತ್ತು ಸ್ವಾರ್ಥವೇ ತುಂಬಿರುವ ಜನರಿಗೆ ಸುಖದ ಮಹಲು. ಅವರ ಸಾಂಗತ್ಯದಲ್ಲಿ ತನ್ನ ಆಸೆಗಳೆಲ್ಲಾ ಕೈಗೂಡದೆನ್ನುವ ನಿರಾಶೆ ಕಾಡುತ್ತಲೇ ಇರುತ್ತದೆ. ಹೀಗೆ ಭೃಂಗದ ಬೆನ್ನೇರಿ ಕಲ್ಪನಾವಿಲಾಸದಲ್ಲಿ ತೇಲುವ ಬೊವಾರಿಗೆ ಕನಸುಗಳೇ ಬದುಕಾಗುತ್ತವೆ. ಕಂಡ ಕನಸುಗಳೆಲ್ಲಾ ಬರೀ ಭ್ರಮೆಯೆನಿಸುತ್ತದೆ.


ವಾಸ್ತವದ ಅರಿವಾಗುವ ಹೊತ್ತಿಗೆ ಬದುಕು ಇಷ್ಟೇನಾ? ಅನ್ನುವ ಕಟು ಸತ್ಯ, ಉನ್ಮಾದದಿಂದ ಎತ್ತಿ ನೆಲಕ್ಕೆ ಅಪ್ಪಳಿಸುತ್ತದೆ.
ಈ ಕಾದಂಬರಿಯ ಮುಖ್ಯ ಪಾತ್ರ ಬೊವಾರಿಯಾದರೂ ಕಾದಂಬರಿ ಆರಂಭವಾಗುವುದು ಚಾರ್ಲ್ ಸ ಬೊವಾರಿ ಎಂಬ ಹುಡುಗನಿಂದ. ಕುಡುಕ ಮತ್ತು ಜವಾಬ್ದಾರಿಗಳಿಲ್ಲದ ತಂದೆಯ ಮಗನಾದರೂ, ಮಗನ ಉನ್ನತಿಗಾಗಿ ಹಪಹಪಿಸುವ ತಾಯಿಯ ಕನಸಿನಂತೆ ಉನ್ನತ ಶಿಕ್ಷಣ ಪಡೆದ ಚಾರ್ಲ್ ಸ ವೃತ್ತಿಯಲ್ಲಿ ವೈದ್ಯನಾಗುತ್ತಾನೆ.

ಹೀಗೆ ತನ್ನ ವೃತ್ತಿಯಲ್ಲಿ ಹೆಸರುಗಳಿಸಿಕೊಂಡ ಚಾರ್ಲ್ಸಗೆ ಲೊಬಟರ್ೊದ ಹೊಲಮನೆಯ ಮಾಲೀಕ ರುವೊಲ್ಟ್ಗೆ ಚಿಕಿತ್ಸೆ ನೀಡುವ ಸಂದರ್ಭ ಎದುರಾಗುತ್ತದೆ. ಆತನ ಮಗಳು ಎಮ್ಮಳ ಉಪಚಾರಿಕೆ ಪ್ರೇಮಕ್ಕೆ ತಿರುಗಿ, ವೈದ್ಯನ ಹೆಂಡತಿಯಾಗಿ ಕನಸುಗಳ ಮೂಟೆಯನ್ನೇ ಹೊತ್ತುಕೊಂಡು `ಮೆದಾಂ ಬೊವಾರಿಯಾಗಿ ಬರುತ್ತಾಳೆ.
ಚಾರ್ಲ್ ಸನಿಗೆ ತನ್ನ ವೃತ್ತಿಯಿಂದಾಗಿ ಶ್ರೀಮಂತರ ಪಾರ್ಟಿಗಳಲ್ಲಿ ಭಾಗವಹಿಸುವ ಅವಕಾಶ ದೊರಕುತ್ತದೆ. ಆತ ತಾನು ಅತೀಯಾಗಿ ಪ್ರೀತಿಸುವ ಎಮ್ಮಳ ಜೊತೆಗೆ ಆಹ್ವಾನಗಳಿಗೆ ಹೋಗುತ್ತಾನಾದರೂ, ಅವಳು ಅವನನ್ನು ಮತ್ತು ಅವನ ಅಭಿರುಚಿಗಳನ್ನು ನಿಂದಿಸುತ್ತಾಳೆ. ಆತ ತನ್ನ ವೃತ್ತಿಗೆ ತಕ್ಕುದಾದ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಅನ್ನುವ ನೋವು ಅವಳನ್ನು ಕಾಡುತ್ತಲೇ ಇರುತ್ತದೆ. ಅದೇ ಮುಂದೆ ಗಂಡನ ವೃತ್ತಿಯನ್ನು ವ್ಯವಹಾರದ ಮಟ್ಟಕ್ಕೆ ಇಳಿಸಿ, ರೋಗಿಗಳಿಂದ ಬಾಕಿ ಇರುವ ಹಣವನ್ನು ವಸೂಲಿ ಮಾಡಿಕೊಂಡು, ಐಶರಾಮದ ಜೀವನಕ್ಕೆ ನಾಂದಿ ಹಾಡುತ್ತಾಳೆ. ಆ ಸಮಯದಲ್ಲಿ ಅವಳು ತುಂಬು ಗರ್ಭಿಣಿ.
ಚಾರ್ಲ್ ಸ ತನ್ನ ವೃತ್ತಿಯನ್ನು ಯಾನ್ಪಿಲ್ ಪಟ್ಟಣಕ್ಕೆ ಸ್ಥಳಾಂತರಿಸುತ್ತಾನೆ. ಅಲ್ಲಿ ಒಮ್ಮೆ ಬೊವಾರಿ ದಂಪತಿಗಳನ್ನು ಪಾರ್ಟಿಗೆ ಆಹ್ವಾನಿಸುತ್ತಾನೆ ಒಮೇ. ಆ ಪಾರ್ಟಿಯಲ್ಲಿ ಎಮ್ಮ ಬೊವಾರಿಗೆ ಲಿಯಾನ್ ದುಪ್ವಿ ಎಂಬ ಯುವಕನ ಪರಿಚಯವಾಗುತ್ತದೆ. ಶ್ರೀಮಂತಿಕೆಯ ಕನಸು ಕಾಣುತ್ತಿದ್ದ ಎಮ್ಮಳಿಗೆ ಆತನ ಸಾಂಗತ್ಯ, ಹಾವಭಾವ, ಮಾತು, ಮೌನಗಳು ತುಂಬಾ ಇಷ್ಟವಾಗುತ್ತವೆ. ಅವಳಿಗೆ ತಾನು ಮದುವೆಯಾದ ಹೆಣ್ಣು ಅನ್ನುವ ಮಾನಸಿಕ ಪರಿಧಿಯಿದ್ದರೂ ಅದನ್ನು ಮೀರಿ ಕನಸುಗಳ ನಾಗಲೋಟ ಸಾಗುತ್ತದೆ. ಎಮ್ಮಳ ಪ್ರೀತಿಗೆ ಲಿಯಾನ್ ಕೂಡ ಬಿದ್ದಿರುತ್ತಾನೆ. ಅವಳ ಬಗೆಗಿರುವ ತನ್ನ ಪ್ರೀತಿಯನ್ನು ತೆರೆದಿಡುವ ಹಂಬಲವಿದ್ದರೂ ತೋರಿಸಿಕೊಳ್ಳಲಾರದೆ ಅಸಹಾಯಕನಾಗುತ್ತಾನೆ.

ಎತನ್ಮಧ್ಯೆ ಎಮ್ಮ ಹೆಣ್ಣು ಮಗುವಿಗೆ ಜನ್ಮನೀಡುತ್ತಾಳೆ. ಆ ಮಗು ಅವಳಿಗೆ ಕುರೂಪಿಯಾಗಿ ಕಾಣುತ್ತದೆ. ತನ್ನ ಸೌಂದರ್ಯದ ಎದುರು ಮಗುವನ್ನು ದೂರ ತಳ್ಳುವ ನಿರ್ಧಯಿ ತಾಯಿಯಾಗುತ್ತಾಳೆ. ತನಗೆ ಇದುವರೆಗೂ ಇದ್ದೇ ಇರುವ ನಿಸ್ಸಾಯಕತೆಗೆ ಅವಳಲ್ಲಿ ಗಂಡು ಮಗುವೇ ಬೇಕೆನ್ನುವ ಹಂಬಲ. ಗಂಡಾದರೆ ದೇಶಾಂತರಗಳ ಮತ್ತು ಎಲ್ಲಾ ಭಾವನೆಗಳ ಶೋಧಕ್ಕೂ ಕೈ ಹಾಕಬಲ್ಲನೆಂಬ ಆಶಯವಿರುತ್ತದೆ. ಆದರೆ ಹೆಣ್ಣು ಹೆಜ್ಜೆ ಹೆಜ್ಜೆಗೂ ಹಿಮ್ಮೆಟ್ಟಬೇಕು. ದೈಹಿಕ ದುರ್ಬಲತೆ, ಕಾನೂನಿಗನುಗುಣವಾಗಿ ಅಧೀನತೆ, ಸಂಪ್ರದಾಯಿಕ ನಿರ್ಬಂಧ ಇವೆಲ್ಲದರ ಬಂಧಿಯಾಗಿಯೇ ಉಳಿಯಬೇಕಾದಿತ್ತೆನ್ನುವ ಭಯವೂ ಇರುತ್ತದೆ.

ಹಾಗೆ ಸುಖದ ಬೆನ್ನು ಹತ್ತಿ ಹೊರಟ ಅವಳಿಗೆ ಲಿಯಾನ್ ಆತ್ಮೀಯನಾಗುತ್ತಾನೆ. ಚಾರ್ಲ್ಸನಲ್ಲಿಲ್ಲದ ಗುಣಗಳನ್ನು, ಬಯಕೆಗಳನ್ನು ಲಿಯಾನ್ ತನ್ನ ಪ್ರೇಮಿ ಎಂಬ ಭ್ರಮೆಯಲ್ಲಿ ಕಂಡುಕೊಳ್ಳುತ್ತಾಳೆ. ಅವನಿಗೆ ಉಡುಗೊರೆಗಳನ್ನು ನೀಡುತ್ತಾಳೆ. ಆದರೂ ತನ್ನ ಉದ್ದುದ್ದ ಭಾವನೆಗಳನ್ನು ಅದುಮಿಟ್ಟು ಸಚ್ಚರಿತ್ರಳೆಂದುಕೊಳ್ಳುವ ಹೆಮ್ಮೆಯೂ ಅವಳಿಗೆ ಬೇಕು. ಹೀಗೆ ತನ್ನ ಗಂಡನನ್ನು ಮಗುವನು ನಿರ್ಲಕ್ಷಿಸಿದ ಅವಳು ಲಿಯಾನ್ನಂತೆಯೇ ಮೂವತ್ತು ವರ್ಷ ವಯಸ್ಸಾದರೂ, ಮದುವೆಯಿಲ್ಲದ ಒಳ್ಳೆಯ ವರಮಾನವಿರುವ, ಗಟ್ಟಿ ಹೃದಯದ, ಚತುರ ಮನುಷ್ಯ ರುದೊಲ್ಪ್ನ ತೆಕ್ಕೆಗೆ ಜಾರುತ್ತಾಳೆ. ಹಸಿದ ರುದೊಲ್ಪ್ಗೆ ಹೆಣ್ಣೆಂದರೆ ಮೋಜು ಮಾತ್ರ. ಅದನ್ನು ತಿಳಿಯದ ಎಮ್ಮ ಅವನನ್ನು ಗಾಢವಾಗಿ ಪ್ರೀತಿಸುತ್ತಾಳೆ. ಅವನ ಸುಖದ ರುಚಿಕೊಂಡ ಅವಳು ಅವನಿಲ್ಲದೆ ಬದುಕೇ ಇಲ್ಲವೆನ್ನುವವರೆಗೂ ಬರುತ್ತಾಳೆ. ಆದರೆ ರುದೊಲ್ಫ್ ಹೆಣ್ಣಿಗ. ನಿಂತ ನೀರಾಗಲಾರ. ಎಮ್ಮಳನ್ನು ದೂರವಿಡುತ್ತಾನೆ. ಇದನ್ನು ಅರಿತ ಎಮ್ಮ ತಾನು ಆವನಿಗೆ ಒಲಿದುದ್ದಕ್ಕಾಗಿ ಪಶ್ಚಾತ್ತಾಪವಿದೆಯೇ ಅಥವಾ ಅವನನ್ನು ಇನ್ನಷ್ಟು ಪ್ರೀತಿಸಬೇಕೆ ಎಂಬ ಜಿಜ್ನಾಸೆಗೆ ಬೀಳುತ್ತಾಳೆ. ಪ್ರೇಮ, ಪ್ರಣಯ ಎನ್ನುವ ಸರಳ ಪ್ರಮೇಯದಲ್ಲಿ ಗೊಂದಲವೆಲ್ಲ ಏಕೆ? ಅನ್ನುವ ರೂದೊಲ್ಫ್ ಕೇವಲ ಅವಳನ್ನು ಒಲಿಸಿಕೊಳ್ಳಲು ಪತ್ರ ಬರೆದಿದ್ದ ಮತ್ತು ಅದು ಹೃದಯದಿಂದ ಅಲ್ಲ. ಸತ್ಯದ ಅರಿವಾಗಿ ಅವಳಲ್ಲಿಯ ಕಾವು, ಕನಸುಗಳೆಲ್ಲಾ ಮುರಿದು ಬಿದ್ದು ಹತಾಶಳಾಗುತ್ತಾಳೆ.
ಎಮ್ಮ ಮತ್ತೆ ಭೃಂಗದ ಬೆನ್ನೇರಿ ಸಾಗುತ್ತಾಳೆ. ಲಿಯಾನ್ ಅವಳಿಗಾಗಿ ಕಾದಿರುತ್ತಾನೆ. ತನ್ನ ಬಾಲ್ಯದ ನೆನಪುಗಳನ್ನು ಕೆದಕಿಕೊಂಡು ತಾನು ಕಟ್ಟಿದ ಗೋಪುರವನ್ನು ಇನ್ನಷ್ಟು ಜೀವಂತವಾಗಿಸುತ್ತಾಳೆ. ನಿನ್ನ ಎಲ್ಲಾ ಪ್ರೇಮಿಗಳನ್ನು ತೊರೆದು ನನ್ನಲಿಯೇ ಅನುರಕ್ತನಾಗು ಎಂದು ಲಿಯಾನ್ನನ್ನು ಕಾಡುತ್ತಾಳೆ. ಅವಳಿಂದ ಸುಖ ಉಂಡ ಲಿಯಾನ್ ಕೊನೆಗೂ ನಮ್ಮಿಬ್ಬರ ಸಂಬಂಧ ಬಿರುಕು ಬಿಡುವಂತೆ ಏನಾದರೊಂದು ಘಟಿಸಬಾರೆದೆ? ಎಂದು ಹಲುಬುತ್ತಾನೆ.
ಎಮ್ಮ ಪ್ರತಿ ಗುರುವಾರವೂ ಲಿಯಾನ್ಗಾಗಿ ಹೋಟೇಲ್ನಲ್ಲಿ ಉಳಿದು ಅವನಿಂದ ಸುಖ ಅನುಭವಿಸುತ್ತಾಳಾದರೂ ತನ್ನ ಖರ್ಚಿನಿಂದಲೇ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ. ಸಾಲ ಪತ್ರಗಳ ಮೊರೆ ಹೋದವಳು ಸಾಲದ ಹೊರೆಯನ್ನು ಎತ್ತಿಕೊಳ್ಳಬೇಕಾಗುತ್ತದೆ. ಸಾಲದ ಮೇಲೆ ಸಾಲ ಏರಿ ಜೀವನ ಪರ್ಯಂತ ಅದು ಮುಗಿಯುವುದಿಲ್ಲ ಅನ್ನುವ ಹೊತ್ತಿಗೆ ಮನೆಯ ಸಾಮಾನುಗಳೆಲ್ಲಾ ಹರಾಜಗುವ ಸ್ಥಿತಿ ತಲುಪುತ್ತದೆ. ತನ್ನ ಇಬ್ಬರೂ ಪ್ರೇಮಿಗಳ ನಡುವೆ ಹಾದರ ನಡೆಸಿದ ಅವಳು ಹಣಕ್ಕಾಗಿ ಅವರ ಮುಂದೆ ಕೈ ಚಾಚುತ್ತಾಳೆ.
`ಪ್ರೇಮದ ಮೇಲೆ ಬೀಸುವ ಶೀತ ಮಾರುತಗಳಲ್ಲಿ ಅತಿ ಶೀತಲ ಕೊರತೆ ಬರುವುದೆಂದರೆ ಹಣ ಬೇಡಿದಾಗ. ಅದು ಬೇರನ್ನು ಕಿತ್ತೆಸೆಯುತ್ತದೆ ಅನ್ನುವ ಸತ್ಯ ಗೋಚರಿಸುತ್ತದೆ.
ಮರೀಚಿಕೆಯ ಬೆನ್ನು ಹಿಡಿದವಳು ಕೊನೆಗೆ ಬದುಕು ಇಷ್ಟೆ ಅನ್ನುವ ಅತೃಪ್ತಿಯಲ್ಲಿ ವಿಷ ಸೇವಿಸಿ ಬದುಕಿಗೆ ವಿದಾಯ ಹೇಳುತ್ತಾಳೆ. ಆ ಸಮಯದಲ್ಲಿ ಚಾರ್ಲ್ಸ್ ನೇ ಎಲ್ಲವೂ ಆಗಿ, ತನ್ನ ಹೆತ್ತ ಕುಡಿಯನ್ನು ನೋಡಲು ಇಚ್ಛೆ ಪಡುತ್ತಾಳೆ. ಅವಳು ಉಳಿಸಿದ ಸಾಲದ ಶೂಲದಲ್ಲಿ ಸಿಲುಕಿ ಚಾರ್ಲ್ಸ್ ನೂ ಸಾಯುತ್ತಾನೆ. ಮುಂದೆ ಮಗಳು ಬರ್ಥ ಅಜ್ಜಿಯ ಊರಿಗೆ ಹೋದರೂ, ಒಂದು ಜವಳಿ ಕಾರ್ಖಾನೆಯಲ್ಲಿ ಕೂಲಿ ಹೆಣ್ಣಾಗಿ ಕೆಲಸ ಮಾಡುತ್ತಾಳೆ.
ಕಾದಂಬರಿಯ ಪೂರ್ವಾರ್ಧ ನಿಧಾನಗತಿಯಲ್ಲಿ ಸಾಗಿದರೂ ಉತ್ತರಾರ್ಧ ಲವಲವಿಕೆಯಂದ ಮತ್ತು ಕಾವ್ಯಾತ್ಮಕವಾಗಿ, ಸುಂದರ ಪದಗಳ ಜೋಡಣೆಯಿಂದ ಹೆಚ್ಚು ಕುತೂಹಲಕರವಾದ ರೀತಿಯಲ್ಲಿ ಓದಿಸಿಕೊಂಡು ಹೋಗುತ್ತದೆ.ಮದಾಂ ಬೊವಾರಿ ಒಮ್ಮೆ ಓದಲೇ ಬೇಕಾದ ಕೃತಿ. ಇದನ್ನು ಅನುವಾದಿಸಿದ ವಿ. ನಾಗರಾಜ ರಾವ್ ಅವರ ಪ್ರಯತ್ನವನ್ನು ಹೊಗಳಲೇಬೇಕು. ಈ ಪುಸ್ತಕವನ್ನು ಪ್ರಕಟಿಸುವವರು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಬೆಂಗಳೂರು 2.
- ಅನುಬೆಳ್ಳೆ

0 comments:

Post a Comment