ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಹಂಪಿ :ನಗುವೇ ನಿಜವಾದ ಜಾತ್ಯತೀತ ಜನತೆಯ ಪಕ್ಷ ಎಂದು ಗಂಗಾವತಿಯ ಬಿ. ಪ್ರಾಣೇಶ ಅವರು ಹೇಳಿದಾಗ ಪ್ರೇಕ್ಷಕ ಸಮೂಹದಲ್ಲಿ ಭಿನ್ನಮತದ ಸುಳಿವೇ ಇರಲಿಲ್ಲ.ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ನಗೆಯ ಅಲೆಗಳ ಜಾತ್ರೆಯಲ್ಲಿ ಅಸಂಖ್ಯೆ ಪ್ರೇಕ್ಷಕರು ನಗೆಗಡಲಲ್ಲಿ ಮಿಂದರು.
ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕದ 500ನೇ ವರ್ಷಾಚರಣೆ ಜನೋತ್ಸವದ ಎರಡನೇ ದಿನವಾದ ಇಂದು ಜರುಗಿದ ಹಾಸ್ಯಗೋಷ್ಠಿಯಲ್ಲಿ ನಾಡಿನ ಖ್ಯಾತ ಹಾಸ್ಯ ಕಲಾವಿದರಾದ ರಿಚರ್ಡ್ ಲೂಯಿಸ್, ಬಿ. ಪ್ರಾಣೇಶ್ ಹಾಗೂ ಎಂ.ಎಸ್. ನರಸಿಂಹಮೂರ್ತಿ ಅವರು ಹಾಸ್ಯ ಚಟಾಕಿಗಳ ಮೂಲಕ ನಗೆ ಪಟಾಕಿಯನ್ನೇ ಸಿಡಿಸಿದರು.ಒಬ್ಬೊಬ್ಬರು ಒಂದೊಂದು ನಗೆ ಪ್ರಸಂಗವನ್ನು ಪ್ರಸ್ತಾಪಿಸತ್ತಿದ್ದಂತೆಯೇ ಜನ ನಕ್ಕಿದ್ದೇ ನಕ್ಕಿದ್ದು. ಜನರ ಪ್ರತಿಕ್ರಿಯೆಯಿಂದ ಉತ್ತೇಜನಗೊಂಡ ಈ ಕಲಾವಿದರ ಹಾಸ್ಯ ಪ್ರವಾಹದಲ್ಲಿ ಸಮಯ ಸರಿದದ್ದೇ ಗೊತ್ತಾಗಲಿಲ್ಲ.
'ಕೃಷ್ಣದೇವರಾಯ ಬಿದಿಗೆ ಚಂದ್ರಮ'

ಶ್ರೀ ಕೃಷ್ಣದೇವರಾಯನ ಆಸ್ಥಾನದ ವಿದೂಷಕ ತೆನಾಲಿ ರಾಮಕೃಷ್ಣ ಮೊಘಲರ ದರ್ಬಾರಿನಲ್ಲಿ ವಿಜಯನಗರದ ಅರಸ ಕೃಷ್ಣದೇವರಾಯರನ್ನು ಬಿದಿಗೆಯ ಚಂದ್ರಮನೆಂದು ಬಣ್ಣಿಸಿದರಂತೆ. ಅದಕ್ಕೆ ರಾಜನ ಆಸ್ಥಾನಿಕರು ಆತನನ್ನು ಹೀಗಳೆದರಂತೆ. ತಕ್ಷಣವೇ ತೆನಾಲಿ ರಾಮಕೃಷ್ಣ , 'ಹುಣ್ಣಿಮೆ ಚಂದ್ರ ದಿನಗಳೆದಂತೆ ಕ್ಷೀಣವಾಗಿ ಅಮಾವಾಸ್ಯೆಯಂದು ಇಲ್ಲವಾಗುತ್ತಾನೆ. ಆದರೆ ಬಿದಿಗೆಯ ಚಂದ್ರ ದಿನೇ ದಿನೇ ಪ್ರವರ್ಧಮಾನನಾಗಿ, ಹುಣ್ಣಿಮೆಯಂದು ಹಾಲ ಬೆಳದಿಂಗಳು ಚೆಲ್ಲುತ್ತಾನೆಂದು ಪ್ರತ್ಯುತ್ತರ ನೀಡಿದನು. ಆತನ ಜಾಣ್ಮೆಗೆ ಎಲ್ಲರೂ ತಲೆದೂಗಿದರಂತೆ' ಎಂದು ಎಂ.ಎಸ್. ನರಸಿಂಹಮೂರ್ತಿ ಅವರು ಹೇಳಿದಾಗ ನೆರೆದ ಜನ ಸಮೂಹವೂ ತಲೆದೂಗಿತು.
ರಿಚರ್ಡ್ ಲೂಯಿಸ್ ಅವರು ಹೊಸಪೇಟೆಯ 'ಮೈನ್ಸ್, ವೈನ್ಸ್ ಮತ್ತು ಫೈ(ನಾ)ನ್ಸ್' ಬಗ್ಗೆ ವಿಡಂಬನಾತ್ಮಕವಾಗಿ ಮಾತನಾಡಿದರಲ್ಲದೆ, ಇಲ್ಲಿನ ಸೊಳ್ಳೆಗಳ ಜಾಣ್ಮೆಯನ್ನು ಕೊಂಡಾಡಿದರು.ಹಾಸ್ಯವನ್ನೇ ಪ್ರಾಣವಾಗಿಸಿಕೊಂಡ ಗಂಗಾವತಿಯ ಬಿ. ಪ್ರಾಣೇಶ್, ಮಕ್ಕಳಿಗೆ ಒತ್ತಡ ಹೇರಿ ಓದಿಸುವುದರ ವಿರುದ್ಧ ನಗೆಚಾಟಿ ಬೀಸಿದರು. ಒಂದು ಎರಡು ರಾಂಕ್ ಬರುವ ಡಿಗ್ರಿಯನ್ನು ಲೇವಡಿ ಮಾಡುತ್ತ, ಅಂತಹವರಿಗೆ 108 ಡಿಗ್ರಿ ಹೊಂದಿರುವ ಥರ್ಮಾಮೀಟರ್ ನೀಡಿ ಸನ್ಮಾನಿಸಬಾರದೇಕೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಪ್ರೇಕ್ಷಕ ಸಮೂಹವನ್ನು ಕೊನೆಯವರೆಗೂ ಹಿಡಿದಿಡುವಲ್ಲಿ ಯಶಸ್ವಿಯಾದ ಈ ಹಾಸ್ಯಗೋಷ್ಠಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಉದ್ಘಾಟಿಸಿದರು.ಅವರು ಈ ಸಂದರ್ಭದಲ್ಲಿ ಮಾತನಾಡಿ, ಆರೋಗ್ಯಕರ ಸಮಾಜಕ್ಕೆ ಆರೋಗ್ಯಕರ ಹಾಸ್ಯ ಒಳಿತನ್ನೇ ಮಾಡುತ್ತದೆ. ಎಲ್ಲ ವಯೋಮಾನಕ್ಕೆ ಒಪ್ಪುವ ಹಾಸ್ಯ ಒಳ್ಳೆಯ ಅಭಿರುಚಿ ಮೂಡಿಸುವುದು. ಹಾಸ್ಯವು ನಗೆಗಷ್ಟೇ ಸೀಮಿತವಾಗದೆ, ಸಮಾಜದಲ್ಲಿ ಜಾಗೃತಿಗೆ ಮುಂದಾಗಬೇಕೆಂದು ಅಭಿಪ್ರಾಯಪಟ್ಟರು.
ಅನಿಲ್ ದೇಸಾಯಿ ಅವರು ಕಾರ್ಯಕ್ರಮ ನಿರೂಪಿಸಿದರು.

0 comments:

Post a Comment