ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಅಂದು ಬೆಲ್ಲುಹೊಡೆದಂತೆ ನಾ ಕ್ಲಾಸಿಗೋಡಲಿಲ್ಲ. ಗಂಭೀರವಾಗಿ ಬಂದ ಉಪಾನ್ಯಾಸಕರ ಮುಂದೆ ಮನಸ್ಸಿಲ್ಲದ ಮನಸ್ಸಿನೊಂದಿಗೆ ಕೈಕಟ್ಟಿ ಕೂರಲಿಲ್ಲ. ಕಣ್ತೆರೆದು ನಿದ್ದೆಮಾಡಲಿಲ್ಲ. ಪಾಠ ಕೇಳಲಿಲ್ಲವೆಂದೂ ಅವರು ಶಿಕ್ಷೆ ನೀಡಲಿಲ್ಲ. ಅರ್ಥವಾಗದ ಉತ್ತರಗಳನ್ನು ಉರುಹೊಡೆದು ಇಪ್ಪತ್ತುಸಲ ಬರೆಯಲಿಲ್ಲ.ಅಂದು ನಮಗೆಲ್ಲಾ ಹೊಸ ಅನುಭವ...ಅಲ್ಲಿ ಕರಿಹಲಗೆಯೊಡನೆ ಬೆಳ್ಳಗಿನ ಸೀಮೆಸುಣ್ಣ ಅರ್ಥವಾಗದಂತೆ ಮಾತನಾಡಲಿಲ್ಲ. ಅಲ್ಲಿ ಕಂಡಿದ್ದು ಕಪ್ಪು ಬಂಡೆಗಳ ಮೇಲೆ ನೀರಧಾರೆಯ ಸರಸ. ಹನಿಹನಿ ನೀರೂ ಪಿಸುಗುಟ್ಟುತ್ತಿತ್ತು. ಅಂದು ದೃಶ್ಯಕಾವ್ಯದ ಪಾಠ ನಾಲ್ಕುಗೋಡೆಗಳ ನಡುವೆ ನಿದ್ದೆಬರಿಸುವ ಕ್ಲಾಸಿನಿಂದ ಮುಕ್ತಿ. ಮನಸ್ಸು ದೃಶ್ಯಕಾವ್ಯದ ಚಿತ್ತಾರ ಬಿಡಿಸಲು ತಯಾರಾಗಿತ್ತು. ಸಿಡಿಯುವ ಹನಿ,ಸೆಳೆಯುವ ಹಸಿರು, ಚಿಮ್ಮುವ ಉತ್ಸಾಹ, ಬೆನ್ನುತಟ್ಟುವ ಮಾರ್ಗದರ್ಶಕ...ಸುಪ್ತಮನಸ್ಸಿನಲ್ಲಡಗಿದ ದೃಶ್ಯಕವಿಗೆ ಸೂರ್ಯೋದಯವಾಗಲು ಇನ್ನೇನು ಬೇಕು?


ದಿಡುಪೆ ಜಲಪಾತದ ತಟದಲ್ಲಿ ಛಾಯಾಗ್ರಹಣ ತರಬೇತಿ...ಕಲ್ಪನಾ ಕಲೆಗೆ ಭಾವನಾತ್ಮಕ ವೇದಿಕೆ. ಜಾರುವ ಕಲ್ಲನ್ನು ಕೊರೆಯುವ ಚಳಿಯನ್ನು ಮೀರಿ ತಾವು ಸೆರೆಹಿಡಿದ ಚೊಚ್ಚಲಚಿತ್ರಗಳನ್ನು ಮತ್ತೆ ಮತ್ತೆ ಉತ್ಸಾಹದಿಂದ ವೀಕ್ಷಿಸಿ ತರಬೇತುದಾರ ಸುಧಾಕರ ಜೈನ್ ಬಳಿಸಾಗುವ ವಿದ್ಯಾರ್ತಿಸಮೂಹ ಅಂದು ಕ್ಲಾಸಿನಲ್ಲಿ ಆಕಳಿಸುವ ಜೋಲುಮೋರೆಯವರಾಗಿರಲಿಲ್ಲ. ಕುತೂಹಲ, ನೋಡಿದ್ದನ್ನೆಲ್ಲ ಸೆರೆಹಿಡಿಯುವ ಹಂಬಲದಲ್ಲಿದ್ದರು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ತಿಗಳು. ಮಾತು ಕೃತಿಗಳೆರಡರಲ್ಲೂ ತೀಕ್ಷ್ಣ, ಚಾಣಾಕ್ಷ ಮನಸ್ಸಿನ ಮಾರ್ಗದರ್ಶಕ ಸುಧಾಕರ ಜೈನ್ ವಿದ್ಯಾರ್ತಿಗಳನ್ನು ಅನುಭವದ ಧಾರೆಯಲ್ಲಿ ತೋಯಿಸಿದರು. ಅದುವರೆಗೂ ಕ್ಯಾಮರಾ ಮುಟ್ಟದ ಕೈಗಳು ಕೂಡಾ ಅಂದು ಅತ್ಯದ್ಭುತ ಛಾಯಾಚಿತ್ರಗಳನ್ನು ಸೆರೆಹಿಡಿಯುವಂತಹವರಾದರು.

ಛಾಯಾಗ್ರಹಣದ ಹಲವಾರು ಮಜಲುಗಳನ್ನು ಭೋರ್ಗರೆಯುವ ದಿಡುಪೆ ಜಲಪಾತದಷ್ಟೇ ಅಬ್ಬರ , ಆದರೆ ಅಷ್ಟೇ ತನ್ಮಯತೆಯಿಂದ ತಿಳಿಸಿಕೊಡುತ್ತಿದ್ದ ಸುಧಾಕರ ಅವರ ಪಾಠಕೇಳುತ್ತಿದ್ದ ನಮಗೆ ಸಮಯದ ಪರಿವೆಯೇ ಇರಲಿಲ್ಲ. ಒಂದು ತರಗತಿಯಿಂದ ಇನ್ನೊಂದು ತರಗತಿಗೆ ಅಣಿಯಾಗುವ ಅವಸರವಿರಲಿಲ್ಲ. ಎಲ್ಲಾ ಮಾತುಗಳು, ಕನಸುಗಳು, ಕಲ್ಪನೆಗಳು ಮನದಲ್ಲಿ ನಾಟಿದ್ದವು ದಿಡುಪೆಯ ಜಲಪಾತದ ಬದಿಯ ಮರದ ಬೇರಿನಂತೆ...ಆಳಕ್ಕೆ...
- ಜಯಲಕ್ಷ್ಮೀ ಜೆ.ಆಳ್ವ.
ಚಿತ್ರಗಳು: ಹರೀಶ್ ಕೆ.ಆದೂರು.

1 comments:

Anonymous said...

Jayalaxmiyavare barvanige chennagidhe.., Harishanna neevu thegedha photo chennagidhe, photojournalist jayalaxmi with group

Post a Comment