ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಗಣರಾಜ್ಯೋತ್ಸವ ವಿಶೇಷ ಲೇಖನ

ಇಡ್ತಲೆಗೆ ಒಂದು, ಬಿಳಿ ಆಮೆಗೆ ಅರ್ಧ, ಕರಿಬೆಕ್ಕಿಗೆ ಕಾಲು ಕೋಟಿ !
ವಿಟ್ಲ : ಇರ್ತೆಲೆಗೆ ಒಂದು ಕೋಟಿ, ಬಿಳಿ ಆಮೆಗೆ ಅರ್ಧ ಕೋಟಿ, ಕರಿಬೆಕ್ಕಿಗೆ ಕಾಲು ಕೋಟಿ - ಸುಲಭವಾಗಿ ದುಡ್ಡು ಗಳಿಸುವ ಹೋಸ ಸ್ಕೀಮ್ ಇದೀಗ ಎಲ್ಲೆಡೆ ಚಾಲ್ತಿಯಲ್ಲಿದೆ.ಒಂದಂಕೆ ಲಾಟರಿ ಹುಚ್ಚು ಹಿಡಿದು ಹೆಂಡ್ತಿ ಮಕ್ಕಳನ್ನು ಬೀದಿಪಾಲು ಮಾಡಿ ಆತ್ಮಹತ್ಯೆಯಲ್ಲಿಯೋ ಹುಚ್ಚಾಸ್ಪತ್ರೆಯಲ್ಲಿಯೋ ಅವಸಾನ ಕಾಣುವವರ ಸಂಖ್ಯೆ ಇದೀಗ ಕಡಿಮೆಯಾಗಿದೆ. ತದನಂತರ ಅಲ್ಪ ಅವಧಿಯಲ್ಲಿ ಅಧಿಕ ಆರ್ಥಿಕ ಸಂಪತ್ತನ್ನು ಗಳಿಸುವ ಅಭಿಲಾಷೆಯನ್ನು ಮೂಡಿಸಿ ವಿದ್ಯಾವಂತರನ್ನು ಬಿಡದೆ ಪಂಗನಾಮ ಹಾಕುತ್ತಿರುವ ಚೈನ್ ಸ್ಕೀಮ್ಗಳು! ಈಗ ಅದೆಲ್ಲವೂ ಹಲವಾರು ಕಾರಣಗಳಿಗೆ ಅಟ್ಟ ಸೇರುತ್ತಿರುವಾಗಲೇ ಬಹುದೊಡ್ಡ ಸ್ಕೀಮ್ ಒಂದು ಸಾರ್ವಜನಿಕರ ಬಾಯಿಯಲ್ಲಿ ಕೇಳಿಬರುತ್ತಿದ್ದು ಈ ಅಂತೆ ಕಂತೆಗಳು ನಿಜವೇ ಎಂದು ಬಹುತೇಕರು ಬಾಯ್ಬಿಡುತ್ತಿದ್ದರೆ, ಕೋಟಿ ಸಂಪಾದನೆಯ ಕನಸುಹೊತ್ತ ಅಲೆಮಾರಿಗಳು ಪ್ರಾಣಿಗಳ ಹುಡುಕಾಟ ಆರಂಭಿಸಿದ್ದಾರಂತೆ.. ಎರಡು ತಲೆ ಹಾವು (ಇರ್ತೆಲೆ) ಸಿಕ್ಕಿ ಬಿಟ್ಟರೆ ಅದಕ್ಕೆ ಅಬ್ಬಬ್ಬಾ ! 1 ಕೋಟಿ ರೂ , ಬಿಳಿ ಆಮೆ ಸಿಕ್ಕಿದರೆ 50 ಲಕ್ಷ !! ಕಪ್ಪು ಬೆಕ್ಕು ಇದ್ದರೆ 25 ಲಕ್ಷವಂತೆ..! ಇದನ್ನೆಲ್ಲ ನಂಬಿಕೊಂಡು ರಾತ್ರಿ ಹಗಲೆನ್ನದೆ ಹುಡುಕಾಟ ನಡೆಸುತ್ತಿರುವ ಸೋಮಾರಿ ಕನಸುಗಾರರಿಗೆ ಯಾವುದು ಅರ್ಥವಾಗುತ್ತಿಲ್ಲ ! ಅವರ ಹುಡುಕಾಟ ಮುಂದುವರಿಯುತ್ತಲೇ ಇರುತ್ತದೆ.
ಜಿಲ್ಲೆಯಾದ್ಯಂತ ವಿಚಿತ್ರ ಪ್ರಾಣಿಗಳ ಮಾರಾಟದ ಹೆಸರಿನಲ್ಲಿ ಹಣ ಮಾಡುವ ದಂಧೆ ಹೊಸತಾಗಿ ಆರಂಭವಾಗಿದೆ. ಒಮ್ಮೆಲೇ ಶ್ರೀಮಂತರಾಗುವ, ಕನಸಿನ ಅರಮನೆಯನ್ನು ಕಟ್ಟುವ ಅದೆಷ್ಟೋ ಮಂದಿ ಈ ಹುಚ್ಚು ಆಸೆಯನ್ನರಸಿ ಉದ್ಯೋಗ ಮಾಡದೆ ಸೋಮಾರಿಗಳಾಗಿ ತಿರುಗುತ್ತಿರುವುದು ಕಂಡುಬರುತ್ತಿದೆ.
ಇವರು ಹೋದಲ್ಲಿ ಬಂದಲ್ಲಿ ಮೊಬೈಲಿನಲ್ಲಿಯೂ ಕೂಡಾ ವಿಚಿತ್ರ ಪ್ರಾಣಿಗಳ ಮಾಹಿತಿಗಳನ್ನು ಕಲೆಹಾಕುತ್ತಲೇ ದೈನಂದಿನ ಬದುಕನ್ನೇ ಮರೆತು ಬಿಡುತ್ತಿದ್ದಾರೆ. ವಿದೇಶದಲ್ಲಿ ಭಾರೀ ಬೇಡಿಕೆಯಿರುವ ಎರಡು ತಲೆ ಹಾವು ಎಲ್ಲಿಯಾದರೂ ಕಂಡರೆ ತಕ್ಷಣ ತಮಗೆ ತಿಳಿಸಿಬಿಡಿ ಸ್ಥಳದಲ್ಲಿಯೇ ನಿಮಗೆ ಕ್ಯಾಶ್ ನೀಡುತ್ತೇವೆ. ಕರಿ ಬೆಕ್ಕು ಇದ್ದರೆ ನಮಗೆ ಬೇಕೇ ಬೇಕು. ಮತ್ತೆ ಬಿಳಿ ಆಮೆ ಕಣ್ಣಿಗೆ ಕಂಡರೆ ತುರ್ತಾಗಿ ಬೇಕಾಗಿದೆ.ನಿಮ್ಮ ಜೀವಮಾನಕ್ಕೆ ಸಾಕಾಗುವಷ್ಟು ಹಣ ಸುರಿಯುತ್ತೇವೆ. ಎಂಬುವುದಾಗಿ ಮಾತುಕತೆ ಮುಂದುವರಿಯುತ್ತದೆ. ಹಣದಾಸೆಯಿಂದ ಕಾಡುಮೇಡು ಸುತ್ತಿ ಇರ್ತಲೆಯೊಂದು ಸಿಕ್ಕಿದಾಗ ಅದನ್ನು ಹಣ ಕೊಟ್ಟು ಪಡೆದುಕೊಳ್ಳುವ ಅರೆಹುಚ್ಚನಿಂದ ಒಂದೊಂದೇ ಪರೀಕ್ಷೆಗಳು ನಡೆದು ನಮ್ಮ ಬೇಡಿಕೆಯಂತೆ ಇಲ್ಲ ಎಂದು ಅದನ್ನು ರಿಜೆಕ್ಟ್ ಮಾಡುತ್ತಾನೆ. ಎರಡು ತಲೆಯ ಹಾವು ಕಡಿಮೆ ಎಂದರೆ ಐದು ಕೆಜಿ ಭಾರವಿರಬೇಕು, ಎರಡೂ ಬದಿಯಲ್ಲಿಯೂ ತಲೆಗಳು ಚಲನೆಯಲ್ಲಿರಬೇಕು,ಹಾವಿನ ಮಧ್ಯಭಾಗದಲ್ಲಿ ಹಿಡಿದೆತ್ತಿದಾಗ ಎರಡೂ ಬದಿಯ ಬಾಯಿಯೊಳಗಿಂದ ನಾಲಗೆಯನ್ನು ಚಾಚಬೇಕು. ಇದನ್ನೇ ನಂಬಿದ ಕೋಟಿ ರೂ. ಆಸೆ ಹೊತ್ತ ಒಬ್ಬ ಯುವಕ ಈ ಬೇಡಿಕೆಗಳನ್ನು ಹೊಂದಿಸುವುದಕ್ಕಾಗಿ ತನ್ನ ಮನೆಯಲ್ಲೇ ಡ್ರಮ್ನಲ್ಲಿ ಎರಡು ಕಿಲೋ ತೂಕದ ಎರಡು ತಲೆಯ ಹಾವನ್ನು ಹಾಕಿ ಹಾಲು, ನೀರು ಹುತ್ತದ ಮಣ್ಣು ಮೊದಲಾದವನ್ನು ಕೊಟ್ಟು ಸಾಕುತ್ತಿದ್ದಾನಂತೆ !. ಹಾಗೆಯೇ ಬಿಳಿ ಆಮೆ ಬೇಕು. ಅದರ ಉಗುರು ಕೂಡಾ ಬಿಳಿ ಇರಬೇಕಾಗುತ್ತದೆ ಎಂಬ ಬೇಡಿಕೆಗೆ ಜನ ಪ್ರಯತ್ನಿಸದಿದ್ದರೂ, ಕರಿ ಬೆಕ್ಕಿಗೆ 25 ಲಕ್ಷ ರೂ.ಗಳ ಮೊತ್ತ ಸಿಗುತ್ತದೆಯೆಂದಾಗ ಕಪ್ಪು ಬೆಕ್ಕು ಅಡ್ಡಬಂದಾಗ ಕಾಲು ಕೋಟಿ ಹಣ ಕಣ್ಣೆದುರಿಗೆ ಬಂದು ಅಲ್ಲಿಂದಲೇ ಪರೀಕ್ಷೆ ನಡೆಯುತ್ತದೆ. ಕರಿ ಬೆಕ್ಕೆಂದರೆ ಕಣ್ಣು, ಬಾಯಿ, ಉಗುರು ಸಹಿತ ಸಂಪೂರ್ಣವಾಗಿ ಕಪ್ಪಾಗಿರಬೇಕು. ಸಮಯಗಳ ಹಿಂದೆ ಸುಬ್ರಹ್ಮಣ್ಯ ಪರಿಸರದಲ್ಲಿ ಇಂಥ ಬೆಕ್ಕು ಸಿಕ್ಕಿತೆಂದಾಗ ಆ ಮನೆಮಂದಿ 25 ಲಕ್ಷದ ಧನಿಕರಾದರೆಂದು ಸುದ್ದಿ ಹರಡಿತು.

ಅದನ್ನು ಪಡೆದುಕೊಳ್ಳುವ ಅಸಾಮಿ ಬಂದು ಎಲ್ಲವನ್ನೂ ಪರೀಕ್ಷಿಸಿ ಸರಿಯಾಗಿದೆ ಅನ್ನುವಾಗಲೇ ಬೆಕ್ಕಿಗೆ ಹಾಲು ಕೊಡಿ ಅಂದನಂತೆ. ಬೆಕ್ಕು ಹಾಲು ಕುಡಿಯುತ್ತಲೇ ಆ ಬೆಕ್ಕು ಕುಡಿಯುತ್ತಿರುವ ಹಾಲು ಕೂಡಾ ಕಪ್ಪಾಗಬೇಕೆಂದು ಅದನ್ನು ರಿಜೆಕ್ಟ್ ಮಾಡಿದನಂತೆ ! ಈ ಸುದ್ದಿ ಹೇಗೆ ಹಬ್ಬಿದೆಯೋ ಯಾರಿಗೂ ಗೊತ್ತಿಲ್ಲ. ಆದರೆ ಹಲವಾರು ಮಂದಿ ಯುವಕರು ಈ ಪ್ರಾಣಿಗಳನ್ನು ಹುಡುಕಿಕೊಂಡು ಗುಡ್ಡ ಬೆಟ್ಟ ಕಾಡು ಮೇಡುಗಳನ್ನು ಅಲೆಯುತ್ತಿದ್ದಾರೆ. ಒಂದು ರೀತಿಯಲ್ಲಿ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಂತೆ ಭಾಸವಾಗುತ್ತಾರೆ. ಆಶ್ಚರ್ಯವೆಂದರೆ ಇಷ್ಟರವರೆಗೂ ಅಳತೆಗೆ ತಕ್ಕುದಾದ ಎರಡು ತಲೆ ಹಾವುಗಳಾಗಲೀ ಬಿಳಿ ಆಮೆಗಳಾಗಲೀ ಕಪ್ಪು ಬೆಕ್ಕಾಗಲೀ ಸಿಕ್ಕಿಲ್ಲ, ಹಣವೂ ಸಿಕ್ಕಿಲ್ಲ! ಹೀಗಿದ್ದೂ ಹಲವು ಮಂದಿ ಯುವಕರು ಈ ಪ್ರಾಣಿಗಳ ಭೇಟೆ ಕಾರ್ಯ ಆರಂಭಿಸಿದ್ದಾರೆ. ಈ ಅಲೆಮಾರಿ ಪಡೆಗಳೇ ಪುತ್ತೂರು ಉರಗ ತಜ್ಞ ಐತಾಳ್ ಅವರ ಹಾವುಗಳ ಸಂಗ್ರಹದಲ್ಲಿದ್ದ ಇಡ್ತಲೆ ಹಾವನ್ನು ಸಮಯಗಳ ಹಿಂದೆ ಕಳವು ಮಾಡಿದ್ದರು. ಇದು ಯಾರಿಗೆ ಬೇಕಾಗುತ್ತದೆ ? ಯಾಕಾಗಿ ? ,ಎಲ್ಲಿಗೆ ? , ಯಾವ ಉದೇಶಕ್ಕಾಗಿ ಬೇಕಾಗುತ್ತದೆ ? ಎಂದು ವಿಚಾರಿಸಿದರೆ ಉತ್ತರವೇ ಬೇರೆಯಾಗಿರುತ್ತದೆ. ಇಡ್ತಲೆ ಹಾವಿನ ಬೆನ್ನುಹುರಿಯಲ್ಲಿರುವ ರಸವೊಂದು ಬಹುಪಯುಕ್ತ ಔಷಧಿಗಾಗಿ ವಿದೇಶದಲ್ಲಿ ಬೇಡಿಕೆಯಿದೆ ಎಂದಾದರೆ ಬಿಳಿ ಆಮೆ ಸಕಲ ಸಂಪತ್ತನ್ನು ಕರುಣಿಸುತ್ತದೆಯಂತೆ. ಜ್ಯೋತಿಷಿಯೊಬ್ಬರು ಹೇಳಿದ ಪ್ರಕಾರ ವಾಸ್ತು ದೋಷವಿರುವ ಭೂಮಿಯೊಂದನ್ನು ಸರಿ ಮಾಡಲು ಕರಿಬೆಕ್ಕನ್ನು ಜೀವಂತ ಹೂಳಲು ಬೇಡಿಕೆ ಬಂದಿರುವುದಾಗಿ ಕೇಳಿ ಬರುತ್ತಿದೆ.
ಈ ವಿಚಿತ್ರ ಪ್ರಾಣಿಗಳ ಹುಡುಕಾಟಕ್ಕೆ ಬಲಿ ಬೀಳುವವರ ಸಂಖ್ಯೆ ದಿನದಿಂದಿನಕ್ಕೆ ಹೆಚ್ಚಾಗುತ್ತಿದ್ದು, ಸುಲಭವಾಗಿ ಶ್ರೀಮಂತರಾಗುವ ಕನಸು ಕಂಡ ಅಲೆಮಾರಿಗಳು ಹಣ ಸಿಗುವ ವೇಳೆಗೆ ಅವರು ಹುಚ್ಚರಾಗಿರುತ್ತಾರೆ ಎಂಬುವುದಕ್ಕೆ ಅನುಮಾನವಿಲ್ಲ !
ವರದಿ : ಜ್ಯೋತಿಪ್ರಕಾಶ್ ಪುಣಚಾ

0 comments:

Post a Comment