ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಅಖಿಲ ಭಾರತ ಅಂತರ್ ವಿ.ವಿ. ಪುರುಷರ ಹಾಗೂ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಟೂರ್ನಿ

ಮೂಡುಬಿದಿರೆ: ಅಖಿಲ ಭಾರತ ಅಂತರ್ ವಿ.ವಿ. ಪುರುಷರ ಹಾಗೂ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ ಆಳ್ವಾಸ್ ಎಜುಕೇಷನ್ ಫೌಂಡೇಷನ್ ನ ವಿದ್ಯಾರ್ಥಿಗಳು ಚಾಂಪಿಯನ್ಶಿಪ್ ತನ್ನದಾಗಿಸುವ ಮೂಲಕ ರಾಷ್ಟ್ರೀಯ ಮಟ್ಟದ ದಾಖಲೆ ನಿರ್ಮಿಸಿದ್ದಾರೆ. ಒಂದೇ ವಿ.ವಿ.ಗೆ ಈ ಎರಡೂ ಪ್ರಶಸ್ತಿಗಳು ಬಂದಿದ್ದು, ಒಂದೇ ವಿ.ವಿ.ಯನ್ನು ಒಂದೇ ಕಾಲೇಜು ಪ್ರತಿನಿಧಿಸುವ ಮೂಲಕ ಈ ವಿಶಿಷ್ಠ ಸಾಧನೆ ಮೆರೆದದ್ದು ರಾಷ್ಟ್ರದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪುರುಷರ ವಿಭಾಗದಲ್ಲಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ 10ಮಂದಿಯ ತಂಡದ ಎಲ್ಲಾ ಸದಸ್ಯರೂ ಆಳ್ವಾಸ್ ವಿದ್ಯಾಸಂಸ್ಥೆಯವರೇ ಆಗಿದ್ದು, ಮಹಿಳೆಯರ ವಿಭಾಗದ ಹತ್ತು ಮಂದಿಯ ತಂಡದಲ್ಲಿ 7ಮಂದಿ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿನಿಯರೆಂಬುದು ಗಮನಾರ್ಹ ಎಂದು ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಮಿಳ್ನಾಡಿನ ಸೇಲಂನ ಪೆರಿಯಾರ್ ವಿ.ವಿಯಲ್ಲಿ ನಡೆದ ಅಖಿಲ ಭಾರತ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ ಮಹಿಳೆಯರ ತಂಡ ಚಾಂಪಿಯನ್ ಶಿಪ್ ತನ್ನದಾಗಿಸಿದ ಬೆನ್ನಲ್ಲೇ ಮೂಡಬಿದಿರೆಯಲ್ಲಿ ನಡೆದ ಮಂಗಳೂರು ವಿ.ವಿ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆ ಸಂಘಟಿಸಿದ ಅಖಿಲ ಭಾರತ ಅಂತರ್ ವಿ.ವಿ. ಪುರುಷರ ಚಾಂಪಿಯನ್ ಶಿಪ್ ನಲ್ಲೂ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ ಆಳ್ವಾಸ್ ಸಂಸ್ಥೆ ಚಾಂಪಿಯನ್ಶಿಪ್ ಮುಡಿಗೇರಿಸಿದೆ.

2007-08ರಲ್ಲಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ ಆಳ್ವಾಸ್ ಎಜುಕೇಷನ್ ಫೌಂಡೇಶನ್ನ ಮಹಿಳೆಯರ ಕ್ರೀಡಾಪಟುಗಳ ತಂಡ ಹೈದರಾಬಾದ್ ನಲ್ಲಿ ನಡೆದ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಪಡೆದಿತ್ತು. ಕಳೆದ ಬಾರಿ ತಿರುಚ್ಚಿಯಲ್ಲಿ ನಡೆದ ಟೂರ್ನಿಯಲ್ಲಿ ರನ್ನರ್ಸ್ ಅಪ್ ಪ್ರಶಸ್ತಿಗೆ ಪಾತ್ರವಾಗಿತ್ತು.
ಕಳೆದ ಬಾರಿ ಮದ್ರಾಸ್ ವಿ.ವಿಯಲ್ಲಿ ನಡೆದ ಪುರುಷರ ಅಖಿಲ ಭಾರತ ಅಂತರ್ ವಿ.ವಿ ಪುರುಷರ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರು ವಿ.ವಿ. ಇತಿಹಾಸದಲ್ಲಿ ಮೊದಲ ಬಾರಿಗೆ ಲೀಗ್ ಹಂತ ಪ್ರವೇಶಿಸಿದ್ದಲ್ಲದೆ ಕಂಚಿನ ಪದಕ ಗೆದ್ದುಕೊಂಡಿತ್ತು.

ಇಷ್ಟಕ್ಕೇ ಮುಗಿದಿಲ್ಲ

ಆಳ್ವಾಸ್ ನ ಕ್ರೀಡಾ ವಿದ್ಯಾರ್ಥಿಗಳ ಸಾಧನೆ ಇಷ್ಟಕ್ಕೆ ಮುಗಿದಿಲ್ಲ. ಪಂಜಾಬ್ ನಲ್ಲಿ ನಡೆದ ಅಖಿಲ ಭಾರತ ವಿ.ವಿ. ದೇಹಧಾಡ್ರ್ಯ ಸ್ಪರ್ಧೆಯಲ್ಲಿ ದ್ವಿತೀಯ ಬಿ.ಎ.ವಿದ್ಯಾರ್ಥಿ ಸನಲ್ ಪದ್ಮನಾಭ ಚಿನ್ನದ ಪದಕಕ್ಕೆ ಪಾತ್ರನಾಗಿದ್ದಾನೆ. ಪಾಂಡಿಚೇರಿಯಲ್ಲಿ ನಡೆದ ರಾಷ್ಟ್ರೀಯ ಜ್ಯೂನಿಯರ್ ದೇಹಧಾಡ್ರ್ಯ ಸ್ಪರ್ಧೆಯಲ್ಲಿ ಮಿಸ್ಟರ್ ಜ್ಯೂನಿಯರ್ ಇಂಡಿಯಾ ಪ್ರಶಸ್ತಿಯನ್ನು ಈ ವಿದ್ಯಾರ್ಥಿ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾನೆ.
ಮದ್ರಾಸ್ ವಿ.ವಿಯಲ್ಲಿ ಕಳೆದ ತಿಂಗಳು ನಡೆದ ಅಖಿಲ ಭಾರತ ಅಂತರ್ ವಿ.ವಿ. ಅಥ್ಲೆಟಿಕ್ಸ್ ಕೂಟದಲ್ಲಿ ಮಂಗಳೂರು ವಿ.ವಿ.ಗೆ ಏಕೈಕ ಪದಕ ತಂದುಕೊಟ್ಟ ಹಿರಿಮೆ ಇದೇ ಆಳ್ವಾಸ್ ನ ವಿದ್ಯಾರ್ಥಿ ಜಯಪ್ರಕಾಶ್ ಗೆ ಸಲ್ಲುತ್ತದೆ. 47.65 ಸೆಕುಂಡುಗಳಲ್ಲಿ 400ಮೀಟರ್ ಕ್ರಮಿಸುವ ಮೂಲಕ ಕಂಚಿನ ಪದಕಕ್ಕೆ ಪಾತ್ರನಾಗಿದ್ದ.


ತಮಿಳ್ನಾಡಿನ ಸೇಲಂನ ಪೆರಿಯಾರ್ ವಿ.ವಿಯಲ್ಲಿ ನಡೆದ ಅಖಿಲ ಭಾರತ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ ಆಳ್ವಾಸ್ ನ ಪೂರ್ಣಿಮ ಜಿ.ಎಸ್. ಅತ್ಯುತ್ತಮ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಸಾಧನೆಯ ಹಾದಿ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ಅವರು ಶಿಕ್ಷಣದೊಂದಿಗೆ ಕ್ರೀಡೆ, ಪಠ್ಯೇತರ ಚಟುವಟಿಕೆಗಳಿಗೆ ಪ್ರಾಧಾನ್ಯತೆ ನೀಡುತ್ತಿದ್ದು ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ,ಕಲೆಗಳಲ್ಲಿ ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ದತ್ತುಸ್ವೀಕಾರದ ಮೂಲಕ ಸಂಪೂರ್ಣ ಉಚಿತ ಶಿಕ್ಷಣದೊಂದಿಗೆ ವಿಶೇಷ ತರಬೇತಿ ನೀಡಿ ಮುನ್ನಡೆಸುತ್ತಿದ್ದಾರೆ. ಈಗಾಗಲೇ ಸುಮಾರು 400 ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಯ ಮೂಲಕ ದತ್ತು ಸ್ವೀಕಾರ ಯೋಜನೆಯಡಿ ಈ ವಿಶೇಷ ತರಬೇತಿಯನ್ನು ಪಡೆಯುತ್ತಿರುವುದು ಇಡೀ ದೇಶಕ್ಕೇ ಮಾದರಿ.

ಆಳ್ವಾಸ್ ಎಜುಕೇಷನ್ ಫೌಂಡೇಶನ್ ಶಿಕ್ಷಣ, ಸಂಸ್ಕೃತಿ, ಕಲೆ, ಸಾಹಿತ್ಯ, ಕ್ರೀಡೆಗಳ ಮೂಲಕ ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ್ದಿದ್ದು, ಅಪೂರ್ವ ಕೊಡುಗೆಗಳನ್ನು ಈ ವೈವಿಧ್ಯಮಯ ಕ್ಷೇತ್ರಗಳ ಮೂಲಕ ಸಮಾಜಕ್ಕೆ ನೀಡುತ್ತಿದೆ. ಹಂತ ಹಂತವಾಗಿ ತಮ್ಮ ಕನಸುಗಳನ್ನು ಸಾಕಾರಗೊಳಿಸುತ್ತಾ ವೈಶಿಷ್ಟ್ಯಪೂರ್ಣ ರೀತಿಯಲ್ಲಿ ಇಡೀ ಸಮಾಜಕ್ಕೇ ಮಾದರಿಯಾಗುವಂತೆ ಆಳ್ವಾಸ್ ಶಿಕ್ಷಣ ಸಂಸ್ಥೆ ಬೆಳಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಉಪನ್ಯಾಸಕ ಹರೀಶ ಕೆ.ಆದೂರು ಉಪಸ್ಥಿತರಿದ್ದರು.

0 comments:

Post a Comment