ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಕರ್ನಾಟಕ ಹಲವು ದೇವಾಲಯಗಳ ನೆಲೆಬೀಡು. ಕುದುರೆಮುಖ ಶಿಖರದ ಪಡುಪಾರ್ಶ್ವದಲ್ಲಿ ಸಸ್ಯಶಾಮಲೆಯ ಮಡಿಲಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಪರಪ್ಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರವು ರಾರಾಜಿಸುತ್ತಿದೆ.ಈ ದೇವಸ್ಥಾನವು ಅನೇಕ ಊರಪರವೂರ ದೇವಾಲಯಗಳ ಶ್ರೀ ದೇವರ ವಿಗ್ರಹ, ಲಿಂಗವನ್ನು ನಿರ್ಮಿಸಲು ಉಪಯೋಗಿಸುವ ನೆಲ್ಲಿಕಾರು ಶಿಲೆಯ ಉಗಮಸ್ಥಾನವಾದ ನೆಲ್ಲಿಕಾರು ಗುಡ್ಡೆಯ ತಪ್ಪಲಲ್ಲಿದೆ. ಮೂಡು ಮುಖವಾಗಿರುವ ಶ್ರೀ ಕ್ಷೇತ್ರದ ಮುಂಭಾಗದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಪ್ರದಕ್ಷಿಣಾಕಾರವಾಗಿ ಸತತ ಹರಿಯುವ ತಿಳಿನೀರಿನಿಂದಾಗಿ 'ಪರಪ್ಪಾಡಿ' ಎಂಬ ಹೆಸರು ಈ ಸ್ಥಳಕ್ಕೆ ಬಂದಿದೆ.
ಕ್ಷೇತ್ರವು ಸುಮಾರು 600-700 ವರ್ಷಗಳಷ್ಟು ಪುರಾತನವಾದದ್ದು ಅಂದರೆ 13-14ನೇ ಶತಮಾನದ ಮಧ್ಯ ಸ್ಥಾಪಿತವಾಗಿರುವ ಬಗ್ಗೆ ಶಿಲಾಶಾಸನವಿರುವುದು. "ಶ್ರೀ ಮತು ಅರಿರಾಯ ಗಂಡರ ದಾವಣಿ ಶ್ರೀ ವೀರಚೆಂನರ್ಸ ಒಡೆಯರು ಸಾಮ್ರಾಜ್ಯಂಗೆಯ್ಯುತಿರ್ದ ಶಕವರ್ಷ 1311ನೇಯ ವಿಭವ ಸಂವತ್ಸರದ ಮಾರ್ಗಶರ ಶುದ್ದ ಪೌರ್ಣಮಿ ಶನಿವಾರದಂದು" ಎಂದು ಶಿಲಾಶಾಸನವು ಪ್ರಾರಂಭವಾಗುತ್ತದೆ.
ರಾಜಾದಿರಾಜರುಗಳ ಪಾಲನೆ ಪೋಷಣೆಗಳಿಂದ ವೈಭವೋಪೇತವಾಗಿ ಆರಾಧಿಸಲ್ಪಟ್ಟ ಶ್ರೀ ಕ್ಷೇತ್ರವು ಕಾಲಕ್ರಮೇಣ ಸರಿಯಾದ ಪೋಷಕರಿಲ್ಲದೇ ಪಾಳುಬಿದ್ದು ಸುತ್ತಲೂ ದಟ್ಟಾರಣ್ಯ ಬೆಳೆದು ತನ್ನ ಅಸ್ತಿತ್ವವನ್ನು ಕಳೆದು ಕೊಂಡಿತು. ನಿತ್ಯವಿನಿಯೋಗ ಸ್ಥಗಿತಗೊಂಡಿತು.


8-6-1926 ರಂದು ನಲ್ಲೂರು ಗ್ರಾಮ ಚೆಲುವಯ್ಯಾ ಬಲ್ಲಾಳರಿಂದ ಆ ಗ್ರಾಮದ ಅಂಬೆಚ್ಚಾರು ಅನಂತ ಸೆಟ್ಟರು ಈ ಸ್ಥಳವನ್ನು ಸ್ವಾಧೀನ ಪಡಿಸಿಕೊಂಡರು. ಆದರೆ ನಿತ್ಯವಿನಿಯೋಗ ನಡೆಯುತ್ತಿರಲಿಲ್ಲ. 16ವರ್ಷಗಳ ಬಳಿಕ ಕಾರ್ಕಳ ಬೆಳ್ಮಣ್ಣು ತೆಂಕಿಲ್ಲಾಯ ನಾರಾಯಣಭಟ್ಟರು ಆಡಳಿತವನ್ನು ಸ್ವಾಧೀನಪಡಿಸಿಕೊಂಡರು. ಕಾಡು ಕಡಿಸಿ ಬಿಕ್ಷಾವೃತ್ತಿಯಿಂದ ಮುಳಿಹುಲ್ಲಿನ ಛಾವಣಿ ಮತ್ತು ಗೋಪುರವನ್ನು ರಚಿಸಿದರು. ದೇವಸ್ಥಾನಕ್ಕೆ ಅಮೃತಪಡಿ ವರ್ಷಕ್ಕೆ 4 ಮುಡಿ ಅಕ್ಕಿ ಉಂಬಳಿ ಭೂಮಿಯಿಂದ ಬರುತ್ತಿತ್ತು. ಪ್ರಸ್ತುತ ಅದೂ ಕೂಡಾ ನಿಂತಿರುವುದು.
ಸುಮಾರು 50ವರ್ಷಗಳವರೆಗೆ ನಾರಾಯಣಭಟ್ಟರ ಆಡಳಿತದಲ್ಲಿ ನಿತ್ಯವಿನಿಯೋಗಗಳು ಮತ್ತು ಶಿವರಾತ್ರಿ ನೈಮಿತ್ತಿಕ ಪೂಜೆಗಳು ನಡೆಯುತ್ತಾ ಬಂದವು. ಪ್ರಸ್ತುತ ನಾರಾಯಣಭಟ್ಟರ ಸುಪುತ್ರರಾದ ರಾಮಕೃಷ್ಣ ಭಟ್, ನರಸಿಂಹ ಭಟ್, ಶ್ರೀಧರ ಭಟ್ರ ಸ್ವಂತಗಳಿಕೆಯಿಂದ ನೈಮಿತ್ತಿಕ ಪೂಜಾ ವಿನಿಯೋಗಗಳು ನೆರವೇರುತ್ತಿದೆ.
ಸದ್ರಿ ಕ್ಷೇತ್ರದ ದೈವೀಕಲೆಯನ್ನು ಹೇಳ ಹೊರಟರೆ ಅದೇ ದೊಡ್ಡ ಕತೆಗಳಾಗಿ ಪರಿವರ್ತನೆ ಹೊಂದುವ ಶಕ್ತಿ ಹೊಂದಿವೆ. ಇಲ್ಲಿ ಭಕ್ತಿಯಿಂದ ಮಳೆಗಾಗಿ ಪ್ರಾರ್ಥಿಸಿದಾಗ, ಸಂತಾನಹೀನರು ಸಂತಾನಕ್ಕಾಗಿ, ಅವಿವಾಹಿತರು ಮಾಂಗಲ್ಯಕ್ಕಾಗಿ ಪ್ರಾರ್ಥಿಸಿದಾಗ ಇಷ್ಟಾರ್ಥ ಸಿದ್ದಿಯಾಗುತ್ತದೆ.
ಮಾರ್ಚ್ 2002ರಲ್ಲಿ ದೇರೆಬೈಲು ಹರಿಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಪುನಃ ಬ್ರಹ್ಮಕಲಶ ನಡೆಯಿತು. ಆ ಪ್ರಕಾರವಾಗಿ ವರ್ಷಾವಧಿ ಜಾತ್ರೆಗಳು ನಡೆಯುತ್ತಿದೆ. ದೇವಸ್ಥಾನಕ್ಕೆ ಮುಖ್ಯವಾಗಿ ಗೋಪುರ, ಹೊರಾಂಗಣ, ಅಡಿಗೆಶಾಲೆ, ಪ್ರಾಕಾರ ಗೋಡೆಗಳು ಆಗಬೇಕಿದೆ.
ಇಷ್ಟೆಲ್ಲಾ ಪ್ರಕೃತಿ ಸೌಂದರ್ಯದ ನಡುವೆ ಮೆರೆಯುತ್ತಿರುವ ಕ್ಷೇತ್ರಕ್ಕೆ ಡಾಮರೀಕರಣಗೊಂಡ ಮಾರ್ಗ ವ್ಯವಸ್ಥೆ, ದಾರಿದೀಪ ಇಲ್ಲದಿರುವುದು ವಿಷಾದನೀಯ ಸಂಗತಿ.

ಲೇಖನ: ಮಲ್ಲಿಕಾಭಟ್ ಪರಪ್ಪಾಡಿ.

0 comments:

Post a Comment