ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವರ್ಷಾಚರಣೆ
ಮಾನವ ಜನ್ಮವು ಕೋಟಿ ಜೀವರಾಶಿಗಳಲ್ಲಿ ಅತ್ಯಂತ ಪಾವಿತ್ರ್ಯವೂ ಶ್ರೇಷ್ಠವೂ ಆಗಿದೆ. ತನ್ನ ಜೀವಿತದ ಅತ್ಯಲ್ಪ ಕಾಲದಲ್ಲಿಯೇ ಅಗಾಧವಾದುದನ್ನು ಸಾಧಿಸುವ ಮಾನವನ ಬದುಕಿನ ಒಳ ಹೂರಣಗಳನ್ನು ಯೋಚಿಸುವಾಗ ಅವನ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಚಿಂತಿಸುವಾಗ, ಗುಣತ್ರಯಗಳಿಗನುಸಾರ ಅಂದರೆ ರಾಜಸ, ತಾಮಸ, ಸತ್ವಗುಣಗಳ ಪ್ರಕಾರವೇ ಅವನ ಜೀವನದುದ್ದಕ್ಕೂ ಪ್ರತಿಯೊಂದು ಹಂತದಲ್ಲಿಯೂ ಅವನ ನಡವಳಿಕೆ ಮಾನಸಿಕ ಭಾವನೆ ಶೌರ್ಯ, ಕ್ರೌರ್ಯ, ತ್ಯಾಗ ಮನೋಭಾವನೆಗಳ ಸ್ಪಷ್ಟ ಚಿತ್ರಣ ಗೋಚರಿಸಲ್ಪಡುತ್ತದೆ. ಕೆಲವೊಮ್ಮೆ ಈ ವಿಚಾರಗಳು ಅವನ ವಂಶವಾಹಿನಿಯ ಪ್ರಕಾರವೂ ಬದಲಾಗಲು ಸಾಧ್ಯವಿದೆ.ಪುರಾಣ ಕಾಲದಿಂದಲೇ ವಿವೇಚಿಸುವಾಗ ಒಬ್ಬ ಉತ್ತಮ ರಾಜನು ಯಾವರೀತಿಯಲ್ಲಿ ಪ್ರಜಾಪಾಲನೆಯನ್ನು ಮಾಡಬೇಕು? ದೇಶ ರಕ್ಷಣೆಯನ್ನು ಹೇಗೆ ಮಾಡಬೇಕು? ಮಾಡುತ್ತಾನೆ ಎಂಬುದನ್ನು ಅನುಸರಿಸಿ ಅವನ ಮನೋಭಾವನೆಯನ್ನು ಅರ್ಥಮಾಡಿಕೊಳ್ಳಬಹುದು. ಉತ್ತಮನಾದ ಒಬ್ಬ ರಾಜನು ಯುದ್ಧದಲ್ಲಿ ಶತ್ರುಗಳನ್ನು ಒದ್ದೋಡಿಸಲು ಬೇಕಾದ ಎಲ್ಲಾ ತಂತ್ರಗಳನ್ನೂ ದೈರ್ಯಗಳನ್ನೂ ಮೈಗೂಡಿಸಿಕೊಂಡು ಎದುರಾಳಿಯನ್ನು ಬಗ್ಗು ಬಡಿಯುತ್ತಾನೆ. ತನ್ನ ಪ್ರಜೆಗಳ ಕಷ್ಟ ಸುಖಗಳಲ್ಲಿ ಭಾಗಿಯಾಗಿ ನ್ಯಾಯ ಅನ್ಯಾಯಗಳ ಪರಿಶೀಲನೆಯಿಂದ ತನ್ನ ಮಕ್ಕಳಂತೆಯೇ ಅವರಿಗೆ ನೆರವಾಗುತ್ತಾನೆ.

``ರಾಜಾ ಪ್ರತ್ಯಕ್ಷ ದೇವತಾ'' ಎಂಬ ಮಾತು ಇಲ್ಲಿ ಪೂರಕವಗುತ್ತದೆ. ಪ್ರಜೆಗಳ ಸಂಕಷ್ಟ ಹೋಗಲಾಡಿಸಲೂ ಇಳೆಯಲ್ಲಿ ಉತ್ತಮ ಮಳೆ, ಬೆಳೆ ಬೆಳೆಯಲೂ ಸಮೃದ್ಧಿ ಸಂಪನ್ನ ರಾಜ್ಯವಾಗಲು ಭಗವಂತನ ಅನುಗ್ರಹ ಸಂಪಾದಿಸಲೂ ಯಾಗ ಯಜ್ಞಗಳನ್ನು ಮಾಡಿ ಪ್ರೀತ್ಯಾಧಾರಗಳಿಂದ ಪ್ರಜಾಪಾಲನೆ ಮಾಡುತ್ತಾನೆ. ಇದನ್ನೇ ರಾಜಧರ್ಮವೆನ್ನುವುದು.

ಆದರೂ ಕೆಲವೊಂದು ಸಂದರ್ಭಗಳಲ್ಲಿ ತನ್ನ ಮನಸ್ಸನ್ನು ನಿಯಂತ್ರಿಸಲು ಅಸಾಧ್ಯವಾಗಿ ಎಷ್ಟೋ ಕ್ಷಾತ್ರ ತೇಜಸ್ಸು, ಯುದ್ಧ ಕೌಶಲ್ಯವಿದ್ದರೂ ರಣರಂಗದಲ್ಲಿ ಹಿಮ್ಮುಖನಾಗುತ್ತಾನೆ. ಉದಾಹರಣೆಗೆ ಭಾರತಾ ಯುದ್ಧದ ಸಂದರ್ಭದಲ್ಲಿ ಪಾಂಡವರು ಕೌರವರೂ ಕುರುಕ್ಷೇತ್ರದಲ್ಲಿ ಚತುರಂಗ ಬಲದೊಡನೆ ಸೆಣಸಲು ಅಣಿಯಾಗುತ್ತಿದ್ದಂತೆಯೇ ಅರ್ಜುನನು ತನ್ನ ಎದುರಾಳಿಗಳಾದ ಗುರು ಹಿರಿಯರನ್ನು ನೋಡಿ ಹಿಡಿದಿದ್ದ ಧನುರ್ಭಾಣಗಳನ್ನು ಕೆಳಗಿಟ್ಟು ಶ್ರೀಕೃಷ್ಣನೊಡನೆ ತಾನು ಯುದ್ಧಮಾಡುವುದಿಲ್ಲ ಗುರುಹಿರಿಯರೊಡನೆಯೂ ಬಂಧುಗಳೊಡನೆಯೂ ಯುದ್ಧಮಾಡಲು ತನ್ನ ಮನಸ್ಸೊಪ್ಪುವುದಿಲ್ಲವೆಂಬ ಅಸಹಾಯಕತೆಯನ್ನು ತೋಡಿಕೊಂಡಾಗ ಶ್ರೀಕೃಷ್ಣನು ರಾಜನೀತಿಯನ್ನು ಬೋಧಿಸಿ ಯುದ್ಧೋನ್ಮುಖನಾಗುವಂತೆ ಹುರಿದುಂಬಿಸುತ್ತಾನೆ. ಆಗಲೂ ಅರ್ಜುನನ ಅನೇಕ ಸಂದೇಹಗಳು ತೊಲಗದಿದ್ದಾಗ ಧರ್ಮ ಯುದ್ಧವೆಂದರೇನೆಂಬುದನ್ನು ತಿಳಿಹೇಳುತ್ತಾನೆ. ತಾನು ಯಾರು ? ಏನು ಎಂಬುದನ್ನು ಮನ ಮುಟ್ಟುವಂತೆ ವಿವರಿಸಿ ಅರ್ಜುನನ ಮನಃ ಪರಿವರ್ತನೆಯನ್ನು ಮಾಡುತ್ತಾನೆ. ಇದರಿಂದ ಏನು ತಿಳಿಯುತ್ತದೆಂದರೆ ಎಷ್ಟೇ ಮೃದುವಾದ ಮನಸ್ಸನ್ನೂ ಎಷ್ಟೇ ಕಠೋರವಾದ ಮನಸ್ಸನ್ನೂ ಪರಿವರ್ತನೆಗೊಳಿಸಿ ಕಾರ್ಯಸಿದ್ಧಿಯನ್ನು ಮಾಡಬಹುದು ಎಂಬ ಸತ್ಯಾಂಶವನ್ನು ಅರ್ಥಮಾಡಿಕೊಳ್ಳಬಹುದು.
``ಪರಿತ್ರಾಣಾಯ ಸಾಧೂನಾಂ ವಿನಾಶಾಯ ದುಷ್ಕೃತಾಮ್ ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ''(ಭಗವದ್ಗೀತೆ)
(ಸಾಧುಗಳ ರಕ್ಷಣೆಗಾಗಿಯೂ ದುಷ್ಟರ ವಿನಾಶಕ್ಕಾಗಿಯೂ ಮತ್ತು ಧರ್ಮ ಸಂಸ್ಥಾಪನೆಗಾಗಿಯಯೂ ಪ್ರತಿ ಯುಗದಲ್ಲಿಯೂ ಅವತರಿಸುತ್ತೇನೆ). ಕೇವಲ ಒಬ್ಬ ಗೋವಳನೆಂದು ತಿಳಿದಿದ್ದ ಜನರಿಗೆ ತನ್ನ ಕೌಶಲದಿಂದಲೂ , ಮೇಧಾ ಶಕ್ತಿಯಿಂದಲೂ ಜನತೆಯ ಮನದಲ್ಲಿ ದೇವನಾಗಿ ಮೆರೆದಿದ್ದಾನೆ, ಮೆರೆಯುತ್ತಾ ಇದ್ದಾನೆ ಶ್ರೀಕೃಷ್ಣ. ಅಂದು ಬಹು ಸಂಖ್ಯೆಯಲ್ಲಿ ಜನರು ಕೃಷ್ಣನನ್ನು ಮಾನವನೆಂದು ಬಗೆದಿದ್ದರು. ಇಂದು ಪರಮಾತ್ಮನೆಂದು ಆರಾಧಿಸುತ್ತಾರೆ. (ಆದರೂ ಕೆಲಮಂದಿಗೆ ಅಂದೂ ಶ್ರೀಕೃಷ್ಣ ಅವತಾರ ಪುರುಷ, ಪವಾಡ ಪುರುಷ ಎಂಬ ಭಾವನೆಯಿತ್ತು.)
ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ದಶರಥ ಪುತ್ರನಾಗಿ ಅಯೋಧ್ಯೆಯಲ್ಲಿ ಜನಿಸಿದ. ಆಗ ರಾಮ ರಾಜಕುಮಾರ ಎಂಬುದನ್ನೇ ಜನಕೆ ತಿಳಿದಿತ್ತೆ ವಿನಃ ಅವತಾರ ಪುರುಷನೆಂದಲ್ಲ. ಪಿತೃವಾಕ್ಯ ಪರಿಪಾಲನಾರ್ಥವಾಗಿ ಹದಿನಾಲ್ಕು ವರುಷ ವನವಾಸ ಮಾಡಿ ದಾನವರ ನಿರ್ನಾಮ ಮಾಡಿ ಪುನಃ ಅಯೋಧ್ಯೆಗೆ ಮರಳಿದ ಮೇಲೆಯೇ ಅವನ ವ್ಯಕ್ತಿತ್ವ, ಶಕ್ತಿ, ಪೌರುಷ ಮೊದಲಾದ ಧೀರೋದ್ಧಾತ ಗುಣಗಳ ಅರಿವಾದುದು.
ದಾನವನಿಗೂ ಮಾನವನಿಗೂ ವ್ಯತ್ಯಾಸವೇನು? ಎಂಬುದೇ ಒಂದು ವಿಮರ್ಶಾತ್ಮಕ ವಿಚಾರ. ಯಾಕೆಂದರೆ ಸೃಷ್ಟಿಯಲ್ಲಿ ಇತರ ಜೀವಕೋಟಿಗಳಂತಲ್ಲ ಮಾನವರೂ, ದಾನವರೂ. ಅವರ ವರ್ತನೆ , ಜೀವನ ರೀತಿಯ ಫಲವಾಗಿಯೇ ಮಾನವ ದಾನವ ಎಂದು ವರ್ಗೀಕರಿಸಲಾಯಿತು. ತಾಮಸ ಗುಣದಿಂದ ಕೂಡಿದ ಒಂದು ವಿಭಾಗದವರನ್ನು ದಾನವರು , ರಾಕ್ಷಸರು ಎಂದೆಲ್ಲಾ ಕರೆಯಲಾರಂಭವಾಯಿತು. ಕೆಟ್ಟ ಸಂಸ್ಕೃತಿ , ವಾಮಾಚಾರ, ಸ್ವೇಚ್ಛಾಚಾರ, ವ್ಯಭಿಚಾರ, ಸ್ತ್ರೀ ಶೋಷಣೆ, ಅನಾಗರೀಕತೆ ಇವುಗಳೆಲ್ಲ ಮೈವೆತ್ತ ವರ್ಗದವರನ್ನೂ ಅವರ ಸಮುದಾಯದವರನ್ನೂ ದಾನವರು , ರಕ್ಕಸರು, ಎಂದು ಕರೆಯಲ್ಪಟ್ಟಿತು. ನಿಷ್ಕರುಣೆ, ಮುರ್ಖತನ ತನ್ನ ಕಾರ್ಯಸಾಧನೆಗಾಗಿ ಏನನ್ನೂ ಮಾಡಲು ಹೇಸದ ಮತ್ತು ಕೆಟ್ಟ ಆಹಾರ ಸೇವನೆ, ಕ್ರಾಂತಿಕಾರೀ ಮನೋಭಾವನೆ, ದುಡುಕುತನ, ಹಿಂಸಾಚಾರವೇ ಅವರ ವಂಶವಾಹಿನಿಯಲ್ಲಿ ಹಾಸು ಹೊಕ್ಕಾಯಿತು.

ಮಾನವರಂತೆ ಜನನ, ಶರೀರ ರಚನೆ, ವಾಕ್ ಸಾಮರ್ಥ್ಯ,ಎಲ್ಲವನ್ನೂ ಹೊಂದಿದ್ದ ವ್ಯಕ್ತಿಯಾಗಿದ್ದರೂ ಅವನ ಗುಣಗಳಿಂದಲೂ ಕೆಟ್ಟ ಸಂಸ್ಕಾರದಿಂದಲೂ ಇತರರು ಅವರನ್ನು ಬೇರ್ಪಟ್ಟು ನೋಡುವಂತಾಯಿತು. ರಾಕ್ಷಸರಿಗೆ(ರಾವಣನಿಗೆ) ಹತ್ತು ತಲೆ, ತ್ರಿಶಿರನಿಗೆ 3 ತಲೆ ಇತ್ತು ಎಂಬ ವಿಚಾರಗಳನ್ನು ನಾವು ರಾಮಾಯಣ ಗ್ರಂಥವನ್ನು ಓದುವಾಗ ಸಿಗುವ ವಿಚಾರಗಳು. ಅದು ಬಹುಶಃ ಕವಿ ಕಲ್ಪನೆ. ಯಾಕೆಂದರೆ ದುರ್ಗುಣಗಳನ್ನು ಹೊಂದಿದ ಓರ್ವ ವ್ಯಕ್ತಿಯನ್ನು ಕೆಟ್ಟ ರೀತಿಯಲ್ಲಿ ವೈಭವೀಕರಿಸಿದರೆ ಮಾತ್ರ ಅವನಲ್ಲಿರುವ ಕೆಟ್ಟಗುಣಗಳ ತೀವ್ರತೆಯನ್ನು ಆದಷ್ಟು ಭೀಭತ್ಸವಾಗಿ ಕಲ್ಪಿಸಲು ಸಾಧ್ಯವೆಂದೇ ಕವಿಗಳ ಕಲ್ಪನೆಯಾಗಿರಬಹುದು.

ಆದರೆ ಒಂದು ವಿಚಾರವನ್ನು ಹೀಗೂ ಅರ್ಥೈಸಬಹುದು. ಏಕಕಾಲದಲ್ಲಿ ಹತ್ತು ತಲೆಗಳಲ್ಲಿ ಬರಬಹುದಾದ ವಿಚಾರಗಳನ್ನು ವಿಮರ್ಶಿಸುವ , ವಿವೇಚಿಸುವ ಒಂದು ಗುಣ, ಸಾಮರ್ಥ್ಯ (ರಾವಣ)ನಲ್ಲಿತ್ತು ಎಂಬುದು.
ಈಗ ಪ್ರಪಂಚದೆಲ್ಲೆಡೆ ಭಯೋತ್ಪಾದಕರ ಧಾಳಿ, ಆತ್ಮಹತ್ಯಾ ಬಾಂಬರುಗಳು, ಅಲ್ ಖೇಡಾ , ತಾಲೀಭಾನ್, ಲಷ್ಕರ್ ಎ ತೋಯ್ಬಾ ದಂತಹ ಜಾಲ ಪ್ರಪಂಚದಾದ್ಯಂತ ಪರಸರಿಸಲ್ಪಟ್ಟಿದೆ. ಇವರ ಹಿಂಸಾಚಾರ, ಕ್ರೂರ ಕೃತ್ಯದಿಂದಾಗಿ ಇವರೂ ಒಂದರ್ಥದಲ್ಲಿ ದಾನವರೇ ಆಗಿದ್ದಾರೆ.ಅವರಲ್ಲಿ ಸಂಯಮ, ಕರುಣೆ, ಜೀವಭಯ, ಪಾಪಪ್ರಜ್ಞೆ ಯಾವುದೂ ಇಲ್ಲ. ಈ ರೀತಿಯವರು ದಾನವರ ಸಾಲಿಗೇ ಸೇರಿದವರಾಗಿದ್ದಾರೆ. ಇವರ ನಿರ್ನಾಮವಾಗಬೇಕಿದ್ದರೆ ಯಾ ಮನಃ ಪರಿವರ್ತನೆಯಾಗಬೇಕಿದ್ದರೆ ಯಾವ ಅವತಾರ ಪುರುಷನ ಆಗಬೇಕೋ ಅರ್ಥವಾಗುತ್ತಿಲ್ಲ. ಜನ್ಮದಲ್ಲಿ , ಗುಣದಲ್ಲಿ ತಾಮಸನಾಗಿದ್ದರೂ ಎಷ್ಟೋ ದುಷ್ಟರನ್ನು ಶ್ರೇಷ್ಟರನ್ನಾಗಿ ಪರಿವರ್ತಿಸಿದ ಉದಾಹರಣೆಗಳು ನಮ್ಮ ಪುಣ್ಯಭೂಮಿಯಲ್ಲಿ ಸಾಕಷ್ಟಿದೆ.
ಶ್ರೀ ಶಂಕರಾಚಾರ್ಯರು ಭಾರತದ ಉದ್ದಗಲಕ್ಕೂ ಸಂಚರಿಸಿ ಆ ಕಾಲದಲ್ಲಿ ಇದ್ದ ಅಧರ್ಮ, ವಾಮಾಚಾರ , ಹಿಂಸಾಚಾರ, ಮೂಢ ನಂಬಿಕೆಗಳ ಬಗ್ಗೆ ಜನರಿಗೆ ತಿಳುವಳಿ, ಬೋಧನೆಗಳನ್ನು ನೀಡಿ ಧರ್ಮದ ಮಹತ್ವವನ್ನು ಭಾರತದಾದ್ಯಂತ ಪುನರುತ್ಧಾನಗೊಳಿಸುವಲ್ಲಿ ಸಾಫಲ್ಯವನ್ನು ಹೊಂದಿದ್ದರು.
ಕೇರಳದ ಒಂದು ಸಾಧಾರಣ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಮಾನವನ ಮನಸ್ಸಿನ ಅಂಧಕಾರವನ್ನು ಹೋಗಲಾಡಿಸಿ ಮನಸ್ಸನ್ನು ಪರಿವರ್ತನೆಗೊಳಿಸುವಲ್ಲಿ ಸಾಕಷ್ಟು ಸಫಲತೆಯನ್ನು ಪಡೆದಿದ್ದರು.
ಒಂದೇ ಜಾತಿ, ಒಂದೇ ಕುಲ ಒಬ್ಬನೇ ದೇವರು ಎಂಬ ಅವರ ಧ್ಯೇಯ ವಾಕ್ಯ ದೇಶದಾದ್ಯಂತ ಜನತೆಯನ್ನು ಅವರೆಡೆಗೆ ಆಕರ್ಷಿಸಿತು. ಹಿರಿಯರಲ್ಲಿ ಭಕ್ತಿ ಗೌರವ, ಕಿರಿಯರಲ್ಲಿ ವಾತ್ಸಲ್ಯ, ನೆರೆಯವರಲ್ಲಿ ಭಾತೃತ್ವ, ದೇವರಲ್ಲಿ ಭಕ್ತಿ , ಅರ್ಪಣಾ ಮನೋಭಾವ, ಸಚ್ಛಾರಿತ್ರ್ಯಾ ಆತ್ಮಾವಲೋಕನವೇ ಮೊದಲಾದ ಅವರ ವಿಚಾರ ಧಾರೆಗಳಿಂದ ಆಕರ್ಷಿತರಾದ ಜನತೆ ಅವರೊಬ್ಬ ದೈವಾಂಶ ಸಂಭೂತರೆಂದೇ ಗುರುತಿಸಲ್ಪಟ್ಟಿದ್ದರು.
ಅಂದರೆ ತ್ಯಾಗ ಜೀವನ, ಧರ್ಮ ಬೋಧನೆ, ಆದರ್ಶ, ಸುಸಂಸ್ಕೃತ ಅನುಕರಣೀಯವಾದುದು. ಇಂದು ಎಷ್ಟೋ ಮಂದಿ ಶಿಕ್ಷಣ ಸಂಸ್ಥೆಗಳೂ ಮಂದಿರಗಳೂ ಅವರ ಹೆಸರಿನಲ್ಲಿ ನಡೆಸಲ್ಪಡುತ್ತದೆ.
ಶ್ರೀ ರಾಮಕೃಷ್ಣ ಪರಮಹಂಸರು , ಶ್ರೀ ವಿವೇಕಾನಂದರು ಮೊದಲಾದ ಪ್ರಾಥಸ್ಮರಣೀಯರೂ ಇದೇ ಸಾಲಿನಲ್ಲಿ ಸೇರಿದವರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕೊನೆಯ ಘಟ್ಟದಲ್ಲಿ ಸತ್ಯ ಶಾಂತಿ ಅಹಿಂಸೆಯೆಂಬ ಮೂಲಮಂತ್ರದಿಂದ ಭಾರತೀಯರ ಮನಸೂರೆಗೊಂಡು ಭಾರತೀಯರನ್ನು ಒಂದೇ ಚೌಕಟ್ಟಿನಲ್ಲಿ ಬಂಧಿಸಿ ಒಂದೇ ಧ್ಯೇಯದಿಂದ ಬ್ರಿಟಿಷರ ವಿರುದ್ಧ ಹೋರಾಡಿ ಭಾರತಾಂಭೆಯ ದಾಸ್ಯ ಶೃಂಖಲೆಯಿಂದ ಮುಕ್ತಗೊಳಿಸಿದ ಮಹಾತ್ಮಾಜಿಯವರು ಮುಂದಿನ ಕಾಲದಲ್ಲಿ ದೈವಾಂಶ ಸಂಭೂತರೆಂದೇ ಜನರಿಂದ ಗುರುತಿಸಲ್ಪಡಲು ಹೆಚ್ಚು ದೂರವಿಲ್ಲ.
ಪ್ರತಿಯೋರ್ವ ವ್ಯಕ್ತಿಯಲ್ಲಿಯೂ ಸುಪ್ತವಾಗಿರುವ ಷಡ್ವೈರಿಗಳಾದ ಕಾಮ, ಕ್ರೋಧ, ಲೋಭ, ಮದ, ಮಾತ್ಸರ್ಯ , ಮೋಹಗಳು ಸಮಾನ ನೆಲೆಯಲ್ಲಿರಬೇಕು. ಕೆಲವೊಮ್ಮೆ ಅವುಗಳಲ್ಲಿ ಯಾವುದಾದರೊಂದು ಕೂಡ ಪ್ರಚೋದಿತವಾದರೆ ಎಂತಹ ಗಂಡಾಂತರಗಳನ್ನು ಎದುರಿಸಬೇಕಾಗುತ್ತದಲ್ಲದೆ ವ್ಯಕ್ತಿಯ ವಿನಾಶಕ್ಕೂ ಕಾರಣವಾಗುತ್ತದೆ. ಅಂದರೆ ಅಂತಹ ಕ್ಲಿಷ್ಟ ಸಮಯದಲ್ಲಿಯೂ ವಿವೇಕದಿಂದ ವಿಷಯಗಳನ್ನು ವಿಮರ್ಶಿಸುವ ನಂತರ ಮುಂದಡಿಯಿಡುವ ಪ್ರಜ್ಞೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಮುಖ್ಯವಾಗಿರುತ್ತದೆ.
ಮಾನವನ ಭಾವನೆಗಳನ್ನು ಕೆರಳಿಸದೆ, ಸನ್ಮಾರ್ಗದರ್ಶನವಿತ್ತು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಸನಾತನ ಧರ್ಮದ ಸಂಸ್ಕಾರವನ್ನೂ ಉದಾತ್ತ ಧ್ಯೇಯಗಳನ್ನೂ ಚಿಂತಿಸುವಲ್ಲಿಯೂ ಬೋಧಿಸುವಲ್ಲಿಯೂ ಆಚರಿಸುವಲ್ಲಿಯೂ ತ್ಯಾಗ ಮನೋಭಾವನೆಯನ್ನು ಯಾರು ತೋರುತ್ತಾನೋ ಹಿಂಸಾ ಪ್ರವೃತ್ತಿಯನ್ನು ತೊರೆದು ಅಹಿಂಸಾ ಗುಣದಿಂದ ದೇವನಾಗಲೂ ಸಾಧ್ಯವಿದೆ. ತನ್ನ ಸ್ವಭಾವದಿಂದಾಗಿ ಗುಣಗಳಿಂದಾಗಿ ಮಾನವರು ದಾನವನೂ ಆಗಬಲ್ಲ ದೇವನೂ ಆಗಬಲ್ಲ.

ಕೆ.ಚಂದ್ರಶೇಖರ ಭಟ್., ಪೆರಿಂಜೆ

0 comments:

Post a Comment