ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:56 AM

ಸಾಣೆ ತಾತ

Posted by ekanasu

ವರ್ಷಾಚರಣೆ
ಸಾಣೆ ತಾತನ ಹತ್ತಿರ ಕತ್ತರಿಕೊಟ್ಟು ಇಪ್ಪತ್ತು ನಿಮಿಷಗಳೇ ಆಗಿಹೋಯ್ತು. ಸಿಂಧೂಗೆ ನಿಂತೂ ನಿಂತೂ ಕಾಲುಗಳು ನೋಯತೊಡಗಿದ್ದವು. ಅವಳಿಗಿಂತ ಮತ್ತೆ ಬಂದ ಇಬ್ಬರಿಗೂ ಕತ್ತರಿ ಹರಿತಗೊಳಿಸಿ ಕೊಟ್ಟಿದ್ದ. ಅವಳ ಆಯಾಸ ಈಗ ಕೋಪದತ್ತ ತಿರುಗಿತ್ತು. ಸಿಟ್ಟನ್ನು ಅದುಮಿ ಹಿಡಿದು ಮತ್ತೊಮ್ಮೆ ಸಾಣೆಯವನತ್ತ ನೋಡಿದಳು. ಯಾಂತ್ರಿಕವಾಗಿ ಕೈಗಳು ಸಾಣೆ ಕೆಲಸ ಮುಂದುವರಿಸಿದ್ದರೂ ಅವಳ ಕಣ್ಣುಗಳು ಅವನನ್ನೇ ದಿಟ್ಟಿಸುತ್ತಿವೆ. ಸಿಂಧೂ ಸಹಿಸಲಾರದ ಸಿಟ್ಟಿನಿಂದ ಗರಕ್ಕನೆ ತಿರುಗಿ ನಿಂತಳು...ಚಟ್ಟಕ್ಕೆ ಹತ್ತುವ ವಯಸ್ಸಾದರೂ ಹದಿಹರೆಯದವರನ್ನು ನೋಡುವ ಚಪಲ! ನಾಚಿಕೆಯಾಗಲ್ವಾ ಇವನಿಗೆ? ಕೆನ್ನೆಗೆರಡು ಬಾರಿಸಿದರೆ ಸರಿಹೋಗುತ್ತಾನೆ. ಇನ್ನು ಯಾವತ್ತೂ ಇವನೊಡನೆ ಕತ್ತರಿಕೊಡಬಾರದು . ಮನದೊಳಗೆ ಅಂದುಕೊಂಡಳು. ಹೋದಸಾರಿ ಬಂದಿದ್ದಾಗಲೂ ಹಾಗೇ ಮಾಡಿದ್ದ. ಅವಳ ಕತ್ತರಿಯನ್ನು ಲೇಟಾಗಿಯೇ ಮಾಡಿಕೊಟ್ಟಿದ್ದ. ಕಾರಣ ಕೇಳಿದ್ದಕ್ಕೆ `ಅವ್ರದ್ದಲ್ಲಾ ಬೀಡಿ ಎಲೆ ಕತ್ತರಿಸುವ ಕತ್ತರಿಗಳು. ನಿನ್ನ ಕತ್ತರಿ ಬಟ್ಟೆ ಕತ್ತರಿಸುವ ಕತ್ತರಿ ತಾನೇ. ಹೆಚ್ಚು ಹೊತ್ತು ಸಾಣೆ ಹಿಡೀಬೇಕಾಗುತ್ತದೆ.'
ಸಿಂಧೂ ನಂಬಿದ್ದಳು. ಆದರೆ... ಆಗಾಗ ಅವನ ದೃಷ್ಟಿ ಅವಳತ್ತ ತಿರುಗಿದಾ ಅವಳಿಗೆ ಅವನ ವರ್ತನೆ ಸರಿ ಕಾಣುತ್ತಿರಲಿಲ್ಲ. ಅವಳ ತಾತ ಇರುತ್ತಿದ್ದರೆ ಈ ಅಜ್ಜನ ವಯಸ್ಸೇ ಆಗಿರುತ್ತಿತ್ತು. ಅವಳ ತಾತ ಯಾವುದೋ ಕಾಯಿಲೆಯಿಂದ ತೀರಿಕೊಂಡು ಎರಡು ವರ್ಷಗಳೇ ಸಂದಿದ್ದವು. ಈ ಮುದುಕನನ್ನು ಎಲ್ಲರೂ ಸಾಣೆ ತಾತ ಎಂದೇ ಕರೆಯುತ್ತಿದ್ದರು. ಹೋದ ಸಾರಿ ಸಿಂಧೂ `ಸಾಣೆತಾತಾ ನನ್ನ ಕತ್ರಿಗೆ ಸಾಣೆ ಹಿಡಿಸಿ ಕೊಡ್ಬೇಕು'' ಎಂದು ಕೊಟ್ಟಾಗ ಎವೆಯಿಕ್ಕದೆ ಅವಳನ್ನೇ ನೋಡಿ ಕತ್ತರಿ ತೆಗೆದುಕೊಂಡಿದ್ದ. ತೆಗೆದುಕೊಳ್ಳುವ ನೆಪದಲ್ಲಿ ಅವಳ ಕೋಮಲವಾದ ಕೈಯನ್ನೂ ಸ್ಪರ್ಶಿಸಿದ್ದ. ಆಗ ಅವಳಿಗೆ ಅವನ ಮೇಲೆ ತಪ್ಪಭಿಪ್ರಾಯವೇನೂ ಬರಲಿಲ್ಲ. ಈಗ ನೋಡುವಾಗ ಈ ವಯಸ್ಸಿನಲ್ಲಿಯೂ ಆತನಿಗೆ ಹೆಣ್ಣಿನ ಹುಚ್ಚಿರಬಹುದು ಎಂದೆನ್ನಿಸಿತು. ಅವನು ನೋಡುವಾಗ ಬಾಯೊಳಗೆ ಮೇಲ್ಭಾಗದಲ್ಲಿ ನೀಳವಾದ ಕಪ್ಪು ಬಣ್ಣಕ್ಕೆ ತಿರುಗಿದ ಎರಡೇ ಹಲ್ಲುಗಳನ್ನು ಗುಂಡುಕಲ್ಲಿನಿಂದ ಚಚ್ಚಿ ಪುಡಿಮಾಡಬೇಕೆನ್ನಿಸಿತು ಸಿಂಧುವಿಗೆ. ಇವನು ಸಾಣೆತಾತನಲ್ಲ..ಮುದುಕ...ಮನದಲ್ಲೇ ಅಂದುಕೊಂಡಳು.
ಈಗ ಇನ್ಯಾರದ್ದೋ ಕತ್ತರಿಯನ್ನು ಸಾಣೆಮಾಡುತ್ತಿದ್ದ. ಅವಳ ಸಿಟ್ಟು ನೆತ್ತಿಗೇರಿತ್ತು. ಯಾಕಪ್ಪಾ ನಾನು ಈ ಮುದುಕನ ಹತ್ತಿರ ಕತ್ತಿರಿ ಕೊಟ್ಟುಬಿಟ್ಟೆ...ಅರ್ಜೆಂಟಾಗಿ ಒಂದು ಚೂಡಿದಾರ್ ಹೊಲಿಯಲು ಬಟ್ಟೆ ಕತ್ತರಿಸಹೋದರೆ ಕತ್ತರಿ ಬಡ್ಡಾಗಿದೆ ಎಂದು ತಂದರೆ ಈ ಮುದುಕ ಹೀಗೆನಾ ಮಾಡುವುದು...ಇವನು ಮಾಡಿಕೊಡದಿದ್ರೆ ಬೇಡ . ನಾನು ಹಾಗೇನೇ ತೆಗೆದುಕೊಂಡು ಹೋಗುತ್ತೇನೆ ಎಂದು ಅತ್ತ ತಿರುಗಿದರೆ ಅವನು ಮಂದವಾಗಿ ನಗುತ್ತಾ ಅವಳನ್ನೇ ನೋಡುತ್ತಿದ್ದ. ಅವಳ ಕತ್ತರಿ ಅವನ ಮಡಿಲಲ್ಲಿ ಆಶಯ ಪಡೆದಿತ್ತು. ಅವಳಸಿಟ್ಟು ಈಗ ಅಳುವಾಗಿ ಮಾರ್ಪಟ್ಟಿತ್ತು. ``ಸಾಣೆತಾತ ನೀನು ಹರಿತ ಮಾಡದಿದ್ರೆ ಬೇಡ. ನನ್ನ ಕತ್ರೀನಾ ಹಾಗೇ ಕೊಟ್ಟುಬಿಡು'' ಎಂದಳು ಅಳುಮಿಶ್ರಿತ ಧ್ವನಿಯಲ್ಲಿ.

ಅವಳು ಅಳುವುದನ್ನರಿತ ತಾತ ಜಾಗೃತನಾದ. ಏಯ್ ಅಮ್ಮಣ್ಣೀ ಅಳಬೇಡ. ಅಳ್ಬೇಡ... ನಿನ್ನ ಕತ್ರೀನಾ ಲಗೂನೆ ಮಾಡಿಕೊಡ್ತೇನೆ...ಕಣ್ಣೊರೆಸಿಕೊ...'' ಎನ್ನುತ್ತಾ ಅವಳ ಕತ್ತರಿ ಸಾಣೆ ಮಾಡಿದ. ಅಲ್ಲೇ ಹೂ ಹಣ್ಣು ತರಕಾರಿ ಅಂಗಡಿಗಳ ಸಾಲಿನ ಕೊನೆಯಲ್ಲಿ ಪ್ಲಾಸ್ಟಿಕ್ ಹಾಕಿದ ಜಾಗದಲ್ಲಿ ಅವನ ವೃತ್ತಿ. ಅವಳು ಕಣ್ಣೊರೆಸಿಕೊಂಡಳು. ಅಷ್ಟರಲ್ಲಿ ತುಂತುರು ಮಳೆ ಬೀಳತೊಡಗಿತು. ಅವಳು ಕೊಡೆ ತಂದಿರಲಿಲ್ಲ. ಈ ಮುದುಕ ಆಗ್ಲೇ ಕೊಡ್ತಿದ್ರೆ ನಾನಾಗ್ಲೇ ಮನೆ ತಲುಪುತ್ತಿದ್ದೆ. ಮಳೆಗೆ ತೋಯಿಸಿಕೊಂಡ್ರೆ ಜ್ವರಗಿರ ಬಂದ್ರೆ... ಇವನು ಮದ್ದು ಮಾಡುತ್ತಾನಾ ಎಂದುಕೊಳ್ಳುತ್ತಿದ್ದಂತೆಯೇ... `ಇಕಾ ಮಗ್ಳೇ ನಿನ್ ಕತ್ರಿ ತಗೋ...ಈ ಕಡೆ ಬಾ ಇಲ್ಲಿ ಕೂತುಕೋ ಎನ್ನುತ್ತಾ ಅವಳಿಗೆ ಕೂತುಕೊಳ್ಳಲು ಮುದುಕ ಸ್ಟೂಲೊಂದನ್ನು ನೀಡಿದ.
ನಿನ್ನಿಂದಾನೇ ಹೀಗೆ ಆಗಿದ್ದು. ಆಗ್ಲೇ ಮಾಡಿಕೊಟ್ಟಿದ್ರೆ ...ಎನ್ನುತ್ತಾ ಅವನತ್ತ ಹಣ ಚಾಚಿದಳು... ``ಬೇಡ ಅಮ್ಮಣ್ಣಿ ಎನ್ನುತ್ತಾ ಅವಳನ್ನು ಕಣ್ಣುಗಳಲ್ಲಿ ತುಂಬಿಕೊಂಡ.
ನಿನ್ನ ಋಣ ನಂಗೆ ಬೇಡ. ಇನ್ಮುಂದೆ ಇಲ್ಲಿ ಬರುವುದೂ ಇಲ್ಲ. ನೀನು ಸಾಣೆಹಾಕಿ ಕೊಡ್ಲೂ ಬೇಡ ಎನ್ನುತ್ತಾ ದುಡ್ಡು ಅವನ ಪಕ್ಕ ಹಾಕಿ ಮಳೆಯನ್ನೇ ನೋಡುತ್ತಾ ನಿಂತುಕೊಂಡಳು.
ಅಮ್ಮಣ್ಣೀ ದುಡ್ಡೇನೂ ಬೇಡ ನಂಗೆ. ನೀನು ತುಸು ಈಕಡೆ ತಿರ್ಗು'' ತಾತ ಮತ್ತೆ ಹೇಳಿದ.
ಏ ಮುದುಕಾ ...ನಿಂಗೆ ಬುದ್ದಿಗಿದ್ದಿ ಇದ್ಯಾ...ಇಲ್ವಾ? ಹುಡುಗೀರ ಹತ್ರ ಹೇಗೆ ನಡ್ಕೋಬೇಕಂತ ನಿಂಗೆ ಗೊತ್ತಿದ್ಯೋ ಇಲ್ವೋ... ಅಲ್ಲಾ ಪೊಲೀಸರನ್ನ ಕರೆಸ್ಲಾ... ಆಗ ಮಳೆ ಜೋರು ಬರುತ್ತಿತ್ತು. ಮಾತ್ರವಲ್ಲ ಅವಳ ಮಾತುಗಳು ಕಠೋರವಾಗಿದ್ದರೂ ಧ್ವನಿ ತಗ್ಗಿಸಿ ಹೇಳಿದ್ದಳು.
ಗೊತ್ತವ್ವಾ ಗೊತ್ತು... ನಾನು ಯಾಕೆ ಹಾಂಗೆ ನಿನ್ನನ್ನೇ ನೋಡ್ತೇನಂತ ನಿಂಗೆ ಕೋಪ ಬಂತಲ್ವಾ... ಆ ಕೋಪದ ಮೋರೆ ನೋಡ್ತಿದ್ರೆ ನಂಗೆ ಬಾಳ ಖುಷಿ ಕಣವ್ವಾ...ನೋಡು ಮಗ್ಳೇ... ಅದ್ಯಾಕೆ ಅಂತ ನಿಂಗೊಂದು ಕತೆ ಹೇಳ್ತೇನೆ...ಕಣವ್ವಾ...ಮುದುಕ ಅಷ್ಟು ಹೇಳಿದೊಡನೆ ಸಿಂಧು ಕುತೂಹಲಗೊಂಡಳು. ಸಾಣೆ ತಾತ ಹೇಳತೊಡಗಿದೆ. ಸುಮಾರು ಮೂವತ್ತೈದು ವರ್ಷಗಳ ಹಿಂದೆ...
ಸಾಣೆ ತಾತನ ಹೆಸರು ಕುರುಂಬಿ. ಅವನ ಊರು ಇಲ್ಲಿಂದ ಸುಮಾರು ಎಂಭತ್ತೈದು ಮೈಲು ದೂರದಲ್ಲಿತ್ತು. ಮುಖ್ಯರಸ್ತೆಯಿಂದ ಒಂದು ಫರ್ಲಾಂಗು ದೂರದಲ್ಲಿ ಹತ್ತು ಸೆಂಟ್ಸ್ ಜಾಗದಲ್ಲಿ ಅವನು ಮನೆ ಕಟ್ಟಿಕೊಂಡು ಜೀವನ ಮಾಡುತ್ತಿದ್ದ. ಮನೆ ಎದುರುಗಡೆ ಇರುವ ಪುಟ್ಟ ಜಗಲಿಯಲ್ಲಿ ಕೂತು ಅವನು ಸಾಣೆ ಕೆಲಸ ಮಾಡುತ್ತಿದ್ದರೆ ದೆಯ್ಯು ಅಲ್ಲೇ ಸಮೀಪ ಕೂತು ಬೀಡಿ ಕಟ್ಟುತ್ತಿದ್ದಳು. ಮಗಳು ವತ್ಸಲಾ ಶಾಲೆಗೆ ಹೋಗುತ್ತಿದ್ದಳು. ಗಂಡ ಹೆಂಡ್ತಿ ಬಿಡುವಿನ ವೇಳೆಯಲ್ಲಿ ಹಿತ್ತಿಲಿನಲ್ಲಿ ತರಕಾರಿ, ಗೆಣಸು, ಮೆಣಸು ಬೆಳೆಸುತ್ತಿದ್ದರು. ಒಲೆಯ ಬೂದಿ ತರಗೆಲೆ ಸೆಗಣಿಯನ್ನು ಹಾಕಿ ನೀರೆರೆದು ಪೋಷಿಸುತ್ತಿದ್ದರು. ಸಮೃದ್ಧವಾಗಿ ಬೆಳೆದ ತರಕಾರಿಗಳನ್ನು ಸಂತಕೊಯ್ದು ಮಾರಿ ಕೈ ತುಂಬಾ ಸಂಪಾದಿಸುತ್ತಿದ್ದರು. ತಾನು ಅನಕ್ಷರಸ್ಥರಾದರೂ ಮಗಳಿಗೆ ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಬೇಕೆನ್ನುವ ಆಸೆ ಅವರಲ್ಲಿತ್ತು. ಅದಕ್ಕೆ ಸರಿಯಾಗಿ ಅವಳು ಚೆನ್ನಾಗಿ ಕಲಿತು ಒಳ್ಳೆಯ ಅಂಕಗಳಿಸುತ್ತಿದ್ದಳು. ಅವಳು ಉಡಲು ಕೂಡಾ ಯಾವ ಕೊರತೆಯನ್ನೂ ಮಾಡುತ್ತಿರಲಿಲ್ಲ ಅವಳ ಹೆತ್ತವರು. ಕೆಂಪು ಮಿಶ್ರಿತ ಬಿಳಿ ಬಣ್ಣದ ಸುಂದರಿಯಾದ ಹುಡುಗಿ ವತ್ಸಲಾ. ನಡೆನುಡಿ ಎಲ್ಲವೂ ಅಪ್ಪಟ ಬಂಗಾರ. ಶಾಲೆಯಲ್ಲಿ ಎಲ್ಲರಿಗೂ ಅವಳನ್ನು ಕಂಡರೆ ಪ್ರೀತಿ. ಅವಳ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಊರಿನಲ್ಲಿ ಹೈಸ್ಕೂಲ್ ಆಯಿತು. ಮಗಳ ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲವಾಯಿತೆಂದು ಕುರುಂಬಿ ದಂಪತಿ ಸಂತೋಷಪಟ್ಟರು. ಅವಳು ಓದುವುದನ್ನು ನೋಡಿ ಅವರಿಬ್ಬರು ತುಂಬಾ ಸಂತೋಷಪಡುತ್ತಿದ್ದರು. ಮಗಳು ಕಲಿತು ಟೀಚರು ಆದಂತೆ ಕನಸು ಕಾಣುತ್ತಿದ್ದರು.
ಮಗಳನ್ನು ಹೈಸ್ಕೂಲಿಗೆ ಸೇರಿಸಿ ಬಂದ ಮೇಲಂತೂ ಅವರ ಸಂತಸ ಹೇಳುವುದಕ್ಕಿಲ್ಲ. ಊರ ದೇವಾಲಯದಲ್ಲಿ ಮಗಳ ಹೆಸರಿನಲ್ಲಿ ವಿಶೇಷ ಪೂಜೆಯನ್ನೂ ಮಾಡಿಸಿದರು.
ಅಂದು ವತ್ಸಲಾಳ ಶಾಲೆಯ ವಾರ್ಷಿಕೋತ್ಸವ. ಅವಳಿಗೆ ಹೊಸ ಉಡುಪು ಹೊಲಿಸಿದ್ದರು. ಕೆಂಪು ಮೈಗೆ ನೀಲಿ ಹೂಗಳಿರುವ ಸಿಲ್ಕಿನ ಲಂಗ. ನೀಲಿ ರವಿಕೆಯಲ್ಲಿ ಅವಳ ಸೌಂದರ್ಯ ಎದ್ದುಕಾಣುತ್ತಿತ್ತು. ಎರಡೂ ಕೈಗೆ ತಲಾ ಆರು ನೀಲಿ ಗಾಜಿನ ಬಳೆಗಳು. ಎರಡೂ ಜಡೆಗೆ ಕನಕಾಂಬರದ ದಂಡೆ ಮುಡಿದು ಹಣೆಗೆ ಲಾಲ್ ಗಂಧದ ಬೊಟ್ಟು ಇಟ್ಟು ಕಣ್ಣಿಗೆ ಕಾಡಿಗೆ ಹಾಕಿ ಹೊರಟು ನಿಂತ ಮಗಳನ್ನು ದೆಯ್ಯು ಬಿಗಿದಪ್ಪಿ ದೃಷ್ಟಿನೀವಾಳಿಸಿದಳು. ಕುರುಂಬಿಯ ಕಣ್ಣಲ್ಲಿಯೂ ಸಂತಸದ ಕಣ್ಣೀರಿಳಿಯಿತು. ರಾತ್ರಿ ವತ್ಸಲಾಳ ಶಾಲೆಯಲ್ಲಿ ನಾಟಕವಿದ್ದಿತ್ತು. ಹುಡುಗಿಯರಿಗೆ ಉತ್ತಾನಪಾದ ಎಂಬ ಪೌರಾಣಿಕ ನಾಟಕವಿತ್ತು. ಅದರಲ್ಲಿ ವತ್ಸಲಾಳಿಗೆ ಸುನೀತಿಯ ಪಾತ್ರವಿತ್ತು. ಕೆಲವು ದಿನಗಳಿಂದ ಶಾಲೆಯಲ್ಲಿ ನಾಟಕಾಭ್ಯಾಸ ಮಾಡಿಸುತ್ತಿದ್ದರು. ತಮ್ಮ ಮಗಳು ನಾಟಕ ಮಾಡುತ್ತಾಳೆ ಎಂದಾಗ ದಂಪತಿಗೆ ಸ್ವರ್ಗವೇ ಕೈಗೆಟಕಿದಷ್ಟು ಸಂತೋಷ.
ವತ್ಸಲಾ ಹೆತ್ತವರಿಂದ ಬೀಳ್ಕೊಂಡು ಬೇಗ ಬೇಗ ನಡೆದಳು. ಉಳಿದ ಹುಡುಗಿಯರೆಲ್ಲಾ ರಸ್ತೆ ಬದಿಯಲ್ಲಿ ಅವಳಿಗಾಗಿ ಕಾದಿದ್ದರು. ವತ್ಸಲಾ ರಸ್ತೆಗೆ ತಲುಪಿದಳು. ಅವಳ ಸ್ನೇಹಿತೆಯರೆಲ್ಲಾ ಮಾರ್ಗದ ಆ ಕಡೆ ತಿರುಗಿದ್ದರು. ಎಲ್ಲರೂ ಒಟ್ಟಾಗಿ `ವತ್ಸಲಾ ರಾಜಕುಮಾರಿಗೆ ಜಯವಾಗಲೀ ' ಎಂದರು.
ಅವರ ಗುಂಪಿನೊಂದಿಗೆ ಒಂದಾಗಲು ವತ್ಸಲಾ ಬೇಗ ಬೇಗ ರಸ್ತೆದಾಟತೊಡಗಿದಳು. ಅಷ್ಟರಲ್ಲಿ ಅದೆಲ್ಲಿತ್ತೋ...ರಭಸವಾಗಿ ಬಂದ ಕಾರೊಂದು ವತ್ಸಲಾಳನ್ನು ಬಲಿತೆಗೆದುಕೊಂಡಿತು. ಗೆಳತಿಯರೆಲ್ಲಾ ಅತ್ತು ಗೋಳಾಡಿದರು. ವಿಷಯ ತಿಳಿದದ್ದೇ ಕುರುಂಬಿ ದೆಯ್ಯ ಓಡಿ ಬಂದರು.
ದೆಯ್ಯ ದೊಡ್ಡ ಧ್ವನಿಯಲ್ಲಿ ಬೊಬ್ಬಿಡುತ್ತಾ ಮಗಳ ಮೃತದೇಹವನ್ನು ತಬ್ಬಿಕೊಂಡಳು.ಒಂದೇ ಕ್ಷಣ ...ಮರುಕ್ಷಣದಲ್ಲೇ ದೆಯ್ಯುವ ದೇಹ ಅಲ್ಲೇ ಹತ್ತಿರದ ಸರಕಾರಿ ಬಾವಿಯ ತಳ ತಲುಪಿತ್ತು.

ಕುರುಂಬಿಗೆ ದಿಕ್ಕೇ ತೋಚದಾಯಿತು. ಎತ್ತ ನೋಡಿದರೂ ಶೂನ್ಯವೇ ಕಾಣುತ್ತಿತ್ತು. ಅವನಿಗೆ ಜೀವನವೇ ಶೂನ್ಯವಾದಂತಾಯಿತು. ಹೆಂಡತಿ ಮಗಳ ನೆನಪು ತರುವ ಮನೆಯೇ ಬೇಡವೆನ್ನಿಸಿತು. ಗೊತ್ತು ಗುರಿಯಿಲ್ಲದೆ ನಡೆಯತೊಡಗಿದ. ಕೈಯಲ್ಲಿರುವ ದುಡ್ಡು ಕರಗತೊಡಗಿತು. ಕೊನೆಗೆ ಚಿಕ್ಕದೊಂದು ಪೇಟೆಯಲ್ಲಿ ಅಂಗಡಿ ಸಾಲಿನ ಕೊನೆಯ ಸ್ವಲ್ಪವೇ ಜಾಗದಲ್ಲಿ ತನ್ನ ಉದ್ಯೋಗವನ್ನು ಪ್ರಾರಂಭಿಸಿದ. ಅವನೀಗ ಸಾಣೆತಾತ.

ಹಾಗೊಂದು ದಿನ ಬಂದ ಸಿಂಧುವನ್ನು ಕಾಣುತ್ತಿದ್ದಂತೆ ಕೆಲಸ ಮಾಡುತ್ತಿದ್ದ ಕೈಗಳು ಸ್ಥಗಿತಗೊಂಡಿದ್ದವು. ಥೇಟ್ ಅವನ ಸತ್ತು ಹೋದ ಮಗಳನ್ನೇ ಹೋಲುತ್ತಿದ್ದ ಸಿಂಧುವನ್ನು ನೋಡಿ ಭ್ರಮೆಹಿಡಿದವನಂತಾದ. ಮತ್ತೂ ಮತ್ತೂ ಅವಳನ್ನೇ ನೋಡಿದ. ಆ ನೋಟದಲ್ಲಿ ಕರುಳ ಕುಡಿಯನ್ನು ನೋಡಿದ ಹೆತ್ತ ತಂದೆಯ ಮಮತೆಯಿತ್ತು. ಮತ್ತೂ ಮತ್ತೂ ನೋಡುವುದಕ್ಕೋಸ್ಕರ ಅವಳ ಕತ್ತರಿಯನ್ನು ಬೇಗ ಕೊಡಲೇ ಇಲ್ಲ. ಸಿಂಧೂ ಅವನ ನೋಟವನ್ನು ತಪ್ಪು ಅರ್ಥಮಾಡಿಕೊಂಡಿದ್ದಳು. ಸಿಂಧುವನ್ನು ಮೊದಲಬಾರಿ ನೋಡಿ ಕುರುಂಬಿಗೆ ರಾತ್ರಿಮಲಗಿದರೆ ನಿದ್ರೆಯೇ ಬಾರದು. ಮಾರನೆಯ ದಿನದಿಂದ ಮತ್ತೆಂದು ಬರುವಳೋ ಸಿಂಧೂ ಎನ್ನುತ್ತಾ ದಾರಿ ಕಾಯತೊಡಗಿದ...
ಕತೆ ಹೇಳಿದ ತಾತನ ಕಣ್ಣುಗಳಲ್ಲಿ ತುಂಬಿದ ನೀರು ಸುಕ್ಕುಗಟ್ಟಿದ ಕೆನ್ನೆಯ ಮೇಲೆ ಇಳಿಯುತ್ತಿತ್ತು. ಕೇಳಿದ ಸಿಂಧುವಿನ ಕಣ್ಣುಗಳಲ್ಲಿಯೂ ಕಂಬನಿ ತುಂಬಿತ್ತು. ಅವಳ ಕೋಮಲವಾದ ಕೈ ಈಗ ಸಾಣೆತಾತನ ಕಣ್ಣೀರನ್ನು ತೊಡೆಯುತ್ತಿತ್ತು. ತಾತನ ಕೃಶವಾದ ಕೈಗಳು ಸಿಂಧುವಿನ ತಲೆಯನ್ನು ನೇವರಿಸುತ್ತಿತ್ತು.
ತಾತಾ ನಿನಗೆ ನನ್ನನ್ನು ನೋಡಿದರೆ ಸಂತೋಷವಾಗುತ್ತಿದ್ದರೆ ನಾನು ವಾರಕ್ಕೊಮ್ಮೆ ಖಂಡಿತಾ ಬರ್ತೇನೆ... ಎನ್ನುತ್ತಾ ಅಳು ತಡೆಯದೆ ಬಿಕ್ಕಿದಳು... ಬಾ ಮಗಳೇ...ಖಂಡಿತಾ ಬಾ... ಎನ್ನುತ್ತಾ ಸಿಂಧುವನ್ನು ತನ್ನೆದೆಗೆ ಒರಗಿಸಿಕೊಂಡ... ಈಗ ಸಾಣೆತಾತನ ಕಣ್ಣುಗಳಲ್ಲಿ ಆನಂದ ಭಾಷ್ಪ!
- ಸುಮತಿ ಕೆ.ಸಿ. ಭಟ್, ಆದೂರು
(ಕಥೆಗೆ ಬಳಸಲಾದ ಚಿತ್ರ ಕೇವಲ ಸಾಂದರ್ಭಿಕ. ಚಿತ್ರಕ್ಕೂ ಕಥೆಗೂ ಯಾವುದೇ ಸಂಬಂಧವಿರುವುದಿಲ್ಲ. - ಸಂ.)

0 comments:

Post a Comment