ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:00 PM

ಪುಣಚ ಗ್ರಾಮ ಸಭೆ

Posted by ekanasu

ಪ್ರಾದೇಶಿಕ ಸುದ್ದಿ
ತಾಲೂಕು ಪಂಚಾಯತ್ ಸದಸ್ಯೆಯ ಅಧಿಕಾರ ದುರುಪಯೋಗ ಬಯಲು

ವಿಟ್ಲ : ಪುಣಚ ತಾ.ಪಂ.ಸದಸ್ಯೆ ಸಿ.ಎಚ್ ಮಾಲತಿಯವರ ತವರು ಮನೆಗೆ ಎರಡು ಬಾರಿ ದುರಸ್ತಿಗೆ ಅನುದಾನ ಬಿಡುಗಡೆ ಮಾಡಿಕೊಂಡು ಅಧಿಕಾರ ದುರುಪಯೋಗ ಮಾಡಿದ ಬಗ್ಗೆ ಪುಣಚ ಗ್ರಾಮ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.ಸ್ಥಳೀಯ ಉದಯ ಕುಮಾರ್ ದಂಬೆ ಎಂಬವರು ಮಾಹಿತಿ ಹಕ್ಕಿನಲ್ಲಿ ವಿವರ ಪಡೆದುಕೊಂಡು ದಾಖಲೆ ಸಮೇತ ಪ್ರಕರಣವನ್ನು ಎಳೆಎಳೆಯಾಗಿ ಸಭೆಯ ಮುಂದಿಟ್ಟರು. ತಾ.ಪಂ.ಸದಸ್ಯೆ ಪುಣಚಾ ಗ್ರಾಮದ ಮೇಲಿನಪದವು ನಿವಾಸಿ ಸಿ.ಎಚ್.ಮಾಲತಿ ಅವರ ಇಬ್ಬರು ಸಹೋದರರು ಅವಿವಾಹಿತರಾಗಿದ್ದು, ತಾಯಿಯೊಂದಿಗೆ ವಾಸ್ತವ್ಯವಿದ್ದರೂ, ಅವರಿಬ್ಬರ ಹೆಸರಲ್ಲಿ ಎರಡು ಬಾರಿ ಸರಕಾರದ ಅನುದಾನ ನೀಡಿ ಓರ್ವ ಜನಪ್ರತಿನಿಧಿಯಾಗಿ ಅಕ್ರಮವೆಸಗಿದ್ದಾರೆ ಎಂದು ಜಗದೀಶ ಮಾರಮಜಲು ಮತ್ತು ಗುರುವಪ್ಪ ಧ್ವನಿಗೂಡಿಸಿದರು.

ಪುಣಚ ಗ್ರಾಮದ ಮೇಲಿನಪದವು ಎಂಬಲ್ಲಿ ಒಂದೇ ಮನೆಯನ್ನು ತೋರಿಸಿ ತಾ. ಪಂ. ಸದಸ್ಯೆಯ ಸಹೋದರರಾದ ವಾಸು ನಾಯ್ಕ ಅವರ ಹೆಸರಲ್ಲಿ 23 ಸಾವಿರ ರೂ. ಮತ್ತು ಇನ್ನೋರ್ವ ಸಹೋದರ ಬಾಲಕೃಷ್ಣ ನಾಯ್ಕ ಅವರ ಹೆಸರಲ್ಲಿ 13 ಸಾವಿರ ರೂ.ಗಳನ್ನು ಮನೆ ರಿಪೇರಿಗೆಂದು ಒಂದೇ ಸಾಲಿನಲ್ಲಿ ನೀಡಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು. ಸಾರ್ವಜನಿಕರ ಪ್ರಶ್ನೆಗಳಿಗೆ ಅಧಿಕಾರಿಗಳು ಸ್ಪಷ್ಟನೆ ನೀಡಲಾಗಲಿಲ್ಲ ಮತ್ತು ತಾ.ಪಂ.ಸದಸ್ಯೆ ಹಾಜರಿರಲಿಲ್ಲ. ದಂಬೆ ದ.ಕ.ಜಿ.ಪಂ.ಶಾಲೆಯಲ್ಲಿ 1 ನೇ ತರಗತಿಗೆ ಮಕ್ಕಳೇ ಸೇರಿಲ್ಲ.

7ನೇ ತರಗತಿವರೆಗಿನ ಶಾಲೆಯಲ್ಲಿ ಕೇವಲ 48 ಮಕ್ಕಳು ವಿದ್ಯಾರ್ಜನೆ ಮಾಡುತ್ತಿರುವುದು ಕೂಡಾ ಮುಖ್ಯ ಶಿಕ್ಷಕಿ ವರದಿ ನೀಡುವ ಸಂದರ್ಭದಲ್ಲಿ ಬೆಳಕಿಗೆ ಬಂತು. ಶಿಕ್ಷಣದ ಕಳಪೆ ಗುಣಮಟ್ಟದ ಕಾರಣವಾಗಿ ಶಾಲೆಗೆ ಮಕ್ಕಳ ಸೇರ್ಪಡೆಯಾಗುತ್ತಿಲ್ಲ ಅದನ್ನು ಮೇಲುಸ್ತುವಾರಿ ಸಮಿತಿಯವರು ಸರಿಪಡಿಸಿಕೊಳ್ಳಿ ಎಂದು ಸಾರ್ವಜನಿಕರು ಸಲಹೆ ನೀಡಿದಾಗ ಪೇಚಿಗೆ ಸಿಲುಕಿದ ಸಮಿತಿಯ ಸದಸ್ಯೆ ಹಾಗೂ ಪಂಚಾಯತ್ ಸದಸ್ಯೆ ನಳಿನಿ ಗೌಡ ತಕ್ಷಣ ಎದ್ದು ನಿಂತು ಸಾರ್ವಜನಿಕರ ಸಲಹೆಗೆ ಎದುರುತ್ತರ ನೀಡಲು ಹೋಗಿ ತಬ್ಬಿಬ್ಬಾದರು.

ಈ ಸಂದರ್ಭದಲ್ಲಿ ವಿದ್ಯುತ್ ಕಡಿತದ ಬಗ್ಗೆಯೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ಇಚ್ಚಾಶಕ್ತಿಯ ಅಧಿಖಾರಿಗಳಿಲ್ಲದೆ ರಸ್ತೆ ದುರಸ್ತಿ ಸಮರ್ಪಕವಾಗಿಲ್ಲ. 1 ಲಕ್ಷ ರೂ.ವೆಚ್ಚದ ಗರಡಿ ಬೈಲು ರಸ್ತೆ ಡಾಮರೀಕರಣ ಕಾಮಗಾರಿ ಕಳಪೆಯಾಗಿದೆ ಎಂದು ದೂರಿದರು. ಇದೇ ಸಂದರ್ಭದಲ್ಲಿ ದೇವಿನಗರ ಕಲ್ಲಾಜೆ ರಸ್ತೆ ಡಾಮರೀಕರಣಕ್ಕಾಗಿ ಬಾಲ್ಡರ್ಸ್ ಹಾಕಿ ವರ್ಷಗಳಾದವು. ಆದರೆ ಇನ್ನೂ ಅಭಿವೃದ್ಧಿಯಾಗಿಲ್ಲ. ಸಂಚಾರಕ್ಕೆ ಅಸಾಧ್ಯವಾಗಿದೆ.

ಡಾಮರೀಕರಣವಾಗದೇ ಹೋದಲ್ಲಿ ಜಲ್ಲಿಯನ್ನು ತೆಗೆದು ಮಾರ್ಗದ ಬದಿಯಲ್ಲಿ ರಾಶಿ ಹಾಕುತ್ತೇವೆ ಎಂದು ಜಿ.ಪಂ.ಇಂಜಿನಿಯರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಗ್ರಾ.ಪಂ.ಅಧ್ಯಕ್ಷೆ ನಯನ ಅಧ್ಯಕ್ಷತೆ ವಹಿಸಿದ್ದರು. ನೋಡಲ್ ಅಧಿಕಾರಿಯಾಗಿ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಸಿ.ನಾಗರಾಜ್ ಭಾಗವಹಿಸಿದ್ದರು. ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಚಿತ್ರ - ವರದಿ: ಜ್ಯೋತಿಪ್ರಕಾಶ್ ಪುಣಚ

0 comments:

Post a Comment