ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ವರದಿ : ಜ್ಯೋತಿಪ್ರಕಾಶ್ ಪುಣಚಾ
ವಿಟ್ಲ :ಬಂಟ್ವಾಳ ತಾಲೂಕಿನ ವಿಟ್ಲ ಕಸಬ ಗ್ರಾಮದ ಕೂಜಪ್ಪಾಡಿ ನಿವಾಸಿ ಗೂಡಂಗಡಿ ವ್ಯಾಪಾರಸ್ಥರೋರ್ವರು ಹಲವಾರು ಸಮಯಗಳಿಂದ ಹೃದಯಕ್ಕೆ ಸಂಬಂಧಪಟ್ಟ ಖಾಯಿಲೆಯಿಂದ ನರಳುತ್ತಿರುವ ಹೃದಯ ವಿದ್ರಾವಕ ಘಟನೆಯೊಂದು ವಿಟ್ಲದಲ್ಲಿ ಕಂಡುಬಂದಿದ್ದು, ವೈದ್ಯಕೀಯ ವೆಚ್ಚ ಸುಮಾರು ಒಂದು ಲಕ್ಷವನ್ನು ಈಗಾಗಲೇ ಬರಿಸಿದ ನಿರ್ಗತಿಕ ಕುಟುಂಬ ಮನೆಯೊಡೆಯನನ್ನು ಬದುಕುಳಿಸಲು ಇನ್ನೂ ಎರಡು ಲಕ್ಷ ರೂಪಾಯಿಗಳ ಅಗತ್ಯತೆಯಿಂದಾಗಿ ದಾನಿಗಳ ಮೊರೆ ಹೊಕ್ಕಿದ್ದಾರೆ.ಕಳೆದ ಹಲವಾರು ವರ್ಷಗಳಿಂದ ವಿಟ್ಲದಲ್ಲಿ ಆಮ್ಲೆಟ್ ಗಾಡಿ ನಡೆಸಿ ತನ್ನ ಪುಟ್ಟ ಸಂಸಾರವನ್ನು ಸಾಗಿಸುತ್ತಿದ್ದ ನಿವಾಸಿ ಸಾಂತಪ್ಪ ಮೂಲ್ಯ (48) ಎಂಬವರೇ ಅನಾರೋಗ್ಯಕ್ಕೀಡಾಗಿ ಬಳಲುತ್ತಿದ್ದು, ಜೀವನ್ಮರಣ ಹೋರಾಟದಲ್ಲಿದ್ದಾರೆ.ಇಡೀ ಕುಟುಂಬಕ್ಕೆ ಆಧಾರಸ್ತಂಭವಾಗಿರುವ ಇವರು ವಿಟ್ಲ ಪೇಟೆಯಲ್ಲಿ ಗೂಡಂಗಡಿಯಲ್ಲಿ ಚಿಲ್ಲರೆ ವ್ಯಾಪಾರ ಹಾಗೂ ಆಮ್ಲೇಟ್ ಮಾಡಿ ಜೀವನ ಸಾಗಿಸುತ್ತಿದ್ದರು. ಸಂಕಷ್ಟದಲ್ಲಿ ಬದುಕು ಸವೆಸುತ್ತಿರುವ ಇವರು ಹಣದ ಕೊರತೆಯಿಂದ ಮಗಳ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಬಡತನದ ಬೇಗೆಯಲ್ಲಿಯೂ ಮಗನ ಓದು ನಡೆಯುತ್ತಿದೆ. ಪತ್ನಿ ಬೀಡಿ ಕಟ್ಟಿ ಬರುವ ಆದಾಯ ಒಪ್ಪೊತ್ತಿಗೆ ಸಾಕಾಗುವುದಿಲ್ಲ. ಸಂಸಾರದ ರಥವನ್ನು ಎಳೆಯುವುದಕ್ಕೆ ಈ ಸಂಸಾರ ಪಡುವ ಕಷ್ಟದ ಮೇಲೆ ಅನಾರೋಗ್ಯ ಮುತ್ತಿಕ್ಕಿ ಇವರ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

ವರ್ಷಗಳ ಹಿಂದೆ ಎಂದಿನಂತೆ ಆಮ್ಲೇಟ್ ಅಂಗಡಿ ಮುಚ್ಚಿ ಮನೆಗೆ ಬಂದ ಸಾಂತಪ್ಪರು ಮಲಗಲೆಂದು ಚಾಪೆ ಕಡೆ ಹೋದಾಗ ಅಲ್ಲಿಯೇ ಕುಸಿದು ಬಿದ್ದರು. ಏಳಲೆಂದು ಯತ್ನಿಸಿದರೆ ದೇಹ ಪೂರ್ತಿ ರಕ್ತವೇ ಚಲನೆಯಿಲ್ಲದಂತಾಗಿ ಮಲಗಿದಲ್ಲಿಯೇ ಉಳಿದುಹೋದರು. ಸುಮಾರು 25 ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆಯ ಮೂಲಕ ಬದುಕುಳಿದ ಸಾಂತಪ್ಪರವರು ಸುಶೀಲ ಎಂಬವರನ್ನು ಮದುವೆಯಾಗಿ ಪದ್ಮಪ್ರಿಯಾ ಮತ್ತು ರೋಶನ್ ಎಂಬಿಬ್ಬರು ಮಕ್ಕಳನ್ನು ಪಡೆದು ನೆಮ್ಮದಿಯ ಜೀವನ ಸಾಗಿಸುತ್ತಿರುವಾಗಲೇ ಅನಾರೋಗ್ಯ ಕಾಣಿಸಿಕೊಂಡು ಇದೀಗ ಈ ಸಂಸಾರ ಒಪ್ಪೊತ್ತಿನ ಊಟಕ್ಕೆ ಪರದಾಡುವ ಸ್ಥಿತಿಯಲ್ಲಿದೆ.


ಊಟ, ಬಟ್ಟೆ, ಬರೆಗಳಿಗೇ ತತ್ವಾರವಾಗಿರುವಾಗ ಔಷಧಿಗೆ ದುಡ್ಡು ಹೊಂದಿಸಲು ಸಾಧ್ಯವೇ ? ಹೃದಯ ತೊಂದರೆಯಿಂದ ಎಡಭಾಗ ರಕ್ತ ಚಲನೆಯಿಲ್ಲದೆ, ಪಾಶ್ರ್ವವಾಯು ಪೀಡಿತರಾಗಿ ಹೋದ ಸಾಂತಪ್ಪ ಅವರಿಗೆ ನಡೆದಾಡಲೂ ಸಾಧ್ಯವಾಗುತ್ತಿಲ್ಲ. ಈಗಾಗಲೇ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯಿಂದ , ಬ್ಯಾಂಕಿನಿಂದ ನೆರೆಕರೆಯವರಿಂದ ಸಾಲ ಸೋಲ ಮಾಡಿ ಕಂಡ ಕಂಡ ದೈವ ದೇವರುಗಳಿಗೆ ಹರಕೆ ಹೇಳುತ್ತಾ, ಆಸ್ಪತ್ರೆಗಳಿಗೆ ಹಣ ಸುರಿದಿದ್ದಾರೆ. ಆರು ತಿಂಗಳುಗಳೊಳಗಾಗಿ ತುರ್ತು ಶಸ್ತ್ರ ಚಿಕಿತ್ಸೆ ನಡೆಸಿದರೆ ಜೀವ ಉಳಿಯಬಹುದು ಹೃದಯಕ್ಕೆ ವಾಲ್ವ್ನ್ನು ಅಳವಡಿಸಿದರೆ ಅವರು ಮೊದಲಿನಂತಾಗಬಹುದು ಎಂದು ವೈದ್ಯರು ತಿಳಿಸಿರುವುದರಿಂದ ಬದುಕುವ ಆಶಾಕಿರಣವೊಂದು ಕಾಣಿಸಿದ್ದು, ತಾನು ಆರೋಗ್ಯಕ್ಕೆ ಮತ್ತೆ ಮರಳಿದರೆ, ತನಗೆ ಗೂಡಂಗಡಿಯಲ್ಲಿ ವ್ಯಾಪಾರ ನಡೆಸಿ ಸಂಸಾರ ಸಾಗಿಸಬಹುದು ಎನ್ನುವ ಮಹದಾಸೆ ಅವರಿಗಿದೆ. ಆದರೆ ವೈದ್ಯರು ತಿಳಿಸಿದ ಅವಧಿ ಈಗಾಗಲೇ ಮೀರಿಹೋಗಿದ್ದು, ಸಾಂತಪ್ಪರ ಸಂಸಾರ ದುಡ್ಡು ಹೊಂದಿಸಲಾರದೆ ದೇವರ ಮೇಲೆ ಭಾರಹಾಕಿ ಕೈಚೆಲ್ಲಿ ಕುಳಿತಿದೆ.

ಬಡಕುಟುಂಬ ಬೇರೆ ದಾರಿ ಕಾಣದೆ ಸಹೃದಯ ಬಾಂಧವರಲ್ಲಿ ತಮ್ಮ ಅಳಲನ್ನು ತೋಡಿಕೊಂಡು ಮನೆಯೊಡೆಯನನ್ನು ಬದುಕಿಸಿಕೊಡಿ ಎಂದು ಮೊರೆಯಿಡುತ್ತಿರುವ ದೃಶ್ಯ ಕಲ್ಲು ಹೃದಯವನ್ನು ಕರಗಿಸುತ್ತದೆ. ಕೋಲಿನಾಲಿಗೈದು ಒಪ್ಪೊತ್ತಿನ ಊಟ ಮಾಡಿ ಜೀವನ ಸಾಗಿಸುತ್ತಿದ್ದ ಈ ಬಡ ನಿರ್ಗತಿಕ ಕುಟುಂಬ ಇದೀಗ ಎಲ್ಲವನ್ನೂ ಬಿಟ್ಟು ಜೀವ ಉಳಿಸಿಕೊಳ್ಳುವ ಯತ್ನದಲ್ಲಿ ಕಣ್ಣೀರಿನ ಅನ್ನ ಸೇವಿಸುತ್ತಾ ಒಂದುವರೆ ಲಕ್ಷ ರೂಪಾಯಿಗಳಿಗೆ ಕಣ್ಮುಚ್ಚಿ ದೇವರನ್ನು ನೆನೆಯುತ್ತಿದ್ದಾರೆ. ಸಹೃದಯ ಬಾಂಧವರು ತಮ್ಮ ಸಂಸಾರದ ಆಧಾರವಾಗಿರುವ ಮನೆಯೊಡೆಯನ ಪ್ರಾಣ ಉಳಿಸಲು ನೆರವಾಗಬೇಕೆಂದು ಕಂಡ ಕಂಡವರಲ್ಲಿ ಬೇಡುತ್ತಿದ್ದಾರೆ.

ಬಡರೋಗಿಗೆ ಧನಸಹಾಯ ಮಾಡಲಿಚ್ಛಿಸುವವರು ಸಿಂಡಿಕೇಟ್ ಬ್ಯಾಂಕಿನ ವಿಟ್ಲ ಶಾಖೆಯ ಉಳಿತಾಯ ಖಾತೆ ಸಂಖ್ಯೆ 01412200022340ಕ್ಕೆ ಕಳುಹಿಸಬಹುದು. ಅಥವಾ ಅವರ ಕುಟುಂಬವನ್ನು ಮೊಬೈಲ್ 9663950482 ಮೂಲಕವೂ ಸಂಪರ್ಕಿಸುವಂತೆ ವಿನಂತಿಸಿದ್ದಾರೆ.

ಮಾನವಿಯತೆ ಮೆರೆದ ವಿಟ್ಲ ದಲಿತ ಸೇವಾ ಸಮಿತಿ
ಕಳೆದ ಹಲವಾರು ಸಮಯಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿರುವ ಪ್ರಾಮಾಣಿಕ ವ್ಯಾಪಾರಿಯ ದುಸ್ಥಿತಿಯನ್ನು ಕಂಡು ಮರುಗಿದ ವಿಟ್ಲ ದಲಿತ ಸೇವಾ ಸಮಿತಿಯ ಅಧ್ಯಕ್ಷರಾದ ಸೇಸಪ್ಪ ಬೆದ್ರಕಾಡು ಅವರು ಬಡರೋಗಿಯ ಮನೆಗೆ ಬೇಟಿ ಮಾಡಿದರು. ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವ ಸಾಂತಪ್ಪರ ಕುಟುಂಬದ ಸಂಕಷ್ಟದೊಂದಿಗೆ ಸ್ಪಂದಿಸಿ ಸಮಿತಿಯ ಸದಸ್ಯರು ನೀಡಿದ ಧನ ಸಹಾಯದಿಂದ 50 ಕೆಜಿ ಅಕ್ಕಿಯನ್ನು ಬಡ ಕುಟುಂಬಕ್ಕೆ ನೀಡಿ ಅವರ ಕಣ್ಣೀರು ಒರಸಿ ಮಾನವೀಯತೆ ಮೆರೆದಿದ್ದಾರೆ. ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ್ ವಿಟ್ಲ, ಕೋಶಾಧ್ಯಕ್ಷ ಉಮೇಶ್ ಸುರುಳಿಮೂಲೆ,ದಯಾನಂದ ಚೆಕ್ಕಿದಕಾಡು ತಮ್ಮ ಸಹಾಯವನ್ನು ನಿರ್ಗತಿಕ ಕುಟುಂಬಕ್ಕೆ ನೀಡಿ ಆದರ್ಶತೆ ಮೆರೆದಿದ್ದಾರೆ.

0 comments:

Post a Comment