ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಒಂದು ಕಾಲದಲ್ಲಿ ಅಲ್ಲೊಂದು ಊರಿತ್ತಂತೆ. ಅದರ ಸಡಗರಕ್ಕೆ ಮನ ತುಂಬಿಹೋಗುತ್ತಿತ್ತಂತೆ. ಹಸಿರೆಲ್ಲಾ ತಾನೆಂದಿತೋ ಎಂಬಂತಹ ಸಮೃದ್ಧಿ ಅಲ್ಲಿತ್ತಂತೆ. ಹಕ್ಕಿಪಕ್ಕಿಗಳ ಕಲರವಕ್ಕೂ, ಚಿಣ್ಣರ ಹುಯಿಲಿಗೂ, ಕರುಗಳ ಅಂಬಾ ಕೂಗಿಗೂ ಸ್ವರ್ಗಕ್ಕೆ ಕಿಚ್ಚು ಹಚ್ಚೆನ್ನುವ ರೂಪಕ ಸುಳಿದು ಹೋಗುತ್ತಿತ್ತಂತೆ. ಬಂಗಾರದಂಥಾ ಬೆಳೆಗೆ ತೆನೆ ತೂಗಿ ಬಾಗುತ್ತಿತ್ತಂತೆ. ಸಂಪತ್ತು ಅಡಿಕೆ-ತೆಂಗು ಬಾಳೆಗಳ ರೂಪದಲ್ಲಿ ಫಲ ನೀಡಿ ಚಿನ್ನವೇ ತಾನೆಂಬಂತೆ ನಳನಳಸುತ್ತಿತ್ತಂತೆ. ರೈತನ ಬಾಳನ್ನು ಹಸನುಗೊಳಿಸುತ್ತಿತ್ತಂತೆ. ಒಂದಾನೊಂದು ಕಾಲದಲ್ಲಿ ಆ ಹಳ್ಳಿಯಲ್ಲಿ ಕೂಡು ಕುಟುಂಬಗಳು ತುಂಬುಜೀವನ ನಡೆಸುತ್ತಿದ್ದವಂತೆ.


ಊರಿನ ಭೂತ-ದೈವ ದೇವಸ್ಥಾನಗಳಿಗೆ ಜನರು ಭಯಭಕ್ತಿಯಿಂದ ನಡೆದುಕೊಳ್ಳುತ್ತಿದ್ದರಂತೆ. ಆ ಊರಲ್ಲಿ ನಾಗಬನಗಳಿದ್ದವಂತೆ. ಜಾತ್ರೆ-ಪೂಜೆ, ಹಬ್ಬ ಹರಿದಿನಗಳಲ್ಲಿ ಅಲ್ಲಿ ಉತ್ಸಾಹ ಮೇರೆಮೀರುತ್ತಿದ್ದವಂತೆ.
ಒಂದಾನೊಂದು ಕಾಲದ ಆ ಗ್ರಾಮ ಆದರ್ಶ ತುಳು ಗ್ರಾಮಕ್ಕೊಂದು ಮಾದರಿಯಾಗಿತ್ತಂತೆ. ಅಲ್ಲಿ ತುಳುವರು ನೇಜಿ ನೆಡುತ್ತಿದ್ದರಂತೆ.ವಾರ್ಷಿಕ ನೇಮ-ಕೋಲಗಳಲ್ಲಿ ಗಗ್ಗರದ ನಾದ ಪಸರಿಸುತ್ತಿತ್ತಂತೆ. ಕಡಸಲೆಯ ವೊನಚಿಗೂ ನಲಿಯುವವರ ಆದೇಶಕ್ಕೂ ಆಸ್ತಿಕರು ಕೈಮುಗಿಯುತ್ತಿದ್ದರಂತೆ. ಪಡುವಣದ ಕಡಲಲ್ಲಿ ಸೂರ್ಯನಿಳಿಯುವಾಗ ಕರೆಂಟಿಲ್ಲದ ಆ ಊರಲ್ಲಿ ಪಾಡ್ದನಗಳು ಗುನುಗುನಿಸುತ್ತಿದ್ದವಂತೆ. ಒಂದಾನೊಂದು ಕಾಲದ ಆ ಗ್ರಾಮದಲ್ಲಿ ಗೋ ಸಮೃದ್ಧಿ ಇತ್ತಂತೆ. ಮುಂಜಾನೆಯ ಹೊತ್ತು ತಾಯಂದಿಯರು ಕರೆಯುತ್ತಿದ್ದ ಹಾಲಿಗೆ ಮಂಗಳೂರಿನ ಹೊಟೇಲುಗಳು ಕಾಯುತ್ತಿದ್ದವಂತೆ. ಮನೆ ಮಕ್ಕಳೂ ಬೆಳೆಯುತ್ತಿದ್ದವಂತೆ.

ಹೀಗೆ ಒಂದಾನೊಂದು ಕಾಲದಲ್ಲಿ ಅಸ್ತಿತ್ವದಲ್ಲಿದ್ದ, ಈಗ ಕಾಲಗರ್ಭಕ್ಕೆ ಸೇರಿಹೋದ ಆ ಗ್ರಾಮದ ಬಗ್ಗೆ ಹಲವು ವೈಭವದ ಮಾತುಗಳು ಈಗಲೂ ದ.ಕ.ದಲ್ಲಿ ಕೇಳಿಬರುತ್ತವೆ. ಸಮೃದ್ಧ ನೀರು ಹರಿಯುತ್ತಿದ್ದ, ಹಾಲು ತುಳುಕುತ್ತಿದ್ದ, ಸ್ವಚ್ಛಂದ ಗಾಳಿ ಬೀಸುತ್ತಿದ್ದ ಬಾಳ ವೈನಾಗಿದ್ದ ಆ ಗ್ರಾಮದ ಹೆಸರು ಬಾಳ ಆಗಿತ್ತಂತೆ. ನಾಗರಿಕತೆಯ ಹೊಡೆತಕ್ಕೆ ಸಿಕ್ಕಿ ಬಲಿಯಾಗಿ ಹೋದ ಬಹಳ ಗ್ರಾಮಗಳ ಪೈಕಿ ಬಾಳವೂ ಒಂದು ಮತ್ತು ಬಾಳ ಮಹತ್ತ್ವದ್ದು. ಆಧುನಿಕ ಪ್ರಪಂಚದ ಆದ್ಯತೆಗಳಿಗೆ ತನ್ನ ಹಿತವನ್ನು ಬಲಿಕೊಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಬಾಳ ಇಂದು ವಿಳಾಸದಲ್ಲಿಲ್ಲದ ಒಂದಾನೊಂದು ಕಾಲದ ಊರು. ಇದೀಗ ಬಾಳವಿದ್ದ ಪ್ರದೇಶ ತಂತ್ರಜ್ಞಾನದ ಶ್ರೀಮಂತಿಕೆಗೆ, ವಿಜ್ಞಾನದ ಉತ್ತಂಗಕ್ಕೆ ಸಾಕ್ಷಿಯಾಗಿ ನಿಂತಿದೆ. ಆದರೆ ಹಿಂದಿನ ಮಿಡಿತವೆಲ್ಲೋ ಮಾಯವಾಗಿದೆ. ಮೂಲದ ಸ್ವರೂಪ ಗುರುತು ಸಿಗದಂತೆ ಊರಿನ ಕುರುಹುಗಳು ಮಣ್ಣು ಸೇರಿವೆ.

ಮಂಗಳೂರಿನಿಂದ ಉತ್ತರಕ್ಕೆ 15 ಕಿ.ಮೀ. ದೂರದ ಬಾಳ ಇಂದು ಬೃಹತ್ ತೈಲ ಶುದ್ಧೀಕರಣ ಘಟಕ. ಅದರ ಸುತ್ತಲೂ ಇಂದು ಪೇಟೆ ಎದ್ದಿದೆ. ಪೇಟೆ ಬದಿಯ ಎಲ್ಲಾ ಕೊಳಕುಗಳೂ ಅಲ್ಲಿ ಸೃಷ್ಟಿಯಾಗಿವೆ. ಜನಜಂಗುಳಿ, ಕಾರ್ಮಿಕರು, ತ್ಯಾಜ್ಯ, ಅಂಗಡಿ ಮುಂಗಟ್ಟು ಒಟ್ಟಾರೆ ಆಧುನಿಕವೆನ್ನುವ ಸಂಪತ್ತು ಅಲ್ಲಿ ಸಂಚಯವಾಗಿದೆ. ಬಾಳ ಗ್ರಾಮದವರ ವಂಶವೃಕ್ಷದ ಸಮಾಧಿಯ ಮೇಲೆ ಎಂಆರ್ ಪಿ.ಎಲ್ ಎಂಬ ದೈತ್ಯ ತೈಲ ಘಟಕ ಪ್ರತಿಷ್ಠಾಪಿಸಲ್ಪಟ್ಟಿದೆ. ಭಾರತ ಸರಕಾರದ ಓಎನ್ ಜಿ ಸಿ ಅಧೀನದ ಈ ಉದ್ಯಮ ನೋಡನೋಡುತ್ತಲೇ ತೈಲದ ಮೂಲಕ ಒಂದು ಗ್ರಾಮವನ್ನು, ಆ ಮೂಲಕ ಒಂದು ಸಂಸ್ಕೃತಿಯನ್ನು ಕೊಚ್ಚಿ ಹಾಕಿಬಿಟ್ಟಿದೆ.

6.69 ಮಿಲಿಯನ್ ಮೆಟ್ರಿಕ್ಟನ್ ಸಾಮಥ್ರ್ಯದ ಈ ಬೃಹತ್ ತೈಲ ಶುದ್ದೀಕರಣ ಸಮಸ್ತ ಕರಾವಳಿಗೆ ಕಂಟಕವಾಗುತ್ತಾ ಸಾಗುತ್ತಿದೆ. ಅಭಿವೃದ್ಧಿಯ ನಡೆಗೆ ಬಾಳದಂತಹ ಹಲವು ಗ್ರಾಮಗಳನ್ನು ನುಂಗಿ ಹಾಕಲು ಕಾತರಿಸುತ್ತಿದೆ. ಯಾವ ಕಂಪೆನಿಯಿಂದ ತಮ್ಮ ಉದ್ದಾರವಾಗುತ್ತದೆಂದು ಜನ ನಂಬಿಕೊಂಡಿದ್ದರೋ ಯಾವ ಕೆಲಸವನ್ನು ನಂಬಿ ತಮ್ಮ ನೆಲವನ್ನು ರೈತರು ಕಾಣದ ದಣಿಗಳಿಗೆ ಒಪ್ಪಿಸಿದ್ದರೋ ಅಂಥವರು ಇಂದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಏಕೆಂದರೆ ಸ್ಥಳೀಯರಿಗೆ ಉದ್ಯೋಗ ನೀಡುವೆವೆಂಬ ಭರವಸೆ ಈಗಾಗಲೇ ಹುಸಿಯಾಗಿದೆ. ಕಲ್ಪಿಸಿದ್ದ ಪುನರ್ ವಸತಿ ಪ್ರದೇಶಗಳಲ್ಲಿ ಮೂಲ ಸೌಲಭ್ಯಗಳೇ ಇಲ್ಲವಾಗಿದೆ. ದಟ್ಟ ರಾಸಾಯನಿಕ ತ್ಯಾಜ್ಯ ಸಮುದ್ರ ಸೇರುತ್ತಿದೆ. ಹೀಗೆ ಮೋಸ ಹೋದ ಸ್ಥಳೀಯರು ಕಳಕೊಳ್ಳುವ ಆಟವನ್ನು ಅಂದಿನಿಂದಲೇ ಶುರುವಿಟ್ಟುಕೊಂಡರು. ಅರ್ಥಾತ್ ಯಾವಾಗ ಮಂಗಳೂರಿಗೆ ಎಂಆರ್ ಪಿ.ಎಲ್ ಬಂತೋ ಅಂದಿನಿಂದಲೇ ಕರಾವಳಿಗೆ ಕಂಟಕವೂ ಆರಂಭವಾಗಿಬಿಟ್ಟಿತು. ಏಕೆಂದರೆ ಕರಾವಳಿಯ ಇಂದಿನ ಎಲ್ಲಾ ಕಂಟಕಗಳಿಗೆ ಎಂಆರ್. ಪಿ.ಎಲ್ ಒಂದಲ್ಲ ಒಂದು ವಿಧದಲ್ಲಿ ಕಾರಣವಾಗಿದೆ ಮತ್ತು ಕರಾವಳಿಗೆ ಬರುತ್ತಿರುವ ಹೊಸಹೊಸ ಯೋಜನೆಗಳು ಈ ತೈಲ ಶುದ್ಧೀಕರಣ ಘಟಕದ ಕಾರಣದಿಂದಲೇ ಆರಂಭವಾಗುತ್ತಿದೆ.

ಹಾಗೆ ಕರಾವಳಿಯ ಎಲ್ಲಾ ಯೋಜನೆಗಳ ಮೂಲ ಬೇರಿನಂತಿರುವ ಈ ತೈಲ ಶುದ್ಧೀಕರಣ ಘಟಕ ಇದೀಗ ಮಂಗಳೂರಿನ ಗ್ರಾಮಾಂತರ ಪ್ರದೇಶವನ್ನೂ ಇಂಚಿಂಚಾಗಿ ಕಬಳಿಸುವ ಕಾಯಕದಲ್ಲಿ ತೊಡಗಿಕೊಂಡಿದೆ. ಅಂದರೆ ಮಂಗಳೂರು ವಿಶೇಷ ಆರ್ಥಿಕ ವಲಯದ ಮೊದಲ ಹಂತದ ಯೋಜನೆಯಲ್ಲಿ ಈ ತೈಲ ಶುದ್ಧೀಕರಣ ಘಟಕ ತನ್ನ ವ್ಯಾಪ್ತಿ, ಕಾರ್ಯವನ್ನು ವಿಸ್ತರಿಸಿಕೊಳ್ಳಲಿದೆ. ಹಲವು ಗ್ರಾಮಗಳು ಬಾಳದ ಸಾಲಿಗೆ ಸೇರಿ ಹೋಗಲಿದೆ. ಈಗಲೇ ಭಾರತದ ಏಕೈಕ ಎರಡು ಹೈಡ್ರೋಕ್ರಾಕರ್ಸ್ ಪ್ರೊಡೆಕ್ಟಿಂಗ್ ಪ್ರೀಮಿಯಂ ಡಿಸೇಲ್ ಮತ್ತು ಅಷ್ಟೇ ಪ್ರಮಾಣದ ಅನ್ಲೀಡೆಡ್ ಪೆಟ್ರೋಲ್ ಸಾಮಥ್ರ್ಯದ ಘಟಕಗಳು ಮುಂಬರುವ ದಿನಗಳಲ್ಲಿ ಮತ್ತಷ್ಟು ಸಾಮಥ್ರ್ಯ ಗಳಿಸಿಕೊಳ್ಳಲಿವೆ. ಅಂದರೆ ಕರಾವಳಿಯ ಮತ್ತಷ್ಟು ಪ್ರದೇಶ ಮಲೀನಕ್ಕೆ ಸಜ್ಜಾಗುತ್ತಿದೆ. ಸಮುದ್ರಕ್ಕೆ ಇನ್ನಷ್ಟು ತ್ಯಾಜ್ಯ ಸೇರಲಿದೆ. ಜೀವ ವೈವಿಧ್ಯ ನಾಶಕ್ಕೆ ಮತ್ತಷ್ಟು ವೇಗಬರಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ತೈಲ ಶುದ್ಧೀಕರಣ ಘಟಕಕ್ಕೆ ಸಂಸ್ಕೃತಿಗಳೂ ಬಲಿಯಾಗಲಿವೆ. ಉದ್ದೇಶಿತ ವಿಶೇಷ ಆರ್ಥಿಕ ವಲಯದ ಒಂದನೇ ಹಂತದ ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಮುಗಿದಿದೆ ಮತ್ತು ಕುತ್ತೆತ್ತೂರು, ಪೆರ್ಮುದೆ, ತೆಂಕ ಎಕ್ಕಾರು, ದೇಲಂತಬೆಟ್ಟು ಗ್ರಾಮಗಳ ಅರ್ಧಭಾಗ ಮತ್ತು ಅದಕ್ಕಿಂತಲೂ ಹೆಚ್ಚಿನ ಭಾಗಗಳು ಎಂಎಸ್ಇಝೆಡ್ ಪಾಲಾಗಿವೆ. ಅಲ್ಲಿ ತೈಲ ಘಟಕ ಮತ್ತು ಅದರ ಸಂಬಂಧಿತ ಕಾರ್ಯಗಳು ಆರಂಭವಾಗುತ್ತವೆ. ಅದರ ಪೂರ್ವಭಾವಿಯಾಗಿ ಅಭಿವೃದ್ಧಿಯ ವ್ಯಾಖ್ಯಾನಗಳ ಭರಾಟೆ ಆರಂಭವಾಗಿಬಿಟ್ಟಿದೆ. ಅಭಿವೃದ್ಧಿಗೆ ಹಲವು ವ್ಯಾಖ್ಯಾನಗಳನ್ನೇನೋ ಕೊಡಬಹುದು. ಆದರೆ ಆದರೆ ಇದ್ದುದನ್ನು ಕೆಡವುದಕ್ಕೆ ಯಾವ ವ್ಯಾಖ್ಯಾನ? ಅದರರ್ಥವೇನು? ಮುಖ್ಯವಾಗಿ ಆಧುನಿಕತೆಯ ಹೆಸರಲ್ಲಿ ಗ್ರಾಮಗಳನ್ನು ಬಲಿಕೊಡುವುದು ಕ್ಷಮಾರ್ಹವಲ್ಲದ ಪ್ರಕ್ರಿಯೆ.

ಅದು ದೇಶವನ್ನೇ ಕಸಾಯಿಖಾನೆಗೆ ಕೊಟ್ಟಂತೆ. ಆದರೆ ರಕ್ಕಸ ಯೋಚನೆಗಳ ಎಂಎಸ್ಇಝೆಡ್ ಗೆ ಇದಾವುದರ ಪರಿವೆಯಿಲ್ಲ. ಏಕೆಂದರೆ ಅದು ಕರಾವಳಿಯ ಆಯಕಟ್ಟಿನ ಜಾಗಗಳಲ್ಲೇ ಆರ್ಥಿಕ ವಲಯ ರಚನೆಗೆ ಮುಂದಾಗಿದೆ. ಭೂ ಸ್ವಾಧೀನವೂ ನಡೆಯುತ್ತಿದೆ. ಏನಾಗಿದೆ ಕರಾವಳಿಗೆ? ವಿಶೇಷ ಆರ್ಥಿಕ ವಲಯದ ಅವಶ್ಯಕತೆಯಾದರೂ ಏನಿತ್ತು? ವಿಶೇಷವಾದ ಆರ್ಥಿಕ ವಲಯವಿಲ್ಲದಿದ್ದರೆ ಕರಾವಳಿಯೇನು ದಿವಾಳಿಯೆದ್ದು ಹೋಗುವುದೆ? ಎಂಎಸ್ಇಝೆಡ್ ನಿಗದಿಪಡಿಸಿರುವ ಯಾವ ಭೂಮಿಯೂ ನಿಷ್ಪ್ರಯೋಜಕವಲ್ಲ. ಅವು ಯೋಗ್ಯ ಕೃಷಿ ಭೂಮಿ ಮತ್ತು ಸಮೃದ್ಧ ನೀರಾವರಿ ಇರುವ ಪ್ರದೇಶಗಳು. ಅಂಥ ಭೂಮಿಯಲ್ಲಿ ಕಟ್ಟುವ ಸೌಧ ಸಮಾಧಿಯಲ್ಲದೆ ಮತ್ತೇನು?

ಆರ್ಥಿಕ ವಲಯದ ಎರಡನೇ ಹಂತದಲ್ಲಿ ಸ್ವಾಧೀನಕ್ಕೆ ಒಳಪಡುವ 2345 ಎಕರೆ ಪ್ರದೇಶ ಅಪ್ಪಟ ಕರಾವಳಿಯ ಸೊಗಡಿರುವ, ಆಯಕಟ್ಟಿನ ಜಾಗ. ಮುಂದೆ ಅವೆಲ್ಲವೂ ತಮ್ಮ ಮೂಲ ಬೇರುಗಳನ್ನು ಕಳಚಿಕೊಂಡು ಕೊರಡಾಗಲಿವೆ. ಆ ಕೊರಡಿನಲ್ಲಿ ಮುಂದೆ ಪ್ಲಾಸ್ಟಿಕ್ ಹೂವುಗಳನ್ನು ಅಂಟಿಸಲಾಗುತ್ತದೆ.ರಂಗುರಂಗಿನ ಪ್ಲಾಸ್ಟಿಕ್ ಹೂವುಗಳಲ್ಲಿ ಸೌಂದರ್ಯವನ್ನು ಆಸ್ವಾದಿಸಿ, ಅದರಲ್ಲೇ ನೆರಳನ್ನು ಹುಡುಕಿ ತಂಪು ಎಂದು ವ್ಯಾಖ್ಯಾನಿಸಲಾಗುತ್ತದೆ. ಅದಕ್ಕೆ ಅಡಿಪಾಯವೆಂಬಂತೆ ಎಸ್ಇಝೆಡ್ ಪುನರ್ವಸತಿಯ ಆಸೆ ತೋರಿಸುತ್ತಿದೆ. ಅಂತಾರಾಷ್ಟ್ರೀಯ ದರ್ಜೆಯ ಮೂಲಸೌಲಭ್ಯಗಳ ಮಾತಾಡುತ್ತಿದೆ. ಕೋಟಿಗಟ್ಟಲೆ ಪರಿಹಾರಗಳ ದಾಖಲೆಗಳನ್ನು ಹಾಜರುಪಡಿಸುತ್ತಿದೆ ಎಲ್ಲವೂ ಅಭಿವೃದ್ಧಿಗಾಗಿ, ನಾಗರಿಕತೆಯ ಬೆಳವಣಿಗೆಗಾಗಿ ಒಂದರ್ಥದಲ್ಲಿ ಹೇಳಬೇಕೆಂದರೆ ಕೃಷಿಯ ಸಮೂಲ ನಾಶಕ್ಕಾಗಿ ಮತ್ತು ಸಂಸ್ಕೃತಿಯನ್ನು ಬೇರು ಸಹಿತ ಕಿತ್ತು ಹಾಕಲಿಕ್ಕಾಗಿ.

ಆದರೆ ಎಸ್ಇಝೆಡ್ ತೋರಿಸುವ ಭರವಸೆಗಳು ಹುಸಿಯೆಂಬುದು ಎಂಆರ್ಪಿಎಲ್ನ ವರ್ತನೆಗಳಿಂದ ಅರಿವಾಗಿದೆ ಮತ್ತು ಸುಳ್ಳಿನ ಮೂಲಕವೇ ವೊದಲ ಹಂತದ ಭೂಸ್ವಾಧೀನ ಪ್ರಕ್ರಿಯೆ ಪೂರ್ತಿಗೊಳಿಸಿರುವ ಆರ್ಥಿಕ ವಲಯದ ಕೃತ್ಯಗಳಿಗೆ ಎರಡನೇ ಹಂತದಲ್ಲೇನೂ ಕಷ್ಟವಾಗಲಾರದೆಂದೂ ಅನಿಸುತ್ತದೆ. ಈ ಯೋಜನೆಯಿಂದ ಮುಂಬರುವ ದಿನಗಳಲ್ಲಿ ಬಲವಂತದ ಹಲವು ಬದಲಾವಣೆಗಳು ಸಂಭವಿಸುವ ಹಲವು ಲಕ್ಷಣಗಳು ಈಗಾಗಲೇ ಗೋಚರಿಸುತ್ತಿವೆ. ಏಕೆಂದರೆ ಈಗಾಗಲೇ ಮಾಯವಾಗಿರುವ ಕುಡುಬಿ ಪದವು ಎಂಬ ಗ್ರಾಮ ಮಂಗಳೂರಿನ ಕೇಂದ್ರ ಮಾರುಕಟ್ಟೆಗೆ ತರಕಾರಿಗಳನ್ನು ಪೂರೈಸುತ್ತಿದ್ದ ಗ್ರಾಮವಾಗಿತ್ತು. ಅಲ್ಲಿ ತರಕಾರಿ ಬೆಳೆಯುತ್ತಿದ್ದವರು ಇದೀಗ ಪುನರ್ವಸತಿ ಕಾಲೋನಿ ಸೇರಿದ್ದಾರೆ. ಅಲ್ಲದೆ ಇದೀಗ ಮುಕ್ಕಾಲು ಭಾಗ ಇಲ್ಲವಾಗಿರುವ ಪೆರ್ಮುದೆ ಒಂದಾನೊಂದು ಕಾಲದಲ್ಲಿ ಹೈನುಗಾರಿಕೆಗೆ ಪ್ರಮುಖ ಕೇಂದ್ರವಾಗಿತ್ತು. ಇದೀಗ ಪೆರ್ಮುದೆಯೇ ಇಲ್ಲವಲ್ಲ! ಗೋವುಗಳು ಇನ್ನು ಹೇಗೆ ಇದ್ದಾವು? ಅದೇ ರೀತಿ ವರ್ಷಕ್ಕೆ 2 ಅಥವಾ ಮೂರು ಬೆಳೆ ಬೆಳೆಯುತ್ತಿದ್ದ ಎಸ್ಇಝೆಡ್ ವ್ಯಾಪ್ತಿಯ ಹಲವು ಹಳ್ಳಿಗಳು ಇಂದು ಕಾಟಾಚಾರಕ್ಕೆಂಬಂತೆ ಒಂದು ಬೆಳೆ ಬೆಳೆಯುತ್ತಿವೆ . ಕೆಲವು ಕಡೆಗಳಲ್ಲಂತೂ ಕೃಷಿ ಸಂಪೂರ್ಣ ಸ್ತಬ್ಧವಾಗಿದೆ. ಕಾರಣ ಇಂದೋ ನಾಳೆಯೋ ಕೈಬಿಟ್ಟುಹೋಗಲಿರುವ ಭೂಮಿಗೆ ಪ್ರೀತಿ ಕೊಟ್ಟು ಪ್ರಯೋಜನವೇನು ಎಂಬ ಹರಳುಗಟ್ಟಿದ ಸಂಕಟ.

ಕೃಷಿ ಸಂಬಂಧಿತ ಸಮಸ್ಯೆಗಳು ಮೂಡುವ ವೊದಲೇ ಕೈಚೆಲ್ಲಿ ಕುಳಿತಿರುವ ಅಪರೂಪದ ರೈತರನ್ನು ಇಲ್ಲಿ ನೋಡಬಹುದು. ಕೃಷಿ ಭೂಮಿಯಲ್ಲಿನ ನೀರವ ಮೌನವನ್ನು ಯಾರೂ ನೋಡಬಹುದು. ಅಂದು ರೈತರೇ ವರ್ಷಕ್ಕೊಮ್ಮೆ ಸೇರಿ ಕಟ್ಟುತ್ತಿದ್ದ ಒಡ್ಡುಗಳು, ಕಿರು ಅಣೆಕಟ್ಟುಗಳು ಮರೆಯಾಗಿ ವರ್ಷಗಳಾಗಿ ಹೋದವು. ಪರಿಣಾಮ ಅಂದಿನಂತೆ ಇಂದು ಜಲಮಟ್ಟ ಏರುತ್ತಿಲ್ಲ. ಕುಡಿಯುವ ನೀರಿಗೇ ತತ್ವಾರ ಪಡುವಂತಹ ಸ್ಥಿತಿಯಲ್ಲಿ ಈ ಪ್ರದೇಶಗಳಿವೆ. ಪ್ರಳಯ ಕಾಲದ ಮಹಾಮೌನದಂತೆ ಅಸ್ತಿತ್ವ ಕಳಕೊಳ್ಳುವ ಗ್ರಾಮಗಳು ಮೂಕವಾಗಿವೆ.

ಈ ಪ್ರದೇಶದಲ್ಲಿ ಆತಂಕವೆಂಬುದು ಎಷ್ಟು ಮಡುಗಟ್ಟಿದೆಯೆಂದರೆ ಸೋರುತ್ತಿರುವ ಮನೆಯ ಮಾಡನ್ನೂ ದುರಸ್ತಿ ಮಾಡುವ ಗೊಡವೆಗೆ ಜನರು ಹೋಗುತ್ತಿಲ್ಲ. ಏಕೆಂದರೆ ಅದು ಉಳಿಯುವಂತಹ ಮನೆಯಲ್ಲ. ಮಕ್ಕಳ ಮದುವೆ ಮಾಡಲೂ ಹಿಂದೆ ಮುಂದೆ ಯೋಚಿಸುವಷ್ಟು ಜನರು ಧೈರ್ಯಗುಂದಿದ್ದಾರೆ. ಏಕೆಂದರೆ ಮದುವೆ ದಿನವೇ ಮನೆ ಉರುಳಬಹುದೆಂಬ ಭಯ. ಇವೆಲ್ಲಾ ವಿಶೇಷ ಆರ್ಥಿಕ ವಲಯ ಸೃಷ್ಟಿಸಿರುವ ವಿಶೇಷ ಸವಲತ್ತುಗಳು. ಇವಲ್ಲದೆ ಎಸ್ಇಝೆಡ್ ಸೃಷ್ಟಿಸಿರುವ ವಿಚಿತ್ರಗಳೂ ಕೆಲವಿವೆ. ಭೂಸ್ವಾಧೀನಕ್ಕೆ ನಿಗದಿಪಡಿಸಿರುವ ಪ್ರದೇಶಗಳು ಮೂಲ ಸೌಲಭ್ಯಗಳಿಂದ ದಿನೇ ದಿನೇ ವಂಚಿತವಾಗುತ್ತಾ ಹೋಗುತ್ತಿವೆ. ಏಕೆಂದರೆ ಇಂಥ ಪ್ರದೇಶಕ್ಕೆ ಯಾವುದೇ ಹೊಸ ಯೋಜನೆ ಅನುಷ್ಠಾನವಾಗುವಂತಿಲ್ಲ. ಅನುದಾನ ಬಿಡುಗಡೆಯಾಗುವಂತಿಲ್ಲ. ಒಂದು ವೇಳೆ ಅದಾಗಲೇ ಘೋಷಣೆಯಾಗಿರುವ ಯೋಜನೆಯಾಗಿದ್ದರೂ ಹಣ ಬಿಡುಗಡೆಯಾಗುವಂತಿಲ್ಲ. ಇದು ಒಂಥರಾ ನಿರಂತರ ಚುನಾವಣಾನೀತಿ ಸಂಹಿತೆಯಂತೆ. ಕುಡಿಯುವ ನೀರು, ಕಾಲುದಾರಿ, ಸಂಪರ್ಕ ಸೇತುವೆಗಳಿಗೂ ಕೂಡ ಸ್ಥಳೀಯ ಸಂಸ್ಥೆಗಳು ಅನುದಾನ ಬಿಡುಗಡೆ ಮಾಡಲಾರದ ಸ್ಥಿತಿಯಲ್ಲಿವೆ. ಹೀಗಾದರೂ ಗ್ರಾಮಗಳು ಖಾಲಿಯಾಗಲಿ ಎಂಬ ಹುನ್ನಾರವೇ ಇದು? ಬಿಟ್ಟು ತೊಲಗಲಿ ಎಂಬ ದಾಷ್ಟ್ರ್ಯವೇ? ಇದರ ಒಟ್ಟೊಟ್ಟಿಗೇ ಕರಾವಳಿ ಮಾಲಿನ್ಯದ ಕೂಪ ಎಂಬ ಮಾತುಗಳೂ ಅಲ್ಲಲ್ಲಿ ಕೇಳಿಬರುತ್ತಿದೆ. ಇದರ ಜೊತೆಗೆ ಇನ್ನೂ ನಾಲ್ಕೈದು ಸಾವಿರ ಎಕರೆ ಐಟಿ ಸಂಬಂಧಿತ ಕಂಪೆನಿಗಳು ಬಂದರೆ ಕರಾವಳಿ ಕರಗುವ ದಿನ ದೂರವಿಲ್ಲ.
ಈಗಲೇ ಎಂ.ಆರ್.ಪಿ.ಎಲ್ ತೈಲ ಶುದ್ಧೀಕರಣದ 4 ಕಿ.ಮೀ. ವ್ಯಾಪ್ತಿಯಲ್ಲಿ ತೆಳ್ಳಗೆ ತೇಲಿಬರುವ ರಾಸಾಯನಿಕಗಳ ವಾಸನೆ ಮುಂದೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳದೇ ಇದ್ದೀತೇ? ಉದ್ದೇಶಿತ ಎಸ್ಇಝೆಡ್ ಪ್ರದೇಶದಿಂದ ಕೆಲವು ಕಿ.ಮೀ. ದೂರದ ಖ್ಯಾತ ದೇಗುಲಗಳಲ್ಲೂ ತೀರ್ಥಪ್ರಸಾದದ ಹೊತ್ತಲ್ಲಿ ತೈಲದ ಘಾಟು ತಟ್ಟದೇ ಇದ್ದೀತೆ?

ಎಸ್ಇಝೆಡ್ ಮಂಗಳೂರಿನಲ್ಲಾಗಲಿ ಅಥವಾ ನಂದಗುಡಿಯಲ್ಲೇ ಆಗಲಿ ಅವು ದೇಶದೊಳಗಣ ದೇಶಗಳೆಂಬುದರಲ್ಲಿಎರಡು ಮಾತಿಲ್ಲ.ಯಾವ ಕಾನೂನುಗಳೂ ಅದರೊಳಗೆ ಜಾರಿಯಾಗವು. ಯಾವ ಮೌಲ್ಯಗಳೂ ಅಲ್ಲಿ ನೀತಿ ರೂಪಿಸಲಾರವು. ಇವು ಮೂಲಸ್ವರೂಪವನ್ನು ಧಿಕ್ಕರಿಸದೇ ಇದ್ದಾವೇ? ಪುನರ್ವಸತಿ ಕೇಂದ್ರಗಳು ಕಾಂಕ್ರೀಟ್ ಕಾಡಲ್ಲಿ ನಾಗಬನವನ್ನು ಕಟ್ಟಿಸಬಹುದು. ಆದರೆ ನಿಜದ ನಾಗನ ಕೊಲ್ಲುತಿವೆಯಲ್ಲಾ.
ಮುಂದೊಂದು ಕಾಲ ಬರಬಹುದು. ಅಂದು ಒಂದಾನೊಂದು ಕಾಲದ ಗ್ರಾಮವನ್ನು ಹ್ಯಾರಿಪಾಟರ್ ಸಿನಿಮಾದಂತೆ ಜನರು ವರ್ಣಿಸಬಹುದು. ಗ್ರಾಮಗಳ ಪ್ರತಿಕೃತಿಯನ್ನು ನಿರ್ಮಿಸಿ ಸಂತಸ ಪಡಬಹುದು. ವೃತ್ತಿಪರ ಕಲಾವಿದರು ರೈತರ ವೇಷ ಹಾಕಬಹುದು. ಮನೆಗಳಿಗೆ ಪ್ಲಾಸ್ಟಿಕ್ ತೋರಣ ಕಟ್ಟಿ, ಅಂಗಣ ದಲ್ಲಿ ಪ್ಲಾಸ್ಟಿಕ್ ಹೂಗಳ ನೆಟ್ಟು ಅದಕ್ಕೆ ಪರ್ಪ್ಯೂಮ್ ಸಿಂಪಡಿಸಬಹುದು. ಪ್ಲಾಸ್ಟಿಕ್ ಕೊಂಬೆಗಳ ಮೇಲೆ ಪ್ಲಾಸ್ಟಿಕ್ ಹಕ್ಕಿಗಳ ಕೂರಿಸಿ ಚಿಲಿಪಿಲಿ ಉಲಿಯುವ ರೆಕಾರ್ಡ್ ಹಾಕಬಹುದು. ರೊಬೋಟ್ ಗೋವುಗಳ ತಂದು ಕೀಲಿಕೊಟ್ಟು ಹಾಲಿನ ಪುಡಿಯನ್ನು ಕಲಸಿ ಹಾಲನ್ನು ತೋರಿಸಬಹುದು. ವಿಶೇಷ ಆರ್ಥಿಕ ವಲಯ ದೊಳಗಿರುವ ಸಿಲಿಕಾನ್ ದೇಗುಲಕ್ಕೆ ಸರತಿಯಲ್ಲಿ ಸಾಲಿರಬಹುದು...
ಸಂತೋಷ್ ತಮ್ಮಯ್ಯ
ನಿರ್ವಾಹಕ ಸಂಪಾದಕ
ಅಸೀಮಾ ಕನ್ನಡ ಮಾಸಿಕ

0 comments:

Post a Comment