ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:30 PM

ಸಂಶಯದ ಹುತ್ತ

Posted by ekanasu

ಸುದ್ದಿ ವಿಶ್ಲೇಷಣೆ

ಮೋಹಕ್ ಕುಮಾರ್ ಕೊಲೆ ಪ್ರಕರಣ ಸುತ್ತ ಸಂಶಯದ ಹುತ್ತ

ವಿಟ್ಲ : ಚಿತ್ರಹಿಂಸೆಯ ಮೂಲಕ ಬರ್ಬರವಾಗಿ ಕೊಲೆಯಾಗಿರುವ ಅಮಾಯಕ ಇಂಜಿನಿಯರಿಂಗ್ ವಿದ್ಯಾರ್ಥಿ ಮೋಹಕ್ ಕುಮಾರ್ ಕೊಲೆ ಪ್ರಕರಣದ ಯಾವುದೇ ಸ್ಪಷ್ಟ ಸುಳಿವುಗಳು ಪೊಲೀಸರಿಗೆ ಗೋಚರಿಸದೆ ತನಿಖೆಯನ್ನು ವಿವಿಧ ಸ್ತರಗಳಲ್ಲಿ ಚುರುಕುಗೊಳಿಸಲಾಗಿದೆ. ಈ ಮದ್ಯೆ ನಾಲ್ಕೈದು ತಿಂಗಳುಗಳ ಹಿಂದೆ ಮನೆಯವರ ಸಂಪರ್ಕ ಕಡಿದುಕೊಂಡು ಒಂದು ರಾತ್ರಿಯೀಡಿ ಮೋಹಕ್ ಕಾಣೆಯಾಗಿ ಮನೆಮಂದಿಗೆ ಭೀತಿ ಮೂಡಿಸಿದ ಘಟನೆಯೊಂದು ನಡೆದಿರುವುದರ ಹಿಂದೆ ನಿಗೂಢ ಕೊಲೆಯ ಹಿಂದಿನ ಕಾಣದ ಕೈಗಳ ಕರಾಳ ಕೊಂಡಿ ಇರಬಹುದೇ ಎಂಬ ಶಂಕೆ ಸಾರ್ವಜನಿಕವಾಗಿ ಕೇಳಿಬರುತ್ತಿದೆ.
ಮೋಹಕ್ ಕುಮಾರ್ನನ್ನು ತಮ್ಮ ಬಂಧನದಲ್ಲಿರಿಸಿ ವಿಚಿತ್ರ ರೀತಿಯ ಹಿಂಸೆ ನೀಡಿ ಅಮಾನುಷವಾಗಿ ಕೊಲೆಗೈದು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕಬಕ ಬಳಿಯ ಬಿಎಸ್ಸೆನ್ನೆಲ್ ಮೊಬೈಲ್ ಟವರ್ ಬಳಿ ಎಸೆದು ಹೋದ ದುಷ್ಕರ್ಮಿಗಳು ಪುತ್ತೂರು- ವಿಟ್ಲ ವ್ಯಾಪ್ತಿಯಲ್ಲಿಯೇ ಕೊಲೆ ಮಾಡಿರುವ ಸಾಧ್ಯತೆ ನಿಚ್ಚಳವಾಗಿದೆ. ಈ ಕೊಲೆಗೆ ಮೋಹಕ್ನನ್ನು ಹಂತಕರ ಕೈಗೆ ಸುಲಭವಾಗಿ ನೀಡುವಲ್ಲಿ ಪರಿಚಯಸ್ಥರ ಕೈವಾಡವನ್ನು ಅಲ್ಲಗಳೆಯುವಂತಿಲ್ಲ. ಕಾಲೇಜಿಗೆ ಹೋಗುವುದಾಗಿ ಬೆಳಿಗ್ಗೆ ದೊಡ್ಡಮ್ಮನ ಮನೆ ಬಿಟ್ಟ ಮೋಹಕ್ ಕಾಲೇಜಿಗೆ ಹೋಗಿರಲಿಲ್ಲ. ತದನಂತರ ಯಾರನ್ನೂ ಸಂಪರ್ಕ ಕೂಡಾ ಮಾಡಲಿಲ್ಲ.

ಆತನೊಂದಿಗೆ ಇದ್ದ ಬಿಎಸ್ಸೆನ್ನೆಲ್ ಮತ್ತು ಟಾಟಾ ಇಂಡಿಕಾಂ ಕನೆಕ್ಷನ್ ಮೊಬೈಲ್ನಲ್ಲಿ ಕೂಡಾ ಗೆಳೆಯರ ಸಂದೇಶಗಳು, ಐದಾರು ಕರೆಗಳನ್ನು ಬಿಟ್ಟರೆ ಯಾವುದೇ ಸುಳಿವು ಸಿಗುತ್ತಿಲ್ಲ. ಹಾಗಾದರೆ ಆತನಲ್ಲಿ ತಾನು ವ್ಯವಹರಿಸುತ್ತಿದ್ದ ಬೇರೊಂದು ಮೊಬೈಲ್ ಇತ್ತೇ ? ಎನ್ನುವುದು ಆತನ ಆತ್ಮೀಯ ಗೆಳೆಯರಿಗೆ ಗೊತ್ತಿರಬಹುದು !ಐದಾರು ತಿಂಗಳುಗಳ ಹಿಂದೆ ಒಂದು ದಿನ ಮೋಹಕ್ ಕಾಲೇಜಿನಿಂದ ಸಂಜೆ ಮನೆಗೆ ಬಾರದೆ ಮನೆಮಂದಿ ಕಂಗಾಲಾಗಿದ್ದರು. ಆತನ ಮೊಬೈಲಿಗೆ ಮಾಡಿದ ಕರೆಯನ್ನೂ ಸ್ವೀಕರಿಸದೆ ಮನೆಯವರಿಗೂ ವಿಷಯ ತಿಳಿಸದೆ ಒಂದು ರಾತ್ರಿಯನ್ನು ಕಳೆದಿದ್ದನೆಂಬ ವಿಚಾರ ಇದೀಗ ಬಯಲಾಗಿದೆ. ಮರುದಿವಸ ಮನೆಗೆ ಬಂದಾಗ ಮನೆಮಂದಿ ವಿಚಾರಿಸಿದ್ದು, ತಾನು ಗೆಳೆಯನ ಮನೆಗೆ ಹೋಗಿರುವುದಾಗಿ ಮತ್ತು ಫೋನ್ ಮಾಡಲಿಲ್ಲ ಎಂಬುವುದಾಗಿಯೂ ನಿರ್ಲಕ್ಷ್ಯದ ಉತ್ತರವನ್ನು ನೀಡಿದ್ದನು. ಯಾರೊಂದಿಗೂ ಹೆಚ್ಚು ವ್ಯವಹರಿಸದ ಗೆಳೆತನವನ್ನು ಬಯಸದ ಮೋಹಕ್ನನ್ನು ಯಾವ ಗೆಳೆತನ ಒಂದು ದಿನ ಮನೆಮಂದಿಯನ್ನು ನೆನಪಿಸದೆ ಸೆಳೆಯಿತು ಎಂಬುವುದರ ಹಿಂದೆ ನಿಗೂಢತೆಯೊಂದು ಗೋಚರಿಸುತ್ತಿದೆ. ಈ ಬಗ್ಗೆ ತನಿಖೆ ನಡೆದರೆ ಈ ಹಿಂದೆಯೇ ಮೋಹಕ್ನ ಕೊಲೆಗೆ ಸಂಚು ನಡೆದಿತ್ತೆ ಎಂಬುವುದು ಬಯಲಾಗಬಹುದು.

ಮಂಗಳವಾರ ಮನೆಯಿಂದ ಹೋದವನು ಸುಮಾರು 4ಗಂಟೆಗೆ ಮಂಗಳೂರಿನ ಬಜ್ಪೆ ಸಮೀಪದ ಡೆಕ್ಕನ್ ಪಾರ್ಕ್ ಮೊಬೈಲ್ ಟವರ್ ವ್ಯಾಪ್ತಿಯಲ್ಲಿರುವುದು ಕಂಡುಬಂದಿದೆ. ಸರಿ ಸುಮಾರು 5.55ಕ್ಕೆ ಬಲ್ಮಠ ಟವರ್ ವ್ಯಾಪ್ತಿಯಲ್ಲಿದ್ದು, ಅಲ್ಲಿಂದ ನೇರವಾಗಿ ಕಬಕಕ್ಕೆ ಬಂದಿದ್ದು 7.30ರಿಂದ 8.34ರ ತನಕ ಕುಳ ಮೊಬೈಲ್ ಟವರ್ ವ್ಯಾಪ್ತಿಯಲ್ಲಿ ಇದ್ದನೆಂಬುವುದು ಖಚಿತಗೊಂಡಿದೆ. ತದನಂತರ ಮನೆಮಂದಿ ಕರೆ ಮಾಡಿದ್ದು ಆ ವೇಳೆಗೆ ವ್ಯಾಪ್ತಿಪ್ರದೇಶದ ಹೊರಗೆ ಇರುವುದು ತಿಳಿದುಬಂದಿದೆ. 8.34ರ ನಂತರ ಹಂತಕರ ಕೈಗೆ ಮೋಹಕ್ ಸಿಕ್ಕಿದ್ದು, ಕಬಕದ ಪರಿಸರದಲ್ಲಿಯೇ ವ್ಯಾಪ್ತಿಪ್ರದೇಶದ ಹೊರಗೆ ಕೊಂಡೋಗಿ ಕೊಲೆ ನಡೆಸಿರುವ ಸಾಧ್ಯತೆ ಕಾಣುತ್ತಿದೆ.

ಮೋಹಕ್ ಕುಮಾರ್ನನ್ನು ಬಂಧನದಲ್ಲಿರಿಸಿ ದ್ವೇಷ ತೀರಿಸಿಕೊಂಡು ಹತ್ಯೆಮಾಡಿ ನಂತರ ರೈಲ್ವೇ ಹಳಿಯ ಮೇಲಿಟ್ಟು ರೈಲು ಅಪಘಾತ ನಡೆದಿದೆಯೆಂಬ ಪ್ಲ್ಯಾನ್ ರೂಪಿಸಿದ ಹಂತಕರು ಸ್ಥಳಕ್ಕೆ ಬಂದರಾದರೂ ದೈರ್ಯ ಸಾಲದೆ ಎಸೆದು ಪರಾರಿಯಾಗಿದ್ದಾರೆ. ಕೊಲೆನಡೆದಿರುವ ಸ್ಥಳ ವ್ಯಾಪ್ತಿ ಪ್ರದೇಶದ ಹೊರಗೆ ಆಗಿರುವ ಸಾಧ್ಯತೆಯಿದ್ದು, ಹಂತಕರ ಹೊಡೆತಕ್ಕೆ ಮೊಬೈಲ್ ಬೆಂಡಾಗಿದೆ.

- ಜ್ಯೋತಿಪ್ರಕಾಶ್ ಪುಣಚಾ

0 comments:

Post a Comment