ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:16 PM

'ಬರಡು ಬಂಗಾರ'

Posted by ekanasu

ರಾಜ್ಯ - ರಾಷ್ಟ್ರ
ಬಂಜರು ಭೂಮಿಯಲ್ಲಿ ಜೈವಿಕ ಇಂಧನ ಸಸಿ ಬೆಳೆಸುವ 'ಬರಡು ಬಂಗಾರ'

ಬೆಂಗಳೂರು: ಬಂಜರು ಭೂಮಿಯಲ್ಲಿ ಜೈವಿಕ ಇಂಧನ ಸಸಿ ಬೆಳೆಸುವ ಬರಡು ಬಂಗಾರ ಎಂಬ ಯೋಜನೆಯನ್ನು ಸರಕಾರ ಇಂದು ಘೋಷಿಸಿತು.
ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಅವರ ಪರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಶ್ರೀ ರಾಮಚಂದ್ರ ಗೌಡ ಅವರು ಜೈವಿಕ ಇಂಧನ ಕಾರ್ಯಪಡೆ ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಲಾದ ಜೈವಿಕ ಇಂಧನ ಘಟಕವನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಈ ಯೋಜನೆಯನ್ನು ಘೋಷಿಸಿದರು.ಈ ಯೋಜನೆಯಡಿ ಮುಂದಿನ 3 ವರ್ಷಗಳಲ್ಲಿ 1 ಲಕ್ಷ ಹೆಕ್ಟೇರ್ ಬಂಜರು ಭೂಮಿಯಲ್ಲಿ ಜೈವಿಕ ಇಂಧನ ಸಸಿಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ. ಡಾ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯ ಶಿಫಾರಸ್ಸಿಗೆ ಒಳಪಡುವ ಅತ್ಯಂತ ಹಿಂದುಳಿದ ತಾಲ್ಲೂಕುಗಳಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಅರಣ್ಯ ಇಲಾಖೆಯ ವಿಶೇಷ ಅಭಿವೃದ್ಧಿ ಯೋಜನೆಯಡಿ ಇದಕ್ಕಾಗಿ ಅನುದಾನ ಬಳಸಿಕೊಳ್ಳಲು ಅವಕಾಶವಿದೆ ಎಂದು ಸಚಿವರು ಮಾಹಿತಿ ನೀಡಿದರು.ಈ ಯೋಜನೆಗೆ ಈಗಾಗಲೇ 25 ಸಾವಿರ ಹೆಕ್ಟೇರ್ ಭೂಪ್ರದೇಶವನ್ನು ಗುರುತಿಸಲಾಗಿದ್ದು, ಇದರಲ್ಲಿ ಮುಂದಿನ ವರ್ಷದ ಮಳೆಗಾಲದಲ್ಲಿ ನೆಡಲು ಅಗತ್ಯವಿರುವ 150 ಲಕ್ಷ ಸಸಿಗಳನ್ನು ಬೆಳೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಜೈವಿಕ ಇಂಧನ ಉತ್ಪಾದನೆ ಘಟಕ

ಸಚಿವರು ಇಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಜೈವಿಕ ಇಂಧನ ಉತ್ಪಾದನೆ ಘಟಕವನ್ನು ಉದ್ಘಾಟಿಸಿದರು. ಇಂತಹ ಘಟಕಗಳು ಈಗಾಗಲೇ ರಾಜ್ಯದ ಹಾಸನ, ಧಾರವಾಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದೇ ವರ್ಷ ಗುಲ್ಬರ್ಗ, ಬಿಜಾಪುರ, ದಾವಣಗೆರೆ, ಕಾರವಾರಗಳಲ್ಲಿ ಇಂತಹ ಘಟಕಗಳನ್ನು ಸ್ಥಾಪಿಸಲಾಗುವುದು. ಇದರಿಂದ ರೈತರಿಗೆ, ವಿದ್ಯಾಥರ್ಿಗಳಿಗೆ, ಉದ್ಯಮಿಗಳಿಗೆ ಉತ್ತಮ ಮಾಹಿತಿ ಲಭ್ಯ ಎಂದು ತಿಳಿಸಿದರು.

ಸದ್ಯದಲ್ಲಿಯೇ ನೇರವಾಗಿ ರೈತರು ಬೆಳೆದ ಜೈವಿಕ ಇಂಧನ ಬೀಜಗಳನ್ನು ಸಂಗ್ರಹಿಸುವ ಜಾಲವನ್ನು ಜೈವಿಕ ಇಂಧನ ಕಾರ್ಯಪಡೆ ರೂಪಿಸುತ್ತಿದೆ. ರೈತರಿಗೆ ನ್ಯಾಯಯುತ ಬೆಲೆ ನೀಡಿ ಸಂಗ್ರಹಿಸಿದ ಬೀಜಗಳಿಂದ ಜೈವಿಕ ಇಂಧನ ಉತ್ಪಾದನೆಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜೈವಿಕ ಇಂಧನ ಕಾರ್ಯಪಡೆಯ ಕೈಪಿಡಿ 'ಹಸಿರು ಹೊನ್ನು' ಬಿಡುಗಡೆ ಮಾಡಿ, ಕಾರ್ಯಪಡೆಯ ಮಾಹಿತಿ ತಾಣವನ್ನು ಉದ್ಘಾಟಿಸಿದ ಕಾರ್ಯಪಡೆಯ ಅಧ್ಯಕ್ಷ ವೈ.ಬಿ. ರಾಮಕೃಷ್ಣ ಅವರು ಮಾತನಾಡಿ, ಕ್ಷೀಣಿಸುತ್ತಿರುವ ಇಂಧನ ಮೂಲಗಳು, ಪರಿಸರ ಮಾಲಿನ್ಯ ಹಾಗೂ ಕೃಷಿ ಕ್ಷೇತ್ರದ ಸಂಕಷ್ಟ- ಈ ಮೂರೂ ಸಮಸ್ಯೆಗಳಿಗೆ ಜೈವಿಕ ಇಂಧನ ಕಾರ್ಯಕ್ರಮ ಒಂದು ಪರಿಹಾರವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.
ಜೈವಿಕ ಇಂಧನಗಳ ಬಳಕೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಸಂಸ್ಕೃತಿಯಲ್ಲಿ ಹಾಸುಹೊಕ್ಕಾದ ಈ ಪದ್ಧತಿಗಳ ಪುನರುತ್ಥಾನ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಕಳೆದ 15-20 ವರ್ಷಗಳಿಂದ ಜೈವಿಕ ಇಂಧನ ಕ್ಷೇತ್ರಗಳಲ್ಲಿ ಹಲವಾರು ಸಂಶೋಧನೆ ಪ್ರಯೋಗಗಳು ನಡೆಯುತ್ತಿವೆ. ಈ ಯೋಜನೆಗಳು ಯಶಸ್ವಿಯಾಗಬೇಕಾದರೆ ಸಮುದಾಯದ ಸಹಭಾಗಿತ್ವ ಅತಿ ಮುಖ್ಯ ಎಂದು ಅವರು ತಿಳಿಸಿದರು.
ಜೈವಿಕ ಇಂಧನ ಕಾರ್ಯಕ್ರಮದಲ್ಲಿ ಸರಕಾರ ಸಂಪನ್ಮೂಲ ಒದಗಿಸಿ ಗ್ರಾಮೀಣ ಜನರ ಸಬಲೀಕರಣದ ಯತ್ನ ನಡೆಸುತ್ತಿದೆ. ಕೃಷಿಯೊಂದಿಗೇ ಇಂಧನ ಬೆಳೆಯಲು ಸಾಧ್ಯ ಎಂಬುದನ್ನು ಕರ್ನಾಟಕ ತೋರಿಸಿಕೊಟ್ಟಿದೆ. ರೈತರ ಜಮೀನುಗಳ ಬದುಗಳಲ್ಲಿ ಜೈವಿಕ ಇಂಧನ ಸಸಿಗಳನ್ನು ಬೆಳೆಸುವುದರೊಂದಿಗೆ ಪಾಳುಬಿದ್ದ ಸರಕಾರಿ ಭೂಮಿಗಳಲ್ಲಿ ಜೈವಿಕ ಇಂಧನ ಸಸಿಗಳನ್ನು ಬೆಳೆಸಿ, ಸಮುದಾಯದಿಂದ ಅವುಗಳನ್ನು ನಿರ್ವಹಣೆ ಮಾಡುವ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಈ ಪ್ರಯೋಗ ದಾವಣಗೆರೆಯಲ್ಲಿ ಯಶಸ್ಸು ಕಂಡಿದ್ದು, ಇದನ್ನು ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.
ಇವುಗಳ ಮೌಲ್ಯವರ್ಧನೆಯೂ ಗ್ರಾಮಗಳಲ್ಲಿಯೇ ಮಾಡುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ವಲಸೆ ಪ್ರವೃತ್ತಿ ತಡೆಯುವಲ್ಲಿಯೂ ಇದು ಮಹತ್ತರ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು.
ಬೆಂಗಳೂರು ಕೃಷಿ ವಿವಿ ಉಪಕುಲಪತಿ ಡಾ. ಪಿ.ಜಿ. ಚೆಂಗಪ್ಪ ಅವರು ಮಾತನಾಡಿ, ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಜೈವಿಕ ಇಂಧನ ಉತ್ಪಾದನಾ ಘಟಕ ರೈತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯಮಿಗಳಿಗೆ ಒಂದು ಮಾದರಿಯಾಗಬೇಕೆಂದು ಆಶಿಸಿದರು.
ಜೈವಿಕ ಇಂಧನ ಕೃಷಿಗೆ ಪರ್ಯಾಯವಲ್ಲ. ಆಹಾರ ಧಾನ್ಯಗಳ ಕೃಷಿಯೊಂದಿಗೇ ಜೊತೆ ಜೊತೆಯಾಗಿ ಜೈವಿಕ ಇಂಧನ ಸಸಿಗಳನ್ನು ಬೆಳೆಯುವುದರಿಂದ ರೈತರು ಲಾಭ ಪಡೆಯಬಹುದು ಎಂದು ತಿಳಿಸಿದರು.
ಜೈವಿಕ ಇಂಧನ ಕಾರ್ಯಪಡೆ ಸದಸ್ಯರಾದ ಅತ್ತಿಹಳ್ಳಿ ದೇವರಾಜ್, ಜೆ.ಟಿ. ರಾಜಶೇಖರ್, ಕೃಷಿ ವಿವಿ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಹೆಚ್.ವಿ. ನಂಜಪ್ಪ, ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಕೆ. ನಾರಾಯಣಗೌಡ ಆಡಳಿತ ಮಂಡಳಿ ಸದಸ್ಯ ಶ್ರೀ ಕೆ.ಸಿ. ಶಂಕರೇಗೌಡ ಮೊದಲಾದವರು ಉಪಸ್ಥಿತರಿದ್ದರು.

0 comments:

Post a Comment