ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವರ್ಷಾಚರಣೆ

60 ಮೈಲಿಗಳನ್ನು ಮೀರಿ ಬೆಳೆಯುವಾಸೆ,ಆದರೂ ಅಕ್ಕಪಕ್ಕದವರು ರೆಕ್ಕೆ ಹಿಡಿದು ಜಗ್ಗುತ್ತಾರೆ, ಅದರ ಮಧ್ಯೆಯೂ ಮೇಲೇರಿದ ಜೋನಥನ್ ಎಂಬ ಕಡಲಹಕ್ಕಿ ಎಲ್ಲವೂ ಸಾಧ್ಯ ಎಂದು ತೋರಿಸುತ್ತದೆ .ನಾನು ನನ್ನ ಕನಸ ಮೇಲೆ ಕೂತಾಗಿದೆ ಮತ್ತೆ ಮುಂದಿನದು -ಇದು ರಿಚರ್ಡ್ ಬ್ಯಾಕ್ನ "ಜೋನಾಥನ್ ಲಿವಿಂಗ್ಸ್ಟನ್ ಸೀಗಲ್" ಎಂಬ ಕಾದಂಬರಿಯ ಕಥಾಹಂದರ.
ನನಗೂ ಜೋನಾಥನ್ನಂತಾಗುವಾಸೆ. ಎಲ್ಲೋ ಓದಿದ ತುಣುಕಿನ ಬೆನ್ನತ್ತಿ ಇಡೀ ಕಾದಂಬರಿ ಓದುವ ತರಾತುರಿಯಲ್ಲಿ ಅದನ್ನು ಗೆಳತಿಯ ಕೈಯಲ್ಲಿ ಕಂಡು ನನಗೂ ಕೊಡು ನಾನೂ 60 ಮೈಲಿಗಳಾಚೆ ದಾಟಿಹೋಗುತ್ತೇನೆ ಎಂದೆ. ಆದರೆ ಪುಟ್ಟ ಕಡಲಹಕ್ಕಿಯ ಬಳಿ ಇದ್ದಂತೆಯೇ ನನ್ನ ಬಳಿಯೂ ಇದ್ದ ಗೆಳೆಯರ ದಂಡು,' ಏ ಏನದು, ಆ ಕಾದಂಬರಿ ನಮ್ಮ ಪಠ್ಯದಲ್ಲಿ ಇದೆಯೇ' ಎಂಬ ಮೊದಲ ಪ್ರಶ್ನೆ. ಇಲ್ಲ ಅಂದಾಗ 'ಅದು ನನಗೆ ಬೇಡ' ಎಂಬ ಕೊನೆಯ ವರಸೆ, ಇಷ್ಟೆ.
ಇದು ಕೇವಲ ನನ್ನ ಕ್ಲಾಸಿನ ಕತೆಯಲ್ಲ. ಶಾಲಾ ಕಾಲೇಜಿನಲ್ಲಿ ಎದುರಾಗುವ ಪ್ರತಿಯೊಬ್ಬರದೂ. ಜೂನ್ ತಿಂಗಳಲ್ಲಿ ಆರಂಭವಾದ ನಮ್ಮ ತರಗತಿಯೊಂದಿಗೆ ಸಿಲೆಬಸ್ನ ಒಡನಾಟ. ಆ ದಿನದಿಂದ ಸಿಲೆಬಸ್ ರಾಜ್ಯಭಾರ ಶುರು ಹಚ್ಕೊಳತ್ತೆ. ಜೊತೆಗೆ ಅದನ್ನು ನಿಗದಿತ ದಿನದೊಳಗೆ ಹೇಗಾದರೂ ಮುಗಿಸಬೇಕೆಂಬ ಮೇಷ್ಟ್ರ ಕನಸು.
ವಿದ್ಯಾರ್ಥಿ, ಮೇಷ್ಟ್ರು ಅಂದ ಮೇಲೆ ಪಠ್ಯದ ಕಡೆ ಗಮನ ಇರುವುದು ಸಹಜ, ಆದರೆ ಅದುವೇ ಸರ್ವಸ್ವವಲ್ಲ. ಒಬ್ಬ ಕತೆಗಾರನ ಒಂದು ಕತೆಯಿಂದ ಆತನ ದೃಷ್ಟಿಕೋನ ಅರ್ಥ ಆಗೋಕೆ ಸಾಧ್ಯವಿಲ್ಲ. ಆದರೆ ನಮ್ಮ, ಪಠ್ಯಕ್ರಮದಲ್ಲಿರೋದು ಒಬ್ಬ ಕತೆಗಾರನ ಒಂದು ಕತೆ. ಇಂಥ ಸಂದರ್ಭದಲ್ಲಿ ಆತನದೇ ಬೇರೆ ಕೃತಿಗಳನ್ನು ಓದುವಂತೆ ಪ್ರೇರೇಪಿಸುವುದು ಮೇಷ್ಟ್ರ ಕರ್ತವ್ಯ.
ಶಿಕ್ಷಣ ವ್ಯವಸ್ಥಿತವಾಗಿ ಸಾಗಲು ಪಠ್ಯಾನುಕ್ರಮ ಆದರೆ ಮಕ್ಕಳ ಬುದ್ಧಿ ಬೆಳೆಯಲು ಬೇಕಿರುವುದು ಇತರ ಜ್ಞಾನ. ಅಂದಮೇಲೆ ಪಠ್ಯಕ್ಕೆ ಮಾತ್ರ ಜೋತುಬೀಳುವುದು ಎಷ್ಟು ಸರಿ. ಅದರಲ್ಲೂ ಇಂದು ಪಠ್ಯವನ್ನು ಓದೋದು ಕೇವಲ ಅಂಕದ ದೃಷ್ಟಿಯಿಂದ,ಆತ್ಮತೃಪ್ತಿಗಾಗಿ ಅಲ್ಲ. ಓದಿದ ಪುಸ್ತಕವನ್ನು ಚರ್ಚಿಸಿದರೆ, ವಿಚಾರ ವಿನಿಮಯ ಮಾಡಿದರೆ ಒಳಿತಾಗಬಹುದೇನೋ? ಜೋನಾಥನ್ನ ಕನಸಿನಂತೆಯೇ ನಮ್ಮ ಯೋಚನೆಯೂ ಸಾಗಲಿ...

ಚೈತನ್ಯಾ ಆರ್.

0 comments:

Post a Comment