ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:20 PM

ಜೀವನ ಜಾತ್ರೆ

Posted by ekanasu

ಚಿತ್ರಿಕೆ

ನಿತ್ಯವೂ ಇಲ್ಲಿ ನಡೆಯೋದು ಒಂದು ರೀತಿ ಜಾತ್ರೆಯೇ. ಥೇಟ್...ನಮ್ಮೂರಿನ ಮಹಾಲಿಂಗೇಶ್ವರಿನಗೋ, ದುರ್ಗಾಪರಮೇಶ್ವರಿಗೋ ನಡೆದಂತೆಯೇ. ಯಾವ್ಯಾವ ಊರಿನಲ್ಲಿದ್ದವರೆಲ್ಲಾ ಒಂದು ದಿನ ಸೇರುತ್ತಾರೆ. ಆ ಊರಿನ ಹಬ್ಬವೆಂದರೆ ಎಲ್ಲೆಲ್ಲೋ ಇದ್ದವರು ಎದುರುಬದುರಾಗುವ ದಿನವಿದ್ದಂತೆಯೇ.
ಮಕ್ಕಳಿಗಂತೂ ಕೊಡು-ಕೊಳ್ಳುವಿಕೆಯ ತರಾತುರಿ. ಮೊನ್ನೆಯ ಸಾಲಿಗ್ರಾಮದ ಹಬ್ಬದಲ್ಲಿ ನನ್ನ ಮಗ ಅವರಮ್ಮಮ್ಮನನ್ನು ಬಿಡಲೇ ಇಲ್ಲವಂತೆ. ದೊಡ್ಡ ಬಸ್ಸಿನಿಂದ ಆರಂಭಿಸಿದವ, ಕೊನೆಗೂ ಚೌಕಾಶಿ ಚೌಕಾಶಿ ಮಾಡಿ ಪುಟ್ಟದೊಂದು ಕಾರಿಗೆ ಇಳಿಸುವಾಗ ಸಾಕು ಬೇಕಾಯಿತಂತೆ. ಇಂತದೇ ನೂರಾರು ಮಕ್ಕಳು ತಮ್ಮ ಅಪ್ಪ-ಅಮ್ಮಂದಿರ ಹಿಂದೆ ನಿಂತಿರುತ್ತಾರೆ. ಹೀಗೆಯೇ...ಕೊನೆ ಕೇರಿಯ ಭಾಸ್ಕರನ ಮಗಳು ಕಾಣೆಯಾದವಳು ಪತ್ತೆಯಾದದ್ದು ಅದೇ ಜಾತ್ರೆಯಲ್ಲಿ ತನ್ನ ಗಂಡನೊಂದಿಗೆ.ಒಂದು ವರ್ಷದಲ್ಲಿ ಊರಿನಲ್ಲಿ ನಡೆದಿರಬಹುದಾದ ಗಣ್ಯ ಸಮಾಚಾರಗಳೆಲ್ಲಾ ಬಿತ್ತರವಾಗುವುದು ಅದೇ ದಿನ. ನಿಜವಾಗಿಯೂ ಅಂದು ಊರಿನ ಎಲ್ಲ ಸ್ವತಂತ್ರ ರೇಡಿಯೋ ಸ್ಟೇಷನ್‌ಗಳು ಸಮಾಚಾರವನ್ನು ಬಿತ್ತರಿಸುತ್ತಲೇ ಇರುತ್ತವೆ. ಆ ಹರಕೆ ಆಟದಲ್ಲಿ ಆದ ಅವಘಡ, ಶಾಲೆಯಲ್ಲಿ ನಡೆದ ಲಡಾಯಿ, ಶ್ರೀಮತಿಯ ಮಗ ತೆಂಗಿನ ಮರ ಹತ್ತಲು ಹೋಗಿ ಬಿದ್ದು ಕಾಲು ಮುರಿದು ಕೊಂಡ ವಾರ್ತೆ, ವೆಂಕಟರಮಣನ ಮಗಳು ಶಾಲೆಗೇ ಫರ್ಸ್ಟ್ ಬಂದು ಉಳಿದ ಮಕ್ಕಳ ಸಿಟ್ಟಿಗೆ ಗುರಿಯಾದದ್ದು...ಇಂಥ ನೂರಾರು.
ಬೆಂಗಳೂರಿನಲ್ಲೋ,ಬೊಂಬಾಯಿಯಲ್ಲೋ ಇದ್ದವರು ಊರಿಗೆ ಬಂದು ಇದಕ್ಕೆಲ್ಲಾ ಒಂದು ದಿನ ಕಿವಿಕೊಟ್ಟರೆ ಸಾಕು. ವಾಪಸು ಹೋದ ಮೇಲೆ ವರ್ಷಪೂರ್ತಿ ಪಟಾಕಿಯಂತೆ ಇದನ್ನೇ ಹಚ್ಚಬಹುದು.
ಇದರ ಮಧ್ಯೆ ಒಂದು ನಿಗದಿತ ಮುಹೂರ್ತಕ್ಕೆ ತೇರನ್ನು ಎಳೆಯುತ್ತಾರೆ. ಎಲ್ರೂ ಸೇರುತ್ತಾರೆ. ಅನ್ನ ಸಂತರ್ಪಣೆ ಮುಗಿಸಿ ಮನೆಗೆ ಬರುವಾಗ ಜಾತ್ರೆಯ ಉತ್ಸಾಹ ಕಾಲುಗಳಲ್ಲಿ ತೋರುತ್ತಿರುತ್ತದೆ. ಆದರೂ ಹುಮ್ಮಸ್ಸು ಅಡಗಿರುವುದಿಲ್ಲ. ಸಂಜೆಯ ಕಾರ‍್ಯಕ್ರಮಕ್ಕೆ ಎದ್ದು ಹೊರಡುವುದಷ್ಟೇ ಬಾಕಿ.
ಈ ನಗರಗಳ ಮಾಲ್‌ಗಳ ಒಳ ಹೊಕ್ಕರೆ ಅಂಥದೇ ಹುರುಪಿದೆ. ಎಲ್ಲರೂ ಸೇರುತ್ತಾರೆ, ತಮಗೆ ಬೇಕಾದದ್ದನ್ನು ಹುಡುಕುತ್ತಾರೆ. ಆಯ್ಕೆಯ ಜಗತ್ತಿನಲ್ಲಿ ಕಳೆದು ಹೋದ ಮಂದಿ. ಯಾವುದು ಒಳ್ಳೆಯದು, ವಿಶ್ವಾಸಾರ್ಹ ಎಂಬ ಗೊಂದಲದಲ್ಲಿ ಮುಳುಗಿದ ಮಂದಿ. ಯೋಗ್ಯತೆಗೆ ತಕ್ಕಂತೆ ಪಡೆಯಬೇಕೆಂದ ಹಠ ಹಿಡಿದವರು, ಬ್ರ್ಯಾಂಡ್‌ಗಳ ಬೆನ್ನತ್ತಿ ಅಂಗಿಯ ಕಾಲರ್‌ನ್ನು ಆಗಾಗ್ಗೆ ನೆಟ್ಟಗೆ ಮಾಡಿಕೊಳ್ಳುತ್ತಿರುವವರು, ಡಿಸ್ಕೌಂಟ್‌ಗಳ ಮೇಳದಲ್ಲಿ ಹೊರಗಿನ ಅಂಗಡಿಗಿಂತ ಒಂದು ರೂ. ಕಡಿಮೆ ಸಿಗಬಹುದೇ ಅಕ್ಕಿ ಎಂದು ವಿಚಾರಿಸಲು ಬಂದವರು...ಎಷ್ಟೊಂದು ಮಂದಿ.
ಇವರಲ್ಲೂ ಬೇಕಾದಷ್ಟೂ ಸಮಾಚಾರಗಳಿವೆ. ವರ್ಷಪೂರ್ತಿ ಕೇಳಿ, ಚರ್ಚಿಸಬಹುದಾದಷ್ಟು. ಮನೆಯಲ್ಲಿ ಗಂಡ ಬೇಸರ ಮಾಡಿಕೊಂಡದ್ದು, ಮಗಳು ಬಿದ್ದು ಗಾಯ ಮಾಡಿಕೊಂಡಿದ್ದು, ಮಗ ತನ್ನ ಗೆಳತಿಯ ಮಗನಿಗಿಂತ ಎರಡು ಅಂಕ ಕಡಿಮೆ ಪಡೆದದ್ದಕ್ಕೆ ಅಮ್ಮ ಸಿಟ್ಟುಗೊಂಡು ಮೂರು ದಿನ ಮಾತು ಬಿಟ್ಟಿದ್ದು, ಎದುರುಮನೆಯವರು ಸುಮ್ಮನೆ ಉಳಿದವರಲ್ಲಿ ಚಾಡಿ ಹೇಳಿದ್ದು, ಅವರ ಮನೆಗೆ ಇದು ಬಂದದ್ದು, ಇವರ ಮನೆಗೆ ಅದು ಬಂದದ್ದು...ಎಷ್ಟೊಂದು ಸಮಾಚಾರಗಳು.
ಆದರೂ ಒಬ್ಬರನ್ನು ಕಂಡರೆ ಮತ್ತೊಬ್ಬರು ಮಾತನಾಡುವುದಿಲ್ಲ, ನಗಲೂ ಪುರಸೊತ್ತಿಲ್ಲ. ಡಿಸ್ಕೌಂಟ್ ಇರುವುದು ಕೆಲವೇ ಗಂಟೆ, ಅಷ್ಟರೊಳಗೆ ಎಲ್ಲವೂ ಮುಗಿಯಬೇಕು. ಬದುಕೂ ಸಹ ! ಅದು ದೇವರ ಜಾತ್ರೆ, ಇದು ನಮ್ಮದೇ ಜೀವನ ಜಾತ್ರೆ.

ಅರವಿಂದ ನಾವಡ

1 comments:

Gagan Darshan said...

The first line contains "Mahalingeshwarinago" - Should this be "Mahalingeshwaranigo" ?

Post a Comment