ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವರ್ಷಾಚರಣೆ
ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು.... ಈ ಮಾತು ಎಷ್ಟೊಂದು ಸುಂದರ ಅಲ್ಲವೇ. ಹಳೆ ಬೇರು ಅಂದರೆ ಅನುಭವಸ್ಥರ ಮಾರ್ಗದರ್ಶನ , ಪ್ರೋತ್ಸಾಹದ ನುಡಿಗಳು , ಗೌರವಪೂರ್ವಕ ಆಶೀರ್ವಾದಗಳು, ಹೊಸ ಚಿಗುರು ಇಂದಿನ ಯುವ ಜನತೆ, ಉತ್ಸಾಹದ ಚಿಲುಮೆ, ಆಸಕ್ತ ಮನೋಭಾವಗಳು ... ಇವೆರಡೂ ಸೇರಿದರೆ ಮರ ಸೊಗಸು... ಅಂದರೆ ಯಾವುದೇ ಒಂದು ಸಂಸ್ಥೆಯಿರಲಿ, ಸಂಘಟನೆಯಿರಲಿ ಅವು ಸುಂದರವಾಗಿ , ಸದೃಢವಾಗಿ, ಸಂತೋಷಪೂರ್ವಕವಾಗಿ , ಸಮತೋಲನವಾಗಿ ಕೂಡಿಬಾಳಲು ಸಾಧ್ಯ ಎಂಬ ಒಂದು ಅರ್ಥಪೂರ್ಣ ಮಾತು.ಇದನ್ನು ಈ ಸಂದರ್ಭದಲ್ಲಿ ಹೇಳಲೇ ಬೇಕು. ಕಾರಣ ಇಷ್ಟೇ. ಇಂದಿಗೆ `ಈ ಕನಸು. ಕಾಂ' ಎಂಬ ಮಂಗಳೂರಿನ ಮೊದಲ ಕನ್ನಡ ಅಂತರ್ಜಾಲ ಸುದ್ದಿ ಮಾಧ್ಯಮಕ್ಕೆ ಒಂದು ವರ್ಷ ಪೂರೈಸುತ್ತಿರುವ ಸುಸಂದರ್ಭ. ಆರಂಭದ ದಿನಗಳಲ್ಲಿ ಅನೇಕ ಮಂದಿ ಹಿರಿಯರ ಹಾರೈಕೆ, ಪ್ರೋತ್ಸಾಹ, ನಲ್ಮೆಯ ಮಾರ್ಗದರ್ಶನ , ಹಿತನುಡಿಗಳು `ಈ ಕನಸು. ಕಾಂ' ಗೆ ಹರಿದು ಬಂದಿತ್ತು. ಅದನ್ನೆಲ್ಲ ಶ್ರದ್ಧಾಪೂರ್ವಕವಾಗಿ ಸ್ವೀಕರಿಸಿರುವುದರಿಂದಲೇ ಈ ಕನಸು ಇಂದು ವರ್ಷಪೂರೈಸುವಲ್ಲಿ ಸಾರ್ಥಕತೆಯನ್ನು ಕಂಡುಕೊಂಡಿದೆ ಎಂದರೆ ತಪ್ಪಾಗಲಾರದು.ಅನೇಕ ಅಡೆತಡೆಗಳು ಈ ಕನಸಿನ ಒಂದು ವರ್ಷದ ಹಾದಿಯಲ್ಲಿ ಕಂಡುಬಂದಿದೆ. ಸವಾಲುಗಳನ್ನು ಸಮರ್ಥವಾಗಿ ಈ ಕನಸು ನಿರ್ವಹಿಸಿದೆ. ಉದಯೋನ್ಮುಖ ಬರಹಗಾರರಿಗೆ ತುಂಬು ಪ್ರೋತ್ಸಾಹಗಳನ್ನು ನೀಡಿದೆ ಎಂಬುದು ಖುಷಿಯ ವಿಚಾರ. ಅನೇಕ ಹೊಸ ಹೊಸ ವಿಚಾರಗಳನ್ನು ಸಮಾಜಕ್ಕೆ ಎತ್ತಿ ತೋರಿಸುವ ಮೂಲಕ ಹೊಸತೊಂದು ಪರಂಪರೆಗೆ ಈ ಕನಸು ನಾಂದಿ ಹಾಡಿದೆ ಎಂದರೂ ತಪ್ಪಾಗಲಾರದು. ಅದೆಷ್ಟೋ ಮಂದಿಗೆ `ಅಂತರ್ಜಾಲ'ದಲ್ಲೂ ಸುದ್ದಿಮಾಧ್ಯಮ ಮಾಡಬಹುದೆಂದು ತಿಳಿದಿರಲಿಲ್ಲ. ಆದರೆ ಯಾವುದೇ ಇಸಂಗಳಿಲ್ಲದೆ, ಹಮ್ಮು ಬಿಮ್ಮುಗಳಿಲ್ಲದೆ ಈ ಕನಸು ಅವರಿಗೆಲ್ಲ ಒಂದು `ನವ ಮಾಧ್ಯಮ'ದ ಅನುಭವಗಳನ್ನು ತಿಳಿಹೇಳಿದೆ ಎಂಬ ಸಣ್ಣ ಸಂತೋಷ ಈ ಕನಸಿಗಾಗಿದೆ.

ಯಾವುದೇ ಒಂದು ಮಾಧ್ಯಮವಿರಲಿ ಅದಕ್ಕೆ ಸೂಕ್ತ ಲೇಖನ ಬರಹಗಳಿರದಿದ್ದಲ್ಲಿ ಆ ಮಾಧ್ಯಮ ಮುಂದುವರೆಯುವುದು ಬಹುಕಷ್ಟ. ಆರಂಭದ ದಿನಗಳಲ್ಲಿ ನಾಡಿನ ಗಣ್ಯ ಸಾಹಿತ್ಯ ಮಿತ್ರರೂ, ಹೆಸರಾಂತ ಹಿರಿಯ ಬರಹಗಾರರು ಅನೇಕ ಅಂಕಣ ಬರಹಗಳನ್ನು ನೀಡಿ ಪ್ರೋತ್ಸಾಹ ನೀಡಿದ್ದಾರೆ. ನಾಡಿನುದ್ದಗಲಕ್ಕಿರುವ ಅನೇಕ ಬರಹಗಾರರು ಯಾವುದೇ ಸ್ವಾರ್ಥವಿಲ್ಲದೆ ಮನಪೂರ್ವಕವಾಗಿ ಲೇಖನ , ಸುದ್ದಿಗಳನ್ನು ಪೂರೈಸುತ್ತಿದ್ದಾರೆ. ಅನೇಕ ಉದಯೋನ್ಮುಖ ಸಾಹಿತ್ಯ ಮಿತ್ರರು ನಿರಂತರ ವೈವಿಧ್ಯಮಯ ಬರಹಗಳನ್ನು ನೀಡುತ್ತಿದ್ದಾರೆ. ವಿದೇಶದಲ್ಲಿರುವ ಸಾಹಿತ್ಯಾಸಕ್ತ ಮಿತ್ರರು, ಈ ಕನಸಿನ ಅಭಿಮಾನಿ ಬಳಗ ಈ ಕನಸು ಮಾಧ್ಯಮಕ್ಕೆ ಸಕಾಲಕ್ಕೆ ಸೂಕ್ತ ವರದಿ, ಮಾಹಿತಿ, ಲೇಖನಗಳನ್ನು ಪೂರೈಸುತ್ತಿದ್ದಾರೆ. ಈ ಕನಸಿನ ಶಕ್ತಿಯಾಗಿರುವ ವಿದ್ಯಾರ್ಥಿ ಸಮೂಹ, ಯುವ ಸಮೂಹ ನಿರಂತರ ಬರಹಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಈ ಎಲ್ಲಾ ಅನಘ್ರ್ಯ ರತ್ನಗಳಿಗೆ ಈ ಕನಸು.ಕಾಂ. ಶಿರಬಾಗಿ ನಮಿಸುತ್ತದೆ. ಮತ್ತು ಮುಂದೆಯೂ ತಮ್ಮೆಲ್ಲರ ತುಂಬು ಪ್ರೋತ್ಸಾಹವನ್ನು ನಿರೀಕ್ಷಿಸುತ್ತದೆ.

ಈ ಕನಸು.ಕಾಂ ಕೇವಲ ಉದಯೋನ್ಮುಖ ಬರಹಗಾರರಿಗೆ ವೇದಿಕೆಯೊದಗಿಸಿ , ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸಿಲ್ಲ. ಬದಲಾಗಿ ಶಿಕ್ಷಣ, ಆರೋಗ್ಯ, ಮಾರ್ಗದರ್ಶನ ಮೊದಲಾದ ಸಮಾಜ ಮುಖೀ ಕಾರ್ಯಕ್ರಮಗಳಲ್ಲೂ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದೆ. ಮೂಡಬಿದಿರೆಯಲ್ಲಿ ನಡೆದ ಬೃಹತ್ ಉದ್ಯೋಗಮೇಳದಲ್ಲಿ ಈ ಕನಸು .ಕಾಂ ಯಶಸ್ವಿಯಾಗಿ ಭಾಗಿಯಾಗುವ ಮೂಲಕ ಯುವಜನತೆಗೆ ಉದ್ಯೋಗ ನೀಡುವ ಕಾರ್ಯದಲ್ಲಿ ಅಳಿಲ ಸೇವೆ ಮಾಡಿದೆ. ಅನೇಕ ಶಾಲಾ , ಕಾಲೇಜುಗಳಲ್ಲಿ ಅಂತರ್ಜಾಲ ಮಾಧ್ಯಮ, ನವ ಮಾಧ್ಯಮಗಳ ಬಗ್ಗೆ ಮಾಹಿತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೆ. ಆರೋಗ್ಯ ಶಿಬಿರಗಳನ್ನೇರ್ಪಡಿಸಿ ಯಶಸ್ವಿಯಾಗಿ ಜನತೆಯ ಆರೋಗ್ಯ ಸೇವೆಯಲ್ಲಿ ಭಾಗಿಯಾಗಿದೆ.
ಯಾವುದೇ ಒಂದು ಜಾತಿ, ಪಂಗಡ, ಮತ, ಧರ್ಮಗಳನ್ನು ಓಲೈಸದೆ, ಸಮದೃಷ್ಠಿಯಿಂದ ಈ ಒಂದು ವರ್ಷಗಳಲ್ಲಿ ಈ ಕನಸು.ಕಾಂ ಕರ್ತವ್ಯ ನಿರ್ವಹಿಸಿದೆ ಎಂಬುದು ಈ ಕನಸಿಗೆ ಸಮಾಧಾನ ತಂದ ವಿಚಾರ. ಹಲವಾರು ಸಂದರ್ಭಗಳಲ್ಲಿ ನೇರವರದಿಗಳನ್ನು, ವಿಡಿಯೋ ಲೈವ್ ಗಳನ್ನು ನೀಡಿ ಜನತೆಗೆ ಕ್ಷಿಪ್ರಗತಿಯಲ್ಲಿ ಮಾಹಿತಿ ತಲುಪಿಸುವಲ್ಲಿ ಈ ಕನಸು ಸಮರ್ಥವಾಗಿದೆ ಎಂಬುದು ಸಂತಸ ತಂದಿದೆ.

ಒಂದು ವರ್ಷಗಳ ಕಾಲ ಈ ಕನಸು.ಕಾಂ ನ ಎಲ್ಲಾ ವಿಚಾರಗಳಿಗೆ ಪ್ರೋತ್ಸಾಹಿಸಿ, ಬೆಂಬಲ ನೀಡಿ, ತಪ್ಪು ಒಪ್ಪುಗಳನ್ನು ತಿದ್ದುವಲ್ಲಿ ಸಹಕರಿಸಿದ ಓದುಗ ಕೋಟಿಗೆ ಕೃತಜ್ಞತೆಗಳು. ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಸನ್ಮಿತ್ರರಿಗೂ ಕೃತಜ್ಞತೆಗಳು. ಮುಂದೆಯೂ ತಮ್ಮೆಲ್ಲರ ನಿರಂತರಪ್ರೋತ್ಸಾಹ ನಮ್ಮ ಮೇಲಿರಲಿ ಎಂಬ ಸದಾಶಯ ನಮ್ಮದು. ಶುಭವಾಗಲಿ.
- ಸಂಪಾದಕ.

1 comments:

ಚಿಲ್ಲರೆ said...

ವೆಬ್ ಲೋಕದಲ್ಲಿ ಹೊಸ ಭರವಸೆ, ಕನಸುಗಳನ್ನು ಹುಟ್ಟಿಸಿದ
ಒಂದು ವರ್ಷದ ಪಾಪು, " ಈ ಕನಸಿಗೆ" ಹುಟ್ಟು ಹಬ್ಬದ ಶುಭಾಶಯಗಳು

ಪ್ರೀತಿಯಿಂದ...
ಈಶ

Post a Comment