ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಇದು ವಿಟ್ಲದ ಅರಮನೆ. ಆದರೆ ಇದಿಂದು ಶಿಥಿಲವಾಗುತ್ತಿದೆ. ಈ ಬಗ್ಗೆ ಜ್ಯೋತಿಪ್ರಕಾಶ್ ಪುಣಚ ವಿಶೇಷ ವರದಿಯನ್ನು ಈ ಕನಸಿಗಾಗಿ ಕಳುಹಿಸಿದ್ದಾರೆ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.ವಿಟ್ಲ: ತುಳುನಾಡಿನಲ್ಲಿ ಆಳ್ವಿಕೆ ನಡೆಸಿದ ಅರಸು ಮನೆತನಗಳಲ್ಲಿ ಪ್ರಸಿದ್ಧಿ ಪಡೆದ ವಿಟ್ಲದ 'ಡೊಂಬ ಹೆಗ್ಗಡೆ' ಅರಸೊತ್ತಿಗೆಯ ಕಾಲ ಇತಿಹಾಸ ಸೇರಿದೆ. ಅಳಿದುಳಿದ ಅರಮನೆಯಲ್ಲಿ ಈಗ ಅರಸು ದರ್ಭಾರ್ ಇಲ್ಲವಾಗಿದೆ. ಸುಮಾರು 25 ಅಧಿಕ ಅರಸು ಕುಟುಂಬಗಳು ಅರಸು ದರ್ಭಾರ್ ರನ್ನು ಬದಿಗಿರಿಸಿ ಉದ್ಯೋಗ ಅರಸಿ ಜೀವನ ನಿರ್ವಹಣೆಯಾಗುತ್ತಿದೆ. ವಿಟ್ಲ ಸೀಮೆಯ 16 ಗ್ರಾಮಗಳ 16 ದೈವದೇವರುಗಳು ಒಡೆತನ ಮತ್ತು ಪರಂಪರಾಗತವಾಗಿ ನಡೆದು ಬಂದಿರುವ ಒಂದೆರಡು ಆಚರಣೆಗಳನ್ನು ಬಿಟ್ಟರೆ ಈ ಉಳಿದಿರುವುದು ಅರಸುಗಳೆಂಬ ಗೌರವ ಮಾತ್ರ ! ಅರಮನೆಗೆ ಈಗಲೂ ಜನ ಗೌರವ ಸಲ್ಲಿಸುತ್ತಾರೆ. ಅರಸುಮನೆತನಕ್ಕೆ ಭಕ್ತಿ ಗೌರವಗಳಿಂದ ಕಾಣಿಕೆ ಅರ್ಪಿಸುತ್ತಾರೆ.ಕ್ರಿ.ಶ. 13ನೇ ಶತಮಾನದಲ್ಲಿದ್ದರೆಂಬ 'ಡೊಂಬ ಹೆಗ್ಗಡೆ' ಅರಸು ಮನೆತನದವರು ಬಂಟ್ವಾಳ ತಾಲೂಕಿನ ವಿಟ್ಲದ ಸುತ್ತು ಮುತ್ತಲಿನ 19 ಗ್ರಾಮಗಳನ್ನೊಳಗೊಂಡ ವಿಟ್ಲ ಸೀಮೆಯನ್ನು ಆಳ್ವಿಕೆ ನಡೆಸುತ್ತಿದ್ದರು. ಭೂತಾಳ ಪಾಂಡ್ಯನು ತನ್ನ 12 ಮಂದಿ ರಾಣಿಯರ ಮಕ್ಕಳಿಗೆ ರಾಜ್ಯಗಳನ್ನು ವಿಂಗಡಿಸಿಕೊಡುವಾಗ 8ನೇ ರಾಣಿಯ ಮಕ್ಕಳಿಗೆ ವಿಟ್ಲದ ಅರಸುತನವನ್ನು ನೀಡಿದರೆಂಬ ಪ್ರತೀತಿಯಿದೆ. ವಿಟ್ಲ ಸಮೀಪದ ಕರೋಪಾಡಿ ಗ್ರಾಮದ ವಗೆನಾಡು ಸುಬ್ರಾಯ ದೇಗುಲದಲ್ಲಿ ದೊರಕಿರುವ ಕ್ರಿ.ಶ. 1257ರ ಆಳುಪ ಶಾಸನದಲ್ಲಿ ಡೊಂಬ ಹೆಗ್ಗಡೆಯ ಉಲ್ಲೇಖವಿದ್ದು ಈ ಶಾಸನವೇ ಅರಸು ಮನೆತನದ ಬಗ್ಗೆ ಲಭ್ಯವಿರುವ ಪ್ರಾಚೀನ ದಾಖಲೆಯಾಗಿದೆ.

ಪೂರ್ವದಲ್ಲಿ ವಿಟ್ಲ ಪ್ರದೇಶವನ್ನು 'ಮಾಯಿಲ' ಎಂಬ ಮೂಲ ನಿವಾಸಿಗಳು ಆಳುತ್ತಿದ್ದು ಬೇರೆ ಪ್ರದೇಶದಿಂದ ಇಲ್ಲಿಗೆ ವಲಸೆ ಬಂದ ಡೊಂಬ ಹೆಗ್ಗಡೆ ಮನೆತನದವರು ಮಾಯಿಲ ಅರಸು ಮತ್ತು ಆತನ ಬಳಗದವರನ್ನು ವಿಟ್ಲದಲ್ಲಿ ಸಮಾರಂಭವೊಂದಕ್ಕೆ ಆಹ್ವಾನಿಸಿ ಉಪಾಯದಿಂದ ಸದೆಬಡಿದು ಇಲ್ಲಿ ತಮ್ಮ ಆಳ್ವಿಕೆಯನ್ನು ಸ್ಥಾಪಿಸಿಕೊಂಡರಂತೆ. ಸುಮಾರು 5 ಶತಮಾನಗಳ ಕಾಲ ಆಳ್ವಿಕೆ ನಡೆಸಿದ ಅರಸುಮನೆತನದ ಎಲ್ಲಾ ಅರಸರ ಹೆಸರುಗಳು ಮತ್ತು ಸಾಧನೆಗಳ ವಿವರಗಳು ಲಭ್ಯವಿರುವುದಿಲ್ಲ. ಕ್ರಿ.ಶ.17 ನೇ ಶತಮಾನದ ನಂತರವಷ್ಟೇ ಈ ಅರಸು ಮನೆತನದ ಚಟುವಟಿಕೆಗಳನ್ನು ಪೋರ್ಚುಗೀಸ್ ಹಾಗೂ ಇಂಗ್ಲೀಷ್ ದಾಖಲೆಗಳಲ್ಲಿ ಕಾಣಬಹುದು. 1453ರ ಕಿರು ಶಾಸನವೊಂದರಲ್ಲಿ ಈ ಶಾಸನ ವಿಟ್ಲದ ಅರಮನೆಯಲ್ಲಿ ಪರಿಶೀಲನೆಗೆ ಲಭ್ಯವಿದೆ) ಇಷ್ಟಕಾಪುರದ ಶ್ರೀ ಪಂಚಲಿಂಗ ದೇವರಿಗೆ ಡೊಂಬ ಹೆಗ್ಗಡೆ ಕುಂಞ ಶೇಖನ ಕಾಲದಲ್ಲಿ ಸುವರ್ಣ ಕಲಶವನ್ನು ಸಮರ್ಪಿಸಲಾಯಿತೆಂಬ ಲಿಖಿತವಿದೆ. ಇಲ್ಲಿರುವ ಇಷ್ಟಕಾಪುರವೆಂಬ ಸ್ಥಳನಾಮವು ಮುಂದೆ ಇಟ್ಟೆಲ್, ವಿಠಲ, ವಿಟ್ಲ ಎಂಬುದಾಗಿ ಪರಿವರ್ತನೆಗೊಂಡಿರುವುದಾಗಿದೆ.
ಕ್ರಿ.ಶ. 17ನೇ ಶತಮಾನದ ಪ್ರಾರಂಭಕ್ಕೆ ವಿಟ್ಲದ ಅರಸರು ಕೆಳದಿ ರಾಜರ ಸಾಮಂತರಾಗಿ ಆಳ್ವಿಕೆ ನಡೆಸಿರುವ ಬಗ್ಗೆ ಕೆಳದಿಯ ಸಾಮಂತರೆಲ್ಲ ದಂಗೆಯೆದ್ದು ಗೊಂದಲ ಸ್ಥಿತಿ ನಿರ್ಮಾಣವಾದ ಬಗ್ಗೆ ಪೋರ್ಚುಗೀಸ್ ದಾಖಲೆಗಳಲ್ಲಿ ವಿಟ್ಲದ ಹೆಗ್ಗಡೆಯ ಹೆಸರು ಸೇರಿಕೊಂಡಿದೆ. ವಿಟ್ಲದ ಅರಸರು ಕೆಳದಿ ಆಸ್ಥಾನಕ್ಕೆ ನೀಡಬೇಕಾಗಿದ್ದ ವಾರ್ಷಿಕ ಸಲುವಳಿಯು ಸಂದಾಯವಾಗದೆ ಉಳಿದಾಗ ಆತನನ್ನು ಬಂಧಿಸಿ ಕೆಳದಿಗೆ ಒಯ್ಯಲಾಯಿತು. ಆ ಸಂದರ್ಭ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ನಿರ್ವಾಣ ಶೆಟ್ಟಿಯು ವಿಟ್ಲದ ಹೆಗ್ಗಡೆಗೆ ಜಾಮೀನು ನೀಡಿರುವುದರಿಂದ ನಿರ್ವಾಣ ಶೆಟ್ಟಿಗೆ ಕಾಡುಮಠ, ಚಂದಪ್ಪಾಡಿ ಮತ್ತು ನರ್ಕಳ ಗ್ರಾಮಗಳಲ್ಲಿ ಭೂಮಿಯನ್ನು ನೀಡಿರುವುದಾಗಿದೆ.

ಕ್ರಿ.ಶ.1765ರಲ್ಲಿ ಕೆಳದಿ ರಾಜ್ಯವು ಹೈದರಾಲಿಯ ವಶವಾದಾಗ ಕೆಳದಿಯ ಸಾಮಂತರಾಗಿದ್ದ ವಿಟ್ಲದರಸರಿಂದ ಬರುವ ವಾರ್ಷಿಕ ಸಲುವಳಿಯನ್ನು ಅರ್ಧಪಟ್ಟು ಹೆಚ್ಚಿಸಿ ಓರ್ವ ಸುಂಕ ಸಂಗ್ರಹಿಸುವ ಅಧಿಕಾರಿಯ ಮಟ್ಟಕ್ಕಿಳಿಸಿದ. ಇದರಿಂದ ಅಸಮಧಾನಗೊಂಡ ವಿಟ್ಲದರಸು ಒಂದನೇ ಮೈಸೂರು ಯುದ್ಧದಲ್ಲಿ ಹೈದರಾಲಿಯ ವಿರುದ್ಧ ಬ್ರಿಟೀಷರನ್ನು ಬೆಂಬಲಿಸಿದರು. ಈ ಕಾರಣವಾಗಿ 1768ರಲ್ಲಿ ಹೈದರಾಲಿಯು ವಿಟ್ಲದರಸು ಅಚ್ಚುತ ಹೆಗ್ಗಡೆಯನ್ನು ಪದಚ್ಯುತಿಗೊಳಿಸಿದಾಗ ಕೇರಳದ ತಲಚೇರಿಯಲ್ಲಿ ಬ್ರಿಟೀಷರು ಆಶ್ರಯವನ್ನು ನೀಡಿದರು. ಅಚ್ಚುತ ಹೆಗ್ಗಡೆಯು ದೂರದ ಕೇರಳದಲ್ಲಿದ್ದರೂ ವಿಟ್ಲಕ್ಕೆ ಆಗಾಗ ಬಂದು ಅಧಿಕಾರ ಸ್ಥಾಪನೆಯ ಪ್ರಯತ್ನ ಮಾಡುತ್ತಿದ್ದ. ಇದರಿಂದ ಕೆಂಡಮಂಡಲವಾದ ಟಿಪ್ಪು ಸುಲ್ತಾನನು 1784ರಲ್ಲಿ ಅಚ್ಚುತ ಹೆಗ್ಗಡೆಯನ್ನು ಸೆರೆಹಿಡಿದು ಗಲ್ಲಿಗೇರಿಸಿದಲ್ಲದೆ ವಿಟ್ಲದರಮನೆಯನ್ನು ಸುಟ್ಟು ಭಸ್ಮ ಮಾಡಿದ. ನಾಶಹೊಂದಿದ ವಿಟ್ಲದ ಅರಮನೆಯ ಅವಶೇಷಗಳನ್ನು ಇವತ್ತಿಗೂ ಕಾಣಬಹುದು.


ಸುಮಾರು ಹತ್ತು ಎಕ್ರೆ ಪ್ರದೇಶದಲ್ಲಿ ಅರಮನೆಯ ಅವಶೇಷಗಳು ಈಗಲೂ ಕಾಣಸಿಗುತ್ತಿವೆ. ಬೃಹದಾಕಾರದ ಆನೆಬಾಗಿಲಿನ ಕಲ್ಲಿನ ಕೆತ್ತನೆಯ ಕುರುಹುಗಳು, ಕೋಟೆ ಕೊತ್ತಲಗಳು, ಸುತ್ತು ಗೋಪುರಗಳ ದಿಣ್ಣೆಗಳು, ಸುತ್ತು ಪಂಚಾಂಗಗಳು, ಕುದುರೆಗಳನ್ನು ಕಟ್ಟಿ ಹಾಕುವ ಸ್ಥಳ, ಅರಸರನ್ನು ಬೇಟಿಮಾಡಲು ಬಂದವರು ಉಳಕೊಳ್ಳುವ ಜಾಗ ಬಂಗ್ಲೆದಡಿ, ಮಹಾದ್ವಾರದ ಕಲ್ಲುಗಳು ಹಳೇಯ ಅರಮನೆಯ ಚಿತ್ರಣವನ್ನು ನೀಡುತ್ತದೆ.ಟಿಪ್ಪು ಸುಲ್ತಾನನ ಸಾವಿನ ನಂತರ ಕರಾವಳಿ ಕರ್ನಾಟಕವು ಬ್ರಿಟೀಷರ ಪಾಲಾಗಿರುವುದನ್ನು ಸಹಿಸದೆ ಅಚ್ಚುತ ಹೆಗ್ಗಡೆಯ ಉತ್ತರಾಧಿಕಾರಿ ರವಿವರ್ಮ ನರಸಿಂಹರಸ ಡೊಂಬ ಹೆಗ್ಗಡೆಯು ಬ್ರಿಟೀಷರ ವಿರುದ್ಧ ಪ್ರಥಮ ಕ್ರಾಂತಿಯ ಕಹಳೆಯನ್ನೂದಿದರು. ಬ್ರಿಟೀಷರ ಸೇನೆಯೆದುರು ಸೆರೆಸಿಕ್ಕಿದ ಅರಸುವನ್ನು ಮರಣದಂಡನೆಗೆ ಗುರಿಪಡಿಸಲಾಯಿತು. ವಿಟ್ಲದ ಹೆಗ್ಗಡೆಯ ಖಾಸಗೀ ಆಸ್ತಿಯನ್ನು ಹೊರತುಪಡಿಸಿ ಆತನ ಒಡೆತನದಲ್ಲಿದ್ದ ಎಲ್ಲಾ ಆಸ್ತಿ ಪಾಸ್ತಿಗಳು ಬ್ರಿಟೀಷರ ವಶವಾದವು. ಇದಕ್ಕೆ ಪ್ರತಿಯಾಗಿ ವಿಟ್ಲದರಸರಿಗೆ ವಾರ್ಷಿಕ 6019 ರೂಪೈ ಒಂದು ಆಣೆ ರಾಜಧನವನ್ನು ನೀಡಲಾಯಿತು. ಅರಸುಮನೆತನದವರು ಉಳಿದುಕೊಂಡು ತಮ್ಮ ಸಂಪ್ರದಾಯವನ್ನು ಆಚರಿಸುತ್ತಾ ವಿಟ್ಲದಲ್ಲಿ ಈಗಲೂ ವಾಸಿಸುತ್ತಿದ್ದಾರೆ.

ಅರಸು ಮನೆತನದವರು ಕ್ರಿ.ಶ. 1743ರಲ್ಲಿ ಕಾಶೀ ಯಾತ್ರೆ ಮಾಡಿದ ಬಗ್ಗೆ ಶಾಸನದಲ್ಲಿ ವಿವರಣೆಗಳಿದ್ದು, ಈ ಯಾತ್ರೆಯ ನೆನಪಿಗಾಗಿ ವಿಟ್ಲದ ಸಮೀಪ ಕಾಶೀಮಠವನ್ನು ನಿರ್ಮಿಸಿದರು. ಸುಮಾರು ಒಂದುವರೆ ಕಿ.ಮೀ. ದೂರದ ಕಾಶೀಮಠದಿಂದ ದಿನಂಪ್ರತಿ ಅಭಿಷೇಕದ ಪವಿತ್ರ ತೀರ್ಥ ಅರಸರಿಗೆ ಸಿಗುವಂತೆ ಮಣ್ಣಿನಡಿಯಲ್ಲಿ ರಚಿಸಲಾದ ಕಲ್ಲಿನ ಕೊಳವೆಗಳ ಕುರುಹುಗಳು ಕಂಡುಬರುತ್ತದೆ. ಅರಸರು ಆಹಾರ ಸೇವಿಸುವ ಮುನ್ನ ಕಾಶೀಮಠದ ಪವಿತ್ರ ತೀರ್ಥವನ್ನು ಆನೆಬಾಗಿಲಿನ ಬಳಿ ಪಡೆಯುತ್ತಿದ್ದರೆಂದು ತಿಳಿದುಬರುತ್ತಿವೆ.

ಅಚ್ಚುತ ಹೆಗ್ಗಡೆಯ ಉತ್ತರಾಧಿಕಾರಿಯಾಗಿ ಬಂದ ರವಿವರ್ಮ ನರಸಿಂಹರಸ ಡೊಂಬ ಹೆಗ್ಗಡೆಯು 1790-1800 ರ ಮದ್ಯೆ ನಾಶವಾಗಿ ಹಳೇಯ ಅರಮನೆಯ ಆವರಣದೊಳಗಡೆ ನೂತನ ಅರಮನೆಯನ್ನು ನಿಮರ್ಿಸಿ ತನ್ನ ಅಳಿಯನ ಜೊತೆ ಸೇರಿಕೊಂಡು ವಿಟ್ಲದಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರೆಂದು ತಿಳಿದುಬರುತ್ತದೆ. ತದನಂತರ ಒಂದೆರಡು ಅರಸರುಗಳು ಆಳ್ವಿಕೆ ನಡೆಸಿದ್ದು ಆಕಾಲದಲ್ಲಿ ಅರಸರ ಸಂಚಾರವು ಮೇಣೆಯಲ್ಲಿ ನಡೆಯುತ್ತಿತ್ತು.

ದೇಶವು ಸ್ವಾತಂತ್ರ್ಯವನ್ನು ಪಡೆದ ಸಂದರ್ಭದಲ್ಲಿ ರವಿವರ್ಮ ರಾಜ ಅರಸರು ಪಟ್ಟದಲ್ಲಿದ್ದರು. ವಿಟ್ಲದಲ್ಲಿ ಪಶು ಆಸ್ಪತ್ರೆ, ಪ್ರಾಥಮಿಕ ಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಇನ್ನಿತರ ಸಾಮಾಜಿಕ, ಧಾಮರ್ಿಕ , ಶೈಕ್ಷಣಿಕ ಕೇಂದ್ರಗಳಿಗೆ ಸ್ಥಳದಾನ ಮಾಡಿ ಹಲವಾರು ಜೀರ್ಣೋದ್ಧಾರ ಕಾರ್ಯಗಳನ್ನು ನಡೆಸಿದ್ದರು. 1988ರಲ್ಲಿ ಇವರ ಕಾಲ ಅಂತ್ಯಗೊಂಡಿದ್ದು ವಿಟ್ಲದ ಬಸ್ಸುನಿಲ್ದಾಣದಲ್ಲಿ ರವಿವರ್ಮ ಅರಸರ ವೃತ್ತವೊಂದು ಈಗಲೂ ಉಳಿದುಕೊಂಡಿದೆ. ತದನಂತರ ಇವರ ತ್ತಮ್ಮ ರಾಮವರ್ಮರಾಜರು ಅರಸಾಗಿದ್ದು ವಿಟ್ಲದ ಪಂಚಾಯತು ಅಧ್ಯಕ್ಷರಾಗಿ ಈ ಅವಧಿಯಲ್ಲಿ ವಿಟ್ಲಕ್ಕೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿದರು.

ಭೂ ಮಸೂಧೆ ಜಾರಿಗೊಂಡಾಗ ತಮ್ಮ ಜಮೀನುಗಳು ಕಳೆದುಹೋಗಿ ವಿಟ್ಲ ಸೀಮೆಯ 16 ಗ್ರಾಮಗಳ 16 ದೈವ ದೇವರುಗಳ ಒಡೆತನ ಮಾತ್ರ ಉಳಿದಿತ್ತು. 2003ರಲ್ಲಿ ಇವರ ಕಾಲವಾದಾಗ ಇವರ ಅಳಿಯ ರಾಮವರ್ಮರು ಅರಮನೆಯ ಹಿರಿಯರಾದರು. ಇತ್ತೀಚಿಗೆ ರಾಮವರ್ಮರು ಹೃದಯಾಘಾತದಿಂದ ತೀರಿಕೊಂಡು ಅರಮನೆಯ ಅರಸುತನ ಮೂಲೆ ಸೇರಿದೆ.ಈಗ ಅದರ ಒಡೆತನ ತಮ್ಮನಾದ ಜನಾರ್ಧನ ವರ್ಮರಿಗೆ ದಕ್ಕಿದೆಯಾದರೂ ಅವರಿಗೆ ಅರಸು ಮನೆತನದಲ್ಲಿ ಆಸಕ್ತಿಯಿಲ್ಲದಾಗಿದೆ. ಈಗ ಅರಮನೆಯ ಬಹುತೇಕ ಸಂಪ್ರದಾಯಗಳನ್ನು ರಾಮವರ್ಮರ ಮಗ ವಿಟ್ಲ ಗ್ರಾಮ ಪಂಚಾಯತ್ನ ಸದಸ್ಯ ಕೃಷ್ಣಯ್ಯನವರು ಕಟ್ಟುಪಾಡಿನಂತೆ ನಡೆಸುತ್ತಿದ್ದಾರೆ. ಅರಸರ ಕುಟುಂಬ ವೃದ್ಧಿಸಿ ಪ್ರತಿಯೊಬ್ಬರೂ ಸಂಸಾರಸ್ಥರಾಗಿ ಅರಮನೆಯಲ್ಲಿಯೇ ನೆಲೆಕಂಡುಕೊಂಡಿದ್ದಾರೆ. ಅರಸರೆಂಬ ದರ್ಬಾರು ಕೇವಲ ಮಾತಿನಲ್ಲಿ ಉಳಿಯಬೇಕಾದ ಸ್ಥಿತಿಯಲ್ಲಿ ಅರಸು ಮನೆತನದ ಸತ್ಯ ಕಥೆ ನಮ್ಮ ಕಣ್ಮುಂದೆ ಕಾಣುತ್ತಿದೆ.
ಪರಂಪರಾಗತವಾಗಿ ಬಂದಿರುವ ವಿಷು ಸಂಕ್ರಮಣ, ಚೌತಿ ಮತ್ತು ಉತ್ಸವಗಳು, ದಿನಂಪ್ರತಿ ಹೋಮ ಪೂಜೆಗಳು ಈಗಲೂ ನಡೆಯುತ್ತಿವೆ. ವಿಷು ಸಂಕ್ರಮಣದಂದು ವಿಟ್ಲದ ಸಮಸ್ತ ನಾಗರೀಕರು ಫಲಪುಷ್ಪ ಕಾಣಿಕೆಗಳನ್ನು ವಿಟ್ಲದರಮನೆಗೆ ಸಲ್ಲಿಸಿ ಹಿರಿಯರ ಪಾದನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಿರುವ ಸಂಪ್ರದಾಯ ಈಗಲೂ ಇದೆ. ಅರಮನೆಯ ಎದುರಿನ ಚಾವಡಿಗೆ 'ಮಲರಾಯಿ ಚಾವಡಿ' ಎಂಬುವುದಾಗಿ ಕರೆಯುತ್ತಿದ್ದು, ಈಗಲೂ ನ್ಯಾಯ ಪಂಚಾತಿಕೆಗಳು ಇಲ್ಲಿ ನಡೆಯತ್ತಿದೆ. ಇಲ್ಲಿ ನಡೆದ ತೀರ್ಮಾನಗಳು ಯಶಸ್ವಿಯಾಗಿರುವುದಾಗಿಯೂ ಜನರ ನಂಬಿಕೆಯಿದೆ. ಅರಮನೆಯೊಳಗಿನ ಮದುವೆ ಸಮಾರಂಭಗಳು ಅರಮನೆಯೊಳಗೆ ನಡೆಯುತ್ತಿದ್ದು ಇದ್ದುದರಲ್ಲಿ ಸಂತೃಪ್ತಿಯನ್ನು ಪಡೆಯುತ್ತಾ ಅರಸುತನದಲ್ಲಿ ಮೆರೆಯುವುದೇ ಇಲ್ಲಿಯ ನಿವಾಸಿಗಳ ಸುಯೋಗ !

1 comments:

Charan Gowda Haindavi said...

ನಂಗೂ ಅಲ್ಲಿಗೆ ಬೇಟಿಕೊಡೋ ಬಹುದಿನಗಳ ಆಸೆಯಿದೆ,

Post a Comment