ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:16 PM

ಒಂದಿಷ್ಟು ನೋಟಗಳು

Posted by ekanasu

ವರ್ಷಾಚರಣೆ
ಬಸ್ಸು ನಿಲ್ದಾಣದಲ್ಲಿ ನಿಂತವನ ಕಾಲು ಸೋತಿದೆ. ಅರ್ಧ ಗಂಟೆಯಿಂದ ಬಸ್ಸೇ ಇಲ್ಲ. ಕೂರಲೂ ಕಲ್ಲು ಬೆಂಚಿಲ್ಲ. ನೋಡುವ ದೃಶ್ಯಗಳನ್ನೇ ಎಷ್ಟೆಂದು ನೋಡುವುದು ಅನಿಸಿಬಿಟ್ಟಿದೆ. ಸಂಚಾರ ವ್ಯವಸ್ಥೆ ಬಗ್ಗೆಯೇ ಹಿಡಿಶಾಪ ಹಾಕುತ್ತಾ ನಿಂತಿದ್ದಾನೆ. ಮುಖದಲ್ಲಿ ಅಸಹನೆ ಮಡುಗಟ್ಟಿದೆ. ಯಾವುದೇ ಕ್ಷಣದಲ್ಲಿ ಸಿಡಿದು ಬಿಡಬಹುದು. ಅದಕ್ಕೆ ಈ ಕ್ಷಣ, ಇನ್ನೆರಡು ಕ್ಷಣದ ನಂತರದ ಕ್ಷಣ ಎಂಬ ಭೇದವಿಲ್ಲ.
ಕೈಯಲ್ಲಿ ಹಿಡಿದ ಚಿಕ್ಕ ಕೈ ಚೀಲವೂ ಭಾರ ಎನಿಸುತ್ತಿದೆ. ಅದರೊಳಗೇನೂ ಇಲ್ಲ, ಹೆಚ್ಚೆಂದರೆ ಅಕ್ಕನ ಮಗುವಿಗೊಂದು ಬಿಸ್ಕತ್ ಪೊಟ್ಟಣ, ಅವನ ತಮ್ಮನಿಗೊಂದು ಚಿಕ್ಕ ಲಾಲಿಪಪ್, ಬಂದಾಗಲೆಲ್ಲಾ ಸದಾ ಕಾಡುವ ಪಕ್ಕದ ಮನೆಯ ನಿಮ್ಮಿಗೊಂದು ಪುಟ್ಟ ಬಣ್ಣದ ಪೆನ್ಸಿಲ್ ಬಾಕ್ಸ್, ಅಕ್ಕನಿಗೆ ಅಮ್ಮ ಕಳಿಸಿಕೊಟ್ಟ ಜೀವಲಸಿನ ಕಾಯಿ...ಇಷ್ಟೇಯೇ ?
ಎರಡು ದಿನ ನಂತರ ಕೊಯ್ಯೋಣ ಎಂದು ಬಿಟ್ಟಿದ್ದ ಬಾಳೆಗೊನೆ ಮೊನ್ನೆ ಗಾಳಿಗೆ ಉರುಳಿತು. "ಹೋಗೋದ್ ಹೋಗ್ತೀಯಾ, ನಾಲ್ಕು ಚಿಪ್ಪು ಹಣ್ಣು ತಗೊಂಡು ಹೋಗ್’ ಎಂದು ಅಮ್ಮ ಕಳಿಸಿದ್ದಾಳೆ. ಒಟ್ಟೂ ಪುಟ್ಟ ಕೈ ಚೀಲದಲ್ಲಿ ಎಷ್ಟೊಂದು ಮಂದಿ !ಹೇಳಿದ ಟೈಮ್‌ಗೆ ನೀನು ಬರೋದೆ ಇಲ್ಲ ಎಂಬ ದೂರು ಸದಾ ಇವನ ಮೇಲೆ. ಅದಕ್ಕಾಗಿ ಇವತ್ತು ಸ್ವಲ್ಪ ಬೇಗನೇ ನಿಲ್ದಾಣಕ್ಕೆ ಬಂದ. ಆದರೂ ಬಸ್ಸು ಬರಲಿಲ್ಲವೇ? ಮಧ್ಯಾಹ್ನ ೩ ರ ನಂತರ ನಿಲ್ದಾಣದಲ್ಲಿ ಇದೇ ತಕರಾರು. ಬರುವ ಬಸ್ಸು ಸಮಯಕ್ಕೆ ಸರಿಯಾಗಿ ಬರುವುದಿಲ್ಲ, ಬಂದ ಬಸ್ಸೂ ಕೂಡಲೇ ಹೊರಡುವುದಿಲ್ಲ. ಮನಸ್ಸಿನೊಳಗೆ ಬೇಸರವೋ ಬೇಸರ. ಅವಳ ಆರೋಪ ಇವತ್ತೂ ನಿಜವಾಯಿತಲ್ಲ ಎಂಬ ಆತಂಕ ಈತನದ್ದು. ಅಂತೂ ಬಸ್ಸು ಬಂತು. ಯಾಕೋ ಚಾಲಕನಿಗೆ ನಿಲ್ದಾಣದಲ್ಲಿದ್ದ ರಾಶಿ ಜನ ಕಂಡು ಅಸಹನೆ ಉಕ್ಕಿ ಹರಿಯಿತು. ಅದಕ್ಕೇ ಬಸ್ ತನ್ನ ಫ್ಲಾಟ್‌ಫಾರ್ಮಿಗಿಂತ ಒಂದಷ್ಟು ದೂರ ಹೋಗಿ ನಿಂತಿತು. ರಾಶಿಯ ನಡುವೆ ತೂರಿಕೊಂಡ. ನಂಬರ್ರೇ ನೋಡಲಿಲ್ಲ !
**************
ಅತ್ತಿಂದಿತ್ತ ಶತಪಥ ಹಾಕುತ್ತಿರುವ ಈಕೆಯ ಸಮಸ್ಯೆ ಏನೆಂದು ತಿಳಿಯುತ್ತಿಲ್ಲ. ಅರ್ಧ ಗಂಟೆಯಿಂದ ಆ ಫ್ಲಾಟ್‌ಫಾರ್ಮ್‌ನಲ್ಲಿ ನಾಲ್ಕೈದು ಬಸ್ ಬಂದಿರಬಹುದು. ೧೮, ೧೫, ೩, ೬ ಹೀಗೆ. ಯಾವುದರ ಕಡೆಗೂ ತಲೆ ಎತ್ತಿ ಸಹ ನೋಡಲಿಲ್ಲ. ಪಕ್ಕದಲ್ಲೇ ಇದ್ದ ಟಿಸಿ ಬಳಿ ಹೋಗಿ ತಮ್ಮೂರಿನ ಬಸ್ ನಂಬ್ರವನ್ನೂ ಕೇಳಲಿಲ್ಲ. ಸುಮ್ಮನೆ ಮುಖ ಗಂಟಿಕ್ಕಿಕೊಂಡು ಚಡಪಡಿಸುತ್ತಿದ್ದಾಳೆ. ಮುಂಗಾರು ಮಳೆ ಸುರಿಯುವ ಕ್ಷಣದಲ್ಲೂ ಅವಳ ಮುಖ ಕೆಂಪಗೆ. ಇಷ್ಟೊತ್ತಿಗಾಗಲೇ ಅವನು ಬರಬೇಕಿತ್ತು.
ಈಗ ಬಂದ ಬಸ್ ಕಂಡು ಕೊಂಚ ಉಲ್ಲಸಿತಳಾದಳು. ಇಳಿಯುವವರನ್ನೇ ಸ್ಕ್ಯಾನ್ ಮಾಡತೊಡಗಿದಳು. ಹೆಗಲ ಮೇಲೆ ಪಾಟೀಚೀಲ ಹಾಕಿಕೊಂಡ ಜೀವ ನೋಡಿ "ಬಾರೇ, ಎಷ್ಟ್ಹೊತ್ತು ? ಮಳೆ ಶುರು ಆಗೋದರೊಳಗೆ ಮನೆ ಸೇರ‍್ಕೊಳ್ಳೋಣ’ ಎಂದವಳೇ ಕೈ ಹಿಡಿದು ನಡೆಯತೊಡಗಿದಳು. ಅಷ್ಟರಲ್ಲೇ ಮುಗಿಲು ಕಟ್ಟಿ ಮಳೆ ಹನಿಯಾಗಿ ಉದುರಿಯೇ ಬಿಡಬೇಕೇ ?
***********
ಇವರಿಗೆ ಬಿಡಿ ಯಾವ ಆತಂಕವೂ ಇಲ್ಲ. ಬಂದವನೇ ಬಸ್ಸನ್ನು ಲಂಗರು ಹಾಕಿದ. ಒಮ್ಮೆ ದೀರ್ಘ ನಿಟ್ಟುಸಿರುಬಿಟ್ಟು ಕೆಳಗಿಳಿದು, ಸಹೋದ್ಯೋಗಿಗಳ ಕುಶಲ ಸಮಾಚಾರ ವಿಚಾರಿಸಿ ಮತ್ತೆ ಏರಿ ಕುಳಿತ. ಇಂಜಿನ್ ಸ್ಟಾರ್ಟ್ ಮಾಡಲೇಕೋ ಮನಸ್ಸಿಲ್ಲ. ಆಗಲೇ ಜನರೆಲ್ಲಾ ಹತ್ತಿ ಹತ್ತು ನಿಮಿಷಗಳಾಗಿವೆ. ಎಲ್ಲರ ಮುಖದಲ್ಲೂ ಧಾವಂತ. ಆಗತಾನೇ ಬಂದ ಮತ್ತೊಬ್ಬ ಎಲ್ಲರೂ ಇಳಿಯುವ ಸ್ಥಳವನ್ನು ಕೇಳತೊಡಗಿದ. ಹಣ ನೀಡಿ ಟಿಕೇಟನ್ನೂ ಕೊಟ್ಟ. ಆದರೂ ಬಸ್ಸು ಹೊರಡಲಿಲ್ಲ. ಸಿಟ್ಟು ಬಂದವನೊಬ್ಬ "ಏನಪ್ಪಾ, ಎಷ್ಟೂ ಹೊತ್ತಂತ ನಿಲ್ಲಿಸ್ತೀಯಾ, ಬಸ್ಸಿಗೂ ಬೇಸರವಾಗೋದಿಲ್ವೇ?’ ಎಂದ. ಅದೇ ಹೊತ್ತಿಗೆ ಆರಂಭವಾದ ಉಳಿದವರ ಗುಣುಗುಣು ಆತನ ಮಾತಿಗೆ ಮೊಹರು ಒತ್ತಿದಂತಿತ್ತು. ಡ್ರೈವರ್‌ಗೂ ನಿಜವೆನಿಸಿತು. ಇಂಜಿನ್ ಸ್ಟಾರ್ಟ್ ಆಯಿತು. ಬಸ್ಸು ಮುಂದಕ್ಕೆ ಚಲಿಸಿತು.
****************
ನಿಲ್ದಾಣದೊಳಗಿನ ಹೋಟೆಲ್‌ನೊಳಗೆ ಮಾಣಿಯೊಬ್ಬ ಕುಳಿತಿದ್ದ. ಗಲ್ಲ ಪೆಟ್ಟಿಗೆಯ ಮಹಾಶಯ ಕೊಟ್ಟ ಟಿಕೇಟಿಗೆಲ್ಲಾ ಈತನಿಗೆ ತಿಂಡಿ ಕೊಡುವುದೊಂದೇ ಕೆಲಸ. ದೋಸೆಭಟ್ಟ, ಕಾಫಿಭಟ್ಟ, ತಿಂಡಿ ಭಟ್ಟ, ಪ್ಲೇಟು ತೊಳೆಯುವ ಮಕ್ಕಳೆಲ್ಲರೂ ಇವನೊಬ್ಬನನ್ನು ಸುಧಾರಿಸಿದರೆ ಸಾಕು. ಆದರೆ ಇವನೋ ಊರಿಗೆ ಬಂದವರನ್ನೆಲ್ಲಾ ಸುಧಾರಿಸಬೇಕು. ದೋಸೆ ತಣ್ಣಗಾದದ್ದಕ್ಕೆ ಕಾರಣ ಹೇಳಬೇಕು. ಕಾಫಿ ಸ್ಟ್ರಾಂಗ್ ಆಗಿದ್ದಕ್ಕೆ ವಿವರಣೆ ನೀಡಿ ಸಾಗಹಾಕಬೇಕು. ಎಲ್ಲ ಸದ್ದಿಲ್ಲದೇ ನಡೆಯುವಾಗ ಒಂದು ಅನೌನ್ಸ್‌ಮೆಂಟ್ "ಕಳೆದು ಹೋದ ಇಂಥವರೊಬ್ಬರು ಸಿಕ್ಕಿದ್ದಾರೆ. ಇವರ ಪೈಕಿ ಯಾರಾದರೂ ಇದ್ದರೆ ಕಂಟ್ರೋಲ್‌ರೂಂಗೆ ಬನ್ನಿ’. ಆಗತಾನೇ ಬಿಸಿ ಮಸಾಲೆ ದೋಸೆಗೆ ಆರ‍್ಡರ್‌ಕೊಟ್ಟವ "ಇನ್ನೊಂದು ಹಾಕಿ, ಬರ‍್ತೀನಿ’ ಎಂದವನೇ ಅತ್ತಲೇ ಹೋದ. ಇನ್ನೂ ಬಂದಿಲ್ಲ. ಮಾಣಿಗೆ ದೋಸೆ ಹೇಳಿ ಕಳೆದುಹೋದವರನ್ನು ಹುಡುಕುತ್ತಿದ್ದಾನೆ !
- ಅರವಿಂದ ನಾವಡ

0 comments:

Post a Comment