ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಧರ್ಮದ ಸಂರಕ್ಷಣೆ ಸಂಘಟನೆಯ ಗುರಿಯಾಗಿರಬೇಕು. ಧರ್ಮದ ಚೌಕಟ್ಟು ಮೀರದೆ ಶಿಸ್ತು ಸಂಯಮದಿಂದ ಯುವಶಕ್ತಿ ಸಮಾಜವನ್ನು ಸಂರಕ್ಷಿಸಬೇಕು. ಸಂಘಟನೆಯ ಶಕ್ತಿ ಸರಕಾರಕ್ಕೆ ಅರಿವಾಗಿ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ಬರಬೇಕು ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ನುಡಿದರು.ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 'ಬೃಹತ್ ಹಿಂದು ಯುವ ಸಂಗಮ' ಸಭಾಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ದೇಶದ ಸುಭಿಕ್ಷೆ ಎಲ್ಲರ ಮಂತ್ರವಾಗಬೇಕು, ನಮ್ಮ ಸುತ್ತಮತ್ತಲು ಆಗುವ ವಿವಿಧ ರೀತಿಯ ಹಾನಿ ವಿರುದ್ಧ ಎಚ್ಚರಗೊಳ್ಳಬೇಕು ಎಂದರು. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಹಿಂದೂ ಸಮಾಜವನ್ನು ತುಳಿಯಲು ಆಸ್ಪದ ನೀಡಬಾರದು. ಮಾಜಿ ಪ್ರಧಾನಿ ಗೋಹತ್ಯೆಯನ್ನು ಬೆಂಬಲಿಸುವುದು ಸರಿಯಲ್ಲ. ಕೋಮು ಸೌಹಾರ್ದ ವೇದಿಕೆ ಕೋಮು ಭಾವನೆಯನ್ನು ಕೆರಳಿಸುವುದು ಖಂಡನೀಯ ಎಂದರು.

ವಿಟ್ಲದ ಉದ್ಯಮಿ ರಾಧಾಕೃಷ್ಣ ನಾಯಕ್ ಅಧ್ಯಕ್ಷತೆ ವಹಿಸಿದರು. ಚಿಕ್ಕಮಗಳೂರು ಕೊಪ್ಪ ನ್ಯಾಯವಾದಿ ಸುಧೀರ್ ಕುಮಾರ್ ಮುರುಳ್ಳಿ ದಿಕ್ಸೂಚಿ ಭಾಷಣ ಮಾಡಿ ಬಜರಂಗದಳದವರು ಯಾವುದೇ ಕಾರ್ಯಗಳನ್ನು ಮಾಡಿದಾಗ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಪುಂಗಿ ಊದುವ ವಿಚಾರವಾದಿಗಳು ಪತ್ರಿಕಾ ಕಚೇರಿ ಮೇಲೆ ದಾಳಿ ಮಾಡಿದಾಗ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮೌನವಾದದ್ದು ಯಾಕೆ ? ಹಿಂದುತ್ವ ಎಂದರೆ ದೇಶದ ಉಸಿರು, ಮಾನ, ಬಿಂಬ, ಪ್ರತಿಬಿಂಬ ಎಂದು ವ್ಯಾಖ್ಯಾನಿಸಿದರು.

ಮುಖ್ಯ ಅತಿಥಿಗಳಾಗಿ ವಿಶ್ವ ಹಿಂದೂ ಪರಿಷತ್ ವಿಭಾಗ ಅಧ್ಯಕ್ಷರ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿ ಬಜರಂಗದಳ ರಾಷ್ಟ್ರದ ಮೌಲ್ಯಗಳಿಗೆ ಧಕ್ಕೆಯಾದಾಗ ಸೆಟೆದು ನಿಲ್ಲಬೇಕೆಂದರು. ಬಜರಂಗದಳ ನಿಕಟಪೂರ್ವ ಸಂಚಾಲಕ ಮಹೇಂದ್ರ ಕುಮಾರ್ ಮಾತನಾಡಿ ಹಿಂದೂ ಸಮಾಜ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು. ವಿಶೇಷ ಅಭ್ಯಾಗತರಾಗಿ ಪುತ್ತೂರು ವಿಹಿಂಪದ ಅಧ್ಯಕ್ಷ ಧನ್ಯ ಕುಮಾರ್, ಬಜರಂಗದಳದ ಮಂಗಳೂರು ವಿಭಾಗ ಸಂಚಾಲಕ ಶರಣ್ ಪಂಪ್ವೆಲ್, ವಿಭಾಗ ಸಹ ಸಂಚಾಲಕ ಮುರಳಿಕೃಷ್ಣ ಹಸಂತ್ತಡ್ಕ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಎಚ್.ಜಗನ್ನಾಥ ಸಾಲ್ಯಾನ್, ಬಜರಂಗದಳ ವಿಟ್ಲ ಪ್ರಖಂಡದ ಸಂಚಾಲಕ ಕೆ.ಕೃಷ್ಣಯ್ಯ ವಿಟ್ಲ, ಪುತ್ತೂರು ಜಿಲ್ಲಾ ವಿಹಿಂಪ ಉಪಾಧ್ಯಕ್ಷ ನಾರಾಯಣ ಶೆಟ್ಟಿ ಕೋಡಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ದಯಾನಂದ ಉಜಿರೆಮಾರ್ ಪ್ರಸ್ತಾವನೆಗೈದರು. ತಾ.ಪಂ.ಸದಸ್ಯ ರಾಮದಾಸ ಶೆಣೈ ನಿರೂಪಿಸಿದರು. ಸಿ.ಎಚ್.ಜಯಂತ ವಿಟ್ಲ, ನಟೇಶ್ ವಿಟ್ಲ, ಸಹಕರಿಸಿದರು. ಕಾರ್ಯದರ್ಶಿ ಅರುಣ ವಿಟ್ಲ ವಂದಿಸಿದರು. ಆರಂಭದಲ್ಲಿ ಸಿಡಿಮದ್ದು, ಚೆಂಡೆ, ನಾಸಿಕ್ ಬ್ಯಾಂಡ್, ಗೊಂಬೆ ನೃತ್ಯ, ಯಕ್ಷಗಾನ ವೇಷ, ಭಜನಾ ತಂಡಗಳು ಮತ್ತು ಬಜರಂಗದಳದ ಅಸಂಖ್ಯ ಸೇನಾನಿಗಳು ಪಾಲ್ಗೊಂಡ ಶೋಭಾಯತ್ರೆ ವಿಟ್ಲ ಜೈನ ಬಸದಿಯಿಂದ ಹೊರಟು ಶಾಲಾ ವಠಾರಕ್ಕೆ ಆಗಮಿಸಿತು.
ವರದಿ: ಜ್ಯೋತಿಪ್ರಕಾಶ್ ಪುಣಚಾ

0 comments:

Post a Comment