ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರು: ಹರೀಶ್ ಕೆ.ಆದೂರ್ ಅವರು 2009ರ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಮೇ 26, 2009ರ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಮಳೆ ಬಿದ್ದ ಮೇಲೆ ಹೊರಜಗತ್ತಿಗಿವರು ಅಜ್ಞಾತ ವರದಿಗೆ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 21 ಆದಿತ್ಯವಾರ ಪತ್ರಿಕಾ ಭವನದಲ್ಲಿ ನಡೆಯಲಿದೆ .ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಕಾರ್ಯದರ್ಶಿ ಜಯರಾಮರಾಜೆ ಅರಸ್(ಭಾ.ಆ.ಸೇ) ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿ ಮೊತ್ತ ರೂ.5001/- , ಪ್ರಶಸ್ತಿ ಪತ್ರ, ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗುರುವಪ್ಪ ಎನ್,ಟಿ,ಬಾಳೇಪುಣಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹರೀಶ್ ಕೆ.ಆದೂರು ಕಳೆದ 13ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಪತ್ರಿಕೆಗಳಿಗೆ ಹವ್ಯಾಸಿ ಬರಹಗಾರರಾಗಿದ್ದ ಹರೀಶ್ ತಮ್ಮ ದೈನಿಕ ಪತ್ರಿಕಾ ವೃತ್ತಿಯನ್ನು ಹೊಸದಿಗಂತ ಕನ್ನಡ ದೈನಿಕದಿಂದ ಪ್ರಾರಂಭಿಸಿದರು.ನಂತರ ಉಷಾಕಿರಣ, ಸಂಯುಕ್ತ ಕರ್ನಾಟಕ, ವಾರಪತ್ರಿಕೆಗಳಾದ ಜೈಕನ್ನಡಮ್ಮ , ಲೋಕಾಯುಕ್ತ ದರ್ಶನಗಳಲ್ಲಿ ಸೇವೆಸಲ್ಲಿಸಿದ್ದಾರೆ. ಪ್ರಸ್ತುತ ಮೂಡಬಿದಿರೆಯ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಪ್ರವರ್ತಿತ ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ. ಜೊತೆಗೆ ಈ ಕನಸು.ಕಾಂ ಎಂಬ ಮಂಗಳೂರಿನ ಮೊದಲ ಕನ್ನಡ ಅಂತರ್ಜಾಲ ಪತ್ರಿಕೆಯ ಸಂಪಾದಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕಾರಂತಜ್ಜನಿಗೊಂದು ಪತ್ರ ಎಂಬ ಕಲಾತ್ಮಕ ಸಿನೆಮಾದಲ್ಲಿ ನಟನೆ, 26 ಸಾಕ್ಷ್ಯಚಿತ್ರಗಳ ನಿರ್ದೇಶನ, ಸಾಹಿತ್ಯ ರಚನೆ, 2 ಸ್ವಂತ ಕೃತಿಗಳು, ಸಹಸ್ರಾರು ಲೇಖನಗಳ ಮೂಲಕ ಜನಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
1300ಕ್ಕೂ ಅಧಿಕ ವಿವಿಧ ಪತ್ರಿಕೆಗಳ ಸಂಗ್ರಹ, ಲೇಖನಿಗಳ ಸಂಗ್ರಹ ಇವರಲ್ಲಿದೆ. ಇವರು ನಿರ್ದೇಶಿಸಿದ `ಬದುಕು' ಕಿರುಚಿತ್ರಕ್ಕೆ 6ನೇ ಕರ್ನಾಟಕ ಮಿನಿ ಚಲನಚಿತ್ರೋತ್ಸವದ ಗೌರವ ಪ್ರಶಸ್ತಿಯೂ ಸಂದಿದೆ.

(ಪ್ರಶಸ್ತಿ ವಿಜೇತ ವರದಿ)
ಮಳೆಬಿದ್ದರೆ ಹೊರಜಗತ್ತಿಗಿವರು ಅಜ್ಞಾತ
ವಿಶೇಷ ವರದಿ
ಹರೀಶ್ ಕೆ.ಆದೂರು
ಮಲೆಗಳಲ್ಲಿ ವಾಸಿಸುತ್ತಾ ಕಾಡುತ್ಪತ್ತಿ, ಒಂದಷ್ಟು ಕೃಷಿಚಟುವಟಿಕೆ ನಡೆಸುತ್ತಾ ಜೀವನ ಸಾಗಿಸುತ್ತಿರುವ ಮಲೆಕುಡಿಯರ ಬದುಕೇ ಒಂದು ಸೋಜಿಗ.ಮಲೆಕುಡಿಯ ಜನಾಂಗದ ನೈಜ ಚಿತ್ರಣ ವೀಕ್ಷಿಸಲು ಹೋದರೆ ಅಲ್ಲೊಂದು ಅಚ್ಚರಿ ಅದ್ಭುತ ಕಾಣುತ್ತದೆ. ಶಿಕ್ಷಣ ವಂಚಿತ ಈ ಮಲೆಕುಡಿಯ ಜನಾಂಗ ಶ್ರಮ ಜೀವಿಗಳು.ಮತ್ತು ಅಷ್ಟೇ ಸ್ವಾವಲಂಬಿಗಳು ಎಂಬುದು ಗಮನಾರ್ಹಅಂಶ.

ಹಚ್ಚ ಹಸಿರ ಕಾನನದ ನೈಜ ಸೌಂದರ್ಯದೊಂದಿಗೇ ಬೆಳೆದು ಬಂದ ಮಲೆಕುಡಿಯರ ಬದುಕೊಂದು ರೋಚಕ. ಅಷ್ಟೇ ಸಾಹಸವೂ. ಕಾಡಿನ ಸಣ್ಣ ಗಿಡದ ಬಗ್ಗೆಯೂ ಇವರಿಗೆಲ್ಲಾ ಅಪಾರ ಕಾಳಜಿ. ಈ ಗಿಡ ಮರಗಳೊಂದಿಗೆ, ವನ್ಯ ಪ್ರಾಣಿಗಳೊಂದಿಗೆ, ನಿಸರ್ಗದ ಸಣ್ಣ ಪುಟ್ಟ ಜೀವಿಗಳೊಂದಿಗೆ ಸಂಬಂಧವನ್ನು ಬೆಳೆಸಿಕೊಂಡು ತನ್ಮೂಲಕ ತಮ್ಮ ಬದುಕನ್ನು ಹಂಚಿಕೊಂಡವರು ಮಲೆಕುಡಿಯ ಜನಾಂಗದವರು. ದಟ್ಟಡವಿಯೊಳಗಿಂದ ಬರುವ ಒಂದೊಂದು ಧ್ವನಿಯನ್ನು ನಿಖರವಾಗಿ ಗುರುತಿಸುವ ತಾಕತ್ತುಳ್ಳ ಜನಾಂಗ ಇವರದ್ದು. ಅಷ್ಟರ ಮಟ್ಟಿಗೆ ಅಡವಿ ಅವರಿಗೆ ಪರಿಚಿತ! ಹೀಗಾಗಿಯೇ ಮಲೆ ಕುಡಿಯ ಜನಾಂಗದವರು ಕಾಡನ್ನು ನಂಬಿದ್ದಾರೆ. ಕಾಡೊಳಗೇ ಇದ್ದು ತಮ್ಮ ಸುಂದರ ಬದುಕನ್ನು ರೂಪಿಸಿಕೊಂಡಿದ್ದಾರೆ.ಇದು ಕಾಡೊಳಗಿರುವ ಮಲೆ ಕುಡಿಯ ಜನಾಂಗದ ಒಂದು ಸಣ್ಣ ಚಿತ್ರಣ. ಇವರ ಜೀವನ ಶೈಲಿ, ಕುಟುಂಬ ವ್ಯವಸ್ಥೆಯನ್ನರಿಯವ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನ ನಾವೂರು ನಿಂದ ಏಳು ಕಿಲೋಮೀಟರ್ ದೂರದ ಮಲೆಕುಡಿಯ ವಾಳ್ಯಕ್ಕೊಂದು ಭೇಟಿ ನೀಡಿದೆ. 24 ಕುಟುಂಬಗಳುಳ್ಳ ಈ ಮಲೆಕುಡಿಯರ ವಾಳ್ಯದ ದರ್ಶನವೇ ಒಂದು ರೋಚಕ ಅನುಭವ.

ಈ ವಾಳ್ಯದ ಜನತೆಗೆ ಮಳೆಗಾಲದಲ್ಲಿ ಹೊರಗಿನ ಸಂಪರ್ಕ ಮಾತ್ರ ಕನಸಿನ ಮಾತು. ಯಾಕೆಂದರೆ ಬೇಸಗೆಯಲ್ಲೇ ದುರ್ಗಮ ಹಾದಿಯಲ್ಲಿ ಸಾಗುವ ಹರಸಾಹಸ. ಮಳೆ ಬಂತೆಂದರೆ ಕಾಡಿನಲ್ಲಿ ಸಂಚರಿಸುವುದೇ ಒಂದು ದುಸಾಹಸದ ಕಾರ್ಯ. ಮೊದಲೇ ದುರ್ಗಮ ಹಾದಿ. ಕಾಡ ಮಧ್ಯೆ ಮಳೆಗಾಲದ ನೀರ ಹರಿವಿನೊಂದಿಗೆ ಸಾಹಸ ಮಾಡುತ್ತಾ ಪಟ್ಟಣ ಸೇರಲು ಅಸಾಧ್ಯ ಸ್ಥಿತಿ. ಜಿಗಣೆಗಳ ಕಾಟ ಬೇರೆ. ಅಂತೂ ಮಲೆಕುಡಿಯ ಜನಾಂಗಕ್ಕೆ ವರ್ಷಋತುವಿನ ನಾಲ್ಕೈದು ತಿಂಗಳ ಕಾಲ ಅಜ್ಞಾತ ವಾಸದ ಸ್ಥಿತಿ. ಅಷ್ಟೇ ಏಕೆ ಕಾಡು ಮೃಗಗಳ ಭಯ, ಕಾಳಿಂಗ, ಉರಗಗಳಿಗೇನೂ ಇಲ್ಲಿ ಕಡಿಮೆಯಲ್ಲ !.
ಇದು ಪಶ್ಚಿಮ ಘಟ್ಟದ ತಪ್ಪಲ ಪ್ರದೇಶ. ಇಲ್ಲೆಲ್ಲಾ ಮರಗಳು ಎತ್ತರೆತ್ತರಕ್ಕೆ ಬೆಳೆದು ದಟ್ಟವಾಗಿಯೇ ಇವೆ. ಕಾಡ ಪ್ರಯಾಣದ ನಡು ನಡುವೆ ಜಿಂಕೆ , ಕಾಡು ಪ್ರಾಣಿಗಳ `ದರ್ಶನ' ಭಾಗ್ಯವೂ ದೊರಕುತ್ತದೆ. ನಿಬಿಢವಾಗಿ ಬೆಳೆದು ನಿಂತ ವೃಕ್ಷ ವೈವಿಧ್ಯಗಳ ನಡುವೆ ಸಾಗುವುದೇ ಒಂದು ಸುಂದರ ಅನುಭವ.
ಹೇಗೆ ಸಾಗಬೇಕು: ಇದು ಬೆಳ್ತಂಗಡಿ ಪಟ್ಟಣದಿಂದ ಉಜಿರೆ ಮಾರ್ಗವಾಗಿ ಸಾಗುವ ಲಾಯಿಲದಿಂದ ಎಡಕ್ಕೆ ತಿರುಗಿ ಕಿಲ್ಲೂರು ರಸ್ತೆಯಲ್ಲಿ ಸಾಗಬೇಕು. ಹಾಗೆ ಸಾಗಿದಾಗ ಸಿಗುವ ನಾವುರದಿಂದ ಸುಮಾರು 7 ಕಿ.ಮೀ. ದೂರ ಕಡಿದಾದ ದುರ್ಗಮ ರಸ್ತೆಯಲ್ಲಿ ಕ್ರಮಿಸಿದಾಗ `ಮಲ್ಲ' ಎಂಬ ಪ್ರದೇಶ ಸಿಗುತ್ತದೆ.
ಈ ಪ್ರದೇಶದ ಸುತ್ತ ಮುತ್ತೆಲ್ಲಾ ಒಂದು 24 ಕುಟುಂಬಗಳಿವೆ. ಈ ಪೈಕಿ ಒಂದು ಸಪಲಿಗ ಕುಟುಂಬ. ಉಳಿದಂತೆ 23 ಮಲೆಕುಡಿಯರ ಮನೆಗಳು. ಇವರೆಲ್ಲರೂ ಸ್ವಾವಲಂಬಿಗಳು.
ಇಲ್ಲಿ ಮೂಲಭೂತ ವ್ಯವಸ್ಥೆಯದ್ದೇ ಪ್ರಮುಖ ಸಮಸ್ಯೆ. ಸರಕಾರದಿಂದ ಸೂಕ್ತ ಸೌಲಭ್ಯ ಇವರಿಗ್ಯಾರಿಗೂ ದೊರಕುತ್ತಿಲ್ಲ. ಸೂಕ್ತ ಆಸ್ಪತ್ರೆಯ ಸೌಲಭ್ಯವಿಲ್ಲ. ಏನಾದರೂ ಆರೋಗ್ಯ ಸಂಬಂಧೀ ತೊಂದರೆಗಳಾದಲ್ಲಿ 7ಕಿ.ಮೀ ದುರ್ಗಮ ರಸ್ತೆಯಲ್ಲಿ ನಡೆದುಕೊಂಡೇ ಹೋಗಬೇಕಾದ ಸ್ಥಿತಿ. ಶಿಕ್ಷಣ ಪಡೆಯಬೇಕೆಂದಾದರೆ ಮತ್ತೆ ಅದೇ ಸ್ಥಿತಿ. ಇಷ್ಟೆಲ್ಲಾ ತೊಂದರೆಗಳಿದ್ದರೂ ಇವರು ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಂಡಿದ್ದಾರೆ. ಅದು ಮೆಚ್ಚತಕ್ಕಂತಹ ವಿಚಾರ.
ಸ್ವಾವಲಂಬೀ ಬದುಕು
ಈ ಮಲೆಕುಡಿಯರದ್ದು .ಸ್ವಾವಲಂಬೀ ಬದುಕು. ನಿಜವಾಗಿ ನೋಡಿದರೆ `ಇವರು ಅನುಸರಣೀಯರು' ಎಂದರೆ ತಪ್ಪಾಗಲಾರದು. ಕಾರಣ ಇಷ್ಟೇ. ಇವರ ಮನೆಗೆ ಬರುವ ಹಾದಿಯನ್ನು ಇವರೇ ನಿರ್ಮಿಸಿದ್ದಾರೆ.ಪರಿಸರವನ್ನು ಸ್ವಚ್ಛವಾಗಿಟ್ಟಿದ್ದಾರೆ. ನಾಟಿ ಮಾಡುತ್ತಾರೆ. ತಮ್ಮ ಅನ್ನಕ್ಕೆ ಬೇಕಾದ ವ್ಯವಸ್ಥೆಯನ್ನು ತಾವೇ ರೂಪಸಿಕೊಂಡಿದ್ದಾರೆ. ಯಾವ ಪಕ್ಷ ಆಡಳಿತಕ್ಕೆ ಬರಲಿ ಬಿಡಲಿ ಇವರೇನೂ ಕ್ಯಾರೇ ಮಾಡುತ್ತಿಲ್ಲ. ಅಂದಹಾಗೆ ಮತದಾನದ ಹಕ್ಕನ್ನು ನಿಷ್ಠಾವಂತರಾಗಿ ಚಲಾಯಿಸುತ್ತಿದ್ದಾರೆ. ಇಷ್ಟಕ್ಕೂ ಈಗ ಬಂದು ಹೋದ ಸರಕಾರಗಳೇನೂ ಇವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿಕೊಟ್ಟಿಲ್ಲ. ಇಲ್ಲಿರುವ ಜನವಸತಿಗೆ ಅನುಕೂಲಕ್ಕೆ ಬೇಕಾದಂತಹ ಆರೋಗ್ಯ ಕೇಂದ್ರಗಳೂ ಇಲ್ಲ. ವಿದ್ಯುತ್ ಚಕ್ತಿ ಮಂಡಳಿಯ ಒಂದೇ ಒಂದು ಸಣ್ಣ ತಂತಿಯೂ ಈ ವಾಳ್ಯಕ್ಕೆ ಬಂದಿಲ್ಲ. ದೂರವಾಣಿ ವಯರುಗಳನ್ನು ಇವರ್ಯಾರೂ ನೋಡಲೇ ಇಲ್ಲ. ಆದರೂ ಇವರು ತಮಗೆ ಬೇಕಾದ ಅನುಕೂಲಗಳನ್ನು ತಾವು ಚೊಕ್ಕವಾಗಿ ರೂಪಿಸಿಕೊಂಡಿದ್ದಾರೆ!

ಒಟ್ಟು ಮನೆಗಳು: 24
ಜನಸಂಖ್ಯೆ: 120
ವಿದ್ಯಾರ್ಹತೆ: ವಿರಳ
ವೃತ್ತಿ: ಕೃಷಿ
ಮೂಲಭೂತ ವ್ಯವಸ್ಥೆ: ಕೊರತೆ.


`ಸುಂದರ' ಬದುಕು
ಇವರು ಮಲೆಕುಡಿಯ ಜನಾಗಂದ ಓರ್ವ ಸದಸ್ಯರು. ಇವರಿರುವ ಜಾಗ `ಮಲ್ಲ'. ಸಾಕಷ್ಟು ಕೃಷಿ ಭೂಮಿಯಿದೆ. ಗಿರಿಯಪ್ಪ ಎಂಬವರ ಪುತ್ರ. ಶ್ರಮ ಜೀವಿ. ಶಿಕ್ಷಣ ಅಷ್ಟಕ್ಕಷ್ಟೇ. ಸಾಮಾನ್ಯ ಜ್ಞಾನ ಹೊಂದಿದ್ದಾರೆ. ಇವರ ಸಾಧನೆ ಇಲ್ಲೊಂದು `ವಿದ್ಯುತ್ ಉತ್ಪಾದನಾ ಘಟಕದ ಸ್ಥಾಪನೆ'. ಇದು ಎರಡು ಕುಟುಂಬಗಳಿಗೆ ಸೀಮಿತ. ತಾನದಡಿ ಎಂಬಲ್ಲಿ ಕಾನನದಿಂದ ಹರಿದು ಬರುವ ನೀರನ್ನು ದೊಡ್ಡ ಒಂದು ಕೆರೆಯಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಅಲ್ಲಿಂದ ಕೆಳಭಾಗದಲ್ಲಿ ಸುಮಾರು ಒಂದು ಕಿ.ಮೀ ದೂರದಲ್ಲಿರುವ ಇವರ ತೋಟದ ಮಧ್ಯೆ ಒಂದು ಪುಟ್ಟ ಜನರೇಟರ್ ಅಳವಡಿಸಿದ್ದಾರೆ. ಫೈಬರ್ ಪೈಪ್ ಮೂಲಕ ನೀರನ್ನು ಹರಿಸಿ, ಜನರೇಟರ್ ತಿರುಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ನೀರಿನ ಹರಿವಿನ ನಿಯಂತ್ರಣಕ್ಕೆ ಗೇಟ್ ವಾಲ್ವ್ ವ್ಯವಸ್ಥೆ. ಇದನ್ನು ತಿರುಗಿಸಿ ನೀರು ಹರಿವಿಕೆಗೆ ಅನುವು ಮಾಡಿದ್ದೇ ಆದಲ್ಲಿ ವಿದ್ಯುತ್ ಪ್ರವಾಹ ಪ್ರಾರಂಭ. 230 ಕಿ.ವ್ಯಾ. ವಿದ್ಯುತ್ ಚಕ್ತಿ ಉತ್ಪಾದನೆಯಾಗುತ್ತದೆ. ಇದಕ್ಕೆ ತಗಲಿದ ವೆಚ್ಚ 1.20ಲಕ್ಷ. ಈ ಪೈಕಿ 60 ಸಾವಿರ ರುಪಾಯಿಗಳ ಸಬ್ಸಿಡಿಯನ್ನು ಸರಕಾರದಿಂದ ಪಡೆದುಕೊಂಡಿದ್ದಾರೆ. ಇವರ ಮನೆ ಇದೀಗ ಬೆಟ್ಟದ ನೀರಿನಿಂದ ಬೆಳಗಿದೆ!ಬೆಳಗುತ್ತಿದೆ. ಡಿ.ಟಿ.ಎಚ್. ವ್ಯವಸ್ಥೆಯನ್ನಳವಡಿಸಿಕೊಂಡಿದ್ದಾರೆ. ಮೊಬೈಲ್ ದೂರವಾಣಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಅಚ್ಚುಕಟ್ಟಾದ ಜೀವನ ನಿರ್ವಹಿಸುತ್ತಿದ್ದಾರೆ. ಗದ್ದೆ,ಅಡಿಕೆ,ತೆಂಗು ತೋಟ, ರಬ್ಬರ್ ಮೊದಲಾದ ಮಿಶ್ರ ಬೆಳೆಯೊಂದಿಗೆ ಜೀವನ ನಿರ್ವಹಣೆ. ಸುಂದರ ಬದುಕು!

6 comments:

ashraf manzarabad said...

ಪ್ರತಿಷ್ಠಿತ ಪ.ಗೋ . ಪ್ರಶಸ್ತಿ ವಿಜೇತರಾದ ಹರೀಶ್.ಕೆ. ಆದೂರು ರವರಿಗೆ ಹಾರ್ದಿಕ ಅಭಿನಂದನೆಗಳು.

- Ashraf manzarabad. saudi arabia.

Padyana Ramachandra said...

ಅಭಿನಂದನೆಗಳು

-ಪ.ರಾಮಚಂದ್ರ
ರಾಸ್ ಲಫ್ಫಾನ್, ಕತಾರ್

Anonymous said...

saadhaneya haadiyali yashassu kaanuttiruva harish nimagido abhinandane...

let us have some more opportunities to congratulate your achievements....

ಎಚ್. ಆನಂದರಾಮ ಶಾಸ್ತ್ರೀ said...

ಅರ್ಹ ಯುವಕನಿಗೆ ಸಂದ ಸ್ಫೂರ್ತಿದಾಯಕ ಗೌರವ.
ಅಭಿನಂದನೆ ಹರೀಶ್.

Anonymous said...

congrats... wishing higher success in your life...

Anonymous said...

ಅಭಿನಂದನೆಗಳು ನಿನ್ನ ಸಾಧನೆಗೆ. ಸಾಧನೆ ಎಲ್ಲರಿಗೂ ಒಲಿಯುದಿಲ್ಲ...ನಿನಗೆ ಒಲಿದಿದೆ....ಇನ್ನಷ್ಟು ಸಾಧಿಸು...ಜನ ನಿನ್ನೊಂದಿಗಿರ್ತಾರೆ...ಬೇರೆ ಯಾರು ಇರದಿದ್ರೂ....

Post a Comment