ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ಸಂಸತ್ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಶೇ. ೩೩ರಷ್ಟು ಸ್ಥಾನ ಮೀಸಲು ಪಡೆಯುವ ಮೂಲಕ
ತಾವೀಗ ಅಬಲೆಯರು ಎಂಬುದನ್ನು ಮಹಿಳೆಯರು ಒಪ್ಪಿಕೊಂಡಿದ್ದಾರೆ. ಪುರುಷನ ಸಹಾನುಭೂತಿ
ತನಗೆ ಬೇಕಿಲ್ಲ, ಪುರುಷನಿಗೆ ಸರಿ ಸಮಾನವಾಗಿ ನಿಲ್ಲುವ ತಾಕತ್ತು, ದೃಢತೆ ತನಗಿದೆ
ಎಂದು ಎದೆ ತಟ್ಟಿಕೊಂಡು ಹೇಳುತ್ತಿದ್ದ ಮಹಿಳೆಯ ಮನಸ್ಸಿನ ಅಳುಕು ಹೊರ ಬಿದ್ದಿದೆ.
ರಾಜಕಾರಣ ಮಾಡಲು ಇನ್ನು ಮುಂದೆ ಮಹಿಳೆ ಪುರುಷನ ಜತೆ ಹೊಡೆದಾಡಬೇಕಾಗಿಲ್ಲ. ಮಹಿಳೆಗೀಗ
ಮಹಿಳೆಯೇ ಎದುರಾಳಿ. ಮಹಿಳೆಗೀಗ ಮಹಿಳೆಯೇ ವೈರಿ. ಮಹಿಳೆಯ ವಿರುದ್ಧವೇ ರಾಜಕೀಯ ಬಲೆ
ಹೆಣೆಯಬೇಕಾದ ಅನಿವಾರ್ಯತೆ ಆಕೆಗೆ.ತೊಟ್ಟಿಲು ತೂಗುವ ಕೈ ದೇಶವನ್ನೇ ಆಳೀತು? ಎಂದೀಗ
ನಾವು ಹೆಮ್ಮೆ ಪಡಬೇಕಾಗಿದ್ದಿಲ್ಲ. ಕಾರಣ, ಆಕೆಯೀಗ ಆರಿಸಿ ಬರುವುದು ಮೀಸಲು
ಕ್ಷೇತ್ರದಿಂದ. ಇನ್ನೊಬ್ಬ ಮಹಿಳೆಯ ವಿರುದ್ಧ ಆಕೆ ಸೆಣಸುತ್ತಾಳೆಯೇ ಹೊರತು, ಪುರುಷನ
ಜತೆ ಅಲ್ಲ.
೨೧ನೇ ಶತಮಾನದ ಇಂದಿನ ಆಧುನಿಕ ಯುಗದಲ್ಲೂ ಮಹಿಳೆಗೆ ಮೀಸಲು ಬೇಕಿತ್ತಾ? ತನ್ನ
ಸಾಮರ್ಥ್ಯದ ಮೇಲೆ ಆಕೆ ನಂಬಿಕೆ ಕಳೆದುಕೊಳ್ಳುತ್ತಿದ್ದಾಳೆಯೇ?. ಎಲ್ಲಾ ರಂಗಗಳಲ್ಲೂ
ಪುರುಷರನ್ನು ಮೀರಿಸುವ ಮಟ್ಟದಲ್ಲಿ ಸಾಧನೆ ಮಾಡುತ್ತಿರುವಾಕೆ, ಪುರುಷನ ಹಕ್ಕನ್ನೂ
ಕಸಿದುಕೊಳ್ಳಲು ಮುಂದಾಗುತ್ತಿದ್ದಾಳೆಯೇ?. ಮಹಿಳೆ ತ್ಯಾಗಮಯಿ, ಕ್ಷಮೆಯಾಧರಿತ್ರಿ
ಎನ್ನುವ ಮಾತುಗಳಿನ್ನು ಅರ್ಥ ಕಳೆದುಕೊಂಡಾವೇ? ಎನ್ನುವ ಪ್ರಶ್ನೆಗಳು ಏಳುವುದು ಸಹಜ.
ದೇಶದ ಅರ್ಧದಷ್ಟು ಜನಸಂಖ್ಯೆ ಹೊಂದಿರುವ, ಪ್ರತಿ ಮನೆಯನ್ನೂ ಬೆಳಗುವ ಮಹಿಳೆಗೆ ಸಮಾಜದ
ಎಲ್ಲಾ ಕ್ಷೇತ್ರಗಳಲ್ಲೂ ಸರಿ ಸಮಾನವಾದ ಸ್ಥಾನಮಾನ ಸಿಗಬೇಕು ಎಂಬ ಕೂಗಿಗೆ ಅರ್ಥವಿದೆ.
ಪ್ರತಿಭಾವಂತ ಮಹಿಳೆಯರಿಗೆ ಸೂಕ್ತ ಸ್ಥಾನಮಾನ, ಸಮಾನ ಅವಕಾಶ ಸಿಗಲೇ ಬೇಕು
ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಿದೆ. ಸಮಾಜದಲ್ಲಿ ಮೇಲೆ ಬರಲು ಆಕೆಗೆ ಪ್ರೋತ್ಸಾಹ
ಬೇಕೇ ಬೇಕು ಎನ್ನುವುದು ಸಹಜ. ಪುರುಷನ ಅಣತಿಗೆ ಕಾಯದೆ, ಸ್ವಂತ ಕಾಲ ಮೇಲೆ ನಿಲ್ಲಲು
ಆಕೆಗೆ ಪೂರಕ ವಾತಾವರಣ ನಿರ್ಮಾಣವಾಗಬೇಕು ಎನ್ನುವ ಹಂಬಲ ಸ್ವೀಕಾರಾರ್ಹವೇ. ಆದರೆ, ಆ
ಹಕ್ಕನ್ನು ಆಕೆ ಮೀಸಲು ಮೂಲಕವೇ ಪಡೆಯಬೇಕಿತ್ತೇ?. ಇದು ಆಕೆಯ ಸ್ವಾಭಿಮಾನಕ್ಕೆ ಧಕ್ಕೆ
ತಂದಂತೆ ಆಗಲಿಲ್ಲವೇ?.

ಭ್ರಷ್ಠಾಚಾರದಲ್ಲಿ ಮಹಿಳೆಯರೇನೂ ಕಡಿಮೆಯಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ, ಬಿಹಾರದ ಮಾಜಿ ಮುಖ್ಯಮಂತ್ರಿ
ರಾಬ್ಡಿದೇವಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಈಗಾಗಲೇ ಇದನ್ನು ಸಾಬೀತು
ಪಡಿಸಿದ್ದಾರೆ. ಹಾಗಾಗಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್, ಇಲ್ಲವೇ
ವಿಧಾನಸಭೆ ಪ್ರವೇಶಿಸಿದಾಕ್ಷಣ ಆಡಳಿತ ಯಂತ್ರ ಶುದ್ಧವಾಗುತ್ತದೆ ಎಂಬುದಾಗಲಿ, ನಮ್ಮ
ಆಡಳಿತ ವ್ಯವಸ್ಥೆ ಚುರುಕಾಗುತ್ತದೆ ಎಂಬ ಭ್ರಮೆಯನ್ನಾಗಲಿ, ಅರ್ಥಗರ್ಭಿತ ಚರ್ಚೆ
ನಡೆಯುತ್ತದೆ ಎಂಬ ಆಶಯವನ್ನಾಗಲಿ ನಾವು ಹೊಂದುವುದರಲ್ಲಿ ಅರ್ಥವಿಲ್ಲ. ಪ್ರಜಾತಂತ್ರ
ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಹಕ್ಕಿರಬೇಕು. ಹಾಗಾಗಿ, ಮೀಸಲು ಆಧಾರದ ಮೇಲೆ
ಕೆಲವರು ಆರಿಸಿ ಬರುತ್ತಾರೆಂದಾದರೆ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಂಡಂತೆಯೇ
ಸರಿ.
ಈಗಾಗಲೇ ಕೆಲವು ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲು
ಕಲ್ಪಿಸಲಾಗಿದೆ. ಇದು ಕೆಲವೆಡೆ ಗೊಂದಲದ ಸನ್ನಿವೇಶವನ್ನು ಸೃಷ್ಠಿಸಿದೆ. ಮಹಿಳೆಯರ
ಹೆಸರಿನಲ್ಲಿ ಅಲ್ಲಿ ಅಕಾರ ಚಲಾಯಿಸುವವರು ಅವರ ಗಂಡಂದಿರು. ಜನಸಾಮಾನ್ಯರು ಕೆಲಸ
ಮಾಡಿಸಿಕೊಳ್ಳಬೇಕಿದ್ದರೆ, ಗಂಡ-ಹೆಂಡತಿ ಇಬ್ಬರನ್ನೂ ಓಲೈಸಬೇಕಾದ ಅನಿವಾರ್‍ಯತೆ.
ಹಾಗಾಗಿ, ಪ್ರತಿ ಪುರುಷನ ಸಾಧನೆಯ ಹಿಂದೆ ಮಹಿಳೆಯ ಪಾತ್ರವಿರುತ್ತದೆ ಎಂಬ ನಾಣ್ಣುಡಿ
ಹೋಗಿ ಮಹಿಳೆಯ ಆಡಳಿತದ ಹಿಂದೆ ಪುರುಷನ ಕೈವಾಡವಿರುತ್ತದೆ ಎಂಬ ಮಾತು ಚಾಲ್ತಿಗೆ
ಬರುತ್ತಿದೆ.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲು ಕಲ್ಪಿಸಿದ ಮೇಲೆ ಗ್ರಾಮಗಳು
ಸುಧಾರಿಸಬೇಕಿತ್ತು. ಅಭಿವೃದ್ಧಿ ಹೊಂದಬೇಕಿತ್ತು. ಗ್ರಾಮೀಣ ಭಾಗದಲ್ಲಿನ ಅದೆಷ್ಟೋ ಬಡ
ಮಹಿಳೆಯರ ಬದುಕು ಸುಧಾರಿಸಬೇಕಿತ್ತು. ತುಳಿತಕ್ಕೊಳಗಾಗುತ್ತಿರುವ ಮಹಿಳೆಯರ ಜೀವನ
ಸುಧಾರಣೆಗೆ ಕಾರ್‍ಯಕ್ರಮಗಳು ರೂಪಿತವಾಗಬೇಕಿತ್ತು. ಗ್ರಾಮಸಭೆಗಳಲ್ಲಿ ಮಹಿಳೆಯರ
ಕುರಿತಾದ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ, ಹಾಗಾಗಿಲ್ಲ. ಬದಲಿಗೆ
ರಾಜಕೀಯ ದ್ವೇಷ, ಕಚ್ಚಾಟ, ಮನೆ-ಮನೆ ಬಾಗಿಲು ತಲುಪಿದೆ. ಅದೆಷ್ಟೋ ಕುಟುಂಬಗಳ ಸಾಮರಸ್ಯ
ಕೆಡಿಸಿವೆ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಿತ್ತೂರು ಚೆನ್ನಮ್ಮನ ಕಿಚ್ಚಿನ ಕಥೆ ಕೇಳಿದಾಗ ನಮ
ಹೃದಯದಲ್ಲೂ ದೇಶಪ್ರೇಮದ ಕಿಚ್ಚು ಉಕ್ಕುತ್ತದೆ. ತ್ರಿವೇಣಿ ಅವರ ಕಾದಂಬರಿ ಓದಿದಾಗ
ನಮಗೂ ಸಾಹಿತ್ಯದ ಮೇಲೆ ಪ್ರೇಮ ಹುಟ್ಟುತ್ತದೆ. ಇಂದಿರಾಗಾಂಯವರನ್ನು ನೆನಪಿಸಿಕೊಂಡಾಗ
ನಾವೂ ನಾಯಕರಾಗಿ ಬೆಳೆಯಬೇಕು ಎನಿಸುತ್ತದೆ. ಅದೇ ರೀತಿ ಲತಾ ಮಂಗೇಷ್ಕರ್ ಹಾಡು, ಸೈನಾ
ನೆಹವಾಲ್ ಆಟ, ಕಿರಣ್ ಬೇಡಿಯ ಹೋರಾಟ, ಕಿರಣ್ ಮಜುಂದಾರ್ ಷಾರ ಸಾಧನೆ ನಮಗೆ
ಆದರ್ಶಪ್ರಾಯವಾಗುವುದು ಶ್ರಮಪಟ್ಟು, ಸ್ವ-ಸಾಮರ್ಥ್ಯದಿಂದ ಅವರು ಮೇಲೆ ಬಂದ ರೀತಿಯಿಂದ.
ಪ್ರತಿಯೊಂದು ಕ್ಷೇತ್ರದಲ್ಲಿ ಇಂದು ಮಹಿಳೆಯರು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಇದು
ಸಾಧ್ಯವಾಗಿದ್ದು ಅವರಲ್ಲಿನ ಪ್ರತಿಭೆಯಿಂದ, ಸ್ವ-ಸಾಮರ್ಥ್ಯದಿಂದ. ಮೀಸಲು ಪಡೆದು
ಇವರೆಲ್ಲಾ ಈ ಸಾಧನೆ ಮಾಡಿದ್ದರೆ ನಮಗವರು ಆದರ್ಶರಾಗುತ್ತಿದ್ದರೇ?.
ಇಂದಿನ ಸಂಸತ್, ರಾಜ್ಯ ವಿಧಾನಸಭೆಗಳಲ್ಲಿ ಪ್ರಜಾತಂತ್ರ ರೂಪವೇ ನಶಿಸುತ್ತಿದೆ. ಜಾತಿ,
ಧರ್ಮಗಳ ಹೆಸರಲ್ಲಿ ಅದು ಹಂಚಿಹೋಗಿದೆ. ಮೀಸಲಾತಿ ಮೂಲಕ ಆರಿಸಿ ಬರುವವರ ಸಂಖ್ಯೆಯೇ
ಹೆಚ್ಚಿದೆ. ಚುನಾವಣೆಗೆ ಟಿಕೆಟ್ ನೀಡಿಕೆಯಿಂದಲೇ ಶುರುವಾಗುತ್ತದೆ ಜಾತಿ, ಧರ್ಮ,
ಲಿಂಗಗಳ ಪ್ರಸ್ತಾವ. ಹೀಗೆಯೇ ಪ್ರತಿ ಗುಂಪಿಗೂ ಮೀಸಲು ಕಲ್ಪಿಸುತ್ತಾ ಹೋದರೆ ಮುಂದೊಂದು
ದಿನ ಪ್ರತಿಭೆ ಮೇಲೆ ಸಂಸತ್‌ಗೆ, ವಿಧಾನಸಭೆಗಳಿಗೆ ಆರಿಸಿ ಬರುವವರೇ ಇಲ್ಲವಾಗಬಹುದು.
ಪ್ರಜಾತಂತ್ರ ವ್ಯವಸ್ಥೆಗೆ ಅದು ಮಾರಕವೇ ಸರಿ. ಸಂವಿಧಾನದ ೧೪ನೇ ಪರಿಚ್ಛೇದದ ಪ್ರಕಾರ
ವ್ಯಕ್ತಿಯೊಬ್ಬನನ್ನು ಲಿಂಗ, ಜಾತಿ, ಧರ್ಮಗಳ ಆಧಾರದ ಮೇಲೆ ವಿಂಗಡಿಸುವುದು, ತಾರತಮ್ಯ
ತೋರುವುದು ಅಪರಾಧ. ಅದು ಕಾನೂನು ಬಾಹೀರ. ಹಾಗಾಗಿ, ಮೀಸಲು ಸಂವಿಧಾನದ ಮೂಲ ಆಶಯಕ್ಕೇ
ವಿರುದ್ಧ.
ಅತ್ತ ಶ್ರೀಮಂತ, ಪ್ರತಿಷ್ಠಿತ, ಚಾಲಾಕಿ ಮಹಿಳೆಯರು ಸಂಸತ್ ಭವನದಲ್ಲಿ
ರಾರಾಜಿಸುತ್ತಿದ್ದರೆ, ಇತ್ತ ಗ್ರಾಮೀಣ ಭಾಗದಲ್ಲಿ, ಕೊಳಚೆ ಪ್ರದೇಶಗಳಲ್ಲಿ ವಯಸ್ಸು
ಐದಾಗುತ್ತಿದ್ದಂತೆ ಒಪ್ಪತ್ತಿನ ಕೂಳಿಗಾಗಿ ಕೂಲಿಗೆ ತೆರಳುವ ಬಾಲೆಯ ದಯನೀಯ ಸ್ಥಿತಿ
ಹಾಗೆಯೇ ಮುಂದುವರಿದರೆ ಅದಕ್ಕೆ ಏನನ್ನೋಣ?. ಹಾಗಾಗಿ, ಮೀಸಲಿನ ಬದಲಿಗೆ ದೇಶದ
ಪ್ರತಿಯೊಬ್ಬ ಹೆಣ್ಣು ಮಗುವಿಗೂ ಶಿಕ್ಷಣ, ಉತ್ತಮ ಆರೋಗ್ಯ, ಮೂಲಭೂತ ಅವಶ್ಯಕತೆ ದೊರಕುವ
ರೀತಿಯಲ್ಲಿ ಕಾರ್‍ಯಕ್ರಮ ರೂಪಿಸುವುದು ಒಳ್ಳೆಯದಿತ್ತು. ಈ ಬಗ್ಗೆ ಜನಜಾಗೃತಿ ಮೂಡಿಸುವ
ಅವಶ್ಯಕತೆಯಿತ್ತು. ಈ ವಿಧೇಯಕ ಅಂಗೀಕಾರದಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ
ಕುಟುಂಬದ ಮಹಿಳಾ ಸದಸ್ಯರಿಗೆ ಅದೆಷ್ಟರ ಮಟ್ಟಿಗೆ ಪ್ರಯೋಜನ ದೊರಕೀತು ಎನ್ನುವುದನ್ನು
ಕಾಲವೇ ಹೇಳಬೇಕಿದೆ. ಆಶಯವೇನೆ ಇರಲಿ, ಮೀಸಲಿನಿಂದಾಗಿ ಸಂಸತ್ ಹಾಗೂ ರಾಜ್ಯ
ವಿಧಾನಸಭೆಗಳಿಗೆ ಇನ್ನು ಮುಂದೆ ಹೆಚ್ಚು ರಂಗು ಬರುವುದಂತೂ ಗ್ಯಾರಂಟಿ.

- ಮಹಾಬಲೇಶ್ವರ ಹೊನ್ನೆಮಡಿಕೆ

0 comments:

Post a Comment