ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ


ಬಳ್ಳಾರಿ: ಏಡ್ಸ್/ಹೆಚ್.ಐ.ವಿ. ಇದೊಂದು ಲೈಂಗಿಕ ಸಂಬಂಧಿ ರೋಗ. ನೆನಪಿಡಿ. ಈ ರೋಗ ಸಾಂಕ್ರಾಮಿಕವಲ್ಲ. ಈ ರೋಗಕ್ಕೆ ಯಾವುದೇ ರೀತಿಯ ಔಷಧಿಯಿಲ್ಲ. ಅಸುರಕ್ಷಿತ ಲೈಂಗಿಕ ಸಂಪರ್ಕ, ಪರೀಕ್ಷೆಗೊಳಪಡಿಸದೆ ರಕ್ತ ಪಡೆಯುವುದು, ಶುದ್ಧೀಕರಿಸದಿರುವ ಸಿರಿಂಜ್ ಬಳಕೆ ಮತ್ತಿತರ ಕಾರಣಗಳಿಂದ ಈ ರೋಗ ತಗಲುವ ಸಾಧ್ಯತೆಯಿರುತ್ತದೆ. ಏಡ್ಸ್ ನ ಲಕ್ಷಣಗಳು, ರೋಗ ಹರಡುವ ಬಗೆ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮ, ಪತ್ತೆ ಹಚ್ಚುವ ರೀತಿ, ಏಡ್ಸ್ ಸೋಂಕಿತರನ್ನು ಹೇಗೆ ಪ್ರೀತಿ-ವಿಶ್ವಾಸದಿಂದ ಕಾಣಬೇಕೆನ್ನುವ ಕುರಿತು ಪರಿಣಾಮಕಾರಿ ಮಾಹಿತಿಯನ್ನು ರೆಡ್ ರಿಬ್ಬನ್ ಎಕ್ಸ್ಪ್ರೆಸ್ ರೈಲು ದೆಹಲಿಯಿಂದ ಬಳ್ಳಾರಿ ಜಿಲ್ಲೆಗೆ ಆಗಮಿಸಿತ್ತು. ಜಿಲ್ಲೆಯು ರಾಜ್ಯದಲ್ಲಿ ಅತಿ ಹೆಚ್ಚು ಹೆಚ್ಐವಿ ಸೋಂಕಿತರನ್ನೊಳಗೊಂಡಿದೆ. ಈ ನಿಟ್ಟಿನಲ್ಲಿ ಏಡ್ಸ್ ನಿಯಂತ್ರಣ ಹಾಗೂ ನಿರ್ಮೂಲನೆ ಕುರಿತು ಜನ-ಜಾಗೃತಿ ಮೂಡಿಸಲು ಬಳ್ಳಾರಿಗೆ ಆಗಮಿಸಿದ್ದ ರೆಡ್ ರಿಬ್ಬನ್ ಎಕ್ಸ್ಪ್ರೆಸ್ ಬಳ್ಳಾರಿಯ ರೈಲು ನಿಲ್ದಾಣದಲ್ಲಿ ಫೆ. 9 ಹಾಗು 10ರಂದು ಎರಡು ದಿನಗಳ ಕಾಲ ತಂಗಿತ್ತು.

ಸರಕಾರ , ಸರಕಾರೇತರ ಸಂಸ್ಥೆಗಳು ಹಲವಾರು ರೂಪದಲ್ಲಿ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿವೆ. ರಾಷ್ಟ್ರದ ಎಲ್ಲ ರಾಜ್ಯ ಸರಕಾರಗಳಷ್ಟೇ ಅಲ್ಲದೆ ಕೇಂದ್ರ ಸರಕಾರವೂ ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸುತ್ತಿದೆ. ಅದಕ್ಕೆ ನಿದರ್ಶನವೇ ರಾಜೀವ ಗಾಂಧಿ ಪ್ರತಿಷ್ಠಾನದ ರೆಡ್ ರಿಬ್ಬನ್ ಎಕ್ಸ್ಪ್ರೆಸ್. ಈ ರೈಲು ರಾಷ್ಟ್ರಾದ್ಯಂತ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಏಡ್ಸ್ ಕುರಿತು ಜನರಲ್ಲಿ ಅದರಲ್ಲೂ ಅನಕ್ಷರಸ್ಥರಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ಮಹತ್ವದ ಮಾಹಿತಿ ಒದಗಿಸಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಇವುಗಳ ಸಂಯುಕ್ತಾಶ್ರಯದಲ್ಲಿ ಈ ರೆಡ್ ರಿಬ್ಬನ್ ಎಕ್ಸ್ಪ್ರೆಸ್ ಅಭಿಯಾನವನ್ನು ಆಯೋಜಿಸಲಾಗಿತ್ತು.
ಏನೇನಿದೆ...
ರೆಡ್ ರಿಬ್ಬನ್ ಎಕ್ಸ್ಪ್ರೆಸ್ ಕಾರ್ಯಕ್ರಮಕ್ಕೆ ಫೆ.9ರಂದು ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ಧನ ರೆಡ್ಡಿ ಅವರು ಚಾಲನೆ ನೀಡಿದರು. ಅಂದು ಬಳ್ಳಾರಿ ರೈಲ್ವೇ ನಿಲ್ದಾಣದಲ್ಲಿ ಕಿಕ್ಕಿರಿದ ಜನಸ್ತೋಮ. 15ರ ಹರೆಯದವರಿಂದ ಹಿಡಿದು ವಯೋವೃದ್ಧರೂ ಸಹ ಈ ಕಾರ್ಯಕ್ರಮದ ಪ್ರಯೋಜನ ಪಡೆದರು. ರೆಡ್ ರಿಬ್ಬನ್ ಎಕ್ಸ್ಪ್ರೆಸ್ನ ರೈಲಿನ ಮೊದಲಿನ 4 ಬೋಗಿಗಳಲ್ಲಿ ಏಡ್ಸ್ ಮಾತ್ರವಲ್ಲದೆ ಹಂದಿಜ್ವರ, ಟಿ.ಬಿ., ಸ್ವಚ್ಛತೆ, ಮತ್ತಿತರ ಆರೋಗ್ಯ ಸೇವೆಗಳನ್ನು ಕುರಿತು ವಸ್ತುಪ್ರದರ್ಶನ; ಬೋಗಿ 5ರಲ್ಲಿ ತರಬೇತಿ ಕಾರ್ಯಕ್ರಮ; ಬೋಗಿ 6ರಲ್ಲಿ ಆಪ್ತ ಸಮಾಲೋಚನೆ ಹಾಗೂ ಹೆಚ್.ಐ.ವಿ. ಪರೀಕ್ಷೆ ಏರ್ಪಡಿಸಲಾಗಿತ್ತು. ಅಲ್ಲದೆ ರೈಲು ನಿಲ್ದಾಣದ ಹೊರಗಡೆ ಹೆಚ್ಐವಿ ಕುರಿತು ಕಂಸಾಳೆ ಮತ್ತು ಜಾನಪದ ನೃತ್ಯ, ರೈಲಿನ ಹೊರಗಡೆ ಏಡ್ಸ್ ಕುರಿತ ಮಾಹಿತಿ ಫಲಕಗಳ ಹಾಗೂ ಎಲ್.ಸಿ.ಡಿ. ಪರದೆಯಲ್ಲಿ ಏಡ್ಸ್ ನಿಯಂತ್ರಣ ಕುರಿತ ಸಾಕ್ಷ್ಯ ಚಿತ್ರಗಳ ಪ್ರದರ್ಶನ ಜನ ಮೆಚ್ಚುಗೆ ಗಳಿಸಿತು.
ಉಚಿತ ಕಾಯಿನ್ ಬೂತ್ ದೂರವಾಣಿ ಮೂಲಕ ಹೆಚ್ಐವಿ ಕುರಿತು ಧ್ವನಿಮುದ್ರಿತ ಸಂದೇಶವನ್ನು ತಿಳಿಸುವ ಬಗೆ ವಿಶೇಷವಾಗಿತ್ತು.


ರೆಡ್ ರಿಬ್ಬನ್ ಎಕ್ಸ್ಪ್ರೆಸ್ ಅಭಿಯಾನದ ಪ್ರಯೋಜನವನ್ನು ಜನಪತ್ರಿನಿಧಿಗಳು, ಸಾಹಿತಿಗಳು, ಕಲಾವಿದರು, ಕ್ರೀಡಾಪಟುಗಳು, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು, ಯುವಕ/ಯುವತಿ ಮಂಡಳಗಳು, ಆರೋಗ್ಯ ಕಾರ್ಯಕರ್ತರು, ಸ್ವ-ಸಹಾಯ ಗುಂಪುಗಳು, ಗ್ರಾಮೀಣ ಪ್ರದೇಶದವರು, ಅಂಗನವಾಡಿ ಕಾರ್ಯಕರ್ತರು, ಎಲ್ಲ ಇಲಾಖೆಯ ಅಧಿಕಾರಿ-ಸಿಬ್ಬಂದಿ ವರ್ಗದವರು, ಹೀಗೆ ಸಾವಿರಾರು ಜನರು ಪಡೆದುಕೊಂಡಿದ್ದು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ರೈಲಿನಲ್ಲಿ ಏರ್ಪಡಿಸಿದ್ದ ವಸ್ತುಪ್ರದರ್ಶನದಲ್ಲಿ ಮೊದಲನೇ ದಿನ ಸುಮಾರು 5263(ಗಂಡು-3676, ಹೆಣ್ಣು-1587), ಎರಡನೇ ದಿನ 7821(ಗಂ-5460, ಹೆ-2361) ಜನ ಪಾಲ್ಗೊಂಡಿದ್ದು, ಒಟ್ಟು 13084 ಜನ ಏಡ್ಸ್ ಕುರಿತು ಮಾಹಿತಿ ಪಡೆದಿದ್ದಾರೆ. ಏಡ್ಸ್ ನಿಯಂತ್ರಣ ಕುರಿತು ಎರಡು ದಿನ ತರಬೇತಿ ನೀಡಲಾಗಿದ್ದು, ಒಟ್ಟು 803 ಜನ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.

ಅಭಿಯಾನದ ಅಂಗವಾಗಿ ಏಡ್ಸ್ ಕುರಿತು ಎರಡೂ ದಿನಗಳಲ್ಲಿ ರೈಲಿನಲ್ಲಿ ಆಯೋಜಿಸಿದ್ದ ಆಪ್ತ ಸಮಾಲೋಚನೆಯಲ್ಲಿ 295 ಮಂದಿ ಭಾಗವಹಿಸಿದ್ದಾರೆ. ರಕ್ತ ಪರೀಕ್ಷೆಯ ಮೂಲಕ ಮಾತ್ರ ಹೆಚ್.ಐ.ವಿ. ಸೋಂಕಿರನ್ನು ಪತ್ತೆ ಹಚ್ಚಲು ಸಾಧ್ಯ. ಈ ನಿಟ್ಟಿನಲ್ಲಿ ಒಟ್ಟು 288 ಜನ ಹೆಚ್.ಐ.ವಿ. ಪರೀಕ್ಷೆಗೊಳಗಾಗಿದ್ದು, ಈ ಪೈಕಿ 250 ಪುರುಷರು ಹಾಗೂ 38 ಮಹಿಳೆಯರಿದ್ದಾರೆ. ಇದರಿಂದ ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರಲ್ಲಿ ಏಡ್ಸ್ ಸೋಂಕು ಇರುವುದು ದೃಢಪಟ್ಟಿದೆ. ಅಲ್ಲದೆ 8 ಜನ ಲೈಂಗಿಕ ಸಂಪರ್ಕ ಸೋಂಕಿಗೆ ಉಚಿತ ಚಿಕಿತ್ಸೆ ಪಡೆದಿದ್ದಾರೆ.
ಬಸ್ ಜಾಥಾ


ಬಳ್ಳಾರಿಯ ಸುತ್ತಮುತ್ತಲಿನ ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ 2 ಬಸ್ ಗಳಿಂದ ಜಾಥಾ ಏರ್ಪಡಿಸಲಾಗಿತ್ತು. ಬಳ್ಳಾರಿಯ ಸಂಗನಕಲ್ಲು, ಬೈರದೇವನಹಳ್ಳಿ, ಮೋಕ, ಯರ್ರಗುಡಿ, ಎಂ. ಗೋನಾಳ, ಕಾರೆಕಲ್ಲು, ಕೆ. ವೀರಾಪುರ, ಕೋಳೂರು, ಕುರುಗೋಡು, ಸಿದ್ಧಮ್ಮನಹಳ್ಳಿ, ಕುಡತಿನಿ, ತೋರಣಗಲ್ಲು, ಜಿಂದಾಲ್, ತಾರಾನಗರ ಗ್ರಾಮಗಳಲ್ಲಿ ಈ ಬಸ್ಸುಗಳು ಸಂಚರಿಸಿ ಏಡ್ಸ್ ಸೋಂಕನ್ನು ತಡೆಗಟ್ಟುವ ಕುರಿತು ಏರ್ಪಡಿಸಿದ್ದ ವಸ್ತುಪ್ರದರ್ಶನ ಹಾಗೂ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 5000ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದ ಜನರು ಭಾಗವಹಿಸಿದ್ದರು.
92 ಮಂದಿ ಹೆಚ್ಐವಿ ಪರೀಕ್ಷೆಗೊಳಗಾಗಿದ್ದು, ಕೋಳೂರು ಗ್ರಾಮದ ಒಬ್ಬರಲ್ಲಿ ಮಾತ್ರ ಈ ಸೋಂಕಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

0 comments:

Post a Comment