ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆರೋಗ್ಯ
ಕ್ಷಯ ರೋಗ ಎಲ್ಲಿದ್ದರೂ ಎಲ್ಲೆಡೆ ಇದ್ದಂತೆ. ಭಾರತ ದೇಶದಲ್ಲಿ ಪ್ರತಿ ಒಂದೂವರೆ ನಿಮಿಷಕ್ಕೆ ಒಬ್ಬರು ಕ್ಷಯರೋಗದಿಂದ ಸಾವನ್ನಪ್ಪುತ್ತಿದ್ದು, ಕಫದಲ್ಲಿ ಕ್ಷಯರೋಗ ಕ್ರಿಮಿಗಳನ್ನು ಹೊಂದಿರುವ ರೋಗಿಗೆ ಸೂಕ್ತ ಸಮಯದಲ್ಲಿ ಕ್ಷಯರೋಗ ಪತ್ತೆ ಹಚ್ಚಿ ಚಿಕೆತ್ಸೆ ನೀಡದಿದ್ದಲ್ಲಿ ಆ ರೋಗಿಯು ಒಂದು ವರ್ಷದಲ್ಲಿ 10 ರಿಂದ 15 ಆರೋಗ್ಯವಂತರಿಗೆ ರೋಗವನ್ನು ಹರಡುತ್ತಾನೆ. ರೋಗ ಕಂಡ ತಕ್ಷಣ ನೇರ ನಿಗಾವಣಾ ಅಲ್ಪಾವಧಿ ಚಿಕಿತ್ಸೆ ನೀಡುವುದರಿಂದ ಕ್ಷಯರೋಗವನ್ನು ಹೆಚ್ಚು ಪರಿಣಾಮಕಾರಿಯಾಗಿ ಗುಣಪಡಿಸಬಹುದು. ಮಾರ್ಚ್ 24ರಂದು ವಿಶ್ವದಾದ್ಯಂತ ಕ್ಷಯರೋಗ ತಡೆ ದಿನಾಚರಣೆ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕ್ಷಯರೋಗ ಹಾಗೂ ಅದರ ಚಿಕಿತ್ಸಾ ವಿಧಾನದ ಬಗ್ಗೆ ಕಿರು ಪರಿಚಯ ಮಾಡಿಕೊಳ್ಳುವ ಪ್ರಯತ್ನವೇ ಈ ಲೇಖನ.
ಕ್ಷಯರೋಗ ಹರಡುವ ಬಗೆ:
ಕ್ಷಯ ರೋಗವು ಮೈಕೋ ಬ್ಯಾಕ್ಟೀರಿಯಂ ಟ್ಯುಬರ್ಕುಲೈ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ. ಶ್ವಾಸಕೋಶದಲ್ಲಿ ಕ್ಷಯರೋಗ ಕ್ರಿಮಿಯುಳ್ಳ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಲಕ್ಷಾಂತರ ಕ್ರಿಮಿಗಳು ಬಿಡುಗಡೆಯಾಗುವ ತುಂತುರುಗಳಿಂದ ಗಾಳಿಯ ಮೂಲಕ ಅರೋಗ್ಯವಂತನ ಶ್ವಾಸಕೋಶಕ್ಕೆ ಸೇರಿ ಕ್ಷಯರೋಗ ಹರಡುತ್ತದೆ. ಶ್ವಾಸ ಕೋಶದ ಕ್ಷಯ ಒಬ್ಬರಿಂದ ಒಬ್ಬರಿಗೆ ಹರಡುವಂತಹುದು. ಹೆಚ್.ಐ.ವಿ. ಸೋಂಕಿರುವ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದರಿಂದ ಆ ವ್ಯಕ್ತಿಗಳು ಕ್ಷಯರೋಗದ ಸೋಂಕಿಗೆ ಬಹು ಬೇಗನೆ ತುತ್ತಾಗುತ್ತಾರೆ. ಕ್ಷಯರೋಗವು ಶ್ವಾಸಕೋಶವಲ್ಲದೆ ದೇಹದ ಬೇರೆ ಅಂಗಾಂಗಗಳಲ್ಲಿ ಕಾಣಿಸಿಕೊಳ್ಳಬಹುದು. ಇಂತಹ ರೋಗಿಗಳು ಮತ್ತೊಬ್ಬರಿಗೆ ಕ್ಷಯರೋಗವನ್ನು ಹರಡುವುದಿಲ್ಲ. ಈ ರೋಗದಲ್ಲಿ ಮೂಳೆ ಮತ್ತು ಕೀಲುಗಳ ಕ್ಷಯ, ಕರುಳು ಕ್ಷಯ, ಪುರುಷ ಮತ್ತು ಸ್ತ್ರೀ ಅಂಡಾಶಯ ಹಾಗೂ ಜನನೇಂದ್ರಿಯಗಳ ಕ್ಷಯ, ಮೂತ್ರ ಪಿಂಡ ಮತ್ತು ಮೂತ್ರ ಕೋಶ ಕ್ಷಯ, ಮೆದುಳು ಮತ್ತು ಮೆದುಳು ಪೊರೆ ಹಾಗೂ ಚರ್ಮರೋಗಗಳ ಕ್ಷಯವೆಂಬ ವಿಧಗಳಿವೆ.

ಲಕ್ಷಣಗಳು:
ಸತತವಾಗಿ ಎರಡು ವಾರಗಳಿಗಿಂತ ಹೆಚ್ಚಿನ ಅವಧಿವರೆಗಿನ ಕೆಮ್ಮು, ಜ್ವರ ಅದರಲ್ಲೂ ಸಂಜೆಯ ವೇಳೆ ಹೆಚ್ಚಾಗಿರುವುದು, ಎದೆಯಲ್ಲಿ ನೋವು, ತೂಕ ಕಡಿಮೆಯಾಗುವುದು, ಹಸಿವೆಯಾಗದಿರುವುದು, ಕಫದಲ್ಲಿ ರಕ್ತ ಬೀಳುವುದು, ಕುತ್ತಿಗೆ, ಕಂಕಳು ಹಾಗೂ ತೊಡೆ ಸಂದುಗಳಲ್ಲಿ ಗಂಟು ಕಾಣಿಸಿಕೊಳ್ಳುವುದು ರೋಗದ ಪ್ರಮುಖ ಲಕ್ಷಣಗಳಾಗಿವೆ. ಕ್ಷಯ ರೋಗದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದಾಗಿದೆ.

ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು:
ಕ್ಷಯ ರೋಗಿಗಳು ಕೆಮ್ಮುವಾಗ ಹಾಗು ಸೀನುವಾಗ ಬಾಯಿ ಮತ್ತು ಮೂಗಿನ ಹತ್ತಿರ ಕರವಸ್ತ್ರವನ್ನು ಇಟ್ಟುಕೊಳ್ಳಬೇಕು ಹಾಗೂ ರೋಗಿಯು ಮನಬಂದ ಕಡೆ ಉಗಿಯಬಾರದು. ಕಫವನ್ನು ಡಬ್ಬಿಯಲ್ಲಿ ಶೇಖರಿಸಿ ಗಟ್ಟಿಯಾಗಿ ಮುಚ್ಚಿ ಸುಟ್ಟುಹಾಕಬೇಕು ಇಲ್ಲವೇ ಗುಂಡಿ ತೋಡಿ ಮುಚ್ಚಬೇಕು ಹಾಗೂ ನವಜಾತ ಶಿಶುಗಳಿಗೆ ಬಿಸಿಜಿ ಲಸಿಕೆ ಹಾಕಿಸಬೇಕು.

ಡಾಟ್ಸ್ ಚಿಕಿತ್ಸೆ:
ಡಾಟ್ಸ್ ಕೇಂದ್ರದಲ್ಲಿ ಕ್ಷಯರೋಗಕ್ಕೆ ನೇರ ಮೇಲ್ವಿಚಾರಣೆ ಮೂಲಕ ಅಲ್ಪಾವಧಿ ಚಿಕಿತ್ಸೆ ನೀಡಿ ರೋಗವನ್ನು ಹೆಚ್ಚು ಪರಿಣಾಮಕಾರಿಯಾಗಿ ಗುಣಪಡಿಸಲಾಗುವುದು. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ, ಆರೋಗ್ಯ ಉಪಕೇಂದ್ರಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಆಯ್ದ ಖಾಸಗಿ ವೈದ್ಯರು ಹಾಗೂ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಡಾಟ್ಸ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಶಂಕಿತ ಕ್ಷಯರೋಗಿಗಳಿಗೆ ಸರಕಾರ ದ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ ಮತ್ತು ಕಫ ಪರೀಕ್ಷೆ ನಡೆಸಿದ ನಂತರ ಕ್ಷಯವೆಂದು ಖಚಿತವಾದಲ್ಲಿ ಮಾತ್ರ ಡಾಟ್ಸ್ನಲ್ಲಿ ಚಿಕಿತ್ಸೆಗೊಳಪಡಿಸಲಾಗುವುದು. ಕಫದಲ್ಲಿ ಕ್ಷಯ ಕ್ರಿಮಿಯುಳ್ಳ ರೋಗಿಯ ಮನೆಯ ಸಂಪರ್ಕದವರಿಗೂ ಸಹ ಅತ್ಯಾವಶ್ಯವಾಗಿ ಕಫ ಪರೀಕ್ಷೆ ಮಾಡಿಸಬೇಕು. ಅಂಥವರ ಮನೆಯಲ್ಲಿ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದಲ್ಲಿ ಮುಂಜಾಗ್ರತಾ ಕ್ರಮವಾಗಿ 6 ತಿಂಗಳ ಔಷಧಿಯನ್ನು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಪಡೆಯಬಹುದು. ನಿಗದಿಪಡಿಸಿ ಔಷಧಿಯನ್ನು ಪೂರ್ಣ ಅವಧಿ(6 ರಿಂದ 8 ತಿಂಗಳು)ವರೆಗೆ ಮಧ್ಯದಲ್ಲಿ ಬಿಡದೇ ಸೇವಿಸಬೇಕು. ತಪ್ಪಿದಲ್ಲಿ ಅತ್ಯಂತ ತೀವ್ರ ಹಂತದ ರೀತಿಯ ಕ್ಷಯರೋಗ ಉಂಟಾಗುವ ಸಾಧ್ಯತೆಯಿರುತ್ತದೆ. ಯಾವುದೇ ವ್ಯಕ್ತಿ ಸತತವಾಗಿ ಎರಡು ವಾರಗಳ ಮೇಲ್ಪಟ್ಟು ಕೆಮ್ಮುತ್ತಿದ್ದರೆ ಅವರ ಕಫವನ್ನು ತಪ್ಪದೇ 2 ಬಾರಿ ಪರೀಕ್ಷಿಸಿಕೊಳ್ಳತಕ್ಕದ್ದು.

ಬಳ್ಳಾರಿ ಜಿಲ್ಲೆಯಲ್ಲಿ ಜನವರಿ 2009 ರಿಂದ 2010ರ ಫೆಬ್ರುವರಿ ಅಂತ್ಯದವರೆಗೆ 18088 ರೋಗಿಗಳು ಕಫ ಪರೀಕ್ಷೆಗೆ ಒಳಗಾಗಿದ್ದಾರೆ. ಅದೇ ರೀತಿ 3300 ಕ್ಷಯ ರೋಗಿಗಳನ್ನು ಹೊಸದಾಗಿ ಪತ್ತೆ ಹಚ್ಚಲಾಗಿದ್ದು, ಈ ಪೈಕಿ ಕಫದಲ್ಲಿ ಕ್ಷಯರೋಗ ಕ್ರಿಮಿಯುಳ್ಳ 1319 ರೋಗಿಗಳನ್ನು ಗುರುತಿಸಿ ಡಾಟ್ಸ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಹೆಚ್. ನಿಜಾಮುದ್ದೀನ್ ತಿಳಿಸಿದ್ದಾರೆ. ಸಾರ್ವಜನಿಕರು ಕ್ಷಯರೋಗ ನಿಯಂತ್ರಣ ಮಾಡುವಲ್ಲಿ ಸರಕಾರದಿಂದ ಸಿಗುವ ಉಚಿತ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಸಹಕಾರ ನೀಡುವುದು ಅತ್ಯಾವಶ್ಯವಾಗಿದೆ.

ಲೇಖನ: ರೂಪಕಲಾ
ವಾರ್ತಾ ಇಲಾಖೆ, ಬಳ್ಳಾರಿ

0 comments:

Post a Comment