ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಭತ್ತ ಭಾರತದ ಪ್ರಮುಖ ಬೆಳೆ. ದಕ್ಷಿಣ ಭಾರತದಲ್ಲಿ ಅದಕ್ಕೆ ವಿಶೇಷ ಸ್ಥಾನವಿದೆ. ವಿಶ್ವದ ಹಲವು ರಾಷ್ಟ್ರಗಳೂ ಭತ್ತವನ್ನು ಬೆಳೆಯುತ್ತವೆ. ಜಗತ್ತಿನ 44ಮಿಲಿಯನ್ ಹೆಕ್ಟೆರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದ್ದು, 90 ಮಿಲಿಯನ್ ಟನ್ ಭತ್ತ ಉತ್ಪಾದನೆಯಾಗುತ್ತಿದೆ.ಭಾರತದಲ್ಲಿ ಸರಾಸರಿ 2.9 ಟನ್ ಪ್ರತಿ ಹೆಕ್ಟೇರಿಗೆ ಇಳುವರಿಯಾಗುತ್ತಿದೆ. ಆದರೆ ಇತ್ತೀಚೆಗೆ ರಸಾಯನಿಕ ಗೊಬ್ಬರಗಳ ವ್ಯಾಪಕವಾಗಿ ಬಳಕೆಯಿಂದಾಗಿ ಭತ್ತದ ಇಳುವರಿ ಕ್ಷೀಣಿಸುತ್ತಿದೆ. ಇದಕ್ಕೆ ಸಾಕಷ್ಟು ಕಾರಣಗಳಿವೆ.ನಿರಂತರ ಬೇಸಾಯದಿಂದ ಉಂಟಾಗುವ ಮಣ್ಣಿನ ಸವಕಳಿ, ಅವೈಜ್ಞಾನಿಕ ಬೇಸಾಯ ಪದ್ದತಿಗಳು, ಅವಶ್ಯ ಪೋಷಕಾಂಶಗಳಿಲ್ಲದಿರುವುದು ಹಾಗೂ ಸಾವಯವವಲ್ಲದ ಕೃಷಿ ಪದ್ಧತಿ ಮುಖ್ಯ ಕಾರಣ.

ಈ ನಿಟ್ಟಿನಲ್ಲಿ ಭತ್ತ ಬೇಸಾಯದಲ್ಲಿ ಸಿಲಿಕಾನ್ ಎಂಬ ಪೋಷಕಾಂಶದ ಪಾತ್ರ ಬಹುಮುಖ್ಯ. ಇದನ್ನು ಭತ್ತದ ಬೆಳೆಯಲ್ಲಿ ಉಪಯೋಗಿಸಿದರೆ ಇಳುವರಿ ಹೆಚ್ಚಾಗುತ್ತದೆ. ಈಗಾಗಲೇ ಅದನ್ನು ಹಲವಾರು ದೇಶಗಳಲ್ಲಿ ಜಪಾನ್, ತೈವಾನ್, ಚೀನಾ, ಬ್ರೆಜಿಲ್, ಕೋರಿಯಾ, ಕೊಲಂಬಿಯಾ ಹಾಗೂ ಅಮೆರಿಕ ದೇಶಗಳಲ್ಲಿ ಇದನ್ನು ಅಳವಡಿಸಿಕೊಳ್ಳಲಾಗಿದೆ. ನಮ್ಮ ದೇಶದಲ್ಲಿ ಮಾಹಿತಿ ಕೊರತೆಯಿಂದಾಗಿ ರೈತರು ಸಿಲಿಕಾನಿನ ಉಪಯೋಗವನ್ನು ಪಡೆಯುತ್ತಿಲ್ಲ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಗಾಂಧಿ ಕೃಷಿ ಕೇಂದ್ರದ ಮಣ್ಣು ಮತ್ತು ರಾಸಯನಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಎನ್.ಬಿ. ಪ್ರಕಾಶ್ ತಿಳಿಸುತ್ತಾರೆ.

ಭಾರತದಲ್ಲೂ ಈ ಬಗ್ಗೆ ಪ್ರಯೋಗವಾಗುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲವು 2007 ರಿಂದ ಇದುವರೆಗೂ ಶಿವಮೊಗ್ಗ, ಭದ್ರಾವತಿ, ಮಂಗಳೂರು, ಉಡುಪಿ, ಬ್ರಹ್ಮಾವರ, ದಾವಣಗೆರೆ, ಪೊನ್ನಂಪೇಟೆ, ಕತ್ತಲಗೆರೆ ಹಾಗೂ ಮುಂತಾದ ಕಡೆ ಪ್ರಯೋಗಗಳನ್ನು ನಡೆಸಿದ್ದು ಭತ್ತದ ಹುಲ್ಲು ಮತ್ತು ಭತ್ತದ ಕಾಳಿನ ಇಳುವರಿಯಲ್ಲಿ ಹೆಚ್ಚಾಳವಾಗಿರುವುದನ್ನು ದೃಢಪಡಿಸಿದೆ.

ಭತ್ತದ ಬೆಳೆಯಲ್ಲಿ ಸಿಲಿಕಾನ್ ಉಪಯುಕ್ತತತೆಯನ್ನು ರೈತರಿಗೆ ಮನವರಿಕೆ ಮಾಡಿಕೊಡಲು ಇತ್ತೀಚೆಗೆ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯವು ಮೂರು ದಿನಗಳ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಈ ಬಗ್ಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಬಗ್ಗೆ ಮಾಹಿತಿಗೆ ದೂರವಾಣಿ ಮುಖಾಂತರ ಸಂಪರ್ಕಿಸುತ್ತಿದ್ದಾರೆ ಎಂದು ಡಾ ಎನ್. ಬಿ. ಪ್ರಕಾಶ್ ಅವರು ಹೇಳುತ್ತಾರೆ.ಸಿಲಿಕಾನ್ ಎಂದರೇನು? ಮೂಲತ: ಮಣ್ಣಿನಲ್ಲಿರುವ ಒಂದು ಧಾತು.

ಸಿಲಿಕಾನ್ ಕಣಜ: ಬೇರೆ ಯಾವುದೇ ಪೋಷಕಾಂಶಗಳಿಗಿಂತ ಭತ್ತದ ಬೆಳೆಗೆ ಸಿಲಿಕಾನ್ ಅಗತ್ಯವಿದೆ.ಪ್ರತಿ ಹೆಕ್ಟೆರ್ ಜಮೀನಿನಲ್ಲಿ 50ಕ್ವಿಂಟಲ್ ಭತ್ತ ಬೆಳೆದಲ್ಲಿ ಸುಮಾರು 230ರಿಂದ 470 ಕೆಜಿ ಸಿಲಿಕಾನ್ನ್ನು ಮಣ್ಣಿನಿಂದ ಉಪಯೋಗಿಸಿಕೊಳ್ಳಲಾಗುತ್ತಿದೆ.
ಹೀಗೆ ಹೀರಲ್ಪಟ್ಟ ಸಿಲಿಕಾನ್ ಪ್ರಮಾಣವು ಸಾರಜನಕಕ್ಕಿಂತ ಸುಮಾರು ಶೇ.108ಕ್ಕಿಂತಲೂ ಹೆಚ್ಚಾಗಿರುತ್ತದೆ.ಸಿಲಿಕಾನ್ ಗೊಬ್ಬರವನ್ನು ಭತ್ತದ ಬೆಳೆಯಲ್ಲಿ ಉಪಯೋಗಿಸುವುದರಿಂದ ಅಧಿಕ ಇಳುವರಿ ಪಡೆಯಬಹುದು.

ಸಿಲಿಕಾನ್ ಪಾತ್ರ: ಇದು ದ್ಯುತಿ ಸಂಶ್ಲೇಶಣ ಕ್ರಿಯೆ ಹೆಚ್ಚಿಸುತ್ತದೆ.ಎಲೆಗಳ ಮೇಲ್ಪದರಗಳಿಂದ ನೀರು ಆವಿಯಾಗುವುದನ್ನು ತಡೆದು ನೀರಿನ ಉಪಯುಕ್ತತೆಯನ್ನು ಹೆಚ್ಚಿಸುತ್ತದೆ.ಬಿರುಸಾದ ಮಳೆ ಗಾಳಿಗೆ ಗಿಡಗಳು ಬಾಗುವುದನ್ನು ತಡೆಯುವಲ್ಲಿ ಸಿಲಿಕಾನ್ ಯಶ್ವಸಿಯಾಗುತ್ತದೆ.
ತೆನೆಗಳ ಮತ್ತು ಕಾಳುಗಳ ಸಂಖ್ಯೆಯನ್ನು ಹೆಚ್ಚಾಗಿಸಿ, ಕಾಳುಗಳು ಜೊಳ್ಳಾಗುವ ಪ್ರಮಾಣ ವನ್ನು ತಗ್ಗಿಸುತ್ತದೆ.ಭತ್ತದ ಬೆಳೆಯಲ್ಲಿ ಸಿಲಿಕಾನ್ನಿಂದ ರಂಜಕ ಮತ್ತು ಪೊಟೇಶಿಯಂ ಅಂಶಗಳು ಸಮರ್ಪಕವಾಗಿ ದೊರೆಯಲು ಅನುವು ಮಾಡಿಕೊಡುತ್ತದೆ.ಕಾಂಡ ಕೊರಕ ಮತ್ತು ಜಿಗಿ ಹುಳುವನ್ನು ನಿಯಂತ್ರಿಸಲು ಕೀಟ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.ಹುಳಿ ಮಣ್ಣಿನಲ್ಲಿ ಅಲ್ಯೂಮಿನಿಯಂ, ಕಬ್ಬಿಣ ಮತ್ತು ಮ್ಯಾಂಗನಿಸ್ ಅಂಶಗಳ ವಿಷಮತೆಯನ್ನು ಸರಿಪಡಿಸುವಲ್ಲಿ ಸಹಕಾರಿ.
ಸಿಲಿಕಾನ್ ಕಡೆಗಣನೆಗೆ ಕಾರಣಗಳು: ಇದುವರೆಗೆ ಸಿಲಿಕಾನ್ನ್ನು ಸಸ್ಯಗಳ ಬೆಳವಣಿಗೆಯಲ್ಲಿ ಒಂದು ಪ್ರಮುಖ ಮೂಲವಸ್ತುವೆಂಬುದನ್ನು ನಿರ್ಧರಿಸದೇ ಇರುವುದು ಒಂದು ಪ್ರಮುಖ ಕಾರಣ.
ಸಿಲಿಕಾನ್ ಹೇರಳವಾಗಿ ಅಂದರೆ, ಶೇ.28ರಷ್ಟು ಭೂ ಪದರಗಳಲ್ಲಿ ದೊರೆಯುವುದು ಮತ್ತು ಇದರಿಂದ ಮಣ್ಣಿನಲ್ಲಿ ಸಿಲಿಕಾನ್ ಕೊರತೆ ಸಮಸ್ಯೆಯೇನಲ್ಲ ಎಂದು ತಿಳಿದಿರುವುದು.

ಕೊರತೆಗೆ ಮುಖ್ಯ ಕಾರಣಗಳು: ಸಿಲಿಕಾನ್ ಒದಗಿಸದೆ ಭತ್ತವನ್ನು ನಿರಂತರವಾಗಿ ಬೆಳೆಯುವುದರಿಂದ ಸಿಲಿಕಾನ್ ಕೊರತೆ ಕಾಡುವುದು.
ಅಲ್ಪ ಪ್ರಮಾಣದ ಸಿಲಿಕಾನಂಶವಿರುವ ಕಲ್ಲು ಬಂಡೆಗಳಿಂದ ಮಾರ್ಪಾಡಾದ ಮಣ್ಣು. ನಿರಂತರವಾಗಿ ಭತ್ತವನ್ನು ಬೆಳೆಯುವುದು ಮತ್ತು ಭತ್ತದ ಹುಲ್ಲನ್ನು ಮಣ್ಣಿಗೆ ಸೇರಿಸದೆ ಇರುವುದರಿಂದ ದೊರೆಯುವ ಸಿಲಿಕಾನ್ ಪ್ರಮಾಣ ಕಡಿಮೆ.

ಸಿಲಿಕಾನ್ ಕೊರತೆಯ ಲಕ್ಷಣಗಳು: ಎಲೆಗಳು ಸೊರಗಿ ಬಾಗುತ್ತವೆ. ಇದರಿಂದ ನೆರಳುಂಟಾಗಿ ದ್ಯುತಿ ಸಂಶ್ಲೇಷಣಾ ಕ್ರಿಯೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುವುದು.ಕೆಳಭಾಗದ ಎಲೆಗಳು ಕಂದು ಬಣ್ಣಕ್ಕೆ ತಿರುಗಿ ಒಣಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬೆಂಕಿ ರೋಗ ಮತ್ತು ಕಂದು ಚುಕ್ಕೆಯಂತ ರೋಗಗಳು ಕಾಣಿಸಿಕೊಳ್ಳುತ್ತವೆ.ತೆನೆಗಳ ಗಾತ್ರ ಚಿಕ್ಕದಾಗಿ ಬಂಜೆತನದ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತದೆ.ಅತಿಯಾದ ಸಿಲಿಕಾನ್ ಕೊರತೆಯು ತೆಂಡೆ ಮತ್ತು ತೆನೆಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.

ಭತ್ತದ ಹೊಟ್ಟಿನ ಬೂದಿಯ ಬಳಕೆ ಪರಿಣಾಮಕಾರಿ: ಸಿಲಿಕಾನ್ ಕೊರತೆಯನ್ನು ನೀಗಿಸಿ ಉತ್ತಮ ಭತ್ತದ ಇಳುವರಿ ಪಡೆಯುವುದು ತುಂಬಾ ಸರಳ ಹಾಗೂ ಸುಲಭ. ಅಲ್ಲದೆ ನೈಸರ್ಗಿಕ. ಸರಳವಾಗಿ ಹೇಳಬೇಕೆಂದರೆ ಭತ್ತದ ಹೊಟ್ಟಿನ ಬೂದಿಯನ್ನು ಭತ್ತದ ಬೆಳೆಯಲ್ಲಿ ಉಪಯೋಗಿಸುವುದು. ಇದರಿಂದ ಮಣ್ಣಿನಲ್ಲಿರುವ ರಂಜಕವು ಸಮರ್ಪಕವಾಗಿ ದೊರಕುವಂತೆ ಮಾಡಬಹುದು.

ಭತ್ತದ ಹೊಟ್ಟಿನಲ್ಲಿ ಬೂದಿಯ ಉಪಯೋಗ:
ಅರ್ಧದಿಂದ 1 ಕಿಲೋನಷ್ಟು ಬೂದಿಯನ್ನು ಪ್ರತಿ ಮೀಟರ್ ಸಸಿಮಡಿಯಲ್ಲಿ ಬಳಸುವುದರಿಂದ ಉತ್ತಮ ಹಾಗೂ ಸಧೃಡ ಸಸಿಗಳನ್ನು ಪಡೆಯಬಹುದು.
ಎಲೆ ಚುಕ್ಕಿ ರೋಗ ಮತ್ತು ಸಸಿ ಮಡಿಯ ನಂತರ ಭಾದಿಸುವ ಕಾಂಡಕೊರಕ ಕೀಟವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ.
ಭತ್ತದ ಹುಲ್ಲು ಮತ್ತು ಕಾಳಿನ ಇಳುವರಿಯನ್ನು ಹೆಚ್ಚಿಸಬಹುದು.ಮಣ್ಣಿನ ಸುಧಾರಕ ಮತ್ತು ವಿವಿಧ ಪೋಷಕಾಂಶದ ಮೂಲ ವಸ್ತುವಾಗಿ ಬಳಸಬಹುದು.
ಸಾವಯವ ಕೃಷಿಯಲ್ಲಿ ಭತ್ತದ ಹುಲ್ಲು ಮತ್ತು ಭತ್ತದ ಹೊಟ್ಟಿನ ಬೂದಿಯನ್ನು ಕಾಂಪೋಸ್ಟ್ ತಯಾರಿಸಲು ಉಪಯೋಗಿಸಲಾಗುವುದು.
ಪ್ರಯೋಗದ ಫಲಿತಾಂಶಭತ್ತದ ಹೊಟ್ಟಿನ ಬೂದಿಯನ್ನು ರಂಜಕವಿಲ್ಲದೆ ಉಪಚರಿಸಿದ ತಾಕಿಗಿಂತ, ಬೂದಿ ಮತ್ತು ರಂಜಕ ಎರಡನ್ನು ಕೊಡದೆ ಇರುವ ತಾಕಿನಲ್ಲಿ ಇಳುವರಿಯು ಹೆಚ್ಚಾಗುತ್ತದೆ.
ಬೂದಿಯ ಜತೆ ರಂಜಕವನ್ನು ಡಿಎಪಿ/ ಶಿಲಾರಂಜಕ ರೂಪದಲ್ಲಿ ಉಪಚರಿಸಿದ ತಾಕಿನಲ್ಲಿ ಇಳುವರಿ ಇನ್ನೂ ಹೆಚ್ಚಾಗಿದೆ.
ಭತ್ತದ ಹೊಟ್ಟಿನ ಬೂದಿಯನ್ನು ರಂಜಕ ಗೊಬ್ಬರದ ಜತೆಗೆ ಹಾಕಿರುವ ತಾಕಿನಲ್ಲಿ ಭತ್ತದ ತೆನೆ ಬರುವುದು ಮತ್ತು ಹಾಳಾಗುವುದು ಸುಮಾರು 7 ರಿಂದ 10 ದಿನಗಳ ಮುಂಚೆ ಕಂಡುಬಂದಿರುತ್ತದೆ.
ಪ್ರತಿ ಹೆಕ್ಟೇರ್ ಗೆ 2 ಟನ್ನಷ್ಟು ಭತ್ತದ ಹೊಟ್ಟಿನ ಬೂದಿಯನ್ನು ಹಾಕುವುದರಿಂದ ಶೇ.34 ರಷ್ಟು ಇಳುವರಿ ಹೆಚ್ಚಾಗಿರುವುದು ಕಂಡುಬರುತ್ತದೆ.
ಭತ್ತದ ಹೊಟ್ಟಿನ ಬೂದಿಯನ್ನು ಬಳಸುವಾಗ ಗಮನಿಸಬೇಕಾದ ಮುಖ್ಯಾಂಶಗಳಿವು.
ಕಪ್ಪಾಗಿರುವ ಭತ್ತದ ಹೊಟ್ಟಿನ ಬೂದಿಯನ್ನು ಮಾತ್ರ ಉಪಯೋಗಿಸಬೇಕು.
ಭತ್ತದ ಹೊಟ್ಟಿನ ಬೂದಿಯನ್ನು ನಾಟಿ ಮಾಡುವಾಗ 2 ವಾರ ಮುಂಚಿತವಾಗಿ ಹಾಕಬೇಕು.
ಸುಮಾರು ಅರ್ಧ ಕಿಲೋದಿಂದ ಒಂದು ಕಿಲೋದಷ್ಟು ಬೂದಿಯನ್ನು ಸಸಿ ಮಡಿಗಳಲ್ಲಿ ಪ್ರತಿ ಚದರ ಮೀಟರ್ಗೆ ಬಳಸುವುದರಿಂದ ಆರೋಗ್ಯ ಪೂರ್ಣವಾದ ಮತ್ತು ಸಧೃಡ ಸಸಿಗಳನ್ನು ಬೆಳೆಯಬಹುದು ಎಂದು ತಿಳಿದು ಬಂದಿದೆ.
ಭತ್ತದ ಹೊಟ್ಟಿನ ಬೂದಿಯನ್ನು, ಬೇರೆ ಬೆಳೆಗಳಿಗೆ ಉಪಯೋಗಿಸದೆ, ಭತ್ತದ ಬೆಳೆಗೆ ಮಾತ್ರ ಉಪಯೋಗಿಸಿದ್ದಲ್ಲಿ, ಸಿಲಿಕಾನ್ ಮರುಬಳಕೆ ಸಾಧ್ಯವಾದೀತು.


ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 080 - 23622572.

0 comments:

Post a Comment