ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ಊಹೂಂ... ಎಂ.ಬಿ.ಎ ಡಿಪಾರ್ಟ್ ಮೆಂಟ್ ಕಾರ್ತಿಕ್ ಕುಮಾರನ ಹಾಸ್ಟೆಲ್ ದಾರಿಯಲ್ಲೇನು ಇರಲಿಲ್ಲ. ಆದರೂ ಆ ಪುಣ್ಯಾತ್ಮ ಎಂ.ಬಿ.ಎ ಡಿಪಾರ್ಟ್ ಮೆಂಟ್ ಅನ್ನು ಒಂದು ಸುತ್ತು ಹಾಕಿಯೇ ಹಾಸ್ಟೆಲ್ ಗೆ ಹೋಗುತ್ತಿದ್ದ. ಅವನು ಬಹಳ ಪ್ರೀತಿಸಿದ ಪ್ರಿಯಾಂಕ ಎಂ.ಬಿ.ಎ. ಡಿಪಾರ್ಟ್ಮೆಂಟ್ ನಲ್ಲಿಯೇ ಇದ್ದಳು.

ಏಪ್ರಿಲ್ ತಿಂಗಳ ಸುಡು ಬಿಸಿಲು... ಜುಲೈನ ಗಾಳಿ, ಮಳೆ ಅದ್ಯಾವುದನ್ನೂ ಲೆಕ್ಕಿಸದೆ ದಿನ ಬೆಳಗ್ಗೆ ಎಂ.ಬಿ.ಎ.ಡಿಪಾರ್ಟ್ ಮೆಂಟ್ ನ್ನು ಒಂದು ಸುತ್ತು ಹೊಡೆದು ಅವನ ಕೆಮೆಸ್ಟ್ರಿ ಡಿಪಾರ್ಟ್ ಮೆಂಟ್ ಗೆ ಹೋಗುತ್ತಿದ್ದ. ಬರ ಬೇಕಾದರೂ ಅದೇ ಹಾದಿಯನ್ನು ಹಿಡಿಯುತ್ತಿದ್ದ. ಅವನಿಗೆ ಮದನ ದೇವ ಪರಕಾಯ ಪ್ರವೇಶ ಮಾಡಿದ್ದಾನೆ ಅಂತ ನನಗೆ ಆಗಾಗ ಅನಿಸುತ್ತಿತ್ತು. ಈ ಮದನ ದೇವ ಬಾರೀ ಪವರ್ ಫುಲ್ ನೋಡಿ. ಒಂದು ಸಲ ಬಾಣ ಬಿಟ್ಟ ಅಂದ್ರೆ ಬಿಸಿಲು, ಮಳೆ ಯಾವುದೂ ಲೆಕ್ಕಕ್ಕೇ ಇರಲ್ಲ ಅಂತೀನಿ. ಸಿನೆಮಾ ಹಾಡಿನಲ್ಲಿ ಹೇಳಿದ್ದಾರಲ್ಲಾ `ಪ್ರೀತಿ ಮಾಡ ಬಾರದು... ಮಾಡಿದರೆ ಜಗಕೆ ಹೆದರ ಬಾರದು...' ಅದ್ಯಾಕೋ ನಮ್ಮ ಕಾರ್ತಿಕ್ ಕುಮಾರ್ ಅದನ್ನು ಶ್ರದ್ಧೆಯಿಂದ ಪಾಲಿಸ್ತಾ ಇರೋ ಹಾಗಿತ್ತು.

ಕಾರ್ಲ್ ಮಾರ್ಕ್ಸ ಹೇಳಿದ್ದಾನಲ್ಲಾ ಧರ್ಮ ಅಫೀಮು ಇದ್ದ ಹಾಗೆ ಅಂತ ಅದು ಸತ್ಯನೋ ಸುಳ್ಳೋ ಗೊತ್ತಿಲ್ಲ. ಆದರೆ ಪ್ರೀತಿ ಮಾತ್ರ ಖಂಡಿತ ಅಫೀಮು ಇದ್ದ ಹಾಗೆ, ವ್ಯತ್ಯಾಸವೆಂದರೆ ಕಾರ್ಲ್ ಮಾರ್ಕ್ಸನ ಯೋಗ್ಯತೆಯವರು ಯಾರೂ ಇದನ್ನು ಇನ್ನೂ ಹೇಳಿಲ್ಲ!.
`ಪ್ರೀತಿ ಮಾಡ ಬಾರದು' ಇಂದ `ಪ್ರೀತಿಗಾಗಿ ಪ್ರಾಣ ಕೊಡೋಕೂ ಸಿದ್ಧ'ರ ತನಕ ಎಲ್ಲಾ ಸಿನೆಮಾ ಡಯಲಾಗ್ ಗಳೂ ಬಹಳ ಅಪಾಯಕಾರಿ ಅಂತ ಕಾರ್ತಿಕ್ ಕುಮಾರ್ ಗೆ ತಿಳಿ ಹೇಳುವವರೇ ಇರಲಿಲ್ಲ.ನೋಡಿ ಪ್ರೀತಿ ಅಮರ, ಪ್ರೀತಿಯಲ್ಲಿ ಶಕ್ತಿ ಇದೆ ಅಂತೆಲ್ಲ ಏನೇನೋ ಜನ ಮಾತಾಡಿಕೊಳ್ತಾರಲ್ಲಾ...ಅದೆಲ್ಲಾ ಸತ್ಯನೋ ಸುಳ್ಳೋ ನಂಗಂತೂ ಗೊತ್ತಿಲ್ಲ. ಆದರೆ ಇಪ್ಪತ್ತರ ತರುಣನಿಗೆ ಸುಡುವ ಬಿಸಿಲಿನಿಲ್ಲೂ, ಭೋರ್ಗರೆವ ಮಳೆಯಲ್ಲೂ ಎಂ.ಬಿ.ಎ. ಡಿಪಾರ್ಟ್ ಮೆಂಟಿನ ಸುತ್ತ ತಿರುಗಿಸುವಷ್ಟು ಶಕ್ತಿ ಪ್ರೀತಿಗೆ ಇದೆ. ಹಾ... ಅಷ್ಟೇ ಅಲ್ಲ ಮಾರಾಯ್ರೆ... ನಮ್ಮ ಹಾಸ್ಟೆಲ್ನಲ್ಲಿ ಕೆಲವರು ಹೇಳ್ತಾ ಇದ್ರು ಕಾರ್ತಿಕ ಒಂದು ಸಲ ಬ್ಲೇಡ್ ನಿಂದ ತನ್ನ ಕೈ ಮೇಲೆ ಪ್ರಿಯಾಂಕಾಳ ಹೆಸರು ಕೆರೆದುಕೊಂಡನಂತೆ. ಅವನು ತೆಳ್ಳಗಿದ್ದ . ಪುಣ್ಯಾತ್ಮನಿಗೆ ಅದೆಲ್ಲಿಂದ ಕೈ ಕೊರೆದುಕೊಳ್ಳುವಷ್ಟು ಶಕ್ತಿ ಬಂತೋ? ಹ್ಹುಂ... ಪ್ರೀತಿಯಲ್ಲಿ ಶಕ್ತಿ ಇದೆ... ಲವ್ ಈಸ್ ಪವರ್ ಫುಲ್ .ಆದರೆ ಅರ್ಧಂಬರ್ಧ ರಾಜಕೀಯ ಶಾಸ್ತ್ರ ಓದಿದ ವಿದ್ಯಾರ್ಥಿಯ ದೃಷ್ಠಿಯಲ್ಲಿ ಈ ಶಕ್ತಿ ಎಂದೂ ಚುನಾಯಿತನಾಗದ ರಾಜಕಾರಣಿಗೆ ಓಟು ಹಾಕಿದಂತೆ. ವ್ಯಾಪಾರಿಯ ದೃಷ್ಠಿಯಲ್ಲಿ ಎಂದೂ ಮಾರಾಟವಾಗದ ವಸ್ತುಗಳನ್ನು ಅಂಗಡಿಯಲ್ಲಿ ಇಟ್ಟುಕೊಂಡಂತೆ!.

ಪ್ರಿಯಾಂಕಾಳ ಎಂ.ಬಿ.ಎ. ಭಾಷೆಯಲ್ಲಿಯೇ ಹೇಳುವುದಾದರೆ ಆ ಶಕ್ತಿ ನಾನ್ ಪ್ರಾಡಕ್ಟಿವ್! ಎಂದೂ ಸಿಗದ ನಾನ್ ಪ್ರಾಡಕ್ಟಿವ್ ಪ್ರೀತಿಗಾಗಿ ನಮ್ಮ ಹಾಸ್ಟೆಲ್ ಹುಡುಗರು ಏನೆಲ್ಲಾ ಸರ್ಕಸ್ ಮಾಡ್ತಾ ಇದ್ರು ಅಂತೀರಿ... ನನ್ನ ರೂಂ ಮೆಟ್ ದಿನ ಬೆಳಗ್ಗೆ 6 ಗಂಟೆಗೆ ಎದ್ದು ಮೈ ಅರ್ಧ ಬಗ್ಗಿಸಿಕೊಂಡು ಕತ್ತೆ ತರಹ ಬೆವರುತ್ತ ಮಧ್ಯೆ ಮಧ್ಯೆ ನೀರು ಚಿಮುಕಿಸುತ್ತ ಪೇಂಟು , ಶರ್ಟಿಗೆ ಇಸ್ತ್ರಿ ಹಾಕ್ತಾ ಇದ್ದ. ಪ್ಯಾಂಟು ಶರ್ಟ್ ಮೇಲೆ ಗೆರೆಬೀಳಿಸೋಕೆ ಇಷ್ಟೆಲ್ಲಾ ಸರ್ಕಸ್ ಮಾಡಬೇಕಾ ಅಂತ ನನಗೆ ಅನಿಸ್ತಾ ಇತ್ತು. ಒಂದು ದಿನ ಬೆಳಗ್ಗೆ 6 ಗಂಟೆಗೆ ನನಗೆ ಎಚ್ಚರ ಆಯ್ತು ನೋಡಿ. ಈ ನನ್ಮಗ ಬೆವರ್ತಾ ಮೈ ಬಗ್ಗಿಸಿಕೊಂಡು ಬಾಯಿಗಟ್ಟಿ ಕಚ್ಚಿಕೊಂಡು ಇಸ್ತ್ರಿ ಹಾಕ್ತಾಇದ್ದ. `ಇದು ಯಾರು ಬರೆದ ಕಥೆಯೋ... ನನಗಾಗಿ ಬರೆದ ವ್ಯಥೆಯೋ...' ಹಾಡು ಬರ್ತಾ ಇತ್ತು ಎಫ್.ಎಂ..ನಲ್ಲಿ.

ಜಗತ್ತು ಯಾವುದನ್ನು ಅಶಿಸ್ತು ಅಂತ ಕರೆಯುತ್ತದೆಯೋ ಆ ಅಶಿಸ್ತಿನಿಂದ ಬದುಕುವುದರಲ್ಲಿರುವ ಸುಖ ನನ್ನ ರೂಮ್ ಮೆಟ್ ಗೆ ಅರ್ಥ ಆಗ್ತಾನೇ ಇರಲಿಲ್ಲ. ನೋಡಿ ನಾನು ಅಶಿಸ್ತಿನವನಾಗಿದ್ದೇನೆ. ಬಟ್ಟೆಗೆ ಇಸ್ತ್ರಿ ಹಾಕಬೇಕು ಅಂತಿಲ್ಲ. ಮೈನ ಯಾವಾಗ ಬೇಕಾದ್ರೂ ಕೆರೆದುಕೊಳ್ಳಬಹುದು. ಜಗತ್ತು ಅದನ್ನು ಅಶಿಸ್ತು ಅಂತ ಕರೆಯಬಹುದು. ಆದರೆ ಅದರಲ್ಲಿ ಒಂದು ಪ್ಲೆಶರ್ ಇದೆ. ಬೆಳಗ್ಗಿನ ಜಾವ ಎಲ್ಲರೂ ಸ್ತ್ರೀಯನ್ನು ಆಕರ್ಷಿಸಲು ಇಸ್ತ್ರಿ ಹಾಕುತ್ತಿರುವಾಗ ನಿದ್ದೆಮಾಡುವುದರಲ್ಲಿ ಸುಖವಿದೆ. 25 - 30 ವರುಷಗಳ ನಂತರವೂ ಸದೃಢವಾಗಿ ಕಾಣಲು ಇವತ್ತು ಬೇಗನೇ ಎದ್ದು ವ್ಯಾಯಾಮ ಮಾಡಿ ಇವತ್ತಿನ ಸುಖ ನಿದ್ದೆಯನ್ನು ಕಳೆದುಕೊಳ್ಳುವುದರಲ್ಲಿ ಯಾವ ಲಾಜಿಕ್ಕೂ ಇಲ್ಲ ಅಂತ ನಾನು ಎಷ್ಟೋಬಾರಿ ನನ್ನ ಹಾಸ್ಟೆಲ್ ನವರಿಗೆಲ್ಲಾ ಹೇಳಿದ್ದೆ. 25ವರ್ಷಗಳ ನಂತರದ ವಿಷಯಗಳನ್ನು ವಿಚಾರ ಮಾಡ್ತಾರಲ್ಲಾ... ಎಂತಹ ವಿಶನ್ ಅವರದ್ದು ಅಂತೀರಿ... ಸತ್ಯ ಹೇಳಬೇಕಂದ್ರೆ ಅವರ್ಯಾರೂ ಸದೃಢರಾಗಬೇಕೂಂತ ವ್ಯಾಯಾಮ ಮಾಡ್ತಾ ಇರಲಿಲ್ಲ. ಎಲ್ಲರಿಗೂ ಸುಲೇಮಾನ್, ರೋಶನ್, ಹೃತಿಕ್, ಖಾನ್ ಆಗಬೇಕಾಗಿತ್ತು. ಹುಡ್ಗೀರು ತಮ್ಮ ಕಡೆ ನೋಡುವ ಹಾಗೆ ಮಾಡಲು ಈ ಬಾಡಿ ಬಿಲ್ಡಿಂಗ್ ಎಲ್ಲಾ ಶಾರ್ಟ್ ಟರ್ಮ್ ಮಿಶನ್ ಆಗಿತ್ತು. ವಿಶನ್ ಅಲ್ಲ. ಇಸ್ತ್ರಿ ಹಾಕೋದೂ ಅದೇ ಕಾರಣಕ್ಕೆ...

ಈ ಜಗತ್ತು ಮನುಷ್ಯನನ್ನು ಅವನ ಬಟ್ಟೆಯಿಂದ ಅಳೆಯುವಷ್ಟು ಮುಟ್ಟಾಳವಿದೆ. ಅದಕ್ಕಾಗಿಯೇ ಇವರೆಲ್ಲಾ ಇಸ್ತ್ರಿ ಹಾಕ್ತಾ ಇದ್ರು... ಸಮಸ್ತ ಜಗತ್ತು ಅಲ್ಲದೇ ಹೋದರೂ ಕೆಲವು ಸುಂದರಿಯರಾದರೂ ಬಟ್ಟೆಯಿಂದ ಸಲ್ಮಾನ್ ಖಾನ್ ನ ಬಾಡಿಯಿಂದ ಗಂಡಸರನ್ನು ಅಳೆಯುತ್ತಾರಲ್ಲ ಮೂರ್ಖರು. ನನ್ನ ರೂಂ ಮೆಟ್ ಆ ಮೂರ್ಖತನದಿಂದ ಪ್ರಯೋಜನ ಪಡೆಯಲು ಪ್ರಯತ್ನಿಸುತ್ತಿದ್ದ. ಆದರೆ ನಾಲ್ಕಾರು ಚಂದದ ಮುಖಗಳಿಂದ ಸ್ಲೈಲ್ ಪಡೆಯಲು ಕತ್ತೆದುಡಿದ ಹಾಗೆ ವ್ಯಾಯಾಮ ಮಾಡೋದು , ಇಸ್ತ್ರಿ ಹಾಕೋದು ಇದೆಲ್ಲಾ ಮೂರ್ಖತನದ ಪರಮಾವಧಿ. ಅದು ಕೂಡಾ ದಿನ 10 - 20 ಇಸ್ತ್ರಿ ಹಾಕಿದ ಬಟ್ಟೆಗಳಿಗೆ ಕಂಡ ಕಂಡ ಸಲ್ಮಾನ್ ಖಾನ್ ಬಾಡಿಗೆ ನೀಡುವ ಆ ಪಬ್ಲಿಕ್ ಸ್ಮೈಲ್ ಪಡೆಯಲು... ಛೆ...ಛೆ... ಈ ನನ್ನ ರೂಮ್ ನೆಟ್ ಸೇರಿದಂತೆ ಹಾಸ್ಟೆಲ್ ನ ಹುಡುಗರೆಲ್ಲ ಮಧ್ವಾಚಾರ್ಯರು ಹೇಳಿದ ಅಂದನ್ ಥಾಮಸ್ ಇರಬೇಕು ಅಂತ ನನಗೆ ಅನಿಸ್ತಾ ಇತ್ತು.

ಹಾ... ಇರ್ಲಿ ಬಿಡಿ... ಏನ್ ಹೇಳ್ತಾ ಇದ್ದೆ ನಾನು ಅಂದ್ರೆ... ಹಾ ನಮ್ಮ ಹೀರೊ ಕಾರ್ತಿಕ್ ಕುಮಾರ್ ಅವನು ಕೂಡಾ ನನ್ನ ರೂಮ್ ಮೇಟ್ ನ ಹಾಗೆಯೇ ಇದ್ದ. ವ್ಯತ್ಯಾಸವೆಂದರೆ ಕಾರ್ತಿಕ್ ನ ತನು ಮನ ಧನವೆಲ್ಲ ಪ್ರಿಯಾಂಕಾಳ ಸುತ್ತ ಕೇಂದ್ರೀಕೃತವಾಗಿತ್ತು. ನನ್ನ ರೂಂ ಮೆಟ್ನ ತನು ಮನ ಧನವೆಲ್ಲ ಪ್ರಿಯಾಂಕಳ ಸುತ್ತ ವಿಕೇಂದ್ರೀಕರಣವಾಗಿತ್ತು.!
ನಾಳಿನ ಸಂಚಿಕೆಗೆ...

0 comments:

Post a Comment