ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ವಿದ್ಯೆವುಳ್ಳವನ ಮುಖ ಮುದ್ದು ಬರುವಂತ್ತಿಕ್ಕು,
ವಿದ್ಯೆ ಇಲ್ಲದವನ ಬರಿ ಮುಖ
ಹಾಳೂರು ಹದ್ದಿನಂತ್ತಿಕ್ಕು ಸರ್ವಜ್ಞ

ಸರ್ವಜ್ಞನು ವಿದ್ಯೆಯ ಮಹತ್ವವನ್ನು ಹದಿನಾರನೇಯ ಶತಮಾನದಲ್ಲಿಯೇ ತಿಳಿಸಿದ್ದಾನೆ. ವೇದ, ಪುರಾಣ, ಉಪನಿಷತ್ತುಗಳು, ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು ನಮಗೆ ಮಾರ್ಗದರ್ಶನವಾಗಿವೆ. ಇದೂ ಅಲ್ಲದೇ ಬೌದ್ಧ ಹಾಗೂ ಜೈನ ಧರ್ಮಗಳು ಹುಟ್ಟಿ ವಿಶ್ವಕ್ಕೆ ಶಾಂತಿ, ಸತ್ಯ ಹಾಗೂ ಅಹಿಂಸಾ ಮಾರ್ಗವನ್ನು ತೋರಿಸಿವೆ.ಈ ದೇಶವನ್ನು ದೇಶಿಯ ಅರಸರು ಮತ್ತು ಪರಕೀಯರು ಆಳಿದ್ದಾರೆ. ಅವರ ಕಾಲದಲ್ಲಿ ಆದ ಒಳ್ಳೆಯದು ಮತ್ತು ಕೆಟ್ಟದ್ದನ್ನು ಇತಿಹಾಸ ತಿಳಿಸುತ್ತದೆ. ವಿನ: ಸಾಮಾನ್ಯ ಜನರಿಗೆ ಶಿಕ್ಷಣ ಕಡ್ಡಾಯವಾದ ಬಗ್ಗೆ ಎಲ್ಲಿಯೂ ಉಲ್ಲೇಖ ಇರುವುದಿಲ್ಲ. ಶಿಕ್ಷಣವಿದ್ದರೂ ಕೆಲವು ಸೀಮಿತ ವರ್ಗದವರಿಗೆ ಮಾತ್ರ ಮೀಸಲಾಗಿತ್ತು. ಈ ಕಾರಣಕ್ಕಾಗಿ ಈ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅನಕ್ಷರರಾಗಿದ್ದರು.

ಬ್ರಿಟೀಷರು ಈ ದೇಶವನ್ನು 300 ವರ್ಷಗಳ ಕಾಲ ಆಳಿದ್ದಾರೆ. ಅವರ ಕಾಲದಲ್ಲಿ ಕೈಗಾರಿಕಾ ಕ್ರಾಂತಿ ಆರಂಭಿಸಿ, ಬಂದರು, ರೈಲ್ವೆ, ಸಾರಿಗೆ ವ್ಯವಸ್ಥೆಯನ್ನು ತಂದರು. ಆಗ ನಮ್ಮಲ್ಲಿ ಶಿಕ್ಷಣದ ಬಗ್ಗೆ ಗುಲಾಮಗಿರಿ ಮತ್ತು ಸ್ವಾತಂತ್ರ್ಯ ಬಗ್ಗೆ ಅರಿವು ಬರ ತೊಡಗಿತು. ಇದೇ ಸಮಯದಲ್ಲಿ ಲಾರ್ಡ್ ಮೆಕಾಲೆ ಅವರು ಹೆಣ್ಣು ಮಕ್ಕಳಿಗೆ ಇಂಗ್ಲೀಷ ಶಾಲೆಯನ್ನು ಆರಂಭಿಸಿದರು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯವು ಅಂದಿನ ಸಮಾಜದಲ್ಲಿತ್ತು. ನಿರಕ್ಷರಸ್ಥರಾಗಿ ಶೋಷಣೆಯಲ್ಲಿ ಬಾಳುವುದಕ್ಕಿಂತ ಅಕ್ಷರಸ್ಥರಾಗಿ ಪ್ರಜ್ಞಾವಂತರಾಗಿ ಬಾಳಲಿ ಎಂದು ಮಹಾತ್ಮಾಗಾಂಧಿ, ಲೋಕಮಾನ್ಯ ತಿಲಕ, ರಾಜಾರಾಮ ಮೋಹನರಾಯ, ಡಾ| ಬಿ.ಆರ್. ಅಂಬೇಡ್ಕರ ಮುಂತಾದವರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಪ್ರೋತ್ಸಾಹಿಸಿದರು. ಆದರೆ ಅಂದಿನ ಸಮಾಜ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಷ್ಟೊಂದು ಮಹತ್ವ ಕೊಡಲಿಲ್ಲ. ದೇಶ 1947 ರಲ್ಲಿ ಸ್ವಾತಂತ್ರ್ಯವಾಯಿತು. ನಾವು ಸ್ವತಂತ್ರ ಭಾರತದ ಪ್ರಜೆಗಳೆಂದು ಆನಂದಭರಿತರಾಗಿ ಸ್ವಾತಂತ್ರೋತ್ಸವವನ್ನು ಆಚರಿಸಿ, ಇಂದಿಗೂ ಆಚರಿಸುತ್ತಿದ್ದೇವೆ. ಆದರೆ ಅನಕ್ಷರತೆ ಮಾತ್ರ ನಿರ್ಮೂಲನೆ ಆಗಲಿಲ್ಲ.

ಎರಡನೇ ಮಹಾಯುದ್ಧದ ನಂತರ ಸಾಕ್ಷರತೆಯ ಮಹತ್ವವನ್ನು ತಿಳಿದು 1965 ಸೆಪ್ಟೆಂಬರ್ 8 ರಿಂದ 17 ರವರೆಗೆ ಟೆಹರಾನ್ನಲ್ಲಿ ಅನಕ್ಷರತೆ ನಿರ್ಮೂಲನೆ ಬಗ್ಗೆ ಶಿಕ್ಷಣ ಮಂತ್ರಿಗಳ ವಿಶ್ವ ಸಮ್ಮೇಳನ ಏರ್ಪಡಿಸಲಾಯಿತು. ಅದೇ ದಿನ ಸೆಪ್ಟೆಂಬರ್ 8 ಅಂತರರಾಷ್ಟ್ರೀಯ ಸಾಕ್ಷರತೆ ದಿನವೆಂದು ಘೋಷಣೆ ಮಾಡಲಾಯಿತು. ಪ್ರತಿವರ್ಷ ಸೆಪ್ಟೆಂಬರ್ 8 ಅಂತರರಾಷ್ಟ್ರೀಯ ಸಾಕ್ಷರತಾ ದಿನವೆಂದು ಆಚರಿಸಲಾಗುತ್ತಿದೆ. ನಿರಕ್ಷರತೆ ಹೊಗಲಾಡಿಸಲು ಕೇಂದ್ರ ಸರಕಾರ ದೇಶದಲ್ಲಿ ಪ್ರಪ್ರಥಮವಾಗಿ ಸಾಕ್ಷರತಾ ಕಾರ್ಯಕ್ರಮವನ್ನು ಆರಂಭಿಸಿದ ಕೆಲವು ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು ಒಂದು. 1978 ರಲ್ಲಿ ವಯಸ್ಕರರಿಗೆ ಅಕ್ಷರ ಕಲಿಸಲು ವಯಸ್ಕರ ಶಿಕ್ಷಣ ನಿರ್ದೇಶನಾಲಯವನ್ನು ಕರ್ನಾಟಕದಲ್ಲಿ ಆರಂಭಿಸಲಾಯಿತು. ಜಿಲ್ಲಾ ಸಾಕ್ಷರತಾ ಸಮಿತಿಗಳ ಮೂಲಕ 15 ರಿಂದ 35 ವರ್ಷದ ನಿರಕ್ಷರರಿಗೆ ಶಿಕ್ಷಣ ನೀಡುವ ಕಾರ್ಯಕ್ರಮ ಅನುಷ್ಠಾನಗೊಳಿಸಲಾಯಿತು.


ಬೆಳಗಾವಿ ಜಿಲ್ಲೆಯಲ್ಲಿ ಸಾಕ್ಷರತಾ ಕಾರ್ಯಕ್ರಮ
ಕೇಂದ್ರ ಸರಕಾರ 5 ವರ್ಷದ ಅವಧಿಯ ಸಾಕ್ಷರತಾ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲೆಗೆ 2005 ನೇ ಸಾಲಿನಲ್ಲಿ ಮಂಜೂರು ಮಾಡಿತು. ಮೊದಲ 3 ವರ್ಷ, ಈ ಕಾರ್ಯಕ್ರಮಕ್ಕೆ ತಗಲುವ ಪೂರ್ಣ ವೆಚ್ಚದ ಅನುದಾನ ಕೇಂದ್ರ ಸರಕಾರ ನೀಡುವುದಾಗಿ 4ನೇ ಮತ್ತು 5ನೇ ವರ್ಷದ ಅನುದಾನದಲ್ಲಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಶೇ. 50 ರ ಅನುಪಾತದಲ್ಲಿ ಅನುದಾನ ನಿಗದಿಪಡಿಸಿತ್ತು. 2005 ರಲ್ಲಿ ಪ್ರತಿ ಕುಟುಂಬಗಳ ಸಮೀಕ್ಷೆ ಮಾಡಿ ಸುಮಾರು 4,51,237 ಅನಕ್ಷರಸ್ಥರನ್ನು ಗುರುತಿಸಿ ಪ್ರತಿ ಗ್ರಾಮದಲ್ಲಿ ಕಲಿಕಾ ಕೇಂದ್ರ ಆರಂಭಿಸಿ ಸ್ವಯಂ ಸೇವಕರ ಆಯ್ಕೆ ಮಾಡಿ ನಿರಂತರವಾಗಿ ಸಾಕ್ಷರತಾ ಕಾರ್ಯಕ್ರಮವನ್ನು ನಡೆಸಲಾಯಿತು. ಕೇಂದ್ರ ಸರಕಾರದ ಆದೇಶದಂತೆ 31-3-2009 ಕ್ಕೆ 5 ವರ್ಷ ಅವಧಿ ಮೀರಿದ ನಂತರ ಸದರಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ಜಿಲ್ಲೆಯಲ್ಲಿ ಅನಕ್ಷರಸ್ಥರು ಮತ್ತು ನವಸಾಕ್ಷರರು ಕಲಿತ ಕಲಿಕೆ ಸ್ಥೀರವಾಗಿ ಇರಲು ರಾಜ್ಯ ಸರಕಾರ ಪರ್ಯಾಯವಾಗಿ ಸಮುದಾಯ ಶಿಕ್ಷಣ ಮತ್ತು ವೃತ್ತಿ ಕೌಶಲ್ಯ ಕಾರ್ಯಕ್ರಮವನ್ನು ಜಾರಿಗೆ ತಂದಿತು. ಈ ಕಾರ್ಯಕ್ರಮ ಹಿಂದುಳಿದ ತಾಲೂಕುಗಳಾದ ರಾಮದುರ್ಗ, ರಾಯಬಾಗ, ಬೈಲಹೊಂಗಲ, ಸವದತ್ತಿ, ಹುಕ್ಕೇರಿ, ಗೋಕಾಕ ಮತ್ತು ಅಥಣಿ ತಾಲೂಕುಗಳಲ್ಲಿ ಪ್ರತಿ ಗ್ರಾಮಪಂಚಾಯತಿಗೆ 2 ಕೇಂದ್ರಗಳಂತೆ 626 ಕೇಂದ್ರಗಳನ್ನು ಆರಂಭಿಸಿ ಸ್ವಯಂ ಸೇವಕರು, ಪ್ರೇರಕರು, ಉಪ ಪ್ರೇರಕರನ್ನು ಆಯ್ಕೆ ಮಾಡಿ ಅವರಿಗೆ ಪ್ರತಿ ತಿಂಗಳು ಗೌರವ ಧನ ರೂ. 700/- ನೀಡಿ ಉಳಿದ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಜವಾಬ್ದಾರಿ ನೀಡಿದೆ.

ಇದೂ ಅಲ್ಲದೇ ಪ್ರೌಢಶಾಲೆಯ 8 ಮತ್ತು 9ನೇ ತರಗತಿಯಲ್ಲಿ ಓದುತ್ತಿರುವ ಒಬ್ಬ ವಿದ್ಯಾರ್ಥಿ 6 ತಿಂಗಳಲ್ಲಿ ಇಬ್ಬರು ನಿರಕ್ಷರಸ್ಥರರನ್ನು ಅಕ್ಷರಸ್ಥರನ್ನಾಗಿ ಮಾಡಲು 270 ಪ್ರೌಢಶಾಲೆಗಳ 13,500 ವಿದ್ಯಾರ್ಥಿಗಳಿಗೆ ವಹಿಸಿಕೊಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವೃತ್ತಿ ತರಬೇತಿ ನೀಡಲು ಒಂದು ಶಿಬಿರಕ್ಕೆ 30,790/- ರೂ. ಹಾಗೂ ಕೌಶಲ್ಯ ತರಬೇತಿ ಶಿಬಿರಕ್ಕೆ 30,000 ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಅನಕ್ಷರರನ್ನು ಅಕ್ಷರಸ್ಥರನ್ನಾಗಿ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರ ಕೋಟ್ಯಾಂತರ ರೂ. ಗಳನ್ನು ಖರ್ಚು ಮಾಡುತ್ತಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಫಲಿತಾಂಶ ಬರುತ್ತಿಲ್ಲ.

ಇಂದು ವಿಶ್ವದಲ್ಲಿ 75.90 ಕೋಟಿ ನಿರಕ್ಷರರು ಇದ್ದಾರೆ. ಇವರ ಪೈಕಿ ಗರಿಷ್ಠ ಸಂಖ್ಯೆಯ ನಿರಕ್ಷರರು ಭಾರತದಲ್ಲಿ ಇದ್ದಾರೆ ಎಂದು 2010 ರ ಜನೇವರಿ ತಿಂಗಳಲ್ಲಿ ಬಿಡುಗಡೆಯಾದ ಎಲ್ಲರಿಗೂ-ಶಿಕ್ಷಣ, ಜಾಗತಿಕ ಅವಲೋಕನ ವರದಿಯಲ್ಲಿ ವಿಶ್ವಸಂಸ್ಥೆ ಹೇಳಿದೆ. ದೇಶದಲ್ಲಿ ಇಂದು ಪ್ರಜಾಪ್ರಭುತ್ವದ ಮೌಲ್ಯ ಕುಸಿದಿದೆ. ಸಮಾಜದಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆ ಅಪಹರಣ, ಅಧಿಕಾರದ ದುರ್ಬಳಕೆ ಆಗುತ್ತಿದ್ದು, ಇದನ್ನು ಪ್ರತಿಭಟಿಸುವ ಪ್ರಜ್ಞಾವಂತ ನಾಗರಿಕರು ಇಲ್ಲವಾಗಿದ್ದಾರೆ. ಅನಕ್ಷರರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಲೆಕ್ಕಿಸದೇ ಮೊದಲು ಅಕ್ಷರಸ್ಥರಾಗಬೇಕು. ಸರ್ವಜ್ಞಾನಕ್ಕೂ ಅಕ್ಷರ ಜ್ಞಾನವೇ ಬೀಜಮಂತ್ರ ಕಾರಣ ಎಲ್ಲರೂ ಅಕ್ಷರಸ್ಥರಾದಾಗ ಇಡೀ ಸಮಾಜ, ದೇಶ, ಜಗತ್ತು ಸುಧಾರಿಸುತ್ತದೆ. ಸಂಪೂರ್ಣ ಸಾಕ್ಷರತೆಯೇ ಸಮಾಜಕ್ಕೆ ಒಂದು ದೊಡ್ಡ ಕೊಡುಗೆಯಾಗುವುದು.
- ಎನ್.ಡಿ. ಸಿಂಧೋಳ್ಕರ
ಸಹಾಯಕ ನಿರ್ದೇಶಕರು,
ವಾರ್ತಾ ಇಲಾಖೆ, ಬೆಳಗಾವಿ.

0 comments:

Post a Comment