ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಉತ್ತರ ಕನ್ನಡ ಜಿಲ್ಲಾ 14ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ವಿ.ಗ.ನಾಯಕ
ಮಂಗಳೂರು: ಹಿರಿಯ ಸಾಹಿತಿ, ವಿಮರ್ಶಕ, ಕವಿ ಹಾಗೂ ಜಾನಪದ ವಿದ್ವಾಂಸ ವಿ.ಗ.ನಾಯಕ ಅವರು 2010ರ ಮಾರ್ಚ್ 27 ಮತ್ತು 28ರಂದು ಕುಮಟಾದಲ್ಲಿ ನಡೆಯುವ ಉತ್ತರ ಕನ್ನಡ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.ವಿ.ಗ.ನಾ. ಇಪ್ಪತ್ತೈದಕ್ಕೂ ಹೆಚ್ಚು ವೈವಿಧ್ಯಪೂರ್ಣ ಹಾಗೂ ವೈಶಿಷ್ಟ್ಯಪೂರ್ಣ ಸಾಹಿತ್ಯ ಕೃತಿಗಳನ್ನಿತ್ತವರು. ಕಾವ್ಯ, ವಿಮರ್ಶೆ, ಅಂಕಣ ಬರೆಹ, ಚಿಂತನೆಗಳು ಹಾಗೂ ಜಾನಪದ ಪ್ರಕಾರಗಳಲ್ಲಿ ಅಮೂಲ್ಯ ಕೊಡುಗೆ ನೀಡಿರುವ ನಾಯಕರು ಸಂಘಟನೆ, ಪ್ರಕಾಶನದಲ್ಲೂ ತೆರೆದುಕೊಳ್ಳುವ ಅಪುರೂಪದ ಸಾಹಿತಿಗಳಲ್ಲೊಬ್ಬರು.ಚುಟುಕು ಸಾಹಿತ್ಯ ಪರಂಪರೆಗಂತೂ ಅತ್ಯಂತ ಮಹತ್ತ್ವದ ಕೊಡುಗೆ ಕೊಟ್ಟವರು. ಅವರ `ಒಳಗೂಡಿನಲ್ಲಿ', `ಗೋಲಗುಮ್ಮಟ', `ನೆಲಗುಮ್ಮ' ಸಂಕಲನಗಳು ಚುಟುಕು ಕಾವ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಅನನ್ಯ ಕೃತಿಗಳಾಗಿವೆ. `ಕನ್ನಡದಲ್ಲಿ ಹನಿಗವನಗಳು' ಎಂಬ ವಿಮರ್ಶಾ ಕೃತಿ ಹನಿಗವನಗಳಿಗೆ ಸಂಬಂಧಿಸಿ ಈವರೆಗೂ ಅದೊಂದೇ ಮಾರ್ಗದರ್ಶಿಯಾಗಿದೆ. ಒರೆಗಲ್ಲು, ಪ್ರತಿಸ್ಪಂದನ, ತಾರ್ಕಣೆ, ವಾಲಗ ವಸ್ತುನಿಷ್ಠ ವಿಮರ್ಶೆಗೆ ಸಂದ ಶ್ರೇಷ್ಠ ಕೃತಿಗಳು. `ಬಿಡುಗಡೆ', `ಕರಿಕೆಯ ಕುಡಿ' ವಿಶಿಷ್ಟ ಅಂಕಣ ಬರೆಹಗಳ ಸಂಕಲನಗಳು. `ಕವಿಯಿಂದ ಕಿವಿಗೆ' ಚಿಂತನ ಸಂಗ್ರಹ, `ಮೃಗಯಾ ಸಾಹಿತಿ ಕೆದಂಬಾಡಿ ಜತ್ತಪ್ಪ ರೈ' ವ್ಯಕ್ತಿಚಿತ್ರ. `ಕಾಸರಗೋಡಿನಲ್ಲಿ ಹಳೆ ಪೈಕರು' ಜನಾಂಗಿಕ ಅಧ್ಯಯನ. ಚೊಕ್ಕವಾಗಿ ಸಂಪಾದಿಸಿದ ಕೃತಿಗಳು ಹತ್ತು ಹಲವು. ಕಾವ್ಯಾತ್ಮಕ ಶೈಲಿ, ಬದುಕು ಅವರದು. ಭಾಷೆಯ ಬಗೆಗಿನ ಹಿಡಿತದಿಂದ ಪಂಡಿತ ಪರಂಪರೆಗೆ ಹತ್ತಿರವಾಗುತ್ತಾರೆ.

ನಾಡಿನ ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ಇನ್ನಿತರ ಸಮಾರಂಭ, ಕಮ್ಮಟಗಳಲ್ಲಿ ಕರಾರುವಕ್ಕಾಗಿ ಮಾತನಾಡಿ ಗಮನ ಸೆಳೆದಿರುವ ವಿ.ಗ.ನಾ. ವರ್ಧಮಾನ ಸಾಹಿತ್ಯ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ, ಕೇಂದ್ರ ಚುಟುಕು ಸಾಹಿತ್ಯ ಪರಿಷತ್ನ `ಚುಟುಕು ರತ್ನ' ಪ್ರಶಸ್ತಿಗೂ ಭಾಜನರಾದವರು. ಪರಿಷತ್ತಿನ ಪ್ರಧಾನ ಸಂಚಾಲಕರಾದ ಡಾ. ಎಂ.ಜಿ.ಆರ್. ಅರಸ್ ಸಂಪಾದಿಸಿದ `ವಿ.ಗ.ನಾ ಚುಟುಕುಗಳು' ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತಿನ ಗೌರವ ಪ್ರಕಟಣೆಯಾಗಿದೆ.
ಅವರಿಗೆ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ ಮತ್ತು ಚುಟುಕು ಸಾಹಿತ್ಯ, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ ಗೌರವ ಹಾಗೂ ಶಿವಮೊಗ್ಗದಲ್ಲಿ ನಡೆದ ಎಪ್ಪತ್ತ ಮೂರನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚುಟುಕು ಕಾವ್ಯ ಗೋಷ್ಠಿಯ ಅಧ್ಯಕ್ಷತೆಯ ಮನ್ನಣೆ ಪ್ರಾಪ್ತವಾದದ್ದು ಉಲ್ಲೇಖನೀಯ. ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಜಗಲಿ `ಹಣತೆ' `ಹೊನ್ನೂರ ಜಾಜಿ' ಎಂಬ ಅಭಿನಂದನ ಗ್ರಂಥವನ್ನು, ಅಡ್ಯನಡ್ಕದ ವಿ.ಗ.ನಾ. ಅಭಿನಂದನ ಸಮಿತಿ ನಾವಿಕ ಎಂಬ ಅಭಿನಂದನ ಗ್ರಂಥವನ್ನು ಸಮರ್ಪಿಸಿ ಗೌರವಿಸಿದೆ.
ಕಾವ್ಯಾತ್ಮಕ ಶೈಲಿ, ನಿಭರ್ಿಡೆಯ ಬರವಣಿಗೆ, ಬದುಕು ಅವರದು. ಭಾಷೆಯ ಬಗೆಗಿನ ಹಿಡಿತದಿಂದ `ನಾಯಕರು ಪಂಡಿತ ಪರಂಪರೆಯವರು' ಎಂದೇ ಹೆಸರಾದವರು. ಕನ್ನಡಾಭಿಮಾನಕ್ಕೆ, ಜನಪರ ಕಾಳಜಿಗೆ ರೂಪಕವಾದವರು.
ವಿ.ಗ.ನಾಯಕ್ ಎಂದೇ ಖ್ಯಾತರಾದ ವಿನಾಯಕ ಗಣಪತಿ ನಾಯಕ್ ಮೂಲತಃ ಹೊನ್ನಾವರದ ಕರ್ಕಿಕೋಡಿಯವರು. 9ನೇ ತರಗತಿಯಲ್ಲಿದ್ದಾಗಲೇ `ಹೊನ್ನೂರ ಜಾಜಿ' ಸಂಕಲನವನ್ನು ಕಾವ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದು ಹೆಗ್ಗಳಿಕೆ. ಹದಿ ವಯಸ್ಸಿನಲ್ಲೇ ಹೊನ್ನಾವರದ ಪಾಂಡೇಶ್ವರ ಗಣಪತಿ ರಾಯರ ಸಂಪಾದಕತ್ತ್ವದ `ನಾಗರಿಕ' ವಾರಪತ್ರಿಕೆಯಲ್ಲೂ ಗೌರವ ವರದಿಗಾರನಾಗಿ ದುಡಿದವರು. ವಿ.ಗ.ನಾಯಕ್ ಕಾಲೇಜು ಹಂತ ಪೂರೈಸುವ ಅವಧಿಯಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಹಿತಿಯಾಗಿ ಗಮನ ಸೆಳೆದವರು. ಬಳಿಕ ಅಧ್ಯಾಪನ ವೃತ್ತಿಗಾಗಿ ವಲಸೆ ಹೋದದ್ದು ಕರ್ನಾಟಕ-ಕೇರಳ ರಾಜ್ಯಗಳ ಗಡಿನಾಡು, ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕಕ್ಕೆ. 36 ವರ್ಷಗಳ ಕಾಲ ಅಲ್ಲಿನ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಸುದೀರ್ಘ ಅಧ್ಯಾಪನ ವೃತ್ತಿ ನಿರ್ವಹಿಸಿ ಇದೀಗ ಮಂಗಳೂರಿನ ಕೊಟ್ಟಾರದಲ್ಲಿ ನಿವೃತ್ತಿಯ ಬದುಕು ಸಾಗಿಸುತ್ತಿದ್ದಾರೆ, ಸಾಹಿತ್ಯಕ ಕೆಲಸಗಳಿಗೆ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದರೂ ಉತ್ತರ ಕನ್ನಡದ ಸಾಹಿತ್ಯವನ್ನೂ ವಿಶೇಷವಾಗಿ ಅಭ್ಯಸಿಸುತ್ತ ಅಲ್ಲಿಗೂ ಕೊಡುಗೆ ನೀಡುತ್ತ ಬಂದವರು. ಹಾಗೂ ಉತ್ತರ ಕನ್ನಡ ಜಿಲ್ಲೆಯೊಂದಿಗೇ ಸದಾ ಒಡನಾಡುತ್ತಿರುವ ನಾಯಕ್ ಇಲ್ಲಿನ ಸಮ್ಮೇಳನ, ಸಭೆ, ಸಮಾರಂಭಗಳಲ್ಲಿ ಅತಿಥಿಯಾಗಿ ಹಾಗೂ ಸಭಿಕರಾಗಿಯೂ ಭಾಗವಹಿಸುತ್ತ ಬಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಾಹಿತಿಗಳನ್ನೂ ದಕ್ಷಿಣ ಕನ್ನಡಕ್ಕೂ ಆಹ್ವಾನಿಸಿ ಅವರ ವಿಚಾರಗಳನ್ನು ಆಲಿಸುವುದಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ, ಸನ್ಮಾನಿಸುತ್ತಿದ್ದಾರೆ. ದೂರದ ಅಡ್ಯನಡ್ಕದಲ್ಲಿದ್ದೂ ಆರಂಭದಿಂದ ಇಂದಿನರೆಗೂ ಉತ್ತರ ಕನ್ನಡ ಜಿಲ್ಲೆಯ ಜನಪದ ಸಾಹಿತ್ಯವನ್ನು ವಿಶೇಷವಾಗಿ ಅಧ್ಯಯನ ಮಾಡುತ್ತ ಅಕ್ಷರ ಪ್ರಪಂಚದಲ್ಲಿ ಅದಕ್ಕೊಂದು ಅಗ್ರ ಸ್ಥಾನ ಕೊಡುತ್ತ ಬಂದವರು. `ಹರಿಕಾಂತರ ಸಂಸ್ಕೃತಿ', ಮದುವೆ ಮನೆ ಚೆಂದ, ಗಂಧದ ಮರವೇ ನೆಳಲಾಗು, ನಿಮ್ಮ ಸೃಷ್ಟಿ, ನಮ್ಮ ದೃಷ್ಟಿ, ಬೀಸೇ ಕುಂಕುಮದ ತೆನೆಗಾಳಿ, ದಿಬ್ಬಣ, ನೆನೆದೇವೀದಿನ ಗೌರೀಯ ಮಗನ ಗಣಪನ, ಸ್ವಾಗತವನೆ ಕೋರಿದೆ, ಹರ್ಷ ಚೆಲ್ಲಿ ಕಾದಿದೆ, ಚಿನ್ನದ ಪೆಟ್ಟಿಗೆ(ಅಚ್ಚಿನ ಮನೆಯಲ್ಲಿರುವ ಗುಮಟೆಯ ಪದಗಳು)...ಈ ನಿಟ್ಟಿನಲ್ಲಿ ಗಮನಾರ್ಹ ಕೃತಿಗಳು.

0 comments:

Post a Comment