ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:10 PM

ಮುಗಿಯದ ರೀಲು...

Posted by ekanasu

ಅಂಕಣ
ರೀಲು ಬಿಚ್ಚುವ ಮುನ್ನ

ಇಲ್ಲಿ ಚುಮುಚುಮು ಚಳಿ ಆರಂಭವಾಗುತ್ತಿದ್ದಂತೆ ಒಂದು ದಿನ ಹಿರಿಯರಾದ ಬಿ. ಕೃಷ್ಣಾನಂದ ಹೆಗ್ಡೆ ಅವರಿಗೆ ಈಮೇಲ್ ಮಾಡಿದೆ: `ಸರ್, ನಮ್ಮ ಶ್ರೀನಿವಾಸ್ ಬರುವ ಮಾರ್ಚ್ ಕೊನೆಯಲ್ಲಿ ನಿವೃತ್ತರಾಗುತ್ತಿದ್ದಾರೆ. ಆ ಸಂದರ್ಭದಲ್ಲಿ ಮಂಗಳೂರಿನಲ್ಲಿ ಸಮಾರಂಭ ಏರ್ಪಡಿಸಿ, ಅವರನ್ನು ಕುರಿತು ಪುಟ್ಟದೊಂದು ಪುಸ್ತಕ ತರೋಣವೇ?
ಹೆಗ್ಡೆಯವರು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಮಂಗಳೂರು ಘಟಕದ ಮೊದಲ ಕ್ಷೇತ್ರ ಪ್ರಚಾರಾಧಿಕಾರಿಯಾಗಿದ್ದವರು. ಅವರು ಅಲ್ಲಿದ್ದಾಗಲೇ ಇಲಾಖೆ ಸೇರಿದವರು ಶ್ರೀನಿವಾಸ್. ತಡಮಾಡದೆ ಹೆಗ್ಡೆಯವರು ಉತ್ತರಿಸಿದರು: ಇದು ಮಾಡಲೇಬೇಕಾದ ಕೆಲಸ; ನಾನು ಜೊತೆಗಿದ್ದೇನೆ.

ಆದರೆ ಶ್ರೀನಿವಾಸ್ ಅವರನ್ನು ಒಪ್ಪಿಸಬೇಕಲ್ಲ! ಅವರು ಇಂಥದ್ದೇನನ್ನೂ ಯಾವತ್ತೂ ನಿರೀಕ್ಷಿಸಿದವರಲ್ಲ. `ಹೀಗೊಂದು ಯೋಚನೆ ಇದೆ. ಹೆಗ್ಡೆಯವರು ಒಪ್ಪಿಗೆ ಸೂಚಿಸಿದ್ದಾರೆ. ನೀವು ಬೇಡ ಅನ್ನಬಾರದು ಎಂದಷ್ಟೇ ಹೇಳಿ ಅವರ ಉತ್ತರಕ್ಕೂ ಕಾಯದೆ ಫೋನ್ ಕೆಳಗಿಟ್ಟೆ. ಈಗ `ಮುಗಿಯದ ರೀಲು ನಿಮ್ಮ ಮುಂದಿದೆ.

ಪುಸ್ತಕದ ಮೊದಲ ಭಾಗದಲ್ಲಿ ಶ್ರೀನಿವಾಸ್ ಅವರು ಕ್ಷೇತ್ರ ಪ್ರಚಾರ ನಿರ್ದೇಶನಾಲಯದಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಸರಕಾರಿ ಸೇವೆಗೆ ಸೇರಿದ ಮೊದಲ ದಿನ ಇದ್ದ ಉತ್ಸಾಹ, ಶ್ರದ್ಧೆ, ಪ್ರಾಮಾಣಿಕತೆ, ಸ್ನೇಹಪರತೆ ಹಾಗೂ ಸಮಾಜಪ್ರೀತಿಯನ್ನು ನಿವೃತ್ತಿಯ ದಿನದ ವರೆಗೂ ಕಾಯ್ದುಕೊಂಡದ್ದು ಅವರ ವಿಶೇಷ. ಇದನ್ನವರು ಪ್ರಜ್ಞಾಪೂರ್ವಕವಾಗಿಯೇನೂ ಮಾಡಿಲ್ಲ. ಅವರಿದ್ದುದೇ ಹಾಗೆ. ನಡುವೆ ಶಿವಮೊಗ್ಗಕ್ಕೆ ವರ್ಗಾವಣೆಯಾದಾಗಲೂ (2001) ಶ್ರೀನಿವಾಸ್ ಎರಡು ಮಾತನಾಡದೆ ಬಸ್ಸನ್ನೇರಿ ಆಗುಂಬೆಯತ್ತ ಹೊರಟರು. ಅಮ್ಮ ಆಸ್ಪತ್ರೆಯಲ್ಲಿ ಕೊನೆಯ ಕ್ಷಣಗಳನ್ನು ಎದುರಿಸುತ್ತಿದ್ದಾಗ ಅವರಿದ್ದುದು ಸುಳ್ಯದಲ್ಲಿ, ಕಾರ್ಯಕ್ರಮದ ನಡುವೆ. ಅವರಿಗೆ ಹೃದಯದ ಬೈಪಾಸ್ ಸರ್ಜರಿಯಾದ ಕೆಲ ಸಮಯದ ಬಳಿಕ ಫೋನ್ ಮಾಡಿ `ಹೇಗಿದ್ದೀರಿ ಎಂದರೆ ಅವರ ಉತ್ತರ: `ಈಗ ಪರವಾಗಿಲ್ಲ, ಕಾರ್ಯಕ್ರಮಕ್ಕಾಗಿ ಕೊಡಗು ಪ್ರವಾಸದಲ್ಲಿದ್ದೇನೆ! ಅವರು ಇಲ್ಲಿ ದಾಖಲಿಸಿರುವ ಘಟನೆಗಳು ಕೇವಲ ಪ್ರಾತಿನಿಧಿಕ. ಅಂಥ ಒಂದಲ್ಲ ಒಂದು ಅನುಭವ ಪ್ರತಿಯೊಂದು ಪ್ರವಾಸದಲ್ಲೂ ಆಗಿದ್ದಿದೆ. ಏಕೆಂದರೆ ಇಷ್ಟೂ ವರ್ಷ ಅವರ ಮನಸ್ಸು ಮತ್ತು ಜೀಪು ಎರಡೂ ಸುತ್ತಾಡುತ್ತಿದ್ದುದು ಹಳ್ಳಿಗಾಡಿನಲ್ಲಿ.

ಪುಸ್ತಕದ ಎರಡನೇ ಭಾಗದಲ್ಲಿ ಶ್ರೀನಿವಾಸ್ ಅವರೊಡನೆ ಒಡನಾಟ ಹೊಂದಿದ ಆತ್ಮೀಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. `ಎರಡೇ ಪ್ಯಾರಾದ ಬರಹ ಕಳಿಸಿಕೊಡಿ ಎಂದದ್ದೇ ಕೆಲವರಿಗೆ ಸಮಸ್ಯೆಯಾಯಿತು. ಯಾವುದನ್ನು ಬರೆಯಲಿ, ಯಾವುದನ್ನು ಬಿಡಲಿ?! `ಶ್ರೀನಿವಾಸ್ ಅವರು ಸಜ್ಜನರಲ್ಲಿ ಸಜ್ಜನ ಎಂದು ಕೃಷ್ಣಾನಂದ ಹೆಗ್ಡೆಯವರು ಬಣ್ಣಿಸಿದರೆ `ಅವರಿಗೆ ಶುಭ ಕೋರುವುದು ನನ್ನ ಸುಯೋಗ ಎಂದಿದ್ದಾರೆ ಖಾದ್ರಿ ಎಸ್. ಅಚ್ಯುತನ್ ಅವರು. ಎಂ.ಎನ್. ಶಂಕರ್ ಅವರು ಎಲ್ಲೇ ಭಾಷಣ ಮಾಡಲಿ, ಶ್ರೀನಿವಾಸ್ ಸುಬ್ರಹ್ಮಣ್ಯದಲ್ಲಿ ಕೇವಲ ಐದುನೂರು ರೂಪಾಯಿಯಲ್ಲಿ ನೂರಾರು ಮಂದಿಗೆ ಶಿರಾ-ಉಪ್ಪಿಟ್ಟು ವ್ಯವಸ್ಥೆಮಾಡಿದ್ದನ್ನು ನೆನಪಿಸದೆ ಮಾತು ಮುಗಿಸುವುದಿಲ್ಲ. ಇಲ್ಲೂ ಅದನ್ನು ಪ್ರಸ್ತಾಪಿಸಿದ್ದಾರೆ. ನಾಲ್ಕು ಪುಟಗಳ ಲೇಖನ ಕಳುಹಿಸಿರುವ ಅವರು ಷರಾ ಸೇರಿಸಿದ್ದಾರೆ: ಇಲ್ಲಿ ಬರೆದಿರುವ ಪ್ರತಿಯೊಂದು ಪದ, ಪ್ರತಿಯೊಂದು ಮಾತೂ ಅಕ್ಷರಶಃ ಸತ್ಯ, ಇದರಲ್ಲಿ ಒಂದಿಷ್ಟೂ ಉತ್ಪ್ರೇಕ್ಷೆ ಇಲ್ಲ. ಎಲ್ಲರ ಬರಹಗಳಲ್ಲೂ ಇದು ಸಾಮಾನ್ಯವಾಗಿ ಕಂಡುಬರುವ ಅಂಶ.

`ನಮ್ಮೆಜಮಾನರಿಗೆ ಇಲಾಖೆಯ ಕಾರ್ಯಕ್ರಮಕ್ಕೆ ಹೋಗುವುದೆಂದರೆ ಮತ್ತು ಅದರ ತಯಾರಿ ಅಂದರೆ ಏನೋ ಒಂದು ತರಹದ ಸಡಗರ. ಅದನ್ನು ಅವರಲ್ಲಿ ಇಂದಿಗೂ ಕಾಣುತ್ತಿದ್ದೇನೆ. ಯಜಮಾನರಲ್ಲಿರುವ ಹುಮ್ಮಸ್ಸು, ಆಸಕ್ತಿ ಮತ್ತು ಶ್ರದ್ಧೆ ನಮ್ಮ ಮಕ್ಕಳಲ್ಲೂ ಬಂದರೆ ನನಗಿಂತ ಪುಣ್ಯವಂತರು ಬೇರಾರೂ ಇರಲಿಕ್ಕಿಲ್ಲ. ಗುಂಡಿಬೈಲು ಶ್ರೀನಿವಾಸ್ ಅವರ ಸಂಗಾತಿ ವಿಮಲ ಅವರ ಈ ಮಾತುಗಳನ್ನು ಓದುತ್ತಿದ್ದಂತೆ ನನ್ನ ಕಣ್ಣಾಲಿಗಳು ಒದ್ದೆಯಾದವು. ಸೇವಾನಿವೃತ್ತಿಯ ದಿನ ಶ್ರೀನಿವಾಸ್ ಅವರಿಗೆ ಸಲ್ಲುವ ಅತ್ಯಂತ ಮೌಲ್ಯದ ಉಡುಗೊರೆಯೆಂದರೆ ವಿಮಲ ಅವರ ಮನದ ಮಾತು.

ನನ್ನನ್ನು ಈ ಪುಸ್ತಕ ಸಂಪಾದನೆಗೆ ಪ್ರೇರೇಪಿಸಿದ ಗುಂಡಿಬೈಲು ಶ್ರೀನಿವಾಸ್ ಅವರ ಅಪ್ಪಟ ವ್ಯಕ್ತಿತ್ವಕ್ಕೆ ಕೈಮುಗಿದು ನಮಿಸುವೆ.

ಶಿವರಾಂ ಪೈಲೂರು

ದೆಹಲಿ/ಫೆಬ್ರವರಿ 20, 2010

0 comments:

Post a Comment