ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ


ಕೋಟೆಗಳನ್ನು ನೋಡಿದಾಗ ಒಂದು ಗಂಭೀರತೆಯೂ ಗೋಚರವಾಗುತ್ತದೆ. ಏಕೆಂದರೆ ಕೋಟೆಯೆಂದರೆ ಗಂಭೀರತೆಯದ್ದೇ ಇನ್ನೊಂದು ಸಂಕೇತಗಳು. ಕೋಟೆಗಳು ಹಲವು ವಿಶೇಷತೆಗಳ ಗೂಡುಗಳು. ಅವು ನಿಗೂಢ. ಕಲ್ಲುಗಳು ಹೇಳುವ ಕಥೆಗಳು ಇತಿಹಾಸದ ಪ್ರತೀಕಗಳು.
ಅವು ಎದೆಯುಬ್ಬಿಸಿ ನಿಂತಂತೆ ಕಾಣುವ ಕಟ್ಟಡಗಳಷ್ಟೇ ಅಲ್ಲದೆ ಸಹಸ್ರ ಸಹಸ್ರ ಶೌರ್ಯದ ಕಥೆಯನ್ನು ಒಳಗೆ ಬಚ್ಚಿಟ್ಟ್ಟುಕೊಂಡಿರುತ್ತವೆ. ಅವುಗಳ ಒಳಸುಳಿಯೊಳಗೆ, ಸುರಂಗ ಮಾರ್ಗಗಳ ಅಂತರಾಳಗಳೊಳಗೆ, ಕತ್ತಲ ಕೋಣೆಗಳ ಸೆರೆಮನೆಗಳೊಳಗೆ ಅಸ್ಪಷ್ಟವಾದ, ಅಗೋಚರವಾದ ಮಿಡಿತವೊಂದು ಇನ್ನೂ ಇದ್ದಂತೆ ಕಂಡುಬರುತ್ತವೆ.

ಏಕೆಂದರೆ ಕೋಟೆಗಳೊಳಗೊಂದು ಇತಿಹಾಸವಿರುತ್ತವೆ. ವೀರವಾಣಿಗಳಿರುತ್ತವೆ. ಬಹುಶಃ ವೀರತೆಯನ್ನು ಸೂಚಿಸದ ಕೋಟೆ - ಕೊತ್ತಲಗಳೇ ಜಗತ್ತಿನಲ್ಲಿಲ್ಲ. ಝಾನ್ಸಿಯದ್ದು ಅಂಥಾ ಒಂದು ಕೋಟೆ. ಅದು ಕೋಟೆ ಎಂಬ ಶಬ್ದ ಅನ್ವರ್ಥವಾಗುವಂಥ ಕೋಟೆ. ಅಲ್ಲಿ ಝಾನ್ಸಿ ಎಂಬ ಪದ ಎಷ್ಟು ಪವಿತ್ರವೊ ಲಕ್ಷ್ಮೀ ಎಂಬ ಶಬ್ದವೂ ಅಷ್ಟೇ ಪವಿತ್ರ. ಕೊನೆಗೆ ಝಾನ್ಸಿ ಮತ್ತು ಲಕ್ಷ್ಮೀ ಎಂಬೆರಡೂ ಭಾವನೆಗಳನ್ನು ಬಿಡಿಬಿಡಿಯಾಗಿಸಲು ಸಾಧ್ಯವೇ ಇಲ್ಲ. ಏಕೆಂದರೆ ಝಾನ್ಸಿ ಲಕ್ಷ್ಮೀಯದ್ದು, ಲಕ್ಷ್ಮೀಝಾನ್ಸಿಯವಳು. ಮೇರಿ ಝಾನ್ಸಿಕೋ ಕಭಿ ನಹೀ ದೂಂಗೀ ಎಂಬ ಘೋಷಣೆಯನ್ನು ರಾಣಿ ಲಕ್ಷ್ಮೀಬಾಯಿ ಇದೇ ಕೋಟೆಯಲ್ಲಿ ಹಾಕಿದ್ದಳು. ಹಾಗಾಗಿ ಇತಿಹಾಸದ ಆಸಕ್ತಿ ಹುಟ್ಟಿಸುವವರಿಗೆ ಇಂದಿಗೂ ಝಾನ್ಸಿ ಎಂದರೆ ಲಕ್ಷ್ಮೀ ಎಂದ ಹಾಗೆಯೇ ಆಗುತ್ತದೆ.1857ರ ಕ್ರಾಂತಿಯ ಮಹತ್ತ್ವದ ಘಟನೆಗಳು ಝಾನ್ಸಿಯಲ್ಲಿ ನಡೆದವು. ಧೂರ್ತಶಕ್ತಿ ಮತ್ತು ಮಾತೃ ಶಕ್ತಿಗಳ ನಡುವಣ ಸಮರವೆಂದೇ ಕಂಡು ಬರುವ ಝಾನ್ಸಿಯ ಕಥಾನಕ ಹಲವು ಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾಯಿತು. ಪುಟ್ಟ ಸಂಸ್ಥಾನವೊಂದರ ರಾಣಿಯ ಬಲಿದಾನ ಆಂಗ್ಲ ಆಡಳಿತ ಅಂದು ಎದುರಿಸಿದ್ದ ಪರಿಸ್ಥಿತಿಗಳಿಗೆ ಕನ್ನಡಿಯಾಗಿ ನಿಲ್ಲುತ್ತದೆ. 57ರ ಕ್ರಾಂತಿಯ ಅನಂತರ ಇದೇ ಪರ್ಯಾಯ ಖಂಡದ ಸ್ಥಿತಿಗತಿಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಝಾನ್ಸಿಯೂ ಬದಲಾಗಿದೆ. ಆದರೆ ಝಾನ್ಸಿಯ ಕೋಟೆ ಮಾತ್ರ 1857ರ ಅನಂತರವೂ ಹಾಗೆಯೇ ನಿಂತಿದೆ. ಕೋಟೆಯೊಳಗಿನ್ನೂ ನೆನಪುಗಳಿವೆ. ನೆನಪುಗಳನ್ನೇ ನಾಶಪಡಿಸಿದ ಸಾಕ್ಷಿಗಳೂ ನಿಚ್ಚಳವಾಗಿ ಗೋಚರವಾಗಿವೆ. ಝಾನ್ಸಿಯ ಕೊತ್ತಲದಲ್ಲಿ ಎಷ್ಟೆಲ್ಲಾ ಪತಾಕೆಗಳು ಪಟಪಟನೆ ಹಾರಿ ಇಳಿದುಹೋದುವು.

ಬುಂದೇಲದ ಅರಸ ಬೀರ್ಸಿಂಗ್ ಜುದೇವ್ 1613ರಲ್ಲಿ ಕಟ್ಟಿದ ಕೋಟೆ ಅನಂತರ ಮೊಗಲರ, ಮರಾಠರ, ಕೊನೆಗೆ ಬ್ರಿಟಿಷರ ವಶವಾಗುತ್ತಾ ಝಾನ್ಸಿಯ ಇತಿಹಾಸವನ್ನು ಬದಲಿಸುತ್ತಾ ಬಂತು. 16 ಎಕರೆ ವಿಸ್ತೀರ್ಣದ ಈ ಕೋಟೆಯಲ್ಲಿ ಖಂಡೇರಾವ್ ದ್ವಾರ, ಉನ್ನಾವ್ ದ್ವಾರ. ಲಕ್ಷ್ಮೀ ಸಾಗರ ದ್ವಾರ ಮುಂತಾದ ಹತ್ತು ದ್ವಾರಗಳಿವೆ. ಝಾನ್ಸಿ ಪಟ್ಟಣದ ನಡುಭಾಗದಲ್ಲಿ ಎದೆಯುಬ್ಬಿಸಿ ನಿಂತಿರುವ ಕೋಟೆ ಹೊರಗಿಂದ ನೋಡುತ್ತಲೆ ಇದರೊಳಗೆ ಏನೋ ಇದೆ. ಏನನ್ನೋ ಬಚ್ಚಿಟ್ಟುಕೊಂಡಿದೆ ಎಂದೇ ಅನಿಸುತ್ತದೆ. ಕೋಟೆಯ ಒಳನುಗ್ಗಿದಂತೆಯೇ ನೋಡುಗರು ಒಂದು ಧ್ಯಾನಸ್ಥ ಸ್ಥಿತಿಗೆ ಇಳಿದು ಬಿಡುತ್ತಾರೆ. ಕೋಟೆಯೊಳಗೆ ಹೊರ ಪ್ರಪಂಚ ಎಲ್ಲೋ ದೂರದ ಲೋಕ. ಕೋಟೆಯೊಳಗೆ ಇತಿಹಾಸವಷ್ಟೇ ಸತ್ಯ. ಆಧುನಿಕ ಬದುಕಿನ ಸರಕುಗಳಿಗಿಲ್ಲಿ ಆಸ್ಪದವಿಲ್ಲ. ಕೋಟೆಗೆ ನುಗ್ಗಿದೊಡನೆಯೇ ಖಡಕ್ ಬಿಜಲಿ ಮತ್ತು ಭವಾನಿ ಶಂಕರ್ ಎಂಬ ಎರಡು ಬೃಹತ್ ತೋಪುಗಳು ಸಿಮೆಂಟ್ ಕಟ್ಟೆಯ ಮೇಲೆ ಪ್ರತಿಷ್ಠಾಪಿತವಾಗಿರುವುದು ದರ್ಶನವಾಗುತ್ತದೆ. ಯಾವ ವೀರ ಯೋಧರು ಅದನ್ನು ಬಳಸುತ್ತಿದ್ದರೋ ಏನೋ, ಅದಿಂದು ಮ್ಯೂಸಿಯಂ ಪೀಸ್ನಂತೆ ಅನಾಥವಾಗಿ ಬಿದ್ದಂತೆ ಭಾಸವಾಗುತ್ತದೆ.ಮುಂದೆ ನಡೆದರೆ ದ್ವಾರಪಾಲಕನಿಲ್ಲದ ದ್ವಾರದೊಳಗೆ ಎರಡು ಕುಶಾಲ ತೋಪುಗಳು ಕಾಣಸಿಗುತ್ತವೆ. ಅವೂ ಸಿಡಿಯದೆ ಶತಮಾನಗಳೇ ಸಂದು ಹೋದುವು. ಗಂಗಾಧರ ಬಾಬಾ ಸಾಹೇಬ ಪೇಶ್ವೆ ಎಷ್ಟು ಶ್ರದ್ಧೆಯಿಂದ ಇದನ್ನು ತನ್ನ ಮದುವೆಗೆ ಸಿದ್ಧಪಡಿಸಿದ್ದನೋ, ಹೊಳಪುಗೊಳಿಸಿದ್ದನೋ ಏನೋ. ಅನಂತರ ಹಲವು ವರ್ಷ ಮರಾಠರ ಪೇಶ್ವೆಗಳಿಗೆ, ಬಂದೇಲದ ಅರಸರಿಗೆ, ಗೆಳೆಯ ಅರಸರಿಗೆಲ್ಲಾ ಈ ಕುಶಾಲ ತೋಪುಗಳು ಮೊಳಗಿದವು. ಆತನ ಕಾಲಾನಂತರ ಪತ್ನಿ ಲಕ್ಷ್ಮೀಬಾಯಿಯ ಕಾಲಾವಧಿಯಲ್ಲಿ ಕುಶಾಲ ತೋಪುಗಳು ಸಿಡಿಯುವ ಪ್ರಸಂಗವೇ ಬರಲಿಲ್ಲ. ಆಗಿನ ಕಾಲದಲ್ಲಿ ಸಿಡಿದದ್ದೆಲ್ಲಾ ಖಡಕ್ ಬಿಜಿಲಿ ಮತ್ತು ಭವಾನಿ ಶಂಕರ್ ತೋಪುಗಳು ಮಾತ್ರ. ದತ್ತಕ ಹಕ್ಕಿನ ಕಾನೂನು ನಾಡಿನ ಕುಶಾಲತೆಯನ್ನೇ ನುಂಗಿ ಹಾಕಿತ್ತು.

ಕೋಟೆಯೊಳಗೊಂದು ಕೋರ್ಟಿದೆ. ಕಾನ್ಪುರ, ಫೈಜಾಬಾದ್ ಮತ್ತು ಔದ್ಗಳ ನಡುವಿನ ಜನರಿಗೆ ರಾಜಾ ಗಂಗಾಧರ ಪೇಶ್ವೆಯೂ, ರಾಣಿ ಲಕ್ಷ್ಮೀಬಾಯಿಯೂ ನ್ಯಾಯದಾನ ಮಾಡಿದ್ದ ಕೋರ್ಟ್ ಕೋಟೆಯ ಹೃದಯಭಾಗದಲ್ಲಿದೆ. ರಾಣಿ ಇಲ್ಲದ ಮೇಲೆ ನ್ಯಾಯವೇನು ಉಳಿದೀತು ಝಾನ್ಸಿಯಲ್ಲಿ. ರಾಣಿಯ ಅನಂತರ ಬ್ರಿಟಿಷರಿಗೆ ಕೋರ್ಟ್ ನ ಅವಶ್ಯಕತೆಯೇ ಬೀಳಲಿಲ್ಲ. ಹಾಗಾಗಿ 1896ರಲ್ಲಿ ಕೋರ್ಟ್ ನೀರಿನ ಟ್ಯಾಂಕ್ ಆಯಿತು. ಹಾಗೆಯೇ ರಾಣಿಯ ಸಖಿಯರ ಕಲರವದಿಂದ, ಅಂತಪುರದ ಸ್ತ್ರೀಯರಿಂದ ಗಿಜಿಗಿಟ್ಟುತ್ತಿದ್ದ ನಾಲ್ಕು ಅಂತಸ್ತಿನ ರಾಣಿವಾಸ ಇಂದು ಬಾವಲಿಗಳ ತಾಣ.

ರಾಣಿವಾಸದ ಒಳಗೋಡೆಗಳು ಪ್ರಜೆಗಳೇ ಪ್ರಭುಗಳಾದ ಹೊತ್ತಿನಿಂದ ಸುಣ್ಣ ಬಣ್ಣವನ್ನೇ ಕಾಣದೆ ಮಾಸಲು ಮಾಸಲಾಗಿದೆ. 1613ರಲ್ಲಿ ಸ್ಥಾಪನೆಯಾದ ಈ ಮಹಲು ಸತತ ಹೊಡೆತ ಸಹಿಸಿಯೂ, ಸ್ವತಃ ರಾಣಿಯನ್ನು ಕೇಂದ್ರೀಕರಿಸಿ ಧಾಳಿಗಳಾದರೂ, ರಾಣಿಯೇ ಇಲ್ಲದಿದ್ದರೂ ಇವತ್ತಿಗೂ ಉಳಿದುಕೊಂಡದ್ದು ವಿಶೇಷವಾಗಿ ಕಾಣುತ್ತದೆ. ರಾಣಿವಾಸದ ಎದುರೇ ಉದ್ದಕ್ಕೆ ಉದ್ಯಾನದಂತೆ ಕಾಣುವ ಹಸಿರು ಅಂಗಣ. ಅದರ ಅಂಚಿಗೆ ಸೈನಿಕರಿಲ್ಲದ ಸೈನಿಕರ ಬಿಡಾರ. ಆ ಬಿಡಾರದ ಗೋಡೆಯನ್ನೇರಿ ನೋಡಿದರೆ ದಕ್ಷಿಣ ದಿಕ್ಕಿನಲ್ಲಿ ಫರ್ಲಾಂಗು ದೂರದಲ್ಲೊಂದು ಕೊಳ. ಲಕ್ಷ್ಮೀಬಾಯಿ ಪ್ರಾತಃಕಾಲ ಮಿಂದೇಳುತ್ತಿದ್ದ ಕೊಳದಲ್ಲೀಗ ಝಾನ್ಸಿ ಪೋರರ ಸ್ವಿಮ್ಮಿಂಗ್ ಕಲಿಯುವ ದೃಶ್ಯ ಮನಸ್ಸನ್ನು ಕೊಂಚ ಇತಿಹಾಸ ವಿಮುಖವನ್ನಾಗಿ ಮಾಡುತ್ತವೆ.

ಕೋಟೆಯ ಉತ್ತರದಿಕ್ಕಿನಲ್ಲಿ ಹವಾಮಹಲು ಗಮನ ಸೆಳೆಯುವ ಪ್ರದೇಶ. ಕೋಟೆಯ ಎತ್ತರದ ಭಾಗವೂ ಸಹ ಇದೇ. ಇಲ್ಲಿನ ಹವಾಮಹಲುಗಳು ಉತ್ತರ ಪ್ರದೇಶದ ಸೆಕೆಯಲ್ಲೂ ಚಳಿಗಾಲದ ತಂಪನ್ನು ನೀಡುತ್ತವೆ. ರಾಣಿ ಇಲ್ಲದ ಮೇಲೆ ಬ್ರಿಟಿಷರು ಇಂಥ ಹವಾಮಹಲುಗಳಲ್ಲಿ ಒಂದನ್ನು ತಮ್ಮ ಅಡುಗೆ ಕೋಣೆಯನ್ನಾಗಿ ಮಾಡಿಕೊಂಡರು. ಬ್ರಿಟಿಷರ ದಾಸ್ಯವೋ ಅಥವಾ ತಂಪು ಹವೆಯ ಅನಗತ್ಯವೋ. ಅಲ್ಲಿ ಅಡುಗೆ ಕೋಣೆ ಇರುವುದಂತೂ ರಾಜಗಾಂಭೀರ್ಯಕ್ಕೆ ಧಕ್ಕೆಯಾದಂತೆನಿಸುತ್ತದೆ. ಹಾಗೆಯೇ ರಾಣಿಯ ಅಮೋಧ ಉದ್ಯಾನವನ್ನು ಬ್ರಿಟಿಷರು ಶಸ್ತ್ರಗಾರವನ್ನಾಗಿ ಮಾಡಿಕೊಂಡರು. ಕೋಟೆಯ ಅದೇ ಭಾಗದ ಮತ್ತೊಂದು ಹವಾಮಹಲನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಹಿಂದೆ ಇದೇ ಮಹಲಿನ ಬಾಲ್ಕನಿಯಲ್ಲಿ ಕೂತು ರಾಜಮಹಾರಾಜರು ಬಯಲು ಸಭಾಂಗಣದಲ್ಲಿ ನಡೆಯುತ್ತಿದ್ದ ಆಸ್ಥಾನ ನರ್ತಕಿಯರ ನೃತ್ಯವನ್ನು ವೀಕ್ಷಿಸುತ್ತಿದ್ದರಂತೆ.

1857ರ ಹೊತ್ತಲ್ಲಿ ಖ್ಯಾತ ನರ್ತಕಿಯರಾದ ಗಜರಾಬಾಯಿ ಮತ್ತು ಮೋತಿಬಾಯಿಯರು ಇದೇ ಬಯಲು ರಂಗಮಂದಿರ ಭಾಡಾಧರೀ ಛತ್ನಲ್ಲಿ ನೃತ್ಯ ಮಾಡುತ್ತಿದ್ದರಂತೆ. ಕ್ರಾಂತಿಯ ಸಮಯದಲ್ಲಿ ಅವರಿಬ್ಬರೂ ನೃತ್ಯಕ್ಕೆ ಮಂಗಳ ಹಾಡಿ ಸೇನೆಗೆ ಸೇರ್ಪಡೆಗೊಂಡರಂತೆ. ಅವರಲ್ಲಿ ಮೋತಿ ಬಾಯಿಯಂತೂ ಭವಾನಿ ಶಂಕರ್ ತೋಪನ್ನು ಸ್ವತಃ ಚಲಾಯಿಸುತ್ತಿದ್ದಳಂತೆ. ರಾಣಿ ಆಳಿದ ಕೋಟೆಯಲ್ಲಿ ಇದೇನೂ ಆಕಸ್ಮಿಕ ಎನಿಸುವುದಿಲ್ಲ.

ಕೋಟೆಯ ಮತ್ತೊಂದು ವಿಶೇಷತೆಯೆಂದರೆ 400 ವರ್ಷದ ಹಿಂದಿನ ಶಿವಾಲಯ. ಕೋಟೆಯ ತಳಭಾಗದಲ್ಲಿರುವ ದೇಗುಲದ ಪ್ರದೇಶವೇ ವಿಶಿಷ್ಟವಾದದ್ದು. ಎತ್ತರದ ಗುಡ್ಡದ ಮೇಲಿರುವ ಕೋಟೆಯಲ್ಲಿ ಶಿವನದ್ದು ಕೋಟೆಯ ಕೆಳಭಾಗದ ಸ್ಥಾನ. ಕೋಟೆಯ ದಕ್ಷಿಣ ಭಾಗದಿಂದ ನಿಂತು ಸುತ್ತಲೂ ಕಣ್ಣು ಹಾಯಿಸಿದರೆ ಝಾನ್ಸಿ ಪಟ್ಟಣದ ಅರ್ಧಭಾಗ ಕಾಣುವುದರ ಜೊತೆಗೆ ಕಣ್ಣು ಕೆಳಹಾಯಿಸಿದರೆ ವಿಶಿಷ್ಟ ಶೈಲಿಯ ಶಿವಾಲಯವೂ ಝಾನ್ಸಿಗೆ ತಾನು ಸರಿಸಮಾನನೋ ಎಂಬಂತೆ ಕಾಣುತ್ತದೆ. ಆಕರ್ಷಕ ಗ್ರಾನೈಟ್ ಶಿಲೆಯ ಈ ಶಿವಲಿಂಗವನ್ನು ಮರಾಠರ ಅರಸ ನರುಶಂಕರನ ಕಾಲದಲ್ಲಿ ನಿರ್ಮಿಸಲಾಯಿತು. 1721ರಿಂದ 30ರ ವರೆಗೆ ಆಳ್ವಿಕೆ ನಡೆಸಿದ ಈ ಅರಸನ ಕಾಲದಲ್ಲಿ ಝಾನ್ಸಿ ಕೋಟೆ ಅಮೂಲಾಗ್ರವಾಗಿ ದುರಸ್ತಿಗೊಂಡಿತು. ಬುಂದೇಲ್ ಮತ್ತು ಮರಾಠಾ ಶೈಲಿಯಲ್ಲಿ ನಿರ್ಮಾಣವಾದ ಈ ದೇವಾಲಯದ ಶಿವಲಿಂಗವನ್ನು ಲಕ್ಷ್ಮೀಬಾಯಿ ದಿನನಿತ್ಯ ಸ್ವತಃ ಪೂಜಿಸುತ್ತಿದ್ದಳು. ಅಂದು ರಾಣಿ ಅರ್ಚಿಸುತ್ತಿದ್ದ ಶಿವ ಇಂದು ಯಾರೂ ಮುಟ್ಟಿ ಪೂಜಿಸಬಲ್ಲ ದೇವನಾಗಿ ಉಳಿದಿದ್ದಾನೆ.

ಕೇವಲ ರಾಣಿಯ ಒಡೆತನದಲ್ಲಿ ಇದ್ದ ಕಾರಣಕ್ಕೆ ಝಾನ್ಸಿಯ ಕೋಟೆ ವಿಶೇಷವೆನಿಸುವುದಿಲ್ಲ. ಝಾನ್ಸಿಯ ಕೋಟೆಗಳು ಹೇಳುವ ಕಥೆಗಳು ಅವುಗಳನ್ನು ಒಂದು ವಿಶಿಷ್ಟ ಸ್ಥಾನದಲ್ಲಿ ನಿಲ್ಲಿಸುತ್ತವೆ. ಕೇವಲ ಅರಮನೆ, ಸೆರೆಮನೆ, ಕುದುರೆಲಾಯ, ಫಾಶೀಮನೆಗಳಿದ್ದ ಕಾರಣಕ್ಕೆ ಕೋಟೆ ವಿಶೇಷ ಎನ್ನುವಂತಿದ್ದರೆ ಝಾನ್ಸಿ ಕೋಟೆಯೂ ಇತರ ಎಷ್ಟೋ ಕೋಟೆಗಳ ಜೊತೆ ಒಂದಾಗಿ ಉಳಿದು ಬಿಡುತ್ತಿತ್ತು. ಆದರೆ ಝಾನ್ಸಿಯಲ್ಲಿದ್ದವಳು ರಾಣಿ ಲಕ್ಷ್ಮೀಬಾಯಿ. ಅಲ್ಲೇ ಸೈನಿಕರ ಬಿಡಾರವಿದ್ದ ಒಂದು ಸ್ಥಳದಲ್ಲಿ ಒಂದು ಸಮಾಧಿಯೂ ರಾಣಿಯ ಗಾಥೆಯನ್ನು ಮತ್ತಷ್ಟು ವಿಸ್ತರಿಸಿ ಹೇಳುತ್ತವೆ. ಸಮಾಧಿಯ ಪಕ್ಕದಲ್ಲಿ ಹೀಗೆ ಫಲಕವನ್ನೂ ನೇತು ಹಾಕಲಾಗಿದೆ. ಗನ್ನರ್ ಗುಲಾಮ್ ಗೌಸ್ ಖಾನ್, ಮೋತಿಬಾಯಿ ಮತ್ತು ಖುಧಾಭಕ್ಷ್ ಅವರನ್ನು 1858ರ ಜೂನ್ 4ರಂದು ಇಲ್ಲಿ ಸಮಾಧಿ ಮಾಡಲಾಗಿದೆ ಎಂದು ಬರೆಯಲಾಗಿದೆ. ಸ್ವಾತಂತ್ರ್ಯದ ಕನಸು ಕಂಡಿದ್ದ ಜೀವಗಳು ಸಮಾಧಿಯಾಗಿ ಶತಮಾನಗಳು ಕಳೆದಿವೆ.ಹಾಗೆ ಸ್ವಾತಂತ್ರ್ಯದ ಕನಸು ಕಂಡಿದ್ದ ಲಕ್ಷ್ಮೀ ಬಾಯಿ ಬ್ರಿಟಿಷರ ಎದುರು ಸೆಡ್ಡು ಹೊಡೆದು ನಿಂತವಳು. ಕೆಚ್ಚಿನಿಂದಲೇ ಝಾನ್ಸಿಯನ್ನು ರೂಪಿಸಿದವಳು. ತನ್ನದೇ ರಣನೀತಿಯನ್ನು ರೂಪಿಸಿಕೊಂಡವಳು. ಬೋರ್ಕರ್, ಹ್ಯೂರೋಸ್ರ ದಾಳಿಯ ಸಂದರ್ಭದಲ್ಲಿ ಬುದ್ಧಿಮತ್ತೆಯ ಮತ್ತು ಜಗತ್ತಿನ ಅತಿ ವಿರಳ ಯುದ್ಧ ನಿರ್ಧಾರಗಳನ್ನು ಕೈಗೊಂಡವಳು. ಅಂಥ ಅಸಂಖ್ಯ ಸಾಕ್ಷಿಗಳು ಝಾನ್ಸಿ ಕೋಟೆಯಲ್ಲಿ ಸಿಗುತ್ತವೆ. ಬ್ರಿಟಿಷರು ಕೋಟೆಯನ್ನು ಮುತ್ತಿದಾಗ ಲಕ್ಷ್ಮೀ ಬೆನ್ನಿಗೆ ದಾಮೋದರ ರಾಯನನ್ನು ಕಟ್ಟಿಕೊಂಡು ಕುದುರೆ ಏರಿ ಕೋಟೆಯಿಂದಲೇ ಹಾರಿ ಗ್ವಾಲಿಯರಿಗೆ ಪಲಾಯನ ಮಾಡಿದ ಜಾಗ ಮೈ ನವಿರೇಳಿಸುತ್ತವೆ. ಇತಿಹಾಸ ಮತ್ತೆ ಮರೆತು ಹೋಗುತ್ತವೆ. ಹಲವು ಗುಪ್ತ ಮಾರ್ಗಗಳು ಕೋಟೆಯುದ್ದಕ್ಕೂ ಸಿಗುತ್ತವೆ. ಇಂದು ಅವೆಲ್ಲವನ್ನೂ ಮುಚ್ಚಲಾಗಿದೆ.

ಕೋಟೆ ದರ್ಶಿಸುವವರಿಗೆ ಕೊಂಚ ಇತಿಹಾಸದ ಬಗ್ಗೆ ಆಸಕ್ತಿ ಇದ್ದದ್ದೇ ಆದರೆ ಕೋಟೆಯೊಳಗೆ ಚಮಣಾಜಿ ಅಪ್ಪಾ ಸಾಹೇಬ ಪೇಶ್ವೆಯ ಆಜ್ಞೆ, ಗಂಗಾಧರನ ಆಳುಗಳು, ಸಖಿಯರ ನಗು, ಫೈಜಾಬಾದಿಗೆ ಹೋದ ಗುಪ್ತಚರನ ನಿರೀಕ್ಷೆಯಲ್ಲಿರುವ ಸೇನಾ ಪ್ರಮುಖನ ಕಾತರ, ತೋಪುಖಾನೆಯನ್ನು ಉಜ್ಜಿ ಹೊಳಪಿಸುತ್ತಿರುವ ಕೆಲಸಗಾರರು ಎಲ್ಲವನ್ನೂ ಕೇಳಬಹುದು, ನೋಡಬಹುದು, ಅನುಭವಿಸಬಹುದು. ಯೋಧನ ಧ್ವನಿಯ ಸುಂದರ ಸ್ತ್ರೀಯು ಬ್ರಿಟಿಷ್ ಮೇಜರ್ ಎಲಿಸನಿಗೆ ಮೇರಿ ಝಾನ್ಸಿಕೋ ಕಭೀ ನಹೀ ದೂಂಗೀ ಎಂದು ಇಲ್ಲೇ ಎಲ್ಲೋ ಗುಡುಗಿದ್ದಿರಬಹುದು ಎಂಬ ಭಾವನೆಯಿಂದ ಕಣ್ಣುಗಳು ಕೋಟೆಯ ಬುರುಜುಗಳ ಮೇಗಡೆ, ಧ್ವಜಸ್ತಂಭದ ಕೆಳಗಡೆ ಭಾರಾಗಾಂವ್ ದರವಾಜಾದ ಎದುರುಗಡೆ ಹುಡುಕತೊಡಗಬಹುದು.

ಸಂತೋಷ್ ತಮ್ಮಯ್ಯ

ಸಂಪಾದಕರು, ಅಸೀಮಾ ಕನ್ನಡ ಮಾಸಿಕ, ಮಂಗಳೂರು

1 comments:

anu said...

jhansiya lakshmiya kaalakke kondoydu kotyeyannu anubhavisuvante maadiddikkaagi dhanyavaadagalu....

Post a Comment