ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ


``ಅಚ್ಚರಿಯೇ...ಹೀಗೂ ಉಂಟೇ... ಇದೇನಿದು...'' ಎಂಬಿತ್ಯಾದಿ ಭಾವನೆಗಳು ಮನದಲ್ಲಿ ಮೂಡುವಂತೆ , ಯಕ್ಷರಂಗದಲ್ಲೊಂದು ಹೊಸಛಾಪು ಮೂಡಿಸಿದವರು ಮಂಟಪಪ್ರಭಾಕರ ಉಪಾಧ್ಯಾಯರು.
ಕರ್ನಾಟಕದ ಗಂಡುಕಲೆಯೆಂದೇ ಖ್ಯಾತಿ ಪಡೆದ ಯಕ್ಷಗಾನವನ್ನು ಒಂದು ವಿನೂತನ ರೀತಿಯಲ್ಲಿ ಜನತೆಯ ಮನ ಮುಟ್ಟುವಂತೆ ,ಹೃದಯ ತಟ್ಟುವಂತೆ ಪ್ರದರ್ಶನ ನೀಡುವ ಮೂಲಕ ಜನಮಾನಸದಲ್ಲಿ ನೆಲೆಯೂರಿದ್ದಾರೆ ಈ ಮಂಟಪ ಉಪಾಧ್ಯಾಯರು. ನಾಲ್ಕೈದು ಶತಮಾನಗಳ ಚರಿತ್ರೆಯನ್ನು ಹೊಂದಿದ ಯಕ್ಷಗಾನದಲ್ಲಿ ಇಂದಿಗೆ ಹತ್ತು ಹಲವು ಪ್ರಯೋಗಗಳು ನಿರಂತರವಾಗಿ ನಡೆದಿದೆ ನಡೆಯುತ್ತಿದೆ. ಯಕ್ಷಗಾನದ ವಿಭಿನ್ನ ಪ್ರಯೋಗಗಳನ್ನವಲೋಕಿಸಿದಾಗ ಕಾಣಸಿಗುವ ಬಹುಮುಖ್ಯ ಅಂಶವೆಂದರೆ `ಏಕವ್ಯಕ್ತಿ' ಯಕ್ಷಗಾನ.ಈ ಏಕವ್ಯಕ್ತಿ ಯಕ್ಷಗಾನದ ಪ್ರಯೋಗ ಕಳೆದ ಶತಮಾನದ ಐವತ್ತರ ದಶಕದಲ್ಲಿ ಪ್ರಾರಂಭಗೊಂಡರೂ ಅದಕ್ಕೊಂದು ಖಚಿತ ರೂಪ ನೀಡಿದ ಹಿರಿಮೆ ಶತಾವಧಾನಿ ಆರ್. ಗಣೇಶ್ ಅವರಿಗೆ ಸಲ್ಲಬೇಕು.
ಅವರ ಕಲ್ಪನೆ ಯಶಸ್ವಿಯಾಗಿ ಜನಮನಕ್ಕೆ ತಲುಪುವಲ್ಲಿ ಪ್ರಬುದ್ಧ ಕಲಾವಿದ ಮಂಟಪ ಪ್ರಭಾಕರ ಉಪಾಧ್ಯಾಯರ ಕೊಡುಗೆ ಗಮನಾರ್ಹ.
ಹತ್ತು ವರ್ಷಗಳ ಹಿಂದೆ ಭಾಮಿನಿಯಿಂದ ಮೊದಲ್ಗೊಂಡು ನಿರಂತರವಾಗಿ 999ಪ್ರದರ್ಶನ ನೀಡಿದ ಮಂಟಪರು ತಮ್ಮ `ಸಾವಿರನೇ' ಪ್ರದರ್ಶನವನ್ನು ಕಲಾಕಾಶಿ ಮೂಡಬಿದಿರೆಯಲ್ಲಿ ನೀಡಲಿದ್ದಾರೆ. ತನ್ಮೂಲಕ ನಿರಂತರ ಕಲೆ, ಸಾಹಿತ್ಯ,ಶಿಕ್ಷಣದಲ್ಲಿ ಖ್ಯಾತಿ ಪಡೆದ ಮೂಡಬಿದಿರೆಯಲ್ಲಿ ಮತ್ತೊಂದು ದಾಖಲೆ ನಿರ್ಮಾಣಗೊಳ್ಳಲಿದೆ
ಮಂಟಪರ ಏಕವ್ಯಕ್ತಿ ಯಕ್ಷಗಾನದ ಅಭಿಯಾನದಲ್ಲಿ ಕೃಷ್ಣಾರ್ಪಣ, ಯಕ್ಷದರ್ಪಣ, ವೇಣು ವಿಸರ್ಜನ, ಯಕ್ಷಕದಂಬ, ಜಾನಕೀ ಜೀವನ, ಯಕ್ಷನವೋದಯ, ಪ್ರಣಯ(ವಂ)ಚಿತೆ ಹಾಗೂ ದಾಸ ದೀಪಾಂಜಲೀ ಮೊದಲಾದ ಮಜಲುಗಳಲ್ಲಿ ವಿಸ್ತರಿಸಿಕೊಂಡು ಇಡೀ ರಾಜ್ಯಾದ್ಯಂತ ಕಲಾಸಕ್ತರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.


ವಿದ್ವಾನ್ ಗಣಪತಿ ಭಟ್ಟರ ಭಾಗವತಿಕೆ, ಅನಂತ ಪದ್ಮನಾಭ ಪಾಟಕರ ಮದ್ದಲೆ, ಕೃಷ್ಣಯಾಜಿಯವರ ಚೆಂಡೆ ಏಕವ್ಯಕ್ತಿ ಯಕ್ಷಗಾನದ ಹಿಮ್ಮೇಳದ ಪ್ರಮುಖ ಪಾತ್ರವಹಿಸುತ್ತಿದೆ.
ಕಲಾಪ್ರತಿಭೆ:
ಉಡುಪಿ ಜಿಲ್ಲೆಯ ಪಾರಂಪಳ್ಳಿಯವರಾದ ಮಂಟಪರು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ತರಬೇತಿ ಪಡೆದರು.ಕಮಲಶಿಲೆ, ಪೆರ್ಡೂರು , ಇಡಗುಂಜಿ ಮೇಳಗಳಲ್ಲಿ ಸ್ತ್ರೀವೇಷಧಾರಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮುಂದೆ ನಾಲ್ಕು ವರ್ಷಗಳ ಕಾಲ ತಿರುಗಾಟ ಮಾಡಿದರು.ಸಮಕಾಲೀನ ಯಕ್ಷದಿಗ್ಗಜರಾದ ದಿ.ಕೆರೆಮನೆ ಮಹಾಬಲ ಹೆಗಡೆ , ದಿ.ಕೆರೆಮನೆ ಶಂಭು ಹೆಗಡೆ, ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಇವರ ಪ್ರಸಿದ್ಧ ಪಾತ್ರಗಳಿಗೆ ಸ್ತ್ರೀವೇಷ ಮಾಡಿ ಯಕ್ಷರಸಿಕರ ಮನರಂಜಿಸಿದರು.
ಏಕವ್ಯಕ್ತಿಯಕ್ಷಗಾನದ ಮೂಲಕ ಕಲಾಭಿವ್ಯಕ್ತಿಯ ಹೊಸ ಸಾಧ್ಯತೆಯನ್ನು ಪರಿಣಾಮಕಾರಿಯಾಗಿ ಕೊಟ್ಟವರು ಈ ಮಂಟಪರು. ಶ್ರದ್ಧೆ , ಪರಿಶ್ರಮ, ಪಾತ್ರ ತನ್ಮಯತೆಯಿಂದ ಸ್ಥಾಯೀ ಸಂಚಾರಿ ಭಾವಗಳ ಚಿತ್ರವಿನ್ಯಾಸ ನಿಮರ್ಿಸುತ್ತಾ ರಂಗವನ್ನು ರಂಗೇರಿಸಿದರು.
ಪ್ರಸ್ತುತ ಉದ್ಯಮಿಯಾಗಿ ಬೆಂಗಳೂರಿನಲ್ಲಿ ಯಶಸ್ವೀ ಕಾರ್ಯ ನಿರ್ವಹಿಸುತ್ತಿರುವ ಮಂಟಪರು ವೃತ್ತಿಅರಸುತ್ತಾ ತಮ್ಮಲ್ಲಿಗೆ ಬಂದವರಿಗೊಂದು ಸೂರು ಒದಗಿಸಿದವರು.
ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ಮಂಟಪರು ಕಲಾಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮೆರೆಯಬೇಕೆಂಬ ಹಂಬಲ ಹೊಂದಿದ್ದಾರೆ.
ಏಕವ್ಯಕ್ತೀಯ ಯಕ್ಷಗಾನ ಇವರ ಆತ್ಮ ಸಂತೋಷದ ವಿಷಯ. ಪ್ರದರ್ಶನಕ್ಕೆ ಸಂಬಂಧಿಸಿದಂತೆ ಯಾವುದೇ ಆರ್ಥಿಕ ಪ್ರತಿಫಲ ನಿರೀಕ್ಷಿಸದ ಮಂಟಪರು ರಂಗದಲ್ಲಿ ಕುಣಿದು ದಣಿದು ತೃಪ್ತಿಪಟ್ಟರು.


ಯಕ್ಷಗಾನವನ್ನು ನಿಜವಾದ ಅರ್ಥದಲ್ಲಿ ತಪ್ಪಸ್ಸೆಂದು ಭಾವಿಸಿ ಕಲಾಸಾಧ್ಯತೆಗಳಲ್ಲಿನ ಹೊಸ ಹೊಸ ಆಯಾಮಗಳನ್ನು ಚಿಂತಿಸುತ್ತ ಅದನ್ನು ಪ್ರದರ್ಶನದಲ್ಲಿ ಅಳವಡಿಸಿ ಪ್ರೇಕ್ಷಕವರ್ಗಕ್ಕೆ ಮುದನೀಡಿದವರು ಮಂಟಪ ಉಪಾಧ್ಯಾಯರು.
ನಡುಮನೆಯಲ್ಲಿ ಯಕ್ಷಗಾನದ ಮೂಲಕ ಆತ್ಮೀಯ ವಲಯದಲ್ಲೂ ಸಹೃದಯ ಸ್ಪಂದನ ಉಂಟುಮಾಡಿದರು. ಸುಸಂಸ್ಕೃತ ತಂಡದೊಂದಿಗೆ ತಿರುಗಾಡುತ್ತ ಯಕ್ಷಗಾನ ಕಲಾವಿದರ ಘನತೆ ಗೌರವಗಳನ್ನು ಎತ್ತಿ ಹಿಡಿದವರು.

1 comments:

Anonymous said...

mantapara saadhanege tale baagiddeve tumbu hridayadinda......deerghayuvaagali e yaksha bhishma

Post a Comment