ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:52 PM

ಮುಗಿಯದ ರೀಲು

Posted by ekanasu

ಅಂಕಣ
ಸಹಕಾರ ಸ್ಮರಣೆ
ನಮ್ಮ ನಿರ್ದೇಶನಾಲಯದ ವತಿಯಿಂದ ಕಾರ್ಯಕ್ರಮ ಏರ್ಪಡಿಸುವಲ್ಲಿ ಅನೇಕರ ಸಹಕಾರ ಪಡೆದಿದ್ದೇನೆ. ಈ ದಿಸೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಕುಶಾಲ ನಗರದ ಮಣಜೂರು ಮಂಜುನಾಥ್. ಎಷ್ಟೇ ದೊಡ್ಡ ಪ್ರಮಾಣದ ಕಾರ್ಯಕ್ರಮವಿರಲಿ ಒಂದು ಫೋನ್ ಮಾಡಿದರೆ ಸಾಕು, ನಮ್ಮ ಕಾರ್ಯಕ್ರಮ ಅರ್ಧ ಮುಗಿದಂತೆಯೇ. ಅದರ ಸಂಪೂರ್ಣ ಜವಾಬ್ದಾರಿಯನ್ನು ತನ್ನದೇ ಕಾರ್ಯಕ್ರಮದಂತೆ ವಹಿಸಿಕೊಂಡು ಯಶಸ್ಸುಗೊಳಿಸುವಲ್ಲಿ ನನ್ನೊಂದಿಗೆ ಹೆಗಲಿಗೆ ಹೆಗಲುಕೊಟ್ಟು ಶ್ರಮಿಸಿದವರು ಮಂಜುನಾಥ್. ನನ್ನ ಹಿರಿಯ ಮಿತ್ರರಾದ ಎನ್. ಮಾಧವರಾವ್ ಮಣಿಪಾಲದ ಕೆ.ಎಂ.ಸಿ. ಅಂಗನವಾಡಿ ಕಾರ್ಯಕರ್ತರ ತರಬೇತಿ ಕೇಂದ್ರದ ಪ್ರಾಂಶುಪಾಲರು. 1981ರಿಂದ ಇಲ್ಲಿಯವರೆಗೂ ಮಂಗಳೂರು ಘಟಕದ ಎಲ್ಲಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹ, ಸಹಕಾರ ನೀಡಿದ ಮಹನೀಯರು. ಹಿಂದೆ ಬಿ.ಕೆ. ಹೆಗ್ಡೆಯವರ ಕಾಲದಿಂದ ಆರಂಭ ಮಾಡಿದ ಮಕ್ಕಳ ಚಲನ ಚಿತ್ರೋತ್ಸವವನ್ನು ಸಿಂಡಿಕೇಟ್ ಬ್ಯಾಂಕಿನ ಗೋಲ್ಡನ್ ಜ್ಯುಬಿಲಿ ಹಾಲಿನಲ್ಲಿ ಪ್ರತೀ ವರ್ಷವೆಂಬಂತೆ ಬಹಳ ಅದ್ಧೂರಿಯಾಗಿ ನಡೆಯುವಂತೆ ಮುತುವರ್ಜಿವಹಿಸಿದವರು.ಐ.ವೈ. ಶೇಖರ್ ಶೆಟ್ಟಿ (ಮಣಿಪಾಲ), ಶೇಖರ ವಿ. ಕೋಟ್ಯಾನ್ (ಮುಲ್ಕಿ), ಪರಮಾನಂದ ಸಾಲಿಯಾನ್ (ಸಸಿಹಿತ್ಲು), ಕೇಶವ ಶೆಣೈ (ಬೆಳ್ತಂಗಡಿ), ಸತೀಶ್ ವಿ. ಕುಡ್ವ (ಪಾಣೆ ಮಂಗಳೂರು), ಮೀನಾಕ್ಷಿ ಗೌಡ, ಸುಬ್ರಾಯ ಚೊಕ್ಕಾಡಿ, ಮೋಹನ ಸೋನಾ, ಆನೇಕಾರ ಗಣಪಯ್ಯ, ಚಂದ್ರಶೇಖರ ದಾಮ್ಲೆ, ಎಂ.ಜಿ. ಸತ್ಯನಾರಾಯಣ, ರುಕ್ಮಯ್ಯ ಗೌಡ (ಸುಳ್ಯ), ಕೋಚಣ್ಣ ರೈ, ಸುಂದರ ಸಾಲಿಯಾನ್, ನಾರಾಯಣ ನಾಯಕ್ (ಬೆಳ್ತಂಗಡಿ), ಶ್ರೀಪತಿ , ಶಿವಾನಂದ ಮಯ್ಯ (ಕೋಟ-ಸಾಲಿಗ್ರಾಮ), ದಿನಕರ ಅಮೀನ್ (ಉಡುಪಿ), ನಂದಳಿಕೆ ಬಾಲಚಂದ್ರ ರಾವ್ (ನಂದಳಿಕೆ), ಗಿರಿಧರ ಹತ್ವಾರ್, ಚನ್ನಕೇಶವ (ಸುರತ್ಕಲ್), ನೀಲಯ್ಯ ಅಗರಿ (ಕುಪ್ಪೆಪದವು)...ನಮಗೆ ನೆರವಾದವರ ಪಟ್ಟಿ ಇನ್ನೂ ದೊಡ್ಡದು.
ಇನ್ನು ಜೇಸೀಸ್ ಸಂಸ್ಥೆಗಳೊಡನೆ ನಮ್ಮ ಸಂಪರ್ಕ ಸಂಬಂಧ ಬಹಳ ಗಾಢ ಅಂತಲೇ ಹೇಳಬೇಕು. ಸಾಮಾನ್ಯವಾಗಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯದೊಂದಿಗೆ ಯಾವುದೇ ಜೇಸಿ ಸಂಸ್ಥೆ ಚಲನಚಿತ್ರ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ವರ್ಷ ಆ ಸಂಸ್ಥೆಗೆ ಸಮುದಾಯ ಚಟುವಟಿಕೆಗಳಿಗೆ ಪ್ರಶಸ್ತಿ ಕಟ್ಟಿಟ್ಟ ಬುತ್ತಿ ಎಂಬುದಾಗಿ ಕಿನ್ನಿಗೋಳಿ ಜೇಸೀಸ್ ಸಂಸ್ಥೆಯಲ್ಲಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನನ್ನ ಸನ್ಮಿತ್ರ ಚನ್ನಕೇಶವ, ಸತೀಶ್ ಮಾಬೆನ್ ಹಾಗೂ ಸುರತ್ಕಲ್ ಜೇಸೀಸ್ ಅಧ್ಯಕ್ಷ ಜಯೇಶ್ ಗೋವಿಂದ ಹೇಳುತ್ತಿದ್ದರು.
ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಲ್ಲಿನ ಮೇಲ್ವಿಚಾರಕರು ಮತ್ತು ಅಂಗನವಾಡಿ ಕಾರ್ಯಕರ್ತರ ಸಹಕಾರವನ್ನು ಮರೆಯುವಂತಿಲ್ಲ . ಜಿಲ್ಲೆ ಹಾಗೂ ತಾಲೂಕು ಮಟ್ಟದ ವಿವಿಧ ಕಾರ್ಯಕ್ರಮಗಳಿಗೆ ಅವರ ಸಕ್ರಿಯ ಸಹಭಾಗಿತ್ವ ಹಾಗೂ ಸಹಕಾರ ನಮಗೆ ಸದಾ ದೊರಕುತ್ತಿತ್ತ್ತು. ಸ್ತ್ರೀಶಕ್ತಿ ಸಂಘಟನೆಗಳ ಸಹಕಾರವನ್ನೂ ನೆನೆಯಲೇಬೇಕು.

ಅಪರೂಪದ ಆದರ್ಶ ಜೋಡಿ
ನಾನು ಈ ವರೆಗೆ ಒಡನಾಡಿದವರ ಪೈಕಿ ಸಮಾಜ ಸೇವೆಯಲ್ಲಿ ನೂರಕ್ಕೆ ನೂರರಷ್ಟು ತಮ್ಮನ್ನು ತೊಡಗಿಸಿಕೊಂಡವರೆಂದರೆ ಮಂಗಳೂರಿನ ಜನ ಶಿಕ್ಷಣ ಟ್ರಸ್ಟಿನ ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ. ಅವರ ನಿಸ್ವಾರ್ಥ ಸೇವೆಗಾಗಿ ಇಡೀ ಜಿಲ್ಲೆ ಅವರನ್ನು ಗುರುತಿಸುತ್ತ್ತಿದೆ. ಅವರು ತಾವು ಕಲಿತ ಶಿಕ್ಷಣ ಸಮಾಜದ ಒಳಿತಿಗಾಗಿ ಮೀಸಲಾಗಬೇಕು ಎನ್ನುವ ಉದಾತ್ತ ಭಾವನೆಯನ್ನು ಹೊಂದಿದ್ದರಿಂದಲೇ ಜಿಲ್ಲೆಯ ಸಾಕ್ಷರತಾ ಕಾರ್ಯದಲ್ಲಿ ಪ್ರಯೋಜನ ಪಡೆದ ಪ್ರತಿಯೊಬ್ಬ ನವಸಾಕ್ಷರರು ಅವರ ಋಣದಲ್ಲಿದ್ದಾರೆ. ಪ್ರಚಾರದ ಬಗ್ಗೆ ಯಾವತ್ತೂ ತಲೆಕೆಡಿಸಿಕೊಳ್ಳದ ಈ ಜೋಡಿ ರಾಷ್ಟ್ರೀಯ ಪ್ರಶಸ್ತಿ ಬಂದಾಗಲೂ ಅದರ ಬಗ್ಗೆ ಪ್ರಚಾರಕ್ಕೆ ಮುಂದಾಗಲಿಲ್ಲ. ಇವರಿಬ್ಬರನ್ನು ಅವರ ಎಂಎಸ್ ಡಬ್ಲ್ಯು ಕಲಿಕೆಯ ದಿನದಿಂದ ಇಂದಿನ ವರೆಗೂ ಹತ್ತಿರದಿಂದ ನೋಡಿದ್ದೇನೆ. ಅವರ ನಡತೆ, ಆದರ್ಶ, ಚಿಂತನೆಯಲ್ಲಿ ಒಂದಿಷ್ಟೂ ಬದಲಾಗಿಲ್ಲ. ಗಾಂಧೀ ತತ್ವಾದರ್ಶಗಳನ್ನು ಈ ಜೋಡಿಯಲ್ಲಿ ಪ್ರತ್ಯಕ್ಷ ಕಂಡಿದ್ದೇನೆ.
ಸಂಗಾತಿಯ ಸ್ಫೂರ್ತಿ
ನಾನು ಮದುವೆಯಾದದ್ದು ಸೋದರತ್ತೆಯ ಮಗಳು ವಿಮಲಳನ್ನು. 16.5.1985ರಲ್ಲಿ. ಮುಗ್ಧ ಸ್ವಭಾವದ ಆಕೆ ಯಾವತ್ತೂ ಯಾರಿಗೂ ನೋವು ಮಾಡದ ಸ್ನೇಹಶೀಲೆ. ಮಗುವಿನಂತಹ ಮನಸ್ಸು. ನಾನು ಅಪರೂಪಕ್ಕೆ ಬರೆಯುವ ಕವನ, ಬರವಣಿಗೆಯನ್ನು ಓದಿ ಸೂಕ್ತ ಅಭಿಪ್ರಾಯಗಳನ್ನು ಸೂಚಿಸುತ್ತಾ ಪ್ರೋತ್ಸಾಹ ನೀಡುತ್ತಾಳೆ. ನಾನು ಪ್ರಚಾರಾಧಿಕಾರಿಯಾಗಬೇಕು ಎಂಬ ಆಕೆಯ ಕನಸು ನನಸಾಗದಿದ್ದರೂ ನನ್ನ ಸೇವೆಯ ಮೂಲಕ ಜನರಿಂದ ನಾನು ಗಳಿಸಿದ ಪ್ರೀತಿ, ಆದರಗಳಿಂದ ಆ ಕೊರತೆ ನೀಗಿದ ಸಮಾಧಾನ ಆಕೆಗೆ. ವಿಮಲಳ ಪ್ರೀತಿ, ಸಹಕಾರ ನನ್ನ ಸೇವೆಯುದ್ದಕ್ಕೂ ಸ್ಫ್ಪೂರ್ತಿ ನೀಡಿದೆ. ಇಬ್ಬರು ಗಂಡು ಮಕ್ಕಳು - ಗುರುಪ್ರಸಾದ್ ಮತ್ತು ಮಂಜುನಾಥ್. ಚಿಕ್ಕ ಕುಟುಂಬವಾದರೂ ನೆಮ್ಮದಿಯ ತುಂಬು ಜೀವನ.


ಸಕಾಲದಲ್ಲಿ ನೆರವು
2007ರ ಏಪ್ರಿಲ್ 5ರಂದು ಮಂಗಳೂರಿನಲ್ಲಿ ನನ್ನ ಹೃದಯದ ಆಂಜಿಯೋಗ್ರಾಮ್ನ ವರದಿ ನೋಡಿ ಸ್ಥಳೀಯ ವೈದ್ಯರು `ಇನ್ನು ಪ್ರಯೋಜನವಿಲ್ಲ, ಆಪರೇಷನ್ ಕೂಡಾ ಕಷ್ಟಸಾಧ್ಯ ಎಂದಾಗ ಮನೆಯವರಿಗೆ ಗಾಬರಿ, ಭಯ. ಅಂತಹ ಸಂದರ್ಭದಲ್ಲಿ ಆಗ ಇಲಾಖೆಯ ನಿರ್ದೇಶಕರಾಗಿದ್ದ ಎಂ.ಎನ್. ಶಂಕರ್ ಅವರನ್ನು ಸಂಪರ್ಕಿಸಿ, `ನಾವು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಬರಬೇಕೆಂದಿದ್ದೇವೆ; ಅನುಮತಿ ಬೇಕು ಎಂದೆವು. ಅದಕ್ಕೆ ಅವರು `ತಕ್ಷಣ ಬನ್ನಿ, ನಿಮ್ಮದು ಸೂಕ್ತ ನಿರ್ಧಾರ ಎಂದು ಧೈರ್ಯತುಂಬಿದರು. ಅದರಂತೆ ಬೆಂಗಳೂರಿಗೆ ಹೋದೆವು. ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿ ಪ್ರಸಾದ್ ಶೆಟ್ಟಿಯವರು ನನ್ನನ್ನು ಹಾಗೂ ವೈದ್ಯಕೀಯ ವರದಿಯನ್ನು ಪರೀಕ್ಷಿಸಿ `ಒಂದು ವಾರದೊಳಗೆ ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆ ಆಗಬೇಕು ಎಂದರು. ತಕ್ಕ ತಯಾರಿಯೊಂದಿಗೆ ಬರುವಂತೆಯೂ ತಿಳಿಸಿದರು. ಸಂಬಂಧಿಸಿದ ಆಸ್ಪತ್ರೆಯ ವಿಭಾಗದಲ್ಲಿ ಖರ್ಚುವೆಚ್ಚದ ವಿವರ ಪಡೆದು ಮಾರನೇ ದಿನವೇ ಕ್ಷೇತ್ರಪ್ರಚಾರ ಅಧಿಕಾರಿಗಳಾದ ಎನ್.ಡಿ. ಪ್ರಸಾದ್ ಮತ್ತು ಟಿ.ಬಿ. ನಂಜುಂಡ ಸ್ವಾಮಿಯವರೊಂದಿಗೆ ನಿರ್ದೇಶಕರ ಕೋಣೆಗೆ ಹೊಕ್ಕಾಗ ಬಲು ಅಕ್ಕರೆಯಿಂದ ಮಾತನಾಡಿಸಿ ಧೈರ್ಯತುಂಬಿ ಶಸ್ತ್ರಚಿಕಿತ್ಸೆಗೆ ತಗಲುವ ಖರ್ಚು ವೆಚ್ಚದ ವಿವರದ ದಾಖಲೆಗಳನ್ನು ಪಡೆದು ಒಂದೇ ದಿನದಲ್ಲಿ ಶಸ್ತ್ರಚಿಕಿತ್ಸೆಗೆ ತಗಲುವ ಹಣದ ಚೆಕ್ಕನ್ನು ಸಿದ್ಧಪಡಿಸಿ ಕೊಡುವಂತೆ ಆಡಳಿತಾಧಿಕಾರಿ ಹಾಗೂ ಅಕೌಂಟೆಂಟ್ ಅವರಿಗೆ ಸೂಚಿಸಿದರು. ಮರುದಿನ ಮಧ್ಯಾಹ್ನ ನಾನು ಆಫೀಸಿಗೆ ಹೋದಾಗ 1,12,000 ರೂಪಾಯಿಯ ಚೆಕ್ ನನ್ನ ಕೈಯಲ್ಲಿತ್ತು. ಶಂಕರ್ ಅವರು `ಹೋಗಿ ಬನ್ನಿ, ಶೀಘ್ರ ಗುಣಮುಖರಾಗಿ ಬನ್ನಿ ಎಂದು ಹಾರೈಸಿ ನನ್ನನ್ನು ಬೀಳ್ಕೊಟ್ಟರು. ನನ್ನ ಕಣ್ಣಲ್ಲಿ ಕೋಡಿ ಹರಿಯಿತು. ಸಕಾಲದಲ್ಲಿ ದೊರೆತ ಈ ನೆರವಿಗಾಗಿ ಶಂಕರ್ ಸಾಹೇಬರು ಹಾಗೂ ಪ್ರಾದೇಶಿಕ ಕಚೇರಿಯ ಎಲ್ಲ ಆಪ್ತಮಿತ್ರರನ್ನು ನಾನು ಸದಾ ನೆನೆಯುತ್ತೇನೆ.
ಕೋಮು ಸೌಹಾರ್ದ
ಕೋಮು ಸೌಹಾರ್ದಕ್ಕೆ ಬಿಜಾಪುರದ ಹಳ್ಳಿಯೊಂದು ಮಾದರಿ. ಆ ಹಳ್ಳಿಯ ಹೆಸರು ನೆನಪಿಲ್ಲ. ಆದರೆ ಅಲ್ಲಿ ನಡೆದ ಘಟನೆ ಮರೆಯುವಂತಿಲ್ಲ. ಅಲ್ಲಿ ಮಂಗಳೂರು ಘಟಕ ಕಾರ್ಯಕ್ರಮ ಏರ್ಪಡಿಸಿತ್ತು. ಪಂಚಾಯತ್ ಕಟ್ಟೆಯಲ್ಲಿ ನಮ್ಮ ಸಿನೆಮಾ ಪ್ರದರ್ಶನ. ನಂತರ ನಡೆದ ಮಾಹಿತಿ ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷ ಮುಲ್ಲಾಸಾಬ್ ಅವರು ವಹಿಸಿದ್ದರು. ಅವರು ತೊಟ್ಟ ಉಡುಗೆಯಲ್ಲಿ ಅವರು ಮುಸಲ್ಮಾನರೆಂದು ತಿಳಿಯುತ್ತಿತ್ತು. ಭಾಷಣ ಮುಗಿದು ಊಟಕ್ಕೆ ನಮ್ಮನ್ನು ಯಾರೋ ಕರೆದರು. ಆಗ ಮುಲ್ಲಾಸಾಬ್ ಅವರು `ಈ ದಿನ ನಮ್ಮ ಮನೆಯಲ್ಲಿ ಊಟದ ವ್ಯವಸ್ಥೆ ಆಗಿದೆ. ಬನ್ನಿ ಎಂದು ನಮ್ಮನ್ನು ಹಾಗೂ ಅಲ್ಲಿ ನೆರೆದಿದ್ದ ಊರ ಪ್ರಮುಖರನ್ನು ಆಹ್ವಾನಿಸಿದರು. ಅಂದು ರಾಮ ನವಮಿ. ಎಲ್ಲರೂ ಮುಲ್ಲಾಸಾಬ್ ಅವರನ್ನು ಹಿಂಬಾಲಿಸಿದೆವು. ಅವರ ಮನೆಮಂದಿ ಪ್ರೀತಿಯಿಂದ ಊಟಕ್ಕೆ ಸ್ವಾಗತಿಸಿದರು. ಮನೆಪೂರ ಸೆಗಣಿ ಸಾರಿಸಿ ಶುಚಿಗೊಳಿಸಿದ್ದು ಕಂಡುಬಂತು. ಊಟಕ್ಕೆ ಬನ್ನಿ ಎಂದು ವಿಶಾಲವಾದ ಹಾಲಿನಲ್ಲಿ ಚಾಪೆಹಾಕಿ ಕುಳ್ಳಿರಿಸಿ ಊಟಕ್ಕೆ ಬಡಿಸಿದಾಗ ನಮಗೆ ಅಚ್ಚರಿ ಕಾದಿತ್ತು. ಅತ್ಯುತ್ತಮ ಸ್ವಾದಿಷ್ಟ ತರಕಾರಿ ಊಟ ಬಡಿಸಿದ್ದಷ್ಟೇ ಅಲ್ಲ, ಪಾಯಸ, ಒಬ್ಬಟ್ಟು ಹೋಳಿಗೆಯನ್ನೂ ಸೇರಿಸಿದ್ದರು. `ಏನ್ ಸ್ವಾಮಿ, ಭಾರೀ ವಿಶೇಷ ಊಟ ಆಯಿತಲ್ಲಾ ಎಂದಾಗ, `ಇವತ್ತು ಊರಿಗೆ ರಾಮ ನವಮಿ ಅಲ್ವಾ, ನಮಗೂ ಕೂಡಾ ರಾಮ ನವಮಿ. ಪ್ರತೀ ವರ್ಷ ನಾವು ಕೂಡಾ ಆಚರಿಸುತ್ತೇವೆ ಎಂದರು. ಅವರ ಹೃದಯ ತುಂಬಿದ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ.

ದೇವಿ ಪ್ರಸಾದ
1990ರ ಮಾರ್ಚ್ -ಏಪ್ರಿಲ್. ಬಜ್ಪೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೆ. ದೇವಸ್ಥಾನದ ಶ್ರೀ ನಿರಂಜನ ಸ್ವಾಮಿಗಳ ಯಜಮಾನಿಕೆಯಲ್ಲಿ ಜಾತ್ರೆ ಬಹಳ ಅದ್ದೂರಿಯಾಗಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಕುಷ್ಠ ನಿವಾರಣಾ ಸಂಘದವರ ಸಹಭಾಗಿತ್ವದಲ್ಲಿ ನಾವು ಕೂಡಾ ವಸ್ತು ಪ್ರದರ್ಶನ, ಕುಷ್ಠರೋಗದ ಭಿತ್ತಿಪತ್ರ ಪ್ರದರ್ಶನ ಏರ್ಪಡಿಸಿದ್ದೆವು. ಸ್ವಾಮಿಗಳು ನಮ್ಮ ಮಳಿಗೆಗೆ ಭೇಟಿನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯ ದಿನ ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡ ಎಲ್ಲಾ ಇಲಾಖೆಯವರನ್ನು ಪ್ರಸಾದ ನೀಡಿ ಗೌರವಿಸುವ ಕಾರ್ಯಕ್ರಮ ಕೂಡಾ ಇತ್ತು. ನನ್ನ ಸರದಿ ಬಂತು. ಪ್ರಸಾದ ನೀಡಿ ಜೊತೆಗೆ 100 ರೂ. ನೋಟೊಂದನ್ನು ಹರಿವಾಣದಲ್ಲಿ ಇಟ್ಟು ನೀಡಿದರು. `ಸ್ವಾಮಿ, ಪ್ರಸಾದ ಸಾಕು, ನೋಟು ಬೇಡ ಎಂದೆ. ಅದಕ್ಕವರು `ಇದನ್ನು ದೇವಿಯ ಪ್ರಸಾದದ ರೂಪದಲ್ಲಿ ನೀಡುತ್ತಿದ್ದೇನೆ ಎಂದಾಗ ವಿಧಿಯಿಲ್ಲದೆ ದೇವಿಗೆ ನಮಿಸಿ ಹರಿವಾಣವನ್ನು ಸ್ವೀಕರಿಸಿದ್ದಷ್ಟೇ ಅಲ್ಲ, ಆ ಹಣದೊಂದಿಗೆ ಅಂಚೆ ಕಚೇರಿಯಲ್ಲಿ ಆರ್.ಡಿ. ಖಾತೆ ತೆರೆದು ಬಹಳಷ್ಟು ವರ್ಷ ಅದನ್ನು ಮುಂದುವರಿಸಿ ಬಳಿಕ ನಮ್ಮ ಬಾವಿಯ ಕೆಲಸಕ್ಕೆ ಸದುಪಯೋಗ ಮಾಡಿಕೊಂಡಿದ್ದೇನೆ.

ಗುಂಡಿಬೈಲು ಶ್ರೀನಿವಾಸ್

0 comments:

Post a Comment