ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:59 PM

ಓದಿ ಉಳಿದದ್ದು...

Posted by ekanasu

ಸಾಹಿತ್ಯ
`` ನಲ್ವತ್ತೆರಡು ವರ್ಷಗಳಿಂದ ಒಬ್ಬರನ್ನೊಬ್ಬರು ನಂಬಿಸಲು ಪ್ರಯತ್ನಪಡುತ್ತಿದ್ದರೂ ಇನ್ನೂ ನಂಬಿಕೆ ಹುಟ್ಟಿಸಲಾಗದ ದೇವರಿಗೆ'' (ಜೋಗಿ ) ಎಂಬ ವಿಲಕ್ಷಣವಾದ ಅರ್ಪಣೆಯೊಂದಿಗೆ ತೆರೆದುಕೊಳ್ಳುವ ಪುಸ್ತಕ ಜೋಗಿ ಕಥೆಗಳು .


ಅತೀ ಸಣ್ಣ ಕಥೆಗಳು ಎಂಬ 21 ಮಿಂಚು ಹುಳುಗಳ ಸಂಗ್ರಹ ಈ ಸಂಕಲನದಲ್ಲಿದೆ. ಕನ್ನಡ ಕಥಾ ಪ್ರಪಂಚದಲ್ಲಿ ಹೊಸತು ಎಂಬ ಪ್ರಯೋಗಗಳಿಂದ ಕೂಡಿದ ಈ ವಿಶೇಷ ರಚನೆಗಳು ಈ ಸಂಕಲನದಲ್ಲಿರುವುದು ವಿಶೇಷವಾಗಿದೆ. ಆಡಂಬರವಿಲ್ಲದೆ ಪದಗಳ ಅಥವಾ ವಾಕ್ಯಗಳ ಮೆರವಣಿಗೆ , ವಿಜೃಂಭಣೆಯಿಲ್ಲದೆ ಕಥೆ ಹೇಳುವ ಶೈಲಿ ಜೋಗಿಗೆ ಒಲಿದು ಬಂದಿದೆ. ಸಣ್ಣ ಕಥೆಗಳು ಕತ್ತಲ ನಡುವೆ ಬೆಳಗುವ ಬೆಳಕಿನ ತುಣುಕುಗಳಿದ್ದಂತೆ ಎನ್ನುವುದನ್ನು ಜೋಗಿ ಕಥೆಗಳು ಸಾಬೀತು ಪಡಿಸುತ್ತವೆ.

ಈ ಸಂಕಲನವನ್ನು ಓದಿ ಮುಚ್ಚಿಟ್ಟ ಮೇಲೆ ಜುಮುರು ಮಳೆಯಂತೆ ಕಾಡುವ ಮನದ ಜೋಪಡಿಯಲ್ಲಿ ಚಕ್ಕಳ ಮಕ್ಕಳ ಹಾಕಿ ಕುಳಿತುಕೊಳ್ಳುವ `ಇನ್ನೊಬ್ಬ', `ಒಂದು ಹೂವಿನ ಕಥೆ' , `ಕನ್ನಡಿಯೊಳಗೆ ಗಳಗನಾಥರಿಲ್ಲ' ಎಂಬ ಮೂರು ವಿಭಿನ್ನವೆನಿಸುವಂತಹ ಪ್ರಯೋಗಗಳು ಇಲ್ಲಿವೆ. ಇಲ್ಲಿನ ಇನ್ನೊಬ್ಬ ಎಂಬ ಕಥೆಯಲ್ಲಿ ಬರುವ ರಾಮಸ್ವಾಮಿ ಐಯಂಗಾರ್ ಮತ್ತು ಕೃಷ್ಣಸ್ವಾಮಿ ಐಯಂಗಾರ್ ಬಗೆಗಿನ ಊರ ಜನರ ಕುತೂಹಲ, ಕಾಳಜಿಯ ಬಗ್ಗೆ ಜೋಗಿ ನಾಜೂಕಾಗಿ ಹೇಳಿ ಕಥೆಯ ಕೊನೆಯಲ್ಲಿ ಪುನಃ ತಿರುವಿತ್ತು ಮುದ ನೀಡುತ್ತಾರೆ. ಇನ್ನು ಒಂದು ಹೂವಿನ ಕಥೆಯಲ್ಲಿ ಪ್ರೀತಿಯ ನವಿರುತನ ಕಥೆಯ ತುಂಬ ಹರಿವಿ ಓದುಗರನ್ನು ಉಲ್ಲಸಿತರನ್ನಾಗಿಸುತ್ತಾರೆ. ರೇವೆಯಲ್ಲಿ ಆಗತಾನೆ ಪುಟ್ಟ ಮಗುವಿಟ್ಟು ನಾಪತ್ತೆಯಾದ ಅನಾಮಧೇಯ ಪಾದದ ಗುರುತಿನಂತೆ ರೋಹಿಣಿ ಎಂಬ ಕಥೆ ಮನಕಲುಕುತ್ತದೆ. ಈ ಕಥೆಯಲ್ಲಿ ಬರುವ ರೋಹಿಣಿ ಪಾಲ್ಯುನುರೋ ಬ್ಲಾಸ್ಟೋಮಾ ಎಂಬ ಖಾಯಿಲೆಯಿಂದ ಬಳಲುತ್ತಿರುತ್ತಾಳೆ. ಅವಳ ತಂದೆ ತಾಯಿ ಚಿಕಿತ್ಸೆಯ ತಯಾರಿಯಲ್ಲಿರಬೇಕಾದರೆ ರೋಹಿಣಿ ತನ್ನ ಅಣ್ಣ ಚಂದ್ರನಲ್ಲಿ ಆಪರೇಷನ್ ಬಯದಿಂದ ಆಪರೇಷನ್ ಬೇಡವೆಂದು ಅಳಲನ್ನು ಹೇಳಿಕೊಳ್ಳುತ್ತಾಳೆ.
ಒಲ್ಲದ ಮನಸ್ಸಿನಿಂದ ತಂಗಿಯು ಪಡೆಯುತ್ತಿರಬಹುದಾದ ಹಿಂಸೆಯನ್ನು ಊಹಿಸಿ ಇದರಿಂದ ತಪ್ಪಿಸಿಕೊಂಡು ಮುಗ್ಧಮನಸ್ಸಿನ ಮಕ್ಕಳಿಬ್ಬರು ಅಜ್ಜಿ ಮನೆಯನ್ನು ಸೇರಿಕೊಳ್ಳುವುದು ಇಲ್ಲಿನ ಕಥೆಯಾಗಿದೆ. ಈ ಕಥೆ ಕೆ. ಸದಾಶಿವರ ರಾಮನ ಸವಾರಿ ಸಂತೆಗೆ ಹೋದದ್ದು ಎಂಬ ಕಥೆಯಲ್ಲಿನ ರಾಮನನ್ನು ನೆನಪಿಸುತ್ತದೆಯಾದರೂ ಅಲ್ಲಿನ ಕಥಾ ವಸ್ತು ಬೇರೆಯೇ ರೀತಿಯದ್ದಾಗಿದೆ. ರೋಹಿಣಿ ಅಲ್ಲಿರುವ ಕೊನೆಯ ದಿನಗಳಲ್ಲಿ ಅಣ್ಣ ಚಂದ್ರ ಅವಳಿಗೆ ಸುತ್ತಲಿನ ಪ್ರಕೃತಿಯ ವಿಸ್ಮಯವನ್ನು ತೋರಿಸುತ್ತಾ ಕಥೆ ಹೇಳಿ ಅವಳ ಹೊಟ್ಟೆನೋವನ್ನು ಮೆರೆಯಿಸಲು ಮಾಡುವ ಪ್ರಯತ್ನ ಅದರಿಂದ ರೋಹಿಣಿ ಪಡೆಯುವ ಖುಷಿ ವಿಪರೀತವಾದದು.
ಬದುಕಿನ ಬಗ್ಗೆ ಹಿರಿಯರ ದಾವಂತಗಳಿಂದ ದೂರವಿರುವ ಮಕ್ಕಳ ಪುಟ್ಟ ಸುಂದರವಾದ ಪ್ರಪಂಚ ಚಂದ್ರರೋಹಿಣಿಯ ಮೂಲಕ ಅನಾವರಣ ಗೊಳ್ಳುತ್ತದೆ. ವಿಡಿಯೋ ಗೇಮ್ ಕಂಪ್ಯೂಟರ್ ಗೇಮ್ ಗಳ ನಡುವೆ ಬೆಳೆದ ಮಕ್ಕಳ ಪ್ರಪಂಚಕ್ಕಿಂತಲೂ ಕಾಡು ಹೂ ಕಥೆ ಎಂಬ ಶಬ್ಧಗಳು ಮಕ್ಕಳ ಮನದಿಂದ ಮರೆಯಾಗುತ್ತಿರುವ ಹಳ್ಳಿ ಪರಿಸರವನ್ನು ನೆನಪಿಸುತ್ತದೆ. ಇಲ್ಲಿನ ಮತ್ತೊಂದು ಕಥೆಯಾದ ಕನ್ನಡಿಯೊಳಗೆ ಗಳಗನಾಥರಿಲ್ಲ ಇಲ್ಲಿರುವ ಉಳಿದ ಕಥೆಗಳಿಗಿಂತಲೂ ವಿಭಿನ್ನ ಪ್ರಯೋಗವಾಗಿದೆ. ಕನ್ನಡಿ ತನ್ನ ಬಿಂಬವನ್ನು ಕಣ್ತುಂಬಿಕೊಳ್ಳುವುದರಿಂದ ಗಳಗನಾಥರಿಗೆ ಗಾಬರಿಯಾಗುತ್ತಿದೆ. ತನ್ನ ಮನೆಯರನ್ನೆಲ್ಲಾ ಕನ್ನಡಿ ಹಿಡಿದಿಟ್ಟುಕೊಳ್ಳುವುದು ಖಾತರಿಯಾದ ಮೇಲೆ ಗಳಗನಾಥರ ಭಯ ಹೆಚ್ಚಾಗುತ್ತದೆ. ಇಲ್ಲಿರುವ ಕನ್ನಡಿ ಗಳಗನಾಥರನ್ನು ವಿಪರೀತವಾಗಿ ಸತಾಯಿಸುತ್ತದೆ. ಕೊನೆಗೆ ಮನೆಯವರಾರಿಗೂ ಗಳಗನಾಥರ ಅಸ್ತಿತ್ವ ಗೋಚರವಾಗುವುದಿಲ್ಲ ಎನ್ನುವುದರ ಮೂಲಕ ಈ ಕಥೆ ಕೊನೆಯಾಗುತ್ತದೆ. ಈ ಕಥೆ ಓದುಗರನ್ನು `ತಮಗೆ ಹೊಳೆದದ್ದನ್ನು'ಮತ್ತೊಬ್ಬರಿಗೆ ಹೊಳೆಯಿಸಲಾಗದಂತೆ ಮಾಡಿ ಪೇಚಿಗೆ ಸಿಲುಕಿಸುತ್ತದೆ.
ಇಲ್ಲಿರುವ ಮತ್ತೊಂದು ಕಥೆಯಾದ ಲಿಫ್ಟ್ ಹೊರಪ್ರಪಂಚದ ಮತ್ತು ಒಳಪ್ರಪಂಚದ ಸತ್ಯವನ್ನು ಒಂದೇ ಸಾರಿ ಎದುರಾಗಿಸಿ ಕ್ಷಣಕಾಲದ ಮಿಂಚಿನಂತೆ ಮಿಂಚಿ ಮಾಯವಾಗುತ್ತದೆ. ಜೋಗಿಯ ಕಾದಂಬರಿಗಳ ಮೇಲೆ ನಾವು ಕಾಣಬಹುದಾದ ಅನಂತ ಮೂರ್ತಿ , ತೇಜಸ್ವಿ ಕೃತಿಗಳ ಪ್ರಭಾವದಿಂದ ಜೋಗಿ ಕಥೆಗಳು ಹೊರತಾಗಿದೆ. ಇಲ್ಲಿನ ಎಲ್ಲಾ ಕಥೆಗಳು ತನ್ನದೇ ಪ್ರಭಾವನ್ನು ಸೃಷ್ಠಿಸುವಷ್ಟು ಹೊಸತಾಗಿದೆ. ಅಂತೆಯೇ ಇಲ್ಲಿನ ಜನ `ಹೇ ಪ್ರಾಣಕಾಂತ' ಕಥೆಯನ್ನು ಓದಿದ ಮೇಲೆ ಈಶ್ವರ ಚಂದ್ರರ ದ್ವಿಪಾತ್ರ ಕಥೆ ನೆನಪಾಗುತ್ತದೆ. ನಿಜಜೀವನದಲ್ಲಿ ನಾವು ಕೇಳಿದ ಕನ್ನಡದ ದೊಡ್ಡ ವ್ಯಕ್ತಿಗಳ ಹೆಸರು ಇಲ್ಲಿ ಪಾತ್ರವಾಗಿರುವುದು ಮತ್ತೊಂದು ವಿಶೇಷ. (ಉದಾ: ಗಳಗನಾಥರು, ರಾಮಸ್ವಾಮಿ ಐಯ್ಯಂಗಾರ್) ಇಲ್ಲಿನ ಮತ್ತೊಂದು ಕಥೆಯಾದ ಚಂದ್ರಹಾಸ 32 ಕಾಡಬೆಳದಿಂಗಳು ಸಿನೆಮಾವಾಗಿ ಮೆಚ್ಚುಗೆ ಗಳಿಸಿದೆ.
ಯುವಕರು ಹಳ್ಳಿಗಳಿಂದ ದೂರವಾಗಿ ಹಳ್ಳಿಗಳೆಲ್ಲ ವೃದ್ಧಾಶ್ರಮವಾಗಿ ಪರಿವರ್ತನೆಯಾಗುವುದನ್ನು ಕಥೆ ಮೆಲ್ಲನೆ ನೆನಪಿಸುತ್ತದೆ. ಇಲ್ಲಿ ವೃದ್ಧ ಜೀವಗಳೆರಡರ ತೊಳಲಾಟ ಸೂಕ್ಷ್ಮವಾಗಿ ಮೂಡಿಬಂದಿದೆ.
`` ಕಥೆ ಬರೆಯುವುದು ಮಹಾನ್ ಪ್ರತಿಭೆಯೂ ಸಾಧನೆಯೋ ಅಲ್ಲ. ಪುಟ್ಟ ಹುಡುಗಿ ಮುಂಜಾನೆಗೆ ಎದ್ದು ಮನೆ ಮುಂದೆ ರಂಗೋಲಿ ಬಿಡಿಸುವಾಗಿನ ತನ್ಮಯತೆ ಉದ್ದಲಂಗದ ಅರಶಿನ ಕೆನ್ನೆಯ ಬಾಲಕಿ ಕುಣಿಗಲ್ ರಸ್ತೆಯ ಬದಿಯಲ್ಲಿ ದಟ್ಟ ಮಂಜಿನ ನಡುವೆ ಮಲ್ಲಿಗೆ ಹೂ ಹಿಡಿದುಕೊಂಡು ನಿಂತುಕೊಂಡಾಗಿನ ಭರವಸೆ, ಸೈಕಲ್ ರಿಪೇರಿ ಪುಟ್ಟ ಬಾಲಕನ ಅಸಾಧ್ಯ ಶ್ರದ್ಧೆ ಇವೆಲ್ಲ ಬರಹಕ್ಕಿಂತ ದೊಡ್ಡದು. ಅವೆಲ್ಲ ನಾಳಿನ ಬದುಕನ್ನು ಕಟ್ಟಿಕೊಡಬಲ್ಲದು. '' -ಜೋಗಿ. ಎಂದು ತೀರಾ ವಿನಯದಿಂದ ಹೇಳುವ ಜೋಗಿಯ ಜೋಳಿಗೆಯಿಂದ ಮತ್ತಷ್ಟು ಮಗದಷ್ಟೂ ಮೊಗೆದಷ್ಟೂ ಕಥೆಗಳು ಬರಲಿ ಎಂದು ಆಶಿಸೋಣ.
ಪತ್ರಿಕೋದ್ಯಮ ಎಂಬ ಗಿರಣಿಗೆ ಬಿದ್ದಮೇಲೆ ಕಥೆಗಳಿಗೆ ಸಮಯವಿಲ್ಲ ಎಂಬ ಮಾತನ್ನು ಲಂಕೇಶ್ ರಂತೆ ಜೋಗಿಯೂ ಸುಳ್ಳಾಗಿಸಿದ್ದಾರೆ. ಈ ಸಂಕಲನಕ್ಕೆ ವಿವೇಕ್ ಶಾನುಭಾಗ್ ಅವರ ಬೆನ್ನುಡಿ , ಸೂರಿ ಮುನ್ನುಡಿ ಪುಸ್ತಕವನ್ನು ಮತ್ತಷ್ಟು ಚಂದ ಕಾಣಿಸಿದೆ. ಜೋಗಿ ಎಂಬ ವಿಸ್ಮಯದಲ್ಲಿ ಹೊಳೆದದ್ದು ತಾರೆ. ಉಳಿದದ್ದು ಆಕಾಶ !!
- ಕೌಶಿಕ್ ಪಾರಾಡ್ಕರ್,
ಪ್ರಥಮ ಬಿ.ಕಾಂ. (ಎ.)
ಆಳ್ವಾಸ್ ಕಾಲೇಜು .

0 comments:

Post a Comment