ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಿನೆಮಾ


ಮುಗ್ಧಮನಸಿನ ಪುಟ್ಟ ಹುಡುಗ ಮೆಹರುಲ್ಲಾ... ಕೊಂಚ ಮಸುಕು ಮಸುಕು ರಂಗಿನ ಬದುಕು. ಆಗೊಮ್ಮೆ ಈಗೊಮ್ಮೆ ಕಾಡುವ ಅಗಲಿದ ತಂದೆಯ ಚಿತ್ರ ಜೇಬಿನಲ್ಲಿ ಭದ್ರ. ಸಮುದ್ರ ತೀರದಲ್ಲಿ ಮಾರುವ ಕಪ್ಪೆಚಿಪ್ಪು ಮುತ್ತಿನ ಸರ ಕಂಡಾಗೆಲ್ಲಾ ಪುಟ್ಟ ಪುಟ್ಟ ತಂಗಿಯರ ನೆನಪಿನಿಂದಾಗಿ ಮಸುಕು ಬದುಕಿನಲ್ಲೊಂದಿಷ್ಟು ಹಸಿರು. ಅಂಗಡಿ ಸಾಲಲ್ಲಿ ನೇತು ಹಾಕಿರುವ ಶಾಲು ಕಂಡಾಗಲೆಲ್ಲಾ ಕಣ್ಮುಂದೆ ಹಾಯುವುದು ಅಮ್ಮನ ಮುಖ. ತನ್ನೆಲ್ಲಾ ಮಸುಕು ಪದರುಗಳನ್ನು ಕೆಲದಿನಗಳ ಮಟ್ಟಿಗೆ ಕಳಚಿಕೊಂಡು ಸಿಹಿ ಕನಸುಗಳ ವಾಸ್ತವವನ್ನು ಅಪ್ಪಿಕೊಳ್ಳುವ ಸಂಭ್ರಮವನ್ನು ಮೂಟೆಮಾಡಿಕೊಂಡು ಮನೆಯತ್ತ ಮುಖಮಾಡಿದ ಹುಡುಗ.
ಸಂಭ್ರಮದ ಮೂಟೆ ತೆರೆಯುವ ಮುನ್ನ ಎರಗಿದ ಬರಸಿಡಿಲು. ನಿರೀಕ್ಷೆಗಳೆಲ್ಲಾ ತಲೆಕೆಳಗು. ಹೊಸ ನೀರಿನ ಹೊಳೆಯಲ್ಲಿ ತೇಲಿಹೋದ ಅಪ್ಪನ ನನೆಪು. ಬದಲಾದ ಅಮ್ಮನ ಬದುಕು. ಹಾಳುಬಿದ್ದ ತನ್ನ ಹಳೆಯ ಮನೆ. ಹುಟ್ಟಿಕೊಂಡ ಹೊಸ ಸಂಬಂಧಗಳನ್ನು ಒಪ್ಪಿಕೊಳ್ಳಲಾಗದ ಆಕ್ರೋಶ. ಪ್ರೀತಿಯ ಊಟೆಯೇ ಹೃದಯದಲ್ಲಿದ್ದರೂ ಬಿಚ್ಚಿಡಲಾಗದೇ ಒದ್ದಾಡುವ ಮಲತಂದೆ. ಅಸಾಹಯಕ ತಾಯಿಯ ಮಮತೆ ..ಒಟ್ಟಾರೆ ಭಾವನೆಗಳ ಸುತ್ತವೇ ಗಿರಕಿ ಹೊಡೆಯುವ ಇರಾನಿ ಚಿತ್ರ ದಿ ಫಾದರ್.

ಮಾಜಿತ್ ಮಜೀದಿ ಅವರ ನಿರ್ದೇಶನದ ಈ ಚಿತ್ರದಲ್ಲಿ ಸಂಬಂಧಗಳ ನಡುವಿನ ಭಾವುಕತೆ ಕ್ಲಿಷ್ಟತೆಯೇ ಪ್ರಮುಖ ಕಥಾವಸ್ತು. ಭಾವನೆಗಳೇ ಬಂಡವಾಳವಾಗಿರುವ ಚಿತ್ರದ ಪ್ರತಿಯೊಂದು ಸನ್ನಿವೇಶಗಳು ಪ್ರೇಕ್ಷಕರ ಮನದಲ್ಲಿತನ್ನ ವಿಶೇಷ ಛಾಪು ಮೂಡಿಸುತ್ತದೆ. ಪ್ರಮುಖ ಪಾತ್ರಧಾರಿ ಮೆಹರುಲ್ಲಾ ಚಿತ್ರದ ಜೀವಕಳೆ. ಮಲತಂದೆಯ ಮುಂದೆ ನೋಟುಗಳನ್ನೆಸೆದು ತಾಯಿ ತಂಗಿಯರನ್ನು ಕರೆದೊಯ್ಯಲು ಬಯಸುವ ಹುಡುಗ, ತಾಯಿ ತಂಗಿ ಹಿಂದಿರುಗಬಹುದೆಂಬ ನಿರೀಕ್ಷೆಯಲ್ಲಿ ಹಾಳು ಬಿದ್ದ ಹಳೆಮನೆಗೆ ತಾನೇ ಸುಣ್ಣ ಬಣ್ಣ ಹೊಡೆದು ಅಲಂಕರಿಸುವ ಆ ಪುಟ್ಟ ಹುಡುಗ ... ಮಲತಂದೆಯನ್ನು ಕೊಲ್ಲಲೆತ್ನಿಸಿ ಸಾಧ್ಯವಾಗದೆ ಪಿಸ್ತೂಲು ಕದ್ದು ಓಡಿ ಹಿಂಬಾಲಿಸಿ ಬಂದ ಮಲತಂದೆಯನ್ನು ನಾನಾ ರೀತಿಯಲ್ಲಿ ಪೀಡಿಸುವ ಮೆಹರುಲ್ಲಾ ಪ್ರೇಕ್ಷಕರ ಮನದಲ್ಲಿ ಹಟಮಾರಿ ಹುಡುಗನಾಗಿ ನೆಲೆಯೂರುತ್ತಾನೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಚಿತ್ರದ ಯಾವ ಪಾತ್ರಗಳೂ ಕೂಡ ಮಾನವೀಯತೆಯ ಗೆರೆದಾಟಿ ಹೋಗುವುದಿಲ್ಲ. ಪ್ರತಿಯೊಂದು ಪಾತ್ರಗಳು ಕೂಡಾ ಪ್ರೀತಿ ಪ್ರೇಮ ಮಮತೆಯ ಕಣಜಗಳು. .. ಆದರೆ ಭಿನ್ನ ಭಿನ್ನ ಅಭಿವ್ಯಕ್ತಿ. .. ಇಲ್ಲಿ ಮಲತಂದೆಯ ದರ್ಪ ಆತನ ಹೃದಯ ವೈಶಾಲ್ಯತೆ ಮಮತೆ ಹಾಗೂ ಮಲಮಗನನ್ನು ತನ್ನವನ್ನಾಗಿಸಲು ಪಡುವ ಹರಸಾಹಸದ ಮುಂದೆ ದರ್ಪವೆನಿಸುವುದಿಲ್ಲ.

ಬದಲಾಗಿ ಪ್ರೇಕ್ಷಕರ ಮನದಲ್ಲಿ ಅನುಕಂಪದ ಅಲೆ ಹುಟ್ಟುಹಾಕುತ್ತದೆ. ಮಲತಂದೆ ಮತ್ತು ಮಲಮಗನ ನಡುವೆ ಎದ್ದಿರುವ ಭಾವನಾತ್ಮಕ ಬಿರುಗಾಳಿಗೆ ಮತ್ತೊಂದು ಬಿರುಗಾಳಿಯೇ ಸಮಾಧಾನ ನೀಡಿರುವುದು ನಿರ್ದೇಶಕನ ಕಥಾ ನಿರ್ವಹಣೆಯ ಚಾಕಚಕ್ಯತೆಗೆ ಉದಾಹರಣೆ.
ಮೆಹರುಲ್ಲಾನ ಸ್ನೇಹಿತ ಲತೀಸ್ ಚಿತ್ರದ ಗಂಭೀರ ಸನ್ನಿವೇಶಗಳಲ್ಲೂ ಕೆಲವೊಮ್ಮೆ ಪ್ರೇಕ್ಷಕನ ತುಟಿಯಲ್ಲಿ ತುಸು ನಗು ಅರಳಿಸುತ್ತಾನೆ. ಚಿತ್ರದುದ್ದಕ್ಕೂ ಸಿಗುವ ಒಣಭೂಮಿ ಆಗೊಮ್ಮೆ ಈಗೊಮ್ಮೆ ಕಾಣಸಿಗುವ ಹಸಿರು ಚಿಗುರು ನೀರ ತೊರೆ ಇಲ್ಲಿನ ಪಾತ್ರಗಳ ಭಾವನೆಗಳ ಏರಿಳಿತಗಳ ಸೂಚ್ಯವೇನೋ ಎಂಬಂತೆ ಭಾಸವಾಗುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಭಾವನೆಗಳ ತಿಕ್ಕಾಟದಲ್ಲಿ ಸಾಗುವ ಚಿತ್ರ ಎಲ್ಲೂ ಕೂಡ ಪ್ರೇಕ್ಷಕನ ಮೇಲೆ ತನ್ನ ಹಿಡಿತ ಕಳೆದುಕೊಳ್ಳವುದಿಲ್ಲ. ಇಲ್ಲೆಲ್ಲೂ ಭಾವನೆಗಳ ಅತಿರೇಕದ ಹರಿವಿಲ್ಲ. ಎಲ್ಲವೂ ಹಿತ ಮಿತ. ಇತರ ಇರಾನಿ ಚಿತ್ರಗಳಂತೆ ಮಾನವೀಯ ಸಂಬಂಧಗಳಿಗೆ ಒತ್ತುನೀಡುತ್ತಾ ಸಾಗುವ ಚಿತ್ರ ಬದುಕಿನಲ್ಲಿ ಕಾಡುವ ಭಾವನಾತ್ಮಕ ಸಂಘರ್ಷಗಳ ಮೇಲೆ ಬೆಳಕುಚೆಲ್ಲುತ್ತಾ ಎರಡು ಗಂಟೆಗಳ ಕಾಲ ಪ್ರೇಕ್ಷಕನ ಮನದಲ್ಲಿ ತನ್ನ ಛಾಪುಮೂಡಿಸಿ ಬಹುಕಾಲ ಕಾಡುತ್ತದೆ.

ಜಯಲಕ್ಷ್ಮೀ ಜೆ.ಆಳ್ವ

0 comments:

Post a Comment