ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:20 PM

ವಾಸ್ತವ

Posted by ekanasu

ಸಾಹಿತ್ಯ
ಎರಡು ಕಥೆಗಳು
ದಿನವೂ ಪೀಡುಸುವ ಸೊಸೆ...ಒಗೆಯಲೊಂದಷ್ಟು ಬಟ್ಟೆ ತೊಳೆಯಲೊಂದಷ್ಟು ಪಾತ್ರೆ...ಸೊಂಟ ನೋವಿದ್ದರೂ ನೆಲ ಒರೆಸಬೇಕು... ಹೊತ್ತಿಗೆ ಸರಿಯಾಗಿ ಊಟವಿಲ್ಲ ಕತ್ತೆಚಾಕರಿ ತಪ್ಪಲ್ಲ. ದಿನವಿಡೀ ಕಾಡುವ ಕೆಮ್ಮಿಗೆ ಔಷಧಿ ತರುವವರಿಲ್ಲ. ಕತ್ತಲೆಕೋಣೆಯಲ್ಲಿ ಸೆರಗಿನಿಂದ ಮುಖ ಮುಚ್ಚಿಕೊಂಡು ಬಿಕ್ಕುವ ವೃದ್ಧೆ ನೋಡುಗರ ಕಣ್ಣಲ್ಲಿ ನೀರುಕ್ಕುತ್ತಿತ್ತು. ಎಂಥಹ ಕ್ರೂರಿ ಸೊಸೆ. , ಇಷ್ಟೊಂದು ದುಡಿಸಿಕೊಳ್ಳುತ್ತಾಳಲ್ಲ... ಹೊಟ್ಟೆಗೊಂದಿಷ್ಟು ಅನ್ನ ಹಾಕಬಾರದಾ... ಹೊರಗಿನಿಂದ ಬಂದಾಕೆ ಎಂದಾದರೂ ಅತ್ತೆಯನ್ನು ಅಮ್ಮಾ ಎಂದುಕೊಳ್ಳಲಿಕ್ಕಿದೆಯೇ... ಈ ತರದ ಹಲವಾರು ಅಭಿಪ್ರಾಯ ವಿಶ್ಲೇಷಣೆಗಳು ಆ ಮನೆಯಲ್ಲಿ ನಿತ್ಯವೂ ನಡೆಯುತ್ತಿತ್ತು.ಟಿ.ವಿಯಲ್ಲಿ ಬರುವ ಆ ಧಾರಾವಾಹಿ ದೃಶ್ಯ ಕಂಡಾಗೆಲ್ಲ ಟಿ.ವಿ.ಮುಂದೆ ಕೂತವರ ಕಣ್ಣಲ್ಲಿ ನಿತ್ಯ ಕಣ್ಣೀರು. ಆ ಸೊಸೆಯ ಪಾತ್ರಧಾರಿಗೊಂದಷ್ಟು ಬೈಗುಳ. ..ಗ್ಲಿಸರಿನ್ ಹಾಕಿ ಅಳುವ ವೃದ್ಧ ಪಾತ್ರಧಾರಿಯ ಕುರಿತೊಂದಷ್ಟು ಅನುಕಂಪ... ಇದು ಆ ಮನೆಯ ನಿತ್ಯದ ಕಥೆ...
ಅಡುಗೆ ಮನೆಯಲ್ಲೇನೋ ಸದ್ದು...ಕೆಮ್ಮಿನ ಜೊತೆಗೆ ಪಾತ್ರೆ ಉರುಳಿದ್ದು .. ಕೂತಲ್ಲಿಂದ ಕದಲದೆ ಟಿ.ವಿ.ನೋಡುತ್ತಿದ್ದ ಸೊಸೆ ಸಿಡಿದು ಬಿದ್ದಳು... ಜಾಗ್ರತೆಯಿಂದ ಪಾತ್ರೆ ತೊಳೆಯಕ್ಕಾಗಲ್ಲವಾ ಕೂಳಿಗೆ ದಂಡ. ''
ಟಿ.ವಿ. ನೋಡುತ್ತಿದ್ದ ಪುಟ್ಟಿಗೆ ಮತ್ತೆ ಟಿ.ವಿ.ನೋಡಬೇಕನಿಸಲಿಲ್ಲ. ಆ ಧಾರವಾಹಿಯ ಮುಂದಿನ ಕಂತು ತನ್ನ ಮನೆಯಲ್ಲಿ ನಡೆಯುತ್ತಿತ್ತು.


ಅಂದು ಬಾಲಕಾರ್ಮಿಕ ದಿನಾಚರಣೆ. ಲೇಡಿಸ್ ಕ್ಲಬ್ ನಲ್ಲಿ ಹಲವಾರು ಕಾರ್ಯಕ್ರಮಗಳ ಆಯೋಜನೆ. ರಾತ್ರಿ ಇಡೀ ಬರೆದು ಉರುಹೊಡೆದ ಭಾಷಣವನ್ನು ವೇದಿಕೆಯಲ್ಲಿ ಬಹಳ ಭಾವುಕರಾಗಿ ಅನವಾರಣ ಗೊಳಿಸಿದರು ಲಲಿತಮ್ಮ. ಬಾಲಕಾರ್ಮಿಕರ ಬದುಕಿನ ಬಗ್ಗೆ , ಅವರ ಕಣ್ಣೀರಿನ ಕಥೆಯ ಬಗ್ಗೆ ಆ ಪುಟ್ಟ ಮಕ್ಕಳ ಕಷ್ಟಕರ ಬಾಲ್ಯದ ಬಗ್ಗೆಹೃದಯ ಹಿಂಡಿದಂತೆ ಮಾತನಾಡಿದಾಗ ಪ್ರೇಕ್ಷಕರ ಕಣ್ಣಲ್ಲಿ ತೊಟ್ಟಿಕ್ಕಿದ ನೀರು. . ಭರ್ಜರಿ ಕರತಾಡನದ ಸದ್ದು. ಕಾರ್ಯಕ್ರಮ ಮುಗಿಯಿತು. ಆಯೋಜಕರು ನೀಡಿದ ಹೂ ಗುಚ್ಛ ಕಾಣಿಕೆಗಳನ್ನು ಕಾರಿನಲ್ಲಿಟ್ಟು ಕಾರಿನಲ್ಲಿ ಸಾಗಿದರು. ಮನೆಯೆಲ್ಲ ಕೊಳಕಾಗಿತ್ತು. ಮನೆಯಲ್ಲಿನ್ನೂ ಕೆಲಸ ಪೂರೈಸದಿದ್ದ ಪುಟ್ಟ ಹುಡುಗಿಯ ಮೇಲೆ ಸಿಟ್ಟು ನೆತ್ತಿಗೇರಿತ್ತು. ಒಲೆಯಲ್ಲಿ ಸಟ್ಟುಗ ಕಾಯುತ್ತಿತ್ತು. ಹುಡುಗಿಯ ಕಂಗಳಲ್ಲಿ ಭಯದ ನೆರಳು...
ಹಿನ್ನೆಲೆಯಲ್ಲಿ ರೇಡಿಯೋ ಹಾಡು... ``ಹೇಳುವುದು ಒಂದು... ಮಾಡುವುದು ಇನ್ನೊಂದು...''

- ಜಯ

0 comments:

Post a Comment