ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್

ಭುವಿಗೆ ಬಿದ್ದ ಮೊದಲ ಮಳೆಹನಿಗೆ ಅದೆಷ್ಟು ಸಂಭ್ರಮ..... ಆ ಹನಿಯಲ್ಲಿ ಎಲ್ಲರಿಗೂ ತುಸುವಾದರೂ ನೆನೀಬೇಕೆನ್ನುವ ಆಸೆ, ಬಿಸಿಲ ಬೇಗೆಗೆ ತಂಪಗಿನ ಸಿಂಚನವನ್ನೀಯುವ ನೆಪದಿಂದ ಮೊದಲ ಮಳೆಹನಿ ಜಾಸ್ತಿ ಖುಷಿ ಕೊಟ್ಟಿರುತ್ತದೆ.
ಭುವಿಗೂ ಅದೇ ಸಂಭ್ರಮ ಮಳೆಹನಿಯ ಜೊತೆಯಲ್ಲಿ...ಹನಿ ಬಿದ್ದ ಕ್ಷಣ ಬರುವ ಆ ಪರಿಮಳವೇ ಅದೆಷ್ಟು ಚಂದ... ಎಲ್ಲವನ್ನು ಕಳಕೊಂಡ ಮರಗಿಡಗಳೆಲ್ಲ ಮತ್ತೆ ಚಿಗುರುತ್ತವೆ, ಬರಡಾದ ನೆಲ ಮತ್ತೆ ಮೈದುಂಬುತ್ತದೆ. ಹಾಗೇ ಮತ್ತದೇ ಕಪ್ಪಗಿನ ಬಸುರಿ ಮೋಡ ಗುಮ್ಮಗೆ ಕೂತು ಸಂಭ್ರಮ ಹೆಚ್ಚಿಸುತ್ತದೆ...ಮರುಭೂಮಿಯ ಓಯಸಿಸ್ನಂತೆ...

ಇಷ್ಟೆಲ್ಲ ಸಂಭ್ರಮದಿಂದ ಭುವಿಗಿಳಿದ ಮಳೆಹನಿಯನ್ನು ಕೊನೆಕೊನೆಗೆ ಕೇಳುವವರೇ ಇಲ್ಲ. ಎಲ್ಲ ಕಡೆ ನೀರು ತುಂಬಿ ತುಳುಕುತ್ತಿರುತ್ತದೆ... ಮನೆಯ ಮೂಲೆಯಲ್ಲಿ ಕೂತು ಅಂದು ಖುಷಿಪಟ್ಟಿದ್ದ ಮಳೆಹನಿಗೇನೇ ಬೈಯುತ್ತೇವೆ..... ಬಸುರಿ ಮೋಡ ಗಾಳಿಯ ಹೊಡೆತಕ್ಕೆ ಸಿಕ್ಕಿ ಇನ್ನೆಲ್ಲೋ ತೇಲಿ ಹೋಗಲಿ ಅನ್ನೋ ಶಾಪ...

ಹೀಗೆ ಪಡಕೊಂಡವುಗಳನ್ನು ಕೆಲವೇ ಕೆಲವು ಕ್ಷಣದಲ್ಲಿ ಕಳಕೊಳ್ಳಬೇಕೆನ್ನುವ ಬಯಕೆ.... ಹಾಗಾಗಿಯೇ ಇರಬಹುದು ಕೆಲವು ಸಂಬಂಧಗಳು ಆಷಾಡದ ಮಳೆಯಂತಿದ್ದು ಮತ್ತೆಲ್ಲೋ ಕಳೆದುಹೋಗುವುದು. ಆಷಾಡದ ಮಳೆ ಆರಂಭವಾಗುವಾಗ ಇರುವ ಹುಮ್ಮಸ್ಸು ಬರೇ ಮೂವತ್ತು ದಿನದಲ್ಲಿ ಕಳೆದುಹೋಗುತ್ತದೆ. ಬೋರ್ ಅನ್ನಿಸಿಬಿಡುತ್ತದೆ, ಮತ್ತೇನೋ ಬೇಕೆಂದೆನಿಸುತ್ತದೆ.... ಇನ್ನೇನ್ನನ್ನೋ ಹುಡುಕಿಕೊಂಡು ಹೊರಟುಬಿಡುತ್ತೇವೆ.

ಯಾಕೋ ಎಷ್ಟೋ ಸಂಬಂಧಗಳು ಹೀಗೆ ಅನ್ನಿಸುತ್ತೆ....! ಸ್ವಲ್ಪ ಸಮಯದ ಅವರ ಒಡನಾಟ, ಆತ್ಮೀಯತೆ ಕಿರಿಕಿರಿ ಅನಿಸಲಾರಂಭಿಸುತ್ತದೆ. ಅತಿಯಾದ ಪ್ರೀತಿ, ಆತ್ಮೀಯತೆ ಉಸಿರುಗಟ್ಟಿಸಲಾರಂಭಿಸುತ್ತದೆ. ಒಂದು ಕ್ಷಣದ ಹಿಂದೆ ಪರಿಚಯವಾದವರೇ ಹೆಚ್ಚು ಇಷ್ಟವಾಗತೊಡಗುತ್ತಾರೆ.... ನಮಗೆಲ್ಲರಿಗೂ ಹೊಸತರಲ್ಲೇ ಆಸಕ್ತಿಯಲ್ವಾ..... ಹಳೆಯದನ್ನು ಕಳಚಿ ಹೊಸಬಟ್ಟೆ ಧರಿಸುವಾಗ ಹಳತು ದೀನವಾಗಿ ನಮ್ಮನ್ನು ನೋಡುತ್ತಿರುತ್ತದೆಯಂತೆ..... ಇದು ಸಂಬಂಧಕ್ಕೂ ಹೋಲಿಕೆಯಾಗಬಹುದಲ್ವಾ..... ಇವತ್ತು ಹೊಸತು ನಾಳೆ ಹಳತೇ ಅನ್ನುವುದನ್ನು ಕೂಡ ಮರೆತಿರುತ್ತೇವೆ. ಹೋಲಿಕೆ ಅನ್ನೋದು ನಮ್ಮ ಎರಡು ಕಣ್ಣುಗಳ ನಂಬಿಕೆ..... ಹಳೆಯದರಲ್ಲಿ ಹೊಸತನ್ನು ಕಂಡುಕೊಳ್ಳೋದು, ಹೊಸತರಲ್ಲಿ ಹಳೆಯದನ್ನು ಹುಡುಕೋದು.....

ಆದರೆ ಆಷಾಡದ ಮಳೆಗೆ ಆ ಮಳೆಹನಿಯೇ ಸಾಟಿ ಮತ್ಯಾವುದೂ ಸಾಟಿಯಾಗೋಕೆ ಸಾಧ್ಯನೇ ಇಲ್ಲ.... ತಿಂಗಳ ನಂತರ ಮರೆತುಹೋದರೂ ವರ್ಷದಲ್ಲಿ ಎಲ್ಲೋ ಕಾಡಬಹುದು.... ಹೀಗೆ ಬದುಕಿನ ಕೆಲವು ಸಂಬಂಧಗಳಾದರೂ ಆಷಾಡದ ಮಳೆಯಂತೆ ಕಾಡಲಿ....

ದೀಷ್ಮಾ.ಡಿ.ಶೆಟ್ಟಿ

0 comments:

Post a Comment