ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:23 PM

ಮುಗಿಯದ ರೀಲು...

Posted by ekanasu

ಅಂಕಣ

ಸ್ಫೂರ್ತಿಯ ಸೆಲೆ
80-90ರ ದಶಕ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಷ್ಠರೋಗ ನಿಯಂತ್ರಣ ಕಾರ್ಯ ಬಹಳ ಚುರುಕಿನಿಂದ ನಡೆಯುತ್ತಿದ್ದ ಸಮಯ. ಕುಷ್ಠರೋಗದ ಬಗ್ಗೆ ಸಮಾಜದಲ್ಲಿ ಮೂಢನಂಬಿಕೆ, ತಪ್ಪು ತಿಳಿವಳಿಕೆ ಇದ್ದಂತಹ ಕಾಲದಲ್ಲಿ ಈ ರೋಗಕ್ಕೆ ತುತ್ತಾದಂತಹ ವ್ಯಕ್ತಿಗೆ ಮನೆಯಲ್ಲಿ ಆಸರೆ ಇರುತ್ತಿರಲಿಲ್ಲ. ರಸ್ತೆ ಬದಿ, ಸಂತೆ, ದೇವಸ್ಥಾನ ವಠಾರ ಅಥವಾ ಬಸ್ ಸ್ಟ್ಯಾಂಡೇ ಅವರ ವಾಸಸ್ಥಾನವಾಗಿರುತ್ತಿತ್ತು. ಕುಷ್ಠರೋಗ ನಿಯಂತ್ರಣ ಕಾರ್ಯದಲ್ಲಿ ಆಗ ಹಿಂದ್ ಕುಷ್ಠರೋಗ ನಿವಾರಣಾ ಸಂಘ (ಹೆಚ್ಕೆಎನ್ಎಸ್) ಮತ್ತು ಫಾದರ್ ಮುಲ್ಲರ್ ಆಸ್ಪತ್ರೆ - ಈ ಎರಡು ಸಂಸ್ಥೆಗಳು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಸಹಕಾರ ಬಯಸಿದ್ದವು. ಜನವರಿ ತಿಂಗಳು ಕುಷ್ಠರೋಗ ನಿವಾರಣಾ ಮಾಸಾಚರಣೆ ಅಂಗವಾಗಿ ಜಿಲ್ಲೆಯ ಮೂಲೆಮೂಲೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು.ಪ್ರತಿದಿನ ಹಗಲು ವೇಳೆ ಮೂರರಿಂದ ನಾಲ್ಕು ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ. ಸಂಜೆ ಪಬ್ಲಿಕ್ ಪ್ರೋಗ್ರಾಂ. ವಾರ್ಷಿಕ ಕೋಲ, ಯಕ್ಷಗಾನ, ಉತ್ಸವ, ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ನಮ್ಮ ಚಲನಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ ವ್ಯವಸ್ಥೆಗೊಳಿಸುವುದು ಆಗ ಸಾಮಾನ್ಯ. ಕಾರ್ಯಕ್ರಮ ಮುಗಿದ ನಂತರ ಬಹಳಷ್ಟು ಕಡೆಗಳಲ್ಲಿ ಜನರು ತಮ್ಮ ಶರೀರದಲ್ಲಿ ಯಾವುದೇ ಕಲೆಗಳಿದ್ದರೂ ನಮ್ಮಲ್ಲಿಗೆ ಬರುತ್ತಿದ್ದರು. ಡಾ. ಶಿವಸ್ವಾಮಿ ಹಾಗೂ ಆರೋಗ್ಯ ಕಾರ್ಯಕರ್ತರು ಪರೀಕ್ಷಿಸಿ ಸೂಕ್ತ ಸಲಹೆ ನೀಡುತ್ತಿದ್ದರು. ಕುಷ್ಠರೋಗದ ಲಕ್ಷಣ ಕಂಡುಬಂದರೆ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಕುಷ್ಠರೋಗಿಗಳಿದ್ದ ಹಳ್ಳಿಗಳಲ್ಲಿ ಆಗಾಗ ಶಾಲೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿತು.
ಹೆಚ್ಕೆಎನ್ಎಸ್ ಗೌರಾವಧ್ಯಕ್ಷರಾಗಿದ್ದ ಡಾ. ಜೆ.ಎನ್.ಶೆಟ್ಟಿ ಹಾಗೂ ಸಂಸ್ಥೆಯ ಎಲ್ಲಾ ಆರೋಗ್ಯ ಕಾರ್ಯಕರ್ತರ ಸಮರ್ಪಣಾ ಭಾವದ ಕೆಲಸ ನನಗೆ ಸ್ಫೂರ್ತಿಯಾಗಿತ್ತು.

ಆರೋಗ್ಯ ಅರಿವು
ಒಮ್ಮೆ ಕಿನ್ನಿಗೋಳಿಯ ಸಮೀಪದ ಒಂದು ಹಳ್ಳಿಯಲ್ಲಿ ಶಾಲಾ ಕಾರ್ಯಕ್ರಮ ಏರ್ಪಡಿಸಿದ್ದ ಸಂದರ್ಭ ಒಬ್ಬ ಹುಡುಗ ಹೇಳಿದ - `ನಮ್ಮೂರಲ್ಲಿ ಓರ್ವ ವ್ಯಕ್ತಿ ಮನೆಯ ಹೊರಗೆ ಹಟ್ಟಿಯಲ್ಲಿ ವಾಸಿಸುತ್ತಾರೆ.' ಆ ಮನೆಯನ್ನು ಪತ್ತೆಹಚ್ಚಿದ ನಾವು ಮನೆಯ ಪಕ್ಕದಲ್ಲಿದ್ದ ಬಸ್ ಸ್ಟ್ಯಾಂಡಿನಲ್ಲಿ ಕುಷ್ಠರೋಗದ ಬಗ್ಗೆ ಚಲನಚಿತ್ರ ಪ್ರದರ್ಶನ ನಡೆಸಿದೆವು. ಕುಷ್ಠರೋಗ ಸಾಮಾನ್ಯ ಚರ್ಮರೋಗವೇ ಹೊರತು ನಾಗಶಾಪದಿಂದಾಗಲೀ ಅಥವಾ ಇನ್ನಾವುದೇ ಪಾಪಕರ್ಮದ ಫಲದಿಂದಾಗಲೀ ಬರುವ ಕಾಯಿಲೆ ಅಲ್ಲ, ಅದಕ್ಕೆ ಔಷಧಿ ಇದೆ, ರೋಗಪೀಡಿತ ವ್ಯಕ್ತಿಯನ್ನು ಮನೆಯಲ್ಲಿಟ್ಟುಕೊಂಡೇ ಆತನಿಗೆ ಚಿಕಿತ್ಸೆ, ಶುಶ್ರೂಷೆ ಮಾಡಬಹುದು ಎಂಬ ಮಾಹಿತಿ ನೀಡಿದೆವು. ಮೂರನೇ ದಿನ ಆ ಮನೆಗೆ ಭೇಟಿ ನೀಡಿದಾಗ ಅಲ್ಲಿನ ಚಿತ್ರಣ ಬದಲಾಗಿತ್ತು. ಆದರೆ ವ್ಯಕ್ತಿಯ ರೋಗ ಉಲ್ಬಣಗೊಂಡ ಕಾರಣ ಆತನನ್ನು ಕುಷ್ಠರೋಗ ಪುನರ್ವಸತಿ ಕೇಂದ್ರಕ್ಕೆ ದಾಖಲುಮಾಡಿ ಆರೈಕೆ ಮಾಡಲಾಯಿತು. ತದ ನಂತರದಲ್ಲಿ ಆತನನ್ನು ಮನೆಗೆ ಕರೆದುಕೊಂಡು ಹೋಗಿ ಅವರ ಸಂಸಾರ ಅವರ ರಕ್ಷಣೆ, ಆರೈಕೆಗೆ ಮುಂದಾಯಿತು.

ಧನ್ಯತಾ ಭಾವ
ನಮ್ಮ ನಿರ್ದೇಶನಾಲಯದ ವತಿಯಿಂದ ಏರ್ಪಡಿಸಿದ ಕುಷ್ಠರೋಗ ಮಾಹಿತಿ ಪ್ರಚಾರ ಆಂದೋಲನದ ಆಂಗವಾಗಿ ಕೊಳ್ಳೇಗಾಲದ ಒಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಿಗದಿಗೊಳಿಸಲಾಗಿತ್ತು. ವಾಸ್ತವ್ಯ ಹಳ್ಳಿಯ ಗ್ರಾಮ ಪಂಚಾಯತಿ ಕಚೇರಿಯಲ್ಲಿ. ಬೆಳಿಗ್ಗೆ 9 ಗಂಟೆಯೊಳಗೆ ನಮ್ಮ ಎಲ್ಲಾ ನಿತ್ಯಕರ್ಮ ಮುಗಿಸಿ ಕಛೇರಿಯನ್ನು ತೆರವು ಮಾಡಿಕೊಡಬೇಕಿತ್ತು. ವಿಶೇಷವೇನೆಂದರೆ ಬೆಳಿಗ್ಗೆ ಎದ್ದರೆ ಅಲ್ಲಿ ನಮಗೆ ದರ್ಶನವಾಗುತ್ತಿದ್ದುದು ಕುಷ್ಠರೋಗಿಗಳದ್ದೇ. ಎಷ್ಟು ಭೀಕರ ಎಂದರೆ ಯಾರಿಗೂ ಚಿಕಿತ್ಸೆ ಇಲ್ಲ. ಹೊಟೇಲುಗಳ ಹೊರಗೆ `ಕುಷ್ಠರೋಗಿಗಳಿಗೆ ಪ್ರವೇಶವಿಲ್ಲ' ಎನ್ನುವ ಫಲಕ ಕಂಡುಬರುತ್ತಿತ್ತು. ನಾವು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಚಲನಚಿತ್ರ ಪ್ರದರ್ಶನದ ಮೂಲಕ ಮಾಹಿತಿ ನೀಡಿ ಅರಿವು ಮೂಡಿಸುತ್ತಿದ್ದೆವು. ಒಂದು ದಿನ ಅಜ್ಜಿಯೊಬ್ಬರು ತನ್ನನ್ನು ಪಂಚಾಯಿತಿಯೊಳಗೆ ಬಿಡುತ್ತಿಲ್ಲ; ನನಗೆ ಅಂಗವಿಕಲ ಭತ್ಯೆ ನೀಡಲು ಒಪ್ಪುತ್ತಿಲ್ಲ ಎಂದರು. ಮಾರನೇ ದಿನ ನಾನು ಅಜ್ಜಿಯೊಂದಿಗೆ ಪಂಚಾಯತ್ ಕಾರ್ಯದರ್ಶಿಯನ್ನು ಭೇಟಿಮಾಡಿ ಕುಷ್ಠರೋಗದಿಂದ ಅಂಗವಿಕಲತೆಗೊಳಗಾದವರಿಗೂ ಅಂಗವಿಕಲ ಭತ್ಯೆ ನೀಡುವ ಮಾಹಿತಿ ವಿವರಿಸಿದ ನಂತರ ಆಕೆಯಿಂದ ಆ ಅರ್ಜಿಯನ್ನು ಪಡೆದುಕೊಳ್ಳುವಂತಾಯಿತು. ಕೈಕಾಲುಗಳು ಊನಗೊಂಡ ಅಜ್ಜಿ ಧನ್ಯತಾಭಾವದೊಂದಿಗೆ ತೆರಳಿದರು.

ತಂಬಾಕು ಡಬ್ಬಿ ಕೆರೆಗೆ!
ಸುಮಾರು 1990ನೇ ಇಸವಿ ಇರಬೇಕು. ಕುಂದಾಪುರ ಪೇಟೆಯಲ್ಲಿ 16ಎಂಎಂ ಫಿಲಂ ತೋರಿಸುತ್ತಿದ್ದ ಸಂದರ್ಭ ಸಾಕಷ್ಟು ಜನರು ಸೇರಿದ್ದರು. ಕೊನೆಯ ರೀಲು ತಂಬಾಕು ಸೇವನೆಯ ದುಷ್ಪರಿಣಾಮಕ್ಕೆ ಸಂಬಂಧಿಸಿದ್ದು. ಅದನ್ನು ಪ್ರದರ್ಶಿಸುತ್ತಿದ್ದಂತೆ ಪಕ್ಕದಲ್ಲಿ ಕುಳಿತು ವೀಕ್ಷಿಸುತ್ತಿದ್ದ ಸುಮಾರು 65-70 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಪ್ರಜ್ಞೆತಪ್ಪಿ ಬಿದ್ದುಬಿಟ್ಟರು. ಬಳಿಕ ಎಚ್ಚೆತ್ತು ಸುಧಾರಿಸಿಕೊಂಡು ಮೊಮ್ಮಗನ ಸಹಾಯದಿಂದ ಪೂರ್ತಿ ಕಾರ್ಯಕ್ರಮ ನೋಡಿ ನಿರ್ಗಮಿಸಿದರು. ಮಾರನೇ ದಿನ ಪಕ್ಕದ ಶಾಲೆಯೊಂದರಲ್ಲಿ ಚಲನಚಿತ್ರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಹಿಂದಿನ ರಾತ್ರಿ ಅಜ್ಜಿಯ ಜೊತೆಗಿದ್ದ ಬಾಲಕ ನಮ್ಮನ್ನು ಗುರುತಿಸಿದ. `ಅಜ್ಜಿ ಹೇಗಿದ್ದಾರೆ' ಎಂದು ಪ್ರಶ್ನಿಸಿದೆ. `ಅಜ್ಜಿ ನಿಮ್ಮ ಸಿನೆಮಾ ನೋಡಿ ಹೆದರಿ ಬಿದ್ದುಬಿಟ್ಟರು. ಬೆಳಗ್ಗೆ ಎದ್ದು ಮನೆಯಲ್ಲಿ ಯಾರೂ ತಂಬಾಕು ತಿನ್ನಬಾರದೆಂದು ತಾಕೀತು ಮಾಡಿದ್ರು. ಮತ್ತೆ ಅವರ ತಂಬಾಕು - ಎಲೆ ಅಡಿಕೆ ಡಬ್ಬಿಯನ್ನು ಕೆರೆಗೆ ಬಿಸಾಡಿದರು' ಎಂದು ಬಾಲಕ ಉತ್ತರಿಸಿದಾಗ ನನಗೆ ಅಚ್ಚರಿ. ಆತನೇ ಇನ್ನಷ್ಟು ವಿವರ ನೀಡಿದ. ಅಜ್ಜಿಯ ನೆರೆಕರೆಯಲ್ಲಿ ಇನ್ನೊಬ್ಬ ಮಹಿಳೆ ಎರಡು ದಿನಗಳ ಹಿಂದೆಯಷ್ಟೆ ಬಾಯಿ ಕ್ಯಾನ್ಸರ್ನಿಂದ ತೀರಿಕೊಂಡಿದ್ದರು. ಆ ಮಹಿಳೆ ಎಷ್ಟು ತಂಬಾಕು ತಿನ್ನುತ್ತಿದ್ದಾರೆಂದರೆ ರಾತ್ರಿ ಮಲಗುವಾಗ ಕೂಡಾ ಬಾಯಿಯಲ್ಲಿ ಹೊಗೆಸೊಪ್ಪು ದಂಟು ಇಟ್ಟುಕೊಂಡಿರುತ್ತಿದ್ದರು. ವರ್ಷ ಕಳೆದಂತೆ ಬಾಯಿಯಲ್ಲಿ ಹುಣ್ಣು ಕಾಣಿಸಿಕೊಂಡು ಮಣಿಪಾಲ ಆಸ್ಪತ್ರೆಗೆ ಹೋಗುವ ಹೊತ್ತಿಗೆ ಗಂಟಲುಪೂರ್ತಿ ಹುಣ್ಣು ಆವರಿಸಿದ್ದನ್ನು ಈ ಅಜ್ಜಿ ನೋಡಿದ್ದರು. ಅದೇ ಸಮಯಕ್ಕೆ ಅಜ್ಜಿ ಕೂಡಾ ವಿಪರೀತ ಹೊಗೆಸೊಪ್ಪು ತಿನ್ನುವ ಚಟ ಅಂಟಿಸಿಕೊಂಡಿದ್ದರು. ನಮ್ಮ ಸಿನೆಮಾದಲ್ಲಿ ತಂಬಾಕಿನ ದುಷ್ಪಾರಿಣಾಮದಿಂದಾಗಿ ಬರುವ ಕ್ಯಾನ್ಸರಿನ ವಿವಿಧ ದೃಶ್ಯಗಳನ್ನು ನೋಡಿದ ಅಜ್ಜಿ ಭಯಗೊಂಡು ಮೂರ್ಚೆ ಹೋಗಿದ್ದರು.

ಗುಂಡಿಬೈಲು ಶ್ರೀನಿವಾಸ್

0 comments:

Post a Comment