ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಅಂಕಣ


ಟಾಕೀಸಿನಲ್ಲಿ ರಾತ್ರಿ-ಹಗಲು ದುಡಿಯುತ್ತಿದ್ದ ನನಗೆ ಹೊಸ ಕೆಲಸ ಆರಾಮವೆನಿಸಿತು; ಮನಸ್ಸಿಗೆ ಮುದನೀಡಿತು. 16 ಎಂಎಂ ಪ್ರೊಜೆಕ್ಟರ್ ನಲ್ಲಿ ಸಾಕ್ಷ್ಯಚಿತ್ರಗಳ ರೀಲುಗಳನ್ನು ಹಾಕಿ ಪ್ರದರ್ಶಿಸುವುದು ನನ್ನ ಮುಖ್ಯ ಕೆಲಸ.ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಮಂಗಳೂರು ಘಟಕವನ್ನು 1979ರ ಸೆಪ್ಟೆಂಬರಿನಲ್ಲಿ ಆರಂಭಿಸಿದವರು ಬಿ. ಕೃಷ್ಣಾನಂದ ಹೆಗ್ಡೆಯವರು. ಅದಕ್ಕೂ ಮೊದಲು ಅವರು ಎರವಲು ಸೇವೆಯ ಮೇಲೆ ಸಿಂಡಿಕೇಟ್ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ (ಮಣಿಪಾಲ) ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಗ ಅವರ ವಿಭಾಗದಲ್ಲಿ ಕಲಾವಿದನಾಗಿದ್ದ ಲಿಯಾಕತ್ ಆಲಿ ನನ್ನ ಹೈಸ್ಕೂಲ್ ಸಹಪಾಠಿ. ಹೆಗ್ಡೆಯವರು ಕ್ಷೇತ್ರ ಪ್ರಚಾರಾಧಿಕಾರಿಯಾದ ಬಳಿಕ ಪ್ರಚಾರ ಸಹಾಯಕ ಹುದ್ದೆಗೆ ಸೂಕ್ತ ಅಭ್ಯರ್ಥಿಗಾಗಿ ಹುಡುಕುತ್ತಿದ್ದರು. ಈ ವಿಷಯವನ್ನು ಅವರು ಲಿಯಾಕತ್ ಜತೆ ಪ್ರಸ್ತಾಪಿಸಿ, `ಯಾರಾದರೂ ಸಿನೆಮಾ ಆಪರೇಟರ್ ಕೆಲಸ ಮಾಡುವವರಿದ್ದರೆ ತಿಳಿಸಿ ಎಂದಿದ್ದರು. ಲಿಯಾಕತ್ ಕೂಡಲೇ ತನ್ನನ್ನು ಸಂಪರ್ಕಿಸುವಂತೆ ನನಗೆ ಹೇಳಿಕಳುಹಿಸಿದರು. ನಾನಾಗ ಉಡುಪಿಯ ಕಲ್ಪನಾ ಟಾಕೀಸಿನಲ್ಲಿ ಸಿನೆಮಾ ಆಪರೇಟರ್ ಆಗಿ ಕೆಲಸಮಾಡುತ್ತಿದ್ದೆ.

ಮಾರನೇ ದಿನ ಆಲಿಯನ್ನು ಕಾಣಲು ಹೋದ ನನ್ನನ್ನು ಅವರು ನೇರವಾಗಿ ಅಂಬಲಪಾಡಿಯಲ್ಲಿದ್ದ ಹೆಗ್ಡೆಯವರ ಮನೆಗೆ ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದರು. ಆಳುಕಿನಿಂದಿದ್ದ ನಾನು ಅವರ ಆತ್ಮೀಯತೆ ಕಂಡು ಪುಳಕಿತನಾದೆ. ನನ್ನ ವಿವರ ಕೇಳಿದ ಅವರು ಸೋಮವಾರವೇ ಮಂಗಳೂರಿನ ಫಳ್ನೀರಿನಲ್ಲಿರುವ ಕಚೇರಿಗೆ ಬರುವಂತೆ ತಿಳಿಸಿದರು. ಅಂದು ಕಚೇರಿಗೆ ಹೋದವನಿಗೆ ಬಿಳಿ ಕಾಗದವನ್ನು ಕೊಟ್ಟು ಅರ್ಜಿ ಟೈಪ್ ಮಾಡಿ ಕೊಡುವಂತೆ ಹೇಳಿದರು. ಬಳಿಕ ಎದುರಿಗೆ ಕುಳ್ಳಿರಿಸಿ ಇಲಾಖೆಯ ಬಗ್ಗೆ ಮಾಹಿತಿ ನೀಡಿ ಓದಿಕೊಳ್ಳಿ ಉಪಯೋಗಕ್ಕೆ ಬರಬಹುದು ಎಂದು ಕಳುಹಿಸಿಕೊಟ್ಟರು. ತಿಂಗಳೊಳಗೆ ಬೆಂಗಳೂರಿನಿಂದ ಸಂದರ್ಶನ ಪತ್ರ ಬಂತು. ಸಂದರ್ಶನದಲ್ಲಿ ಪ್ರೊಜೆಕ್ಟರ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಧೈರ್ಯದಿಂದ ಉತ್ತರಿಸಿದೆ. ನಂತರದ ಪ್ರಶ್ನೆ : `ಇಲಾಖೆಯ ಬಗ್ಗೆ ಏನು ತಿಳಿದಿದ್ದೀರಿ? ಹೆಗ್ಡೆಯವರು ಕೊಟ್ಟಿದ್ದ ಮಾಹಿತಿಯನ್ನು ಮನನ ಮಾಡಿಕೊಂಡಿದ್ದ ನಾನು ಈ ಪ್ರಶ್ನೆಗೂ ಪಟಪಟನೆ ಉತ್ತರಿಸಿದೆ. `ಪರವಾಗಿಲ್ಲ, ಹೆಗ್ಡೆಯವರು ಈಗಾಗಲೇ ತರಬೇತಿ ನೀಡಿದ್ದಾರೆ ಎಂದು ನಕ್ಕರು ಅಂದಿನ ಪ್ರಾದೇಶಿಕ ಅಧಿಕಾರಿ ಎಂ.ಎಸ್. ಭಾರದ್ವಾಜ್ ಅವರು. ಕೆಲದಿನಗಳಲ್ಲೆ ಕೆಲಸಕ್ಕೆ ಸೇರಲು ಆಜ್ಞಾಪತ್ರವೂ ಕೈಸೇರಿತು. ಮೇ 9, 1980ರಂದು ನಾನು ಕ್ಷೇತ್ರ ಪ್ರಚಾರ ಸಹಾಯಕನಾಗಿ ಸರಕಾರಿ ಸೇವೆಗೆ ಅಡಿ ಇಟ್ಟೆ.

ಟಾಕೀಸಿನಲ್ಲಿ ರಾತ್ರಿ-ಹಗಲು ದುಡಿಯುತ್ತಿದ್ದ ನನಗೆ ಹೊಸ ಕೆಲಸ ಆರಾಮವೆನಿಸಿತು; ಮನಸ್ಸಿಗೆ ಮುದನೀಡಿತು. 16 ಎಂಎಂ ಪ್ರೊಜೆಕ್ಟರ್ ನಲ್ಲಿ ಸಾಕ್ಷ್ಯಚಿತ್ರಗಳ ರೀಲುಗಳನ್ನು ಹಾಕಿ ಪ್ರದರ್ಶಿಸುವುದು ನನ್ನ ಮುಖ್ಯ ಕೆಲಸ. ಕಾರ್ಯಕ್ರಮ ಆರಂಭಿಸುವಾಗ ಪ್ರಸ್ತಾವನೆ ಹಾಗೂ ಪ್ರತೀ ಚಿತ್ರದ ಬಗ್ಗೆಯೂ ವಿವರ ನೀಡುವುದು ವಾಡಿಕೆ. ಅದನ್ನು ಹೆಗ್ಡೆಯವರು ನಡೆಸಿಕೊಡುತ್ತಿದ್ದ ರೀತಿ ಅನನ್ಯ. ಜನರ ಮನಸ್ಸಿಗೆ ನಾಟುವಂತೆ ಅವರು ಅತ್ಯಂತ ಸರಳವಾಗಿ, ಸುಂದರವಾಗಿ, ಪರಿಣಾಮಕಾರಿಯಾಗಿ ವಿವರಿಸುತ್ತಿದ್ದರು. ಬರಬರುತ್ತಾ ಸಿನೆಮಾಗಳ ಬಗ್ಗೆ ವಿವರಿಸುವಂತೆ ಅವರು ನನಗೆ ಮಾರ್ಗದರ್ಶನ ಮಾಡುತ್ತ ಅದರ ಜವಾಬ್ದಾರಿಯನ್ನು ನಿಭಾಯಿಸುವಂತೆ ಹುರಿದುಂಬಿಸಿ ನನ್ನನ್ನು ತಯಾರುಮಾಡಿದರು. ಸೇರಿದ ಜನರು, ಪ್ರದೇಶ ಹಾಗೂ ಸಂದರ್ಭಕ್ಕನುಗುಣವಾಗಿ ಅವರು ಸೂಕ್ತ ವಿಷಯ, ರೀಲುಗಳ ಬಗ್ಗೆ ನನ್ನೊಡನೆ ಚರ್ಚಿಸಿ ಪ್ರದರ್ಶನಕ್ಕೆ ಅಣಿಗೊಳಿಸುತ್ತಿದ್ದರು. `ನಾವು ಮಾಡುವ ಕೆಲಸ ಯಾವುದೇ ಇರಬಹುದು; ಅದಕ್ಕೆ ಅದರದೇ ಆದ ಒಂದು ತೂಕ, ಶಿಸ್ತು, ಮಹತ್ವವಿದೆ ಎಂಬ ಹೆಗ್ಡೆಯವರ ಮಾತು ನನ್ನ ಜವಾಬ್ದಾರಿಯನ್ನು ಜಾಗೃತಗೊಳಿಸಿತು.

ಸರಳತನ, ವಿನಯಶೀಲತೆ, ಸ್ನೇಹಪರತೆ ಕೃಷ್ಣಾನಂದ ಹೆಗ್ಡೆಯವರ ಕಾರ್ಯಕ್ರಮಗಳ ಯಶಸ್ಸಿನ ಗುಟ್ಟು. ಅಂದಿನ ದಿನಗಳಲ್ಲಿ ಕಾರ್ಯಕ್ರಮ ನಡೆಸಲು ಇಂದಿನಂತೆ ಆರ್ಥಿಕ ಅನುಕೂಲತೆಗಳಿರಲಿಲ್ಲ. ಆದರೂ 1981ರ ಮಾರ್ಚ್ ನಲ್ಲಿ ಅವರ ಮಾರ್ಗದರ್ಶನದಲ್ಲಿ ಸುಳ್ಯ ತಾಲೂಕಿನ ಕುಕ್ಕುಜಡ್ಕದಲ್ಲಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ ಸಾಂಸ್ಕೃತಿಕ ಉತ್ಸವ ಮರೆಯಲಾಗದ ಅನುಭವ. ಇಲಾಖೆ ವತಿಯಿಂದ ಅತ್ಯಲ್ಪ ಧನಸಹಾಯ ಒದಗಿತ್ತು. ಚೊಕ್ಕಾಡಿ ಪ್ರೌಢಶಾಲೆಯ ವಠಾರದಲ್ಲಿ ಹಾಕಿದ ಭವ್ಯ ವಿಶಾಲ ರಂಗಮಂದಿರದಲ್ಲಿ ಸಾಂಸ್ಕೃತಿಕ ಉತ್ಸವ ಅದ್ದೂರಿಯಾಗಿ ನಡೆಯಿತು. ಅದರ ಯಶಸ್ಸಿಗೆ ಊರಿನ ಸಮಸ್ತರು ಹಾಗೂ ಶಾಲಾಶಿಕ್ಷಕರಿಂದ ದೊರೆತ ಸಹಕಾರ ಅವಿಸ್ಮರಣೀಯ. ಆಗ ಕುಕ್ಕುಜಡ್ಕಕ್ಕೆ ಸರಿಯಾದ ರಸ್ತೆ ಇರಲಿಲ್ಲ. ನೀರು ಹರಿಯುವ ತೋಡಿನಲ್ಲೇ ವಾಹನಗಳು ಹೋಗಬೇಕಿತ್ತು. ಕಾರ್ಯಕ್ರಮಕ್ಕೆ ಆಗ ಕೇಂದ್ರ ಸಚಿವರಾಗಿದ್ದ ಟಿ.ಎ.ಪೈ ಸೇರಿದಂತೆ ಗಣ್ಯಾತಿಗಣ್ಯರು ಬಂದಿದ್ದರು. ಸಾಹಿತಿಗಳು, ಕಲಾವಿದರು, ಅಧಿಕಾರಿಗಳು ಎಲ್ಲರೂ ಸೇರಿ ಒಂದು ದೊಡ್ಡ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಸರಕಾರದ ಯೋಜನೆಗಳ ಬಗ್ಗೆ ಚಲನಚಿತ್ರ ಪ್ರದರ್ಶನ, ವಿವಿಧ ಇಲಾಖೆಗಳಿಂದ ವಸ್ತುಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಕೂಡ ಹಮ್ಮಿಕೊಳ್ಳಲಾಗಿತ್ತು.

1981ರ ಸೆಪ್ಟೆಂಬರ್ನಲ್ಲಿ ಹೆಗ್ಡೆಯವರಿಗೆ ಬೆಂಗಳೂರಿಗೆ ವರ್ಗವಾದ ನಂತರ 2-3 ವರ್ಷ ಆ ಹುದ್ದೆ ಖಾಲಿಯಿತ್ತು. ಆಗ ಮೈಸೂರಿನ ಕ್ಷೇತ್ರ ಪ್ರಚಾರಾಧಿಕಾರಿ ವಿ.ಎಸ್. ಸೂರ್ಯನಾರಾಯಣ ಅವರು ಮಂಗಳೂರು ಕಚೇರಿಯ ಹೆಚ್ಚುವರಿ ಹೊಣೆಗಾರಿಕೆ ವಹಿಸಿದ್ದರು. ಅವರು ಆಗಾಗ ಬಂದು ಕಾರ್ಯಕ್ರಮಗಳಿಗೆ ಮಾರ್ಗದರ್ಶನ, ಪ್ರೋತ್ಸಾಹ ನೀಡುತ್ತಿದ್ದರು. ಇದು ನನ್ನನ್ನು ಇನ್ನಷ್ಟು ಹದಗೊಳಿಸಿತು. ತದನಂತರದಲ್ಲಿ ಬಂದ ಡಿ.ವಿ. ವಿಜಯ್ ಕುಮಾರ್ (ಪ್ರಸ್ತುತ ದೆಹಲಿಯಲ್ಲಿ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ಅಧಿಕಾರಿ) ಅವರ ಮಿತ ಮಾತು, ಪ್ರಾಮಾಣಿಕತೆಗೆ ನಾನು ಮಾರುಹೋಗಿದ್ದೇನೆ. ಅವರಿಗೆ ಬಹಳಷ್ಟು ಪುಸ್ತಕ ಓದುವ ಅಭ್ಯಾಸವಿದ್ದರೂ ಸಾರ್ವಜನಿಕವಾಗಿ ಸಭೆಗಳಲ್ಲಿ ಮಾತು ತೀರ ಕಡಿಮೆ. ಅವರನ್ನು ಹುರುದುಂಬಿಸಿ ಮಾತಾಡುವಂತೆ ಮಾಡುತ್ತಿದ್ದೆ. ಅದಕ್ಕೇ ಅವರು ಆಗಾಗ ಹೇಳುತ್ತಿದುದುಂಟು, `ಶ್ರೀನಿವಾಸರೇ ನನಗೆ ಸ್ಫೂರ್ತಿ.

ಒಮ್ಮೆ ಆಗುಂಬೆ ಹತ್ತಿರ ಹಳೆಬೀದರ್ಗೂಡು ಎನ್ನುವ ತೀರಾ ಹಿಂದುಳಿದ ಹಳ್ಳಿಯಲ್ಲಿ ಪ್ರಚಾರ ಆಂದೋಲನದ ಸಂದರ್ಭ ಸಂಜೆ ಹೊತ್ತು ಕಾರ್ಯಕ್ರಮ ನಡೆಯುತ್ತಿತ್ತು. ವಿಜಯಕುಮಾರ್ ಅವರು ಕಾರ್ಯಕ್ರಮದ ಪ್ರಸ್ತಾವನೆ ಮಾಡಿ ಪಕ್ಕದ ಹೊಟೇಲ್ ಒಂದರಲ್ಲಿ ಕುಳಿತು ಮಾತನಾಡಿಕೊಂಡಿದ್ದರು. ಚಳಿಯ ವಾತಾವರಣ. ನಾನು ಒಂದಾದ ಮೇಲೊಂದರಂತೆ ರೀಲುಗಳನ್ನು ಬದಲಾಯಿಸುತ್ತಾ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸುತ್ತಿದ್ದೆ. ಜನರು ಆಸಕ್ತಿಯಿಂದ ವೀಕ್ಷಿಸುತ್ತಿದ್ದರು. ರಾತ್ರಿ ಎಂಟೂವರೆ ಸುಮಾರಿಗೆ ಮಳೆ ಆರಂಭ! ಪ್ರೊಜೆಕ್ಟರ್ ಅನ್ನು ಅಂಗಡಿ ಜಗಲಿಗೆ ಸ್ಥಳಾಂತರಿಸಿ ಕಾರ್ಯಕ್ರಮ ಮುಂದುವರಿಸಿದೆವು. ಮಳೆನೀರು ಸೋರುತ್ತಿತ್ತು. ಪ್ರೊಜೆಕ್ಟರ್ಗೆ ಕೊಡೆಯ ಆಸರೆ! ಇನ್ನೇನು ಕಾರ್ಯಕ್ರಮ ನಿಲ್ಲಿಸಬೇಕೆನ್ನುವಷ್ಟರಲ್ಲಿ ಪ್ರದರ್ಶನ ಮುಂದುವರಿಸುವಂತೆ ಅಲ್ಲಿದ್ದ ಒಂದು ಗುಂಪಿನ ಒತ್ತಾಯ. ಆ ಗುಂಪಿನಲ್ಲಿದ್ದವರು ಮದ್ಯ ಸೇವನೆ ಮಾಡಿದ್ದರೆಂದು ಕಾರ್ಯಕ್ರಮ ವ್ಯವಸ್ಥೆಗೊಳಿಸಿದ ಬಿ.ಡಿ.ಓ. ಆಫೀಸಿನ ವಿಸ್ತರಣಾಧಿಕಾರಿ ಕಿವಿಯಲ್ಲಿ ಮೆಲ್ಲಗೆ ಉಸುರಿದರು. ನಾನು ಧೈರ್ಯಗೆಡಲಿಲ್ಲ. ನಾನು ಆ ಗುಂಪಿನಲ್ಲಿದ್ದವರನ್ನು ಹೊಗಳಿ `ನಿಮ್ಮಂತಹ ತರುಣರ ಉತ್ಸಾಹ, ಅಭಿವೃದ್ಧಿ ಯೋಜನೆಗಳನ್ನು ತಿಳಿದು ಪ್ರಗತಿ ಪಥದಲ್ಲಿ ಮುಂದುವರಿಯಬೇಕೆನ್ನುವ ಕಾಳಜಿ ಮೆಚ್ಚುವಂತಹದ್ದು ಎನ್ನುತ್ತ `ನಿಮಗಾಗಿ ಇನ್ನೂ ಒಂದು ಸಿನೆಮಾ ತೋರಿಸುವೆ ಎಂದೆ. ಕಾರ್ಯಕ್ರಮ ನಿರಾತಂಕವಾಗಿ ಮುಂದುವರಿದು ಮುಕ್ತಾಯಗೊಂಡಿತು. ವಿಸ್ತರಣಾಧಿಕಾರಿಯವರು ಹತ್ತಿರ ಬಂದು `ನೀವು ಪರವಾಗಿಲ್ಲ, ಈ ಹಿಂದೆಲ್ಲಾ ಯಾವುದೇ ಇಲಾಖೆಗಳು ಕಾರ್ಯಕ್ರಮ ಮಾಡಿದ ಸಂದರ್ಭದಲ್ಲಿ ಕಾರ್ಯಕ್ರಮ ಅರ್ಧದಲ್ಲಿ ನಿಲ್ಲಿಸಿದ ಸಂದರ್ಭಗಳೇ ಹೆಚ್ಚು ಎಂದು ಹೇಳಿದಾಗ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಖುಷಿಯೆನಿಸಿತು. ಮುಂದಿನ ಹಳ್ಳಿಗೆ ತಲುಪುವಾಗ ರಾತ್ರಿ 10.30. ಅಲ್ಲಿಯೂ ಜನ ನಮಗಾಗಿ ಕಾಯುತ್ತಿದ್ದರು. ನಾನು ಪ್ರೊಜೆಕ್ಟರ್ ತೆರೆದೆ...

1985ರ ಅಕ್ಟೋಬರ್ನಲ್ಲಿ ವಿಜಯ್ ಕುಮಾರ್ ಅವರು ಡೆಲ್ಲಿಗೆ ವರ್ಗವಾಗಿ ತೆರಳಿದ ನಂತರ 1987ರಲ್ಲಿ ಖಾದ್ರಿ ಎಸ್. ಅಚ್ಯುತನ್ ಅವರು ಮಂಗಳೂರು ಕಚೇರಿಗೆ ಅಧಿಕಾರಿಯಾಗಿ ಬಂದರು. ಅದಕ್ಕೂ ಮೊದಲು ಅವರು ಅಂಡಮಾನಿನ ಪೋರ್ಟ್ ಬ್ಲೇರ್ನಲ್ಲಿ ಆಕಾಶವಾಣಿಯಲ್ಲಿ ಸೇವೆಯಲ್ಲಿದ್ದರು. ಮಾಧ್ಯಮ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿದ್ದ ಅವರಿಂದ ನಾನು ಕಲಿತ ಪಾಠ ನನ್ನ ಬದುಕಿಗೆ ದಾರಿದೀಪ. ಅವರದ್ದು ಸರಳ, ಪ್ರಾಮಾಣಿಕ ವ್ಯಕ್ತಿತ್ವ. ಸಿಬ್ಬಂದಿಯನ್ನು ಮನೆಯ ಸದಸ್ಯರಂತೆ ಕಾಣುವ ವಿಶಾಲ ಹೃದಯ. ಕೆಲಸದಲ್ಲಿ ಅವರಿಗಿದ್ದ ನಿಷ್ಠೆ ಮಾದರಿ. ಅವರ ಸಂಸಾರಕ್ಕೆ ಗಿರಿಧರ ಹತ್ವಾರ್ ಅವರ ಪರಿಚಯದ ಮೂಲಕ ಹೊನ್ನಕಟ್ಟೆ ಕುಳಾಯಿಯ ಹತ್ತಿರ ಹೊಸ ಮನೆಯೊಂದನ್ನು ಬಾಡಿಗೆಗೆ ಗೊತ್ತುಮಾಡಿದೆ. ಮನೆಯ ಮುಂಭಾಗದಲ್ಲಿ ಒಂದು ಸಣ್ಣ ಹಾಡಿ. ಮಕ್ಕಳು ಇನ್ನೂ ಚಿಕ್ಕವು. ಪ್ರತಿ ತಿಂಗಳೂ ಕಾರ್ಯಕ್ರಮ ಪ್ರವಾಸವನ್ನು ಎಂದೂ ತಪ್ಪಿಸದೆ 10 ದಿನವೂ ಸಂಸಾರ ಬಿಟ್ಟು ನಮ್ಮೊಂದಿಗಿರುತ್ತಿದ್ದರು. ನನ್ನ ಹೆಸರಿಗೆ ಗುಂಡಿಬೈಲು ಸೇರಿಸಿದವರೇ ಅಚ್ಯುತನ್ ಅವರು. ನಾನು ಮರ್ದಾಳ ಯುವಕ ಮಂಡಲದ ಸಾಧನೆ ಕುರಿತು ಒಂದು ಲೇಖನವನ್ನು ಬರೆದಿದ್ದೆ. ಅದರಲ್ಲಿ ನನ್ನ ಹೆಸರು ಗುಂಡಿಬೈಲು ಶ್ರೀನಿವಾಸ ಅಂತ ಇದ್ದರೇ ಚೆನ್ನ ಎಂದು ತಿದ್ದಿ `ಮುಂಗಾರು ಪತ್ರಿಕೆ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟರ ಬಳಿ ಕರೆದುಕೊಂಡು ಹೋಗಿ ನನ್ನನ್ನು ಪರಿಚಯಿಸಿ, ಲೇಖನವನ್ನು ಅವರ ಕೈಗಿತ್ತರು. ನಾನು ಕವನ ಬರೆಯಲು ತೊಡಗಿದ್ದು ಕೂಡ ಅಚ್ಯುತನ್ ಅವರ ಪ್ರೇರಣೆಯಿಂದಲೇ. ಅವರು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಪ್ರಾದೇಶಿಕ ಅಧಿಕಾರಿಯಾಗಿ ಬೆಂಗಳೂರಿಗೆ ವರ್ಗವಾಗಿ ಹೋದ ತರುವಾಯ ಮಂಗಳೂರಿನಲ್ಲಿ ಮತ್ತೆ ಮೂರು ವರ್ಷ ಕಾಲ ಕ್ಷೇತ್ರ ಪ್ರಚಾರಾಧಿಕಾರಿ ಸ್ಥಾನ ಖಾಲಿ ಇತ್ತು. ಆ ಸಂದರ್ಭದಲ್ಲಿ ಅಚ್ಯುತನ್ ಅವರ ನೇತೃತ್ವದಲ್ಲಿ ಮಂಗಳೂರು ಘಟಕ ಸಾಕ್ಷರತಾ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿತು. ಬಹುಮಾಧ್ಯಮ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವಲ್ಲಿಯೂ ಅವರು ನೀಡಿದ ಮಾರ್ಗದರ್ಶನ ಮರೆಯುವಂತಿಲ್ಲ.

ನಂತರ ಬಂದವರು ಶಿವರಾಂ ಪೈಲೂರು (1991-97). ಅವರ ಕೆಲಸದ ಶೈಲಿ ಭಿನ್ನ. ಯಾವತ್ತೂ ಸುಮ್ಮನೆ ಕೂರುವವರಲ್ಲ. ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಅವರು ವಿನ್ಯಾಸಮಾಡುತ್ತಿದ್ದ ಆಮಂತ್ರಣ ಪತ್ರಿಕೆಗಳು ಅವರ ಸೃಜನಶೀಲತೆಗೆ ಕನ್ನಡಿ. ಅವರ ಅಭಿರುಚಿಗೆ ತಕ್ಕಂತೆ ಫಳ್ನೀರ್ನಲ್ಲಿದ್ದ ಕಚೇರಿಗೆ ಹೊಸ ಮೆರುಗು, ಹೊಸ ವಿನ್ಯಾಸ. ಮೆಟ್ಟಿಲ ಸಾಲುಗಳಲ್ಲಿ ಬಗೆ ಬಗೆಯ ಗಿಡಗಳು. ಒಳಗೆ ಬಂದರೆ ಬಣ್ಣದ ಮೀನುಗಳ ಮೀನ್ಮನೆ. ಸರಕಾರಿ ಕಚೇರಿ ಹೀಗೂ ಇರಲು ಸಾಧ್ಯವೇ ಎಂದು ಜನ ಅಚ್ಚರಿಪಡುತ್ತಿದ್ದರು. ನಿಷ್ಠುರವಾದಿ. ಖಡಾಖಂಡಿತ ನಿರ್ಧಾರ. ಅವರ ವೇಗದ ಜೊತೆಗೆ ಓಡುವುದು ಕಷ್ಟಸಾಧ್ಯ ಎಂದು ಎಷ್ಟೋ ಸಲ ನಮಗೆ ಅನಿಸಿದ್ದುಂಟು. ಅವರ ಮುದ್ದಾದ ಕೈಬರಹದ ಪತ್ರಿಕಾ ಪ್ರಕಟಣೆ ಓದುವುದೇ ಒಂದು ವಿಶೇಷ ಅನುಭವ. ಪೈಲೂರು ಅವರ ವರದಿ ಬಂದರೆ ಅದರಲ್ಲಿ ಒಂದು ಅಕ್ಷರ ಕೂಡಾ ತೆಗೆಯುವ ಹಾಗಿಲ್ಲ ಎಂದು ಪತ್ರಕರ್ತರು ಹೇಳಿದ್ದುಂಟು. ಅವರಿದ್ದಾಗ ನಮ್ಮ ಕಚೇರಿಯಲ್ಲಿ ಏರ್ಪಡಿಸಿದ್ದ `ಸಾವಯವ ಸಾಕ್ಷಾತ್ಕಾರ ಕಾರ್ಯಕ್ರಮವನ್ನು ಡಾ. ಶಿವರಾಮ ಕಾರಂತ ಉದ್ಘಾಟಿಸಿದ್ದರು. ಗಾಂಧೀ ವಿಚಾರಧಾರೆ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಸೇರಿದಂತೆ ಹಲವು ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಮಂಗಳೂರು ಘಟಕದ ಕ್ಯಾನ್ವಾಸ್ ಇನ್ನಷ್ಟು ವಿಸ್ತಾರಗೊಂಡಿತು. ಹೆಚ್ಐವಿ ಸೋಂಕು ತಡೆಗಟ್ಟುವ ಕುರಿತು ಜಾಗೃತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಈ ವಿಷಯಕ್ಕೆ ಸಂಬಂಧಿಸಿ ಫಿಲಂ ಇಲ್ಲದಿದ್ದ ಹಿನ್ನೆಲೆಯಲ್ಲಿ ಪ್ರತ್ಯೇಕ ಸ್ಲೈಡ್ ಶೋ ಸಿದ್ಧಪಡಿಸಿದ್ದು ಮಂಗಳೂರು ಘಟಕದ ವಿಶೇಷ. ಪೈಲೂರು ಅವರು ಸಕ್ರಿಯರಾಗಿದ್ದ ಸಾರ್ವಜನಿಕ ಸಂಪರ್ಕ ಸೊಸೈಟಿ, ಕೆನರಾ ಅಕ್ವೇರಿಯಂ ಅಸೋಸಿಯೇಶನ್ ಹಾಗೂ ಕೊಲಾಜ್ ಬಳಗದ ಸಂಪರ್ಕ ಕಚೇರಿಯ ಎಲ್ಲರಿಗೂ ಆಗಿದ್ದು ಕೂಡ ಹೊಸ ಬೆಳವಣಿಗೆ. ನಾನು ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೊಮ ಪಡೆಯುವಲ್ಲಿ ಅವರು ನೀಡಿದ ಪ್ರೋತ್ಸಾಹ ಸ್ಮರಿಸಲೇಬೇಕು.

ಪೈಲೂರು ಅವರ ನಂತರ ಕೇರಳದಿಂದ ಬಂದ ಕೆ.ಪಿ. ರಾಜೀವನ್ 27 ತಿಂಗಳ ಕಾಲ ಕ್ಷೇತ್ರ ಪ್ರಚಾರಾಧಿಕಾರಿಯಾಗಿದ್ದರು. ಮಿತಭಾಷಿ, ಸೌಮ್ಯ, ಸಹೃದಯರು. ಕನ್ನಡ ಗೊತ್ತಿಲ್ಲದ ಅವರು ಕಾರ್ಯಕ್ರಮದ ಆರಂಭದಲ್ಲಿ ಇಂಗ್ಲಿಷ್ನಲ್ಲಿ ಎರಡು ವಾಕ್ಯ ಮಾತನಾಡಿ, `ಇನ್ನು ಶ್ರೀನಿವಾಸ್ ಮುಂದುವರಿಸುತ್ತಾರೆ ಎಂದು ನನ್ನ ಮೇಲೆ ಭಾಷಣದ ಜವಾಬ್ದಾರಿ ಹಾಕುತ್ತಿದ್ದರು. ಬಳಿಕ ಬಂದವರು ಹೆಚ್.ಆರ್. ಮಧುಸೂದನ ವರ್ಮ. ಅವರು ಕೇರಳದ ವರ್ಮ ರಾಜ ಮನೆತನದವರು. ಮಲಯಾಳಂನಲ್ಲಿ ಉತ್ತಮ ಬರಹಗಾರರು ಕೂಡಾ. ಶಿಸ್ತಿನ ಸಿಪಾಯಿ. ಕಾರ್ಯಕ್ರಮ ನಡೆಸುವಲ್ಲಿ ಹೊಸತನವನ್ನು ನನಗೆ ಕಲಿಸಿಕೊಟ್ಟವರು. `ನಮ್ಮ ಪ್ರಯತ್ನ ಪ್ರಾಮಾಣಿಕವಾಗಿದ್ದರೂ ದೇವರ ಅನುಗ್ರಹ ಇರುವುದು ಅಗತ್ಯ ಎಂಬುದಾಗಿ ಹೇಳುತ್ತಿದ್ದ ಅವರು ದೈವಭಕ್ತರಾಗಿದ್ದರು. ಮಂಗಳೂರು ಘಟಕದ ಸಿಬ್ಬಂದಿಗೆ ಸಿಗಬೇಕಾದ ನಗರ ಭತ್ಯೆಯಲ್ಲಿ ವ್ಯತ್ಯಾಸವಾಗಿದ್ದನ್ನು ಅವರು ಮನಗಂಡು ಒಂದು ವರ್ಷ ಪೂರ್ತಿ ಪತ್ರ ವ್ಯವಹಾರ ಮಾಡಿ ಭತ್ಯೆ ಸಿಗುವಂತೆ ಮಾಡಿದ್ದರು. ಅವರ ಶಿಸ್ತುಬದ್ಧ ಜೀವನ ರೀತಿ, ಆಹಾರ ಪದ್ಧತಿ ನನಗೆ ಒಂದು ಪಾಠದಂತಿತ್ತು. 2006ರ ಜೂನ್ನಲ್ಲಿ ಅವರು ಭಡ್ತಿ ಹೊಂದಿ ದೆಹಲಿಗೆ ಹೋದರು.

ಬಳಿಕ ಬಂದವರು ಹಾಲಿ ಕ್ಷೇತ್ರ ಪ್ರಚಾರಾಧಿಕಾರಿ ಟಿ.ಬಿ. ನಂಜುಡಸ್ವಾಮಿಯವರು. ಅವರು ನನಗೊಬ್ಬ ಉತ್ತಮ ಸಹೃದಯಿ ಮಿತ್ರ ಎಂದೇ ಹೇಳಬೇಕಾಗುತ್ತದೆ. ನನ್ನ ಬಗ್ಗೆ ಅವರಿಗೆ ಅತೀವ ಕಾಳಜಿ, ಗೌರವ. `ನಾವು ಕೋಟಿ ರೂಪಾಯಿ ಸಂಪಾದಿಸಿದರೂ ಅದು ಖರ್ಚಾದೀತು; ಆದರೆ ನಾವು ಜನರಿಂದ ಗಳಿಸಿದ ಪ್ರೀತಿ, ವಿಶ್ವಾಸ ಯಾವಾಗಲೂ ಹೆಚ್ಚುತ್ತಾ ಹೋಗುತ್ತದೆ ಎನ್ನುವ ಅವರ ಮಾತು ಎಂದೆಂದಿಗೂ ನೆನಪಿನಲ್ಲಿ ಉಳಿಯುವಂಥದ್ದು. ನನಗೆ ಹೃದಯದ ಬೈಪಾಸ್ ಸರ್ಜರಿ ಆದ ಸಂದರ್ಭ ಅವರಿಗಿದ್ದ ಆತಂಕ, ಚಡಪಡಿಕೆ; ಆಪರೇಶನ್ ಆದ ನಂತರ ಅವರ ಜತೆಗಿನ ಯಾವುದೇ ಪ್ರವಾಸದ ವೇಳೆ ನನ್ನ ಲಗೇಜನ್ನು ಎತ್ತಿ ಸಹಕರಿಸಿರುವುದು; ಕಾರ್ಯಕ್ರಮಗಳ ಸಂದರ್ಭದಲ್ಲಿ ಹಳ್ಳಿಗಳಲ್ಲಿ ವಿಶ್ರಾಂತಿಗೆ ಅನುವುಮಾಡಿ ಕೊಟ್ಟಿರುವುದು...ಇವೆಲ್ಲ ಮರೆಯಲಾಗದ್ದು.

ನನ್ನ ಸೇವಾವಧಿಯ 30 ವರ್ಷಗಳಲ್ಲಿ ನನ್ನೊಂದಿಗಿನ ಒಡನಾಡಿ ಮಿತ್ರ, ಮುಗ್ಧ, ನಿರ್ಮಲ ಮನಸ್ಸಿನ ವ್ಯಕ್ತಿತ್ವ ಹೊಂದಿರುವ ಪ್ರಬುದ್ಧ ಸಂಗೀತಗಾರ ಹಾಗೂ ಗಾಯಕ ಎ.ಕೆ. ವಿಜಯ್. ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತು ನಮ್ಮ ವಿಜಯ್ ಅವರಿಗೆ ಅನ್ವರ್ಥ. ತುಳು ರಂಗಭೂಮಿಯಲ್ಲಿ ಓರ್ವ ಪ್ರಸಿದ್ಧ ಸಂಗೀತ ನಿರ್ದೇಶಕ, ಉತ್ತಮ ಹಾಡುಗಾರನಾದರೂ ಕಚೇರಿಗೆ ಬರುವಾಗ ಅವರು ಒಬ್ಬ ಸಾಮಾನ್ಯ ನೌಕರನಾಗಿಯೇ ಇರುತ್ತಿದ್ದರು. ತುಳು ರಂಗಭೂಮಿ ಕ್ಷೇತ್ರದಲ್ಲಿ ಎಷ್ಟೋ ಸಲ ಸನ್ಮಾನಿತನಾಗಿದ್ದರೂ ಸಹ ಅವರಲ್ಲಿ ಒಂದು ಸೂಜಿ ಮೊನೆಯಷ್ಟೂ ಅಹಂ ಅನ್ನು ನಾನು ಕಂಡದ್ದಿಲ್ಲ. ಅವರಲ್ಲಿ ಸ್ವಪ್ರತಿಷ್ಠೆ ಇಲ್ಲದಿದ್ದರೂ ಸ್ವಾಭಿಮಾನದ ವಿಚಾರದಲ್ಲಿ ಯಾರಿಗೂ ಕಮ್ಮಿ ಇಲ್ಲ. ಬಹಳ ಉದಾರಿ. ಕಷ್ಟದಲ್ಲಿದವರಿಗೆ ಸಹಾಯ ಮಾಡುವುದು, ಸಂಘ ಸಂಸ್ಥೆಗಳಿಗೆ ದೇಣಿಗೆ ನೀಡುವುದು ಅವರ ಧಾರಾಳತನ. ಅವರು ಕಚೇರಿಯಲ್ಲಿ ಯಾರೊಡನೆಯಾದರೂ ಮುನಿಸಿಕೊಂಡದ್ದಾಗಲೀ, ಬೇಸರಪಟ್ಟದಾಗಲೀ ಅಥವಾ ನೋವಾಗುವ ಹಾಗೆ ನಡೆದುಕೊಂಡದ್ದಾಗಲೀ ಇಲ್ಲ.

ಇನ್ನು ನನ್ನ ಸಹೋದ್ಯೋಗಿ ಚಾಲಕ ಗಣೇಶನ್ ಪ್ರವಾಸ ಅಥವಾ ಯಾವುದೇ ಕಾರ್ಯಕ್ರಮದ ಸಂದರ್ಭದಲ್ಲಿ ನನಗೆ ಪೂರ್ಣ ಸಹಕಾರ ನೀಡಿದವರು. ಇನ್ನೋರ್ವ ಸಹೋದ್ಯೋಗಿ ಕೇಶವ ಮೂರ್ತಿಯವರು ವಿನಯಶೀಲರು. ಮಂಗಳೂರು ಘಟಕದಲ್ಲಿ ಕಳೆದೆರಡು ವರ್ಷಗಳಿಂದ ಕ್ಲಾರ್ಕ್ ಕೆಲಸದಲ್ಲಿದ್ದು ಕಚೇರಿಯಲ್ಲಿ ಎಲ್ಲರೊಂದಿಗೆ ಬೆರೆತು ಪ್ರೀತಿಪಾತ್ರರಾಗಿದ್ದಾರೆ. ಅವರ ಕೈ ಅಡುಗೆ ಬಹಳ ಸ್ವಾದಿಷ್ಟ. ಅವರು ಕಚೇರಿಯಲ್ಲಿರುವಾಗ ನನಗೆ ಹೊಟೇಲ್ ಊಟಕ್ಕೆ ಎಂದೂ ಅವಕಾಶ ಕೊಟ್ಟದ್ದಿಲ್ಲ.

* ಗುಂಡಿಬೈಲು ಶ್ರೀನಿವಾಸ್

0 comments:

Post a Comment