ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ


ಟಿ.ವಿ ಬಿಟ್ಟು ಜನ ಕದಲಲ್ಲ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಬೆಟ್ ಕಟ್ಟುವ ಜನ... ದೇವಸ್ಥಾನದಲ್ಲಿ ಮುಗಿಯದ ಹೋಮ ಹವನ...
ಈ ಮಟ್ಟಕ್ಕೆ ಕ್ರಿಕೆಟ್ ಮೋಡಿಯಲ್ಲಿ ಮುಳುಗಿರುವ ಬಹುಕೋಟಿ ಭಾರತೀಯರು ಐಪಿಎಲ್ ಆಗಮನಕ್ಕೆ ಕೆಂಪುರತ್ನಗಂಬಳಿ ಹಾಸಿ ಸ್ವಾಗತಿಸಿರುವುದರಲ್ಲಿ ವಿಶೇಷವೇನೂ ಇಲ್ಲ.
ಸಾಂಪ್ರದಾಯಿಕ ಕ್ರಿಕೆಟ್ ಗೆ ಹೋಲಿಸಿದರೆ ಐಪಿಎಲ್ ಲೋಕ `ಬಣ್ಣ ಬಣ್ಣವಪ್ಪೋ...ರಂಗೋ ರಂಗು...' ಮೊದಲೇ ಮಾಯಾ ಸುಂದರಿ ಅದಕ್ಕೊಂದಿಷ್ಟು ಗ್ಲಾಮರ್ ಟಚ್ ಸಿಕ್ಕರೆ ಕೇಳಬೇಕೇ... ? ಸಿಹಿಗೆ ಇರುವೆ ಮುತ್ತಲೆಷ್ಟು ಹೊತ್ತು ...!! ಯಾವುದೇ ಬಾಲಿವುಡ್ ಸೆಟ್ ಗೆ ಕಡಿಮೆಯಿಲ್ಲದ ವರ್ಣಮಯ ಕ್ರೀಡಾಂಗಣ ಸಿನೆಮಾ ತಾರೆಯರ ಮೆರೆದಾಟ ನಡೆಯುವುದೆಲ್ಲ ನೋಟುಗಳ ಆಟ... ರಾತ್ರಿಯಾದೊಡನೆ ಮತ್ತೇರಿಸುವ ಮಾರ್ಜಾಲಗಳಿಗೆ ಜೊತೆಗೊಂದಿಷ್ಟು ಮದ್ಯದ ಅಮಲು ..ಇಲ್ಲಿ ನಡೆಯುವುದು ಕ್ರಿಕೆಟೋ ಅಥವಾ ಲೈವ್ ಬಾಂಡ್ ನರ್ತನವೋ ಎಂಬ ಶಂಕೆ ಹುಟ್ಟಿಸುವ ಮಟ್ಟಿಗೆ ಐಪಿಎಲ್ ಕೂಟ ಮಿನುಗುತ್ತಿದೆ. ಕಣ್ಣು ಜಿಗಿಲ್ ಎನಿಸುವಷ್ಟು...

ಐಪಿಎಲ್ ದು ಶ್ರೀಮಂತ ಜಗತ್ತು. ದುಡ್ಡಿರುವ ದೊಡ್ಡ ಕುಳಗಳಿಗೆಲ್ಲಾ ಜೂಜಿನ ಕೇಂದ್ರ. ಇಲ್ಲಿ ಸಾವಿರ ಸಾವಿರ ಕೋಟಿಗಳ ಲೆಕ್ಕದಲ್ಲಿ ನೋಟು ನಾಟ್ಯವಾಡುತ್ತದೆ. ಕ್ರಿಕೆಟ್ ನಂಬಿಕೊಂಡು ಕ್ರಿಕೆಟಿಗರ ಮೇಲೆ ತಂಡಗಳ ಮೇಲೆ ಹಣದ ಅಭಿಷೇಕ ನಡೆಯುತ್ತದೆ. ಐಪಿಎಲ್ ಕ್ರೀಡಾಕೂಟಕ್ಕಿಂತ ಹೆಚ್ಚಾಗಿ ಉದ್ದಿಮೆಯಾಗಿ ಬೆಳೆಯುತ್ತಿದೆ ಎಂಬುದಕ್ಕೆ ಈ ಬಾರಿಯ ಐಪಿಎಲ್ ಬಿಡ್ಡಿಂಗ್ ಸಾಕ್ಷಿ.

ಹೊಸತಾಗಿ ಐಪಿಎಲ್ ಕೂಟಕ್ಕೆ ಸೇರ್ಪಡೆಯಾಗಲಿರುವ ಪುಣೆ ತಂಡವನ್ನು ಸಹರಾ ಇಂಡಿಯಾ 1702ಕೋಟಿಗೆ ಮತ್ತು ರೆಂಡವೋರ್ಸ್ ಸ್ಫೋಡ್ಸ್ 1533ಕೋಟಿಗೆ ಕೊಚ್ಚಿ ತಂಡವನ್ನು ಖರೀದಿಸಿದೆ. ಗಮನಿಸಬೇಕಾದ ಅಂಶವೆಂದರೆ ಐಪಿಎಲ್ ಆರಂಭವಾದ ಸಮಯದಲ್ಲಿ ಹರಾಜಾದ ಎಂಟು ತಂಡಗಳಮೊತ್ತ 2900ಕೋಟಿ ರುಪಾಯಿಗಳು. ಆದರೆ ಈ ಎರಡು ಹೊಸ ತಂಡಗಳು ಮಾರಾಟವಾಗಿರುವುದು 3235ಕೋಟಿ ರುಪಾಯಿಗೆ.!!!

ಐಪಿಎಲ್ ಜನಪ್ರಿಯತೆಗೆ(ಜೂಜಿಗೆ) ಇದಕ್ಕಿಂತ ದೊಡ್ಡ ಉದಾಹರಣೆಬೇಕೇ...
ಐಪಿಎಲ್ ಆಡುತ್ತಿರುವ ಆಟಗಾರರಿಗೆಲ್ಲ ನಿತ್ಯ ಲಕ್ಷಾಧೀಶ್ವರರಾಗುವ ಕನಸು. ಇಲ್ಲಿನ ಪ್ರತಿಯೊಂದು ಸಿಕ್ಸರ್ , ಬೌಂಡರಿ ಲಕ್ಷಗಟ್ಟಲೆ ಬೆಲೆಬಾಳುತ್ತದೆ. ಜಾಹೀರಾತು ಲೋಕಕ್ಕಂತೂ ಐಪಿಎಲ್ ವಜ್ರದ ನಿಕ್ಷೇಪ ಹುಡುಕಿದಂತಾಗಿದೆ. ಐಪಿಎಲ್ ಅವಧಿಯಲ್ಲಿ ಪ್ರಸಾರವಾಗುವ ಜಾಹೀರಾತು ಸಿಕ್ಕಾಪಟ್ಟೆ ದುಬಾರಿ. ಹತ್ತು ವರ್ಷದ ಪ್ರಸಾರ ಹಕ್ಕು ಪಡೆದಿರುವುದು ಖಾಸಗೀ ಚಾನೆಲ್ ಒಂದರಲ್ಲಿ ಹತ್ತು ಸೆಕೆಂಡಿನ ಜಾಹೀರಾತಿಗೆ ಈ ಬಾರಿ 7.5ಲಕ್ಷ !. ಕಳೆದ ಬಾರಿ ಈ ಮೊತ್ತ 5ಲಕ್ಷ. ಭರ್ಜರಿ ಪ್ರಚಾರದ ಹುಚ್ಚಿಗೆ ಭಾರೀ ದುಡ್ಡಿನ ತೆರಿಗೆ.

ಇದು ಐಪಿಎಲ್ ಅಂಗಣದೊಳಗಿನ ಅಧಿಕೃತ ದುಡ್ಡಿನ ವ್ಯವಹಾರ. ಅಂಗಣದ ಆಚೆಗೂ ಹರಡಿದೆ ಐಪಿಎಲ್ ಕರಾಮತ್ತು. ಐಪಿಎಲ್ ನಂಬಿಕೊಂಡು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವರರು ಹಲವು ಮಂದಿ.
ಈ ಅದೃಷ್ಟದ ಆಟದಲ್ಲಿ ದುಡ್ಡುಗಳಿಸಿದವರೆಷ್ಟೋ ಕಳೆದುಕೊಂಡವರೆಷ್ಟೋ ಮನೆ ಮಠ ಮಾರಿಕೊಂಡವರೆಷ್ಟೋ ಊಹೆಗೆ ನಿಲುಕದ ಸಂಗತಿ.
ಈ ಎಲ್ಲಾ ಬೆಳವಣಿಗೆಯನ್ನು ಗಮನಸಿದಾಗ ಐಪಿಎಲ್ ಆಯೋಜಕರು , ಪ್ರಾಯೋಜಕರು , ವೀಕ್ಷಕರೂ ಮತ್ತು ಆಟಗಾರರಲ್ಲಿ ಕ್ರೀಡಾಮನೋಭಾವನೆಯನ್ನು ಹುಟ್ಟಿಸುವುದಕ್ಕಿಂತ ಹೆಚ್ಚಾಗಿ ದುಡ್ಡು ಗಳಿಸುವ ದಂದೆಯಾಗಿ ಬೆಳೆಯುತ್ತಿದೆಯೇನೋ ಎಂಬ ಭಯ ಹುಟ್ಟಿಸುತ್ತದೆ.ಐಪಿಎಲ್ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಟಗಾರರ ನಡುವೆ ಸ್ನೇಹ ಸಂಬಂಧ ಬೆಳೆಸುತ್ತದೆ, ದೇಶೀಯ ಆಟಗಾರರನ್ನು ಗುರುತಿಸಿ ಆಡಲು ಅವಕಾಶ ನೀಡುತ್ತಿದೆ ಎಂಬ ದನಾತ್ಮಕ ವಾದಗಳ ಜೊತೆ ಜೊತೆಗೆ ಐಪಿಎಲ್ ರಾಷ್ಟ್ರೀಯ ಕ್ರಿಕೆಟ್ ಮೇಲೆ ಋಣಾತ್ಮಕ ಪರಿಣಾಮ ಉಂಟುಮಾಡುತ್ತಿದೆ. ನಿರಂತರ ಕ್ರಿಕೆಟ್ ನಿಂದಾಗಿ ರಾಷ್ಟ್ರೀಯ ತಂಡದಲ್ಲಿ ಗಾಯದ ಸಮಸ್ಯೆ ಕಾಡುತ್ತಿದೆ. ಮುಂದಿನ ವಿಶ್ವಕಪ್ ಗೆ ತಂಡ ತಯಾರಾಗಬೇಕಾದ ಸಂದರ್ಭದಲ್ಲಿ ಈ ತೆರೆನಾದ ಸಮಸ್ಯೆಗಳು ಭಾರತದ ದಶಕಗಳ ವಿಶ್ವಕಪ್ ಗೆಲ್ಲುವ ಕನಸಿಗೆ ತಣ್ಣೀರೆರಚದಿದ್ದರೆ ಸಾಕು ಎಂದುಕೊಳ್ಳುತ್ತಾನೆ ಕ್ರಿಕೆಟ್ ಅಭಿಮಾನಿ.

ಸಿನೆಮಾ ಜಗತ್ತಿನ ಮೇಲೂ ಐಪಿಎಲ್ ನೇರ ಪರಿಣಾಮ ಬೀರಿದೆ. ಸಿನೆಮಾ ತಾರೆಯರೆಲ್ಲ ಐಪಿಎಲ್ ಫ್ರಾಂಚೈಸಿ ಮತ್ತು ಬ್ರಾಂಡ್ ಅಂಬಾಸಿಡರ್ ಗಳಾಗಿ ಕ್ರೀಡಾಂಗಣದಲ್ಲಿ ಬೀಡು ಬಿಟ್ಟಿರುವಾಗ ಶೂಟಿಂಗ್ ಹೇಗೆ ನಡೆಯುತ್ತೆ ಎಂಬುದು ಚಿತ್ರರಂಗದ ಕೆಲವರ ಅಳಲು. ಒಟ್ಟಿನಲ್ಲಿ ಐಪಿಎಲ್ ಅಟ್ಟ ಹಾಸಕ್ಕೆ ಸಿನೆಮಾ ರಂಗವೂ ಕೂಡ ಕೊಂಚಮಟ್ಟಿಗೆ ಮಂಕಾಗಿದೆ.


ಐಪಿಎಲ್ ಎಂದಾಕ್ಷಣ ತಕ್ಷಣ ನೆನಪಾಗುವುದು ಚಿಯರ್ ಗರ್ಲ್ಸ್ . ಅಂಗಣದಲ್ಲಿ ಕುಣಿಯಲು ಕರಿಸಿದ ಮಾದಕ ಸುಂದರಿಯರು. ಕ್ರೀಡಾಂಗಣಕ್ಕೆ ಗ್ಲಾಮರ್ ಟಚ್ ಕೊಡುವ ಈ ಸುಂದರಿಯರು ಪ್ರೇಕ್ಷಕರ ಕ್ರೀಡಾ ಮನೋಭಾವಗಳನ್ನು ಕೊಂಚ ಕುಗ್ಗಿಸುತ್ತಾರೇನೋ ಎಂದನಿಸುತ್ತದೆ. ಒಂದು ಪತ್ರಿಕೆಯಲ್ಲಿ ವರದಿಯಾದಂತೆ ಹಲವಾರು ಮಂದಿ ಕ್ರಿಕೆಟ್ ನ ಬದಲಾಗಿ ಈ ಕುಣಿಯೋ ಸುಂದರಿಯರನ್ನ ನೋಡಲು ಬರುತ್ತಾರಂತೆ.
ಈ ಸುಂದರಿಯರಿಂದ ಪ್ರೇಕ್ಷಕರನ್ನು ಕ್ರೀಡಾಂಗಣದತ್ತ ಸೆಳೆಯಬಹುದು ಆದರೆ ಇಂತಹ ಪ್ರೇಕ್ಷಕರಲ್ಲಿ ಕ್ರೀಡಾಮನೋಭಾವನೆಯನ್ನು ಹುಡುಕಬಹುದೇ...?
ಐಪಿಎಲ್ ನಿಂದಾಗಿ ಸಾಮಾನ್ಯ ಜನಜೀವನದಲ್ಲೂ ಹಲವಾರು ಏರುಪೇರು. ಸ್ಕೋರು ತಿಳಿವ ಹುಚ್ಚಿನಲ್ಲಿ ಪರೀಕ್ಷೆಗೆ ಓದದ ವಿದ್ಯಾರ್ಥಿಗಳು. ಕ್ರಿಕೆಟ್ ಗುಂಗಿನಲ್ಲಿ ಮನೆಯಲ್ಲಿ ಉಪ್ಪಿಲ್ಲದ ಸಾಂಬಾರು... ಸಂಜೆಯಾದೊಡನೆ ಖಾಲಿಹೊಡೆವ ಮಾರುಕಟ್ಟೆ ಪಾನಿಪೂರಿ ಅಂಗಡಿಗಳು ..ಅಹೋ ರಾತ್ರಿ ಟಿ.ವಿಮುಂದೆ ಕೂರುವ ಪತಿ ಮಹಾಶಯರು... ಎಲ್ಲರೂ ಐಪಿಎಲ್ ಮಾಯೆಗೆ ಸಿಲುಕಿದವರೇ... ಒಟ್ಟಿನಲ್ಲಿ ಹೇಳೋದಾದರೆ ಐಪಿಎಲ್ ರಂಗಿಗೆ ಎಲ್ಲರೂ ಐಲಾಗಿರುವುದಂತೂ ನಿಜ.
ಕೊನೆಯಲ್ಲಿ ನಾವೇ ಕೈಯಗಲಿಸಿ ಸ್ವಾಗತಿಸಿದ ಐಪಿಎಲ್ ಎಂಬ ರತ್ನಗಂಬಳಿಯಡಿಯಲ್ಲಿ ಕ್ರೀಡಾಮನೋಭಾವನೆ ಉಸಿರುಗಟ್ಟಿ ಸಾಯದಿರಲಿ ಎಂಬುದೇ ಆಶಯ.

ಜೆ. ಜೆ ಆಳ್ವ.
ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ
ಆಳ್ವಾಸ್ ಕಾಲೇಜು.

1 comments:

Padyana Ramachandra said...

ಸಮಯೋಚಿತ ಲೇಖನ.
ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣುತಿದೆ.

-ಪ.ರಾಮಚಂದ್ರ,
ರಾಸ್ ಲಫ್ಫಾನ್,ಕತಾರ್

Post a Comment