ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:34 PM

ಮುಗಿಯದ ರೀಲು

Posted by ekanasu

ಅಂಕಣ
ನಾ ಕಂಡ ಶ್ರೀನಿವಾಸ್

ಪ್ರಾಮಾಣಿಕತೆ, ವಿನಯಶೀಲತೆ, ಸರಳತೆ, ಸಜ್ಜನಿಕೆ, ನಮ್ರತೆ, ವಿಧೇಯತೆಗೆ ಹೆಸರಾದ ಅಪರೂಪದ ವ್ಯಕ್ತಿ ಗುಂಡಿಬೈಲು ಶ್ರೀನಿವಾಸ್. ಅವರು ಸತ್ಯನಿಷ್ಠರು. ಕೃತಕತೆಯಿಂದ ಬಹುದೂರ. ಅವರು ಆಸ್ತಿ, ಅಂತಸ್ತು, ಅಧಿಕಾರ ಇತ್ಯಾದಿಗಳಿಗೆ ಎಂದೂ ಬೆಲೆಕೊಡದೆ ಭಗವಂತ ಕೊಟ್ಟದ್ದಷ್ಟಕ್ಕೆ ತೃಪ್ತಿಪಟ್ಟವರು. ಬೇರೆಯವರನ್ನು ಸಮಾಧಾನಪಡಿಸಲೆಂದಾಗಲೀ ಸಂತೋಷಪಡಿಸಲೆಂದಾಗಲೀ ಎಂದೂ ಸುಳ್ಳನ್ನು ಹೇಳದೆ, ಸತ್ಯವನ್ನು ಮುಚ್ಚಿಡದೆ ಮೂರು ದಶಕಗಳ ಸುದೀರ್ಘ ಸರಕಾರಿ ಸೇವೆಯನ್ನು ಪೂರೈಸಿದವರು ಶ್ರೀನಿವಾಸ್. ಆದರೆ ತನ್ನ ಪ್ರಾಮಾಣಿಕತೆ ಬಗ್ಗೆ ಅವರು ಎಂದೂ ಅಹಂ ಹೊಂದಿರಲಿಲ್ಲ. ಸರಕಾರಿ ಉದ್ಯೋಗ ಕೇವಲ ಸಂಬಳಕ್ಕಾಗಿ ಎಂದು ತಿಳಿಯದೆ ಸಿಕ್ಕ ಅವಕಾಶವನ್ನು ಸಮಾಜ ಮೆಚ್ಚುವ ರೀತಿಯಲ್ಲಿ ಬಳಸಿಕೊಂಡು ಆ ಮೂಲಕ ಇಲಾಖೆಗೆ ಒಳ್ಳೆಯ ಹೆಸರು ತಂದರು.ಕಾರ್ಯಧಕ್ಷತೆಯಿಂದ ತಾವು ಕೆಲಸಮಾಡಿದ ಎಲ್ಲೆಡೆ ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರ ವಿಶ್ವಾಸ ಗಳಿಸಿಕೊಂಡರು. ನೂರಕ್ಕೆ ನೂರು ಪ್ರಾಮಾಣಿಕತೆ ಸಾಧ್ಯವೇ ಇಲ್ಲ ಎಂದೆನಿಸಬಹುದಾದ ಪ್ರಚಾರ ಇಲಾಖೆಯಲ್ಲೂ ದೃಢ ಸಂಕಲ್ಪ, ಕಠಿಣಶ್ರಮವಿದ್ದರೆ ಪ್ರಾಮಾಣಿಕತೆ ಕಷ್ಟಸಾಧ್ಯದ ಮಾತಲ್ಲ ಎಂಬುದನ್ನು ಶ್ರೀನಿವಾಸ್ ಸಾಬೀತುಪಡಿಸಿದ್ದಾರೆ.

ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಅಸ್ತಿತ್ವಕ್ಕೆ ಬಂದ ಐವತ್ತರ ದಶಕದಲ್ಲಿ ಕರ್ನಾಟಕ ವಲಯದಲ್ಲಿ ಕಾರ್ಯನಿರ್ವಹಿಸಿ ಕಾರ್ಯದಕ್ಷತೆ, ಪ್ರಾಮಾಣಿಕತೆ, ನಿಷ್ಠೆಗೆ ಹೆಸರಾದ ಆರ್. ಭೀಮಯ್ಯ, ನಾರಾಯಣರಾಜು ಅವರ ಸಾಲಿಗೆ ಸೇರಿಸಬಹುದಾದ ವ್ಯಕ್ತಿ ಗುಂಡಿಬೈಲು ಶ್ರೀನಿವಾಸ್. ಅವರು ತಮ್ಮ ಕುಟುಂಬದ ಹಿತಾಸಕ್ತಿಯನ್ನು ಬದಿಗಿಟ್ಟು ನಿರ್ದೇಶನಾಲಯದ ಕೆಲಸಗಳಲ್ಲಿ ಸದಾ ತೊಡಗಿಸಿಕೊಂಡವರು. ಸೇವಾವಧಿಯ ಉದ್ದಕ್ಕೂ ಯಾವುದಕ್ಕೂ ಬೇಸರಪಟ್ಟುಕೊಳ್ಳದೆ, ಜವಾಬ್ದಾರಿಯನ್ನು ಒಂದಿಷ್ಟೂ ಕಡೆಗಣಿಸದೆ ದುಡಿದವರು ಶ್ರೀನಿವಾಸ್. ಅವರು ಅಜಾತಶತ್ರು; ಸಂಪೂರ್ಣ ಸತ್ಯನಿಷ್ಠ. ಇದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.

ಒಂದು ಘಟನೆಯನ್ನು ಹೇಳಲೇಬೇಕು. ಡಿಸೆಂಬರ್ 10, 2006. ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯದಿಂದ ಮಹಿಳೆಯರಿಗಾಗಿ ಆರೋಗ್ಯ ಜಾಗೃತಿ ವಿಶೇಷ ಕಾರ್ಯಕ್ರಮ ಏರ್ಪಾಡಾಗಿತ್ತು. ಶ್ರೀನಿವಾಸ್ ಅವರದ್ದೇ ಸಾರಥ್ಯ. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕಾಲೇಜು ಉಪನ್ಯಾಸಕರು, ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳೂ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಮಹಿಳೆಯರು ರಸಪ್ರಶ್ನೆ ಹಾಗೂ ವಿವಿಧ ಕ್ರೀಡಾಸ್ಪರ್ಧಿಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದ್ದರು. ಸುಮಾರು 5-6 ಗಂಟೆಗಳ ಕಾಲ ನಡೆದ ಸಮಾರಂಭದ ನಂತರ ನೆರೆದಿದ್ದ ಎಲ್ಲರಿಗೂ ಬಿಸಿಬಿಸಿ ಕೇಸರಿಬಾತ್, ಖಾರಾಬಾತ್, ಕಾಫಿ-ಟೀ ವ್ಯವಸ್ಥೆ. ನನಗೆ ಅಚ್ಚರಿಯೆನಿಸಿತು. ಏಕೆಂದರೆ ಇಡೀ ಕಾರ್ಯಕ್ರಮಕ್ಕೆ ಮಂಜೂರಾಗಿದ್ದ ಹಣ ಕೇವಲ ಎರಡು ಸಾವಿರ ರೂಪಾಯಿ. ಅಲ್ಲಿನ ಇತರೆಲ್ಲ ಏರ್ಪಾಡುಗಳನ್ನು ಗಮನಿಸಿದರೆ ಹೆಚ್ಚು ಹಣ ವೆಚ್ಚವಾಗಿರಬಹುದು ಎನ್ನಿಸುತ್ತಿತ್ತು.

ಕಾರ್ಯಕ್ರಮ ಮುಗಿದ ಬಳಿಕ ಕುತೂಹಲ ತಡೆಯಲಾಗದೆ ಶ್ರೀನಿವಾಸ್ ಅವರನ್ನು ಕೇಳಿಯೇಬಿಟ್ಟೆ. ರಸಪ್ರಶ್ನೆ ಹಾಗೂ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ, ನೂರಾರು ಮಂದಿಗೆ ಉಪಹಾರ..ಇವೆಲ್ಲ ಎರಡು ಸಾವಿರ ರೂಪಾಯಿಯಲ್ಲಿ ಹೇಗೆ ಸಾಧ್ಯ? `ಆಗುತ್ತೆ ಸರ್ ಶ್ರೀನಿವಾಸ್ ಥಟ್ಟನೆ ಉತ್ತರಿಸಿದರು. ಜತೆಗೆ ವಿವರಣೆ ಕೂಡ. `ಬಹುಮಾನಗಳಿಗೆ ಒಂದು ಸಾವಿರ, ಆಹ್ವಾನಪತ್ರ ಮುದ್ರಣಕ್ಕೆ ಐದುನೂರು ರೂಪಾಯಿ ಹಾಗೂ ಉಪಹಾರಕ್ಕೆ ಇನ್ನುಳಿದ ಐದುನೂರು ರೂಪಾಯಿ. `ಅಷ್ಟೊಂದು ಮಂದಿಗೆ ಐದುನೂರು ರೂಪಾಯಿಯಲ್ಲಿ ಉಪಹಾರ ನೀಡುವುದು ಸಾಧ್ಯವಾಗದು ಎಂದೆ. ಆಗ ಶ್ರೀನಿವಾಸ್ ಹೇಳಿದ್ದು ಹೀಗೆ: `ಅಲ್ಲಿನ ಅಂಗನವಾಡಿ ಕಾರ್ಯಕರ್ತರನ್ನು ಭೇಟಿಮಾಡಿ ಕಾರ್ಯಕ್ರಮದ ಉದ್ದೇಶ ವಿವರಿಸಿದೆ. ಬಳಿಕ ಅವರಿಗೆ ಅಗತ್ಯ ಪ್ರಮಾಣದ ರವೆ, ಸಕ್ಕರೆ, ಎಣ್ಣೆ, ಕಾಫಿ-ಟೀ ಪುಡಿ ಇತ್ಯಾದಿಗಳನ್ನು ಒದಗಿಸಿದೆ. ಇಂದು ಭಾನುವಾರವಾದದ್ದರಿಂದ ಅಂಗನವಾಡಿಯ ಅಡುಗೆಮನೆ ಖಾಲಿ ಇತ್ತು. ಅವರೇ ನಮಗೆ ಚೌಚೌ ಬಾತ್ ಸಿದ್ಧಪಡಿಸಿದರು. ಊಟದ ಎಲೆ ಸ್ಥಳೀಯರಿಂದ ಉಚಿತವಾಗಿ ದೊರಕಿತು. ಶ್ರೀನಿವಾಸ್ ಅವರ ಉತ್ತರ ನನ್ನ ಮನದಲ್ಲಿ ಸದಾ ಉಳಿಯುವಂಥದ್ದು.

- ಎಂ.ಎನ್. ಶಂಕರ್

0 comments:

Post a Comment