ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:39 PM

ಮುಗಿಯದ ರೀಲು...

Posted by ekanasu

ಅಂಕಣ
ಉಣ್ಣಿ ಸಂಗ್ರಹದ ನೆನಪು
1983ರ ಸುಮಾರಿಗೆ ಬೆಳ್ತಂಗಡಿ ತಾಲೂಕಿನಲ್ಲೊಂದು ವಿಚಿತ್ರ ಕಾಯಿಲೆ. ಅದೇ ಮಂಗನ ಕಾಯಿಲೆ. ಆರಂಭದ ದಿನಗಳಲ್ಲಿ ಕಾಯಿಲೆ ಹರಡುತ್ತಿರುವ ಬಗ್ಗೆ ಗೊತ್ತಿದ್ದರೂ ಇದಕ್ಕೆ ಕಾರಣ ಏನೆಂದು ತಿಳಿಯದೆ ಅನೇಕ ಮಂದಿ ಅಸುನೀಗಿದರು. ಕೆಲವರು ಚೇತರಿಸಿಕೊಂಡರು. ಬದುಕಿರುವವರ ಅನುಭವ ಇಂದಿಗೂ ಮೈ ಜುಮ್ ಎನಿಸುವಂತಿದೆ. ಸುದ್ದಿ ಮಾಧ್ಯಮಗಳಲ್ಲಿ ನಿಗೂಢ ಕಾಯಿಲೆ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿದ್ದ ಸುದ್ದಿ ಅನೇಕರು ಊರನ್ನೇ ಬಿಟ್ಟುಹೋಗುವಂತೆ ಮಾಡಿತ್ತು. ಕಾಯಿಲೆಯ ತೀವ್ರತೆ ಹೆಚ್ಚಾದಾಗ ರೋಗಿಗಳ ಮೂಗಿನಲ್ಲಿ, ಗುದದ್ವಾರಗಳಲ್ಲಿ ರಕ್ತಸ್ರಾವ, ವಿಪರೀತ ಜ್ವರ, ತಲೆನೋವು, ಭಯ, ಊಹಾಪೋಹಗಳು ಊರವರಿಗೆಲ್ಲ ಚಿಂತೆಯನ್ನುಂಟುಮಾಡಿದ್ದವು.ಆ ಸಂದರ್ಭದಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಮಂಗಳೂರು ಘಟಕ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ಮಂಗನ ಕಾಯಿಲೆ ಕುರಿತು ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶ್ರೀನಿವಾಸ್ ಅವರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾನು ಮಂಗನ ಕಾಯಿಲೆಯನ್ನು ಹರಡಲು ವಾಹಕವಾಗುವ ಉಣ್ಣಿಗಳನ್ನು ಜನರ ಮುಂದೆ ಪ್ರದರ್ಶಿಸಬೇಕೆಂದುಕೊಂಡೆ. ತಕ್ಷಣ ಧರ್ಮಸ್ಥಳದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ವಸಂತ ಅವರ ಜೊತೆ ದೇವಸ್ಥಾನದ ಹಿಂಬದಿ ಗದ್ದೆಯಲ್ಲಿ 2-3 ಕಿಲೋಮೀಟರಿನಷ್ಟು ನಡೆದು ಉಣ್ಣಿಗಳ ಸಂಗ್ರಹ ಮಾಡಿದೆವು.
ಒಂದು ಟವಲನ್ನು ಪೊದೆಯ ಸುತ್ತಲಿನ ತರಗೆಲೆಯ ಮೇಲೆ ಹಾಯಿಸಿ ನೋಡಿದಾಗ ನೂರಾರು ಉಣ್ಣಿಗಳು. ಶ್ರೀನಿವಾಸರ ಪ್ಯಾಂಟ್ ಮೇಲೆ ಅದಕ್ಕಿಂತ ಹೆಚ್ಚು ಉಣ್ಣಿಗಳು! ಟವಲ್ ಬಿಸಾಡಿ ನೆಗೆಯಬೇಕಾದ ಸಂದರ್ಭ. ಆ ಸನ್ನಿವೇಶ ಇಂದು ಸಹ ನನ್ನ ಕಣ್ಮುಂದೆ ಬರುತ್ತಿದೆ. ಆದರೆ ಬಂದ ಕಾರ್ಯ ಮರೆಯದೆ ತಕ್ಷಣ ಉಣ್ಣಿಗಳನ್ನು ಗಾಜಿನ ಬಾಟ್ಲಿಯಲ್ಲಿ ಸಂಗ್ರಹಿಸಿ ಪಟ್ರಮೆ, ನಿಡ್ಲೆ, ಕನ್ನಾಡಿ ಮುಂತಾದ ಕಡೆ ತೋರಿಸುತ್ತಿದ್ದಾಗ ಜನರಿಗೆ ಕುತೂಹಲ. ಸ್ಥಳೀಯ ಭಾಷೆಯಲ್ಲಿ ವಿವರ ನೀಡುತ್ತಿರುವ ಬಗ್ಗೆ ಮೆಚ್ಚುಗೆ. ಇಂತಹ ಹಲವಾರು ಸಂದರ್ಭಗಳಲ್ಲಿ ಶ್ರೀನಿವಾಸ್ ಅವರ ಜೊತೆಗೂಡಿ ಕೆಲಸ ಮಾಡಿದ್ದೇನೆ. ಶ್ರೀಗಂಧದಂತಹ ಗುಣ ನಡತೆ, ನಿಷ್ಠೆ, ವಾತ್ಸಲ್ಯಮಯಿ, ಸದ್ಗುಣ ಸಂಪನ್ನ, ಸತ್ಯವಂತ ಶ್ರೀನಿವಾಸರಿಗೆ ನಮನಗಳು.
- ಎಂ. ಸಿದ್ದರಾಜು

0 comments:

Post a Comment