ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:13 AM

ಮುಗಿಯದ ರೀಲು...

Posted by ekanasu

ಅಂಕಣ
ನೆನಪಿನ ಹನಿಗಳು
ಸರಕಾರಿ ಸೇವೆಗೆ ಮುನ್ನ

35 ವರ್ಷಗಳ ಹಿಂದೆ ವಯೋವೃದ್ಧರೊಬ್ಬರು ನನಗೆ ಲೆಕ್ಚರರ್ ಕೆಲಸ ಸಿಗಬಹುದೆಂದು ಭವಿಷ್ಯ ನುಡಿದಾಗ ನನಗೆ ನಗು ಬಂತು. ಆಗ ನಾನು ಯಾವುದೇ ಶೈಕ್ಷಣಿಕ ಅರ್ಹತೆ ಹೊಂದಿರಲಿಲ್ಲ. ನಾನು 1973ರಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿದೆ. ಶಿಕ್ಷಣ ಮುಂದುವರಿಸುವ ಯೋಚನೆ ಇರಲಿಲ್ಲ. ಕೆಲಸದ ದಾರಿ ನೋಡುತ್ತಿದ್ದೆ. ಆಗ ಉಡುಪಿಯ ಕಲ್ಪನಾ ಟಾಕೀಸಿನ ಮೆನೇಜರ್ ಪಾಡೀಗಾರು ಶೀನ ಶೆಟ್ಟಿ ಅವರನ್ನು ಭೇಟಿಮಾಡಿದೆ. ಅವರು `ನಾಳೆಯಿಂದಲೇ ನಮ್ಮ ಟಾಕೀಸಿನಲ್ಲಿ ಕ್ಯಾಬಿನ್ ಅಸಿಸ್ಟೆಂಟ್ ಕೆಲಸಕ್ಕೆ ಸೇರು. ಇದರಿಂದ ಮುಂದೆ ನಿನಗೆ ಪ್ರಯೋಜನವಾದೀತು ಎಂದರು. ಮರುದಿನವೇ ನಾನು ಕಲ್ಪನಾ ಟಾಕೀಸಿನಲ್ಲಿ ಹಾಜರ್! ನಂತರ 1975ರಲ್ಲಿ ಬೆಂಗಳೂರಿನ ಜಯಚಾಮರಾಜೇಂದ್ರ ಪೊಲಿಟೆಕ್ನಿಕ್ ಇನ್ಸ್ಟಿಟ್ಯೂಟ್ ನಲ್ಲಿ ಸಿನೆಮಾ ಆಪರೇಟರ್ಸ್ ಬೋರ್ಡ್ ನ ಪರೀಕ್ಷೆ ಬರೆದು ಅದರಲ್ಲಿ ತೇರ್ಗಡೆ ಹೊಂದಿ ಸಿನೆಮಾ ಆಪರೇಟರ್ ಲೈಸೆನ್ಸ್ ಪಡೆದೆ.ಇದರಿಂದಾಗಿ ಟಾಕೀಸ್ನಲ್ಲೂ ಆಪರೇಟರ್ ಹುದ್ದೆಗೆ ಭಡ್ತಿ ಸಿಕ್ಕಿತು. 1980ರಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನೇಮಕಾತಿ ಆದೇಶ ಬಂದ ಬಳಿಕ ಕಲ್ಪನಾ ಟಾಕೀಸ್ನ ಕೆಲಸಕ್ಕೆ ವಿದಾಯ ಹೇಳಿದೆ.

ಕ್ಷೇತ್ರ ಪ್ರಚಾರ - ಆರಂಭದ ಹೆಜ್ಜೆಗಳು

ಪಂಚವಾರ್ಷಿಕ ಯೋಜನೆಯನ್ನು ಪ್ರಚಾರ ಮಾಡುವ ಉದ್ದೇಶದಿಂದ 1950ರಲ್ಲಿ ಅಂದಿನ ಪ್ರಧಾನ ಮಂತ್ರಿ ಜವಾಹರಲಾಲ್ ಅವರಿಂದ `ಪಂಚವಾರ್ಷಿಕ ಯೋಜನೆ ಪ್ರಚಾರ ಸಮಿತಿಯ ಆರಂಭ. ಅದಕ್ಕೆ ಒಂದು ನಿರ್ದಿಷ್ಟ ಇಲಾಖೆಯ ರೂಪ ಕೊಟ್ಟವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು. ಅವರ ಅಧಿಕಾರದ ಸಂದರ್ಭದಲ್ಲಿ 20 ಅಂಶಗಳ ಕಾರ್ಯಕ್ರಮ, ಐಆರ್ ಡಿಪಿ, ಬ್ಯಾಂಕ್ ರಾಷ್ಟ್ರೀಕರಣ ಹಾಗೂ ದುರ್ಬಲರ ಅಭಿವೃದ್ಧಿ ಯೋಜನೆಗಳು ಅನುಷ್ಠಾನದಲ್ಲಿದ್ದ ಸಂದರ್ಭದಲ್ಲಿ ಆ ಕುರಿತ ಪ್ರಚಾರಕ್ಕಾಗಿ ಕ್ಷೇತ್ರ ಪ್ರಚಾರ ಇಲಾಖೆಯನ್ನು ಬಲಪಡಿಸಿದರು. ಆ ಸಮಯದಲ್ಲಿ ಹೊಸ ಹುರುಪಿನೊಂದಿಗೆ ಕ್ಷೇತ್ರ ಪ್ರಚಾರ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಪ್ರಚಾರ ಕಾರ್ಯಕ್ರಮ ನಡೆಸುತ್ತಿದ್ದರು. ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ. ದಿನಕ್ಕೆ ನಾಲ್ಕರಿಂದ ಐದು ಕಡೆ ಚಲನಚಿತ್ರ ಪ್ರದರ್ಶನ. ಮಂಗಳೂರು ಘಟಕದಿಂದಲೇ ತಿಂಗಳಿಗೆ ಸರಾಸರಿ 60ರಿಂದ 70 ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗುತ್ತಿತ್ತು.

20 ಅಂಶಗಳ ಕಾರ್ಯಕ್ರಮ, ಐಆರ್ ಡಿಪಿ, ಗ್ರಾಮೀಣಾಭಿವೃದ್ಧಿ ಮತ್ತು ಮಕ್ಕಳ ಆರೋಗ್ಯ - ಹೀಗೆ ವಿವಿಧ ವಿಷಯಗಳ ಬಗ್ಗೆ ಬಹುಮಾಧ್ಯಮ ಪ್ರಚಾರ ಆಂದೋಲನಗಳು ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದ್ದವು. ಅಂತಹ ಸಂದರ್ಭದಲ್ಲಿ ಕಾರ್ಯಕ್ರಮಗಳಿಗೆ ಸಹಕರಿಸುವಂತೆ ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಕೇಂದ್ರ ಮಟ್ಟದಿಂದ ಸುತ್ತೋಲೆ ಕಳುಹಿಸಲಾಗುತ್ತಿತ್ತು. ಪ್ರಚಾರ ಘಟಕ ಪ್ರಚಾರ ಕಾರ್ಯಕ್ರಮಗಳಿಗೆ ಗೊತ್ತುಪಡಿಸಿದ ಹಳ್ಳಿಗಳಿಗೆ ಹೋಗುವ ಮುಂಚೆ ತಾಲೂಕು ಮಟ್ಟದ ಬಿಡಿಓ, ವಿಸ್ತರಣಾ ಅಧಿಕಾರಿಗಳು, ಊರ ಪ್ರಮುಖರಾದಿಯಾಗಿ ನಮಗೆ ತಂಡಕ್ಕೆ ಸೂಕ್ತ ವ್ಯವಸ್ಥೆಯನ್ನು ಏರ್ಪಡಿಸುತ್ತಿದ್ದರು. ಎಲ್ಲಾ ಕಾರ್ಯಕ್ರಮಗಳಲ್ಲೂ ತಾಲೂಕು ಮಟ್ಟದ ಅಧಿಕಾರಿಗಳು ಜೊತೆಗಿದ್ದು ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಜೊತೆಗೆ ಸ್ಥಳೀಯ ಕುಂದುಕೊರತೆಗಳನ್ನು ಕೇಳಿ ಸೂಕ್ತ ಕ್ರಮ ಜರುಗಿಸುತ್ತಿದ್ದರು. ಗ್ರಾಮಗಳಲ್ಲಿ ಎಲ್ಲೇ ಹೋಗಲಿ ಪ್ರಚಾರ ಘಟಕದ ಅಧಿಕಾರಿಗಳಿಂದ ಹಿಡಿದು ಸಿಬ್ಬಂದಿಗಳವರೆಗೆ ಅದ್ದೂರಿ ಸ್ವಾಗತ, ಊಟ-ತಿಂಡಿಯ ಜೊತೆಗೆ ವಾಸ್ತವ್ಯಕ್ಕೂ ಉಚಿತ ವ್ಯವಸ್ಥೆ ಇರುತ್ತಿತ್ತು.

ಪ್ರಚಾರಾಧಿಕಾರಿಗಳಿಗೆ ತಾಲೂಕು ಮಟ್ಟ ಹಾಗೂ ಪಂಚಾಯತ್ ಮಟ್ಟದಲ್ಲಿ ಜನತೆಗೆ ದೊರಕುವ ಸೇವೆಯ ಬಗ್ಗೆ ವರದಿ ನೀಡುವ ಅಧಿಕಾರವಿತ್ತು. ಆ ವರದಿಯ ಆಧಾರದಲ್ಲಿ, ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತಿತ್ತು ಕೂಡಾ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿರುವ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ದಿಲ್ಲಿಯಲ್ಲಿ ಕೇಂದ್ರ ಕಛೇರಿ, 22 ಕಡೆ ಪ್ರಾದೇಶಿಕ ಕಾರ್ಯಾಲಯಗಳು ಹಾಗೂ 207 ಸ್ಥಳಗಳಲ್ಲಿ ಕ್ಷೇತ್ರ ಪ್ರಚಾರ ಘಟಕಗಳನ್ನು ಹೊಂದಿದೆ.

ಹುರುಪಿನ ದಶಕ

80-90ರ ದಶಕವೆಂದರೆ ಪ್ರಚಾರ ಇಲಾಖೆಯ ಕಾರ್ಯಕ್ರಮಗಳ ಸುಗ್ಗಿ. ರಾತ್ರಿ-ಹಗಲು ಎನ್ನುವ ಭೇದ ಇರುತ್ತಿರಲಿಲ್ಲ. ಆದಿತ್ಯವಾರ, ರಜಾದಿನಗಳೆಂಬ ವ್ಯತ್ಯಾಸ ಗೊತ್ತಾಗುತ್ತಿರಲಿಲ್ಲ. ಕಾರ್ಯಕ್ರಮ ಏರ್ಪಡಿಸುವ ಹುರುಪು, ಅಷ್ಟೇ ಬೇಡಿಕೆ. ಕೋಲ, ನೇಮ, ಬಯಲಾಟ, ಎನ್ನೆಸೆಸ್ ವಾರ್ಷಿಕ ಶಿಬಿರಗಳಲ್ಲಿ ನಮ್ಮ ಕಾರ್ಯಕ್ರಮಕ್ಕೆ ಹೆಚ್ಚಿನ ಬೇಡಿಕೆ. ಧರ್ಮಸ್ಥಳದಲ್ಲಿ ವಾರ್ಷಿಕ ರಥೋತ್ಸವ ಸಂದರ್ಭದಲ್ಲಿ ಮತ್ತು ಧರ್ಮಸ್ಥಳದ ಗ್ರಾಮೀಣ ಅಭಿವೃದ್ಧಿ ಯೋಜನೆ ಏರ್ಪಡಿಸುವ ಕೃಷಿಮೇಳದಲ್ಲಿ ನಮ್ಮ ಇಲಾಖೆಯ ವಸ್ತುಪ್ರದರ್ಶನಕ್ಕೆ ಸ್ಥಳಾವಕಾಶ ಕಾದಿರಿಸಲಾಗುತ್ತಿತ್ತು.


ಮಾಹಿತಿ ಅಭಿಯಾನ

ಕೇಂದ್ರ ಸರಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಮುಖ್ಯ ಉದ್ದೇಶ. ಇದರ ಜತೆಯಲ್ಲೆ ರಾಷ್ಟ್ರೀಯ ಭಾವೈಕ್ಯ, ಕೋಮು ಸೌಹಾರ್ದತೆ, ಆರೋಗ್ಯ, ಸಾಕ್ಷರತೆ, ಗ್ರಾಮೀಣ ಅಭಿವೃದ್ಧಿ, ಸ್ವ ಉದ್ಯೋಗ, ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ ಮುಂತಾದ ಹತ್ತುಹಲವು ವಿಷಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಭಿತ್ತಿಪತ್ರ ಮತ್ತು ಚಲನಚಿತ್ರ ಪ್ರದರ್ಶನ, ಗುಂಪುಚರ್ಚೆ, ವಿಚಾರ ಸಂಕಿರಣ, ಉಪನ್ಯಾಸ ಸಾಮಾನ್ಯ. ನಿರ್ದಿಷ್ಟ ಗುಂಪು/ಸಮುದಾಯವನ್ನು ಗುರಿಯಾಗಿಟ್ಟುಕೊಂಡು ವಿವಿಧ ಸ್ಪರ್ಧೆಗಳನ್ನೂ (ಭಾಷಣ, ಚಿತ್ರರಚನೆ, ಪ್ರಬಂಧ, ರಸಪ್ರಶ್ನೆ, ಆರೋಗ್ಯವಂತ ಶಿಶು ಪ್ರದರ್ಶನ, ಕ್ರೀಡಾಕೂಟ..) ಹಮ್ಮಿಕೊಳ್ಳಲಾಗುತ್ತಿದೆ. ಕೆಲವೊಮ್ಮೆ ಒಂದೇ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ವಿಶೇಷ ಪ್ರಚಾರಾಂದೋಲನ, ಬಹುಮಾಧ್ಯಮ ಪ್ರಚಾರಾಂದೋಲನ ನಡೆಯುತ್ತವೆ. ಇಂತಹ ಸಂದರ್ಭಗಳಲ್ಲಿ ಇತರೆಡೆಗಳ ಕ್ಷೇತ್ರ ಪ್ರಚಾರ ಘಟಕಗಳು, ಕೇಂದ್ರ ಸಂಗೀತ ನಾಟಕ ವಿಭಾಗ, ಆಹಾರ ಮತ್ತು ಪೌಷ್ಟಿಕ ಮಂಡಳಿ, ನೆಹರೂ ಯುವ ಕೇಂದ್ರ, ರಾಜ್ಯ ವಾರ್ತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ ಸೇರಿದಂತೆ ಅನೇಕ ಸಂಘಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು ಪ್ರಚಾರ ಅಭಿಯಾನದಲ್ಲಿ ಪಾಲ್ಗೊಳ್ಳುತ್ತವೆ. ಕೇಂದ್ರ ಸರಕಾರದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಅದನ್ನು ಕೇಂದ್ರಕ್ಕೆ ತಿಳಿಸುವ ಕೆಲಸವನ್ನೂ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಮಾಡುತ್ತಿದೆ.

ಆಧುನಿಕತೆಯ ಸ್ಪರ್ಶ

ಹಿಂದೆಲ್ಲ ಕಾರ್ಯಕ್ರಮಗಳಿಗೆ ಅಣಿಯಾಗುವುದೆಂದರೆ 16 ಎಂಎಂ ಪ್ರೊಜೆಕ್ಟರ್, ಸ್ಕ್ರೀನ್, ಸ್ಪೀಕರ್, ಆಂಪ್ಲಿಫಯರ್, ಮೈಕ್, ಪಂಪ್ ಸೆಟ್ ನಂತಹ ಜನರೇಟರ್ ಇನ್ನಿತರ ಸರಂಜಾಮು ಅಗತ್ಯವಿತ್ತು. ಆದರೆ ಇಂದು ಚಿತ್ರಣ ಬದಲಾಗಿದೆ. ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಆಧುನೀಕರಣಗೊಂಡಿದೆ. ಸಣ್ಣ ಕೈಚೀಲದಲ್ಲಿ ಹಿಡಿಸುವ ಎಲ್.ಸಿ.ಡಿ. ಪ್ರೊಜೆಕ್ಟರ್, ಸೀಡಿ ಪ್ಲೇಯರ್, ಪುಟ್ಟ ಜನರೇಟರ್. ಮನಸ್ಸೊಂದಿದ್ದರೆ ಕಾರ್ಯಕ್ರಮದ ಏರ್ಪಾಡು ಬಲು ಸಲೀಸು.

ಎಂಇಆರ್ 8012

ನಮ್ಮ ಕಚೇರಿಯ ಮೊದಲ ಜೀಪು ಎಂಇಆರ್ 8012. ಒಮ್ಮೆ ಬೆಳ್ತಂಗಡಿ ಪ್ರವಾಸದ ವೇಳೆ ಕೆಳಉಜಿರೆಯ ತಿರುವಿನಲ್ಲಿ ಹೋಗುವಾಗ ಹಠಾತ್ತಾಗಿ ಎದುರುಗಡೆಯಿಂದ ಬಂದ ರಿಕ್ಷಾ ನಮ್ಮ ಜೀಪಿಗೆ ಡಿಕ್ಕಿ ಹೊಡೆದು ಪಲ್ಟಿ ಆಯಿತು. ಆದರೆ ಅದರಲ್ಲಿದ್ದವರು ಸುರಕ್ಷಿತ ಪಾರಾದರು. ಇನ್ನೊಮ್ಮೆ ಮಡಿಕೇರಿಯಿಂದ ವಿರಾಜಪೇಟೆಗೆ ಹೋಗುತ್ತಿರುವ ಸಂದರ್ಭ. ಮಧ್ಯೆ ಮೂರ್ನಾಡು ಪೇಟೆ ಸಮೀಪಿಸುತ್ತಿದ್ದಾಗ ಎಡಬದಿಯಿಂದ ಮನೆಯ ಜಗಲಿಯಿಂದ ಛಂಗನೆ ಬಾಲಕನೊಬ್ಬ ರಸ್ತೆಗೆ ಹಾರುವುದಕ್ಕೂ ನಮ್ಮ ಜೀಪ್ ಎದುರಾಗುವುದಕ್ಕೂ ಸರಿಯಾಗಿತ್ತು. ಜೀಪಿನ ಮಡ್ಗಾರ್ಡ್ ತಾಗಿ ಡಬ್ ಎಂಬ ಶಬ್ದ. ಹೃದಯ ಧಸಕ್ಕೆಂದಿತು. ಇಳಿದು ನೋಡಬೇಕೆನ್ನುವಷ್ಟರಲ್ಲಿ ಹುಡುಗ ಏನೂ ಆಗಿಲ್ಲವೆಂಬಂತೆ ನಮ್ಮನ್ನು ನೋಡದೆ ರಸ್ತೆಯ ಇನ್ನೊಂದು ಬದಿಗೆ ಓಡಿದ. ಆತನನ್ನು ಕಣ್ಣುಬಾಯಿ ಬಿಟ್ಟು ನೋಡುತ್ತಾ ಕುಳಿತೆವು. ಇನ್ನೊಂದು ಘಟನೆ ಕಡಬದಲ್ಲಿ ನಡೆದದ್ದು. ಸಂಜೆಯ ಶಾಲಾ ಕಾರ್ಯಕ್ರಮ ಮುಗಿಸಿ ಕಡಬ ಬಂಗ್ಲೆಗೆ ತಂಗಲು ನಮ್ಮ ಜೀಪು ಸಾಗುತ್ತಿತ್ತು. ಕಡಬ ಪೇಟೆಯ ರಸ್ತೆಯ ಇಕ್ಕೆಡೆಗಳಲ್ಲಿ ಶಾಲಾ ಮಕ್ಕಳು ಆಡುತ್ತಾ ಚೇಷ್ಟೆ ಮಾಡುತ್ತಾ ಧೂಳು ಎಬ್ಬಿಸುತ್ತಾ ಹೋಗುತ್ತಿದ್ದರು. ರಸ್ತೆಯ ಒಂದು ಕಡೆಯ ಹುಡುಗನ ಕರೆಗೆ ಇನ್ನೊಂದು ಕಡೆಯಿಂದ ಬಾಲಕ ಓಗೊಟ್ಟು ಚಕ್ಕನೆ ಇತ್ತ ಜಿಗಿದ! ಜೀಪು ತಾಗಿತು. ನಾವು ಭಯಭೀತರಾಗಿ ಜೀಪಿನಿಂದ ಇಳಿಯುತ್ತಿದ್ದರೆ ಹುಡುಗ ನಿಧಾನವಾಗಿ ಮಕ್ಕಳ ಗುಂಪಿನಿಂದ ಹೊರಗೆ ಬಂದು ಓಟಕ್ಕೆ ಶುರುವಿಟ್ಟ!! ಈ ಎಲ್ಲ ಘಟನೆಗಳಲ್ಲಿ ಪವಾಡ ಸದೃಶವಾಗಿ ನಮ್ಮನ್ನು ಪಾರುಮಾಡಿದ ಈ ಜೀಪು ನನ್ನ ಅಚ್ಚುಮೆಚ್ಚಿನದ್ದು. ನಂತರ ಬಂದುದು ಈಗಿರುವ ಜೀಪು. ಕೆಎ-19 ಎಂ-4589.

ತೋಡಿನತ್ತ ಜಾರಿದ ಜೀಪು

ನಾನು ಕೆಲ ಕಾಲ ಶಿವಮೊಗ್ಗ ಘಟಕದಲ್ಲಿದ್ದ ಸಂದರ್ಭ ಕಾರ್ಯಕ್ರಮ ನಿಮಿತ್ತ ತರೀಕೆರೆ ತಾಲೂಕಿನ ಕಲತ್ತಗಿರಿ ಎಂಬಲ್ಲಿಗೆ ಹೋಗಿದ್ದೆವು. ರಸ್ತೆಮಧ್ಯೆ ಸಣ್ಣ ತೋಡೊಂದರ ಕಲ್ಲುಸೇತುವೆಯ ಮೇಲೆ ನೀರು ಹರಿಯುತಿತ್ತು. ಅದರ ಮೇಲೆಲ್ಲ ಪಾಚಿ ಕಟ್ಟಿತ್ತು. ಕಾರ್ಯಕ್ರಮ ಮುಗಿಸಿ ವಾಪಸಾಗುವಾಗ ಆ ಸೇತುವೆಯ ಮೇಲೆ ಜೀಪ್ ಜಾರಿ ಪಕ್ಕಕ್ಕೆ ಜರುಗಿ ನಿಂತಿತು. ಜೀಪಿನೊಳಕ್ಕೆ ನೀರು ಸೇರತೊಡಗಿತು. ಚಾಲಕ ಆನಂದ ಕುಳಿತಿದ್ದ ಜೀಪಿನ ಬದಿ ನೀರಿನಲ್ಲಿ ಮುಳುಗುವ ಸ್ಥಿತಿಯಲ್ಲಿತ್ತು. ಲಿಂಗದ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕರು ನಮ್ಮೊಂದಿಗಿದ್ದರು. ಅವರು ಸ್ಥಳೀಯರಿಗೆ ಬೇಕಾದವರು. ಕೂಡಲೇ ಎಸ್ಟೇಟಿನವರಿಗೆ ಜನ ಕಳಿಸಿ ಅಲ್ಲಿಂದ ಆಳುಗಳನ್ನು ಕರೆಸಿದರು. ಅವರ ಸಹಾಯದಿಂದ ಜೀಪನ್ನು ಬಹು ಪ್ರಯಾಸದಿಂದ ಮೇಲೆತ್ತಿ ಸಂಕಟದಿಂದ ಪಾರಾದೆವು. ಅವರೆಲ್ಲ ನಮಗೆ ಅಲ್ಲೇ ರಸ್ತೆಯ ಪಕ್ಕದಲ್ಲಿದ್ದ ದೈವದ ಗುಡಿಗೆ ಕೈ ಮುಗಿಯಿರಿ ಎಂದರು.

ಕಾಡಾನೆ ದರ್ಶನ

ಒಮ್ಮೆ ಪೊನ್ನಂಪೇಟೆಯಿಂದ ದೂರದ ಗಿರಿಜನ ಹಾಡಿಯೊಂದಕ್ಕೆ ಕಾರ್ಯಕ್ರಮ ನೀಡಲು ಹೋಗುತ್ತಿದ್ದ ಸಂದರ್ಭ. ಜತೆಯಲ್ಲಿ ಕ್ಷೇತ್ರ ಪ್ರಚಾರಾಧಿಕಾರಿ ಖಾದ್ರಿ ಅಚ್ಯುತನ್. ಕಾಡು ಹಾದಿ. ಸಂಜೆ 4.30. ಅಷ್ಟರಲ್ಲಿ ಕೂಗಳತೆಯ ದೂರದಲ್ಲಿ ಕಾಡಾನೆಗಳ ಹಿಂಡೊಂದು ದಾಟಿಹೋಯಿತು! ಒಮ್ಮೆಗೆ ಭಯವೆನಿಸಿದರೂ ನಾವು ಪ್ರಯಾಣ ಮುಂದುವರಿಸಿ ಹಾಡಿ ತುಲುಪಿದೆವು. ಹಾಡಿ ಜನ `ನಿಮಗೆ ಆನೆ ಹಿಂಡು ಸಿಕ್ಕಿತ್ತಾ ಎಂದು ಪ್ರಶ್ನೆಹಾಕಿದರು. ಹೌದೆಂದಾಗ `ನಿಮ್ಮ ಅದೃಷ್ಟ ಚೆನ್ನಾಗಿತ್ತು. ಹಾಗಾಗಿ ನೀವು ಪಾರಾಗಿದ್ದೀರಿ. ಏಕೆಂದರೆ ನೀವು ಬಂದ ಸಮಯ ಆ ದಾರಿಯಲ್ಲಿ ಯಾರೂ ಕೂಡಾ ಬರುವುದಿಲ್ಲ ಅಂತ ಅವರು ಹೇಳಿ ಕಾರ್ಯಕ್ರಮ ಮುಗಿಸಿ ಮರಳುವಾಗ ಬೇರೆ ದಾರಿಯಲ್ಲಿ ನಮ್ಮನ್ನು ಕಳುಹಿಸಿಕೊಟ್ಟರು.

ಅಧಿಕಾರಿ ನದಿಗೆ ಬಿದ್ದದ್ದು

ಮುಲ್ಕಿ ಸಮೀಪದ ಕುದರು, ಕೊಳಚಿಕಂಬಳದಲ್ಲಿ ನಮ್ಮ ಕಾರ್ಯಕ್ರಮ. ಅಲ್ಲಿಗೆ ಹೋಗಬೇಕಾದರೆ ದೋಣಿಯಲ್ಲಿ ಸಾಗಬೇಕಾಗಿತ್ತು. ಆ ಕಾರ್ಯಕ್ರಮಕ್ಕೆ ಅಂದಿನ ಪ್ರಾದೇಶಿಕ ಅಧಿಕಾರಿ ಸಮುದ್ರಂ ಅವರು ಅತಿಥಿ. ಅವರೂ ದೋಣಿಯಲ್ಲಿ ನಮ್ಮೊಡನಿದ್ದರು. ದೋಣಿಯಲ್ಲಿ ಕುಳಿತು ಅಭ್ಯಾಸವಿಲ್ಲದ ಅವರು ದೋಣಿಯ ದಡೆಗೆ ಕಾಲೂರಿ ಇಳಿಯುತ್ತಿದ್ದಂತೆ ದೋಣಿ ಪಕ್ಕಕ್ಕೆ ವಾಲಿತು. ಸಮತೋಲನ ತಪ್ಪಿ ಅವರು ನದಿಗೆ ಬಿದ್ದರು! ಬಟ್ಟೆಯೆಲ್ಲ ಒದ್ದೆಯಾದರೂ ಮುನಿಸಿಕೊಳ್ಳದೆ `ಇದೊಂದು ಹೊಸ ಬಗೆಯ ಅನುಭವ ಎಂದು ಸಾವರಿಸಿಕೊಂಡರು.ಜೀಪಿನಲ್ಲಿ ಹೆರಿಗೆ

ಕುಂದಾಪುರ ತಾಲೂಕಿನ ಸಿದ್ದಾಪುರ ಆಸ್ಪತ್ರೆಯಿಂದ 10 ಕಿ.ಮೀ. ದೂರದ ಒಂದು ಹರಿಜನ ಕಾಲೋನಿಯಲ್ಲಿ ಸಂಜೆ ಚಲನಚಿತ್ರ ಪ್ರದರ್ಶನ ಏರ್ಪಾಡಾಗಿತ್ತು. ಸಾಮಾಜಿಕ ಕಾರ್ಯಕರ್ತ ಕೇಶವ ಕೋಟೇಶ್ವರ ಅವರೂ ನಮ್ಮೊಂದಿಗಿದ್ದರು. ಅವರೊಡನೆ ಕಾಲೊನಿಯ ಜನ ತಮ್ಮಲ್ಲಿಯ ಹೆಂಗಸೊಬ್ಬರಿಗೆ ಹೆರಿಗೆ ನೋವು ಪ್ರಾರಂಭವಾಗಿದೆ ಎಂದು ಹೇಳಿದರು. ಅಲ್ಲಿ ಯಾವುದೇ ವಾಹನ ಸೌಕರ್ಯ ಇರಲಿಲ್ಲ. ನಾನು ಚಾಲಕ ಎಂ.ಪಿ. ಕನಕರತ್ನಂ ಹತ್ತಿರ ಹೇಳಿದೆ: `ಇಂತಹ ಸಂದರ್ಭದಲ್ಲಿ ನಮ್ಮ ವಾಹನ ಬಳಸುವುದರಲ್ಲಿ ತಪ್ಪೇನಿಲ್ಲ. ಜೀಪಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಒಂದು ಜೀವ ಉಳಿಸಿದಂತಾಗುತ್ತದೆ. ಅವರದಕ್ಕೆ ಒಪ್ಪಿದರು. ಆ ತಾಯಿಯನ್ನು ಹಿಂದಿನ ಸೀಟಿನಲ್ಲಿ ಮಲಗಿಸಿ ಜೀಪ್ ಹೊರಟು ಆಸ್ಪತ್ರೆ ಮುಟ್ಟುವಷ್ಟರಲ್ಲಿ ಹೆರಿಗೆ ಹಂತ ತಲುಪಿತ್ತು. ಸೂಕ್ತ ಸಮಯದಲ್ಲಿ ಸಹಾಯ ಮಾಡಿದ್ದಕ್ಕಾಗಿ ಆಸ್ಪತ್ರೆಯ ದಾದಿಯರು ಹಾಗೂ ವೈದ್ಯರು ಕನಕರತ್ನಂಗೆ ಕೃತಜ್ಞತೆ ಹೇಳಿದರೆ ಕಾಲೋನಿ ಜನ ನಮ್ಮ ಇಲಾಖೆಗೆ ಧನ್ಯವಾದ ಅರ್ಪಿಸಿದರು.

ಭಾರತ ದರ್ಶನ

ಕ್ಷೇತ್ರ ಪ್ರಚಾರ ನಿರ್ದೇಶನಾಲಯದಲ್ಲಿ ಜಂಟಿ ನಿರ್ದೇಶಕರಾಗಿದ್ದ (ಹಾಲಿ ರಾಷ್ಟ್ರಪತಿಯವರ ಕಚೇರಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ) ಅರ್ಚನಾ ದತ್ತ ಅವರನ್ನು ನಾನು ಸ್ಮರಿಸಬೇಕು. ಅದು ಇಲಾಖೆಯ ವತಿಯಿಂದ ಆಯೋಜನೆಗೊಂಡಿದ್ದ `ಭಾರತ ದರ್ಶನ ಪ್ರವಾಸಕ್ಕೆ ಪ್ರವಾಸ ಸಹಾಯಕರ ಆಯ್ಕೆಗಾಗಿ ಬೆಂಗಳೂರಿನಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭ. ಇದಕ್ಕಾಗಿ ಪೈಪೋಟಿಯೂ ಇತ್ತು. ಆದರೆ ಮೇಡಂ ನನ್ನನ್ನು ಆಯ್ಕೆಮಾಡಿದರು. ಹೀಗಾಗಿ ಪ್ರವಾಸ ಅಧಿಕಾರಿ ಎನ್.ಡಿ. ಪ್ರಸಾದ್ ಅವರ ಉಸ್ತುವಾರಿಯಲ್ಲಿ ಅಭಿಪ್ರಾಯ ಮುಖಂಡರ ತಂಡದೊಂದಿಗೆ ದೇಶ ಸುತ್ತಿದೆ.

1 comments:

Padyana Ramachandra said...

ಶ್ರೀ.ಶಿವರಾಂ ಪೈಲೂರು ಅವರ "ಮುಗಿಯದ ರೀಲು" ಮುಖಾಂತರ ಶ್ರೀ. ಗುಂಡಿಬೈಲು ಶ್ರೀನಿವಾಸ್ ಮತ್ತು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಬಗ್ಗೆ ನಾಡಿನ ಹಾಗೂ ವಿದೇಶದ ಕನ್ನಡಿಗರಿಗೆ ವಿವರವಾದ ಮಾಹಿತಿಗಳನ್ನು ತಲುಪಿಸಿದ "ಈ-ಕನಸು" ತಂಡಕ್ಕೆ ವಂದನೆಗಳು.

-ಪ.ರಾಮಚಂದ್ರ,
ರಾಸ್ ಲಫ್ಫಾನ್, ಕತಾರ್

Post a Comment