ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:38 PM

ಮುಗಿಯದ ರೀಲು

Posted by ekanasu

ಅಂಕಣ

ಇಳಿಸಂಜೆಯ ಸವಿನೆನಪು
ಕ್ಷೇತ್ರ ಪ್ರಚಾರ (ಫೀಲ್ಡ್ ಪಬ್ಲಿಸಿಟಿ) ಎಂದೊಡನೆ ನನ್ನ ನೆನಪಿನ ಸುರುಳಿ ತಾನಾಗಿ ಬಿಚ್ಚಿಕೊಳ್ಳುತ್ತದೆ. ಬಹಳಷ್ಟು ಸವಿ ನೆನಪುಗಳು. ಇಂತಹ ನೆನಪುಗಳಲ್ಲೊಂದು ನಮ್ಮ ಶ್ರೀನಿವಾಸ. ಸುಮಾರು ಮೂವತ್ತು ವರ್ಷಗಳ ಹಿಂದೆ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಮಂಗಳೂರು ಕಾರ್ಯಾಲಯದ ಮೊಟ್ಟಮೊದಲ ಪ್ರಚಾರಾಧಿಕಾರಿಯಾಗಿ ನಾನು ಬರುವ ಹೊತ್ತಿಗೆ ಚುಕ್ಕಾಣಿಯಿಲ್ಲದ ದೋಣಿಯಂತೆ ತುಯ್ಯುತ್ತಿದ್ದ ನಮ್ಮ ಕಾರ್ಯಾಲಯಕ್ಕೆ ಸ್ಥಿರತೆ ತಂದುಕೊಟ್ಟ ಮಹಾನುಭಾವ. ಬಹುತೇಕ ಮಂದಿಯಂತೆ ಸ್ವಂತ ಕೆಲಸಕ್ಕೆ ಮೊದಲ ಮಣೆ ಹಾಕಿ, ಸರಕಾರದ ಕೆಲಸವನ್ನು ದೇವರಿಗೆ ಬಿಟ್ಟುಬಿಡುವವರಲ್ಲ ಶ್ರೀನಿವಾಸ್. ರಾತ್ರಿ ಹಗಲೆನ್ನದೆ, ಮಳೆ ಬಿಸಿಲೆನ್ನದೆ, ಹಸಿವು ನೀರಡಿಕೆಗಳ ಚಿಂತೆಯಿಲ್ಲದೆ ತನ್ನನ್ನು ಪೂರ್ಣವಾಗಿ ಕ್ಷೇತ್ರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡು, ಸ್ವಂತ ಬದುಕಿಗೆ ಸಾರ್ಥಕ್ಯ ತಂದುಕೊಂಡ ವ್ಯಕ್ತಿ. ಅಂತೆಯೇ ಕ್ಷೇತ್ರ ಪ್ರಚಾರವೆಂಬ ತಳಸ್ಪರ್ಶಿ ಸಂವಹನ ಸಂಸ್ಥೆಗೆ ಕೀರ್ತಿ ತಂದುಕೊಟ್ಟ ನಿಸ್ವಾರ್ಥಿ. ಅವಿರತ ಕೆಲಸದ ನಡುವೆಯೇ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಮೇಧಾವಿ.
ಸರಳತೆ ಮತ್ತು ಸತ್ಯಸಂಧತೆಯನ್ನು ಹುಡುಕಿಕೊಂಡು ಹೋಗಬೇಕಾಗಿರುವ ಈ ಕಾಲದಲ್ಲಿ ಈ ಗುಣಗಳನ್ನು ಸ್ವಭಾವಜನ್ಯವಾಗಿ ಮೈಗೂಡಿಸಿಕೊಂಡು ಬಂದಿರುವ ಶ್ರೀನಿವಾಸ ಸಜ್ಜನರಲ್ಲಿ ಸಜ್ಜನ. ತನ್ನ ಕಾರ್ಯಕ್ಷೇತ್ರದಲ್ಲಿ ಇವರು ಓಡಾಡದ ಊರಿಲ್ಲ; ಸುತ್ತಾಡದ ಹಳ್ಳಿಯಿಲ್ಲ; ಭೆಟ್ಟಿಯಾಗದ ಶಾಲೆಯಿಲ್ಲ. ದಕ್ಷಿಣ ಕನ್ನಡ, ಉಡುಪಿ, ಕೊಡಗಿನ ಮೂಲೆಮೂಲೆ ಇವರಿಗೆ ಪರಿಚಿತ. ಮಂಗಳೂರು ಕಾರ್ಯಾಲಯದ ಕ್ಷೇತ್ರ ಪ್ರಚಾರಾಧಿಕಾರಿ ಯಾರೇ ಇರಲಿ ಅಥವಾ ಆ ಹುದ್ದೆ ಖಾಲಿಯೆ ಇರಲಿ, ಕರ್ತವ್ಯಕ್ಕೆ ಯಾವ ಚ್ಯುತಿಯೂ ಬಾರದಂತೆ ಎಲ್ಲ ಕಾಲದಲ್ಲೂ ಎದ್ದು ಕಾಣುವ ಕೆಲಸ ಮಾಡಿದವರು ಇವರು. ಒಂದು ಕಚೇರಿಯನ್ನು ಮೂರು ದಶಕಗಳ ಕಾಲ ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರಿಸಿದ ಧೀಮಂತ.

ತುಳು, ಕನ್ನಡ, ಇಂಗ್ಲ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಬಲ್ಲ ಶ್ರೀನಿವಾಸ್ ಕತೆ, ಕವನಗಳನ್ನು ಬರೆದು ಹೆಸರು ಗಳಿಸಿದ ಸೃಜನಶೀಲ. ಸಜ್ಜನಿಕೆ ಮತ್ತು ಸಾತ್ವಿಕತೆಯ ಪ್ರತೀಕ. ಅವರ ಮಾಂತ್ರಿಕ ಮೋಡಿಗೆ ಮರುಳಾಗದವರು ಯಾರೂ ಇಲ್ಲ. ಇವರ ಸಂಪರ್ಕಕ್ಕೆ ಬಂದ ಎಲ್ಲರಿಗೂ ಶ್ರೀನಿವಾಸ ಎಂದರೆ ನಿಸ್ವಾರ್ಥ ಸೇವೆಗೆ ಇನ್ನೊಂದು ಹೆಸರು.

ಗುಂಡಿಬೈಲು ಶ್ರೀನಿವಾಸ್ ಫೀಲ್ಡ್ ಪಬ್ಲಿಸಿಟಿಯ ದೊಡ್ಡ ಆಸ್ತಿ. ಅವರ ಇಳಿಸಂಜೆಯನ್ನು ಸದಾ ಹಸಿರಾಗಿ ಇರಿಸಲು ಈ ಸವಿ ನೆನಪೊಂದೇ ಸಾಕು ಅಲ್ಲವೇ?


ಬಿ. ಕೃಷ್ಣಾನಂದ ಹೆಗ್ಡೆ

0 comments:

Post a Comment